varthabharthi


ಸಂಪಾದಕೀಯ

ಕೈ ಜೋಡಿಸಿದರೆ ಸಾಕೆ, ಮನಸ್ಸು ಒಂದಾಗಬೇಡವೆ?

ವಾರ್ತಾ ಭಾರತಿ : 5 Aug, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ವರ್ಷದ ‘ಅಮೃತ ಮಹೋತ್ಸವ’ವನ್ನು ಕಾಂಗ್ರೆಸ್ ಪಕ್ಷ ಅದ್ದೂರಿಯಾಗಿ ಆಚರಿಸಿಕೊಂಡಿದೆ. ನಿರೀಕ್ಷೆಗಿಂತಲೂ ಅಧಿಕ ಸಂಖ್ಯೆಯಲ್ಲಿ ಜನರು ಸೇರಿರುವುದರಿಂದ ಕಾಂಗ್ರೆಸ್‌ನ ಒಂದು ಗುಂಪಿನೊಳಗೆ ಪುಳಕ ಎದ್ದಿದೆ. ರಾಜಕಾರಣಿಯೊಬ್ಬರ ಅಮೃತ ಮಹೋತ್ಸವಕ್ಕೆ ಜನ ಜಾತ್ರೆ ಸೇರುವುದು ಸರ್ವೇ ಸಾಧಾರಣ. ಆದರೆ ಸಿದ್ದರಾಮಯ್ಯ ರಾಜಕೀಯ ವಲಯದಲ್ಲಿ ಹಲವು ಕಾರಣಗಳಿಗಾಗಿ ತುಸು ಭಿನ್ನವಾಗಿ ಗುರುತಿಸಿಕೊಂಡವರು. ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿದ್ದಾಗ ತನ್ನ ಜನಾನುರಾಗಿ ಕಾರ್ಯಕ್ರಮಗಳ ಮೂಲಕ ಜನರಿಗೆ ಹತ್ತಿರವಾದವರು. ನಿಷ್ಠುರ ಮಾತುಗಳಿಂದ ಏಕಕಾಲದಲ್ಲಿ ಪ್ರೀತಿ ಪಾತ್ರರನ್ನು, ವೈರಿಗಳನ್ನು ಕಟ್ಟಿಕೊಂಡವರು. ಕುರುಬ ಸಮುದಾಯವನ್ನು ಪ್ರತಿನಿಧಿಸಿದ್ದರೂ, ಕೇವಲ ಕುರುಬರನ್ನಷ್ಟೇ ಅಲ್ಲದೆ ಎಲ್ಲ ಜನಪರ ಮನಸ್ಸುಗಳನ್ನು ತಲುಪಲು ಯಶಸ್ವಿಯಾದವರು. ಆದುದರಿಂದ, ಇವರ ಅಮೃತ ಮಹೋತ್ಸವದ ಬಗ್ಗೆ ಹಲವರಲ್ಲಿ ನಿರೀಕ್ಷೆಗಳಿದ್ದವು. ಹಾಗೆಯೇ ಹಲವು ಭಿನ್ನ ಸ್ವರಗಳು ಕೂಡ ಕೇಳಿ ಬಂದಿದ್ದವು. ಪರ ವಿರುದ್ಧ ಧ್ವನಿಗಳ ನಡುವೆಯೇ ಈ ಉತ್ಸವಕ್ಕೆ ಜನಜಾತ್ರೆಯೇ ನೆರೆಯಿತು. ಇವರಲ್ಲಿ ಸಿದ್ದರಾಮಯ್ಯ ಮೇಲೆ ಪ್ರಾಮಾಣಿಕ ಪ್ರೀತಿ, ವಿಶ್ವಾಸವನ್ನು ಇಟ್ಟು ಬಂದ ದೊಡ್ಡ ಸಂಖ್ಯೆಯ ಜನರಿದ್ದರು ಎನ್ನುವುದರ ಬಗ್ಗೆ ಎರಡು ಮಾತಿಲ್ಲ.

ಆದರೆ ಒಟ್ಟಿನಲ್ಲಿ ಈ ಅಮೃತ ಮಹೋತ್ಸವ ನಾಡಿನ ಜನತೆಗೆ ಏನನ್ನು ಹೇಳಿತು ? ಕಾಂಗ್ರೆಸ್‌ನೊಳಗಿರುವ ನಾಯಕರ ಬಳಿ ಕೇಳಿದರೆ ‘‘ಕಾಂಗ್ರೆಸ್‌ನೊಳಗೆ ಬಿಕ್ಕಟ್ಟಿಲ್ಲ ಎನ್ನುವುದನ್ನು ಸಮಾವೇಶ ಹೇಳಿದೆ’’ ಎನ್ನುತ್ತಾ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರು ತಬ್ಬಿಕೊಂಡಿರುವ ಚಿತ್ರಗಳನ್ನು ಮುಂದಿಡುತ್ತಾರೆ. ಸಿದ್ದರಾಮಯ್ಯ ಅವರ ಹಿಂಬಾಲಕರನ್ನು ಕೇಳಿದರೆ ‘‘ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’’ ಎಂದು ಮೀಸೆ ತಿರುಗಿಸುತ್ತಾರೆ. ಕೆಲವು ಕಾರ್ಯಕರ್ತರನ್ನು ಕೇಳಿದರೆ ‘‘ಸೇರಿದ ಜನರೇ ಹೇಳಿದ್ದಾರೆ, ಬಿಜೆಪಿ ಮಣ್ಣು ಮುಕ್ಕುತ್ತದೆ’’ ಹೀಗೆ ಬಗೆ ಬಗೆಯ ಕಾಂಗ್ರೆಸ್‌ಪರವಾಗಿರುವ ರಾಜಕೀಯ ಹೇಳಿಕೆಗಳಲ್ಲೇ ಸಿದ್ದರಾಮಯ್ಯೋತ್ಸವ ಮುಗಿದು ಹೋಗುತ್ತದೆ. ಅದರಾಚೆಗೆ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ನೆಪದಲ್ಲಿ, ಒಬ್ಬ ಸಮಾಜವಾದಿ ಹಿನ್ನೆಲೆಯ ರಾಜಕಾರಣಿಯ ರಾಜಕೀಯ ವೌಲ್ಯಗಳನ್ನು ಚರ್ಚಿಸುವ ಕಾರ್ಯಕ್ರಮವಾಗಿ ಜನರನ್ನು ತಲುಪಲಿಲ್ಲ.

ನಿರೀಕ್ಷೆಯಂತೆ, ಎಲ್ಲರೂ ಹುಟ್ಟುಹಬ್ಬದ ಕಂದನನ್ನು ಹಾಡಿ ಹೊಗಳಿದರು. ಉಳಿದಂತೆ ಚುನಾವಣಾ ಪ್ರಚಾರದ ವೇದಿಕೆಯಾಗಿ ಸದ್ದು ಮಾಡಿತು. ಈ ಕಾರ್ಯಕ್ರಮ ರಾಜಕೀಯೇತರವಾಗಿ, ಎಲ್ಲ ಪಕ್ಷಗಳಲ್ಲಿರುವ ಹಿರಿಯ ನಾಯಕರನ್ನು ಒಳಗೊಂಡು ನಡೆದಿದ್ದರೆ ನಿಜಕ್ಕೂ ಅರ್ಥಪೂರ್ಣವಾಗಿ ಬಿಡುತ್ತಿತ್ತೋ ಏನೋ. ಆದರೆ ಚುನಾವಣೆ ಹತ್ತಿರವಿರುವ ಈ ದಿನಗಳಲ್ಲಿ ಉಳಿದ ಪಕ್ಷಗಳ ರಾಜಕೀಯ ನಾಯಕರನ್ನು ಒಳಗೊಳ್ಳುವಂತೆ ಮಾಡುವುದು ಸಾಧ್ಯವೂ ಇರಲಿಲ್ಲ. ಡಿಕೆಶಿ ಬಣ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು, ಡಿಕೆಶಿ ಮತ್ತು ಸಿದ್ದರಾಮಯ್ಯ ವೇದಿಕೆಯಲ್ಲಿ ಕೈ ಜೋಡಿಸಿರುವುದೇ ಅಮೃತ ಮಹೋತ್ಸವದ ಅತಿ ದೊಡ್ಡ ಸಾಧನೆ. ಆದರೆ ಸಾರ್ವಜನಿಕ ವೇದಿಕೆಯಲ್ಲಿ ಪರಸ್ಪರ ತಬ್ಬಿಕೊಂಡಾಕ್ಷಣ ಅಥವಾ ಕೈ ಜೋಡಿಸಿಕೊಂಡಾಕ್ಷಣ ಮನಸ್ಸುಗಳು ಒಂದಾಗುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಂತೂ ಅದು ದೂರದ ಮಾತು. ವೇದಿಕೆಯಲ್ಲಿ ರಾಹುಲ್‌ಗಾಂಧಿ ಕೂಡ ಬಹಳ ಮುತ್ಸದ್ದಿತನದಿಂದ ನಡೆದುಕೊಂಡರು. ಸಿದ್ದರಾಮಯ್ಯ ಅವರ ರಾಜಕೀಯ ವೌಲ್ಯಗಳನ್ನು ಬಾಯಿ ತುಂಬಾ ಹೊಗಳಿದ್ದಾರಾದರೂ, ಮುಂದಿನ ಚುನಾವಣೆ ‘ಸಿದ್ದರಾಮಯ್ಯ- ಡಿಕೆಶಿ ನೇತೃತ್ವದಲ್ಲಿ ನಡೆಯುತ್ತದೆ’ ಎಂದೇ ಸ್ಪಷ್ಟವಾಗಿ ನುಡಿದರು.

ಉತ್ಸವ, ರಾಜ್ಯದಲ್ಲಿ ಕಾಂಗ್ರೆಸ್ ಜೀವಂತವಾಗಿದೆ ಎನ್ನುವುದನ್ನು ಹೇಳಿದೆ. ಹಾಗೆಯೇ, ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ನೊಳಗೆ ಇನ್ನೂ ನಿಯಂತ್ರಣವಿದೆ, ಅವರ ಹಿಂದೆ ದೊಡ್ಡ ಸಂಖ್ಯೆಯ ಜನರಿದ್ದಾರೆ ಎನ್ನುವುದನ್ನು ವರಿಷ್ಠರಿಗೆ ಮನವರಿಕೆ ಮಾಡಿಸಿದೆ. ಅದರಾಚೆಗೆ ಈ ಉತ್ಸವ ಕಾಂಗ್ರೆಸ್ ಪಕ್ಷಕ್ಕೆ ಎಷ್ಟರಮಟ್ಟಿಗೆ ಲಾಭವಾಗಬಹುದು ಎನ್ನುವುದರ ಬಗ್ಗೆ ಅನುಮಾನಗಳಿವೆ. ಈ ಕಾರ್ಯಕ್ರಮದಿಂದ ಸಿದ್ದರಾಮಯ್ಯನವರ ವರ್ಚಸ್ಸು ಕಾಂಗ್ರೆಸ್ ಪಕ್ಷದೊಳಗೆ ವಿಸ್ತಾರವಾದಷ್ಟೂ ಡಿಕೆಶಿ ಬಣದೊಳಗೆ ಅಭದ್ರತೆ, ಅತೃಪ್ತಿ ಹೆಚ್ಚಾಗುತ್ತಾ ಹೋಗುತ್ತದೆ. ಕಾರ್ಯಕ್ರಮದಿಂದ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾಗುತ್ತಾರೆ ಎಂದಾದರೆ, ಅದು ನಡೆಯದಂತೆ ನೋಡಿಕೊಳ್ಳುವ ಕಾರ್ಯಚಟುವಟಿಕೆಗಳು ಕಾಂಗ್ರೆಸ್‌ನೊಳಗೆ ಹೆಚ್ಚಾಗುತ್ತದೆ. ಸಮಾವೇಶದಲ್ಲಿ ರಾಹುಲ್ ಗಾಂಧಿ ಮುಂದಿನ ಚುನಾವಣೆಯ ಹೊಣೆಗಾರಿಕೆಯನ್ನು ಇಬ್ಬರು ನಾಯಕರ ಹೆಗಲ ಮೇಲೂ ಹಾಕಿರುವುದು ಇದೇ ಕಾರಣಕ್ಕೆ. ಈ ಸಮಾವೇಶ ಮುಂದಿನ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ನೊಳಗೆ ತನ್ನ ಪರಿಣಾಮವನ್ನು ಬೀರುವ ಬಗ್ಗೆ ಆತಂಕ ಅವರೊಳಗೂ ಇದ್ದಂತಿದೆ. ಸಿದ್ದರಾಮಯ್ಯರ ರಾಜಕೀಯ ವೌಲ್ಯಗಳನ್ನು ವರಿಷ್ಠರು ಹಾಡಿಹೊಗಳಿದ್ದಾರಾದರೂ ಕೇವಲ ಆ ವೌಲ್ಯಗಳ ಜೊತೆಗೇ ಜನರ ಬಳಿ ಸಾಗಿ, ಚುನಾವಣೆಯನ್ನು ಎದುರಿಸಿ ಗೆಲ್ಲುವ ಧೈರ್ಯ ಅವರಲ್ಲಿದೆಯೆ? ಡಿಕೆಶಿಯ ಜನ, ಹಣ, ಜಾತಿಯಿಲ್ಲದೆ ಬರೇ ಸಿದ್ದರಾಮಯ್ಯರ ಜನಪರ ಕಾರ್ಯಕ್ರಮ, ಸಮಾಜವಾದಿ ವೌಲ್ಯಗಳಿಂದ ಚುನಾವಣೆ ಗೆಲ್ಲುವ ಭರವಸೆ ಇದ್ದಿದ್ದರೆ, ವರಿಷ್ಠರು ನಿನ್ನೆಯ ವೇದಿಕೆಯಲ್ಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ ಬಿಡುತ್ತಿದ್ದರೇನೋ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯ ನೇತೃತ್ವ ವಹಿಸುವ ಮೂಲಕ ಡಿಕೆಶಿ ಏಕಾಏಕಿ ಕಾಂಗ್ರೆಸ್‌ನೊಳಗೆ ಮುನ್ನೆಲೆಗೆ ಬಂದಿದ್ದರು. ಅವರ ಹಣ ಮತ್ತು ಜಾತಿ ರಾಜಕಾರಣದ ಮುಂದೆ ಸಿದ್ದರಾಮಯ್ಯ ಅವರ ವೌಲ್ಯಾಧಾರಿತ ರಾಜಕಾರಣ ತೀರಾ ಮಂಕಾಗಿತ್ತು. ಅದಾಗಲೇ ಒಂದು ಕ್ಷೇತ್ರದಲ್ಲಿ ಸೋಲನುಭವಿಸಿದ ಸಂಕಟವನ್ನು ಒಳಗೊಳಗೇ ನುಂಗಿಕೊಂಡು, ಡಿಕೆಶಿ-ಕುಮಾರಸ್ವಾಮಿ ಮೈತ್ರಿಯನ್ನು ಅವರು ಸಹಿಸಿಕೊಳ್ಳಬೇಕಾಯಿತು. ಮೈತ್ರಿ ಸರಕಾರವನ್ನು ಉಳಿಸಲು ಡಿಕೆಶಿ ಕೊನೆಯ ಕ್ಷಣದ ವರೆಗೂ ಹೋರಾಟ ನಡೆಸಿದ್ದರು. ಪತ್ರಿಕೆಗಳ ಮುಖಪುಟದಲ್ಲಿ ಮುಂಬಯಿಯ ಹೊಟೇಲ್‌ನ ಬಾಗಿಲ ಮುಂದೆ, ಭಿನ್ನಮತೀಯರಿಗಾಗಿ ಕಾದು ಕುಳಿತ ಡಿಕೆಶಿ ಫೋಟೋಗಳೇ ಎಲ್ಲವನ್ನು ಹೇಳುತ್ತಿತ್ತು. ಪಕ್ಷದಲ್ಲಿ ತನ್ನ ನಿಯಂತ್ರಣ ಕೈಜಾರದಂತೆ ಅವರು ಅಂದಿನಿಂದ ಇಂದಿನವರೆಗೂ ನೋಡಿಕೊಳ್ಳುತ್ತಾ ಬಂದಿದ್ದಾರೆ.

ಇಂದು ಬಿಜೆಪಿಯ ಕೇಂದ್ರ ವರಿಷ್ಠರು ಹೆದರುತ್ತಿರುವುದು ಸಿದ್ದರಾಮಯ್ಯ ಅವರ ರಾಜಕೀಯ ವೌಲ್ಯಗಳಿಗಲ್ಲ, ಬದಲಿಗೆ ಡಿಕೆಶಿಯ ಜಾತಿ ಮತ್ತು ಹಣಬಲದ ರಾಜಕೀಯಕ್ಕೆ. ಆದುದರಿಂದಲೇ ಕೇಂದ್ರದ ತನಿಖಾ ಸಂಸ್ಥೆಗಳ ಕಣ್ಣು ಡಿಕೆಶಿಯ ಮೇಲೆ ಬಿದ್ದಿರುವುದು. ‘‘ನಾನು ಮುಖ್ಯಮಂತ್ರಿ ಅಭ್ಯರ್ಥಿ’’ ಎನ್ನುವುದನ್ನು ಈಗಾಗಲೇ ಡಿಕೆಶಿ ಘೋಷಿಸಿದ್ದಾರೆ. ‘ಕಾಂಗ್ರೆಸ್‌ಗಾಗಿ ನಾನೂ ಸಾಕಷ್ಟು ದುಡಿದಿದ್ದೇನೆ. ನನಗೂ ಮುಖ್ಯಮಂತ್ರಿಯಾಗುವ ಅರ್ಹತೆಯಿದೆ’ ಎನ್ನುವ ಸೂಚನೆಯನ್ನು ನೀಡಿದ್ದಾರೆ. ಸಿದ್ದರಾಮಯ್ಯರ ಅಮೃತ ಮಹೋತ್ಸವದಿಂದ ಡಿಕೆಶಿಯ ಒಳಗಿನ ಆಸೆಗೆ ತಣ್ಣೀರು ಬಿದ್ದರೆ ಅವರು ಕಾಂಗ್ರೆಸ್‌ಗೆ ಅತಿ ದೊಡ್ಡ ಸಮಸ್ಯೆಯಾಗ ಬಲ್ಲರು. ಯಾಕೆಂದರೆ, ಸಿದ್ದರಾಮಯ್ಯರಂತೆ ಅವರದು ಜಾತ್ಯತೀತತೆಗೆ ಕೊನೆಗಳಿಗೆಯವರೆಗೂ ಬದ್ಧವಾಗಲೇ ಬೇಕಾದ ಅನಿವಾರ್ಯ ರಾಜಕಾರಣವಲ್ಲ. ಕೇಂದ್ರದ ತನಿಖಾ ಸಂಸ್ಥೆಗಳ ಕಾಟ ಅತಿಯಾದರೆ, ಜೊತೆಗೆ ಕಾಂಗ್ರೆಸ್‌ನೊಳಗಿನ ನಿಯಂತ್ರಣ ಕೈ ತಪ್ಪಿದರೆ, ಅವರು ಬಿಜೆಪಿಯೊಂದಿಗೆ ಕೈ ಜೋಡಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಅಧಿಕಾರ ಸಿಗುವುದಾದರೆ, ಸಿದ್ದರಾಮಯ್ಯ ಅವರ ಕೈ ಬಿಟ್ಟು ಡಿಕೆಶಿಯ ಜೊತೆಗೆ ಬಿಜೆಪಿಯೊಂದಿಗೆ ಬಾಳೆಯೆಲೆ ಹಂಚಿಕೊಳ್ಳುವ ನಾಯಕರು ಕಾಂಗ್ರೆಸ್‌ನೊಳಗೆ ಈಗಲೂ ಇದ್ದಾರೆ ಎನ್ನುವ ಮುನ್ನೆಚ್ಚರಿಕೆ ಕಾಂಗ್ರೆಸ್ ವರಿಷ್ಠರಲ್ಲೂ ಇರಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)