varthabharthi


ನಿಮ್ಮ ಅಂಕಣ

ಪ್ರಧಾನಿಯವರಿಗೆ ಹತ್ತು ಪ್ರಶ್ನೆಗಳು

ವಾರ್ತಾ ಭಾರತಿ : 10 Aug, 2022
-ಕಾಳಚನ್ನೇಗೌಡ, ಸಂಚಾಲಕರು, ಧ್ವಜ ಸತ್ಯಾಗ್ರಹ ಸಮಿತಿ, ಮೈಸೂರು

1. ರಾಷ್ಟ್ರಧ್ವಜದಿಂದ ಖಾದಿಯನ್ನೇಕೆ ಕಿತ್ತು ಹಾಕಿದಿರಿ?
2. ಸರಕಾರಿ ಕಚೇರಿಗಳ ಮೂಲಕ, ಬ್ಯಾಂಕು, ಮುನಿಸಿಪಾಲಿಟಿ ಅಥವಾ ಇತರ ಸ್ವಾಯತ್ತ ಸಂಸ್ಥೆಗಳ ಮೂಲಕ, ವಿದೇಶಿ ವಸ್ತ್ರ ಹಾಗೂ ಸಿಂಥೆಟಿಕ್ ವಸ್ತ್ರದಿಂದ ತಯಾರಾದ ಧ್ವಜಗಳನ್ನೇಕೆ ಬಲವಂತದಿಂದ ಮಾರಾಟ ಮಾಡಿಸುತ್ತಿದ್ದೀರಿ?
3. ಅವು ಅಲ್ಲಲ್ಲಿ ಹರಿದಿದೆ, ಹಾಳಾಗಿವೆ, ಅಳತೆ ತಪ್ಪಿವೆ, ಆಕಾರ ತಪ್ಪಿವೆ, ಅಶೋಕ ಚಕ್ರವು ಎತ್ತೆತ್ತಲೋ ಹೊರಳಿದೆ, ಚಕ್ರದ ಕೀಲುಗಳ ಸಂಖ್ಯೆ ಏರುಪೇರಾಗಿವೆ ಎಂಬ ಸಂಗತಿಯು ತಮ್ಮ ಗಮನಕ್ಕೆ ಬಂದಿಲ್ಲವೇ? ಇಂತಹ ಬಾವುಟಗಳ ಭ್ರಷ್ಟ ಉತ್ಪಾದಕರನ್ನು ಶಿಕ್ಷಿಸುವ ಬದಲು ಭ್ರಷ್ಟಗೊಂಡ ಬಾವುಟಗಳನ್ನೇ ಅಧಿಕೃತವಾಗಿ ಮಾರಾಟ ಮಾಡುವುದು ಭ್ರಷ್ಟಾಚಾರವಲ್ಲವೇ?
4. ನಮ್ಮ ಧ್ವಜ ಅಹಿಂಸೆಯ ದ್ಯೋತಕವಾದದ್ದು. ಶಾಂತಿಪ್ರಿಯ ಅಶೋಕನ ಲಾಂಛನ ಹಾಗೂ ಅಹಿಂಸಾತ್ಮಕ ಖಾದಿಬಟ್ಟೆಗಳು ಅದರಲ್ಲಿ ಅಂತರ್ಗತವಾಗಿವೆ. ಹೀಗಿರುವಾಗ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಾವುಟ ಕಾರ್ಯಕ್ರಮವನ್ನು ಯುದ್ಧಭೂಮಿಯೊಂದರಿಂದ ಉದ್ಘಾಟಿಸಿ, ಭಾರತವು ಹಿಂಸಾವಾದಿ ದೇಶವೆಂಬ ಸಂಕೇತವನ್ನೇಕೆ ಜಗತ್ತಿಗೆ ಸಾರುತ್ತಿದ್ದೀರಿ?
5. ಸಿಂಥೆಟಿಕ್ ಬಾವುಟಗಳ ಉತ್ಪಾದನೆ, ಆಯಾತ, ವಿತರಣೆಗೆಂದು ತಮ್ಮ ಸರಕಾರವು ಎಷ್ಟು ಪ್ರಮಾಣದ ತೆರಿಗೆ ಹಣವನ್ನು ಖರ್ಚು ಮಾಡಿದೆ? ಇತ್ತ ಖಾದಿ ಹಾಗೂ ಗ್ರಾಮೋದ್ಯೋಗದ ಉತ್ಪಾದನೆ, ಆಯಾತ, ವಿತರಣೆಯನ್ನೇ ಹೆಚ್ಚುಕಡಿಮೆ ಸ್ಥಗಿತಗೊಳಿಸಿರುವ ತಮ್ಮ ಸರಕಾರವು ಇದೇ ಹಣವನ್ನು ಗ್ರಾಮೋದ್ಯೋಗದ ಪುನಶ್ಚೇತನಕ್ಕಾಗಿ ಖರ್ಚು ಮಾಡಬಹುದಿತ್ತಲ್ಲವೇ? ಬಡವರ ಪರವಾದ ಕಾರ್ಯಕ್ರಮವಲ್ಲವೇ ಸ್ವದೇಶಿ?
6. ಭಾರತದ ರಾಷ್ಟ್ರಧ್ವಜವು ಚೀನಾದಿಂದ ನಿರ್ಮಾಣಗೊಂಡು ಅಧಿಕೃತವಾಗಿ ಮಾರಾಟಗೊಳ್ಳುತ್ತಿದೆ ಎಂಬ ಸುದ್ದಿ ನಿಜವೇ?

7. ರಾಷ್ಟ್ರಧ್ವಜವನ್ನು ಕೆಳಗಿಳಿಸುವ ಅಗತ್ಯವಿಲ್ಲ. ಮಳೆಯಿರಲಿ, ಬಿಸಿಲಿರಲಿ, ಹಗಲಿರಲಿ, ರಾತ್ರಿಯಿರಲಿ, ಧ್ವಜವು ಹರಿದಿರಲಿ, ಮಲಿನವಾಗಿರಲಿ, ಕಂಬಕ್ಕೆ ಜೋತು ಬಿದ್ದಿರಬೇಕು ಎಂದು ಧ್ವಜನಿಯಮವನ್ನು ತಾವು ತಿದ್ದಿರುವುದು ಸರಿಯೇ? 8. ಹರ್-ಘರ್-ತಿರಂಗಾ ಎಂಬುದು, ‘ವಿದೇಶಿಯರೇ ದೇಶಬಿಟ್ಟು ತೊಲಗಿ’ ಎಂಬ ಸ್ವದೇಶಿ ಚಳವಳಿಯ ಕೂಗಾಗಿತ್ತು. ಪವಿತ್ರ ಆರ್ಥಿಕತೆ ಹಾಗೂ ಸ್ವದೇಶಿ ಉತ್ಪಾದನೆಗಳನ್ನು ಕಡೆಗಣಿಸಿರುವ ತಮ್ಮ ಸರಕಾರವು ಹರ್-ಘರ್-ತಿರಂಗಾ ಎಂದು ಕೂಗುವುದು ವಿಪರ್ಯಾಸವಲ್ಲವೇ?
9. ಸರಕಾರದ ಅಧೀನದಲ್ಲಿರುವ ಖಾದಿ ಸಂಸ್ಥೆಯು ಶುದ್ಧ ಖಾದಿಬಾವುಟವನ್ನು ಸಾಮಾನ್ಯರ ಕೈಗೆಟುಕದಂತಹ, ಅತಿ ದುಬಾರಿಬೆಲೆಗೆ ಮಾರುತ್ತಿರುವುದು ಸರಿಯೇ?
10. ಕಲೆ ಹಾಗೂ ಸಾಹಿತ್ಯಗಳಿಗೆ ಸಂಬಂಧಿಸಿದ ಅಕಾಡಮಿಗಳು ಸರಕಾರದ ಕಾರ್ಯಕ್ರಮವನ್ನು ಬೆಂಬಲಿಸುವಂತೆ ಸಾಹಿತಿ, ಕಲಾವಿದರ ಮೇಲೆ ಬಲವಂತ ಹೇರುತ್ತಿರುವುದು ತಮ್ಮ ಗಮನಕ್ಕೆ ಬಂದಿಲ್ಲವೇ?
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)