varthabharthi


ಆರೋಗ್ಯ

ಇಂದು ವಿಶ್ವ ಸೊಳ್ಳೆ ದಿನ

ಅರಿವೊಂದೇ ಸೊಳ್ಳೆಯಿಂದ ಕಾಪಾಡಬಲ್ಲದು

ವಾರ್ತಾ ಭಾರತಿ : 20 Aug, 2022
ಸುಧೀರ್‌ಕುಮಾರ್ ಹಿರೇಮನೆ

ಸರ್ ರೊನಾಲ್ಡ್ ರಾಸ್

ಭಾರತದ ಮಣ್ಣಲ್ಲಿ ಹುಟ್ಟಿದ್ದ ಬ್ರಿಟಿಷ್ ವೈದ್ಯ ಸರ್ ರೊನಾಲ್ಡ್ ರಾಸ್ ಸರಿಯಾಗಿ 125 ವರ್ಷದ ಹಿಂದೆ, ಈ ದಿನ ಒಂದು ಅನ್ವೇಷಣೆ ಮಾಡುತ್ತಾರೆ. ಮಲೇರಿಯಾ ಕಾಯಿಲೆ ಸೊಳ್ಳೆಗಳ ಮೂಲಕ ಹರಡುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಈ ಅರಿವಿನಿಂದ ಮನುಷ್ಯ ತನ್ನ ಶತ್ರು ಯಾರೆಂದು ಕಂಡುಕೊಳ್ಳುತ್ತಾನೆ, ಮಲೇರಿಯಾ ಹಾಗೂ ಸೊಳ್ಳೆಗಳ ವಿರುದ್ಧದ ಹೋರಾಟ ಜಾರಿಯಲ್ಲಿಡುವ ಸಲುವಾಗಿಯೇ ಆ.20ನ್ನು 'ವಿಶ್ವ ಸೊಳ್ಳೆ ದಿನ'ವಾಗಿಸಲಾಗಿದೆ.


ಜಗತ್ತಿನಲ್ಲಿಯೇ ಅತಿಹೆಚ್ಚು ಮನುಷ್ಯರನ್ನು ಸಾವಿಗೆ ದೂಡುತ್ತಿರುವ ಅಪಾಯಕಾರಿ ಜೀವಿ ಯಾವುದು ಗೊತ್ತೇ, ತುಂಬಾ ಸಣ್ಣದಾದ ಈ ಜೀವಿಗೆ ಭೂಮಿಯಲ್ಲಿಯೇ ಅತಿ ಬುದ್ಧಿಯುಳ್ಳವನು ಎಂಬ ಗರ್ವ ಹೊಂದಿರುವ ಮಾನವನೇ ಹೆದರಿ ಬೋನಿನೊಳಗೆ ಅವಿತು ಕೂರುತ್ತಾನೆ. ಹೌದು, ನಾನು ಹೇಳಲು ಹೊರಟಿರುವ ಜೀವಿಯ ಹೆಸರು ಸೊಳ್ಳೆ. ಇಂದು ವಿಶ್ವ ಸೊಳ್ಳೆ ದಿನ, ಕೆಲವರಿಗೆ ಕತ್ತಲಾಗುವುದಾದರೂ ಏಕೆ ಎಂಬಷ್ಟು ಭಯ ಹುಟ್ಟಿಸಿರುವ ಸೊಳ್ಳೆಯದು ಅಂಟಾರ್ಟಿಕ ಒಂದನ್ನೂ ಬಿಟ್ಟು ಮತ್ತೆಲ್ಲಾ ಖಂಡಗಳಲ್ಲೂ ಪ್ರಾಬಲ್ಯ ಹೊಂದಿರುವ ಬಹುದೊಡ್ಡ ಹೆಸರು.

ಮಲೇರಿಯಾ ಹರಡುವುದರಲ್ಲಿ ಮುಖ್ಯ ಪಾತ್ರವಹಿಸುವ ಸೊಳ್ಳೆಗಳು, ಪ್ರತೀವರ್ಷ ಅಂದಾಜು 7 ಲಕ್ಷಕ್ಕೂ ಅಧಿಕ ಮಂದಿಯನ್ನು ಸಾವಿನ ದವಡೆಗೆ ತಳ್ಳುತ್ತಿರುವ ಒಂದು ಸಣ್ಣಕಾಯದ ಕೀಟ. ಮ್ಯಾನ್ಮಾರ್‌ನಲ್ಲಿ ದೊರೆತಿರುವ 99 ಮಿಲಿಯನ್ ವರ್ಷಗಳ ಹಿಂದಿನ ಸೊಳ್ಳೆಯ ಪಳೆಯುಳಿಕೆಯು ಪ್ರಸಕ್ತ ಅತಿ ಪುರಾತನವಾಗಿದ್ದು, ಇವುಗಳು ಸುಮಾರು 200 ಮಿಲಿಯನ್ ವರ್ಷಗಳ ಹಿಂದೆಯೇ ಜೀವಿಸಿದ್ದವು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ನಿಮ್ಮ ಕೂತೂಹಲಕ್ಕಿರಲಿ, ಹೋಮೊಸೆಫಿಯನ್ಸ್ ಎಂದು ಅನ್ನಿಸಿಕೊಳ್ಳುವ ನಾವು ಆಫ್ರಿಕಾದಲ್ಲಿ ಗುರುತಿಸಿಕೊಂಡಿದ್ದು ಕೇವಲ 0.3 ಮಿಲಿಯನ್ ವರ್ಷಗಳ ಕೆಳಗಷ್ಟೆ.

ಜಗತ್ತಿನಲ್ಲಿ 3,600 ಸೊಳ್ಳೆಗಳ ಪ್ರಭೇದಗಳು ಪತ್ತೆಯಾಗಿದ್ದು, 30 ಮಿಲಿಯನ್ ವರ್ಷಗಳ ಹಿಂದೆಯೇ ತನ್ನ ಉದರದಲ್ಲಿ ಮಲೇರಿಯಾ ಸೂಕ್ಷ್ಮ ಜೀವಿಯನ್ನು ಹೊಂದಿದ್ದ ಸೊಳ್ಳೆಯ ಕುರುಹುಗಳನ್ನು ಕೂಡಾ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಮಸ್ಕಿಟೋ ಅನ್ನುವ ಹೆಸರು ಸ್ಪ್ಯಾನಿಷ್ ಮೂಲದ್ದು, ಅಂದರೆ ಲಿಟಲ್ ಫ್ಲೈ ಎಂದರ್ಥ, ಬದುಕುವುದಕ್ಕಾಗಿ ರಕ್ತ ಹೀರುವ ಕೀಟಗಳು ಎಂದು ದೂರಬೇಡಿ, ಸಂತಾನಕ್ಕಾಗಿ ಮಾತ್ರ ರಕ್ತವನ್ನು ಬಯಸುತ್ತೆ, ಅದರಲ್ಲೂ ಹೆಣ್ಣು ಸೊಳ್ಳೆ ಮಾತ್ರ ಈ ಕೆಲಸ ಮಾಡುವುದು, ಅದೂ ಮೊಟ್ಟೆ ಇಡುವ ಮುಂಚಿತ ಕಾಲದಲ್ಲಿನ ಪ್ರೊಟೀನ್ ಮತ್ತು ಕಬ್ಬಿಣದ ಅಂಶಗಳ ಅಗತ್ಯಕ್ಕಾಗಿ, ಅದನ್ನು ಹೊರತುಪಡಿಸಿದರೆ ಸೊಳ್ಳೆಗಳು ಜೇನುನೊಣಗಳ ಕಸಿನ್ಸ್ ಅನ್ನಬಹುದು. ಸದಾ ಹೂವಿನ ಸಿಹಿ ಮಕರಂದವನ್ನು ಹೀರುವುದರಲ್ಲಿ ಹೆಚ್ಚು ಆನಂದ ಕಾಣುವವು ಮತ್ತು ಸಿಹಿಗೆ ಹಾತೊರೆಯುವವು.

ಒಮ್ಮೆಲೇ ಅಂದಾಜು 200ರಷ್ಟು ಮೊಟ್ಟೆಗಳನ್ನು ಇಡುವ ಸೊಳ್ಳೆ, ರಾತ್ರಿ ಹಗಲೆನ್ನದೆ ಬಂದು ರಕ್ತಕ್ಕಾಗಿ ನಮ್ಮನ್ನು ಸತಾಯಿಸುವುದರಲ್ಲಿ ಅರ್ಥವಿದೆ ಅಲ್ಲವೇ. ಪ್ರಾಣಿಗಳು ಹೊರಸೂಸುವ ಕಾರ್ಬನ್ ಡೈಆಕ್ಸೈಡ್ ಮತ್ತು ದೇಹದ ತಾಪಮಾನಗಳು ಸೊಳ್ಳೆಗಳಿಗೆ ತಮ್ಮ ಶಿಕಾರಿಗಳನ್ನು ಹುಡುಕುವಲ್ಲಿ ಸಹಕರಿಸುತ್ತದೆ, ಅವುಗಳಿಗೇನು ಕಣ್ಣಿಲ್ಲವೇ ಎಂದು ಕೇಳಬೇಡಿ, ಕಣ್ಣಿದೆ ಆದರೆ ಸ್ವಲ್ಪಮಂದ. ಕಣ್ಣಿದ್ದರೂ ಗೋಡೆಯಾಚೆ ನೋಡಲು ಸಾಧ್ಯವಿಲ್ಲವಲ್ಲ, ಹಾಗಾಗಿ ಸೊಳ್ಳೆಗಳ ಹುಡುಕಾಟ ಸ್ವಲ್ಪ ಬೇರೆಯದೇ ರೀತಿಯದು.

ಮನುಷ್ಯನಿಗೆ ಇಷ್ಟು ಹಾನಿ ಮಾಡುತ್ತಿರುವ ಸೊಳ್ಳೆಗೇಕೆ ಒಂದು ದಿನಾಚರಣೆ ಎಂದು ನೀವು ಕೋಪಿಸಿಕೊಳ್ಳಬಹುದು, ಅದಕ್ಕೇನು ಅರ್ಹತೆಯಿದೆ ಎಂದು ಕೇಳಬಹುದು, ಸೊಳ್ಳೆಗಳ ದುರದೃಷ್ಟ ನೋಡಿ, ಎಲ್ಲಾ ಪ್ರಾಣಿಗಳ ಉಳಿವಿಗಾಗಿ ದಿನಾಚರಣೆ ಮಾಡಿದರೆ, ಇಲ್ಲಿ ಅವುಗಳ ಅಪಾಯ ಮತ್ತು ಅವುಗಳನ್ನು ತಡೆಗಟ್ಟುವ ಕುರಿತು ಮಾತನಾಡುವುದಕ್ಕಾಗಿ ಒಂದು ದಿನ ಮಾಡಲಾಗಿದೆ. ನಿಜ, ಮಲೇರಿಯಾ ಹಾಗೂ ಅದಕ್ಕೆ ಕಾರಣವಾದ ಸೊಳ್ಳೆಗಳ ಕುರಿತು ಎಚ್ಚರಿಕೆ ಮತ್ತು ಮಲೇರಿಯಾ ವಿರುದ್ಧದ ಸಂಶೋಧನೆ, ಚಿಕಿತ್ಸೆಗೆ ಹಣದ ಬೆಂಬಲ ಕೇಳಲು ಹಾಗೂ ವೈದ್ಯರ ಶ್ರಮವನ್ನು ಸ್ಮರಿಸಲು ಇದು ಒಂದು ಅವಕಾಶವಾಗಬೇಕೆಂಬ ಆಶಯದ ದಿನವಾಗಿದೆ.

ಸರ್ ರೊನಾಲ್ಡ್ ರಾಸ್, 1857ರಂದು ಉತ್ತರಾಖಂಡ ರಾಜ್ಯದ ಅಲ್ಮೋರಾದಲ್ಲಿ ಜನಿಸಿದ ಬ್ರಿಟಿಷ್ ವೈದ್ಯ. ಇಂಗ್ಲೆಂಡ್‌ನಲ್ಲಿ ಶಿಕ್ಷಣ ಪಡೆದು 1881ರಲ್ಲಿ ಭಾರತೀಯ ವೈದ್ಯಕೀಯ ಸೇವೆಗೆ ಸೇರಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದಾತ, ಈ ಅವಧಿಯಲ್ಲಿಯೇ ಆತನ ಅದ್ಭುತ ಸಾಧನೆ ರೂಪುಗೊಂಡಿದ್ದು, ಮಲೇರಿಯಾ ಹರಡಲು ಹೆಣ್ಣು ಅನಾಫಿಲಿಸ್ ಸೊಳ್ಳೆಗಳು ಕಾರಣವಾಗುತ್ತವೆ ಎಂದು ಪತ್ತೆ ಹಚ್ಚಿದ್ದು. ಕರುಳಿನ ಸೋಂಕಿನಿಂದ ಬಳಲಿದ ಹಕ್ಕಿಗಳನ್ನು ಬಳಸಿಕೊಂಡು ಅಧ್ಯಯನ ಆರಂಭಿಸಿದ್ದ ರಾಸ್, ಈ ದಿನ ಅಂದರೆ, ಆಗಸ್ಟ್ 20, 1897ರಂದು ಸಿಕಂದರಾಬಾದ್‌ನಲ್ಲಿ ನಾಲ್ಕು ದಿನದ ಹಿಂದಷ್ಟೇ ಮಲೇರಿಯಾ ಪೀಡಿತ ವ್ಯಕ್ತಿಯ ರಕ್ತವನ್ನು ಹೀರಿದ್ದ ಸೊಳ್ಳೆಯನ್ನು ಸೀಳಿ ಅದರ ಉದರದಲ್ಲಿದ್ದ ಮಲೇರಿಯಾ ಪ್ಯಾರಸೈಟ್ ಅನ್ನು ಕಂಡು ಹಿಡಿದಿದ್ದ. ಮನುಷ್ಯ ಜಗತ್ತು ಶತ್ರುವನ್ನು ಮೊದಲನೇ ಬಾರಿ ಗುರುತಿಸಿತ್ತು.

ಇಂದಿಗೂ ಪ್ರತೀವರ್ಷ 22 ಕೋಟಿಗೂ ಅಧಿಕ ಜನರು ಮಲೇರಿಯಾಕ್ಕೆ ತುತ್ತಾಗುತ್ತಿದ್ದಾರೆ, ಸರಿಯಾದ ಔಷಧಿ ಇನ್ನೂ ದೊರಕಿಲ್ಲ. ಇರುವ ಕ್ವಿನೈನ್ ಮತ್ತಿತರ ಔಷಧಿಗಳನ್ನು ಬಳಸಿ ಬದುಕುತ್ತಿದ್ದೇವೆ. ರೊನಾಲ್ಡ್ ರಾಸ್‌ನ ಅನ್ವೇಷಣೆಯಿಂದ ಸೊಳ್ಳೆಗಳ ಕುರಿತು ಆರಂಭವಾದ ಜಾಗೃತಿಯಿಂದ ಪ್ರತೀವರ್ಷ ಕೋಟ್ಯಂತರ ಜನರು ಈ ಕಾಯಿಲೆಯಿಂದ ಪಾರಾಗುತ್ತಿದ್ದಾರೆ. 2000ನೇ ಇಸವಿಯಿಂದೀಚೆಗೆ ಅಂದಾಜು 150 ಕೋಟಿ ಜನರನ್ನು ಮಲೇರಿಯಾ ಹರಡುವ ವಿಧಾನದ ಅರಿವಿನಿಂದಾಗಿ ಸುರಕ್ಷಿತವಾಗಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಇದೆಲ್ಲದರ ಶ್ರೇಯ ನಮ್ಮ ಮಣ್ಣಲ್ಲಿ ಹುಟ್ಟಿದ್ದ ಸರ್ ರೊನಾಲ್ಡ್ ರಾಸ್‌ನ ಅನ್ವೇಷಣೆಗೆ ಸಲ್ಲಬೇಕು.

1902ರಲ್ಲಿ ಈ ಅನ್ವೇಷಣೆಗಾಗಿ ವೈದ್ಯ ಶಾಸ್ತ್ರದಲ್ಲಿ ನೊಬೆಲ್ ಪಡೆದ ಮೊದಲ ಬ್ರಿಟಿಷ್ ವ್ಯಕ್ತಿಯಾಗಿ ಇತಿಹಾಸ ನಿರ್ಮಿಸಿದ ರೊನಾಲ್ಡ್, ಆ ದಿನವೇ ಆ.20ನ್ನು ವಿಶ್ವ ಸೊಳ್ಳೆ ದಿನವಾಗಿ ಆಚರಿಸುವಂತೆ ಮತ್ತು ಆ ಮೂಲಕ, ಮಲೇರಿಯಾ ಹಾಗೂ ಸೊಳ್ಳೆಗಳ ನಡುವಿನ ಸಂಬಂಧದ ಅರಿವನ್ನು ಜನರಲ್ಲಿ ಮೂಡಿಸಬೇಕೆಂದು ಕೋರುತ್ತಾರೆ. ಈ ತಿಳುವಳಿಕೆಯೊಂದೇ ಕಾಪಾಡಬಲ್ಲದು ಎನ್ನುತ್ತಾರೆ. ಇಂದು ವಿಶ್ವ ಸೊಳ್ಳೆ ದಿನ, ಅವುಗಳಂತು ತಾಯಿಯಾಗುವ ಸಂಭ್ರಮದಿಂದ ರಕ್ತ ಹೀರಲು ಬರುತ್ತವೆ, ನೀವು ಕೂಡ ಅಯ್ಯೋ ಪಾಪ ಎಂದು ಕೊಟ್ಟು ಕಳಿಸಬೇಡಿ, ಕೇವಲ ಒಂದು ಬಾರಿ ಸೋಂಕಿತ ಸೊಳ್ಳೆ ಕಚ್ಚಿದರೂ ಸಾಕು ಮಲೇರಿಯಾಪೀಡಿತರಾಗಲು. ಹೆಚ್ಚು ಜಾಗೃತರಾಗಿರಿ, ಬಿಸಿಲು ಮಳೆಯಿರುವ ಈ ಮಾನ್ಸೂನ್ ವಾತಾವರಣ ಸೊಳ್ಳೆಗಳ ಸಂತತಿಗೆ ಹೇಳಿ ಮಾಡಿಸಿದ್ದು. ಅವಿತುಕೊಳ್ಳುವುದನ್ನಷ್ಟೇ ಕಲಿತರೆ ಸಾಲದು, ವಾತಾವರಣ ಶುದ್ಧವಾಗಿಡುವ, ಸೊಳ್ಳೆ ಉತ್ಪತ್ತಿಗೆ ಸಹಕರಿಸುವಂತಹ ಕೊಳಚೆ ನೀರು ಸಂಗ್ರಹವಾಗದೆ ಇರುವ ಹಾಗೆ ನೋಡಿಕೊಳ್ಳಬೇಕಿದೆ. ಸೊಳ್ಳೆ ಸರ್ವಾಂತರ್ಯಾಮಿಯಾಗಿದ್ದು, ನನ್ನ ಸಲಹೆ ಸ್ವಲ್ಪಜೀವವಿರೋಧಿ ಅನಿಸಿದರೂ ಪರವಾಗಿಲ್ಲ, ಅವುಗಳ ಸಂತಾನೋತ್ಪತ್ತಿಯ ನಿರ್ದಾಕ್ಷಿಣ್ಯ ನಿಯಂತ್ರಣವೇ ಉತ್ತಮ ದಾರಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)