varthabharthi


ಕರ್ನಾಟಕ

ಅತ್ಯಾಚಾರ ಪ್ರಕರಣ: ಅಧಿಕಾರಿ ರವಿಶಂಕರ್, ಸಚಿವ ಮುನಿರತ್ನ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಕೋರ್ಟ್ ತಡೆ

ವಾರ್ತಾ ಭಾರತಿ : 12 Aug, 2022

ಬೆಂಗಳೂರು, ಆ.12: ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಐಎಫ್ ಎಸ್ ಅಧಿಕಾರಿ ಆರ್.ರವಿಶಂಕರ್, ತೋಟಗಾರಿಕೆ ಸಚಿವ ಮುನಿರತ್ನ ಸೇರಿ ಒಟ್ಟು 11 ಜನರ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ಕೋರ್ಟ್ ಇತ್ತೀಚೆಗೆ ತಡೆ ನೀಡಿದೆ. ಸಂತ್ರಸ್ತೆಗೆ ನೋಟಿಸ್ ಜಾರಿಗೊಳಿಸಿದೆ.    

ಆರೋಪಿ ಐಎಪ್‍ಎಸ್ ಅಧಿಕಾರಿ ಆರ್.ರವಿಶಂಕರ್ ಸಲ್ಲಿಸಿದ್ದ ಆದೇಶ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಈ ಆದೇಶ ನೀಡಿದೆ. ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದೆ. ವಿಶೇಷ ಕೋರ್ಟ್‍ನಲ್ಲಿ ಇರುವ ಎಲ್ಲ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದು ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ಕೋರ್ಟ್ ತಿಳಿಸಿದೆ.  

ಪ್ರಕರಣದ ಹಿನ್ನೆಲೆ: ತಾವೊಬ್ಬ ಅವಿವಾಹಿತ ಎಂದು ಫೇಸ್ ಬುಕ್ ಮೂಲಕ ದೂರುದಾರರನ್ನು ಪರಿಚಯಿಸಿಕೊಂಡಿದ್ದ ಪ್ರಮುಖ ಆರೋಪಿ ಹಾಗೂ ಐಎಫ್‍ಎಸ್ ಅಧಿಕಾರಿ ಆರ್.ರವಿಶಂಕರ, ಬೀಳ್ಕೊಡುಗೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು (2019ರಲ್ಲಿ) ದೂರುದಾರರನ್ನು ಧಾರವಾಡಕ್ಕೆ ಕರೆದುಕೊಂಡು ಹೋಗಿದ್ದು, ನಂತರ, ಸರಕಾರಿ ವಸತಿಗೃಹವೊಂದರಲ್ಲಿ ತಮ್ಮನ್ನು ಬಲವಂತವಾಗಿ ಕೂಡಿಸಿ, ಸೀರೆ ಹಾಗೂ ಆಭರಣಗಳನ್ನು ನೀಡಿ, ಹಣೆಗೆ ಕುಂಕುಮವಿಟ್ಟು ತಮ್ಮನ್ನು ವಿವಾಹವಾಗಿರುವುದಾಗಿ ವಾಗ್ದಾನ ಮಾಡಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ.

ನಂತರ, ದೂರುದಾರರನ್ನು ನವದೆಹಲಿಗೂ ಕರೆದೊಯ್ದಿದ್ದ ರವಿಶಂಕರ ಅವರು (2019, ಆಗಸ್ಟ್ 18 ರಿಂದ 20) ಹೋಟೆಲ್‍ವೊಂದರಲ್ಲಿ, ತದನಂತರ, ಧಾರವಾಡದಲ್ಲಿ (2021, ಮೇ 11) ದೈಹಿಕ ಸಂಬಂಧ ಬೆಳೆಸಿದ್ದರು ಎಂದು ಆರೋಪಿಸಲಾಗಿದೆ. ಈ ವೇಳೆ ತುಳಸಿ ಮದ್ದಿನೇನಿ ಅವರೊಂದಿಗೆ ವಿವಾಹವಾಗಿದ್ದನ್ನು ರವಿಶಂಕರ ಅವರು ರಹಸ್ಯವಾಗಿಟ್ಟು ತಮ್ಮನ್ನು ವಂಚಿಸಿದ್ದಾರೆ ಎಂಬುದು ಸಂತ್ರಸ್ತೆಯ ಪ್ರಮುಖ ಆರೋಪ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)