varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 8 Aug, 2022
ಪಿ.ಎ. ರೈ

ಕೊಲೆಗೈಯಲ್ಪಟ್ಟವರು ಮುಸ್ಲಿಮರಾದರೆ ಅವರು ಪರಿಹಾರಕ್ಕೆ ಅರ್ಹರಲ್ಲವೇ? - ದಿನೇಶ್ ಗುಂಡೂರಾವ್, ಶಾಸಕ
ಔಪಚಾರಿಕ ಭೇಟಿಗೂ ಅರ್ಹರಲ್ಲದವರು ಪರಿಹಾರಕ್ಕೆಲ್ಲಿ ಅರ್ಹರಾಗುತ್ತಾರೆ?

ಶಿವಸೇನೆಯನ್ನು ಮುಗಿಸಲು ಬಿಜೆಪಿ ಸಂಚು ರೂಪಿಸುತ್ತಿದೆ - ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮಾಜಿ ಸಿಎಂ
ಇದ್ದದ್ದನ್ನು ಮುಗಿಸುವುದು ಮತ್ತು ಅದಕ್ಕಾಗಿ ಸಂಚು ಹೂಡುವುದು - ಇಷ್ಟು ಮಾತ್ರ ತಮ್ಮ ಸಾಮರ್ಥ್ಯ ಎಂಬುದನ್ನು ಅವರು ಪದೇ ಪದೇ ಸಾಬೀತು ಪಡಿಸಿದ್ದಾರೆ. ನೀವೀಗ ನಿಮ್ಮ ಸಾಮರ್ಥ್ಯ ಪ್ರದರ್ಶಿಸಿ.

ಬ್ರಿಟನ್ ಪ್ರಧಾನಿ ಹುದ್ದೆಗೇರಲು ಜನಾಂಗೀಯ ಮೂಲ ಅಡ್ಡಿ ಬರುವುದಿಲ್ಲ - ರಿಷಿ ಸುನಕ್, ಬ್ರಿಟನ್ ಪ್ರಧಾನಿ ಅಭ್ಯರ್ಥಿ
ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದೆ ಎಂದು ಮಾತ್ರ ಹೇಳಲು ಹೋಗಬೇಡಿ.

ನಮ್ಮೆಲ್ಲರ ಉದ್ದೇಶ ಕಾಂಗ್ರೆಸನ್ನು ಅಧಿಕಾರಕ್ಕೆ ತರುವುದು, ನಾವೇ ಪರಸ್ಪರ ಕಿತ್ತಾಟ ಮಾಡುವುದಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಪಕ್ಷದಲ್ಲಿ ಹೆಚ್ಚಿನವರಿಗೆ ಆ ಪ್ರಜ್ಞೆ ಈಗಾಗಲೇ ಇದೆ. ನೀವೊಬ್ಬರು ಸಹಕರಿಸಿದರೆ ಸಾಕು.

ನಾನು ಸಾಯುತ್ತೇನೆ ಆದರೆ ಬಿಜೆಪಿಯ ಷಡ್ಯಂತ್ರಕ್ಕೆ ಶರಣಾಗುವುದಿಲ್ಲ - ಸಂಜಯ್ ರಾವುತ್, ಶಿವಸೇನೆ ರಾಜ್ಯಸಭಾ ಸದಸ್ಯ
ಸುಲಭವಾಗಿ ಸಾಯಲು ಅವರೆಲ್ಲಿ ಬಿಡುತ್ತಾರೆ? ಬಿಟ್ಟಿದ್ದರೆ ಇಲ್ಲಿ ಇಷ್ಟು ಕೋಟಿ ಜನ ನರಕ ಯಾತನೆ ಅನುಭವಿಸುತ್ತಾ ಬದುಕಿರುತ್ತಿದ್ದರೇನು?

ಮಾಜಿ ಪ್ರಧಾನಿ ದೇವೇಗೌಡರಿಗೆ ನಾಲ್ಕು ಪಂಚೆ, ಜುಬ್ಬಾ ಬಿಟ್ಟರೆ ಸ್ವಂತ ಮನೆ ಕೂಡಾ ಇಲ್ಲ - ಸಿ.ಎಂ.ಇಬ್ರಾಹೀಂ, ಜೆಡಿಎಸ್ ರಾಜ್ಯಾಧ್ಯಕ್ಷ
ನೀವು ಎಷ್ಟು ಕಾಲ ಹೀಗೆಯೇ ರೋದಿಸುತ್ತಿರುತ್ತೀರಿ? ನಿಮ್ಮದೇ ಬಂಗಲೆಯನ್ನು ಅವರಿಗೆ ಬಿಟ್ಟುಕೊಡಬಹುದಲ್ಲಾ?. ಹತ್ತಿಪ್ಪತ್ತು ಪಂಚೆ, ಜುಬ್ಬಾ, ಶಾಲುಗಳನ್ನೂ ನೀವೇ ಖರೀದಿಸಿ ಉಡುಗೊರೆಯಾಗಿ ಕೊಡಬಹುದಲ್ಲಾ!

ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿಯೂ ದೂರು ಪುಸ್ತಕ ಇಟ್ಟು ರೋಗಿಗಳಿಂದ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ಪಡೆಯುವ ಕ್ರಮ ಜಾರಿಗೆ ತರಲಾಗುವುದು - ಡಾ.ಸುಧಾಕರ್, ಸಚಿವ
ದೂರು ನೀಡಿದವರಿಗೆ ಶಿಕ್ಷೆ ಏನು ಎಂಬುದು ಕೂಡಾ ನಿಗದಿಯಾಗಿದೆಯೇ?

ನಮ್ಮ ಮೇಲೆ ಯಾರದೋ ಕೆಟ್ಟ ಕಣ್ಣು ಬಿದ್ದಿದೆ. ಆದುದರಿಂದಲೇ ದೇವೇಗೌಡರು ಯಾವುದೇ ಕಾರ್ಯಕ್ರಮಕ್ಕೆ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ - ಕುಮಾರಸ್ವಾಮಿ, ಮಾಜಿ ಸಿಎಂ
ನೀವು ಅವರನ್ನು ಕಾಣಲು ಹೋಗಿದ್ದಿರಂತೆ ?

ದೇಶವನ್ನು ವಿಭಜಿಸುವ ವಿಚ್ಛಿದ್ರಕಾರಿ ಶಕ್ತಿಗಳನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ - ಅಜಿತ್ ದೋವಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ
ಅವರ ಜೊತೆ ಸಕ್ರಿಯ ಸಹಭಾಗಿತ್ವದ ಬಗ್ಗೆ ಆಲೋಚಿಸುತ್ತಿಲ್ಲ ತಾನೇ?

ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯ ಪ್ರಶಂಸೆ ಖುಷಿ ತಂದಿದೆ - ಸುನೀಲ್ ಕುಮಾರ್, ಸಚಿವ
ಎಲ್ಲರ ಮೇಲೆ ಸಂಸ್ಕೃತವನ್ನು ಹೇರಲು ಸಂಚು ಹೂಡುತ್ತಿರುವವರು ಕನ್ನಡಕ್ಕೆ ಮಾನ್ಯತೆ ನೀಡಲು ನಿರ್ಬಂಧಿತರಾಗಿರುವುದು ಸಂತಸದ ವಿಷಯ.

ಜಗತ್ತಿನಲ್ಲಿ ಪುರುಷ ಏನು ಬೇಕಾದರೂ ಆಗಬಹುದು. ಆದರೆ ಮಾತೆ ಆಗಲಾರ - ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಮಹಿಳೆಯೂ ಅಷ್ಟೇ, ಬೇರೆ ಏನೆಲ್ಲಾ ಆದರೂ ತಂದೆಯಾಗಲು ಅಥವಾ ಸ್ವಾಮೀಜಿಯಾಗಲು ಆಕೆಗೆಲ್ಲಿ ಸಾಧ್ಯ?

ಸಾವಿರ ಸಾವಿರ ಬಾರಿ ಒತ್ತಿ ಹೇಳುತ್ತೇನೆ ಅಂಜನಾದ್ರಿಯೇ ಹನುಮನ ಜನ್ಮಸ್ಥಳ - ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಯಾವುದನ್ನೂ ಅಷ್ಟು ಬಾರಿ ಒತ್ತಿದರೆ ಪುಡಿಯಾಗುವ ಸಾಧ್ಯತೆ ಇದೆ.

ಬಿಜೆಪಿಗೆ ಕಾರ್ಯಕರ್ತರೇ ಆಸ್ತಿಯಾಗಿದ್ದು, ಯಾವುದೇ ಕಾರಣಕ್ಕೂ ಅವರನ್ನು ಬಿಟ್ಟುಕೊಡುವುದಿಲ್ಲ - ಸಿ.ಟಿ.ರವಿ, ಶಾಸಕ
ಹಾಗೆಲ್ಲಾ ಬಿಟ್ಟುಕೊಡುವುದಕ್ಕೆ ಅವರೇನು ಆದರ್ಶಗಳೇ? ನೈತಿಕ ಮೌಲ್ಯಗಳೇ? ಸಾರ್ವಜನಿಕ ಹಿತಾಸಕ್ತಿಗಳೇ?

ನಮ್ಮ ದೇಶ ಆರ್ಥಿಕ ಹಿಂಜರಿತದ ಕಡೆಗೆ ಹೋಗುವ ಸಾಧ್ಯತೆಯೇ ಇಲ್ಲ - ನಿರ್ಮಲಾ ಸೀತಾರಾಮನ್ , ಕೇಂದ್ರ ಸಚಿವೆ
ಸಾಧ್ಯತೆ ಇದೆ ಎಂದು ಶ್ರೀಲಂಕಾ ಸರಕಾರದ ಯಾವ ಸದಸ್ಯನೂ ಒಮ್ಮೆ ಕೂಡಾ ಹೇಳಿರಲಿಲ್ಲ.

ಮಕ್ಕಳಲ್ಲಿ ಬುದ್ಧಿ ಚುರುಕಾಗಬೇಕಾದರೆ ಸಂಸ್ಕೃತ ಕಲಿಸಿ - ಡಾ.ಸುಬ್ರಮಣಿಯನ್ ಸ್ವಾಮಿ, ಕೇಂದ್ರದ ಮಾಜಿ ಸಚಿವ
ಜನಿವಾರವನ್ನೂ ಕೊಟ್ಟುಬಿಟ್ಟರೆ ಅವರು ಚುರುಕಾದದ್ದು ಸಾರ್ಥಕವಾಗುತ್ತದೆ.

ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಿದಾಗ ಮಾತ್ರ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯನ್ನು ತಡೆಗಟ್ಟಲು ಸಾಧ್ಯ- ಕೆ.ಎಸ್.ಈಶ್ವರಪ್ಪ, ಶಾಸಕ
ಸಮಾಜದಲ್ಲಿನ ಮಾನವರೆಲ್ಲಾ ಒಂದಾದಾಗ ಮಾನವರ ಹತ್ಯೆ ತಡೆಯಲು ಕೂಡ ಸಾಧ್ಯವಾದೀತು.

ನನ್ನ ಹಣೆಯಲ್ಲಿ ಸಿಎಂ ಆಗೋದು ಬರೆದಿದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಈಗ ಅದಕ್ಕೆಲ್ಲಾ ಪ್ಲಾಸ್ಟಿಕ್ ಸರ್ಜರಿಯಂತಹ ಅನೇಕ ವೈದ್ಯಕೀಯ ಪರಿಹಾರಗಳು ಸಿದ್ಧವಾಗಿವೆ.

ರಾಜ್ಯ ಸರಕಾರದ ಕಾರ್ಯವೈಖರಿಯ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ತೃಪ್ತಿ ವ್ಯಕ್ತಪಡಿಸಿದ್ದಾರೆ - ಆರಗ ಜ್ಞಾನೇಂದ್ರ, ಸಚಿವ
ಇನ್ನು ಜನರೆಲ್ಲಾ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡರೂ ನಮಗೇನೂ ಸಮಸ್ಯೆ ಇಲ್ಲ.

ದೇಶದ ಭವಿಷ್ಯದ 25 ವರ್ಷದ ಪ್ರಗತಿಗೆ ಮಾರ್ಗಪಥ ರೂಪಿಸಲಾಗಿದ್ದು, ಅದರ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು - ಅಮಿತ್ ಶಾ, ಕೇಂದ್ರ ಸಚಿವ
ಈವರೆಗಿನ ಪ್ರಗತಿಯ ಸ್ವರೂಪ ಕಂಡು ಹೆದರಿ ನಡುಗುತ್ತಿರುವ ಜನತೆಯನ್ನು ಹೀಗೆಲ್ಲ ಹೇಳಿ ಮತ್ತಷ್ಟು ಹೆದರಿಸಬೇಡಿ ಸಾರ್.

ಗುಜರಾತ್ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಅಮಿತ್ ಶಾರನ್ನು ಸಿಎಂ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಲಿದೆ ಎಂಬುದು ನಿಜವೇ? -ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ದಿಲ್ಲಿಯ ಕಾರ್ಪೊರೇಷನ್ ಚುನಾವಣೆಯಲ್ಲಿ ಯಾವುದೋ ವಾರ್ಡ್‌ನಲ್ಲಿ ಕೇಜ್ರಿವಾಲ್ ಸ್ಪರ್ಧಿಸುತ್ತಾರೆ ಎಂಬ ವದಂತಿ ನಿಜವೇ?

ಕಳೆದ 8 ವರ್ಷಗಳಲ್ಲಿ ದೇಶದಲ್ಲಿ ಬಾಂಬ್ ಸ್ಫೋಟ, ಕೋಮುಗಲಭೆ ಪ್ರಕರಣಗಳು ನಡೆದಿಲ್ಲ. ಹಾಗಾಗಿ ಅಭಿವೃದ್ಧಿ ವೇಗ ಹೆಚ್ಚಿದೆ - ಕಿಶನ್ ರೆಡ್ಡಿ, ಕೇಂದ್ರ ಸಚಿವ
ಅಭಿವೃದ್ಧಿಯೆಲ್ಲವೂ ಡಾಲರ್ ಉದ್ಧಾರಕ್ಕಾಗಿ ನಡೆದಿದೆಯೇ ಹೊರತು ರೂಪಾಯಿಯ ಉದ್ಧಾರಕ್ಕಲ್ಲ.

ಸಾಮೂಹಿಕ ನಾಯಕತ್ವದಡಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಜೊತೆಗೆ, ಸಾಮೂಹಿಕ ವಲಸೆಯ ಪಿಡುಗಿಗೂ ಪರಿಹಾರ ಕಂಡುಕೊಳ್ಳಬೇಕು.

ಬೀದಿಬದಿ ವ್ಯಾಪಾರಿಗಳು ಮೊದಲನೇ ಹಂತದ ಸಾಲ ಮರುಪಾವತಿಸಿದಲ್ಲಿ ಎರಡನೇ ಹಂತದ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು - ರಘುಪತಿ ಭಟ್, ಶಾಸಕ
ಮೊದಲನೇ ಹಂತದ ಸಾಲ ಪಾವತಿಸುವುದಕ್ಕಾಗಿ ಅವರು ಎರಡನೇ ಹಂತದ ಸಾಲಕ್ಕೆ ಅರ್ಜಿ ಹಾಕಿದ್ದಾರೆ.

ಕಾಂಗ್ರೆಸ್‌ನಲ್ಲಿ ಸತ್ಯ ಹೇಳಲು ಕೆಲವರು ಮಡಿವಂತಿಕೆ ಮಾಡುತ್ತಾರೆ - ಬಿ.ಕೆ.ಹರಿಪ್ರಸಾದ್, ವಿಪಕ್ಷ ನಾಯಕ
ಸತ್ಯ ಹೇಳುವವರ ಬಗ್ಗೆ ಕಾಂಗ್ರೆಸ್ ಪಕ್ಷವೇ ಮಡಿವಂತಿಕೆ ಮಾಡುತ್ತಿದೆ ಎನ್ನುವ ಆರೋಪವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು