varthabharthi


ಪ್ರಚಲಿತ

ಡಾ. ಅಂಬೇಡ್ಕರ್ ಚರಿತ್ರೆಯ ಮೇಲೆ ಹೊಸ ಬೆಳಕು

ವಾರ್ತಾ ಭಾರತಿ : 8 Aug, 2022
ಸನತ್ ಕುಮಾರ್ ಬೆಳಗಲಿ

ಎಲ್ಲ ಮಹಾಪುರುಷರ ಜೀವನ ಚರಿತ್ರೆಗೆ ಅವರ ಸಾವಿನ ನಂತರ ಅನೇಕ ಕಪೋಲ ಕಲ್ಪಿತ ಕತೆಗಳು ಸೇರುತ್ತವೆ. ಡಾ.ಅಂಬೇಡ್ಕರ್ ಅವರ ವಿಷಯದಲ್ಲೂ ಇಂಥ ಅಪಚಾರ ಸಾಕಷ್ಟು ಆಗಿದೆ. ಈ ಬಗ್ಗೆ ಈ ಪುಸ್ತಕದಲ್ಲಿ ಸಾಕಷ್ಟು ನೋವು ಪಟ್ಟುಕೊಂಡು ಬರೆದಿರುವ ಡಾ.ಸವಿತಾ ಅಂಬೇಡ್ಕರ್ ಅವರು ಬಾಬಾಸಾಹೇಬರ ಜೊತೆಗಿನ ತಮ್ಮ ಮೊದಲ ಭೇಟಿ, ನಂತರದ ಸ್ನೇಹ, ದಾಂಪತ್ಯ, ಇವೆಲ್ಲ ಅಂಶಗಳ ಬಗ್ಗೆ ಅತ್ಯಂತ ಪ್ರಾಮಾಣಿಕವಾಗಿ ಅಂತರಾಳ ಕಲಕುವಂತೆ ಬರೆದಿದ್ದಾರೆ. ಈ ಪುಸ್ತಕ ಓದಿದರೆ, ಮುಚ್ಚಿ ಹೋದ ಅನೇಕ ಸತ್ಯ ಸಂಗತಿಗಳು ಬೆಳಕಿಗೆ ಬರುತ್ತವೆ.


ಅಂಬೇಡ್ಕರ್ ಅವರ ಕೊನೆಯ ದಿನಗಳಲ್ಲಿ ಸವಿತಾ ಅಂಬೇಡ್ಕರ್ ಅವರು ತಮ್ಮ ಪತಿಯನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲವೇ? ವಿಷ ಪ್ರಾಶನದಿಂದ ಅಂಬೇಡ್ಕರ್ ಅಸು ನೀಗಿದರೇ? ಹೀಗೆ ಹಲವು ಪ್ರಶ್ನೆಗಳು ನನ್ನನ್ನೂ ಕಾಡತೊಡಗಿದಾಗ ಕರ್ನಾಟಕ ಮತ್ತು ಮಹಾರಾಷ್ಟ್ರದ ದಲಿತ ಚಳವಳಿಯ ಅನೇಕ ಗೆಳೆಯರಲ್ಲಿ ಈ ಬಗ್ಗೆ ವಿಚಾರಿಸಿದೆ. ಆಗ ನಾನು ಕಂಡುಕೊಂಡ ಸತ್ಯ ಎಂದರೆ ಡಾ. ಸವಿತಾ ಅಂಬೇಡ್ಕರ್ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವುದು ಸರಿಯಲ್ಲ. ಅಂಬೇಡ್ಕರ್ ಸಾವು ಸಹಜವಾದದ್ದು ಎಂಬುದಾಗಿತ್ತು.

ಕಳೆದ 30 ವರ್ಷಗಳ ಕಾಲಾವಧಿಯಲ್ಲಿ ನಾನು ಡಾ. ಅಂಬೇಡ್ಕರ್ ಸಾಹಿತ್ಯವನ್ನು ಓದಲಾರಂಭಿಸಿದ ದಿನದಿಂದ ಒಂದು ಪ್ರಶ್ನೆ ನನ್ನನ್ನು ಸದಾ ಕಾಡುತ್ತಲೇ ಇದೆ. ಬಾಬಾಸಾಹೇಬರ ಸಾವು ಆಕಸ್ಮಿಕವೇ ಅಥವಾ ಅಸಹಜವೇ? ಎಂಬುದು ಈ ಪ್ರಶ್ನೆ. ಕನ್ನಡ ದಲ್ಲೂ ಬಂದ ಅಂಬೇಡ್ಕರ್ ಕುರಿತ ಪುಸ್ತಕಗಳಲ್ಲಿ ಅಂಬೇಡ್ಕರ್ ಸಾವು ಆಕಸ್ಮಿಕವಲ್ಲ. ಅವರ ಎರಡನೇ ಪತ್ನಿ ಸವಿತಾ ಅಂಬೇಡ್ಕರ್ ಎಂಬ ಬ್ರಾಹ್ಮಣ ಹೆಣ್ಣುಮಗಳು ಅಂಬೇಡ್ಕರ್ ಸಾವಿಗೆ ಕಾರಣ ಎಂದು ಕೆಲವೆಡೆ ಬರೆಯಲಾಗಿದೆ.

ಭಾರತದ ಚರಿತ್ರೆಯಲ್ಲಿ ಅನೇಕ ಸತ್ಯಗಳು ಅನ್ಯಾಯವಾಗಿ ಮರೆ ಮಾಚಿ ಹೋಗಿವೆ. ಇಲ್ಲವೇ ವಿರೂಪೀಕರಣಗೊಂಡಿವೆ. ಅನೇಕ ವಿಷಯಗಳಲ್ಲಿ ಸುಳ್ಳುಗಳು ವಿಜೃಂಭಿಸಿವೆ. ಪೂರ್ವಾಗ್ರಹ ಪೀಡಿತ ಮನಸ್ಸು ಅನೇಕ ಬಾರಿ ನೈಜ ಇತಿಹಾಸ ಅಳಿಸಿ ಹಾಕಿದೆ. ಭಾರತದ ಭಾಗ್ಯವಿಧಾತ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ವಿಷಯದಲ್ಲೂ ಹೀಗಾಗಿದೆ. ಅದರಲ್ಲೂ ವಿಶೇಷವಾಗಿ ಅವರ ಎರಡನೇ ಪತ್ನಿ ಡಾ.ಸವಿತಾ ಅಂಬೇಡ್ಕರ್ ಕೂಡ ಇತಿಹಾಸದ ಪುಟಗಳಲ್ಲಿ ಅನ್ಯಾಯಕ್ಕೆ ಒಳಗಾದ ಮಹಿಳೆ.

ಸುಮಾರು 381 ಪುಟಗಳ 'ಅಂಬೇಡ್ಕರ್ ಸಹವಾಸ'ದಲ್ಲಿ ಎಂಬ ಪುಸ್ತಕ ಓದಿದರೆ ಬಾಬಾ ಸಾಹೇಬರ ಸಾವಿನ ಕುರಿತ ಸಂದೇಹ ಸಂಪೂರ್ಣ ನಿವಾರಣೆ ಆಗುತ್ತದೆ. ಅಷ್ಟೇ ಅಲ್ಲ, ಖಳನಾಯಕಿ ಎಂದು ಬಿಂಬಿಸಲ್ಪಟ್ಟಿರುವ ಸವಿತಾ ಅಂಬೇಡ್ಕರ್ ಅವರ ಬಗೆಗಿನ ತಪ್ಪು ಕಲ್ಪನೆ ನಿವಾರಣೆಯಾಗುತ್ತದೆ.
ಅಂಬೇಡ್ಕರ್ ಸಾವಿನ ರಹಸ್ಯದ ಬಗ್ಗೆ ನನ್ನ ಹಾಗೆ ಅನೇಕರ ಮನಸ್ಸಿನಲ್ಲಿ ಉಳಿದ ಸಂಶಯಗಳು ಮತ್ತು ಪ್ರಶ್ನೆಗಳಿಗೆ ಉತ್ತರವಾಗಿ ಇದೀಗ ಕನ್ನಡದಲ್ಲಿ ಸವಿತಾ ಅಂಬೇಡ್ಕರ್ ಅವರ ಆತ್ಮ ಕಥನ ಬಂದಿದೆ. ಬಿಜಾಪುರದ ಅಂಬೇಡ್ಕರ್‌ವಾದಿ ಗೆಳೆಯ ಅನಿಲ ಹೊಸಮನಿಯವರು ಮರಾಠಿಯ ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಗದಗದ ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ ಅವರು ತಮ್ಮ ಪ್ರಕಾಶನದಿಂದ ಬೆಳಕಿಗೆ ತಂದ ಈ ಅಪರೂಪದ ಪುಸ್ತಕ ರವಿವಾರ (ಆಗಸ್ಟ್ 7) ಬಿಜಾಪುರದಲ್ಲಿ ಬಿಡುಗಡೆಯಾಯಿತು.

ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದು ಜನಜನಿತ. ಆದರೆ, ಬಾಬಾಸಾಹೇಬರ ಸಾಧನೆಯ ಹಿಂದೆ ಒಬ್ಬರಲ್ಲ, ಇಬ್ಬರು ಮಹಿಳೆಯರು ಇದ್ದಾರೆ. ಮೊದಲನೆಯವರು ಅವರ ಪ್ರೀತಿಯ ಪತ್ನಿ ರಮಾಬಾಯಿ ಅಂಬೇಡ್ಕರ್, ಎರಡನೆಯವರು ಸವಿತಾ ಅಂಬೇಡ್ಕರ್. ಆಗ ದೇಶಕ್ಕೆ ಸ್ವಾತಂತ್ರ್ಯ ಬಂದು ಒಂದೇ ವರ್ಷವಾಗಿತ್ತು. ಪಂಡಿತ್‌ಜವಾಹರಲಾಲ್ ನೆಹರೂ ಸಂಪುಟದಲ್ಲಿ ಅಂಬೇಡ್ಕರ್ ಕಾನೂನು ಮಂತ್ರಿ. ದಿಲ್ಲಿಯಲ್ಲಿದ್ದ ಅಂಬೇಡ್ಕರ್ ಅವರು ಡಾ. ಸವಿತಾ ಅವರಿಗೆ ಒಂದು ದಿನ ಪತ್ರ ಬರೆದು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಈ ಪತ್ರ ಓದಿ ಸವಿತಾ ಕಬೀರ ದಿಗಿಲುಗೊಳ್ಳುತ್ತಾರೆ. ದೇಶದ ಕಾನೂನು ಮಂತ್ರಿ ತನಗೆ ಪತ್ರ ಬರೆದು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದನ್ನು ನಂಬಲು ಅವರಿಗೆ ಆಗುವುದಿಲ್ಲ. ಕೊನೆಗೆ ಇಬ್ಬರೂ ಒಪ್ಪಿ ರಿಜಿಸ್ಟರ್ ಮದುವೆ ಮಾಡಿಕೊಳ್ಳುತ್ತಾರೆ. ದಿಲ್ಲಿಯ ಕಾನೂನು ಮಂತ್ರಿಯ ಮನೆಗೆ ನೋಂದಣಿ ಅಧಿಕಾರಿಗಳು ಬಂದು ಮದುವೆ ನಡೆಸಿಕೊಡುತ್ತಾರೆ. ಮದುವೆ ನಂತರ 1948ರ ಜುಲೈ 28ರಂದು ಭಾರತದ ಮೊದಲ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ) ಅವರು ತಮ್ಮ ನಿವಾಸದಲ್ಲಿ ನೂತನ ದಂಪತಿಗೆ ಭೋಜನ ಕೂಟ ಏರ್ಪಡಿಸುತ್ತಾರೆ.

ಅಸ್ಪಶ್ಯತೆಯ ಅವಮಾನಗಳನ್ನು ನುಂಗಿ ಅಂಬೇಡ್ಕರ್ ಈ ಎತ್ತರಕ್ಕೆ ಬೆಳೆಯಲು ಕಾರಣ ಅವರ ಮೊದಲ ಪತ್ನಿ ರಮಾಬಾಯಿ ಅವರು. ಉಪವಾಸ, ವನವಾಸ ಅನುಭವಿಸಿ ಹೆತ್ತ ಕುಡಿಗಳನ್ನು ಕಳೆದುಕೊಂಡು ಪತಿಯ ಮುನ್ನಡೆಗೆ ಅಪಾರ ತ್ಯಾಗ ಮಾಡಿದ ರಮಾಬಾಯಿ ಅಂಬೇಡ್ಕರ್ ಅವರು 1935ರಲ್ಲಿ ನಿಧನರಾದರು. ಆ ನಂತರ ಒಂಟಿಯಾದ ಅಂಬೇಡ್ಕರ್ 1948ರ ಎಪ್ರಿಲ್ 15ರಂದು ತಾವು ತುಂಬಾ ಇಷ್ಟಪಟ್ಟು ಮದುವೆಯಾಗಿದ್ದು, ಅಸ್ವಸ್ಥರಾದಾಗ ತಮ್ಮನ್ನು ನೋಡಿಕೊಂಡು ಆರೈಕೆ ಮಾಡಿದ ಡಾ,ಸವಿತಾ ಕಬೀರ ಅವರನ್ನು.

ಆದರೆ ಇಂಥ ಮಾಯಿಸಾಹೇಬ ಎಂದು ಕರೆಯಲ್ಪಡುವ ತಾಯಿಯ ಮೇಲೆ ವಿಷಪ್ರಾಶನದ ಅಪಪ್ರಚಾರ ನಡೆಯಿತು. ಕೆಲ ಪುಸ್ತಕಗಳು ಬಂದಿವೆ. ಅದೇ ರೀತಿ ಡಾ. ಸವಿತಾ ಅವರ ನಿಸ್ವಾರ್ಥ ಸೇವೆ ಮತ್ತು ತ್ಯಾಗ ಕೊಂಡಾಡುವ ನೂರಾರು ಪುಸ್ತಕಗಳು ಮರಾಠಿ ಮತ್ತು ಇತರ ಭಾಷೆಗಳಲ್ಲಿ ಬಂದಿವೆ. ಮಹಾರಾಷ್ಟ್ರದ ಬಹುತೇಕ ದಲಿತ ಚಿಂತಕರು, ಹೋರಾಟಗಾರರು ಸವಿತಾ ಅಂಬೇಡ್ಕರ್ ಅವರನ್ನು ಸಮರ್ಥಿಸಿದ್ದಾರೆ.
ರಮಾತಾಯಿ ಎಂದೇ ಕರೆಯಲ್ಪಡುತ್ತಿದ್ದ ರಮಾಬಾಯಿ ಅವರ ಸಾವಿನ ನಂತರ ಮರು ಮದುವೆ ಆಗಬಾರದೆಂದು ಬಾಬಾಸಾಹೇಬರು ತೀರ್ಮಾನಿಸಿದ್ದರು. ಆದರೆ, ತುಂಬಾ ತಡ ಮಾಡಿ ಅನಿವಾರ್ಯವಾಗಿ ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾರೆ. ಯಾಕೆಂದರೆ ನೊಂದ ತಳ ಸಮುದಾಯಗಳಿಗಾಗಿ ಭಾರತದ ಉನ್ನತಿಗಾಗಿ ಇನ್ನಷ್ಟು ಕಾಲ ಜೀವಂತವಿದ್ದು ಬಾಕಿ ಉಳಿದ ಕೆಲಸಗಳನ್ನು ಪೂರೈಸುವುದು ಅವರ ಉದ್ದೇಶವಾಗಿತ್ತು.

ಅಷ್ಟೇ ಅಲ್ಲ, ಸ್ವತಂತ್ರ ಭಾರತದ ಸಂವಿಧಾನ ರೂಪಿಸುವ ಮಹತ್ವದ ಹೊಣೆಗಾರಿಕೆ ಅವರ ಮೇಲಿತ್ತು. ಸಂವಿಧಾನದಲ್ಲಿ ಶತಮಾನಗಳಿಂದ ತುಳಿತಕ್ಕೆ ಒಳಗಾದ ತನ್ನ ಸಮುದಾಯದ ಹಿತರಕ್ಷಣೆ ಮಾಡುವ ಅಂಶಗಳನ್ನು ಅಳವಡಿಸಬೇಕಾಗಿತ್ತು. ಇದಕ್ಕಾಗಿ ದಿನಕ್ಕೆ 16 ರಿಂದ18 ಗಂಟೆ ದುಡಿಯಬೇಕಿತ್ತು. ಇಷ್ಟು ಉನ್ನತ ಕನಸು ಕಟ್ಟಿಕೊಂಡಿದ್ದ ಅವರಿಗೆ ಆರೋಗ್ಯ ಸಹಕರಿಸುತ್ತಿರಲಿಲ್ಲ. ಆಗ ತಮ್ಮ ದೈಹಿಕ ಆರೋಗ್ಯ ನೋಡಿಕೊಳ್ಳುವ ಸಂಗಾತಿಯ ಅಗತ್ಯತೆ ಅವರಿಗೆ ಕಾಣಿಸಿತು. ಆಗ ಡಾ. ಶಾರದಾ ಕಬೀರ ಅವರನ್ನು ಇಷ್ಟಪಟ್ಟು ಮದುವೆಯಾಗುತ್ತಾರೆ. ಅವರಿಗೆ ಸವಿತಾ ಎಂದು ಕರೆಯುತ್ತಾರೆ.

ಸವಿತಾ ಅವರ ಕೈ ಹಿಡಿದ ನಂತರವೇ ಬಾಬಾಸಾಹೇಬರು ಸಂವಿಧಾನ ರಚನೆ, ಹಿಂದೂ ಕೋಡ್ ಬಿಲ್ ರಚನೆ, ಮಿಲಿಂದ ಮಹಾವಿದ್ಯಾಲಯ ಸ್ಥಾಪನೆ, ಬೌದ್ಧ ಧರ್ಮ ದೀಕ್ಷೆ, 'ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ', ಬುದ್ಧ ಮತ್ತು ಅವನ ದಮ್ಮ ಗ್ರಂಥ ರಚನೆಯಂಥ ಚಾರಿತ್ರಿಕ ಕಾರ್ಯಗಳನ್ನು ಪೂರೈಸುತ್ತಾರೆ. ಇದರ ಶ್ರೇಯಸ್ಸು ಮಾಯಿ ಸಾಹೇಬ ಎಂದು ಕೋಟ್ಯಂತರ ಜನ ಪ್ರೀತಿಯಿಂದ ಕರೆಯುತ್ತಿದ್ದ ಸವಿತಾ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ.
ಈ ಪುಸ್ತಕದಲ್ಲಿ ಒಂದೆಡೆ ಸವಿತಾ ಅಂಬೇಡ್ಕರ್ ಅವರು 'ಯುಗ ಯುಗಗಳಿಂದ ನರಳುತ್ತಿದ್ದ ಮಾನವೀಯತೆಯು ಅಂಬೇಡ್ಕರ್ ಅವರಂಥ ವ್ಯಕ್ತಿಯ ಶೋಧದಲ್ಲಿತ್ತು. ಪಾದರಸದ ಸ್ಪರ್ಶದಿಂದ ಕಬ್ಬಿಣವೂ ಸಹ ಚಿನ್ನವಾಗಿ ಬದಲಾಗುತ್ತದೆ. ಅದೇ ರೀತಿ ಅಂಬೇಡ್ಕರ್ ಅವರವಳಾಗಿ ನಾನೂ ಸುವರ್ಣ ಮಯ ದಿನಗಳನ್ನು ಕಾಣುವಂತಾಯಿತು. ನಾನು ತನು, ಮನದಿಂದ ಅವರ ಸೇವೆ ಮಾಡಿದೆ. ಅವರನ್ನು ಪೂಜಿಸಿದೆ, ಆರಾಧಿಸಿದೆ. ನನ್ನ ಜೀವನವು ಆ ಯುಗಪ್ರವರ್ತಕ ವಿಶ್ವ ಭೂಷಣನೆಂಬ ಮಹಾಮಾನವನ ಜೀವನದೊಂದಿಗೆ ಸಮ್ಮಿಳಿತವಾಯಿತು' ಎಂದು ಬರೆಯುತ್ತಾರೆ.

ಬಾಬಾ ಸಾಹೇಬರು ಬರೆದ ಪುಸ್ತಕಗಳಲ್ಲಿ ಒಂದನ್ನು ಮೊದಲ ಪತ್ನಿ ರಮಾತಾಯಿ ಅವರಿಗೆ ಅರ್ಪಿಸಿದ್ದಾರೆ. ಇನ್ನೊಂದು ಪುಸ್ತಕವನ್ನು ಎರಡನೇ ಪತ್ನಿ ಡಾ. ಸವಿತಾತಾಯಿ ಅಂಬೇಡ್ಕರ್ ಅವರಿಗೆ ಅರ್ಪಿಸಿದ್ದಾರೆ. ರಮಾತಾಯಿ ಅವರಿಗೆ ಅರ್ಪಿಸಿದ ಪುಸ್ತಕದಲ್ಲಿ ತಾನು ಇಷ್ಟು ಬೆಳೆಯಲು ಅವರ ತ್ಯಾಗ ಕಾರಣವೆಂದು ಹೊಗಳಿದ್ದಾರೆ. ಸವಿತಾ ಅವರಿಗೆ ಅರ್ಪಿಸಿದ ಪುಸ್ತಕದಲ್ಲೂ ತನ್ನ ಯಶಸ್ಸಿನ ಹಿಂದೆ ಅವರಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಸವಿತಾ ಅಂಬೇಡ್ಕರ್ ಅವರನ್ನು ಬಾಬಾಸಾಹೇಬರು ಎಷ್ಟು ಇಷ್ಟ ಪಡುತ್ತಿದ್ದರೆಂದರೆ ಒಮ್ಮೆ ಸವಿತಾ ಅವರು ಮುಂಬೈನಿಂದ ದಿಲ್ಲಿಗೆ ವಿಮಾನದಲ್ಲಿ ಬರುತ್ತಿರುತ್ತಾರೆ. ಆಗ ನೆಹರೂ ಸಂಪುಟದಲ್ಲಿ ಕಾನೂನು ಮಂತ್ರಿಯಾಗಿದ್ದ ಅಂಬೇಡ್ಕರ್ ಪತ್ನಿಯನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಲು ತಯಾರಾಗುತ್ತಾರೆ. ಆಗ ಅವರ ಸಹೋದ್ಯೋಗಿಗಳು ಸರ್, ನೀವು ಕಾನೂನು ಮಂತ್ರಿ.ಹಾಗೆಲ್ಲ ವಿಮಾನ ನಿಲ್ದಾಣಕ್ಕೆ ಹೋಗಬಾರದು ಎನ್ನುತ್ತಾರೆ. ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದ ಅಂಬೇಡ್ಕರ್ ವಿಮಾನ ನಿಲ್ದಾಣಕ್ಕೆ ಹೋಗಿ ಪತ್ನಿಯನ್ನು ಸ್ವಾಗತಿಸಿ ಮನೆಗೆ ಕರೆ ತರುತ್ತಾರೆ.

ಎಲ್ಲ ಮಹಾಪುರುಷರ ಜೀವನ ಚರಿತ್ರೆಗೆ ಅವರ ಸಾವಿನ ನಂತರ ಅನೇಕ ಕಪೋಲ ಕಲ್ಪಿತ ಕತೆಗಳು ಸೇರುತ್ತವೆ. ಡಾ. ಅಂಬೇಡ್ಕರ್ ಅವರ ವಿಷಯದಲ್ಲೂ ಇಂಥ ಅಪಚಾರ ಸಾಕಷ್ಟು ಆಗಿದೆ. ಈ ಬಗ್ಗೆ ಈ ಪುಸ್ತಕದಲ್ಲಿ ಸಾಕಷ್ಟು ನೋವು ಪಟ್ಟುಕೊಂಡು ಬರೆದಿರುವ ಡಾ.ಸವಿತಾ ಅಂಬೇಡ್ಕರ್ ಅವರು ಬಾಬಾಸಾಹೇಬರ ಜೊತೆಗಿನ ತಮ್ಮ ಮೊದಲ ಭೇಟಿ, ನಂತರದ ಸ್ನೇಹ, ದಾಂಪತ್ಯ, ಇವೆಲ್ಲ ಅಂಶಗಳ ಬಗ್ಗೆ ಅತ್ಯಂತ ಪ್ರಾಮಾಣಿಕವಾಗಿ ಅಂತರಾಳ ಕಲಕುವಂತೆ ಬರೆದಿದ್ದಾರೆ. ಈ ಪುಸ್ತಕ ಓದಿದರೆ, ಮುಚ್ಚಿ ಹೋದ ಅನೇಕ ಸತ್ಯ ಸಂಗತಿಗಳು ಬೆಳಕಿಗೆ ಬರುತ್ತವೆ.
ಸವಿತಾ ಅಂಬೇಡ್ಕರ್ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ಬಿಜಾಪುರದ ಅನಿಲ ಹೊಸಮನಿಯವರು ಕೂಡ ಹೋರಾಟದ ಹಿನ್ನೆಲೆಯಿಂದ ಬಂದವರು. ಅವರ ತಂದೆ ಚಂದ್ರಶೇಖರ ಹೊಸಮನಿಯವರು ಎಪ್ಪತ್ತರ ದಶಕದಲ್ಲಿ ಉತ್ತರ ಕರ್ನಾಟಕದ ಹೆಸರಾಂತ ಅಂಬೇಡ್ಕರ್‌ವಾದಿ ಚಿಂತಕ ಮತ್ತು ಹೋರಾಟಗಾರರು ಆಗಿದ್ದರು. ಆ ಕಾಲದಲ್ಲಿ 'ಪರಿವರ್ತಕ' ಎಂಬ ವಾರಪತ್ರಿಕೆ ತರುತ್ತಿದ್ದರು.

ಸವಿತಾ ಅವರು ಮೂಲತಃ ಮಹಾರಾಷ್ಟ್ರದ ರತ್ನಗಿರಿಯ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ಕಬೀರ ಎಂಬುದು ಇವರ ಮನೆತನದ ಹೆಸರು. ಅವರ ತಂದೆ ಉದ್ಯೋಗ ನಿಮಿತ್ತ ಪುಣೆಗೆ ಬಂದು ನೆಲೆಸಿದರು. ಜಾತಿ, ಮತಗಳಲ್ಲಿ ನಂಬಿಕೆ ಇಲ್ಲದ, ಮನುಷ್ಯರೆಲ್ಲ ಒಂದೇ ಎಂಬ ತತ್ವದಲ್ಲಿ ನಂಬಿಕೆ ಹೊಂದಿದ ಕುಟುಂಬ ಇದು. ಇವರ ಮೂವರು ಸೋದರಿಯರು ಜಾತಿ ರಹಿತ ವಿವಾಹವಾದವರು. ಮಹಿಳೆಗೆ ಶಿಕ್ಷಣ ಅನಗತ್ಯ ಎಂಬ ಜೀವ ವಿರೋಧಿ ಮೌಲ್ಯಗಳು ಪ್ರಬಲವಾಗಿದ್ದ ಕಾಲದಲ್ಲಿ ಅಂದರೆ 1937ರಲ್ಲಿ ಸವಿತಾ ಅವರು ಎಂ.ಬಿ.ಬಿ.ಎಸ್ ಪದವಿ ಪಡೆದರು. ಅಂಬೇಡ್ಕರ್ ಮತ್ತು ಸವಿತಾ ಅವರು ವಿಭಿನ್ನ ಸಾಮಾಜಿಕ ಹಿನ್ನೆಲೆಯಿಂದ ಬಂದವರಾಗಿದ್ದರೂ ಸಮಾನತೆಯ ಮೌಲ್ಯಗಳು ಇಬ್ಬರನ್ನೂ ಹತ್ತಿರ ತಂದವು .ತಮ್ಮ ಅನುಬಂಧದ ವಿವರಗಳನ್ನು ಸವಿತಾ ಅವರು ಅತ್ಯಂತ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.

ಕೊನೆಯದಾಗಿ ಎಲ್ಲವನ್ನೂ ಜಾತಿಯ ಕಣ್ಣುಗಳಿಂದ ನೋಡುವ ವ್ಯಾಧಿ ವ್ಯಾಪಕವಾಗಿ ಹಬ್ಬುತ್ತಿರುವ ಈ ದಿನಗಳಲ್ಲಿ ಇಂಥ ಪುಸ್ತಕಗಳ ಅಗತ್ಯ ವಿದೆ.ಯಾವುದೇ ಜಾತಿ ಅಥವಾ ಮತದಲ್ಲಾಗಲಿ ಎಲ್ಲರೂ ಒಳ್ಳೆಯವರು ಇಲ್ಲವೇ ಎಲ್ಲರೂ ಕೆಟ್ಟವರು ಇರುತ್ತಾರೆ ಎಂಬುದು ಸುಳ್ಳು. ಒಳ್ಳೆಯವರು, ಕೆಟ್ಟವರು ಎಲ್ಲ ಜಾತಿಗಳಲ್ಲೂ ಇರುತ್ತಾರೆ. ತಳ ಸಮುದಾಯಗಳಿಗಾಗಿ ದುಡಿದ ಕುದ್ಮುಲ್ ರಂಗರಾವ್, ಕಾಕಾ ಕಾರ್ಖಾನಿಸ್, ಗೋಪಾಲಸ್ವಾಮಿ ಅಯ್ಯರ್ ಅವರನ್ನು ನಾವು ಮರೆಯಬಾರದು. ಈ ನಿಟ್ಟಿನಲ್ಲಿ ಅನೇಕರ ಮನಸ್ಸಿನಲ್ಲಿ ಉಳಿದ ಬಾಬಾಸಾಹೇಬರ ಸಾವಿನ ರಹಸ್ಯ, ಸಂದೇಹ ಈ ಪುಸ್ತಕ ನಿವಾರಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಪುಸ್ತಕ ಬೇಕಾದವರು ಲಡಾಯಿ ಪ್ರಕಾಶನ ಸಂಪರ್ಕಿಸಬಹುದು ( 94802 86 844).ನನಗೆ ತಿಳಿದಂತೆ ಕನ್ನಡದಲ್ಲಿ ಬಂದ ಸವಿತಾ ಅಂಬೇಡ್ಕರ್ ಅವರ ಮೊದಲ ಪುಸ್ತಕವಿದು.
ಇಂಥ ಪುಸ್ತಕಗಳನ್ನು ಹುಡುಕಿ ತಮ್ಮ ಪ್ರಕಾಶನದಿಂದ ಬೆಳಕಿಗೆ ತರುವ ಬಸವರಾಜ ಸೂಳಿಬಾವಿ ಅವರು ತುಂಬಾ ಆಸಕ್ತಿ ವಹಿಸಿ,ಆಕರ್ಷಕವಾಗಿ ಓದುಗರಿಗೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)