varthabharthi


ಕರ್ನಾಟಕ

ಜಾಹೀರಾತಿನಲ್ಲಿ ನೆಹರೂ ಫೋಟೋ ಕೈಬಿಟ್ಟ ವಿಚಾರ: ಸಣ್ಣತನದ ಪರಮಾವಧಿ ಎಂದ ಹೆಚ್.ಡಿ. ಕುಮಾರಸ್ವಾಮಿ

ವಾರ್ತಾ ಭಾರತಿ : 14 Aug, 2022

ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು, ಆ.14: ರಾಜ್ಯ ಬಿಜೆಪಿ ಸರಕಾರ ನೀಡಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಜಾಹೀರಾತಿನಲ್ಲಿ ದೇಶದ ಮೊದಲ ಪ್ರಧಾನಮಂತ್ರಿ ಜವಾಹರ ಲಾಲ್ ನೆಹರೂ(Jawaharlal Nehru) ಅವರ ಭಾವಚಿತ್ರ ಕೈಬಿಟ್ಟಿರುವುದು ಸಣ್ಣತನದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ಕಿಡಿಕಾರಿದ್ದಾರೆ.

ನಗರದಲ್ಲಿ ರವಿವಾರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಮಟ್ಟದ ಜೆಡಿಎಸ್ ಕಾರ್ಯಾಗಾರದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ನೆಹರು ಅವರ ಕೊಡುಗೆ ಸಾಕಷ್ಟಿದೆ. ಅವರು ಮೊದಲ ಪ್ರಧಾನಮಂತ್ರಿ. ಆದರೆ ಅವರನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣನೆ ಮಾಡಿರುವಂತಿದೆ. ನೆಹರೂ ಅವರು ಯಾವುದೇ ಪಕ್ಷಕ್ಕೇ ಸೇರಿರಲಿ, ಆದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಕುಟುಂಬದ ಕೊಡುಗೆ ದೊಡ್ಡದಿದೆ. ಅಂತವರ ಭಾವಚಿತ್ರವನ್ನು ಜಾಹೀರಾತಿನಲ್ಲಿ ಕೈಬಿಟ್ಟಿರುವುದು ಸಣ್ಣತನದ ರಾಜಕಾರಣ ಎಂದು ಮಾಜಿ ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಕ್ಲಿಷ್ಟಕರ ಪರಿಸ್ಥಿತಿ ಇತ್ತು. ಆದರೂ ದೇಶ ಮುಂದಕ್ಕೆ ತೆಗೆದುಕೊಂಡು ಹೋದರು ನೆಹರು ಅವರು. ಅವರ ಚಿತ್ರಕ್ಕೆ ಕೊಕ್ಕೆ ಹಾಕಿದ ಇವರು ದೇಶಪ್ರೇಮಿಗಳಲ್ಲ. ದೇಶಪ್ರೇಮದ ಹೆಸರಿನಲ್ಲಿ ದೇಶವನ್ನು ಛಿದ್ರ ಛಿದ್ರ ಮಾಡುತ್ತಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟ ಈ ದೇಶ. ಎಲ್ಲ ಕುಟುಂಬಗಳು ಹೀಗೆ ಬದುಕಬೇಕಿದೆ. ಆದರೆ ಈಗ ಏನಾಗಿದೆ ಎಂದು ಅವರು ಪ್ರಶ್ನಿಸಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂಜುನಾಥ್ ಅವರು ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)