varthabharthi


ಅಂತಾರಾಷ್ಟ್ರೀಯ

ಲಿಬಿಯಾದಲ್ಲಿ ತೀವ್ರಗೊಂಡ ಪ್ರತಿಭಟನೆ: ಸಂಸತ್ ಭವನಕ್ಕೆ ಬೆಂಕಿ‌

ವಾರ್ತಾ ಭಾರತಿ : 2 Jul, 2022

PHOTO:PTI

ಟ್ರಿಪೋಲಿ, ಜು.2: ದೇಶದಲ್ಲಿರುವ ರಾಜಕೀಯ ಅಸ್ಥಿರತೆ ಮತ್ತು ಹದಗೆಡುತ್ತಿರುವ ಜೀವನ ಪರಿಸ್ಥಿತಿಯನ್ನು ವಿರೋಧಿಸಿ ಲಿಬಿಯಾದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪೂರ್ವಪ್ರಾಂತದ ನಗರ ಟೊಬ್ರುಕ್ನ ಸಂಸದ್ ಭವನಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಕಟ್ಟಡದ ಒಂದು ಪಾರ್ಶ್ವಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಸಂಸತ್ ಭವನ ಪ್ರವೇಶಿಸಲು ಸಫಲವಾದ ಪ್ರತಿಭಟನಾಕಾರರು ಅಲ್ಲಿ ವಿಧ್ವಂಸ ಕೃತ್ಯ ಎಸಗಿದ್ದು ಪೀಠೋಪಕರಣಕ್ಕೆ ಹಾನಿ ಎಸಗಿದ್ದಾರೆ ಎಂದು ಹಲವು ಟಿವಿ ವಾಹಿನಿಗಳು ವರದಿ ಮಾಡಿವೆ. ‌

ಸಂಸದ್ ಭವನದ ಆವರಣದಲ್ಲಿ ಟಯರುಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಿದ್ದರಿಂದ ಪ್ರದೇಶವಿಡೀ ದಟ್ಟ ಹೊಗೆಯಿಂದ ಆವೃತವಾಗಿರುವ ವೀಡಿಯೊವನ್ನು ಪ್ರಸಾರ ಮಾಡಿವೆ. ಸಂಸತ್ ಭವನದೊಳಗೆ ನುಗ್ಗಿದ ಕೆಲವರು ಬೆಂಕಿ ಹಚ್ಚಿದ್ದರಿಂದ ಕಟ್ಟಡದ ಒಂದು ಪಾರ್ಶ್ವಕ್ಕೆ ಹಾನಿಯಾಗಿದೆ ಎಂದು ಇತರ ಕೆಲವು ಮಾಧ್ಯಮಗಳು ವರದಿ ಮಾಡಿವೆ. 
ಇದಕ್ಕೂ ಮುನ್ನ, ಪಶ್ಚಿಮದಲ್ಲಿರುವ ರಾಜಧಾನಿ ಟ್ರಿಪೋಲಿಯಲ್ಲಿಯೂ ಬೃಹತ್ ಪ್ರತಿಭಟನೆ ನಡೆದಿದೆ. ನಗರದ ಸೆಂಟ್ರಲ್ ಸ್ಕ್ವೇರ್ನಲ್ಲಿ ಗುಂಪುಗೂಡಿದ ಪ್ರತಿಭಟನಾಕಾರರು ಸಶಸ್ತ್ರ ಸೇನಾಪಡೆಯ ವಿರುದ್ಧ ಪ್ರತಿಭಟನೆ ನಡೆಸಿದ್ದು, ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಸರಿಪಡಿಸುವಂತೆ ಹಾಗೂ ಬ್ರೆಡ್ ದರ ಕಡಿಮೆಗೊಳಿಸುವಂತೆ ಆಗ್ರಹಿಸಿದರು.
 
ರಾಜಕೀಯ ದ್ವೇಷಸಾಧನೆಯ ಕಾರಣದಿಂದ ಲಿಬಿಯಾದಲ್ಲಿ ಹಲವು ತೈಲ ಸಂಸ್ಕರಣಾ ಕೇಂದ್ರಗಳ ಕಾರ್ಯಾಚರಣೆಗೆ ಅಡ್ಡಿತರಲಾಗುತ್ತಿದೆ. ಇದರಿಂದ ಪ್ರತೀದಿನ ದೀರ್ಘಾವಧಿಯ ವಿದ್ಯುತ್ ಕಡಿತ ಸಾಮಾನ್ಯವಾಗಿದ್ದು ಜನತೆ ಹತಾಶರಾಗಿದ್ದಾರೆ. ಜನಪ್ರತಿನಿಧಿಗಳು ತಮ್ಮ ವೈಫಲ್ಯವನ್ನು ಒಪ್ಪಿಕೊಂಡು ತಕ್ಷಣ ರಾಜಕೀಯ ರಂಗದಿಂದ ಹಿಂದೆ ಸರಿಯುವ ಅಗತ್ಯವಿದೆ ಎಂದು ಲಿಬಿಯಾ ಸಂಸದ ಬಲ್ಖೆಯರ್ ಅಲ್ಶಾಬ್ರನ್ನು ಉಲ್ಲೇಖಿಸಿ ಅಲ್-ಅಹ್ರಾರ್ ಟಿವಿ ವಾಹಿನಿ ವರದಿ ಮಾಡಿದೆ. 

ಲಿಬಿಯಾದ ಅಧ್ಯಕ್ಷರಾಗಿದ್ದ ಮೌಮರ್ ಗದಾಫಿ 2014ರಲ್ಲಿ ಪದಚ್ಯುತಿಗೊಂಡ ಬಳಿಕ ಪೂರ್ವ-ಪಶ್ಚಿಮ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಲಿಬಿಯಾದ ಸಂಸತ್ತನ್ನು ರಾಜಧಾನಿ ಟ್ರಿಪೋಲಿಗಿಂತ ಸುಮಾರು 100 ಕಿ.ಮೀ ದೂರದ ಟೊಬ್ರುಕ್ ನಗರದಲ್ಲಿ ಸ್ಥಾಪಿಸಲಾಗಿದೆ.
 ಸಂಸತ್ತನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಬೇಕೆಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ. ಜೊತೆಗೆ, ದೇಶದಲ್ಲಿ ಜೀವನದ ಪರಿಸ್ಥಿತಿ ಹದಗೆಟ್ಟಿರುವುದನ್ನೂ ವಿರೋಧಿಸಿದ್ದಾರೆ. ರಾಜಕೀಯ ಬಿಕ್ಕಟ್ಟಿನ ಅಂಚಿನಲ್ಲಿರುವ ಲಿಬಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಬಂಡುಗೋರರು ಹಾಗೂ ಸರಕಾರಿ ಪಡೆಗಳ ನಡುವೆ ಘರ್ಷಣೆ ಹೆಚ್ಚುತ್ತಿದ್ದು ಇದು ದೀರ್ಘಾವಧಿಯ ಅಂತರ್ಯುದ್ಧವಾಗಿ ಬದಲಾಗುವ ಅಪಾಯವಿದೆ.
 

ಇದರ ಜತೆಗೆ, ಸರಕಾರದ ಮುಖಂಡರಲ್ಲೇ ಅಧಿಕಾರಕ್ಕಾಗಿ ಒಳಜಗಳ ಆರಂಭವಾಗಿದೆ. ರಾಜಧಾನಿ ಟ್ರಿಪೋಲಿಯಲ್ಲಿ ಮಧ್ಯಂತರ ಪ್ರಧಾನಿ ಅಬ್ದುಲ್ ಹಮೀದ್ ಡಿಬೈಬಾ ನೇತೃತ್ವದ ಸರಕಾರ ತಮ್ಮದೇ ನೈಜ ಸರಕಾರ ಎಂದು ಘೋಷಿಸಿದ್ದರೆ, ಸಂಸದ್ ಭವನ ಇರುವ ಟೊಬ್ರುಕ್ನಲ್ಲಿ ಮಾಜಿ ಸಚಿವ ಫಥಿ ಬಷಘ ತಮ್ಮದೇ ನಿಜವಾದ ಸರಕಾರ ಎಂದು ಪ್ರತಿಪಾದಿಸುತ್ತಿದ್ದಾರೆ.
 
2020ರಲ್ಲಿ ಎರಡೂ ಮುಖಂಡರನ್ನು ಒಟ್ಟುಸೇರಿಸಿ ದೇಶವನ್ನು ಒಗ್ಗೂಡಿಸುವ ಪ್ರಯತ್ನ ನಡೆದಿತ್ತು. ಆದರೆ ಡಿಸೆಂಬರ್ನಲ್ಲಿ ನಿಗದಿಯಾಗಿದ್ದ ಚುನಾವಣೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಡಿಬೈಬಾ ಅವರ ಅಧಿಕಾರಾವಧಿ ಅಂತ್ಯಗೊಂಡಿದ್ದು ಈಗ ದೇಶದಲ್ಲಿ ತಮ್ಮ ಸರಕಾರದ ಆಡಳಿತವಿದೆ ಎಂದು ಬಷಘ ಘೋಷಿಸಿದ ಬಳಿಕ ಮತ್ತೆ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. 

ಈ ತಿಂಗಳ ಆರಂಭದಲ್ಲಿ ಪಶ್ಚಿಮ ಪ್ರಾಂತದಲ್ಲಿ ಡಿಬೈಬಾ ನಿಷ್ಟ ಪಡೆ ಹಾಗೂ ಬಷಘ ನಿಷ್ಟ ಪಡೆಯ ಮಧ್ಯೆ ತೀವ್ರ ಸಂಘರ್ಷ ಆರಂಭವಾಗಿದೆ. ಎರಡೂ ಬಣಗಳ ಮಧ್ಯೆ ರಾಜಿಸಂಧಾನದ ಪ್ರಯತ್ನ ವಿಫಲವಾಗಿದೆ ಎಂದು ವಿಶ್ವಸಂಸ್ಥೆ ಗುರುವಾರ ಹೇಳಿದೆ. ಮಾತುಕತೆಯಲ್ಲಿ ತುಸುಮಟ್ಟಿನ ಪ್ರಗತಿ ಸಾಧಿಸಲಾಗಿದ್ದರೂ ಚುನಾವಣೆ ನಡೆಸುವ ಪ್ರಮುಖ ಅಂಶಗಳ ಬಗ್ಗೆ ಸಹಮತ ರೂಪುಗೊಂಡಿಲ್ಲ. ಅಧ್ಯಕ್ಷ ಹುದ್ದೆಯ ಅಭ್ಯರ್ಥಿ ವಿಷಯದಲ್ಲಿ ಎರಡೂ ಬಣಗಳ ಮಧ್ಯೆ ತೀವ್ರ ಭಿನ್ನಾಭಿಪ್ರಾಯ ಉಳಿದುಕೊಂಡಿದೆ ಎಂದು ಲಿಬಿಯಾದಲ್ಲಿನ ವಿಶ್ವಸಂಸ್ಥೆ ಪ್ರತಿನಿಧಿ ಸ್ಟೆಫಾನಿ ವಿಲಿಯಮ್ಸ್ ಹೇಳಿದ್ದಾರೆ.

ಬುಲ್ಡೋಝರ್ ಬಳಸಿ ಗೇಟ್ ಧ್ವಂಸ

ಟೊಬ್ರಕ್ ನಗರದಲ್ಲಿ ಸಂಸತ್ ಭವನ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಪ್ರತಿಭಟನಾಕಾರರನ್ನು ಭದ್ರತಾ ಪಡೆಗಳು ತಡೆಯುತ್ತಿದ್ದ ಸಂದರ್ಭ ಓರ್ವ ಪ್ರತಿಭಟನಾಕಾರ ಬುಲ್ಡೋಝರ್ ಚಲಾಯಿಸಿಕೊಂಡು ಬಂದು ಸಂಸತ್ ಭವನದ ಗೇಟನ್ನು ಮುರಿದು ಒಳಪ್ರವೇಶಿಸಿದಾಗ ಆತನ ಹಿಂದೆಯೇ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸಂಸತ್ ಭವನದೊಳಗೆ ನುಗ್ಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಾಜಿ ಅಧ್ಯಕ್ಷ ಗದಾಫಿ ಪಕ್ಷದ ಹಸಿರು ಧ್ವಜವನ್ನು ಹಿಡಿದುಕೊಂಡಿದ್ದ ಇನ್ನೂ ಕೆಲವು ಪ್ರತಿಭಟನಾಕಾರರು ಸಂಸತ್ತಿನ ದಾಖಲೆ ಪುಸ್ತಕಗಳನ್ನು ಹೊರಗೆಸೆಯುತ್ತಿರುವ ಚಿತ್ರಗಳನ್ನು ಮಾಧ್ಯಮಗಳು ಪ್ರಕಟಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)