varthabharthi


ವಿಶೇಷ-ವರದಿಗಳು

ವಿವಾದಗಳಿಂದಲೇ ಸುದ್ದಿಯಾದ ಬಿಜೆಪಿಯ ನಿಷ್ಠಾವಂತ ನಾಯಕನಿಗೆ ಮಹತ್ವದ ಸ್ಥಾನವನ್ನು ನಿಷ್ಪಕ್ಷವಾಗಿ ನಿಭಾಯಿಸುವ ಸವಾಲು

ನೂತನ ಉಪರಾಷ್ಟ್ರಪತಿ ಜಗದೀಪ್ ಧನ್ಕರ್

ವಾರ್ತಾ ಭಾರತಿ : 8 Aug, 2022
ನಿಖಿಲ್ ಕೋಲ್ಪೆ

ನಿರೀಕ್ಷೆಯಂತೆಯೇ ಭಾರತದ ನೂತನ ಉಪ ರಾಷ್ಟ್ರಪತಿ ಯಾಗಿ ಭರ್ಜರಿ ಬಹುಮತದೊಂದಿಗೆ ಆಯ್ಕೆಯಾಗಿ ರುವ ಜಗದೀಪ್ ಧನ್ಕರ್ ಅವರನ್ನು ಸರಳವಾಗಿ ವಿವರಿಸ ಬೇಕೆಂದರೆ, ಅವರೊಬ್ಬ ಸದಾ ವಿವಾದಗಳ ಮೂಲಕ ಸುದ್ದಿಯಲ್ಲಿರುವ ವ್ಯಕ್ತಿ. ಭಾರತೀಯ ಜನತಾಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷದ ವರಿಷ್ಠರ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುವ ವಿಧೇಯ ನಾಯಕ , ಪಕ್ಷದ ವಿರೋಧಿಗಳನ್ನು ಸಾಂವಿಧಾನಿಕವಾಗಿಯೂ ಅಸಾಂವಿಧಾನಿಕವಾಗಿ ವಿರೋಧಿಸಲು ಯಾವತ್ತೂ ತುದಿಗಾಲಲ್ಲಿ ನಿಂತಿದ್ದ ಸುಶಿಕ್ಷಿತ, ಬುದ್ಧಿವಂತ ಜಗದೀಪ್ ಧನ್ಕರ್.

ಧನ್ಕರ್ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ಆಡಳಿತಾರೂಢ ಎನ್ ಡಿ ಎ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿ ಎಲ್ಲರ ಹುಬ್ಬೇರಿಸಿದ್ದರು. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಧನ್ಕರ್ ಆಯ್ಕೆಯ ಈ ನಿಗೂಢ ನಡೆ ಎಲ್ಲ ಪಕ್ಷದ ನಾಯಕರ, ರಾಜಕೀಯ ಪಂಡಿತರ ಅಂದಾಜು ಹಾಗೂ ಊಹಾಪೋಹಗಳನ್ನು ಬುಡಮೇಲು ಮಾಡಿತ್ತು. ಬಿಜೆಪಿಯಲ್ಲಿ ಅಷ್ಟೇನೂ ಪ್ರಭಾವಿಯಲ್ಲದ ನಾಯಕರಾಗಿದ್ದ ಧನ್ಕರ್ ಎಷ್ಟು ಅನಿರೀಕ್ಷಿತವಾಗಿ ಪಶ್ಚಿಮ ಬಂಗಾಳ ರಾಜ್ಯಪಾಲರಾದರೋ ಅಷ್ಟೇ ಅನಿರೀಕ್ಷಿತವಾಗಿ ಈಗ ದೇಶದ ಉಪರಾಷ್ಟ್ರಪತಿ ಸ್ಥಾನಕ್ಕೆ ತಲುಪಿದ್ದಾರೆ. ಪಶ್ಚಿಮ ಬಂಗಾಳದ 21ನೇ ರಾಜ್ಯಪಾಲರಾಗಿದ್ದ ನಾಲ್ಕು ವರ್ಷಗಳ ಅವಧಿಯಲ್ಲಿ ಅವರು ಸದಾ ವಿವಾದದಲ್ಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಾಲಿಗೆ ಮಗ್ಗುಲ ಮುಳ್ಳಾಗಿದ್ದರು. ರಾಜ್ಯಪಾಲರು ಹಾಗೂ ಸಿಎಂಗಳ ನಡುವೆ ಮುನಿಸು, ಶೀತಲ ಸಮರಗಳು ಭಾರತದಲ್ಲಿ ಹೊಸತೇನಲ್ಲ. ಆದರೆ ಮುಲಾಜಿಲ್ಲದೆ ಸದಾ ರಾಜ್ಯ ಸರಕಾರದೊಂದಿಗೆ ಕಚ್ಚಾಡುತ್ತಾ ಮುಖ್ಯಮಂತ್ರಿಯನ್ನೇ ನೇರವಾಗಿ ಗುರಿ ಮಾಡಿ ಜಗಳ ಕಾಯಲು ಸಂದರ್ಭ ಕಾಯುತ್ತಿದ್ದ ಇನ್ನೊಬ್ಬ ರಾಜ್ಯಪಾಲರನ್ನು ಬಹುಶಃ ಪಶ್ಚಿಮ ಬಂಗಾಳ ಕಂಡಿಲ್ಲ. ರಾಜ್ಯಪಾಲರಂತಹ ಸಾಂವಿಧಾನಿಕ ಹುದ್ದೆಯಲ್ಲಿದ್ದಾಗಲೂ ಟ್ವಿಟರ್‌ನಲ್ಲಿ ಸಕ್ರಿಯವಾಗಿದ್ದು, ಆಗಾಗ ಮಾಧ್ಯಮದ ಮುಂದೆ ಬರುತ್ತಿದ್ದ ಧನ್ಕರ್- ಭ್ರಷ್ಟಾಚಾರದ ಆರೋಪದಿಂದ ಹಿಡಿದು, ರಾಜಕೀಯ ಹಿಂಸಾಚಾರ, ಆಡಳಿತದ ರಾಜಕೀಕರಣ, ಸರಕಾರಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಆಡಳಿತದ ತನಕ ಹಲವು ವಿಷಯಗಳಲ್ಲಿ ನಿರಂತರವಾಗಿ ಮಮತಾ ಸರಕಾರ ಮತ್ತು ಅವರ ಪಕ್ಷವನ್ನು ಕಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಪ್ರತಿಪಕ್ಷ ಬಿಜೆಪಿಗಿಂತಲೂ ಬಹಳ ಹೆಚ್ಚು ಸರಕಾರವನ್ನು ಟೀಕಿಸಿ, ವಿರೋಧಿಸುತ್ತಾ ಇದ್ದುದರಿಂದ, ‘ರಾಜ್ಯಪಾಲ ಧನ್ಕರ್ ಅವರೇ ಪಶ್ಚಿಮ ಬಂಗಾಳದ ನಿಜವಾದ ಪ್ರತಿಪಕ್ಷ ನಾಯಕ’ ಎಂದು ತೃಣಮೂಲ ಕಾಂಗ್ರೆಸ್ ವ್ಯಂಗ್ಯವಾಗಿ ಛೇಡಿಸುತ್ತಿತ್ತು. ಇದು ಎಷ್ಟು ಅತಿರೇಕಕ್ಕೆ ಹೋಗಿತ್ತು ಎಂದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಟ್ವಿಟರ್‌ನಲ್ಲಿ ರಾಜ್ಯಪಾಲರನ್ನೇ ಬ್ಲಾಕ್ ಮಾಡುವ ವರೆಗೆ!

ಜನತಾದಳ, ಕಾಂಗ್ರೆಸ್‌ನಿಂದ ಬಿಜೆಪಿವರೆಗಿನ ಧನ್ಕರ್ ಪಯಣ

ಧನ್ಕರ್ ಅವರು ರಾಜಕೀಯ ಜೀವನ ಆರಂಭಿಸಿದ್ದು ಜನತಾದಳದ ಮೂಲಕ. 1989-91ರಲ್ಲಿ ಅವರು ರಾಜಾಸ್ಥಾನದ ಝುನ್ಝುನು ಕ್ಷೇತದ ಲೋಕಸಭಾ ಸದಸ್ಯರಾಗಿದ್ದರು. 1990ರಲ್ಲಿ ಎಪ್ರಿಲ್ ಮತ್ತು ನವೆಂಬರ್ 5ರ ನಡುವೆ ಸ್ವಲ್ಪ ಕಾಲ ವಿ.ಪಿ. ಸಿಂಗ್ ಅವರ ಜನತಾಪಕ್ಷ ಸರಕಾರದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1991ರಲ್ಲಿ ಅವರು ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿ ಅಜ್ಮೀರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 1993ರಲ್ಲಿ ಅವರು ಕಿಶನ್ ಗಡ್ ಕ್ಷೇತ್ರದಿಂದ ಆಯ್ಕೆಯಾಗಿ ರಾಜಸ್ಥಾನ ವಿಧಾನಸಭೆ ಪ್ರವೇಶಿಸಿದರು. ಆದರೆ, 1998ರಲ್ಲಿ ಮತ್ತೆ ಝುನ್ಝುನು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಮೂರನೇ ಸ್ಥ್ದಾನ ಪಡೆದರು.2003ರಲ್ಲಿ ಬಿಜೆಪಿ ಸೇರಿದ ಆವರಿಗೆ ಬಿಜೆಪಿ ಯಾವುದೇ ಚುನಾವಣೆಯಲ್ಲಿ ಟಿಕೆಟ್ ನೀಡಲಿಲ್ಲ. ಬದಲಾಗಿ ಪಕ್ಷದ ಸಂಘಟನೆಯಲ್ಲಿಯೇ ತೊಡಗಿಸಿತು. ಅವರೂ ಚಾ-ಚೂ ಎನ್ನದೆ ದುಡಿದರು. ಪಕ್ಷ ಸೇರಿ 13 ವರ್ಷಗಳ ನಂತರ 2016ರಲ್ಲಿ ಅವರನ್ನು ಬಿಜೆಪಿಯ ಕಾನೂನು ಮತ್ತು ನ್ಯಾಯಾಂಗ ವ್ಯವಹಾರಗಳ ವಿಭಾಗದ ರಾಷ್ಟ್ರೀಯ ಸಂಚಾಲಕರಾಗಿ ನೇಮಕ ಮಾಡಲಾಯಿತು. ಚುನಾವಣಾ ರಾಜಕೀಯದಿಂದ ದೂರ ಉಳಿದು ನಿಷ್ಠೆಯಿಂದ ದುಡಿದುದಕ್ಕೆ ಬಹುಮಾನವೋ ಎಂಬಂತೆ ಅವರನ್ನು 2019ರ ಜುಲೈಯಲ್ಲಿ ಏಕಾಏಕಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕ ಮಾಡಲಾಯಿತು. ಅವರು ನಿಜಕ್ಕೂ ಪ್ರಸಿದ್ಧಿಗೆ ಬಂದದ್ದು ಈ ಅವಧಿಯಲ್ಲಿಯೇ. ಅವರ ವೈಯಕ್ತಿಕ ಜೀವನದ ಬಗ್ಗೆ ಚುಟುಕಾಗಿ ತಿಳಿದುಕೊಂಡು ನಂತರ ಆ ಕುರಿತ ವಿವರಗಳನ್ನು ಪರಿಶೀಲಿಸೋಣ.

ವೈಯಕ್ತಿಕ ಜೀವನ

71 ವರ್ಷ ಪ್ರಾಯದ ಜಗದೀಪ್ ಧನ್ಕರ್, ರಾಜಸ್ಥಾನದ ಝುನ್ಝುನು ಜಿಲ್ಲೆಯ ಕಿತಾನ ಎಂಬಲ್ಲಿ 18 ಮೇ, 1951ರಲ್ಲಿ ಜಾಟ್ ಕುಟುಂಬದಲ್ಲಿ ಗೋಕಲ್ ಚಂದ್ ಮತ್ತು ಕೇಸರಿ ದೇವಿ ದಂಪತಿಗಳ ಮಗನಾಗಿ ಜನಿಸಿದರು. ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕಿತಾನ ಮತ್ತು ಘರ್ದಾನದ ಸರಕಾರಿ ಶಾಲೆಗಳಲ್ಲಿ ಮುಗಿಸಿದರು. ನಂತರ ಚಿತ್ತೋಗಡದ ಸೈನಿಕ ಶಾಲೆಯಲ್ಲಿ ಕಲಿತರು. ರಾಜಸ್ಥಾನ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ ಮತ್ತು ಎಲ್‌ಎಲ್‌ಬಿ ಪದವಿ ಪಡೆದರು. 1979 ರಲ್ಲಿ ಸುದೇಶ್ ಧನ್ಕರ್ ಅವರನ್ನು ಮದುವೆಯಾದರು. ಅವರಿಗೆ ಕಾಮನಾ ಎಂಬ ಮಗಳಿದ್ದಾರೆ.

1979ರಲ್ಲಿ ವಕೀಲ ವೃತ್ತಿ ಆರಂಭಿಸಿದ ಅವರನ್ನು 1990ರಲ್ಲಿ ರಾಜಸ್ಥಾನ ಹೈಕೋರ್ಟ್ ಹಿರಿಯ ವಕೀಲ ಎಂದು ನಾಮಕರಣ ಮಾಡಿತು. ಅವರು ರಾಜ್ಯಪಾಲರಾಗಿ ನೇಮಕವಾಗುವ ತನಕ ಮುಖ್ಯವಾಗಿ ಸುಪ್ರೀಂ ಕೋರ್ಟಿನಲ್ಲಿಯೇ ವಾದಿಸುತ್ತಿದ್ದರು. ದೇಶಾದ್ಯಂತ ವಿವಿಧ ಹೈಕೋರ್ಟ್‌ಗಳಲ್ಲೂ ವಾದಿಸಿರುವ ಧನ್ಕರ್ ಅವರು ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅತ್ಯಂತ ವಿವಾದಿತ ರಾಜ್ಯಪಾಲ

ಜುಲೈ 30, 2019ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಧನ್ಕರ್, ಬಿಜೆಪಿ ಪ್ರತಿನಿಧಿಯಂತೆಯೇ ವರ್ತಿಸುತ್ತಿದ್ದ ಹಿಂದಿನ ರಾಜ್ಯಪಾಲ ಕೇಸರಿನಾಥ ತ್ರಿಪಾಠಿಯವರನ್ನು ಮೀರಿಸಿದರು.

ತೃಣಮೂಲ ಕಾಂಗ್ರೆಸ್ ಮುಸ್ಲಿಮರನ್ನು ಓಲೈಸುತ್ತಿದೆ ಎಂಬ ತ್ರಿಪಾಠಿ ಆರೋಪವನ್ನೇ ಧನ್ಕರ್ ಎತ್ತಿಕೊಂಡರು. ಅದೇ ಕೋಮುವಾದಿ ಮತ್ತು ವಿಭಜನಕಾರಿ ಆರೋಪದಿಂದಲೇ ತಮ್ಮ ಅಧಿಕಾರಾವಧಿ ಆರಂಭಿಸಿದರು. ಜಾಧವಪುರ ವಿಶ್ವವಿದ್ಯಾನಿಲಯದಲ್ಲಿ ಎಡಪಂಥೀಯ ವಿದ್ಯಾರ್ಥಿಗಳು ಕೇಂದ್ರ ಮಂತ್ರಿಯಾಗಿದ್ದ ಬಾಬುಲ್ ಸುಪ್ರಿಯೋ ಅವರಿಗೆ ದಿಗ್ಬಂಧನ ವಿಧಿಸಿದ ಪ್ರಕರಣದಲ್ಲಿ ತೀವ್ರ ಬಿಕ್ಕಟ್ಟು ಉಂಟಾಗಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯ ನಡುವೆ ಪತ್ರಗಳ ಮೂಲಕ ದೀರ್ಘಕಾಲ ಕೆಸರೆರಚಾಟ ನಡೆಯಿತು. ಗೌಪ್ಯವಾಗಿರಬೇಕಾದ ಪತ್ರಗಳು ಹೊರಟ ಸ್ವಲ್ಪ ಹೊತ್ತಿನಲ್ಲೇ ಸಾರ್ವಜನಿಕವಾಗುತ್ತಿದ್ದವು.

2020ರ ಎಪ್ರಿಲ್‌ನಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ನಡೆದ ಸಂಘರ್ಷದಲ್ಲಿ ತಲೆಹಾಕಿದ ಧನ್ಕರ್, ವೈಯಕ್ತಿಕವಾಗಿ ಮಮತಾ ಬ್ಯಾನರ್ಜಿಯವರ ಮೇಲೆ ಮಾತಿನ ದಾಳಿ ಮಾಡಿದ್ದರು. ಅವರು ಕಳಿಸಿದ್ದ ಒಂದು ಟೆಕ್ಸ್ಟ್ ಸಂದೇಶದಿಂದ ಮಮತಾ ಎಷ್ಟು ಕಿಡಿಕಿಡಿಯಾಗಿದ್ದರು ಎಂದರೆ, ನಾನು ಭಾರತದ ಒಂದು ಸ್ವಾಭಿಮಾನಿ ರಾಜ್ಯದ ಚುನಾಯಿತ ಮುಖ್ಯಮಂತ್ರಿ ಎಂದು ನೀವು ಮರೆತಂತಿದೆ. ಹಾಗೆಯೇ ನೀವೊಬ್ಬ ನಾಮಕರಣಗೊಂಡ ರಾಜ್ಯಪಾಲ ಎಂಬುದನ್ನು ಮರೆತಂತಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ- ತಾವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದವಳು, ನೀವು ಕೇವಲ ನಾಮಕರಣಗೊಂಡವರು ಎಂದು ನೆನಪಿಸಿದ್ದರು. ಈ ಕೊಳಕು ಕೆಸರೆರೆಚಾಟ, ಪತ್ರಗಳು ಮತ್ತು ಮಾಧ್ಯಮಗೋಷ್ಟಿಗಳ ಮೂಲಕ ಬಹಳ ಕಾಲ ಮುಂದುವರಿದಿತ್ತು. 2021ರಲ್ಲಿ ತೃಣಮೂಲ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದ ನಂತರವೂ ಚುನಾವಣೋತ್ತರ ಹಿಂಸಾಚಾರದ ಕುರಿತು ಈ ಜಗಳ ಮುಂದುವರಿದಿತ್ತು. ಜೊತೆಗೆ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು ಮತ್ತು ಇತರ ಸರಕಾರಿ ಅಧಿಕಾರಿಗಳನ್ನು ನೇರವಾಗಿ ಬೆದರಿಸುತ್ತಿದ್ದ ಆರೋಪವೂ ಧನ್ಕರ್ ಮೇಲಿತ್ತು . ಹಳೆಯ ಇಬ್ಬರು ಮಂತ್ರಿಗಳ ಬಂಧನದ ಸಿಬಿಐ ಬೇಡಿಕೆಗೆ ವಿಧಾನಸಭಾ ಸ್ಪೀಕರ್ ಬಿಮಾನ್ ಬ್ಯಾನರ್ಜಿಯವರ ಅಧಿಕಾರವನ್ನು ಉಲ್ಲಂಘಿಸಿ ಅಂಗೀಕಾರ ನೀಡಿದ್ದು ಕೂಡಾ ಭಾರೀ ವಿವಾದವಾಗಿತ್ತು. ನಂತರ ಸುಪ್ರೀಂ ಕೋರ್ಟ್ ಇಬ್ಬರಿಗೂ ಜಾಮೀನು ನೀಡಿತ್ತು.

ಕುಖ್ಯಾತ ಜೈನ್ ಹವಾಲ ಪ್ರಕರಣದಲ್ಲಿಯೂ ಧನ್ಕರ್ ಅವರ ಹೆಸರು ಮೂಲ ಆರೋಪಪಟ್ಟಿಯಲ್ಲಿ ಇತ್ತು. ಅದನ್ನು ಧನ್ಕರ್ ತಮ್ಮ ಪ್ರಭಾವ ಬಳಸಿ ತೆಗೆಸಿದ್ದರುಎಂದು ಗಂಭೀರ ಆರೋಪ ಮಾಡಿದ್ದರು ಮಮತಾ ಬ್ಯಾನರ್ಜಿ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳು ದೇಶದ ಅತ್ಯುನ್ನತ ಗೌರವದ ಸಾಂವಿಧಾನಿಕ ಹುದ್ದೆಗಳು. ಪಕ್ಷಾತೀತ ಸ್ಥಾನಗಳು. ಅದರಲ್ಲೂ ಉಪರಾಷ್ಟ್ರಪತಿಯವರು ರಾಜ್ಯಸಭೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಬೇಕು. ಪ್ರತಿಪಕ್ಷ ಸದಸ್ಯರೊಂದಿಗೆ ನೇರವಾಗಿ ವ್ಯವಹರಿಸಬೇಕು. ಹೀಗಿರುವಾಗ, ತಮ್ಮ ಈ ಹಿಂದಿನ ಹುದ್ದೆಗಳಲ್ಲಿ ಮಾಡಿಕೊಂಡಿರುವ ವಿವಾದಗಳ ಹಿನ್ನೆಲೆಯಲ್ಲಿ ಈ ಮಹತ್ವದ ಹುದ್ದೆಯನ್ನು ನಿಷ್ಪಕ್ಷವಾಗಿ ನಿರ್ವಹಿಸುವುದು ಜಗದೀಪ್ ಧನ್ಕರ್ ಅವರಿಗೆ ಬಹಳ ದೊಡ್ಡ ಸವಾಲು. ಧನ್ಕರ್ ಅವರು ರಾಜಸ್ಥಾನದ ಜಾಟ್ ನಾಯಕರಾದುದರಿಂದ, ಬರುವ ವರ್ಷ ಅಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿ ಈ ಆಯ್ಕೆ ಮಾಡಿದೆ ಎಂದೂ ಹೇಳಲಾಗುತ್ತಿದೆ. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವಾಗ ತಾನು ರಬ್ಬರ್ ಸ್ಟ್ಯಾಂಪ್ ಅಲ್ಲ ಎಂದು ಜಗದೀಪ್ ಧನ್ಕರ್ ಆಗಾಗ ಹೇಳುತ್ತಿದ್ದರು. ಈಗ ಉಪರಾಷ್ಟ್ರಪತಿಯಾಗಿ ಅವರೇನಾಗುತ್ತಾರೆ ? ರಾಜ್ಯಸಭೆಯ ಸಭಾಪತಿ ಸ್ಥಾನದಲ್ಲಿ ಕುಳಿತು ಅವರು ಹೇಗೆ ಆ ಮಹತ್ವದ ಹುದ್ದೆಯನ್ನು ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)