varthabharthi


ರಾಷ್ಟ್ರೀಯ

ಚೀನೀ ಸ್ಮಾರ್ಟ್ ಫೋನ್‌ಗಳಿಗೆ ನಿರ್ಬಂಧ: ರಿಲಯನ್ಸ್ ಜಿಯೋಗೆ ನೆರವಾಗಲು ಈ ನಡೆ ಎಂದ ಜನತೆ !

ವಾರ್ತಾ ಭಾರತಿ : 8 Aug, 2022

ಹೊಸದಿಲ್ಲಿ: 12,000 ರೂಪಾಯಿಗಳಿಗಿಂತ ಅಗ್ಗದ ಫೋನ್‌ಗಳನ್ನು ಮಾರಾಟ ಮಾಡುವ  ಚೈನೀಸ್ ಸ್ಮಾರ್ಟ್‌ಫೋನ್ ತಯಾರಕರನ್ನು ನಿರ್ಬಂಧಿಸಲು ಭಾರತವು ಹೊರಟಿರುವುದು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ 12 ಸಾವಿರ ರುಪಾಯಿಗಿಂತ ಕೆಳಗಿನ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುವುದಾಗಿ ಹೇಳಿದ ಹಾಗು  ಭಾರತ ಸರ್ಕಾರವು ಚೈನಾ ಕಂಪೆನಿಗಳ ಅಗ್ಗದ ಫೋನ್‌ಗಳ ಮೇಲೆ ನಿರ್ಬಂಧ ಹೇರಲು ಹೊರಟಿರುವ  ಸಮಯ ಒಂದೇ ಆಗಿರುವ ಕಾರಣಗಳ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ.

ಈ ಬಗ್ಗೆ ಆರ್‌ಟಿಐ ಕಾರ್ಯಕರ್ತ, ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್‌ ಗೋಖಲೆ ಟ್ವೀಟ್‌ ಮಾಡಿದ್ದು, ಎರಡು ಸುದ್ದಿಯನ್ನು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ರಿಲಯನ್ಸ್‌ ಜಿಯೋ ಅಗ್ಗದ ಫೋನ್‌ ಅನ್ನು ಪರಿಚಯಿಸುತ್ತಿದೆ ಹಾಗೂ ಕೇಂದ್ರ ಸರ್ಕಾರ ಚೈನಾ ಕಂಪೆನಿಗಳ ಅಗ್ಗದ ಫೋನ್‌ಗಳ ಮೇಲೆ ನಿರ್ಬಂಧ ಹೇರಲು ಯೋಜಿಸುತ್ತಿದೆ ಎಂಬ ಸುದ್ದಿಗಳ ತುಣುಕನ್ನು ಹಂಚಿಕೊಂಡಿರುವ ಸಾಕೇತ್‌ ಗೋಖಲೆ, ʼಆಪ್‌ ಕ್ರೊನೋಲಜಿ ಸಮಜಿಯೇ.., ಪ್ರಧಾನಿ ಮೋದಿ ಅವರು ತಮ್ಮ ಬಾಸ್/ಸ್ನೇಹಿತರಿಗೆ ಅತ್ಯುತ್ತಮ ಸೇಲ್ಸ್‌ ಎಕ್ಸಿಕ್ಯುಟಿವ್‌ ಆಗಿದ್ದಾರೆʼ ಎಂದು ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದಾರೆ.

ಈ ಕುರಿತ ವರದಿಯನ್ನು ಹಂಚಿಕೊಂಡಿರುವ ಹಿರಿಯ ಪತ್ರಕರ್ತ ಪರಂಜೋಯ್‌ ಗುಹಾ ಥಕುರ್ತ (Paranjoy Guha Thakurta) ಅವರು ಇದರಿಂದ ರಿಲಯನ್ಸ್‌ ದೊಡ್ಡ ಲಾಭ ಮಾಡಿಕೊಳ್ಳಲಿದೆ ಎಂದು ಬರೆದಿದ್ದಾರೆ.


ಈ ಹಿಂದೆ ಜಿಯೋ ಮೇಲೆ ಫೇಸ್‌ಬುಕ್ ಬಂಡವಾಳ ಹೂಡಿದ್ದಾಗಲೂ ಇಂತಹದ್ದೇ ಗುಮಾನಿಗಳು ಎದ್ದಿದ್ದವು. ಅಂಬಾನಿ ಒಡೆತನದ ಜಿಯೋದ ಮೇಲೆ ಫೇಸ್‌ಬುಕ್ ಬಂಡವಾಳ ಹೂಡುತ್ತಿರುವ ವೇಳೆಯಲ್ಲಿಯೇ, ಕೇಂದ್ರ ಸರ್ಕಾರ ಟಿಕ್‌ಟಾಕ್‌ ಬ್ಯಾನ್‌ ಮಾಡಿತ್ತು. ಅದೇ ವೇಳೆಗೆ ಫೇಸ್‌ಬುಕ್‌ ಅಂಗಸಂಸ್ಥೆಯಾದ ಇನ್ಸ್‌ಟಗ್ರಾಮ್‌ ಟಿಕ್‌ಟಾಕ್‌ ಮಾದರಿಯದ್ದೇ ರೀಲ್ಸ್‌ ಅನ್ನು ಪರಿಚಯಿಸಿತ್ತು. ಒಟ್ಟಾರೆ ಕೇಂದ್ರ ಸರ್ಕಾರದ ಟಿಕ್‌ಟಾಕ್‌ ಮೇಲಿನ ನಿಷೇಧವು ಇನ್ಸ್ಟಾಗ್ರಾಮ್‌ ಮೂಲಕ ಫೇಸ್‌ಬುಕ್‌ ಗೆ ದೊಡ್ಡ ಲಾಭವನ್ನು ತಂದಿತ್ತು. ಸ್ವಾಭಾವಿಕವಾಗಿ ಅದೇ ವೇಳೆ ಫೇಸ್‌ಬುಕ್ ಹೂಡಿಕೆ ಹಾಗೂ ಕೇಂದ್ರದ ನಿಷೇಧವು ಹಲವು ಊಹಾಪೋಹಗಳನ್ನು ಸೃಷ್ಟಿಸಿತ್ತಾದರೂ, ಗಾಲ್ವಾನ್‌ ಕಣಿವೆಯ ಸಂಘರ್ಷದ ಹಿನ್ನೆಲೆಯಲ್ಲಿ ಚೀನಾ ಮೇಲಿನ ಪ್ರತೀಕಾರದ ಕ್ರಮವೆಂದೇ ಟಿಕ್‌ಟಾಕ್‌ ಮೇಲಿನ ನಿಷೇಧವನ್ನು ಪರಿಗಣಿಸಲಾಗಿತ್ತು.

ಇನ್ನು, ಅಗ್ಗದ ಫೋನ್‌ಗಳ ಮೇಲೆ ನಿರ್ಬಂಧ ಹೇರುವ ಕೇಂದ್ರ ಸರ್ಕಾರದ ಯೋಜನೆಗಳು ಶಓಮಿ (Xiaomi) ಸೇರಿದಂತೆ ಈಗಾಗಲೇ ಆ ಮೌಲ್ಯದಲ್ಲಿ ಫೋನ್‌ಗಳನ್ನು ಮಾರಾಟ ಮಾಡಿ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿರುವ ಬ್ರ್ಯಾಂಡ್‌ಗಳಿಗೆ ದೊಡ್ಡ ಹೊಡೆತವನ್ನು ನೀಡುತ್ತದೆ ಎಂದು ಅಂದಾಜಿಸಲಾಗಿದೆ.

ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಾಗಿದ್ದು, ಅಗ್ಗದ ಫೋನ್‌ಗಳ ಮೇಲಿನ ನಿರ್ಬಂಧವು ಚೈನಾ ಕಂಪೆನಿಗಳನ್ನು ಭಾರತದ ಮಾರುಕಟ್ಟೆಯಿಂದ ಹೊರಹಾಕುವ ಗುರಿಯನ್ನು ಹೊಂದಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿರುವುದಾಗಿ ndtv.com ವರದಿ ಮಾಡಿದೆ. 

ಭಾರತದ ಆರಂಭಿಕ ಮಟ್ಟದ ಮಾರುಕಟ್ಟೆಯಿಂದ ಚೈನಾ ಕಂಪೆನಿಗಳನ್ನು ಹೊರಗಿಡುವುದು ಶಯೋಮಿ ಸೇರಿದಂತೆ ಚೈನಾ ಮೂಲದ ಬ್ರ್ಯಾಂಡ್‌ಗಳಿಗೆ ದೊಡ್ಡ ಹಾನಿಯಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಅಂತಹ ಕಂಪೆನಿಗಳು ಈ ವರ್ಗದ ಫೋನ್‌ಗಳನ್ನು ಮಾರುಕಟ್ಟೆಗೆ ಬಿಟ್ಟು ತನ್ನ ಬೆಳವಣಿಗೆಯನ್ನು ಹೆಚ್ಚಿಸಲು ಭಾರತದ ಮೇಲೆ ಹೆಚ್ಚು ಅವಲಂಬಿತವಾಗಿವೆ . ಮಾರುಕಟ್ಟೆ ಟ್ರ್ಯಾಕರ್ ಕೌಂಟರ್‌ಪಾಯಿಂಟ್‌ನ ಪ್ರಕಾರ, ಜೂನ್ 2022 ರವರೆಗಿನ ತ್ರೈಮಾಸಿಕದಲ್ಲಿ ಭಾರತದ ಮಾರಾಟದ ಮೂರನೇ ಒಂದು ಭಾಗ 12 ಸಾವಿರ ರುಪಾಯಿಗಿಂತ ಕಡಿಮೆ ಇರುವ ಸ್ಮಾರ್ಟ್‌ಫೋನ್‌ಗಳದ್ದಾಗಿವೆ. ಅದರಲ್ಲಿ  80% ರಷ್ಟು ಪಾಲು ಚೀನಾ ಕಂಪೆನಿಗಳೇ ಹೊಂದಿವೆ.
 

ಇದನ್ನೂ ಓದಿ: ಫೇಸ್‌ಬುಕ್ ಒಪ್ಪಂದ ಕುರಿತು ಮಾಹಿತಿ ನೀಡದ ರಿಲಯನ್ಸ್‌ ಸಂಸ್ಥೆಗೆ ಸೆಬಿಯಿಂದ ರೂ. 30 ಲಕ್ಷ ದಂಡ

ಈಗಾಗಲೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ಸಂಸ್ಥೆಗಳಾದ ಶಯೋಮಿ, ವಿವೋ, (oppo) ಗಳಿಗೆ ಕಂಟಕ ಬಂದಿದ್ದು, ತೆರಿಗೆ ವಂಚನೆ, ಮನಿ ಲಾಂಡರಿಂಗ್ ಆರೋಪಗಳಿಗೆ ಗುರಿಯಾಗಿವೆ. Huawei Technologies Co. ಮತ್ತು ZTE Corp. ಟೆಲಿಕಾಂ ಉಪಕರಣಗಳನ್ನು ನಿಷೇಧಿಸಲು ಸರ್ಕಾರವು ಈ ಹಿಂದೆ ಅನಧಿಕೃತ ವಿಧಾನಗಳನ್ನು ಬಳಸಿದೆ. ಚೀನೀ ನೆಟ್‌ವರ್ಕಿಂಗ್ ಗೇರ್ ಅನ್ನು ನಿಷೇಧಿಸುವ ಯಾವುದೇ ಅಧಿಕೃತ ನೀತಿ ಇಲ್ಲದಿದ್ದರೂ, ಅನಧಿಕೃತ ಪರ್ಯಾಯಗಳನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಎನ್‌ಡಿಟಿವಿ ವರದಿ ಹೇಳಿದೆ.

ಅದಾಗ್ಯೂ,  ಈ ಕ್ರಮವು ದೊಡ್ಡ ಬೆಲೆಯ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿರುವ Apple Inc. ಅಥವಾ Samsung Electronics Co. ಸಂಸ್ಥೆಗಳ ಮೇಲೆ ಪರಿಣಾಮ ಬೀರದು.   

ಲಾವಾ ಮತ್ತು ಮೈಕ್ರೋಮ್ಯಾಕ್ಸ್‌ನಂತಹ ದೇಶೀ ಸ್ಮಾರ್ಟ್‌ಫೋನ್ ಕಂಪನಿಗಳು ಭಾರತದ‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ತಮ್ಮ ಛಾಪು ಮೂಡಿಸಲು ಇದೂ ಒಂದು ಅವಕಾಶವಾಗುತ್ತದೆಯೇ ಎಂಬ ಚರ್ಚೆಗಳೂ ಈಗಾಗಲೇ ಚಾಲ್ತಿಗೆ ಬಂದಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)