varthabharthi


ರಾಷ್ಟ್ರೀಯ

ಕರ್ನಾಟಕ ಸರಕಾರ ಇತಿಹಾಸ ತಿರುಚುತ್ತಿದ್ದೆಯೇ?: ನೆಹರೂ, ಟಿಪ್ಪು ಫೋಟೊ ಅಳವಡಿಸದ ಕುರಿತು ಮುಹಮ್ಮದ್‌ ಝುಬೈರ್‌ ಟ್ವೀಟ್

ವಾರ್ತಾ ಭಾರತಿ : 14 Aug, 2022

ಹೊಸದಿಲ್ಲಿ: ಕರ್ನಾಟಕ ಸರಕಾರವು ರಾಜ್ಯದ ಪ್ರಮುಖ ಪತ್ರಿಕೆಗಳಿಗೆ ನೀಡಿರುವ ಜಾಹೀರಾತುಗಳಲ್ಲಿ ದೇಶದ ಪ್ರಥಮ ಪ್ರಧಾನಿ ಜವಹರಲಾಲ್‌ ನೆಹರೂರ(Jawaharlal Nehru) ಹಾಗೂ ಟಿಪ್ಪು ಸುಲ್ತಾನ್‌ ರ (Tippu Sultan) ಭಾವಚಿತ್ರವನ್ನು ಅಳವಡಿಸದೇ ಇರುವುದರ ಕುರಿತು ಆಲ್ಟ್‌ ನ್ಯೂಸ್‌(Alt News) ಸಹ ಸಂಸ್ಥಾಪಕ ಹಾಗೂ ಸತ್ಯಶೋಧಕ ಮುಹಮ್ಮದ್‌ ಝುಬೈರ್‌ (Muhammad Zubair) ಟ್ವೀಟ್‌ ಮಾಡಿದ್ದು, "ಕರ್ನಾಟಕ ಸರಕಾರ ಇತಿಹಾಸ ತಿರುಚುತ್ತಿದೆಯೇ?" ಎಂದು ಪ್ರಶ್ನಿಸಿದ್ದಾರೆ.

ತಮ್ಮ ಅಧಿಕೃತ ಖಾತೆಯಲ್ಲಿ ಅವರು, ಪತ್ರಿಕೆಗಳ ಮುಖಪುಟದಲ್ಲಿ ಇಂದು ಪ್ರಕಟವಾದ ಸರಕಾರದ ಜಾಹೀರಾತನ್ನು(Advertisement) ಉಲ್ಲೇಖಿಸಿ "ಕರ್ನಾಟಕದ ಬಿಜೆಪಿ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರನ್ನು ಏಕೆ ಕೈಬಿಟ್ಟಿದೆ? ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಟಿಪ್ಪು ಸುಲ್ತಾನ್ ಹೆಸರನ್ನೂ ಪ್ರಕಟಿಸಿಲ್ಲ. ಕರ್ನಾಟಕ ಸರಕಾರ ಇತಿಹಾಸವನ್ನು ಬದಲಾಯಿಸುತ್ತಿದೆಯೇ?" ಎಂದು ಅವರು ಪ್ರಶ್ನಿಸಿದ್ದಾರೆ.

"ಸಾವರ್ಕರ್‌(Savarkar) ಯಾವತ್ತು ಕ್ರಾಂತಿಕಾರಿಯಾಗಿದ್ದು? ಕ್ಷಮಾಪಣಾ ಅರ್ಜಿ ಬರೆಯುವುದು ಕ್ರಾಂತಿಯಲ್ಲಿ ಒಳಪಡುತ್ತದೆಯೇ?" ಎಂದು ಬಳಕೆದಾರರೋರ್ವರು ಕಮೆಂಟ್‌ ಮಾಡಿದ್ದಾರೆ.  ಸಾಮಾಜಿಕ ತಾಣದಲ್ಲಿ ಹಲವಾರು ಮಂದಿ ಬಳಕೆದಾರರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ (N. Ravikumar) ಸರಕಾರದ ನಡೆಯನ್ನು ಸಮರ್ಥಿಸಿದ್ದು, ಉದ್ದೇಶಪೂರ್ವಕವಾಗಿಯೇ ನೆಹರೂ ಭಾವಚಿತ್ರವನ್ನು ಅಳವಡಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)