varthabharthi


ಓ ಮೆಣಸೇ

ಓ ಮೆಣಸೇ ...

ವಾರ್ತಾ ಭಾರತಿ : 18 Jul, 2022
ಪಿ.ಎ. ರೈ

ಕರ್ನಾಟಕದಲ್ಲಿ ಹಲವು ಕಾಂಗ್ರೆಸಿಗರು ಟೆಂಟ್ ಸಮೇತ ಕಿತ್ತುಕೊಂಡು ಬಿಜೆಪಿಗೆ ಬರಲಿದ್ದಾರೆ - ಸಿ.ಟಿ.ರವಿ, ಶಾಸಕ
ಕಿತ್ತು ತಿನ್ನುವ ಪಕ್ಷವೆಂದ ಮೇಲೆ ಅದರೊಳಗೆ ಹಾಗೆಯೇ ಬರಬೇಕಷ್ಟೆ.

ನಂಬಿಕೆ ಪವಿತ್ರವಾಗಿದ್ದರೆ ಅಗೋಚರ ಶಕ್ತಿ ನಮಗೆ ಅರಿವಿಲ್ಲದಂತೆಯೇ ನಮ್ಮನ್ನು ಸರಿದಾರಿಯಲ್ಲಿ ಕೊಂಡೊಯ್ಯುತ್ತದೆ - ನರೇಂದ್ರ ಮೋದಿ, ಪ್ರಧಾನಿ
ನೀವು ಅಗೋಚರ ಎಂದು ನಂಬಿರುವ ನಿಮ್ಮ ಹಿಂದಿನ ದುಷ್ಟ ಶಕ್ತಿಗಳೆಲ್ಲಾ ಜನತೆಗೆ ಸ್ಪಷ್ಟವಾಗಿ ಗೋಚರಿಸುತ್ತಿವೆ.

ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೆ ಕಾಂಗ್ರೆಸ್ ಚುನಾವಣೆ ಎದುರಿಸಲಿದೆ - ಸಿದ್ದರಾಮಯ್ಯ, ಮಾಜಿ ಸಿಎಂ
ಪಕ್ಷದೊಳಗಾದರೂ ಮೈತ್ರಿಯ ಸಾಧ್ಯತೆಗಳೇನಾದರೂ ಇವೆಯೇ?

ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಮೂರು ಪಕ್ಷಗಳೂ 2024 ಮಹಾರಾಷ್ಟ್ರ ವಿ.ಸ. ಚುನಾವಣೆಯನ್ನು ಒಟ್ಟಾಗಿ ಎದುರಿಸಬೇಕು - ಶರದ್ ಪವಾರ್, ಎನ್‌ಸಿಪಿ ಮುಖ್ಯಸ್ಥ
ಆ ಬಳಿಕ ಪಕ್ಷಾಂತರಿಗಳು ಪ್ರತ್ಯೇಕವಾಗಬಹುದು ತಾನೇ?

ನಗರ ಪ್ರದೇಶ, ವ್ಯಾಪಾರಿಗಳು ಮತ್ತು ಶ್ರೀಮಂತರಿಗೆ ಹತ್ತಿರವಾದ ಪಕ್ಷ ಎಂಬ ಆರೋಪದಿಂದ ಬಿಜೆಪಿ ಈಗ ಮುಕ್ತವಾಗಿದೆ - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಹೌದು. ಈಗ ಅದರ ಮೇಲೆ ಇರುವುದು ಹಗಲು ದರೋಡೆ ನಡೆಸುವ, ಜನದ್ರೋಹಿ ಪಕ್ಷ ಎಂಬ ಆರೋಪ ಮಾತ್ರ.

ಇಂಗ್ಲಿಷ್ ಬಲ್ಲವರು, ನಿಲುವಂಗಿ ಮೇಲೆ ಗುಲಾಬಿ ಸಿಕ್ಕಿಸಿಕೊಳ್ಳುವವರು ಮಾತ್ರ ದೇಶವನ್ನು ಪ್ರತಿನಿಧಿಸಬೇಕು ಎಂಬ ಅಲಿಖಿತ ನಿಯಮ ಈಗ ಅಳಿದಿದೆ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಈಗ ಆ ಹೊಣೆ ಅಲಿಖಿತವಾಗಿ, ಭ್ರಷ್ಟಾಚಾರ ಮತ್ತು ಅಪರಾಧಗಳ ಕೆಸರಲ್ಲಿ ಮುಳುಗಿ ಮಲ, ಕಮಲ, ಗೋಮಲಗಳಲ್ಲಿ ಮಿಂದ ಚಾರಿತ್ರ್ಯ ಹೀನರಿಗೆ ವರ್ಗವಾಗಿದೆ.

ಹಿಂದೆ ನನಗೆ ಮಾಜಿ ಸಿಎಂ ಸಿದ್ದರಾಮಯ್ಯ ಗುರುವಾಗಿದ್ದರು, ಈಗ ಬೇರೆಯೇ ಗುರು ಇದ್ದಾರೆ - ಎಂ.ಟಿ.ಬಿ.ನಾಗರಾಜ್, ಸಚಿವ
ಅಗತ್ಯಾನುಸಾರ ತಂದೆಯನ್ನೇ ಬದಲಾಯಿಸಬಲ್ಲ ಪುಢಾರಿಗಳಿಗೆ ಗುರುಗಳೆಲ್ಲಾ ಯಾವ ಲೆಕ್ಕ?

ಬಸವಣ್ಣ, ಕನಕದಾಸ, ಕುವೆಂಪುರಂತಹ ಮಹನೀಯರನ್ನು ಕಂಡಿರುವ ಕರ್ನಾಟಕದ ಜನರು ಉದಾರ ಗುಣವುಳ್ಳವರು - ದ್ರೌಪದಿ ಮುರ್ಮು, ರಾಷ್ಟ್ರಪತಿ ಅಭ್ಯರ್ಥಿ
ಆ ಮಹನೀಯರನ್ನೆಲ್ಲಾ ಬಹಿಷ್ಕರಿಸಿ ಅಪಮಾನಿಸುವವರನ್ನೆಲ್ಲಾ ಸಹಿಸಿಕೊಂಡಿರುವವರ ಕುರುಡು ಔದಾರ್ಯ ನಿಜಕ್ಕೂ ಪ್ರಶಂಸನೀಯ.

ಎಲ್ಲರೂ ಇತರ ಧರ್ಮಗಳನ್ನು ಗೌರವಿಸುವ ಮೂಲಕ ಸಮನ್ವಯವನ್ನು ಸಾಧಿಸಬೇಕು - ಬಸವರಾಜ ಬೊಮ್ಮಾಯಿ, ಸಿಎಂ
ಧರ್ಮಗಳಿಗೆ ಅಪಚಾರ ಮಾಡುವ ಮತ್ತು ಜನರ ನಡುವೆ ಕದನ ಏರ್ಪಡಿಸುವ ಕೆಲಸ ಮಾಡುವುದಕ್ಕೆ ನಾವಿದ್ದೇವಲ್ಲಾ!

ಸಿದ್ದರಾಮೋತ್ಸವಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ - ಮುರುಗೇಶ್ ನಿರಾಣಿ, ಸಚಿವ
ರಾಮನ ಜೊತೆಗೇ ಯಾವುದೇ ಪ್ರಾಮಾಣಿಕ ಸಂಬಂಧ ಇಲ್ಲದವರಿಗೆ ಸಿದ್ದರಾಮಯ್ಯನವರೊಂದಿಗೆ ಎಂತಹ ಸಂಬಂಧ!

ದೊಡ್ಡವರ ಪಾತ್ರ ಇದೆ ಎಂಬ ಕಾರಣಕ್ಕೆ ಪಿಎಸ್ಸೈ ಹಗರಣವನ್ನು ಮುಚ್ಚಿಹಾಕುವ ಕೆಲಸ ನಡೆದಿದೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಕೇವಲ ಒಂದು ಸೈಕಲ್ ಕದ್ದ ಹಗರಣವಾಗಿದ್ದರೆ ಆರೋಪಿ ಠಾಣೆಯಲ್ಲಿ ತೀವ್ರ ಥಳಿತಕ್ಕೊಳಗಾಗಿ, ನ್ಯಾಯಾಲಯದಿಂದ ಕೆಲವು ವರ್ಷಗಳ ಸೆರೆವಾಸದ ಶಿಕ್ಷೆ ಪಡೆದು ಆಗಿರುತ್ತಿತ್ತು.

ರಾಜ್ಯದಲ್ಲಿ ಉತ್ಕೃಷ್ಟವಾದ ಆರೋಗ್ಯ ಸೇವೆಯಿಂದ ಜನರ ಆಯಸ್ಸು ಹೆಚ್ಚಳವಾಗಿದೆ - ಡಾ.ಸುಧಾಕರ್, ಸಚಿವ
ಈ ದೊಡ್ಡ ಸಮಸ್ಯೆಗೆ ಏನಾದರೂ ಪ್ರತಿಕ್ರಮ ಕೈಗೊಂಡಿದ್ದೀರಾ?

ನನ್ನಂತೆ ಬ್ಯಾಚುಲರ್ ಆಗಿದ್ದರೆ ಮುಂದೆಂದೂ ಜನಸಂಖ್ಯೆ ಹೆಚ್ಚಳ ಭಯ ಕಾಡದು - ತೆಮ್ಜೆನ್ ಇಮ್ನಾ ಅಲಾಂಗ್, ನಾಗಾಲ್ಯಾಂಡ್ ಸಚಿವ
ನಿಮ್ಮಂಥವರ ತಾತಂದಿರಿಗೆ ಇಂತಹ ವಿವೇಕ ಮೂಡಿದ್ದರೆ....!

ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಹಿಂಬಾಗಿಲಿನಿಂದ ಸರಕಾರ ರಚಿಸಿ ಆಡಳಿತ ನಡೆಸುತ್ತಿದೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
ಪ್ರಾಮಾಣಿಕರನ್ನು ಮೂಲೆಗೆಸೆದು ಪಕ್ಷವನ್ನು ಪರಮಭ್ರಷ್ಟರಿಂದ ತುಂಬಿಸಿಟ್ಟ ನಿಮ್ಮ ಪಕ್ಷದ ನಾಲಾಯಕ್‌ತನದ ಬಗ್ಗೆಯೂ ಎಂದಾದರೂ ಮಾತನಾಡಿ.

ಗೋವಾದಲ್ಲಿ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಅನೇಕ ವಿಚ್ಛಿದ್ರಕಾರಿ ಶಕ್ತಿಗಳು ಕೈಜೋಡಿಸಿವೆ - ದಿನೇಶ್ ಗುಂಡೂರಾವ್, ಕೆಪಿಸಿಸಿ ಮಾಜಿ ಅಧ್ಯಕ್ಷ
ಯಾವುದೇ ಪಕ್ಷ ಒಡೆಯುವುದಕ್ಕೆ ಸ್ವತಃ ಆ ಪಕ್ಷದವರು ತಮ್ಮೆಳಗೆ ಪೋಷಿಸಿಕೊಂಡಿರುವ ವಿಷಜಂತುಗಳೇ ಸಾಕಾಗುತ್ತವೆ.

ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ - ಪ್ರಭು ಚವ್ಹಾಣ್, ಸಚಿವ
ಹಾಗೆಲ್ಲಾ ಮೊದಲೇ ಘೋಷಿಸಿದರೆ ಪುಢಾರಿಗಳು ತಲೆ ಮರೆಸಿಕೊಳ್ಳುವುದಿಲ್ಲವೇ?

ಮಠಮಾನ್ಯಗಳು ನಮ್ಮ ನಾಡಿನ ಸಂಸ್ಕೃತಿಯ ರಾಯಭಾರಿಯಂತೆ ಕೆಲಸ ಮಾಡುತ್ತಿದೆ - ಸಿ.ಸಿ.ಪಾಟೀಲ್, ಸಚಿವ
ಆದ್ದರಿಂದ ಎಲ್ಲ ಅಮಾನುಷ, ಅನಾಗರಿಕ ಸಂಸ್ಕೃತಿಗಳ ರಾಯಭಾರವನ್ನು ನಿಮ್ಮ ಪಕ್ಷದವರು ವಹಿಸಿಕೊಂಡಿರುವುದೇ?

ಆರೆಸ್ಸೆಸ್‌ಗೆ ರಾಜಕೀಯ ಹೊಂದಾಣಿಕೆ ಆಗುವುದಿಲ್ಲ - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಸದಾ ದುಷ್ಟ ಸಂಚುಗಳಲ್ಲೇ ಬ್ಯುಸಿ ಆಗಿರುವವರಿಗೆ ಹೊಂದಾಣಿಕೆಗಳಿಗೆಲ್ಲಾ ಪುರುಸೊತ್ತೆಲ್ಲಿರುತ್ತದೆ?

ಕಾರಾಗೃಹಗಳಲ್ಲಿ ನಡೆಯುವ ಯಾವುದೇ ಅಕ್ರಮ ಚಟುವಟಿಕೆಗಳನ್ನು ಸಹಿಸುವುದಿಲ್ಲ - ಆರಗ ಜ್ಞಾನೇಂದ್ರ, ಸಚಿವ
ಅಲ್ಲಿಂದ ಸರಕಾರ, ಆಡಳಿತ ಇತ್ಯಾದಿಗಳನ್ನು ನಡೆಸಿದರೆ ಸಾಕೆ?

ಹಸು ಮತ್ತು ರೈತರು ಒಂದೇ ನಾಣ್ಯದ ಎರಡು ಮುಖಗಳು - ಶಿವರಾಮ ಹೆಬ್ಬಾರ್, ಸಚಿವ
ಪಾಪ, ಇಬ್ಬರಿಗೂ ತಮ್ಮ ಕಟುಕರನ್ನು ಗುರುತಿಸುವ ಸಾಮರ್ಥ್ಯ ಇಲ್ಲ.

ಕುರಿ ಸಾಕಣೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ - ಎಚ್.ವಿಶ್ವನಾಥ್, ಮಾಜಿ ಸಚಿವ
ಎಲ್ಲರನ್ನೂ ಕುರಿಗಳಾಗಿಸಬಹುದಾದರೆ ಎಲ್ಲರೂ ಕುರಿ ಸಾಕಣೆದಾರರು ಯಾಕಾಗಬಾರದು?

ತುಷ್ಟೀಕರಣ ನೀತಿ ಪ್ರಜಾಪ್ರಭುತ್ವಕ್ಕೆ ಮಾರಕ - ಜಗದೀಪ್ ಧಂಕರ್, ಪ.ಬಂ. ರಾಜ್ಯಪಾಲ
ಕೇವಲ ಹೀಗೆಲ್ಲಾ ಹೇಳಿದರೆ ಸಾಕೇ? ಮೇಲ್ಜಾತಿಯವರ ತುಷ್ಟೀಕರಣ ನಿಲ್ಲಿಸಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದಿದ್ದೀರಿ?

ಧಾರ್ಮಿಕ ಕೇಂದ್ರಗಳು ಪುಣ್ಯ ಸಂಪಾದಿಸುವ ತಾಣವಾಗಬೇಕೇ ಹೊರತು ಹಣ ಸಂಪಾದನೆಯ ತಾಣವಾಗಬಾರದು - ರಾಘವೇಂದ್ರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಪುಣ್ಯ ಸಂಪಾದನೆಗಾಗಿ ಬರುವವರಿಂದ ಹಣ ಪಡೆಯುವ ಸಂಪ್ರದಾಯ ನಿಷೇಧಿಸಿದರಾಯಿತಲ್ಲಾ!

ದೇವನೂರರ 'ಆರೆಸ್ಸೆಸ್ ಆಳ ಮತ್ತು ಅಗಲ' ಒಂದು ಕೃತಿಯಲ್ಲ, ವಿಕೃತಿ - ಪ್ರತಾಪ ಸಿಂಹ, ಸಂಸದ
ಭಾರತದೊಳಗಿನ ಪರಮ ವಿಕೃತಿಯನ್ನು ಬಯಲಿಗೆಳೆಯುವ ಕೃತಿಯನ್ನು ವಿಕೃತಿ ಎಂದು ಮಾತ್ರವಲ್ಲ, ಬೇರೆ ಹೆಸರುಗಳಿಂದಲೂ ಬಯ್ಯಿರಿ. ಆದರೆ ಅದು ಎಲ್ಲರಿಗೆ ತಲುಪುವಂತೆ ನೋಡಿಕೊಳ್ಳಿ. ಕಾಪಿ ರೈಟ್ ಇಲ್ಲ.

ಎಸ್ಸಿ-ಎಸ್ಟಿಗಳಿಗೆ ಮೀಸಲಾತಿ ಹೆಚ್ಚಿಸುವುದಾಗಿ ಕೊಟ್ಟ ಮಾತು ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುವೆ - ಶ್ರೀರಾಮುಲು, ಸಚಿವ

ನಿವೃತ್ತಿ ಯಾವ ಪ್ರಾಯದಲ್ಲಿ ಎನ್ನುವುದನ್ನು ಘೋಷಿಸುವುದೂ ಮುಖ್ಯ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬೆಲೆ ಏರಿಕೆ ನಿಯಂತ್ರಣದಲ್ಲಿದೆ - ಅಮಿತ್ ಶಾ, ಕೇಂದ್ರ ಸಚಿವ
ಮಧ್ಯವರ್ತಿಗಳ ನಿಯಂತ್ರಣದಲ್ಲಿದೆ ಎಂದು ಹೇಳುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನ ಯಾರೂ ಕೂಡಾ ನನ್ನ ಪೂಜೆ ಮಾಡಬೇಡಿ, ಪಕ್ಷದ ಪೂಜೆ ಮಾಡಿ ಎಂದು ಹೇಳಿದ್ದೆ, ಈಗಲೂ ಅದಕ್ಕೆ ಬದ್ಧ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಜನಗಳು ಮಂಗಳಾರತಿ ಮಾಡಿದರೆ ಕಷ್ಟ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು