varthabharthi


ನಿಮ್ಮ ಅಂಕಣ

ಪರಿಶಿಷ್ಟ ಸಮುದಾಯದ ಜನಪ್ರತಿನಿಧಿಗಳು ಹಾಗೂ ಆಡಳಿತ ಪಕ್ಷದ ಗುಲಾಮಗಿರಿ

ವಾರ್ತಾ ಭಾರತಿ : 2 Jul, 2022
ಪ್ರೊ. ಶಿವರಾಮಯ್ಯ, ಬೆಂಗಳೂರು

ಕಳೆದ ಮಂಗಳವಾರ ನಗರದ ಫ್ರೀಡಂಪಾರ್ಕಿನಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ‘‘ಪರಿಶಿಷ್ಟ ಸಮುದಾಯದ ಜನಪ್ರತಿನಿಧಿಗಳು ಆಡಳಿತ ಪಕ್ಷದ ಗುಲಾಮರಾಗುತ್ತಿದ್ದಾರೆ’’ (ಜೂ.29.2022) ಎಂದು, ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗದ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅವರು ಮಾತನಾಡುತ್ತ, ಸ್ವಾಭಿಮಾನ ತೊರೆದು ಅಧಿಕಾರಕ್ಕೆ ಕೈ ಜೋಡಿಸುತ್ತಿದ್ದಾರೆ ಎಂದರು. ಉಳಿದ ಸ್ವಾಮಿಗಳೂ ಇದಕ್ಕೆ ದನಿಗೂಡಿಸಿದರು.

ಹೌದು, ಸ್ವಾಮೀಜಿಗಳ ಈ ಆತಂಕವನ್ನು ಸಂವಿಧಾನ ಶಿಲ್ಪಿಡಾ.ಬಿ.ಆರ್.ಅಂಬೇಡ್ಕರ್ ಡಿಸೆಂಬರ್ 6, 1956ರಲ್ಲೇ ತಮ್ಮ ಕೊನೆಯ ಸಂದೇಶದಲ್ಲಿ ಹತಾಶರಾಗಿ ದುಃಖತಪ್ತ ಧ್ವನಿಯಿಂದ ವ್ಯಕ್ತಪಡಿಸಿದ್ದಾರೆ. ಆ ಸಂದೇಶದ ಪಾಠ ಇದು:
‘‘ಮಹತ್ತರವಾದ ಕಷ್ಟಗಳೊಡನೆ, ನಾನು ಈ ವಿಮೋಚನಾ ರಥವನ್ನು ಇಂದು ನೀವು ಕಾಣುತ್ತಿರುವಲ್ಲಿಗೆ ಎಳೆದು ತಂದಿದ್ದೇನೆ. ಇದರ ದಾರಿಯಲ್ಲಿ ಅಡೆತಡೆಗಳು, ಅಪಾಯದ ಜಾಗಗಳು ಹಾಗೂ ಸಂಕಷ್ಟಗಳು ಬರಬಹುದಾದರೂ ಈ ವಿಮೋಚನಾ ರಥವು ಮುಂದೆ ಸಾಗಲಿ ಮತ್ತು ಇನ್ನೂ ಮುಂದೆ ಸಾಗಲಿ. ಒಂದು ವೇಳೆ ನನ್ನ ಜನರು, ನನ್ನ ಅನುಯಾಯಿ ನಾಯಕರು ಈ ವಿಮೋಚನಾ ರಥವನ್ನು ಮುಂದೊಯ್ಯಲು ಶಕ್ತರಾಗದಿದ್ದರೆ ಅವರು ಅದನ್ನು ಈ ದಿನ ಎಲ್ಲಿ ಕಾಣುತ್ತಿದೆಯೋ ಅಲ್ಲಿಯೇ ಬಿಟ್ಟುಬಿಡಬೇಕು. ಆದರೆ ಯಾವುದೇ ಸಂದರ್ಭದಲ್ಲೂ, ಅವರು ವಿಮೋಚನಾರಥವು ಹಿಂದೆ ಹೋಗಲು ಬಿಡಬಾರದು. ಇದು ನನ್ನ ಎಲ್ಲಾ ಗಂಭೀರತೆಯಿಂದ, ನನ್ನ ಜನರಿಗೆ ನೀಡುತ್ತಿರುವ ನನ್ನ ಸಂದೇಶವಾಗಿದೆ, ಬಹುಶಃ ಕೊನೆಯ ಸಂದೇಶವಾಗಿದೆ. ನನ್ನ ಈ ಮಾತುಗಳನ್ನು ನನ್ನ ಜನ ಖಂಡಿತವಾಗಿಯೂ ಕಡೆಗಣಿಸುವುದಿಲ್ಲ ಎಂದು ನನಗನ್ನಿಸಿದೆ. ಹೋಗು ಅವರಿಗೆ ಹೇಳು, ಹೋಗು ಅವರಿಗೆ ಹೇಳು, ಹೋಗು ಅವರಿಗೆ ಹೇಳು’’ ಎಂದು ಅವರು ಮೂರು ಬಾರಿ ಪುನರುಚ್ಛರಿಸಿದರು. ಹೀಗೆ ಹೇಳುತ್ತಾ ಕಣ್ಣೀರು ಸುರಿಸುತ್ತಾ ಬಿಕ್ಕಿ ಬಿಕ್ಕಳಿಸಿ ಅತ್ತರು. ಅವರು ಅಷ್ಟೊಂದು ಹತಾಶರಾಗಿದ್ದರು. ಜುಲೈ 31, 1956, ಬಾಬಾಸಾಹೇಬರ ಕೊನೆ ದಿನಗಳು. ಪುಟ. 6, ಮೂಲ: ನಾನಕ್ ಚಂದ್ ರತ್ತು. ಅನುವಾದ: ಡಾ. ವಿಜಯ ನರಸಿಂಹ ಜೆ.
ಆದರೀಗ ಏನಾಗುತ್ತಿದೆ? ಅಂಬೇಡ್ಕರ್ ಅವರ ಕೊನೆಯ ಸಂದೇಶಕ್ಕೆ ತದ್ವಿರುದ್ಧವಾಗಿ ಅವರ ವಿಮೋಚನಾ ರಥ ಮುಂದೆ ಸಾಗುವುದಿರಲಿ, ನಿಂತಲ್ಲೇ ನಿಲ್ಲುವುದಿರಲಿ ಆ ರಥ ನಾಗಾಲೋಟದಲ್ಲಿ ಹಿಂದೆ ಜಾರುತ್ತಿದೆ. ಅಂಬೇಡ್ಕರ್ ಅವರ ಜನರು, ಅವರ ಅನುಯಾಯಿಗಳು, ಪುರೋಹಿತಶಾಹಿ ಎಂಬ ವ್ಯಾಘ್ರನ ಬಾಯಿಗೆ ಬೀಳಲು ಕುರಿಗಳಂತೆ ಪೈಪೋಟಿಯಿಂದ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಯಾವ ಸಂವಿಧಾನ ತಾನೆ ಇವರನ್ನು ರಕ್ಷಿಸಬಲ್ಲದು? ಅದನ್ನು ತೆರೆಯುವ ಬಗೆ ಹೇಗೆಂಬುದನ್ನು ರಾಷ್ಟ್ರಕವಿ ಕುವೆಂಪು ಬಹಳ ಹಿಂದೆಯೇ ಹೇಳಿ ಹೋಗಿದ್ದಾರೆ:
‘‘ಚುನಾವಣೆಯ ರೀತಿಯನ್ನೇ ಬದಲಿಸದಿದ್ದರೆ, ಮಾನ-ಮರ್ಯಾದೆಯುಳ್ಳ ಯಾವ ಪ್ರಾಮಾಣಿಕ ವ್ಯಕ್ತಿಯಾಗಲೀ, ಯಾವ ಪಕ್ಷವಾಗಲೀ ಭ್ರಷ್ಟಾಚಾರಕ್ಕೆ ಬಲಿಯಾಗದಿರಲು ಸಾಧ್ಯವಿಲ್ಲ. ಉಗ್ರ ಕ್ರಾಂತಿಯಿಂದಲಾದರೂ ಚುನಾವಣೆಯನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸದಿದ್ದರೆ ಸ್ವಾರ್ಥಿಗಳು, ಸಮಯ ಸಾಧಕರು, ಗೂಂಡಾಗಳು, ಕಾಳಸಂತೆಕೋರರು, ಕಳ್ಳಸಾಗಾಣಿಕೆ ಖದೀಮರು, ಚಾರಿತ್ರ್ಯಹೀನರು ಪ್ರಜಾಸತ್ತೆಯ ಹುಸಿ ಹೆಸರಿನ ಹಿಂದೆ ಪ್ರಚ್ಛನ್ನ ಸರ್ವಾಧಿಕಾರ ನಡೆಸುತ್ತಾರೆ.’’
ಒಟ್ಟಾರೆ ಸಂಸದೀಯ ಪ್ರಜಾತಂತ್ರ ಗಟ್ಟಿಗೊಳ್ಳಬೇಕಾದರೆ ಅದರ ಆಧಾರಸ್ತಂಭದಂತಿರುವ ಸಂವಿಧಾನ ನೀಡಿರುವ ಒಬ್ಬರಿಗೆ ಒಂದು ಓಟು ಎಂಬ ಮೌಲ್ಯ ಭ್ರಷ್ಟವಾಗದಂತೆ ಜನಾಂದೋಲನವನ್ನು ಕೈಗೊಂಡರೆ ಮಾತ್ರ ಸಾಧ್ಯ. ಇಲ್ಲವಾದರೆ ಸ್ವಾತಂತ್ರ್ಯ ಅಮೃತೋತ್ಸವ ಆಚರಣೆ ಕೇವಲ ಅಣಕು ಎನಿಸಿಕೊಂಡುಬಿಡುತ್ತದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)