varthabharthi


ಉಡುಪಿ

ತಗ್ಗರ್ಸೆ ಎಸ್‌ಎಲ್‌ಆರ್‌ಎಂ ಘಟಕಕ್ಕೆ ವಿರೋಧ: ಜೆಸಿಬಿ ತಡೆದು ಸ್ಥಳೀಯರಿಂದ ಪ್ರತಿಭಟನೆ

ವಾರ್ತಾ ಭಾರತಿ : 2 Jul, 2022

ಕುಂದಾಪುರ: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಗ್ಗರ್ಸೆ ಗ್ರಾಮದ ವಸ್ರೆ ಎಂಬಲ್ಲಿ ಸರ್ವೆ ನಂಬ್ರ 170 ರಲ್ಲಿ ನಿರ್ಮಿಸಲು ಉದ್ದೇಶಿಸಿರುವ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕ(ಎಸ್‌ಎಲ್‌ಆರ್‌ಎಂ)ಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶನಿವಾರ ಕಾಮಗಾರಿ ನಡೆಸಲು ಸ್ಥಳಕ್ಕೆ ಆಗಮಿಸಿದ ಜೆಸಿಬಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಗ್ಗರ್ಸೆ ಗ್ರಾಮದ ನಿರ್ಮಿಸಲು ಉದ್ದೇಶಿಸಿದ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕದ ಪ್ರದೇಶದಲ್ಲಿ ವಾಸದ ಮನೆ, ಶಾಲೆ, ಧಾರ್ಮಿಕ ಕೇಂದ್ರ, ಹೊಳೆ, ಅರಣ್ಯ ಇದ್ದು, ಈ ಸ್ಥಳದಲ್ಲಿ ಘಟಕ ನಿರ್ಮಾಣ ಮಾಡುವುದು ಸೂಕ್ತ ವಲ್ಲ. ಈ ಸ್ಥಳದ ೧೦೦ಮೀಟರ್ ಸುತ್ತಳತೆಯಲ್ಲಿ ಮನೆಗಳಿದ್ದು, ಇಲ್ಲಿನ ಜನರಿಗೆ  ವಾಸನೆ, ಆರೋಗ್ಯ ಸಮಸ್ಯೆ, ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಲ್ಲದೆ ಈ ಸ್ಥಳಕ್ಕೆ ಹೊಂದಿಕೊಂಡಿರುವ ಹೊಳೆ ನೀರು ಕಲುಷಿತಗೊಳ್ಳಲಿದೆ. ಇನ್ನು ಈ ಸ್ಥಳದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಾಕಷ್ಟು ಮರಗಳಿದ್ದು ಅರಣ್ಯ ನಾಶವಾಗುತ್ತದೆ. ಸುತ್ತಲೂ ಕೃಷಿ ಭೂಮಿಯಿದ್ದು ಘನ ಮತ್ತು ದ್ರವ ತ್ಯಾಜ್ಯಗಳು ಭೂಮಿಗೆ ಸೇರಿ ಕೀಟಭಾದೆಗಳು ಉಂಟಾಗುವುದರಿಂದ ಬೆಳೆ ಹಾನಿಯಾಗಲಿದೆ ಎಂದು ಸ್ಥಳೀಯರಾದ ವಿದ್ಯಾ ದೂರಿದ್ದಾರೆ.

ಘಟಕವನ್ನು ಸ್ಥಾಪಿಸುವ ಬಗ್ಗೆ ಸ್ಥಳೀಯರು ಆಕ್ಷೇಪ ಸಲ್ಲಿಸಿದರೂ ಕೂಡ ಈ ಬಗ್ಗೆ ಯಾವುದೇ ತನಿಖೆ ನಡೆಸದೆ, ಪರಿಶೀಲನೆಯನ್ನು ಏಕಪಕ್ಷೀಯವಾಗಿ ಮಾಡಿ ನಾಗರಿಕರ ಆಕ್ಷೇಪಣೆಯನ್ನು ತಿರಸ್ಕರಿಸಿರುವುದು ಕಾನೂನು ವಿರುದ್ಧವಾಗಿದೆ. ತಜ್ಞರ ಸಮಿತಿ ರಚಿಸಿ ವರದಿಯನ್ನು ಪಡೆದಿಲ್ಲ. ಬೈಂದೂರು ಪಟ್ಟಣ ಪಂಚಾ ಯತ್ ಸ್ಥಾಪನೆಗೊಂಡು ಚುನಾವಣೆಯಾಗಿಲ್ಲ. ಚುನಾಯಿತ ಪ್ರತಿನಿಧಿಗಳು ಇಲ್ಲದಿರುವಾಗ ಏಕಾಏಕಿಯಾಗಿ ಜನನಿಬೀಡ ಪ್ರದೇಶದಲ್ಲಿ ಘಟಕ ನಿರ್ಮಾಣ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾ ರರು ಆರೋಪಿಸಿದರು.

ಈ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನವದೆಹಲಿ, ಪ್ರಧಾನಮಂತ್ರಿ, ಮುಖ್ಯಮಂತ್ರಿಗಳ ಸಹಿತ ಸಚಿವ, ಸಂಸದರಾದಿಯಾಗಿ, ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದರೂ ಕೂಡ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯರಾದ ಗೋಪಾಲ ಪೂಜಾರಿ ದೂರಿದರು.

ಸ್ಥಳೀಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್, ಪ್ರತಿಭಟನಾಕಾರರನ್ನು ಮನವೊಲಿಸಿ ಕಾಮಗಾರಿ ನಡೆಸಲು ಅನುವು ಮಾಡಿಕೊಡಬೇಕೆಂದು ಕೋರಿದರು. ಆದರೆ ಸಾರ್ವಜನಿಕರು ಇದನ್ನು ಒಪ್ಪದೆ ಕಾಮಗಾರಿ ನಡೆಸಲು ಬಂದ ಜೆಸಿಬಿಗೆ ಅಡ್ಡವಾಗಿ ನಿಂತು ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ತಗ್ಗರ್ಸೆ ಗ್ರಾಪಂ ಮಾಜಿ ಸದಸ್ಯ ಗೋಪಾಲ ಪೂಜಾರಿ, ಸ್ಥಳೀಯರಾದ ಅಕ್ಷಯ್ ತಗ್ಗರ್ಸೆ, ಗುಲಾಬಿ, ವೀರಭದ್ರ ಗಾಣಿಗ, ಸರ್ವೇಶ್ವರಿ, ಪಾರ್ವತಿ, ರತ್ನಾಕರ ಶೆಟ್ಟಿ, ನಂದಯ್ಯ ಪೂಜಾರಿ, ನಾಗೇಶ್ ಪೂಜಾರಿ, ವಿದ್ಯಾ ಮೊದಲಾದ ವರು ಉಪಸ್ಥಿತರಿದ್ದರು.

"ದಿನಕ್ಕೆ 10 ಟನ್ ಘನತ್ಯಾಜ್ಯ ಉತ್ಪಾದನೆಯಾಗುತ್ತಿದ್ದು ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ತಗ್ಗರ್ಸೆ ಗ್ರಾಮದಲ್ಲಿ ೮.೬ ಎಕ್ರೆ ಜಾಗವನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ. ಸರಕಾರದಿಂದ ಅಮೃತ ನಿರ್ಮಾಣ ನಗರ ಯೋಜನೆಯಿಂದ ಸುಮಾರು 1 ಕೋಟಿ ಅನುದಾನ ಮಂಜೂರು ಮಾಡಿ ಕ್ರಿಯಾಯೋಜನೆ ಕಾಯ್ದಿರಿಸಲಾಗಿದೆ. ಇಲ್ಲಿ ಕಾಮಗಾರಿ ಆರಂಭಿಸಲು 6 ತಿಂಗಳಿ ನಿಂದ ಪ್ರಯತ್ನಿಸುತ್ತಿದ್ದು ಸ್ಥಳೀಯರು ವಿರೋಧಿಸುತ್ತಿದ್ದಾರೆ. ಪರಿಸರ ಇಲಾಖೆಯ ಅನುಮತಿ ಬಳಿಕ ಘನ ತ್ಯಾಜ್ಯ ವಿಲೇವಾರಿ ಘಟಕ ಕೆಲಸ ಆರಂಭಿಸಲಾಗುವುದು".  

-ನವೀನ್, ಮುಖ್ಯಾಧಿಕಾರಿ, ಬೈಂದೂರು ಪಟ್ಟಣ ಪಂಚಾಯತ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)