varthabharthi


ಬೆಂಗಳೂರು

ತೀಸ್ತಾ ಬಂಧನವನ್ನು ಪ್ರಶ್ನಿಸಬೇಕಾದ ವಿವಿಗಳೇ ಮೌನವಾಗಿವೆ: ಮಾವಳ್ಳಿ ಶಂಕರ್

ವಾರ್ತಾ ಭಾರತಿ : 1 Jul, 2022

ಬೆಂಗಳೂರು, ಜು.1: ದೇಶದಲ್ಲಿ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಕ್ಕಾಗಿ ಟೀಸ್ತಾ ಅವರನ್ನು ಬಂಧಿಸಿದ್ದಾರೆ. ಇದನ್ನೆಲ್ಲಾ ಪ್ರಶ್ನಿಸಬೇಕಾದ ವಿಶ್ವವಿದ್ಯಾಲಯಗಳೇ ಮೌನವಾಗಿವೆ. ಯುವಕರಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ವಿಫಲರಾಗುತ್ತಿದ್ದೇವೆ ಎಂದ ದಲಿತ ಮುಖಂಡ ಮಾವಳ್ಳಿ ಶಂಕರ್ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ಅಲುಮ್ನಿ ಸಭಾಂಗಣದಲ್ಲಿ ಆಯೋಜಿಸಿದ್ದ ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ವಿವಿಗಳಲ್ಲಿ ಪ್ರಾಧ್ಯಾಪಕರು ಹೆಚ್ಚು ಉತ್ಸುಕರಾಗಿದ್ದರು. ಆದರೆ ಇಂದು ವಿವಿಯ ಪ್ರಾಧ್ಯಾಪಕರು ಸೇಫ್ ಜೋನ್‍ನಲ್ಲಿ ಕಾಲ ಕಳೆಯುತ್ತಿದ್ದಾರೆ. ವಿದ್ಯಾರ್ಥಿಗಳನ್ನು ವೈಚಾರಿಕತೆಯಿಂದ ದೂರವಿಡುತ್ತಿದ್ದಾರೆ ಎಂದು ಕಿಡಿಕಾರಿದರು.

ದೇಶದಲ್ಲಿ ಸಂವಿಧಾನಕ್ಕೆ ಬಹುದೊಡ್ಡ ಗಂಡಾಂತರವನ್ನು ತರುತ್ತಿದ್ದಾರೆ. ಆಡಳಿತ ಪಕ್ಷವು ಸಂವಿಧಾನವನ್ನೇ ಗುರಿಯಾಗಿಸಿಕೊಂಡಿದೆ. ಹೋರಾಟಗಳ ಮೂಲಕವೇ ಅದನ್ನು ಹಿಮ್ಮೆಟ್ಟಿಸಬೇಕು. ಟೀಸ್ತಾ ಅವರ ಬಂಧನವನ್ನು ಖಂಡಿಸುವುದು ಮಾತ್ರವಲ್ಲ, ಜನರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಕರೆ ನೀಡಿದರು. 

ವಕೀಲ ಬಾಲನ್ ಮಾತನಾಡಿ, ದೇಶದಲ್ಲಿ ಗಂಬೀರ ಘಟನೆಗಳು ನಡೆಯುತ್ತಿವೆ. ಆಕ್ಟೀವ್ ಜರ್ನಲಿಸ್ಟ್ ಸೇರಿದಂತೆ ಸಾಮಾಜಿಕ ಹೋರಾಟಗಾರರಿಗೆ ರಕ್ಷಣೆ ನೀಡುವುದು ಅನಿವಾರ್ಯವಾಗಿದೆ. ಕೊರೆಗಾಂವ್ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿದಂತೆ ಇಂದು ಟೀಸ್ತಾ ಅವರನ್ನು ಬಂಧಿಸಲಾಗಿದೆ. ಇದನ್ನು ದೇಶದ ಜನರು ತಿಳಿದು ಎಚ್ಚರಿಕೆ ವಹಿಸುವುದು ಅನಿವಾರ್ಯ ಎಂದರು.

ಲೇಖಕಿ ಕೆ.ಷರೀಫಾ ಮಾತನಾಡಿ, ಸಹಾಯಕ್ಕಾಗಿ ನಿಲ್ಲುವುದು ಮಾನವ ಧರ್ಮವಾಗಿದೆ. ಈ ಮಾನವ ಧರ್ಮವನ್ನು ಎತ್ತಿಹಿಡಿದಿದ್ದಕ್ಕಾಗಿ ಟೀಸ್ತಾ ಅವರನ್ನು ಬಂಧಿಸಲಾಗಿದೆ. ದೇಶದಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದವರು ಬಂಧಿಸಲ್ಪಡುತ್ತಿದ್ದಾರೆ ಎಂದರು. 

ಪೊಲೀಸ್ ವ್ಯವಸ್ಥೆ ಈಗಾಗಲೇ ಕೇಸರಿಕರಣಗೊಂಡಿದೆ. ನ್ಯಾಯಾಲಯ, ರಾಜಕಾರಣ ಎಲ್ಲವೂ ಹಾಳಾಗಿದೆ. ಜನರು ಇದರ ವಿರುದ್ಧ ಧಂಗೆ ಏಳುವವರೆಗೂ ದೇಶದಲ್ಲಿ ಇದು ಮುಂದುವರೆಯುತ್ತದೆ ಎಂದು ಎಚ್ಚರಿಸಿದರು. 

ನೂಪುರ್ ಶರ್ಮ ಅವರಿಗೆ ಕೋಟ್ ಶಿಕ್ಷೆ ನೀಡಿರುವುದು ಶ್ಲಾಘನಾರ್ಹವಾಗಿದೆ. ನ್ಯಾಯಾಲಯಗಳು ಕೆಲವೊಮ್ಮೆ ಮಿಂಚಿನ ರೀತಿ ಕೆಲಸ ಮಾಡುತ್ತವೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಕನ್ನಯ್ಯ ಅವರನ್ನು ಕೊಂದವರ ಬಗ್ಗೆ ಯೋಚಿಸುವವರು, ಕೊಲೆಯ ಹಿಂದಿನ ಪ್ರೇರೇಪಣೆಯನ್ನು ಏಕೆ ಪರಿಗಣಿಸುವುದಿಲ್ಲ. ನಮಗೆ ಮುಸ್ಲಿಂ, ಕ್ರೈಸ್ತರ ಭಯವಿಲ್ಲ. ಆದರೆ ಕ್ರೋಧಗೊಂಡ ಹಿಂದುತ್ವ ಗುಂಪುಗಳ ಭಯ ಇದೆ. 

-ಬಿ.ಟಿ.ಲಲಿತಾನಾಯಕ್, ಮಾಜಿ ಸಚಿವೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)