varthabharthi


ಅಂತಾರಾಷ್ಟ್ರೀಯ

ಸೌದಿ ದೊರೆ ಸಲ್ಮಾನ್‌ರಿಂದ ಈದ್ ಶುಭಾಷಯ

ವಾರ್ತಾ ಭಾರತಿ : 9 Jul, 2022

image credit: SPA

ರಿಯಾದ್, ಜು.9: ವಿಶ್ವದಾದ್ಯಂತ ಮುಸ್ಲಿಮರು ಈದ್ ಉಲ್‌ ಅದ್ಹಾ ಆಚರಿಸುತ್ತಿರುವ ಸಂದರ್ಭದಲ್ಲಿ ಸೌದಿ ಅರೆಬಿಯಾದ ದೊರೆ ಸಲ್ಮಾನ್ ಶನಿವಾರ ಸಾಂಪ್ರದಾಯಿಕ ಶುಭಾಷಯಗಳನ್ನು ತಿಳಿಸಿದ್ದಾರೆ.

ಸೌದಿ ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯಲ್ಲಿ ಮಾಡಿದ ಭಾಷಣದಲ್ಲಿ ಅವರು, ಕೋವಿಡ್ ಸೋಂಕನ್ನು ನಿಭಾಯಿಸುವಲ್ಲಿ ಮಾಡಿದ ಸಕಾರಾತ್ಮಕ ಪ್ರಯತ್ನಗಳಿಂದಾಗಿ ಈ ವರ್ಷ ದೇಶದ ಒಳಗಿನ ಮತ್ತು ಹೊರಗಿನ, ಒಟ್ಟು ಯಾತ್ರಿಕರ ಸಂಖ್ಯೆಯನ್ನು 1 ಮಿಲಿಯನ್ ಗೆ ಹೆಚ್ಚಿಸಲು ಸಾಧ್ಯವಾಯಿತು. ಯಾತ್ರಿಕರ ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಲೂ ಅನುಸರಿಸಲಾಗುತ್ತಿದೆ ಎಂದರು.

ಎಲ್ಲಾ ಯಾತ್ರಿಕರ ಹಜ್ ಅನ್ನು ಸ್ವೀಕರಿಸಲು ಅಲ್ಲಾಹನನ್ನು ಪ್ರಾರ್ಥಿಸಿದ ಅವರು, ಈ ವಾರ್ಷಿಕ ಕಾರ್ಯಕ್ರಮವನ್ನು ಸುಗಮಗೊಳಿಸುವಲ್ಲಿ ತೊಡಗಿರುವ ಪ್ರತಿಯೊಬ್ಬರ ಪ್ರಯತ್ನಗಳನ್ನೂ ಶ್ಲಾಘಿಸಿದರು. ಅರಫಾ ಬಯಲುಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಯಾತ್ರಿಗಳು ಶನಿವಾರ ಮಿನಾಗೆ ವಾಪಸಾಗಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಹಲವು ಹಜ್ ವಿಧಿಗಳನ್ನು ನಿರ್ವಹಿಸುವುದನ್ನು ಅವರು ಮುಂದುವರಿಸಲಿದ್ದಾರೆ.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ 2020ರಲ್ಲಿ ಕೇವಲ 1000 ಆಯ್ದ ಯಾತ್ರಿಗಳಿಗೆ ಮಾತ್ರ ಹಜ್ ಯಾತ್ರೆಗೆ ಅವಕಾಶ ನೀಡಲಾಗಿತ್ತು. 2021ರಲ್ಲಿ ಸಂಪೂರ್ಣ ಲಸಿಕೆ ಹಾಕಿಸಿಕೊಂಡ 60,000 ಯಾತ್ರಿಗಳಿಗೆ ಅವಕಾಶ ನೀಡಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)