varthabharthi


ರಾಷ್ಟ್ರೀಯ

ಉಚಿತ ಕೊಡುಗೆಗಳ ಬಗ್ಗೆ ಪ್ರಧಾನಿ ಟೀಕೆಗೆ ತಮಿಳುನಾಡು ವಿತ್ತ ಸಚಿವ ತಿರುಗೇಟು

"ನಿಮಗೆ ಏನು ಅರ್ಹತೆಯಿದೆ ಎಂದು ನಾವು ನಿಮ್ಮ ಮಾತು ಕೇಳಬೇಕು?"

ವಾರ್ತಾ ಭಾರತಿ : 18 Aug, 2022

ಹೊಸದಿಲ್ಲಿ: ತಮಿಳುನಾಡು ಹಣಕಾಸು ಸಚಿವ ಡಾ.ಪಿ. ತ್ಯಾಗರಾಜನ್ (P. Thiagarajan) ಉಚಿತ ಕೊಡುಗೆಗಳ (Freebie)ಕುರಿತು ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರಗಳು ಏನು ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರ ಏಕೆ ನಿರ್ಧರಿಸಬೇಕು ಎಂದು ಡಾ ಪಿ. ತ್ಯಾಗರಾಜನ್ ಪ್ರಶ್ನಿಸಿದ್ದಾರೆ. Indiatoday ಯೊಂದಿಗಿನ ಚರ್ಚೆಯಲ್ಲಿ ತ್ಯಾಗರಾಜನ್‌ ಮಾಡಿರುವ ಬಿರುಸಿನ ವಾಗ್ದಾಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗತೊಡಗಿವೆ. ಹಣಕಾಸು ಸಚಿವರ ದಿಟ್ಟತನ ಹಾಗೂ ಸ್ಪಷ್ಟತೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. 

ಉಚಿತ ಕೊಡುಗೆಗಳು ಮುಂದೆ ಫಲ ಕೊಡುವ ರೂಪದಲ್ಲಿರಬೇಕು ಎಂಬುದಾಗಿ ಪ್ರಧಾನಿ ಹೇಳಿದ್ದಾರೆ ಎಂದು ಹೇಳಿ ಪ್ರಧಾನಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಇಂಡಿಯಾ ಟುಡೇಯ ರಾಹುಲ್ ಕವಲ್ ಅವರು ತ್ಯಾಗರಾಜನ್ ಅವರನ್ನು ಪ್ರಶ್ನಿಸಿದರು. 

ಅದಕ್ಕೆ ತಿರುಗೇಟು ನೀಡಿದ ತ್ಯಾಗರಾಜನ್ “ಒಂದೋ ನೀವು ಹೇಳುತ್ತಿರುವುದಕ್ಕೆ ನೀವು ಸಾಂವಿಧಾನಿಕ ಆಧಾರವನ್ನು ಹೊಂದಿರಬೇಕು ಅಥವಾ ನಮಗಿಂತ ನಿಮಗೆ ಚೆನ್ನಾಗಿ ತಿಳಿದಿದೆ ಎನ್ನುವ ಕೆಲವು ಪರಿಣತಿಯನ್ನು ನೀವು ಹೊಂದಿರಬೇಕು. ಅಥವಾ ಆರ್ಥಿಕತೆಯಲ್ಲಿ ಎರಡು ಪಿಹೆಚ್‌ಡಿ ಮಾಡಿರಬೇಕು. ಅಥವಾ ನೀವು ಆರ್ಥಿಕತೆಯನ್ನು ಬೆಳೆಸಿದ್ದೀರಿ , ಸಾಲವನ್ನು ಕಡಿಮೆ ಮಾಡಿದ್ದೀರಿ, ತಲಾ ಆದಾಯ ಹೆಚ್ಚಿಸಿರಬೇಕು. ನೀವು ಉದ್ಯೋಗಗಳನ್ನು ನಿರ್ಮಿಸಿದ್ದೀರಿ ಎಂದು ತೋರಿಸುವ ಕೆಲವು ಕಾರ್ಯಕ್ಷಮತೆಯ ಹಿನ್ನೆಲೆಯನ್ನು ನೀವು ಹೊಂದಿರಬೇಕು. 

"ಹಾಗಿದ್ದರೆ ನೀವು ಹೇಳುವುದನ್ನು ನಾವು ಕೇಳುತ್ತೇವೆ. ಇದೇನೂ ಇಲ್ಲದಿರುವಾಗ, ನಾವು ಯಾರೊಬ್ಬರ ಅಭಿಪ್ರಾಯವನ್ನು ಏಕೆ ಕೇಳಬೇಕು? ಯಾರೊಬ್ಬರ ದೃಷ್ಟಿಕೋನವನ್ನು ನಾನೇಕೆ ಅಳವಡಿಸಬೇಕು? ಚುನಾವಣೆ ನನಗೆ ನಾನು ಏನು ಮಾಡಬೇಕು ಅಂತ ಹೇಳಿದೆ.  ನನ್ನ ಮುಖ್ಯಮಂತ್ರಿ ನನಗೆ ಕೆಲಸ ಕೊಟ್ಟರು, ನಾನು ಅದನ್ನು ಚೆನ್ನಾಗಿ ಮಾಡುತ್ತಿದ್ದೇನೆ. ನಾನು ಕೇಂದ್ರ ಸರ್ಕಾರಕ್ಕಿಂತ ಹೆಚ್ಚಿನ ಸಾಧನೆ ಮಾಡುತ್ತಿದ್ದೇನೆ. ಕೇಂದ್ರಕ್ಕೆ ನಾವು ಉತ್ತಮ ನಿವ್ವಳ ಕೊಡುಗೆದಾರರಾಗಿದ್ದೇವೆ. ನಾವು ಒಂದು ರುಪಾಯಿ ಕೊಟ್ಟರೆ ನಮಗೆ 33 ಪೈಸೆ ಅಷ್ಟೇ ಮರಳಿ ಬರುತ್ತದೆ. ನಮ್ಮಿಂದ ನಿಮಗೆ ಇನ್ನೇನು ಬೇಕು? ನಾನು ನಿಮಗಾಗಿ ನನ್ನ ನೀತಿಯನ್ನು ಯಾವ ಆಧಾರದ ಮೇಲೆ ಬದಲಾಯಿಸಬೇಕು?" ಎಂದು ತ್ಯಾಗರಾಜನ್‌ ಪ್ರಶ್ನಿಸಿದ್ದಾರೆ.
 
ತನ್ನ ವಿಷಯವನ್ನು ಪುನರುಚ್ಚರಿಸಿದ ತ್ಯಾಗರಾಜನ್, “ನಿಮಗೆ ಸಾಂವಿಧಾನಿಕ ಆಧಾರವಿದೆಯೇ? ಇಲ್ಲ. ನೀವು ಆರ್ಥಿಕ ತಜ್ಞರೇ? ಇಲ್ಲ. ನಿಮಗೆ ನೊಬೆಲ್ ಪ್ರಶಸ್ತಿ ಇದೆಯೇ? ಇಲ್ಲ ನೀವು ನಮಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೀರಾ? ಇಲ್ಲ. ಯಾವ ಆಧಾರದ ಮೇಲೆ ನಾನು ನಿಮಗಾಗಿ ನನ್ನ ನೀತಿಯನ್ನು ಬದಲಾಯಿಸಬೇಕು, ಇದು ಸ್ವರ್ಗದಿಂದ ಬರುತ್ತಿರುವ ಸಂವಿಧಾನೇತರ ಆದೇಶವೇ?” ಎಂದು ಪ್ರಶ್ನಿಸಿದ್ದಾರೆ.
 
ಉಚಿತ ಕೊಡುಗೆಗಳ ವಿರೋಧಿ ಎಂದು ಪ್ರಧಾನಿ ಮೋದಿ ಹೇಳಿರುವುದನ್ನು ಉಲ್ಲೇಖಿಸಿದ ತ್ಯಾಗರಾಜನ್‌, “ಒಂದು ವೇಳೆ, ಪ್ರಧಾನಿ ಮೋದಿಯವರು ಉಚಿತ ಕೊಡುಗೆಗಳ ವಿರೋಧಿ ಎಂದಾದರೆ, ಪ್ರತಿ ಸ್ಕೂಟರ್ ಗೆ 25,000 ರುಪಾಯಿ ಸಬ್ಸಿಡಿ ನೀಡುವ ಯೋಜನೆ ಉದ್ಘಾಟಿಸಲು ಪ್ರಧಾನಿ ಮೋದಿ ಏಕೆ ಬಂದರು? ತಮಿಳುನಾಡಿನ ಉಚಿತ ಕೊಡುಗೆಗಳ ಇತಿಹಾಸದಲ್ಲಿ ಅದರಷ್ಟು ಕೆಟ್ಟದು ಇನ್ನೊಂದಿಲ್ಲ, ಅದರಿಂದ ಪರಿಸರ ಮಾಲಿನ್ಯ ಹೆಚ್ಚಿತು, ಸಾರ್ವಜನಿಕ ಸಾರಿಗೆ ವಿರೋಧಿಯಾಗಿತ್ತ, ಸಾಕಷ್ಟು ವಂಚನೆಗಳು ನಡೆದವು. ಅಂತಹ ಯೋಜನೆಯನ್ನು ಪ್ರಧಾನಿ ಮೋದಿ ಏಕೆ ಉದ್ಘಾಟಿಸಿದರು?” ಎಂದು ಪ್ರಶ್ನಿಸಿದ್ದಾರೆ.

ಭಾರತದ ಉಳಿದೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ, ತಮಿಳುನಾಡಿನಲ್ಲಿ ತಲಾ ಆದಾಯ ಹೆಚ್ಚಿದೆ, ಸಾಮಾಜಿಕ ಅಭಿವೃಧ್ದಿ ಹೆಚ್ಚಿದೆ. ಹಣದುಬ್ಬರ ಕಡಿಮೆ ಇದೆ. ಹೀಗಿರುವಾಗ ನಾವು ನಿಮ್ಮಿಂದ ಸಲಹೆಯನ್ನು ಯಾಕೆ ಕೇಳಬೇಕು? ಎಂದು ಅವರು ಪ್ರಶ್ನಿಸಿದ್ದಾರೆ. 

ಉಚಿತ ಕೊಡುಗೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ(Narendra Modi) ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. “ಮತ ಗಳಿಸಲು ಉಚಿತ ಕೊಡುಗೆ ಭರವಸೆಗಳ ಸಂಸ್ಕೃತಿ ಈ ದಿನಗಳಲ್ಲಿ ಸಾಮಾನ್ಯ. ನಾಗರಿಕರು, ಅದರಲ್ಲೂ ಯುವಜನರು ಇದಕ್ಕೆ ಬಲಿಯಾಗಬಾರದು. ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಇಂತಹ ರೇವಡಿಗಳಿಗೆ ಬಲಿಯಾಗಬಾರದು. (ಹಬ್ಬಗಳಲ್ಲಿ ಕೊಡುವ ಸಿಹಿ ತಿಂಡಿಗೆ ರೇವಡಿ ಅನ್ನುವ ಹೆಸರಿದೆ). ಉಚಿತ ಕೊಡುಗೆಗಳು ಎಂದಿಗೂ ತಡೆರಹಿತ ಹೆದ್ದಾರಿಗಳು, ರಕ್ಷಣಾ ಕಾರಿಡಾರ್‌ಗಳು ಅಥವಾ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾರವು. ಉಚಿತ ಕೊಡುಗೆಗಳು ತೆರಿಗೆದಾರರಿಗೆ ಹೊರೆಯಾಗಲಿದೆ’  ಎಂದು ಇತ್ತೀಚೆಗೆ ಪ್ರಧಾನಿ ಹೇಳಿದ್ದರು. 

ಉಚಿತ ಶಿಕ್ಷಣ, ಉಚಿತ ಆರೋಗ್ಯ, ವಿದ್ಯಾರ್ಥಿಗಳಿಗೆ ಬೇಕಾದ ಕಲಿಕಾ ಸಾಮಾಗ್ರಿಗಳು ಉಚಿತವಾಗಿ ನೀಡುವುದು ಕಲ್ಯಾಣ ಕಾರ್ಯಕ್ರಮ ಅವನ್ನು ರೇವಡಿ ಎಂದು ಲೇವಡಿ ಮಾಡಬಾರದು ಎಂದು ಪ್ರತಿಪಕ್ಷಗಳು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದವು. ಕೆ. ಚಂದ್ರಶೇಖರ್‌ ರಾವ್, ಅರವಿಂದ್‌ ಕೇಜ್ರಿವಾಲ್‌ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)