varthabharthi


ನಿಮ್ಮ ಅಂಕಣ

ಮಾಜಿ ಸೈನಿಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಯಾಕೆ ಸಿಗುತ್ತಿಲ್ಲ?

ವಾರ್ತಾ ಭಾರತಿ : 2 Jul, 2022
ನುಶೈಬಾ ಇಕ್ಬಾಲ್ ಮತ್ತು ಸಾಟ್‌ಸಿಂಗ್

ಸಾರ್ವಜನಿಕ ಕ್ಷೇತ್ರದ ಉದ್ಯೋಗ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಹೆಚ್ಚಿನ ಮಾಜಿ ಸೈನಿಕರು ಖಾಸಗಿ ಕ್ಷೇತ್ರದಲ್ಲಿ ಸೆಕ್ಯುರಿಟಿ ಗಾರ್ಡ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಬೇರೆ ಯಾವುದೇ ಆಯ್ಕೆಯನ್ನು ಕಾಣದ ಸುಬೇದಾರ್ ಮೇಜರ್ ಭಾನ್ ಕೂಡ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ. ಆದರೆ, ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಸಿಗುವ 8,000 ರೂಪಾಯಿ ತಿಂಗಳ ಸಂಬಳವು ತುಂಬಾ ಕಡಿಮೆಯಾಗಿದೆ ಎಂದು ಅವರು ಹೇಳುತ್ತಾರೆ. 

2011ರಲ್ಲಿ, 52 ವರ್ಷ ಪ್ರಾಯದ ಕ್ಯಾಪ್ಟನ್ ಜಗ್ವೀರ್ ಮಲಿಕ್ ಸೇನೆಯಿಂದ ನಿವೃತ್ತಿಗೊಳ್ಳುವ ಸ್ವಲ್ಪವೇ ಮೊದಲು ಕಿರಿಯ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದರು. ಮೊದಲು, ಹರ್ಯಾಣದ ಶಿಕ್ಷಣ ಇಲಾಖೆ ಈ ಹುದ್ದೆಗಾಗಿ ಪರೀಕ್ಷೆಗಳನ್ನು ನಡೆಸುವ ಮುನ್ನ ಅವರು ಎರಡು ವರ್ಷ ಕಾದರು. ಬಳಿಕ, ಸಂದರ್ಶನಕ್ಕಾಗಿ ಇನ್ನೆರಡು ವರ್ಷ ಕಾದರು.

ಆ ಹುದ್ದೆಯನ್ನು ಮಾಜಿ ಸೈನಿಕರಿಗೆ ಮೀಸಲಿಡಲಾಗಿತ್ತು. ಆದರೆ, ಸಂದರ್ಶನ ನಡೆದು ಆರು ತಿಂಗಳ ಬಳಿಕವೂ ಅವರಿಗೆ ನೇಮಕಾತಿ ಪತ್ರ ಬರಲಿಲ್ಲ. ಆಗ ಅವರು ಶಿಕ್ಷಣ ಇಲಾಖೆಯ ನಿರ್ದೇಶಕರನ್ನು ಭೇಟಿಯಾಗಿ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದರು. ಅಂತಿಮವಾಗಿ, ಅವರು ಅರ್ಜಿ ಸಲ್ಲಿಸಿದ ಆರು ವರ್ಷಗಳ ಬಳಿಕ ನೇಮಕಾತಿ ಪತ್ರ ಸಿಕ್ಕಿತು. ಆದರೆ, ಆ ವೇಳೆಗೆ ಅವರ ನಿವೃತ್ತಿಗೆ ಕೇವಲ ಮೂರು ತಿಂಗಳುಗಳು ಬಾಕಿಯಿದ್ದವು. ಹರ್ಯಾಣದಲ್ಲಿ ಶಿಕ್ಷಕರ ನಿವೃತ್ತಿ ವಯಸ್ಸು 58 ವರ್ಷ.

‘‘ಇಷ್ಟೊಂದು ಕಿರು ಅವಧಿಯಲ್ಲಿ ನಾನು ಯಾವ ಕೆಲಸ ಮಾಡಬಹುದಾಗಿತ್ತು’’ ಎಂದು ಈಗ 64 ವರ್ಷದ ಕ್ಯಾಪ್ಟನ್ ಮಲಿಕ್ IndiaSpend ಜೊತೆ ಮಾತನಾಡುತ್ತಾ ಹೇಳಿದರು. ‘‘ನಾನು ಆ ಕೆಲಸವನ್ನು ತಿರಸ್ಕರಿಸಿದೆ’’ ಎಂದರು.

ಮಲಿಕ್ ಸೇನೆಯಲ್ಲಿ 32 ವರ್ಷ ಕೆಲಸ ಮಾಡಿದ್ದರು. ಪ್ರತೀ ವರ್ಷ ನಿವೃತ್ತಿಯಾಗುತ್ತಿರುವ ಸುಮಾರು 60,000 ಸೇನಾ ಸಿಬ್ಬಂದಿಯ ಪೈಕಿ ಅವರೂ ಒಬ್ಬರು. ನಿವೃತ್ತಿಯ ಕನಿಷ್ಠ ವಯಸ್ಸು (ಗ್ರೂಪ್ ಒಂದು ಅರೆ ಕುಶಲ ಸಿಪಾಯಿಗಳಿಗೆ) 42 ವರ್ಷ ಅಥವಾ ಕನಿಷ್ಠ 17 ವರ್ಷಗಳ ಸೇವೆ (ಇವುಗಳಲ್ಲಿ ಯಾವುದು ಮೊದಲೋ ಅದು). ನಿವೃತ್ತಿಯ ಗರಿಷ್ಠ ವಯಸ್ಸು 54 (ಜೂನಿಯರ್ ಕಮಿಶನ್ಡ್ ಆಫೀಸರ್‌ಗಳಿಗೆ) ಅಥವಾ 32 ವರ್ಷಗಳ ಸೇವೆ. ಅಂದರೆ, ನಿವೃತ್ತಿಗೊಳ್ಳುವ ಮಾಜಿ ಸೈನಿಕರಿಗೆ ಬೇರೆ ಕಡೆ ಕೆಲಸ ಮಾಡಲು 5ರಿಂದ 25 ವರ್ಷಗಳ ಅವಧಿಯಿದೆ.

 ಈ ಮಾಜಿ ಸೈನಿಕರು ಗ್ರೂಪ್ ಸಿ ಮತ್ತು ಗ್ರೂಪ್ ಡಿ ಸರಕಾರಿ ಹುದ್ದೆಗಳಲ್ಲಿರುವ ಶೇ. 10 ಕೋಟಾಕ್ಕಾಗಿ ಸ್ಪರ್ಧಿಸುತ್ತಿದ್ದಾರೆ. ಈ ಹುದ್ದೆಗಳು ಗುಮಾಸ್ತ ಮತ್ತು ದೈನಂದಿನ ಕೆಲಸಗಳು. ಅವರು ಸಶಸ್ತ್ರ ಪಡೆಗಳಿಂದ ನಿವೃತ್ತಿಗೊಂಡ ಬಳಿಕ ಪಿಂಚಣಿ ಪಡೆಯುತ್ತಾರೆ. ಆದರೆ, ತಮ್ಮನ್ನು ಮತ್ತು ತಮ್ಮ ಕುಟುಂಬಗಳನ್ನು ಸಂಬಾಳಿಸಲು ಇದು ಸಾಕಾಗುವುದಿಲ್ಲ ಎಂದು ಅವರು IndiaSpend ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಸರಕಾರ ಜೂನ್ 14ರಂದು ಹೊರಡಿಸಿದ ಸಶಸ್ತ್ರ ಪಡೆಗಳ ನೂತನ ನೇಮಕಾತಿ ಕಾರ್ಯಕ್ರಮ ‘ಅಗ್ನಿಪಥ್’ನ ಪ್ರಕಾರ, ಹೊಸ ಸೇನಾ ನೇಮಕಾತಿಗಳನ್ನು ನಾಲ್ಕು ವರ್ಷಗಳ ಅವಧಿಗೆ ಮಾಡಲಾಗುವುದು. ನಾಲ್ಕು ವರ್ಷಗಳ ಸೇವೆಯ ಬಳಿಕ, ಈ ಪೈಕಿ ಶೇ. 25 ಮಂದಿಯನ್ನು 15 ವರ್ಷಗಳ ಅವಧಿಗಾಗಿ ಜೂನಿಯರ್ ಕಮಿಶನ್ಡ್ ಆಫಿಸರ್‌ಗಳಾಗಿ ಖಾಯಂ ನೇಮಕಾತಿಗೆ ಪರಿಗಣಿಸಲಾಗುವುದು. ಉಳಿದ ಶೇ. 75 ಮಂದಿ ತಮ್ಮ 11.7 ಲಕ್ಷ ರೂಪಾಯಿ ಉಳಿತಾಯದೊಂದಿಗೆ ನಾಗರಿಕ ಬದುಕಿಗೆ ಮರಳುತ್ತಾರೆ. ಅವರಿಗೆ ಯಾವುದೇ ಪಿಂಚಣಿ ಅಥವಾ ಗ್ರಾಚ್ಯುಟಿ ಲಭಿಸುವುದಿಲ್ಲ. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅಸ್ಸಾಮ್ ರೈಫಲ್ಸ್‌ಗಳಲ್ಲಿನ ಕೆಲವು ಹುದ್ದೆಗಳನ್ನು ‘ಅಗ್ನಿಪಥ್’ನಿಂದ ಹೊರಬರುವ ‘ಅಗ್ನಿವೀರ’ರಿಗೆ ನೀಡಲಾಗುವುದು.

ಆದರೆ, ಕರ್ತವ್ಯದ ವೇಳೆ ಈ ಸೈನಿಕರು ಕಲಿಯುವ ಕೌಶಲಗಳು ನಿವೃತ್ತಿಯ ಬಳಿಕ ಕೆಲಸ ಪಡೆಯಲು ಅವರಿಗೆ ಸಾಕಾಗುವುದಿಲ್ಲ ಎಂದು ಮಾಜಿ ಸೈನಿಕರು ಹೇಳುತ್ತಾರೆ. ಕೇಂದ್ರ ಸರಕಾರದ ಬ್ಯಾಂಕ್‌ಗಳು ಮತ್ತು ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳಲ್ಲಿ ಮಾಜಿ ಸೈನಿಕರಿಗೆ ಮೀಸಲಾತಿಗಳನ್ನು ನೀಡಿರುವ ಹೊರತಾಗಿಯೂ, ನಿವೃತ್ತಿಯ ಬಳಿಕ ಕೆಲಸ ಪಡೆಯುವಲ್ಲಿ ಅವರು ವಿಫಲರಾಗುತ್ತಿದ್ದಾರೆ ಎನ್ನುವುದನ್ನು ಅಂಕಿಅಂಶಗಳು ತೋರಿಸಿವೆ. ಆದರೆ, ನಿವೃತ್ತರಾಗುವಾಗ ಸಿಗುವ ಹಣದಿಂದ ಅವರಿಗೆ ಪದವಿ ಪಡೆಯಲು ಅಥವಾ ನಿರ್ದಿಷ್ಟ ಉದ್ಯೋಗಗಳಿಗೆ ಕೌಶಲ ಪಡೆಯಲು ಅವಕಾಶವಿದೆ ಹಾಗೂ ಸೇನಾ ಅನುಭವ ಹೊಂದಿರದ ಇತರ ಉದ್ಯೋಗಾಕಾಂಕ್ಷಿಗಳಿಗೆ ಹೋಲಿಸಿದರೆ ಅವರಿಗೆ ಹೆಚ್ಚಿನ ಅವಕಾಶವಿದೆ ಎಂದು ಪರಿಣಿತರು ಹೇಳುತ್ತಾರೆ.

ಅಧಿಕಾರಶಾಹಿ ವಿಳಂಬ

ಸಾರ್ವಜನಿಕ ಕ್ಷೇತ್ರದ ಉದ್ಯೋಗಗಳ ನೇಮಕಾತಿಯಲ್ಲಿ ಮಾಜಿ ಸೈನಿಕರು ವಿಳಂಬವನ್ನು ಎದುರಿಸುತ್ತಿರುವ ಪ್ರಕರಣ ಕ್ಯಾಪ್ಟನ್ ಮಲಿಕ್‌ರದ್ದು ಒಂದೇ ಅಲ್ಲ. 2014ರಲ್ಲಿ, ಸೇನೆಯಿಂದ ನಿವೃತ್ತರಾದ ಬಳಿಕ, 47 ವರ್ಷದ ಸುಬೇದಾರ್ ಮೇಜರ್ ಚಂದ್ರ ಭಾನ್ ಹರ್ಯಾಣ ಸರಕಾರದಲ್ಲಿ ಗುಮಾಸ್ತ ಹುದ್ದೆಗೆ ಅರ್ಜಿ ಹಾಕಿದ್ದರು. ಅವರು ನೇಮಕಾತಿ ಪ್ರಕ್ರಿಯೆಯ ಎಲ್ಲಾ ಸುತ್ತುಗಳನ್ನು ಪೂರ್ಣಗೊಳಿಸಿದ್ದರು. ಆದರೆ, ಭೂಪೇಂದ್ರ ಸಿಂಗ್ ಹೂಡ ನೇತೃತ್ವದ ಕಾಂಗ್ರೆಸ್ ಸರಕಾರದ ಸ್ಥಾನದಲ್ಲಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಭಾರತೀಯ ಜನತಾ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ಬಳಿಕ, ಅವರ ನೇಮಕಾತಿಯನ್ನು ರದ್ದುಗೊಳಿಸಲಾಯಿತು.

ಎರಡನೇ ಬಾರಿಗೆ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದಾಗ ಅವರಿಗೆ 50 ವರ್ಷ ಪ್ರಾಯ ಆಗಿತ್ತು ಹಾಗೂ ಹುದ್ದೆಗೆ ಬೇಕಾದ ವಯೋಮಿತಿ ದಾಟಿತ್ತು. ಅದೇ ರೀತಿ, 40 ವರ್ಷದ ರಾಜ್‌ಕುಮಾರ್ ಹರ್ಯಾಣ ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಗೊಳ್ಳುವು ದಕ್ಕಾಗಿ ಈಗಲೂ ಕಾಯುತ್ತಿದ್ದಾರೆ. ಅವರು ಈ ಹುದ್ದೆಗೆ 2020ರಲ್ಲಿ ಅರ್ಜಿ ಹಾಕಿದ್ದರು. ಕೆಲವು ಸಲ ಪರೀಕ್ಷಾ ಪ್ರಶ್ನೆಪತ್ರಿಕೆಗಳು ಸೋರಿಕೆಯಾ ಗುತ್ತವೆ. ಹಾಗಾಗಿ, ಆ ಬಾರಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳ್ಳುತ್ತವೆ. ಕೆಲವು ಸಲ, ಪಶ್ನೆ ಪತ್ರಿಕೆಗಳು ತೀರಾ ಕಠಿಣವಾಗಿದ್ದಾಗ ನೇಮಕಾತಿ ಪ್ರಕ್ರಿಯೆ ರದ್ದುಗೊಳ್ಳುತ್ತದೆ ಎಂದು ರಾಜ್‌ಕುಮಾರ್ ಹೇಳುತ್ತಾರೆ.

ಈ ಹುದ್ದೆಗಳಿಗೆ ಅವರ ವಯೋಮಿತಿ ಇನ್ನು ಐದು ವರ್ಷಗಳಲ್ಲಿ ದಾಟುತ್ತದೆ. ಹಾಗಾಗಿ ಅವರಲ್ಲಿ ಈಗ ತಳಮಳ ಆರಂಭವಾಗಿದೆ.

ಕೌಶಲಗಳು ಸಾಕಾಗುವುದಿಲ್ಲ

ಸೇನೆಯಲ್ಲಿ ಜೂನಿಯರ್ ಕಮಿಶನ್ಡ್ ಆಫಿಸರ್ ಹುದ್ದೆಗೆ ಬೇಕಾಗುವ ವಿದ್ಯಾರ್ಹತೆ 10ನೇ ತರಗತಿ ತೇರ್ಗಡೆ. ‘ಅಗ್ನಿಪಥ್’ ಯೋಜನೆಯಲ್ಲಿಯೂ ಅಭ್ಯರ್ಥಿಗಳಿಗೆ ಇದೇ ವಿದ್ಯಾರ್ಹತೆ ಬೇಕಾಗುತ್ತದೆ.

ಸೇನೆಯಲ್ಲಿ 17 ವರ್ಷಗಳನ್ನು ಕಳೆದ ಬಳಿಕ, ತಾನು ಓರ್ವ ನಾಗರಿಕ ಅಭ್ಯರ್ಥಿಗಿಂತ ಹೆಚ್ಚು ಶಿಸ್ತುಬದ್ಧನಾಗಿರುತ್ತೇನೆ ಮತ್ತು ಚೆನ್ನಾಗಿ ಸಮಯ ಪರಿಪಾಲನೆ ಮಾಡುತ್ತೇನೆ ಎನ್ನುವ ಬಗ್ಗೆ ರಾಜ್‌ಕುಮಾರ್‌ಗೆ ವಿಶ್ವಾಸವಿದೆ. ಆದರೆ, ತಾನು ಅರ್ಜಿ ಹಾಕಿರುವ ಹುದ್ದೆಗಳ ಪ್ರವೇಶ ಪರೀಕ್ಷೆಗಳ ಮಾದರಿ ಮತ್ತು ಪಠ್ಯಕ್ರಮದಲ್ಲಿ ಅವರಿಗೆ ನೆರವಿನ ಅಗತ್ಯವಿದೆ.

‘‘ಓರ್ವ ವ್ಯಕ್ತಿಗೆ ಕೆಲಸ ಸಿಕ್ಕಿದರೆ ಆ ವ್ಯಕ್ತಿಯು ತನ್ನ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸುತ್ತಾರೆ’’ ಎಂದು IndiaSpend ನೊಂದಿಗೆ ಮಾತನಾಡಿದ ರಾಜ್‌ಕುಮಾರ್ ಹೇಳಿದರು. ‘‘ಆದರೆ, ಸಮಸ್ಯೆಯೇನೆಂದರೆ, ಸೇನೆಯಲ್ಲಿರುವಾಗ ನಾವು ಸಮಾಜದಿಂದ ಹೊರಗಿರುತ್ತೇವೆ ಮತ್ತು ನಾವು ಹಿಂದಿರುಗುವಾಗ ನಾಗರಿಕ ಬದುಕಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ನಿಭಾಯಿಸುವಲ್ಲಿ ನಾವು ಪರದಾಡುತ್ತೇವೆ’’ ಎಂದರು.

‘‘ಇಲ್ಲಿ ಕೌಶಲ ಹೊಂದಾಣಿಕೆಯ ಕೊರತೆಯಿದೆ. ಅತ್ಯಂತ ಸೀಮಿತ ಹಾಗೂ ನಿರ್ದಿಷ್ಟ ಕೌಶಲಗಳನ್ನು ಹೊಂದಿರುವವರು ತುಂಬಾ ಸಂಖ್ಯೆಯಲ್ಲಿದ್ದಾರೆ. ಆದರೆ ಆ ಕೌಶಲಗಳಿಗೆ ಬೇಡಿಕೆಯಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟನೆಯಿಲ್ಲ’’ ಎಂದು ಅಝೀಮ್ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಸಸ್ಟೇನಬಲ್ ಎಂಪ್ಲಾಯ್‌ಮೆಂಟ್‌ನಲ್ಲಿ ಅರ್ಥಶಾಸ್ತ್ರಜ್ಞೆಯಾಗಿರುವ ರೋಸಾ ಅಬ್ರಹಾಮ್ ಹೇಳುತ್ತಾರೆ.

ಸೈನಿಕರು ತಮ್ಮ ಸೇನಾ ಕೆಲಸದಲ್ಲಿ ರೇಡಿಯೊ, ವಾಹನಗಳು ಮತ್ತು ಟ್ಯಾಂಕನ್ನು ದುರಸ್ತಿ ಮಾಡುವುದು ಹೇಗೆ ಮತ್ತು ಆಯುಧಗಳನ್ನು ಸುಸ್ಥಿತಿಯಲ್ಲಿಡುವುದನ್ನು ಕಲಿಯಬಹುದು ಎಂದು ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಲ್ಲಿ ಸೀನಿಯರ್ ಫೆಲೋ ಆಗಿರುವ ಸುಶಾಂತ್ ಸಿಂಗ್ IndiaSpend ಜೊತೆ ಮಾತನಾಡುತ್ತಾ ಹೇಳಿದರು. ‘‘ಆದರೆ, ಈ ಕೌಶಲಗಳನ್ನು ನಾಗರಿಕ ಜೀವನಕ್ಕೆ ವರ್ಗಾಯಿಸುವುದು ಕಷ್ಟ’’ ಎಂದರು.

ಸಾರ್ವಜನಿಕ ಕ್ಷೇತ್ರದ ಉದ್ಯೋಗ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಹೆಚ್ಚಿನ ಮಾಜಿ ಸೈನಿಕರು ಖಾಸಗಿ ಕ್ಷೇತ್ರದಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಬೇರೆ ಯಾವುದೇ ಆಯ್ಕೆಯನ್ನು ಕಾಣದ ಸುಬೇದಾರ್ ಮೇಜರ್ ಭಾನ್ ಕೂಡ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ. ಆದರೆ, ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಸಿಗುವ 8,000 ರೂಪಾಯಿ ತಿಂಗಳ ಸಂಬಳವು ತುಂಬಾ ಕಡಿಮೆಯಾಗಿದೆ ಎಂದು ಅವರು ಹೇಳುತ್ತಾರೆ. ಅದೂ ಅಲ್ಲದೆ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನವೇನೂ ಸಿಗುವುದಿಲ್ಲ ಎಂದು ಅವರು ನುಡಿದರು.

‘‘ಸೈನಿಕರ ಶೋಷಣೆ ನಡೆಯುತ್ತಿದೆ ಮತ್ತು ಇದು ಸರಕಾರಕ್ಕೆ ಗೊತ್ತಿದೆ’’ ಎಂದು ಅವರು ಹೇಳಿದರು.

ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ಸೈನಿಕರು

ಮಾಜಿ ಸೈನಿಕರ ಸಂಖ್ಯೆ ತುಂಬಾ ಹೆಚ್ಚಾಗಿದೆ, ಆದರೆ ಅವರಿಗೆ ಮೀಸಲಿಡುವ ಉದ್ಯೋಗಗಳ ಸಂಖ್ಯೆ ತುಂಬಾ ಕಡಿಮೆ ಎಂದು ನಿವೃತ್ತ ಸೈನಿಕರು ಹೇಳುತ್ತಾರೆ.

ಅದೂ ಅಲ್ಲದೆ, ಕಡಿಮೆಯಾದರೂ ಮಾಜಿ ಸೈನಿಕರಿಗೆ ಮೀಸಲಿಡಲಾದ ಉದ್ಯೋಗಗಳ ಪೈಕಿ ಹೆಚ್ಚಿನದನ್ನು ಅವರಿಗೆ ನೀಡಲಾಗುತ್ತಿಲ್ಲ ಎನ್ನುವುದನ್ನು ಅಂಕಿಅಂಶಗಳು ಹೇಳುತ್ತವೆ.

ಮೀಸಲಾತಿ ನಿಯಮಗಳ ಪ್ರಕಾರ, ಗ್ರೂಪ್ ಎ, ಬಿ, ಸಿ ಮತ್ತು ಡಿ ಹುದ್ದೆಗಳಲ್ಲಿ 4,13,688 ಹುದ್ದೆಗಳು ಮಾಜಿ ಸೈನಿಕರಿಗೆ ಲಭಿಸ ಬೇಕಾಗಿದೆ. ಆದರೆ, ಬ್ಯಾಂಕ್‌ಗಳು, ಕೇಂದ್ರೀಯ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿರುವ ಈ ಹುದ್ದೆಗಳ ಕಾಲು ಭಾಗಕ್ಕಿಂತಲೂ ಕಡಿಮೆ (80,135) ಉದ್ಯೋಗಗಳು ವಾಸ್ತವಿಕವಾಗಿ ಮಾಜಿ ಸೈನಿಕರಿಗೆ ಸಿಕ್ಕಿವೆ ಎಂದು ಪುನರ್ವಸತಿ ನಿರ್ದೇಶನಾಲಯದ ಅಂಕಿಅಂಶಗಳು ಹೇಳುತ್ತವೆ.

2026ರಲ್ಲಿ 34,500 ಅಗ್ನಿವೀರರ ಮೊದಲ ತಂಡಕ್ಕೆ ಉದ್ಯೋಗ ನೀಡಬೇಕಾದರೆ ಹೆಚ್ಚುವರಿ ಖಾಲಿ ಹುದ್ದೆಗಳ ಅಗತ್ಯವಿದೆ. ಅಸ್ಸಾಮ್ ರೈಫಲ್ಸ್ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ನೇಮಕಾತಿಯಲ್ಲಿ ಅವರಿಗೆ ಆದ್ಯತೆ ನೀಡಲಾಗುವುದು ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವರಾದರೂ, ಮಾಜಿ ಸೈನಿಕರಿಗೆ ಲಭ್ಯವಿರುವಷ್ಟೇ ಕೋಟಾ ಅವರಿಗೂ ಸಿಗುತ್ತದೆಯೇ ಎನ್ನುವುದು ಸ್ಪಷ್ಟವಿಲ್ಲ.

ನಾಲ್ಕು ವರ್ಷಗಳ ಬಳಿಕವೂ ಸರಕಾರಿ ಕೆಲಸಗಳ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಎಂದು ಭಾನ್ ಹೇಳುತ್ತಾರೆ. ‘‘ಈಗಾಗಲೇ ನಿವೃತ್ತರಾದವರಿಗೆ ಅವರು ಕೆಲಸ ನೀಡಿಲ್ಲ. ಮುಂದೆ ನಿವೃತ್ತರಾಗುವವರಿಗೆ ಅವರು ಹೇಗೆ ಕೆಲಸ ನೀಡುತ್ತಾರೆ?’’ ಎಂದು ಅವರು ಪ್ರಶ್ನಿಸುತ್ತಾರೆ.

ಕೃಪೆ: IndiaSpend.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)