varthabharthi


ಕರ್ನಾಟಕ

ಸಾರ್ವಜನಿಕರಿಂದ ಕಾನೂನು ಕ್ರಮಕ್ಕೆ ಆಗ್ರಹ

ಶ್ರೀ ಗುರು ದತ್ತಾತ್ರೇಯ ಬಾಬಾ ಬುಡಾನ್ ಗಿರಿ ದರ್ಗಾ ಆವರಣದಲ್ಲಿ ಸಂಘಪರಿವಾರದ ಮುಖಂಡರಿಂದ ತ್ರಿವರ್ಣಧ್ವಜ ಹಾರಾಟ

ವಾರ್ತಾ ಭಾರತಿ : 12 Aug, 2022

ಚಿಕ್ಕಮಗಳೂರು, ಆ.12: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಹರ್ ಘರ್ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ ಶ್ರೀಗುರು ದತ್ತಾತ್ರೇಯ ಬಾಬಾಬುಡಾನ್ ದರ್ಗಾದ ಆವರಣದಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ತ್ರಿವರ್ಣಧ್ವಜ ಹಾರಿಸಿ ಅದಕ್ಕೆ ರಕ್ಷಾ ಬಂಧನ ಸಂಕೇತವಾಗಿರುವ ರಾಖಿಯನ್ನು ಕಟ್ಟಿ ಸಂಭ್ರಮಿಸುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿರುವ ಘಟನೆ ಶುಕ್ರವಾರ ನಡೆದಿದೆ

ಈ ಕುರಿತು ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಬಜರಂಗದಳದ ರಾಜ್ಯ ಸಹ ಸಂಚಾಲಕ ರಘು ಸಕಲೇಶಪುರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಶ್ರೀಗುರು ದತ್ತಾತ್ರೇಯ ಬಾಬಾಬುಡಾನ್ ದರ್ಗಾಕ್ಕೆ ತೆರಳಿ ಆವರಣದಲ್ಲಿರುವ ಕಬ್ಬಿಣದ ಕಂಬಕ್ಕೆ ರಾಷ್ಟ್ರಧ್ವಜ ಕಟ್ಟಿ ಹಾರಿಸಿದ್ದಾರೆ. ಅಲ್ಲದೇ ಧ್ವಜದ ಕಂಬಕ್ಕೆ ಕೇಸರಿ ರಾಖಿ ಕಟ್ಟಿದರು. ಈ ಮೂಲಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿವಾದಿತ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ರಾಷ್ಟ್ರಧ್ವವನ್ನು ಹಾರಿಸಿದಂತಾಗಿದೆ.

ಬಾಬಾಬುಡನ್ ಗಿರಿ ದರ್ಗಾ ವಿವಾದಿತ ಧಾರ್ಮಿಕ ಕೇಂದ್ರವಾಗಿದ್ದು, ಈ ಕೇಂದ್ರದ ಆವರಣದಲ್ಲಿ ರಾಷ್ಟ್ರಧ್ವಜಾರೋಹಣದಂತಹ ಯಾವುದೇ ಹೊಸ ಆಚರಣೆಗಳಿಗೆ ಅವಕಾಶವಿಲ್ಲ. ಆದರೆ ಶುಕ್ರವಾರ ಖಾಸಗಿ ವ್ಯಕ್ತಿಗಳು ವಿವಾದಿತ ಸ್ಥಳದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದು, ಇದು ಬಾಬಾಬುಡನ್‍ಗಿರಿ ಆವರಣದಲ್ಲಿ ಯಥಾಸ್ಥಿತಿ ಕಾಪಾಡಬೇಕೆಂಬ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದ್ದು, ಜಿಲ್ಲಾಡಳಿತ ವಿವಾದಿತ ಸ್ಥಳದಲ್ಲಿ ಕಾನೂನು ಉಲ್ಲಂಘಿಸಿ ವಿವಾದ ಹುಟ್ಟುಹಾಕಲು ಮುಂದಾದ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು  ಆಗ್ರಹಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)