varthabharthi


ರಾಷ್ಟ್ರೀಯ

ಐಎನ್‌ಎಸ್ ವಿಕ್ರಾಂತ್ ಭ್ರಷ್ಟಾಚಾರ ಪ್ರಕರಣ: ಬಿಜೆಪಿ ನಾಯಕ ಕಿರೀಟ್ ಸೋಮಯ್ಯ, ಪುತ್ರನಿಗೆ ನಿರೀಕ್ಷಣಾ ಜಾಮೀನು

ವಾರ್ತಾ ಭಾರತಿ : 10 Aug, 2022

ಮುಂಬೈ, ಆ. 10: ಐಎನ್‌ಎಸ್ ವಿಕ್ರಾಂತ್ ಭ್ರಷ್ಟಾಚಾರ ಪ್ರಕರಣದಲ್ಲಿ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಹಾಗೂ ಅವರು ಪುತ್ರ ನೀಲ್ ಸೋಮಯ್ಯ ಅವರಿಗೆ ಬಾಂಬೆ ಉಚ್ಚ ನ್ಯಾಯಾಲಯ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 

ಮುಂಬೈ ಪೊಲೀಸರನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ಶಿರಿಶ್ ಗುಪ್ಟೆ  ಅವರು, 57 ಕೋ.ರೂ. ನಿಧಿಯನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪವನ್ನು ದೃಢಪಡಿಸುವ ಯಾವುದೇ ಪುರಾವೆ ಪತ್ತೆಯಾಗಿಲ್ಲ ಎಂದು ನ್ಯಾಯಾಲಕ್ಕೆ ತಿಳಿಸಿದರು.  

53ರ ಹರೆಯದ ಮಾಜಿ ಸೇನಾಧಿಕಾರಿ ಬಾಬನ್ ಭೋಸ್ಲೆ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಮುಂಬೈ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಿರೀಟ್ ಸೋಮಯ್ಯ ಹಾಗೂ ಅವರ ಪುತ್ರ ಎಪ್ರಿಲ್ 9ರಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. 

ವಿಮಾನ ವಾಹಕ ಐಎನ್‌ಎಸ್ ವಿಕ್ರಾಂತ್‌ನ ಮರು ಸ್ಥಾಪನೆಗೆ ನಿಧಿ ಸಂಗ್ರಹಿಸಲು 2013 ಹಾಗೂ 2014ರ ನಡುವೆ ಸೋಮಯ್ಯ ಅವರು ಅಭಿಯಾನ ನಡೆಸಿದ್ದರು. ಆದರೆ, ಸಂಗ್ರಹಿಸಲಾದ ಹಣವನ್ನು ಮಹಾರಾಷ್ಟ್ರ ರಾಜ್ಯಪಾಲರ ಕಾರ್ಯದರ್ಶಿ ಕಚೇರಿಯಲ್ಲಿ ಠೇವಣಿ ಮಾಡಿಲ್ಲ.  ಅದರ ಬದಲು ತಮ್ಮ ವ್ಯವಹಾರಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.  

ಭಾರತೀಯ ದಂಡ ಸಂಹಿತೆಯ ಹಲವು  ಸೆಕ್ಷನ್‌ಗಳ ಅಡಿಯಲ್ಲಿ ಕಿರೀಟ್ ಸೋಮಯ್ಯ ಹಾಗೂ ನೀಲ್ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿತ್ತು. ನ್ಯಾಯಾಲಯ ಇಬ್ಬರಿಗೂ ಎಪ್ರಿಲ್‌ನಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.  
ಗುಪ್ಟೆ ಅವರು ಬುಧವಾರ ಕಿರೀಟ್ ಸೋಮಯ್ಯ ಹಾಗೂ ನೀಲ್ ಸೋಮಯ್ಯ ಅವರ ಕಸ್ಟಡಿಯ ಅಗತ್ಯ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)