varthabharthi


ಬೆಂಗಳೂರು

ಕಾನೂನಿನ ಜ್ಞಾನ ಮತ್ತು ಅರಿವು ಬಹಳ ಮುಖ್ಯ: ಸಿಎಂ ಬಸವರಾಜ ಬೊಮ್ಮಾಯಿ

ವಾರ್ತಾ ಭಾರತಿ : 12 Aug, 2022

ಬೆಂಗಳೂರು, ಆ. 12: ‘ಜನರಲ್ಲಿ ಕಾನೂನಿನ ಜ್ಞಾನ ಮತ್ತು ಅರಿವು ಬಹಳ ಮುಖ್ಯ. ನಾವು ಇದುವರೆಗೂ ಕೇಂದ್ರದಿಂದ ಹಾಗೂ ರಾಜ್ಯದಿಂದ ರೂಪಿಸಲಾಗಿರುವ ಕಾನೂನಿನ ಪುಸ್ತಕಗಳು ಆಂಗ್ಲ ಭಾಷೆಯಲ್ಲಿದ್ದು, ಅದನ್ನು ಪಾಲಿಸಿಕೊಂಡು ಬಂದಿದ್ದೇವೆ. ಇಂದು ಈ ಪುಸ್ತಕಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲಾಗಿದ್ದು, ಕಾನೂನು ಜನರಿಗೆ ಸುಲಭವಾಗಿ ಅರ್ಥವಾಗುವಂತಹ ಕೆಲಸವನ್ನು ಮಾಡಿರುವುದು ತುಂಬಾ ಶ್ಲಾಘನೀಯ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ರಾಜಭಾಷೆ(ವಿಧಾಯಿ) ಆಯೋಗ ಹಾಗೂ ಭಾಷಾಂತರ ನಿರ್ದೇಶನಾಲಯದ ವತಿಯಿಂದ ಹೊರತರಲಾದ ಭಾರತ ದಂಡ ಸಂಹಿತೆ (ಐಪಿಸಿ), ದಂಡ ಪ್ರಕ್ರಿಯಾ ಸಂಹಿತೆ (ಸಿಸಿಪಿ), ಮತ್ತು ಭಾರತ ಸಾಕ್ಷ್ಯ ಅಧಿನಿಯಮ(ಐಇಎ)ಗಳ ದ್ವಿಭಾಷೆ ಕನ್ನಡ ಅವೃತ್ತಿಗಳ ಲೋಕಾರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

‘ಹದಿನೈದು ವರ್ಷಗಳಿಂದ ಆಂಗ್ಲ ಭಾಷೆಯಲ್ಲಿರುವ ಈ ಪುಸ್ತಕಗಳನ್ನು ಭಾಷಾಂತರ ಮಾಡಲು ಸಂಸದೀಯ ಇಲಾಖೆ ಸುದೀರ್ಘವಾಗಿ ಶ್ರಮವಹಿಸಿದೆ. ಇದರ ಫಲವಾಗಿ ಇಂದು ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ, ಮತ್ತು ಭಾರತ ಸಾಕ್ಷ್ಯ ಅಧಿನಿಯಮ ಪುಸ್ತಕಗಳು ಕನ್ನಡ ಭಾಷೆಗೆ ಭಾಷಾಂತರಗೊಂಡಿದ್ದು, ಜನಸಾಮಾನ್ಯರು ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವವರು ಬಹಳ ಸುಲಭವಾಗಿ ಓದಿ ಅರ್ಥಮಾಡಿಕೊಳ್ಳುವಂತಹ ಪುಸ್ತಕಗಳಾಗಿವೆ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಈ ಪುಸ್ತಕಗಳನ್ನು ಎಲ್ಲ ತಾಲೂಕು ಕಚೇರಿಗಳು, ಪೊಲೀಸ್ ಠಾಣೆಗಳಿಗೆ ಒದಗಿಸುವ ಕೆಲಸ ಕೂಡಲೇ ಆಗಬೇಕು. ಅಲ್ಲದೆ ಇಲಾಖಾ ವೆಬ್‍ಸೈಟ್‍ನಲ್ಲಿಯೂ ಪ್ರಕಟಿಸಲು ಕ್ರಮವಹಿಸಬೇಕು. ಸಾರ್ವಜನಿಕರಿಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಈ ಪುಸ್ತಕಗಳು ದೊರಕುವಂತಾಗಬೇಕು ಎಂದು ಬೊಮ್ಮಾಯಿ ಹೇಳಿದರು. ಕಾರ್ಯಕ್ರಮದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ಕ್ರೀಡಾ ಸಚಿವ ನಾರಾಯಣಗೌಡ, ಸಂಸದೀಯ ವ್ಯವಹಾರಗಳ ಸರಕಾರದ ಕಾರ್ಯದರ್ಶಿ ಜಿ.ಶ್ರೀಧರ್, ಭಾಷಾತರ ನಿರ್ದೇಶನಾಲಯದ ನಿರ್ದೇಶಕ ಎಂ.ವೆಂಕಟೇಶ ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)