varthabharthi


ನಿಮ್ಮ ಅಂಕಣ

ಎತ್ತ ಸಾಗುತ್ತಿದೆ ಕರ್ನಾಟಕದ ಶಿಕ್ಷಣ ವ್ಯವಸ್ಥೆ?

ವಾರ್ತಾ ಭಾರತಿ : 2 Jul, 2022
ಜೆರಾಲ್ಡ್ ಡಿಸೋಜ ಕನ್ನಡಕ್ಕೆ: ಅಜಯ್ ರಾಜ್

ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ದ್ವೇಷ, ತಾರತಮ್ಯ ಹಾಗೂ ವಿಭಜನೆಯ ಕೇಂದ್ರಬಿಂದುಗಳಾಗಿಸುವಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ನಿಲ್ಲಿಸಲು ಮುಂದಾಗಬೇಕಿದೆ. ಶೈಕ್ಷಣಿಕ ತಾಣಗಳು ದುರುದ್ದೇಶವನ್ನು ಹೊಂದಿರುವವರ ರಾಜಕೀಯ ಮತ್ತು ಸೈದ್ಧಾಂತಿಕತೆಯ ಪ್ರಯೋಗಶಾಲೆಗಳಾಗದಿರಲಿ. ನಮ್ಮ ಮಕ್ಕಳಿಗೆ ಜ್ಞಾನವನ್ನು ನೀಡಲು, ಕೌಶಲ್ಯಗಳನ್ನು ಕಲಿಸಲು, ಸಾಮಾಜಿಕ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಲು, ಸಹಬಾಳ್ವೆಗೆ ಮೌಲ್ಯಗಳನ್ನು ವೃದ್ಧಿಸಲು, ಭ್ರಾತೃತ್ವ ಹಾಗೂ ಪರಸ್ಪರ ಗೌರವದ ಸಂಸ್ಕೃತಿಯನ್ನು ಕಟ್ಟುವ ಸಲುವಾಗಿ ಈ ತಾಣಗಳನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ.

ಶಿಕ್ಷಣ ಎನ್ನುವುದು ಸಂವಿಧಾನದಲ್ಲಿನ ಮೌಲ್ಯಗಳನ್ನು ಬಳಸಿಕೊಂಡು ಸಮುದಾಯಗಳನ್ನು, ಸಮಾಜವನ್ನು ಹಾಗೂ ದೇಶವನ್ನು ಕಟ್ಟುವಂತೆ ವ್ಯಕ್ತಿಗಳನ್ನು ಪ್ರೇರೇಪಿಸುತ್ತದೆ. ಒಂದು ವಿದ್ಯಾವಂತ ಸಮಾಜವು ತಾರ್ಕಿಕವಾಗಿ ಚಿಂತಿಸಿ, ಅರ್ಥೈಸಿಕೊಂಡು, ಸ್ವತಂತ್ರ ಆಯ್ಕೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಶಕ್ತವಾಗಿದೆ. ಮಾತ್ರವಲ್ಲದೆ, ತಾನು ತೆಗೆದುಕೊಂಡ ನಿರ್ಧಾರಗಳ ಫಲಿತಾಂಶಗಳನ್ನು ಎದುರಿಸುವುದಕ್ಕೂ ಮುಕ್ತವಾಗಿರುತ್ತದೆ ಹಾಗೂ ಆ ಕುರಿತು ಸ್ಪಷ್ಟತೆಯನ್ನೂ ಹೊಂದಿರುತ್ತದೆ. ಶಾಲಾ ದಿನಗಳಲ್ಲಿ ವೇಗವಾಗಿ ವೃದ್ಧಿಯಾಗುವ ಬೌದ್ಧಿಕ, ದೈಹಿಕ, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು ಶೈಕ್ಷಣಿಕವಾಗಿ ಮಾತ್ರವಲ್ಲದೆ, ಒಂದು ಮಗುವು ಸಾಮಾಜಿಕವಾಗಿ ಬೆಳೆಯುವುದೂ ಪ್ರಮುಖವಾಗಿರುತ್ತವೆ. ಮಕ್ಕಳ ಮೇಲೆ ಅವರ ಪರಿಸರ ಅಂದರೆ ಶಾಲೆ, ಮನೆ ಹಾಗೂ ಸಾಮಾಜಿಕ ವಾತಾವರಣಗಳು ಹೆಚ್ಚಿನ ಪರಿಣಾಮವನ್ನು ಬೀರುತ್ತವೆ. ಶಿಕ್ಷಣವನ್ನು ನೀಡುವವರಾಗಿ ನಾವು ಅರ್ಥಮಾಡಿಕೊಳ್ಳಬೇಕಾದುದೇನೆಂದರೆ, ಎಲ್ಲಾ ಮಕ್ಕಳಿಗಾಗಿ ಗುಣಮಟ್ಟದ ಹಾಗೂ ಎಟಕುವ ಶಿಕ್ಷಣದಲ್ಲಿ ಹೂಡಿಕೆಯನ್ನು ಮಾಡದಿದ್ದರೆ ನಮ್ಮ ರಾಜ್ಯಗಳು ಹಾಗೂ ದೇಶ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಈ ದೇಶದಲ್ಲಿನ ಶಿಕ್ಷಣ ಸಂಸ್ಥೆಗಳ ಮೇಲೆ ಒಂದು ಗುರುತರ ಜವಾಬ್ದಾರಿ ಇದೆ. ಈ ಜವಾಬ್ದಾರಿ ಕೇವಲ ವಿದ್ಯಾರ್ಥಿಗಳಿಗೆ ಸಾಮಾಜಿಕ ಸಮಸ್ಯೆಗಳನ್ನು ಅರ್ಥಮಾಡಿಸುವುದು ಮಾತ್ರವಲ್ಲದೆ, ಅವುಗಳಿಗೆ ಪರಿಹಾರಗಳನ್ನು ಹುಡುಕುವ, ಅವುಗಳನ್ನು ಹೇಗೆ ಜಯಿಸಬೇಕು ಎಂದು ಹೇಳಿಕೊಡುವುದನ್ನು ಸಹ ಒಳಗೊಂಡಿದೆ. ಡಾಕ್ಟರ್, ಇಂಜಿನಿಯರ್ ಅಥವಾ ವಿಜ್ಞಾನಿಯಾಗುವವರಿಗೆ ಈ ಸಾಮಾಜಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕೆಲವರು ವಾದಿಸಬಹುದು, ಆದರೆ, ಈ ಮೇಲಿನ ವೃತ್ತಿಗಳಲ್ಲಿ ಯಾವುದಾದರೂ ಮಾನವೀಯತೆಯ ದೃಷ್ಟಿಕೋನವನ್ನು ಬೆಳೆಸಿಕೊಳ್ಳದಿದ್ದರೆ, ಅವು ಕೇವಲ ಯಾಂತ್ರಿಕವಾಗುತ್ತವೆ ಹಾಗೂ ಅಪೂರ್ಣವಾಗುತ್ತವೆ. ತಾನು ಜೀವಿಸುವ ಸಮಾಜದಲ್ಲಿನ ಸಾಮಾಜಿಕ ರಚನೆಗಳನ್ನು ಅರ್ಥಮಾಡಿಕೊಳ್ಳದ ಯಾವ ವಿದ್ಯಾರ್ಥಿಯೂ ಈಗಾಗಲೇ ಅಸಮಾನತೆಯಿಂದ ಕೂಡಿರುವ ಈ ದೇಶದಲ್ಲಿ ಸಂಪೂರ್ಣವಾಗಿ ಸುಶಿಕ್ಷಿತನಾಗಲಾರ. ದುರಂತವೆಂದರೆ, ಕರ್ನಾಟಕದಲ್ಲಿ ಶೈಕ್ಷಣಿಕ ವಾತಾವರಣಗಳು ದ್ವೇಷ ರಾಜಕೀಯದ ಅಡ್ಡೆಗಳಾಗಿ ಮಾರ್ಪಟ್ಟಿವೆ. ಹಿಜಾಬ್ ಸಮಸ್ಯೆ ಎನ್ನುವುದು ಈಗಾಗಲೇ ಹಲವಾರು ಮುಸ್ಲಿಮ್ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದೆ. ಮಹಿಳೆಯರ ಶಿಕ್ಷಣ ನಮ್ಮ ಆದ್ಯತೆಯಾಗಬೇಕು ಹಾಗೂ ಸರಕಾರವು ತನ್ನೆಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು, ಹೆಣ್ಣುಮಕ್ಕಳು ಹೆಚ್ಚು ಹೆಚ್ಚಾಗಿ ಶಿಕ್ಷಣವನ್ನು ಪಡೆಯುವಂತೆ ನೋಡಿಕೊಳ್ಳಬೇಕು. ಸರಕಾರವು ಮುಸ್ಲಿಮ್ ಸಮುದಾಯವನ್ನು ಗುರಿಪಡಿಸುವ ಒಂದೇ ಉದ್ದೇಶದಿಂದ ಹಿಜಾಬ್ ವಿವಾದವನ್ನು ಮುನ್ನೆಲೆಗೆ ತರುವುದರ ಮೂಲಕ ರಾಜ್ಯದ ಹೆಣ್ಣುಮಕ್ಕಳಿಗೆ ಘೋರ ಅನ್ಯಾಯವನ್ನು ಮಾಡಿದೆ. ಇದಲ್ಲದೆ, ತನ್ನ ಅಭಿವೃದ್ಧಿ ಸೂಚ್ಯಂಕವನ್ನು ಉತ್ತಮವಾಗಿಸುವುದನ್ನೂ ಇದು ದೂರಮಾಡಿದೆ. ಇದು ದೂರದೃಷ್ಟಿಯ ಹಾಗೂ ಮುತ್ಸದ್ದಿತನದ ಕೊರತೆಯನ್ನು ಎತ್ತಿತೋರಿಸುತ್ತಿದೆ.

ಕೋವಿಡ್ ಸಾಂಕ್ರಾಮಿಕವು ಆರಂಭವಾಗುವುದಕ್ಕೂ ಮುಂಚೆಯೇ, ಮೂಲಸೌಕರ್ಯ, ಕುಡಿಯುವ ನೀರು, ಸುರಕ್ಷಿತ ಶೌಚಾಲಯಗಳು, ಸ್ಯಾನಿಟರಿ ನ್ಯಾಪ್ಕಿನ್‌ಗಳ ಲಭ್ಯತೆ, ವಿದ್ಯಾರ್ಥಿ- ಶಿಕ್ಷಕ ಅನುಪಾತ, ಮಧ್ಯಾಹ್ನದ ಬಿಸಿಯೂಟ ಯೋಜನೆ, ವಿದ್ಯಾರ್ಥಿ ವೇತನ ಮುಂತಾದವುಗಳನ್ನು ಒಳಗೊಂಡಂತೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಕೆಲಸಗಳನ್ನು ಮಾಡುವುದಕ್ಕೆ ಅವಕಾಶವಿತ್ತು. ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಎಲ್ಲಾ ಹಂತಗಳಲ್ಲಿಯೂ ಸಂಪನ್ಮೂಲಗಳಿಲ್ಲದೆ ಕಷ್ಟಪಡುತ್ತಿದ್ದಾರೆ. ಅದಾಗಲೇ ಇದ್ದ ಸಮಸ್ಯೆಗಳನ್ನು ಕೋವಿಡ್ ಸಾಂಕ್ರಾಮಿಕವು ಮತ್ತಷ್ಟು ದ್ವಿಗುಣಗೊಳಿಸಿದೆ. ಸರಕಾರದ ಅಂಕಿಅಂಶಗಳ ಪ್ರಕಾರವೇ (ವರದಿ ಮಾಡಿರುವುದಕ್ಕಿಂತಲೂ ಹೆಚ್ಚಿರಬಹುದು) ಕೋವಿಡ್ ಸಾಂಕ್ರಾಮಿಕದಲ್ಲಿ ಶಾಲೆಯನ್ನು ತೊರೆದ 46,000 ಮಕ್ಕಳಲ್ಲಿ ಕೇವಲ ಶೇ.35ರಷ್ಟು ಮಕ್ಕಳು ಮಾತ್ರ ಮತ್ತೆ ಶಾಲೆಗೆ ಮರಳಿ ದಾಖಲಾಗಿದ್ದಾರೆ. ಅದೆಷ್ಟೋ ಮಕ್ಕಳಿಗೆ ಶಾಲೆಗಳಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟವೊಂದೇ ಪೂರ್ಣಪ್ರಮಾಣದ ಊಟವಾಗಿದ್ದು, ಇದಕ್ಕೂ ಸೈದ್ಧಾಂತಿಕತೆಯ ಹಾಗೂ ಭ್ರಷ್ಟಾಚಾರದ ಬಣ್ಣವನ್ನು ಬಳಿಯಲಾಗಿದೆ. ಹಲವಾರು ಬಾರಿ ಈ ಊಟವು ಸೇವಿಸಲು ಯೋಗ್ಯವಾಗಿರುವುದಿಲ್ಲ. ಇದು ಮಕ್ಕಳ ಪೌಷ್ಟಿಕತೆಯ ಹಕ್ಕಿನ ಉಲ್ಲಂಘನೆಯಾಗಿದೆ. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಆಧ್ಯಾದೇಶದ 2021ರ ಮೂಲಕ ಕ್ರೈಸ್ತ ಶಿಕ್ಷಣ ಸಂಸ್ಥೆಗಳನ್ನು ಗುರಿಪಡಿಸುತ್ತಿರುವುದು ನಮಗೆಲ್ಲರಿಗೂ ಕಳವಳಕಾರಿ ವಿಷಯವಾಗಬೇಕು. ‘ಬಲವಂತದ ಮತಾಂತರ’ ಮತ್ತು ‘ಆಮಿಷ’ ಎಂಬ ಜಾಣ ಪದಗಳನ್ನು ಉಪಯೋಗಿಸುವುದರ ಮೂಲಕ ಕಾನೂನನ್ನು ಧ್ವಂಸಗೊಳಿಸುವುದು ಹಾಗೂ ರಾಜ್ಯದಲ್ಲಿನ ಕ್ರೈಸ್ತರ ಮೇಲೆ ದಾಳಿಗಳನ್ನು ನಡೆಸಲು ಅವಕಾಶವನ್ನು ನೀಡುವುದು ಈ ಕಾಯ್ದೆಯ ಉದ್ದೇಶವಾಗಿದೆ. ಇದರ ಮೂಲಕ ದಶಕಗಳಿಂದಲೂ ಈ ಸಮುದಾಯವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮಾಡಿಕೊಂಡು ಬಂದಿರುವ ಸೇವಾಕಾರ್ಯಗಳನ್ನು ಮಾಡದಂತೆ, ಅವರಲ್ಲಿ ಭಯ ಹುಟ್ಟಿಸಿ ಮೂಲೆಗುಂಪಾಗಿಸುವುದು ಇವರ ಅಜೆಂಡಾ ಆಗಿದೆ. ಧಾರ್ಮಿಕ ಸಭೆಗಳು ನಡೆಸುತ್ತಿರುವ ಪ್ರತಿಷ್ಠಿತ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆಗಳಲ್ಲಿ ಉದ್ಯೋಗ ಅಥವಾ ಉಚಿತ ಶಿಕ್ಷಣ ಎಂಬುದು ‘ಆಮಿಷ’ ಎಂಬ ಪರಿಧಿಯಡಿಯಲ್ಲಿ ಬಂದಿದ್ದು, ಇದು ಸಂವಿಧಾನದ 25ನೇ ಅನುಚ್ಛೇದದಲ್ಲಿ ನೀಡಲಾಗಿರುವ ಹಕ್ಕುಗಳ ಉಲ್ಲಂಘನೆಯಾಗಿದೆ.

ಸರಕಾರವು ಬಹಿರಂಗವಾಗಿ ಧಾರ್ಮಿಕ ಸಭೆಗಳನ್ನು ಗುರಿಪಡಿಸಿದರೆ, ಇದರಿಂದ ಬೇಸತ್ತು ಈ ಧಾರ್ಮಿಕ ಸಭೆಗಳು ತಮ್ಮ ಸಂಸ್ಥೆಗಳಲ್ಲಿ ನೀಡುತ್ತಿರುವ ಉಚಿತ ಶಿಕ್ಷಣವನ್ನು ನಿಲ್ಲಿಸುತ್ತವೆ. ಇದರಿಂದ ಹಿಂದುಳಿದ ಸಮುದಾಯಗಳ ಮಕ್ಕಳಿಗೆ ಹೆಚ್ಚು ನಷ್ಟ ಉಂಟಾಗುತ್ತದೆ. ಕೋವಿಡ್ ಸಾಂಕ್ರಾಮಿಕದ ನಂತರ, ಆನ್‌ಲೈನ್ ಶಿಕ್ಷಣ ಎನ್ನುವುದು ಹೊಸ ಮಂತ್ರವಾಗಿ ರೂಪುಗೊಂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)-2020 ಎಂಬುದು ಸಂಪೂರ್ಣವಾಗಿ ಒಂದು ನಿರ್ದಿಷ್ಟ ಸಿದ್ಧಾಂತ ಹಾಗೂ ಕಾರ್ಪೊರೇಟ್ ತಳಹದಿಯ ಮೇಲೆ ನಿಂತಿದೆ. ಈ ಆನ್‌ಲೈನ್ ಶಿಕ್ಷಣವನ್ನು ಭಾರತದ ಶಿಕ್ಷಣ ಜಾಗತಿಕ ಗುಣಮಟ್ಟವನ್ನು ತಲುಪುವ ಶಿಕ್ಷಣ ನೀತಿಯ ತಳಹದಿ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಇದು ಶಿಕ್ಷಣವನ್ನು ಮಕ್ಕಳಿಂದ ಮತ್ತಷ್ಟು ದೂರವಾಗಿಸಿದೆ. ಇದು ತಾಂತ್ರಿಕವಾಗಿ ಮಾತ್ರ ಮಕ್ಕಳ ಕೈಗೆಟುಕದೆ ದೂರವಾದದ್ದಲ್ಲದೆ, ಇದರಿಂದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳ ಶಿಕ್ಷಣದಿಂದ ವಂಚಿತರಾಗುತ್ತಾರೆ. ಮಾತ್ರವಲ್ಲದೆ, ಇದುವರೆಗೂ ಅವರಿಗೆ ದಕ್ಕಿದ್ದ ಶಿಕ್ಷಣ ಮುಂದುವರಿಸಲು ಪರಿಕರಗಳನ್ನು ಕೊಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲದೆ, ಮುಂದಿನ ಶಿಕ್ಷಣವು ಕನಸಾಗಿಯೇ ಉಳಿಯುತ್ತದೆ. ನೈಜ ಬದುಕಿನ ಅನುಭವಗಳು ಹೇಳುವುದೇನೆಂದರೆ ಮಕ್ಕಳ ಕಲಿಕೆಯಲ್ಲಿ ನೈಜತೆ ಇರಬೇಕು. ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಸಂವಾದಗಳು ಮತ್ತು ಚರ್ಚೆಗಳು ನಡೆಯಬೇಕು. ಆಗ ಮಾತ್ರ ಕಲಿಕೆ ಎನ್ನುವುದು ಪರಿಣಾಮಕಾರಿಯಾಗಿರಲು ಸಾಧ್ಯ. ಇದೇ ಸಂದರ್ಭದಲ್ಲಿ ‘ಡಿಜಿಟಲ್ ಡಿವೈಡ್’ ಎನ್ನುವುದು ಕೇವಲ ಕಲ್ಪನೆಯಲ್ಲ ಬದಲಿಗೆ ವಾಸ್ತವವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಸಮಸ್ಯೆಯನ್ನು ಸಮಸ್ಯೆಯೇ ಅಲ್ಲ ಎಂದು ಹೇಳಿ ಮುಚ್ಚಿ ಹಾಕಲಾಗದು. ಈ ಆನ್‌ಲೈನ್ ಶಿಕ್ಷಣದಲ್ಲಿ ಒಳಗೊಳ್ಳದೆ ಬೇರ್ಪಡಿಸಲ್ಪಡುವ ಮಕ್ಕಳು ಭಾರತದ ಸಮಾಜದಲ್ಲಿ ಹಿಂದೆ ಸಾಂಪ್ರದಾಯಿಕವಾಗಿ ತಾರತಮ್ಯಕ್ಕೆ ಒಳಗಾದ ಸಮುದಾಯಗಳ ಹಾಗೂ ಕುಟುಂಬಗಳ ಮಕ್ಕಳೇ ಆಗಿದ್ದಾರೆ. ಹಿಜಾಬ್ ಕಾರಣಕ್ಕೆ ಶಿಕ್ಷಣವನ್ನು ತೊರೆದ ವಿದ್ಯಾರ್ಥಿಗಳಿಗಂತೂ ಆನ್‌ಲೈನ್ ತರಗತಿಗಳ ಆಯ್ಕೆಯನ್ನು ನೀಡಲಾಗಿರುವುದಿಲ್ಲ. ಇದನ್ನು ಶಿಕ್ಷಣ ನೀತಿಯ ತಳಹದಿ ಎಂದು ನಾವು ಕರೆಯಬಹುದೇ?

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಎಂಬುದು ಬ್ರಾಹ್ಮಣ ಸಂಪ್ರದಾಯಗಳನ್ನು ಹಾಗೂ ಪಠ್ಯಗಳನ್ನು ತೀವ್ರವಾಗಿ ಒಳಗೊಂಡಿದೆ. ಮಾತ್ರವಲ್ಲದೆ, ಇದರ ಹೊರತಾದ ಮಿಕ್ಕೆಲ್ಲವನ್ನೂ ತೆಗೆದುಹಾಕಲಾಗಿದೆ. ಇದೇ ಸೈದ್ಧಾಂತಿಕ ಅಜೆಂಡಾವನ್ನು ನಾವು ಕರ್ನಾಟಕದಲ್ಲಿ ಅವಸರವಾಗಿ ಮಾಡಿರುವ ಪಠ್ಯಪರಿಷ್ಕರಣೆಯಲ್ಲಿ ಕಾಣಬಹುದಾಗಿದೆ. ಇದೇ ಅವಸರವನ್ನು ಸರಕಾರವು ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದರಲ್ಲಿ, ಮಧ್ಯಾಹ್ನದ ಬಿಸಿಯೂಟವನ್ನು ಸರಿಯಾಗಿ ನೀಡುವುದರಲ್ಲಿ ಹಾಗೂ ಸರಕಾರಿ ಶಾಲೆಗಳನ್ನು ಉತ್ತಮ ಪಡಿಸುವುದರಲ್ಲಿ ತೋರಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ಶಾಲೆಗಳು ದಿನೇ ದಿನೇ ದುಸ್ಥಿತಿಗೆ ಹೋಗುತ್ತಿದ್ದು, ಈಗ ಪಠ್ಯಪುಸ್ತಕಗಳು ಕೂಡಾ ಹೇಳಿದ್ದನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವ ಉಪಕರಣಗಳಾಗಿ ಮಾರ್ಪಟ್ಟಿವೆ. ಜಾತಿವಾದ, ಕೋಮುವಾದ ಹಾಗೂ ಸಾಮಾಜಿಕ ಪಿಡುಗುಗಳನ್ನು ಖಂಡಿಸಿರುವ ದಲಿತ ಬರಹಗಾರರನ್ನು ಕರ್ನಾಟಕದ ಪಠ್ಯಪುಸ್ತಕಗಳಿಂದ ಹೊರಗಿಡಲಾಗಿದೆ. ಇದು ಇಂತಹ ಸಮಾಜಘಾತುಕ ವಿಚಾರಗಳ ವಿರುದ್ಧ ಹೋರಾಡಲು ಹಕ್ಕನ್ನು ನೀಡಿರುವ ಸಂವಿಧಾನದ ಮೇಲಿನ ಹಲ್ಲೆಯಾಗಿದೆ. ಒಂದು ಕೆಟ್ಟ ಶಸ್ತ್ರಚಿಕಿತ್ಸೆಯಂತೆ, ವಿಮರ್ಶಾತ್ಮಕ ಪಠ್ಯಗಳನ್ನು ಪಠ್ಯಪುಸ್ತಕಗಳಿಂದ ಬೇಕೆಂದೇ ಕತ್ತರಿಸಲಾಗಿತ್ತು. ಹಲವಾರು ದಲಿತ, ಹಿಂದುಳಿದ ಬರಹಗಾರರ ಬರಹಗಳನ್ನು ತೆಗೆದು ಹಾಕಿ, ಅವರ ಜಾಗದಲ್ಲಿ ಕೇವಲ ಬ್ರಾಹ್ಮಣರು ಬರೆದ ಪಠ್ಯಗಳನ್ನು ಸೇರಿಸಲಾಗಿತ್ತು. ಸಾಮಾಜಿಕ ಸಮಾನತೆಯ ಕುರಿತ ಪಾಠಗಳನ್ನು ತೆಗೆದು ಅದರ ಬದಲಿಗೆ ಸಾವರ್ಕರ್ ಕುರಿತ ಪಾಠವನ್ನು ಸೇರಿಸಲಾಗಿತ್ತು. ಐತಿಹಾಸಿಕ ಪಾಠಗಳನ್ನು ತೆಗೆದುಹಾಕಿ, ಅವುಗಳ ಬದಲು ವೇದ ಮತ್ತು ಮಹಾಭಾರತಗಳ ಕಥೆಗಳನ್ನು ಸೇರಿಸಲಾಗಿತ್ತು. ಭಾರತದ ಭೂಪಟವನ್ನು ವಿಲಕ್ಷಣಗೊಳಿಸಿ, ಮಾನವ ಹಕ್ಕುಗಳು, ಸಾಮಾಜಿಕ ಹೋರಾಟಗಳು ಹಾಗೂ ಸಮಸ್ಯೆಗಳ ಕುರಿತ ಪಾಠಗಳನ್ನು ಕೈಬಿಡಲಾಗಿತ್ತು. 

ಮುಖ್ಯವಾಗಿ, ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದರು ಎಂಬ ಅಂಶವನ್ನೇ ಕೈಬಿಡಲಾಗಿತ್ತು. ಇದಕ್ಕೆ ಬದಲಾಗಿ ಆರೆಸ್ಸೆಸ್ ನಾಯಕರ ಕುರಿತ ಪಾಠಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿತ್ತು. ಈ ಬದಲಾವಣೆಗಳು ಅವರ ಉದ್ದೇಶಗಳನ್ನು ತಿಳಿಸುತ್ತಿವೆ ಎಂಬುದನ್ನು ನಾವು ಮರೆಯಬಾರದು. ಈ ಸಂದರ್ಭದಲ್ಲಿ ನಾವು ಕೇಳಿಕೊಳ್ಳಬೇಕಾದ ಮುಖ್ಯ ಪ್ರಶ್ನೆಯೆಂದರೆ ಈ ಬದಲಾವಣೆಗಳು ನಮ್ಮ ಸಮಾಜವು ಹಿಂದೆ ಹೇಗಿತ್ತು ಎಂಬುದನ್ನು ಪ್ರತಿಬಿಂಬಿಸುತ್ತವೆಯೇ? ಅಥವಾ ಇವುಗಳು ನಮ್ಮ ಮಕ್ಕಳಿಗೆ ಉನ್ನತ ಸ್ಥಾನಕ್ಕೇರುವ, ನೈತಿಕ, ಮೌಲ್ಯಯುತ ಹಾಗೂ ಮಾನವೀಯತೆಯ ಪ್ರತೀಕವಾಗಲು ಭರವಸೆಯನ್ನು ನೀಡುತ್ತಿವೆಯೇ? ಇತಿಹಾಸ ನಮ್ಮ ಇಂದಿನ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ. ಇದು ನಮ್ಮ ಗತಕಾಲದ ಸೌಂದರ್ಯವನ್ನು ನಮಗೆ ತೋರಿಸುವುದರ ಜೊತೆ ಜೊತೆಗೆ, ಕ್ರೌರ್ಯ ಮತ್ತು ಪಿಡುಗಗಳ ಕುರಿತು ಸಹ ತಿಳಿಸುತ್ತದೆ. ಪರಿಷ್ಕರಿಸಿದ ಈ ಪಠ್ಯಪುಸ್ತಕಗಳು ನಮ್ಮ ಮಕ್ಕಳಿಗೆ ಇತಿಹಾಸದ ಕುರಿತು ಪ್ರಾಮಾಣಿಕವಾಗಿ ಹಾಗೂ ವಿನಮ್ರವಾಗಿರುವಂತೆ ಪ್ರೇರೇಪಿಸುತ್ತವೆಯೇ? ಹಿಂದಿನ ತಪ್ಪುಗಳು ಮರುಕಳಿಸದಂತೆ, ಅವುಗಳಿಂದ ಕಲಿಯುವಂತೆ ನಮ್ಮ ಮಕ್ಕಳಿಗೆ ನೆರವಾಗುತ್ತವೆಯೇ? ಅಥವಾ ಈ ಪಠ್ಯಪುಸ್ತಕಗಳು ನಮ್ಮ ಮಕ್ಕಳಲ್ಲಿ ದ್ವೇಷ ಮತ್ತು ತಾರತಮ್ಯವನ್ನು ಉಂಟುಮಾಡುವ ಸಾಧನಗಳಾಗಿವೆಯೇ? ಇತಿಹಾಸವನ್ನು ದುರುದ್ದೇಶದಿಂದ ತಪ್ಪು ಮಾಹಿತಿಯನ್ನು ನೀಡಿ ಉದಾಹರಿಸುವುದು ನಾವು ನಮ್ಮ ಮಕ್ಕಳಿಗೆ ಮಾಡುವ ದ್ರೋಹವಾಗಿದೆ. ಈ ಮೂಲಕ ನಾವು ಮಕ್ಕಳಿಗೆ ಉದ್ದೇಶವೊಂದಿದ್ದರೆ ಸಾಕು ಮೋಸ ಮಾಡುವುದು, ಅಪಪ್ರಚಾರ ಮಾಡುವುದು, ತಪ್ಪಾಗಿ ನಿರೂಪಿಸುವುದು ಸರಿ ಎಂಬುದನ್ನು ಕಲಿಸುತ್ತಿದ್ದೇವೆ.

ಇದೇ ರೀತಿ, ಒಂದು ಸಮುದಾಯವನ್ನು ನಾವು ದ್ವೇಷಿಸಬೇಕೆಂದರೆ ಆ ಸಮುದಾಯದ ಕುರಿತು ತಪ್ಪುಮಾಹಿತಿಯನ್ನು ಹರಡಬಹುದು ಹಾಗೂ ನಮ್ಮ ಸ್ವಂತ ಇತಿಹಾಸದ ಬಗ್ಗೆ ಪ್ರಾಮಾಣಿಕವಾಗಿರಬೇಕಾದ ಅವಶ್ಯಕತೆಯಿಲ್ಲ ಎಂಬುದನ್ನು ಸಹ ನಾವು ನಮ್ಮ ಮಕ್ಕಳಿಗೆ ಕಲಿಸುತ್ತಿದ್ದೇವೆ. ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಅಪೂರ್ಣ ಪ್ರಾತಿನಿಧಿತ್ವ ಹಾಗೂ ಒಂದು ಪಕ್ಷದ ನಾಯಕರನ್ನು ಓಲೈಸಿರುವುದರ ಕಾರಣಕ್ಕೆ ಸಾರ್ವಜನಿಕ ಟೀಕೆಗಳಿಗೆ ಗುರಿಯಾಗಿದೆ. ಕರ್ನಾಟಕದಲ್ಲಿ ಪರಿಚಯಿಸುತ್ತಿರುವ ಪರಿಷ್ಕೃತ ಪಠ್ಯಪುಸ್ತಕಗಳು ನಾವೆಲ್ಲ ಎತ್ತಿಹಿಡಿಯಬೇಕು ಎಂದು ಹೊರಟಿರುವ ಸಂವಿಧಾನಕ್ಕೆ ತದ್ವಿರುದ್ಧವಾಗಿವೆ. ಈ ದಿಶೆಯಲ್ಲಿ ಪೋಷಕರು, ಶೈಕ್ಷಣಿಕತಜ್ಞರು, ಹೋರಾಟಗಾರರು, ಇನ್ನಿತರ ಸಾಮಾಜಿಕ ಕಾರ್ಯಕರ್ತರೂ ಸೇರಿದಂತೆ ವಿದ್ಯಾರ್ಥಿಗಳೂ ಸಂವಿಧಾನದಲ್ಲಿ ನೀಡಲಾದ ಸಮಾನತೆ, ನ್ಯಾಯಿಕ ತತ್ವಗಳ ಪರವಾಗಿ ಧೃಡವಾಗಿ ನಿಂತುಕೊಳ್ಳುವ ನಿಟ್ಟಿನಲ್ಲಿ ಕೈಜೋಡಿಸಬೇಕು. ವ್ಯಂಗ್ಯವೆಂದರೆ, ಒಂದು ಕಡೆ ಶಾಲಾ ಪಠ್ಯಪುಸ್ತಕಗಳಲ್ಲಿ ಜಾತಿಯ ಪ್ರಸ್ತಾಪವನ್ನೇ ಅಳಿಸಲಾಗಿದ್ದರೆ, ಮತ್ತೊಂದು ಕಡೆ ಕರ್ನಾಟಕದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಹಂಚಿಕೆಯಲ್ಲಿ ಗುರುತರ ಅಂತರಗಳು ಉಂಟಾಗಿವೆ. ಇದು ಬಡ ವಿದ್ಯಾರ್ಥಿಗಳನ್ನು ಶಿಕ್ಷಣ ವ್ಯವಸ್ಥೆಯಿಂದ ಹೊರಗಿಡುವ ಹುನ್ನಾರವೇ ಆಗಿದೆ. ಕರ್ನಾಟಕದಲ್ಲಿ ಈ ಯೋಜನೆಯ ಹಂಚಿಕೆಯು ತೀವ್ರ ವಿಳಂಬವಾಗುತ್ತಿರುವುದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಜನವರಿ 2022ರವರೆಗೆ, ನಿರೀಕ್ಷಿಸಲಾಗಿದ್ದ 3.6 ಲಕ್ಷ ಅರ್ಜಿದಾರರಿಗೆ ವಿದ್ಯಾರ್ಥಿ ವೇತನವನ್ನೇ ಹಂಚಿಕೆ ಮಾಡಲಾಗಿರುವುದಿಲ್ಲ. ಮಾರ್ಚ್ 31ರ ವೇಳೆಗೆ, ಸ್ವೀಕರಿಸಿದ್ದ 3.39 ಲಕ್ಷ ಅರ್ಜಿಗಳ ಪೈಕಿ, ಕೇವಲ 2.3 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನವನ್ನು ಹಂಚಿಕೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಆಗುತ್ತಿರುವ ವಿಳಂಬಗಳು ಕಾಲೇಜುಗಳಲ್ಲಿ ಶುಲ್ಕವನ್ನು ಕಟ್ಟುವಂತೆ ಪದೇ ಪದೇ ಕೇಳಿದಾಗ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಮೇಲೆ ಒತ್ತಡವನ್ನು ಹೇರುತ್ತವೆ. ಸರಿಯಾದ ಸಮಯಕ್ಕೆ ಕಾಲೇಜುಗಳ ಶುಲ್ಕವನ್ನು ಕಟ್ಟಲಾಗದೆ ಅನೇಕ ದಲಿತ ಸಮುದಾಯದ ವಿದ್ಯಾರ್ಥಿಗಳು ಕಾಲೇಜುಗಳನ್ನು ತೊರೆದ ಉದಾಹರಣೆಗಳೂ ನಮ್ಮ ಕಣ್ಣಮುಂದಿವೆ. ಶಿಕ್ಷಣ ವ್ಯವಸ್ಥೆಯ ಅಸ್ಥಿರಗೊಳಿಸುವಿಕೆ ಸದ್ಯಕ್ಕೆ ಅಲ್ಲದಿದ್ದರೂ ಮುಂದಿನ ಹಲವು ವರ್ಷಗಳಲ್ಲಿ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಆದರೆ, ಆಗ ಆಗಿರುವ ಹಾನಿಯನ್ನು ಸರಿಪಡಿಸುವುದು ಕಷ್ಟಕರವಾಗುತ್ತದೆ. ಸರಿಯಾದ ಶಿಕ್ಷಣವನ್ನು ಪಡೆಯದ ಯುವಕರು ಅತೃಪ್ತಿಕರ ಉದ್ಯೋಗಗಳನ್ನು ಪಡೆಯುತ್ತಾರೆ.

ಇದು ಅವರಲ್ಲಿ ಅನೇಕ ಗಂಭೀರ ಮಾನಸಿಕ ಒತ್ತಡಗಳಿಗೆ ಕಾರಣವಾಗಬಹುದು, ಹಿಂಸೆಗೆ, ಕುಡಿತಕ್ಕೆ ಹಾಗೂ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕುವುದಕ್ಕೆ ಆಗದ ರೀತಿಯ ಪರಿಣಾಮಗಳಿಗೆ ಕಾರಣವಾಗಬಹುದು. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ದ್ವೇಷ, ತಾರತಮ್ಯ ಹಾಗೂ ವಿಭಜನೆಯ ಕೇಂದ್ರಬಿಂದುಗಳಾಗಿಸುವಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ನಿಲ್ಲಿಸಲು ಮುಂದಾಗಬೇಕಿದೆ. ಶೈಕ್ಷಣಿಕ ತಾಣಗಳು ದುರುದ್ದೇಶವನ್ನು ಹೊಂದಿರುವವರ ರಾಜಕೀಯ ಮತ್ತು ಸೈದ್ಧಾಂತಿಕತೆಯ ಪ್ರಯೋಗಶಾಲೆಗಳಾಗದಿರಲಿ. ನಮ್ಮ ಮಕ್ಕಳಿಗೆ ಜ್ಞಾನವನ್ನು ನೀಡಲು, ಕೌಶಲ್ಯಗಳನ್ನು ಕಲಿಸಲು, ಸಾಮಾಜಿಕ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಲು, ಸಹಬಾಳ್ವೆಗೆ ಮೌಲ್ಯಗಳನ್ನು ವೃದ್ಧಿಸಲು, ಭ್ರಾತೃತ್ವ ಹಾಗೂ ಪರಸ್ಪರ ಗೌರವದ ಸಂಸ್ಕೃತಿಯನ್ನು ಕಟ್ಟುವ ಸಲುವಾಗಿ ಈ ತಾಣಗಳನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ.

(ಲೇಖಕರು ವಕೀಲರು ಹಾಗೂ ನಿರ್ದೇಶಕರು, ಸಂತ ಜೋಸೆಫರ ಕಾನೂನು ಕಾಲೇಜು, ಬೆಂಗಳೂರು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)