varthabharthi


ಕರ್ನಾಟಕ

ಪರಿಹಾರ ನೀಡದೇ ಒಕ್ಕಲೆಬ್ಬಿಸಲು ಸಂಚು; ಆರೋಪ

ಚಿಕ್ಕಮಗಳೂರು | ಅರಣ್ಯ ಇಲಾಖೆಯಿಂದ ಕಾಫಿ ತೋಟ ನಾಶ: ಗ್ರಾ.ಪಂ ಕಚೇರಿ ಎದುರು ಧರಣಿ

ವಾರ್ತಾ ಭಾರತಿ : 5 Aug, 2022

ಕಡವಂತಿ ಗ್ರಾ.ಪಂ ಎದುರು ಧರಣಿ ನಡೆಸುತ್ತಿರುವ ಗ್ರಾಮಸ್ಥರು

ಚಿಕ್ಕಮಗಳೂರು, ಆ.5: ನ್ಯಾಯಾಲಯದ ಆದೇಶದ ನೆಪವೊಡ್ಡಿ ಅರಣ್ಯ ಇಲಾಖೆ ಅಧಿಕಾರಿಗಳು 40 ವರ್ಷಗಳಿಂದ ಕೃಷಿ ಮಾಡಿದ್ದ ಕಾಫಿತೋಟವನ್ನು ಏಕಾಏಕಿ ತೆರವು ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ತಾಲೂಕಿನ ಖಾಂಡ್ಯ ಹೋಬಳಿ ಬೊಗಸೆಯ ಪರದೇಶಪ್ಪನ ಮಠ ಸುತ್ತಲಿನ ನಿವಾಸಿಗಳು ಕತ್ತರಿಸಿ ಹಾಕಿದ್ದ ಕಾಫಿ ಗಿಡಗಳನ್ನು ತಂದು ಹಾಕಿ ಶುಕ್ರವಾರ ಕಡವಂತಿ ಗ್ರಾಮ ಪಂಚಾಯತ್ ಕಚೇರಿ ಎದುರು ಧರಣಿ ನಡೆಸಿದರು.

ಸಂತ್ರಸ್ತ ಕುಟುಂಬಗಳ ಸದಸ್ಯರು ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು, ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಕಡವಂತಿ ರಸ್ತೆಯಲ್ಲಿ ವಾಹನಗಳನ್ನು ತಡೆದು ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದ್ದಲ್ಲದೇ ಅರಣ್ಯ ಇಲಾಖೆ ಅಧಿಕಾರಗಳು ಬಡವರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂತ್ರಸ್ತರ ಧರಣಿಯಿಂದಾಗಿ ಸುಮಾರು ಅರ್ಧಗಂಟೆಗಳ ಕಾಲ ವಾಹನ ಸಂಚಾರಕ್ಕೆ ಸ್ಥಗಿತಗೊಂಡಿತ್ತು. ನಂತರ ಕಡವಂತಿ ಗ್ರಾ.ಪಂಗೆ ತೆರಳಿದ ಧರಣಿ ನಿರತರು ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಕಡಿದು ಹಾಕಿದ್ದ ಕಾಫಿ ಗಿಡಗಳನ್ನು ಪಂಚಾಯತ್ ಕಚೇರಿ ಮುಂದೆ ಹಾಕಿ ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಈ ವೇಳೆ ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ ಮುಖಂಡ ಚಂದ್ರಶೇಖರ ರೈ ಮಾತನಾಡಿ, ಪರದೇಶಪ್ಪನ ಮಠದ ಅಕ್ಕಪಕ್ಕದ ಜಮೀನಿನಲ್ಲಿ ಸುಮಾರು 50 ವರ್ಷಗಳಿಂದಲೂ ಜೀವನೋಪಾಯಕ್ಕಾಗಿ ಕಾಫಿ ತೋಟ ಬೆಳೆಸಲಾಗಿದೆ. ಈಗ ಏಕಾ ಏಕಿ ಇಲ್ಲಿ ನೆಲೆಸಿರುವ ಸುಮಾರು 32 ಕುಟುಂಬಗಳನ್ನು ಯಾವುದೇ ಪರಿಹಾರ ನೀಡದೇ ಒಕ್ಕಲೆಬ್ಬಿಸಲು ಭದ್ರಾ ಅಭಯಾರಣ್ಯ ವಲಯದ ಅರಣ್ಯ ಸಿಬ್ಬಂದಿಗಳು ಮುಂದಾಗಿದ್ದಾರೆ. ಅಲ್ಲದೆ ಹತ್ತಾರು ವರ್ಷಗಳಿಂದ ಫಸಲು ನೀಡುತ್ತಿರುವ ಕಾಫಿ ಗಿಡಗಳನ್ನು ಕತ್ತರಿಸಿ ದೌರ್ಜನ್ಯವೆಸಗುತ್ತಿದ್ದಾರೆ ಎಂದು ದೂರಿದರು.

ಪರದೇಶಪ್ಪನ ಮಠದ ಸುತ್ತಲಿನ  ನಿವಾಸಿಗಳಿಗೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ಹೀಗೆ ಬಿಟ್ಟರೆ ಕಡಬಗೆರೆ, ಖಾಂಡ್ಯ ಸೇರಿದಂತೆ ವಿವಿಧ ಪ್ರದೇಶಗಳನ್ನು ಅರಣ್ಯ ಇಲಾಖೆ ತೆರವು ಮಾಡಲು ಮುಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಹೋರಾಟಕ್ಕೆ ಎಲ್ಲರೂ ಒಂದಾಗಬೇಕು ಎಂದ ಅವರು, ಗುರುವಾರ ಅರಣ್ಯ ಇಲಾಖೆ ದೌರ್ಜನ್ಯ ನಡೆಸುವಾಗ ಯಾವುದೇ ರಾಜಕೀಯ ಪಕ್ಷದ ಮುಖಂಡರು ಸಂತ್ರಸ್ಥರ ನೆರವಿಗೆ ಬಾರದಿರುವುದು ಖಂಡನೀಯ. ಈ ಸಂದರ್ಭದಲ್ಲಿ ವೇದಿಕೆಯುವ ಪಕ್ಷಾತೀತವಾದ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಸಂತ್ರಸ್ಥರಯ ರಾಜಕೀಯ ವ್ಯಕ್ತಿಗಳ ಹಿಂದೆ ಹೋಗಬೇಡಿ, ಇಂದಿನ ಹೋರಾಟದಲ್ಲೂ ಹೋಬಳಿ, ತಾಲೂಕು ಮಟ್ಟದಿಂದ ಯಾವ ರಾಜಕೀಯ ಪಕ್ಷದಿಂದಲೂ ಮುಖಂಡರು ನಮ್ಮನ್ನು ಬೆಂಬಲಿಸಲು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾ.ಪಂ.ಸದಸ್ಯ ವಿನೋದ್ ಬೊಗಸೆ ಮಾತನಾಡಿ, ನಿವಾಸಿಗಳನ್ನು ಎತ್ತಂಗಡಿ ಮಾಡುವ ಮುನ್ನ ಸೂಕ್ತ ಪರಿಹಾರ ಕೊಡಬೇಕು ಎಂದು ಮೊದಲಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದೇವೆ. ಈ ವರೆಗೆ ಬಂದು ಹೋದ ಸುಮಾರು 10 ಮಂದಿ ಜಿಲ್ಲಾಧಿಕಾರಿಗಳು ಇಲ್ಲಿನ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಅಭಿಪ್ರಾಯವನ್ನು ಸರಕಾರಕ್ಕೂ ತಿಳಿಸಿದ್ದಾರೆ. ಆದರೂ ಯಾವುದೇ ಪರಿಹಾರ ನೀಡದೆ ಅರಣ್ಯ ಇಲಾಖೆ ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದರು.

ಧರಣಿ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರತಿಭಟನಾಕಾರರ ಮನವಿಯನ್ನು ಜಿಲ್ಲಾಡಳಿತಕ್ಕೆ ತಲುಪಿಸಲಾಗುವುದು ಎಂದು ಗ್ರಾಪಂ ಸದಸ್ಯರು, ಅಧಿಕಾರಿಗಳು ಭರವಸೆ ನೀಡಿದ ನಂತರ ಧರಣಿಯನ್ನು ಕೈಬಿಡಲಾಯಿತು. ನ್ಯಾಯಾಲಯದ ಆದೇಶ ಎಂದು ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಂತ್ರಸ್ಥರು ಸುಮಾರು 40 ವರ್ಷಗಳಿಂದ ಕೃಷಿ ಮಾಡಿದ್ದ ಕಾಫಿ ತೋಟವನ್ನು ಕತ್ತರಿಸಿ ನಾಶ ಮಾಡಿದ್ದು, ಈ ವೇಳೆ ಸಂತ್ರಸ್ಥರು, ಗ್ರಾಮಸ್ಥರು ವ್ಯಾಪಕ ಆಕ್ರೋಶ ತೋರಿದ ಹಿನ್ನೆಲೆಯಲ್ಲಿ ಒತ್ತುವರಿ ತೆರವನ್ನು ಸ್ಥಗಿತಗೊಳಿಸಲಾಗಿತ್ತು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)