varthabharthi


ಬೆಂಗಳೂರು

BBMP ವಾರ್ಡ್ ಮೀಸಲಾತಿ; ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ ತಪ್ಪಿಸಲು ಸಂಚು: ಮಾಜಿ ಕಾರ್ಪೊರೇಟರ್​ಗಳ ಆಕ್ರೋಶ

ವಾರ್ತಾ ಭಾರತಿ : 9 Aug, 2022
ಪ್ರಕಾಶ್ ಸಿ. ರಾಮಜೋಗಿಹಳ್ಳಿ

ಬೆಂಗಳೂರು, ಆ.9: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (BBMP) ಚುನಾವಣೆಗೆ ವಾರ್ಡ್ ಮೀಸಲಾತಿ ಪಟ್ಟಿಯನ್ನು ಜನಸಂಖ್ಯೆಯನ್ನು ಆಧರಿಸದೆ, ಅವೈಜ್ಞಾನಿಕ ರೀತಿಯಲ್ಲಿ ಪ್ರಕಟಿಸಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಅಲ್ಲದೆ, ಮುಸ್ಲಿಮ್ ಸಮುದಾಯವನ್ನು ರಾಜಕೀಯವಾಗಿ ತುಳಿಯುವ ಉದ್ದೇಶದಿಂದಲೇ, ಬಿಜೆಪಿಯ ಮೇಯರ್ ಆಯ್ಕೆಗೆ ಅನುಕೂಲವಾಗುವಂತೆ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ ಎಂಬ ದೂರುಗಳು ಕೇಳಿಬಂದಿದೆ.

ಸುಪ್ರೀಂ ಕೋರ್ಟ್ ಗಡುವಿನ ಹಿನ್ನೆಲೆ ಯಲ್ಲಿ ನಗರಾಭಿವೃದ್ಧಿ ಇಲಾಖೆ ತರಾತುರಿ ಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಾರ್ಡ್ ಮೀಸಲಾತಿಯ ಪಟ್ಟಿ ಪ್ರಕಟಿಸಿದೆ. ಆ ಮೀಸಲಾತಿ ಪಟ್ಟಿಯನ್ನು ಅಂಗೀಕರಿಸಿದರೆ ಹಲವು ಮಂದಿ ಮಾಜಿ ಕಾರ್ಪೊರೇಟರ್ಗಳು ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶವೇ ಇರುವುದಿಲ್ಲ. ಮಾತ್ರವಲ್ಲ, ಮುಸ್ಲಿಮ್ ಬಾಹುಳ್ಯ ವಾರ್ಡ್ ಗಳಲ್ಲಿ ಎಸ್ಸಿ-ಎಸ್ಟಿ, ಮಹಿಳೆ ಮತ್ತು ಸಾಮಾನ್ಯ ವರ್ಗದವರಿಗೆ ಮೀಸಲಾತಿ ಕಲ್ಪಿಸಿರುವುದಕ್ಕೆ ಮುಸ್ಲಿಮ್ ಸಮುದಾಯದ ಮಾಜಿ ಕಾರ್ಪೊರೇಟರ್ಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  BBMP ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಕಟ; ಇಲ್ಲಿದೆ ಸಂಪೂರ್ಣ ಮಾಹಿತಿ

ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೆಂಕಟೇಶಪುರ ವಾರ್ಡ್ ನಲ್ಲಿ ಒಟ್ಟು ಸುಮಾರು 39,800 ಮತಗಳಿದ್ದು, ಆ ಪೈಕಿ ಮುಸ್ಲಿಮ್ ಸಮುದಾಯದ 28 ಸಾವಿರಕ್ಕೂ ಅಧಿಕ ಮತಗಳಿವೆ. ಆದರೆ, ಈ ವಾರ್ಡ್ ಹಿಂದುಳಿದ ವರ್ಗದ ಪ್ರವರ್ಗ ‘ಬಿ’ ಒಕ್ಕಲಿಗ ಸಮುದಾಯಕ್ಕೆ ಮೀಸಲಿಡಲಾಗಿದೆ. ಅದೇ ರೀತಿಯಲ್ಲಿ ಕೆ.ಜಿ.ಹಳ್ಳಿ ವಾರ್ಡ್ನಲ್ಲಿಯೂ ಮುಸ್ಲಿಮ್ ಮತದಾರರು ಹೆಚ್ಚಿದ್ದರೂ ಆ ವಾರ್ಡ್ನಲ್ಲಿ ಪರಿಶಿಷ್ಟ ಪಂಗಡ(ಎಸ್ಟಿ)ದ ಮಹಿಳೆಗೆ ಮೀಸಲಿಡಲಾಗಿದೆ.

ಹೀಗಾಗಿ ಹಲವು ವಾರ್ಡ್ ಗಳಿಂದ ಈ ಹಿಂದೆ ಸ್ಪರ್ಧಿ ಸಿದ್ದ ಮುಸ್ಲಿಮ್ ಸಮುದಾಯದ ಹದಿನೈದಕ್ಕೂ ಹೆಚ್ಚು ಮಂದಿ ಮಾಜಿ ಕಾರ್ಪೊರೇಟರ್ಗಳು ಸ್ಪರ್ಧಿಸಲು ಸಾಧ್ಯ ವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮನೋರಾಯನಪಾಳ್ಯ ವಾರ್ಡ್ನಿಂದ ಸ್ಪರ್ಧಿಸುತ್ತಿದ್ದ ಅಬ್ದುಲ್ ವಾಜಿದ್ ಸ್ಪರ್ಧಿ ಸಲು ಸಾಧ್ಯವಾಗುವುದಿಲ್ಲ. ಆ ವಾರ್ಡ್ ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾಗಿದೆ. ಅದೇ ರೀತಿಯಲ್ಲಿ ಪುಲಕೇಶಿನಗರ, ಎಸ್.ಕೆ.ಗಾರ್ಡ್ನ್, ಭಾರತಿನಗರ, ಬಾಪೂಜಿ ನಗರ, ಪಾದರಾಯನಪುರ, ಜಗಜೀವನರಾಂ ನಗರ, ಗುರಪ್ಪನ ಪಾಳ್ಯ ಸೇರಿದಂತೆ ಹಲವು ವಾರ್ಡ್ಗಳ ಮೀಸಲಾತಿಯಿಂದ ಮುಸ್ಲಿಮ್ ಸಮುದಾಯವನ್ನು ವಂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

2010ರಲ್ಲಿ ಬಿಬಿಎಂಪಿಯ ಒಟ್ಟು 198 ವಾರ್ಡ್ ಗಳ ಪೈಕಿ ಮುಸ್ಲಿಮ್ ಸಮುದಾ ಯದ 11 ಮಂದಿ ಕಾರ್ಪೊರೇಟರ್ಗಳು ಆಯ್ಕೆಯಾಗಿದ್ದರು. 2015ರಲ್ಲಿ ಆ ಸಂಖ್ಯೆ 16ಕ್ಕೆ ಏರಿತ್ತು. ಬೆಂಗಳೂರು ನಗರದಲ್ಲಿ ಶೇ.14ರಷ್ಟು ಜನ ಸಂಖ್ಯೆ ಇದ್ದು, ಕನಿಷ್ಠ 25ಕ್ಕೂ ಹೆಚ್ಚು ಮಂದಿ ಕಾರ್ಪೊ ರೇಟರ್ ಗಳು ಆಯ್ಕೆಯಾಗಬೇಕಿತ್ತು. ಇದೀಗ ವಾರ್ಡ್ ಗಳ ಸಂಖ್ಯೆಯನ್ನು 243 ಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ, ಮುಸ್ಲಿಮರಿಗೆ 25 ರಿಂದ 35 ಸ್ಥಾನಗಳಲ್ಲಿ ಪ್ರಾತಿನಿಧ್ಯ ಸಿಗಬೇಕಿದೆ. ಆದರೆ, ವಾರ್ಡ್ ಮೀಸಲಾತಿ ಅವೈಜ್ಞಾನಿಕವಾಗಿ ಪ್ರಕಟಿಸಿರುವುದರಿಂದ 10ರಿಂದ 15ಮಂದಿ ಆಯ್ಕೆಯಾಗುವುದು ದುಸ್ತರವಾಗಿದೆ ಎಂಬುದು ಮಾಜಿ ಕಾರ್ಪೊರೇಟರ್ ಗಳ ಅಳಲಾಗಿದೆ.

ಬಿಬಿಎಂಪಿಯ ಒಟ್ಟು 243 ವಾರ್ಡ್ ಗಳ ಪೈಕಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಒಟ್ಟು 130 ಸ್ಥಾನ ಗಳನ್ನು ಮೀಸಲಿಡಲಾಗಿದೆ. ಹಿಂದುಳಿದ ವರ್ಗದ ಅಭ್ಯರ್ಥಿ ಗಳಿಗೆ 81, ಪರಿಶಿಷ್ಟ ಜಾತಿ(ಎಸ್ಸಿ) ಅಭ್ಯರ್ಥಿಗಳಿಗೆ 28 ಮತ್ತು ಪರಿಶಿಷ್ಟ ಪಂಗಡ(ಎಸ್ಟಿ) ಅಭ್ಯರ್ಥಿಗಳಿಗೆ 4 ಸ್ಥಾನಗಳನ್ನು ಮೀಸಲಿಡಲಾಗಿದೆ. ಒಟ್ಟು 243 ಸ್ಥಾನಗಳ ಪೈಕಿ ಶೇ.50ರಷ್ಟು ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.


ಮುಸ್ಲಿಮ್ ಅಭ್ಯರ್ಥಿಗಳು ಗೆಲ್ಲುವ ಅವಕಾಶವಿರುವ ವಾರ್ಡ್ ಗಳನ್ನು ಎಸ್ಸಿ-ಎಸ್ಟಿ, ಮಹಿಳೆ ಅಥವಾ ಇತರ ಸಮುದಾಯಗಳಿಗೆ ಮೀಸಲಿಡಲಾಗಿದೆ. ನಾವು ಅದನ್ನು ವಿರೋಧಿಸುತ್ತೇವೆ ಮತ್ತು ಅದರ ವಿರುದ್ಧ ಆಕ್ಷೇಪಣೆ ಸಲ್ಲಿಸಲಿದ್ದೇವೆ. ಇದು ಅವೈಜ್ಞಾನಿಕ, ಮಾತ್ರವಲ್ಲ ಅಸಾಂವಿಧಾನಿಕ. ಇತ್ತೀಚೆಗಷ್ಟೇ ಶೈಕ್ಷಣಿಕವಾಗಿ ಮುನ್ನೆಲೆಗೆ ಬರುತ್ತಿರುವ ಮುಸ್ಲಿಮ್ ಸಮುದಾಯವನ್ನು ಶಿಕ್ಷಣದಿಂದ ವಂಚಿಸಲು ಹಿಜಾಬ್ ವಿಚಾರ ಮುನ್ನಲೆಗೆ ತಂದರು. ಈಗ ಬಿಬಿಎಂಪಿ ಚುನಾವಣೆ ವಾರ್ಡ್ ಮೀಸಲಾತಿ ಪಟ್ಟಿ ಮೂಲಕ ಮುಸ್ಲಿಮ್ ಸಮುದಾಯವನ್ನು ರಾಜಕೀಯವಾಗಿ ತುಳಿಯುವ ಹುನ್ನಾರ ನಡೆಯುತ್ತಿದೆ. ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸಲು ಆಗ್ರಹಿಸಿ ಹೋರಾಟ ನಡೆಸಲಿದ್ದೇವೆ.

-ಮುಜಾಹಿದ್ ಪಾಷಾ, ಮಾಜಿ ಕಾರ್ಪೊರೇಟರ್ ಸಿದ್ಧಾಪುರ ವಾರ್ಡ್ (ಎಸ್ಡಿಪಿಐ)


ಚಾಮರಾಜಪೇಟೆ ಕ್ಷೇತ್ರದಲ್ಲಿನ ಬಿಬಿಎಂಪಿಯ ಆರು ವಾರ್ಡ್ಗಳ ಪೈಕಿ 5 ವಾರ್ಡ್ ಮಹಿಳಾ ಮೀಸಲಾತಿ ಮಾಡಿದ್ದಾರೆ. ಆಝಾದ್ ನಗರದಲ್ಲಿ ಎಸ್ಟಿ ಜನಸಂಖ್ಯೆ 350ರಿಂದ 400 ಅಷ್ಟೇ ಇರುವುದು. ಅಲ್ಲಿ ಎಸ್ಟಿ ಮೀಸಲಾತಿ ಕಲ್ಪಿಸಲಾಗಿದೆ. ಜಾಲಿ ಮೊಹಲ್ಲಾ ಭಾಗವನ್ನು ಸಿಟಿ ಮಾರುಕಟ್ಟೆ ಸೇರಿಸಿದ್ದಾರೆ. ಕಾಂಗ್ರೆಸ್ನವರು ಎಲ್ಲಿಯೂ ಗೆಲ್ಲದಂತೆ ವಾರ್ಡ್ ಮರುವಿಂಗಡಣೆ ಮಾಡಿದ್ದಾರೆ. ಅಲ್ಲದೆ, ಮೀಸಲಾತಿಯನ್ನು ಬೇಕಾಬಿಟ್ಟಿ ಪ್ರಕಟಿಸಿದ್ದಾರೆ.

-ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಚಾಮರಾಜಪೇಟೆ ಕ್ಷೇತ್ರದ ಶಾಸಕ

--------------------------------------------------

ಮುಸ್ಲಿಮ್ ಮತದಾರರ ಸಂಖ್ಯೆ ಹೆಚ್ಚಿರುವ ಕಡೆಗಳಲ್ಲಿ ಆ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸುವುದು ಮೀಸಲಾತಿ ತತ್ವದ ಮೂಲ ಉದ್ದೇಶ. ಆದರೆ, ಬಿಜೆಪಿ ಸರಕಾರ ಮುಸ್ಲಿಮ್ ಸಮುದಾಯ ಹೆಚ್ಚಿರುವ ಕಡೆಗಳಲ್ಲಿ ಮಹಿಳೆಯರಿಗೆ ಅಥವಾ ಎಸ್ಸಿ-ಎಸ್ಟಿ ವರ್ಗಕ್ಕೆ ಮೀಸಲಾತಿ ಕಲ್ಪಿಸಿರುವುದು ಸರಿಯಲ್ಲ. ಈಗಾಗಲೇ ಅವೈಜ್ಞಾನಿಕ ಮೀಸಲಾತಿ ಪಟ್ಟಿ ಪ್ರಕಟಿಸಿರುವುದಕ್ಕೆ ಆಕ್ಷೇಪಣೆ ಸಲ್ಲಿಸಿದ್ದೇವೆ. ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವುದು ಅನಿವಾರ್ಯ.

-ಸೈಯದ್ ಶುಜಾವುದ್ದೀನ್, ಮಾಜಿ ಕಾರ್ಪೊರೇಟರ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)