varthabharthi


ಕಾಲಮಾನ

ಬಿಳಿ ದಿರಿಸಿನ ಕ್ರಿಕೆಟ್ ನೋಡುವುದೇ ಸೊಗಸು!

ವಾರ್ತಾ ಭಾರತಿ : 27 Aug, 2022
ರಾಮಚಂದ್ರ ಗುಹಾ

ದಶಕಗಳ ಅವಧಿಯಲ್ಲಿ ನಾನು ಹಲವು ಉತ್ತಮ ದರ್ಜೆಯ ಟೆಸ್ಟ್ ಪಂದ್ಯಗಳು ಮತ್ತು ರಣಜಿ ಟ್ರೋಫಿ ಫೈನಲ್‌ಗಳನ್ನು ನೋಡಿದ್ದೇನೆ. ಅವುಗಳ ಸಾಲಿಗೆ ಈಗ 2022ರಲ್ಲಿ ನಾನು ನೋಡಿದ ಈ ಮೂರು ಪಂದ್ಯಗಳು ಸೇರುತ್ತವೆ. ಮುಂದೆ ಬರಲಿರುವ ವೃದ್ಧಾಪ್ಯದ ನೋವಿನ ದಿನಗಳಲ್ಲಿ ಈ ಪಂದ್ಯಗಳ ನೆನಪುಗಳು ನನ್ನ ಜೊತೆಗಿರುತ್ತವೆ ಮತ್ತು ನನಗೆ ಸಾಂತ್ವನ ಹೇಳುತ್ತವೆ.ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ನ ಸದಸ್ಯನಾಗಿ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ನಡೆಯುವ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ನನಗೆ ಅವಕಾಶವಿದೆ. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪಂದ್ಯ ಗಳನ್ನು ವೀಕ್ಷಿಸಲು ನಾನು ಈ ಅವಕಾಶವನ್ನು ಬಳಸಿಕೊಂಡಿಲ್ಲ. ಐಪಿಎಲ್‌ಗೆ ಸಂಬಂಧಿಸಿದ ನನ್ನ ಏಕೈಕ ನೆನಪು ಪಂದ್ಯಾವಳಿಯ ಆರಂಭಿಕ ವರ್ಷದ್ದು. 2008ರ ಯಾವುದೋ ಒಂದು ದಿನ ನಾನು ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡುತ್ತಿದ್ದೆ. ಕೈತೊಳೆಯಲು ಹೋಗುತ್ತಿದ್ದಾಗ ಟಿವಿಯ ಎದುರಿನಿಂದ ಹಾದು ಹೋದೆ. ಆಗ ಟಿವಿಯತ್ತ ಒಮ್ಮೆ ತಿರುಗಿ ನೋಡಿದಾಗ ಪರದೆಯಲ್ಲಿ ಶೇನ್ ವಾರ್ನ್ ಕಾಣಿಸಿಕೊಂಡರು. ಅತ್ಯಂತ ಶ್ರೇಷ್ಠ ಸ್ಪಿನ್‌ಬೌಲರ್ ಆಗಷ್ಟೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ಈಗ ಅವರನ್ನು ಹೊಸದಾಗಿ ನೋಡುವ ಅವಕಾಶವೊಂದು ಎದುರಾಗಿತ್ತು. ಅವರು ಮಹೇಂದ್ರ ಸಿಂಗ್ ಧೋನಿಗೆ ಹಾಕಿದ ಮೂರು ಎಸೆತಗಳನ್ನು ನಾನು ನೋಡಿದೆ. ಕೊನೆಯ ಎಸೆತದಲ್ಲಿ ಬ್ಯಾಟ್ಸ್‌ಮನ್ ಚೆಂಡಿನ ಜಿಗಿತದ ದೂರವನ್ನು ತಪ್ಪಾಗಿ ಅಂದಾಜಿಸಿ ಶಾರ್ಟ್ ಮಿಡ್-ವಿಕೆಟ್‌ನಲ್ಲಿ ಕ್ಯಾಚ್ ನೀಡಿದರು.

ಐಪಿಎಲ್ 2022ರ ಆವೃತ್ತಿಯ ಒಂದೇ ಒಂದು ಎಸೆತವನ್ನು ಪ್ರತ್ಯಕ್ಷವಾಗಿ ಅಥವಾ ಟಿವಿಯಲ್ಲಾದರೂ ನೋಡಲು ನಾನು ಹೋಗಲಿಲ್ಲ. ಬದಲಿಗೆ, ಮನಸ್ಸು ಕ್ರಿಕೆಟ್‌ನತ್ತ ಹೊರಳಿದಾಗ, ನಾನು ಯೂಟ್ಯೂಬ್‌ನಲ್ಲಿ ಶೇನ್ ವಾರ್ನ್‌ಗಾಗಿ ಏರ್ಪಡಿಸಲಾದ ಶ್ರದ್ಧಾಂಜಲಿ ಸಭೆಗಳನ್ನು ವೀಕ್ಷಿಸಿದೆ. 2022ರ ಐಪಿಎಲ್ ಆವೃತ್ತಿ ಆರಂಭಗೊಳ್ಳುವ ಸುಮಾರು ಮೂರು ವಾರಗಳ ಮೊದಲು ಶೇನ್ ವಾರ್ನ್ ನಿಧನರಾಗಿದ್ದರು. ವಾರ್ನ್ ಬಗ್ಗೆ ಮೈಕ್ ಆ್ಯಥರ್ಟನ್, ಅಲನ್ ಬಾರ್ಡರ್, ಮರ್ವ್ ಹ್ಯೂಸ್ ಮತ್ತು ಬ್ರಯಾನ್ ಲಾರಾ ಆಡಿದ ಮಾತುಗಳು ಶಮನಕಾರಕವಾಗಿದ್ದವು ಹಾಗೂ ಹೃದಯವನ್ನು ತಂಪುಗೊಳಿಸಿದವು. ಅದೇ ವೇಳೆ, ಅವರ ಬೌಲಿಂಗ್‌ನ ಹಳೆಯ ವೀಡಿಯೊ ತುಣುಕುಗಳನ್ನು ಯೂಟ್ಯೂಬ್‌ನಲ್ಲಿ ನೋಡುವುದು ಕೂಡಾ ಆಹ್ಲಾದಕರವಾಗಿತ್ತು.

ಐಪಿಎಲ್ ನಡೆಯುತ್ತಿದ್ದ ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ನನ್ನ ಸಂಪೂರ್ಣ ಕ್ರಿಕೆಟ್ ಆಸಕ್ತಿಯಾಗಿದ್ದವರು ವಾರ್ನ್. ಬಳಿಕ ಐಪಿಎಲ್ ಮುಕ್ತಾಯಗೊಂಡಿತು ಹಾಗೂ ನೈಜ ಕ್ರಿಕೆಟ್ ಪುನರಾರಂಭಗೊಂಡಿತು. ಜೂನ್‌ನಲ್ಲಿ ಬ್ರಿಟನ್‌ನಲ್ಲಿ ನಾನೊಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರ ಸಂದರ್ಭದಲ್ಲೇ ನನ್ನ ಪ್ರವಾಸವಿತ್ತು. ಆ ಪಂದ್ಯದಲ್ಲಿ ಭಾರತ ಆಡುತ್ತಿರಲಿಲ್ಲ. ಹಾಗಾಗಿ, ಅದು ನನ್ನನ್ನು ಇನ್ನೂ ಹೆಚ್ಚು ಸೆಳೆಯಿತು. ವಯಸ್ಸು ಹೆಚ್ಚುತ್ತಿರುವಂತೆಯೇ, ಕ್ರೀಡಾ ವಿಷಯಗಳಲ್ಲಿ ನಾನು ಕಡಿಮೆ ರಾಷ್ಟ್ರೀಯವಾದಿಯಾಗುತ್ತಾ ಹೋಗುತ್ತಿದ್ದೇನೆ. ಟೆಸ್ಟ್ ಪಂದ್ಯವೊಂದರಲ್ಲಿ ನನ್ನ ದೇಶ ಆಡುತ್ತಿಲ್ಲವಾದರೆ, ಆ ಪಂದ್ಯವನ್ನು ನಾನು ಸೌಂದರ್ಯೋಪಾಸನಾ ದೃಷ್ಟಿಯಿಂದ ಮಾತ್ರ ವೀಕ್ಷಿಸುತ್ತೇನೆ.

ಮೇ ತಿಂಗಳ ಕೊನೆಯ ದಿನದಂದು ನಾನು ಲಂಡನ್‌ನಲ್ಲಿ ಇಳಿದೆ. ಲಾರ್ಡ್ಸ್ ಟೆಸ್ಟ್ ಜೂನ್ 3ರಂದು ಆರಂಭಗೊಂಡಿತು. ಆ ವೇಳೆಗೆ ನನ್ನ ಜೆಟ್‌ಲ್ಯಾಗ್ (ವಿವಿಧ ಸಮಯ ವಲಯಗಳನ್ನು ದಾಟಿ ಬಂದಿರುವುದರಿಂದ ಹಗಲಲ್ಲೂ ನಿದ್ದೆಗಣ್ಣಲ್ಲಿ ಇರುವುದು ಮತ್ತು ಒಂದು ರೀತಿಯ ಆಯಾಸದ ಭಾವನೆ)ನ ತೀವ್ರತೆ ಕೂಡ ಕಡಿಮೆಯಾಗಿತ್ತು. ಪಂದ್ಯದ ಮೊದಲ ದಿನದ ಆಟಕ್ಕೆ ನನಗೆ ಟಿಕೆಟ್ ಸಿಗಲಿಲ್ಲ. ಆ ದಿನ 17 ವಿಕೆಟ್‌ಗಳು ಬಿದ್ದವು. ಎರಡನೇ ದಿನದ ಆಟವನ್ನು ನಾನು ವೀಕ್ಷಿಸಿದೆ. ಅಂದು ನ್ಯೂಝಿಲ್ಯಾಂಡ್‌ನ ಹೆಚ್ಚು ಪರಿಚಿತವಲ್ಲದ ಬ್ಯಾಟ್ಸ್‌ಮನ್‌ಗಳಾದ ಮಿಚೆಲ್ ಮತ್ತು ಬ್ಲಂಡೆಲ್ ಸುದೀರ್ಘ ಐದನೇ ವಿಕೆಟ್ ಜೊತೆಯಾಟವಾಡಿದರು. ಮೂರನೇ ದಿನದಂದು, ನಾಲ್ಕನೇ ಇನಿಂಗ್ಸ್‌ನ ಸಾಕಷ್ಟು ದೊಡ್ಡ ಮೊತ್ತವನ್ನು ಬೆನ್ನತ್ತುವ ಕೆಲಸವನ್ನು ಇಂಗ್ಲೆಂಡ್ ಭರವಸೆಯಿಂದಲೇ ಆರಂಭಿಸಿತು. ನಾಲ್ಕನೇ ದಿನದ ಆಟವನ್ನು ನಾನು ತಪ್ಪಿಸಿಕೊಳ್ಳಬೇಕಾಯಿತು. ಅಂದು ಇಂಗ್ಲೆಂಡ್ ತನ್ನ ಗುರಿಯನ್ನು ಸುಲಭವಾಗಿ ಬೆನ್ನತ್ತಿ ವಿಜಯಿಯಾಯಿತು.

ವಸಾಹತುಶಾಹಿ ವಿರೋಧಿ ಭಾರತೀಯನಾಗಿ ನಾನು ಇಂಗ್ಲೆಂಡನ್ನು ಬೆಂಬಲಿಸುವಂತಿಲ್ಲ ಎನ್ನುವುದು ನನಗೆ ಗೊತ್ತಿದೆ. ನಾನು ಹಾಗೆ ಬೆಂಬಲಿಸುವುದು ತೀರಾ ಕಡಿಮೆ. ಆದರೆ, ಈ ಲಾರ್ಡ್ಸ್ ಟೆಸ್ಟ್ ಮಾತ್ರ ಅದಕ್ಕೆ ಒಂದು ಅಪವಾದ. ಯಾಕೆಂದರೆ, ಜೋ ರೂಟ್ ನನ್ನ ನೆಚ್ಚಿನ ಕ್ರಿಕೆಟಿಗರ ಪೈಕಿ ಒಬ್ಬರು. ಇಂಗ್ಲೆಂಡ್ ತಂಡದ ಭಾರತ ಪ್ರವಾಸದ ಮಧ್ಯದಲ್ಲಿ ಇಪ್ಪತ್ತೊಂದು ವರ್ಷದ ನವತರುಣ ರೂಟ್ ಭಾರತಕ್ಕೆ ಬಂದು ತನ್ನ ತಂಡವನ್ನು ಸೇರಿಕೊಂಡಿದ್ದು ನನ್ನ ನೆನಪಿನಲ್ಲಿದೆ. ರೂಟ್ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದು ನಾಗಪುರದಲ್ಲಿ. ವಾತಾವರಣ ಮತ್ತು ಪರಿಸರಕ್ಕೆ ಸಂಬಂಧಿಸಿ ನಾಗಪುರ ಮತ್ತು ಅವರ ತವರು ಪಟ್ಟಣ ಯಾರ್ಕ್‌ಶೈರ್ ನಡುವೆ ಅಜಗಜಾಂತರವಿದೆ. ಆ ಪಂದ್ಯದಲ್ಲಿ ರೂಟ್ ಸಮಾಧಾನಚಿತ್ತದಿಂದ ಭಾರತೀಯ ಸ್ಪಿನ್ನರ್‌ಗಳನ್ನು ಎದುರಿಸಿ ಪಂದ್ಯವನ್ನು ಸುಲಭವಾಗಿ ಡ್ರಾ ಮಾಡಿಕೊಳ್ಳಲು ತನ್ನ ತಂಡಕ್ಕೆ ನೆರವಾದರು. ಅಂತಿಮವಾಗಿ ಸರಣಿಯನ್ನು 2-1ರಿಂದ ತನ್ನ ತಂಡ ಗೆಲ್ಲುವಲ್ಲಿಯೂ ಅವರು ದೇಣಿಗೆ ನೀಡಿದರು. (ಭಾರತದಲ್ಲಿ ಪ್ರವಾಸಿ ತಂಡವೊಂದು ಟೆಸ್ಟ್ ಸರಣಿಯನ್ನು ಗೆದ್ದಿರುವುದು ಅದೇ ಕೊನೆ).

ಅದಾಗಿ ಒಂದು ದಶಕವೇ ಉರುಳಿದೆ. ಈ ಅವಧಿಯಲ್ಲಿ ಓರ್ವ ಬ್ಯಾಟ್ಸ್‌ಮನ್ ಆಗಿ ಮತ್ತು ಓರ್ವ ವ್ಯಕ್ತಿಯಾಗಿ ಅವರನ್ನು ನಾನು ತುಂಬಾ ಮೆಚ್ಚಿಕೊಂಡಿದ್ದೇನೆ. ಕ್ರೀಸ್‌ಗೆ ಬಂದ ತಕ್ಷಣವೇ ರನ್ ಗಳಿಕೆಗೆ ತೊಡಗುವ ಅವರ ಶೈಲಿ ನನಗೆ ಇಷ್ಟ. ಅವರ ತರಹೇವಾರಿ ಹೊಡೆತಗಳನ್ನು (ಅದರಲ್ಲೂ ವಿಶೇಷವಾಗಿ ಕವರ್ ಡ್ರೈವ್ ಮತ್ತು ಬ್ಯಾಕ್ ಕಟ್‌ಗಳು) ನಾನು ಆನಂದಿಸುತ್ತೇನೆ. ಸ್ಲಿಪ್‌ನಲ್ಲಿ ಅವರ ಉತ್ಕೃಷ್ಟ ಫೀಲ್ಡಿಂಗ್‌ಗೆ ಮತ್ತು ನಿರುಪದ್ರವಿಯಂತೆ ಕಾಣುವ ಆಫ್-ಸ್ಪಿನ್ ಬೌಲಿಂಗ್ ಮೂಲಕ ಅನಿರೀಕ್ಷಿತವಾಗಿ ವಿಕೆಟ್‌ಗಳನ್ನು ಉರುಳಿಸುವ ಅವರ ಸಾಮರ್ಥ್ಯಕ್ಕೆ ನಾನು ಬೆರಗಾಗಿದ್ದೇನೆ. ಅವರು ಯಾವಾಗಲೂ ನಗುತ್ತಲೇ ಇರುತ್ತಾರೆ ಮತ್ತು ಈಗಲೂ ತರುಣನಂತೆ ಕಾಣುತ್ತಾರೆ. ಇದು ನನಗೆ ತುಂಬಾ ಇಷ್ಟವಾಗುತ್ತದೆ. ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ತಂಡದ ವಿಜಯದಲ್ಲಿ ಅವರು ಮಹತ್ವದ ಪಾತ್ರ ವಹಿಸಿದರು. ಆ ಪಂದ್ಯದಲ್ಲಿ ಅವರು ತಂಡದ ಓರ್ವ ಸಾಮಾನ್ಯ ಸದಸ್ಯನಾಗಿ ಆಡಿದರು. ಅದಕ್ಕೂ ಮೊದಲು, ತಂಡದ ನಾಯಕನಾಗಿ ಅವರ ನಿರ್ವಹಣೆ ಶ್ರೇಷ್ಠ ಮಟ್ಟದಲ್ಲಿ ಇರಲಿಲ್ಲ.

ಜೂನ್ ಮೂರನೇ ವಾರದಲ್ಲಿ ನಾನು ಬೆಂಗಳೂರಿಗೆ ಮರಳಿದೆ. ನನ್ನ ಜೆಟ್‌ಲ್ಯಾಗ್‌ನ ತೀವ್ರತೆ ಕಡಿಮೆಯಾದಾಗ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಹೋದೆ. ಅಲ್ಲಿ ಮುಂಬೈ ಮತ್ತು ಮಧ್ಯಪ್ರದೇಶ ತಂಡಗಳ ನಡುವೆ ರಣಜಿ ಪಂದ್ಯಾವಳಿಯ ಫೈನಲ್ ನಡೆಯುತ್ತಿತ್ತು. ರಣಜಿಯಲ್ಲಿ ಮುಂಬೈ ಅದಾಗಲೇ 41 ಬಾರಿ ಚಾಂಪಿಯನ್ ಆಗಿತ್ತು; ಆದರೆ ಮಧ್ಯಪ್ರದೇಶ ಒಮ್ಮೆಯೂ ಪ್ರಶಸ್ತಿ ಗೆದ್ದಿರಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 374 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಹಿಂದೆ, ಪದ್ಮಾಕರ್ ಶಿವಾಲ್ಕರ್‌ರಂಥ ಬೌಲರ್‌ಗಳು ಮುಂಬೈ ತಂಡದಲ್ಲಿದ್ದಾಗ ಇನಿಂಗ್ಸ್ ಅಂತರದಿಂದ ಗೆಲುವು ಸಾಧಿಸಲು ಈ ಮೊತ್ತ ಸಾಕಾಗುತ್ತಿತ್ತೇನೊ!

ಪಂದ್ಯದ ಎರಡನೇ ದಿನದಾಟದ ಭೋಜನ ವಿರಾಮದ ಬಳಿಕ ನಾನು ಮೈದಾನಕ್ಕೆ ಮರಳಿದೆ. ಮಧ್ಯಪ್ರದೇಶವು ಧೈರ್ಯ ಮತ್ತು ದೃಢ ನಿರ್ಧಾರದಿಂದ ಬ್ಯಾಟಿಂಗ್ ಮಾಡುವುದನ್ನು ಮೂರನೇ ದಿನವಿಡೀ ವೀಕ್ಷಿಸಿದೆ. ಜಾಗರೂಕತೆಯಿಂದ ಆಡುತ್ತಿದ್ದ ಯಶ್ ದುಬೆ ಮತ್ತು ಹೆಚ್ಚು ಸರಾಗವಾಗಿ ಆಡುತ್ತಿದ್ದ ಶುಭಮ್ ಶರ್ಮ ಎರಡನೇ ವಿಕೆಟ್‌ಗೆ ದ್ವಿಶಕತದ ಜೊತೆಯಾಟವಾಡಿದರು. ಬಳಿಕ ಆಕ್ರಮಣಶೀಲ ರಜತ್ ಪಾಟಿದಾರ್ ದೊಡ್ಡ ಹೊಡೆತಗಳನ್ನು ಬಾರಿಸಿ ತಂಡವನ್ನು ಮೊದಲ ಇನಿಂಗ್ಸ್ ಮುನ್ನಡೆಯತ್ತ ಒಯ್ದರು. ಐದನೇ ದಿನದ ಕೊನೆಯ ಅವಧಿಯ ಆಟವನ್ನು ನೋಡಲು ನಾನು ಮತ್ತೆ ಮೈದಾನಕ್ಕೆ ಹೋದೆ. ಆ ಪಂದ್ಯವನ್ನು ಮಧ್ಯಪ್ರದೇಶ ಆರು ವಿಕೆಟ್‌ಗಳಿಂದ ಗೆದ್ದು ಮೊದಲ ಬಾರಿಗೆ ರಣಜಿ ಟ್ರೋಫಿಯನ್ನು ಎತ್ತಿತು. ಆಟದ ಕೊನೆಯಲ್ಲಿ, ಮಧ್ಯಪ್ರದೇಶದ ಆಟಗಾರರು ತಮ್ಮ ಕೋಚ್ ಚಂದ್ರಕಾಂತ್ ಪಂಡಿತ್‌ರನ್ನು ಮೇಲಕ್ಕೆತ್ತಿದರು.

ಈ ಪಂದ್ಯದ ವೇಳೆ ನೆಲೆಸಿದ ಹವಾಮಾನವೂ ಕ್ರಿಕೆಟ್‌ನಷ್ಟೇ ಉತ್ತಮವಾಗಿತ್ತು. ಪಂದ್ಯವನ್ನು ವೀಕ್ಷಿಸಲು ನನಗೆ ಸ್ಟೇಡಿಯಮ್‌ನಲ್ಲಿ ಉತ್ತಮ ಆಸನಗಳೂ ಸಿಕ್ಕವು (ಪೆವಿಲಿಯನ್ ಎಂಡ್‌ನಲ್ಲಿರುವ ಸೈಟ್‌ಸ್ಕ್ರೀನ್‌ನ ಮೇಲ್ಗಡೆ). ನಾನು ‘ಅಂಡರ್‌ಡಾಗ್’ (ಗೆಲ್ಲುವ ಅವಕಾಶ ಕಡಿಮೆ ಎಂಬುದಾಗಿ ಪರಿಗಣಿಸಲಾದ ತಂಡ) ಮಧ್ಯಪ್ರದೇಶವನ್ನು ಬೆಂಬಲಿಸುತ್ತಿದ್ದೆ. ಅದೇ ಮೈದಾನದಲ್ಲಿ 23 ವರ್ಷಗಳ ಹಿಂದೆ, ಚಂದ್ರಕಾಂತ್ ಪಂಡಿತ್ ನೇತೃತ್ವದ ಮಧ್ಯಪ್ರದೇಶವು ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕದ ವಿರುದ್ಧ ಕಠಿಣವಾಗಿ ಹೋರಾಡುತ್ತಾ ಸೋಲುವುದನ್ನು ನೋಡಿದ್ದೆ (ಖಂಡಿತವಾಗಿಯೂ ನಾನು ಇದಕ್ಕಾಗಿ ಮಧ್ಯಪ್ರದೇಶವನ್ನು ಈ ಬಾರಿ ಬೆಂಬಲಿಸಿದ್ದಲ್ಲ!). ಇನ್ನೊಂದು ಹೇಳಬೇಕೆಂದರೆ, ದೇಶಿ ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ವಿಷಯಗಳಲ್ಲಿ, ‘ಮುಂಬೈ ಹೊರತುಪಡಿಸಿ ಯಾರೂ ಆಗಬಹುದು’ ಎನ್ನುವುದು ನನ್ನ ಧ್ಯೇಯವಾಗಿದೆ!

ಬಿಳಿ ದಿರಿಸು ಧರಿಸಿ ಆಡಲಾದ ಈ ಎರಡು ಕ್ರಿಕೆಟ್ ಪಂದ್ಯಗಳ ಬಗ್ಗೆ ಜುಲೈಯಲ್ಲಿ ಅಂಕಣವೊಂದನ್ನು ಬರೆಯಬೇಕೆಂದು ನಾನು ಯೋಚಿಸಿದ್ದೆ. ಆದರೆ, ಅದೃಷ್ಟವಶಾತ್, ನಾನು ಇನ್ನೂ ಸ್ವಲ್ಪ ಸಮಯ ಕಾಯಲು ನಿರ್ಧರಿಸಿದೆ. ಹಾಗಾಗಿ, ನನಗೆ ಇನ್ನೊಂದು ಉತ್ತಮ ಪಂದ್ಯವನ್ನು ಕಣ್ಣಲ್ಲಿ ತುಂಬಿಸಿಕೊಳ್ಳುವ ಅವಕಾಶ ದೊರೆಯಿತು. ಉಪನ್ಯಾಸವೊಂದನ್ನು ನೀಡುವುದಕ್ಕಾಗಿ ನಾನು ಆಗಸ್ಟ್‌ನಲ್ಲಿ ಮತ್ತೊಮ್ಮೆ ಇಂಗ್ಲೆಂಡ್‌ಗೆ ಪ್ರಯಾಣಿಸಿದೆ. ಅದೇ ಸಂದರ್ಭದಲ್ಲಿ ಲಾರ್ಡ್ಸ್‌ನಲ್ಲಿ ಇನ್ನೊಂದು ಟೆಸ್ಟ್ ಪಂದ್ಯ ಏರ್ಪಾಡಾಗಿತ್ತು. ಈ ಬಾರಿ ಆತಿಥೇಯ ಇಂಗ್ಲೆಂಡ್ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕ ತಂಡಗಳು ಮುಖಾಮುಖಿಯಾಗಿದ್ದವು. ಮೂರು ಮತ್ತು ನಾಲ್ಕನೇ ದಿನದ ಆಟಕ್ಕೆ ನನ್ನಲ್ಲಿ ಟಿಕೆಟ್‌ಗಳಿದ್ದವು. ಆದರೆ ಈ ಪಂದ್ಯಕ್ಕೆ ನಾಲ್ಕನೇ ದಿನದ ಟಿಕೆಟ್ ಅನಗತ್ಯವಾಗಿತ್ತು. ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸನ್ನು ಸುಮಾರು 150ರ ಮೊತ್ತಕ್ಕೆ ಮುಕ್ತಾಯಗೊಳಿಸಿತು. ಬಳಿಕ ತನ್ನ ಎರಡನೇ ಇನಿಂಗ್ಸ್‌ನಲ್ಲೂ ಪ್ರವಾಸಿ ಬೌಲರ್‌ಗಳ ಸಾಮೂಹಿಕ ಪ್ರದರ್ಶನದ ಎದುರು ತತ್ತರಿಸಿತು. ದಕ್ಷಿಣ ಆಫ್ರಿಕದ ವಿವಿಧ ಶೈಲಿಗಳ ಐವರು ಬೌಲರ್‌ಗಳು ತಮ್ಮ ತಮ್ಮ ದೇಣಿಗೆಗಳನ್ನು ನೀಡಿದರು. ದಕ್ಷಿಣ ಆಫ್ರಿಕದ ಬೌಲರ್‌ಗಳ ನೇತೃತ್ವ ವಹಿಸಿದ್ದು ರಬಡ. ತನ್ನ ಸೌಮ್ಯ ಆ್ಯಕ್ಷನ್ ಹಾಗೂ ವೇಗ ಮತ್ತು ಸ್ವಿಂಗ್‌ನಲ್ಲಿ ಸೂಕ್ಷ್ಮ ಏರಿಳಿತಗಳನ್ನು ಮಾಡುವ ಮೂಲಕ ಅಪಾಯಕಾರಿಯಾಗಬಹುದಾದ ಬೌಲರ್ ಅವರು. ನಂತರ ಬರುವವರು ಪರಿಪೂರ್ಣ ಪೇಸ್ ಬೌಲರ್‌ಗಳಾದ ಎಂಗಿಡಿ ಮತ್ತು ನಾರ್ಟ್‌ಯೆ. ಅವರು ಆಫ್ ಸ್ಟಂಪ್‌ನತ್ತ ಅಥವಾ ಅದರ ಪಕ್ಕ ಗಂಟೆಗೆ 90 ಮೈಲಿಗಿಂತಲೂ ಹೆಚ್ಚಿನ ವೇಗದಿಂದ ಚೆಂಡುಗಳನ್ನು ಎಸೆದು ಬ್ಯಾಟರ್‌ಗಳು ಎಜ್ (ಕ್ಯಾಚ್)ಗಳನ್ನು ನೀಡುವಂತೆ ಮಾಡಬಲ್ಲರು. ಇನ್ನೊಬ್ಬರು ಜಾನ್ಸನ್. ಅವರ ಬೌಲಿಂಗ್‌ನಲ್ಲಿ ವೇಗದ ಕೊರತೆಯಿದೆಯಾದರೂ, ತನ್ನ ಲೇಟ್ ಸ್ವಿಂಗ್ ಮತ್ತು ಚೆಂಡನ್ನು ಎತ್ತರದಿಂದ ಎಸೆಯುವ ಮೂಲಕ ತನ್ನ ಕೊರತೆಯನ್ನು ಸರಿದೂಗಿಸಬಲ್ಲರು. ಐದನೆಯವರು, ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್. ಅವರು ಬೇಕಾದಾಗ ತಂಡಕ್ಕೆ ಮಹತ್ವದ ಮುನ್ನಡೆಗಳನ್ನು ನೀಡಬಲ್ಲರು. ಈ ಐವರು ಬೌಲರ್‌ಗಳನ್ನು ನಾಯಕ ಡೀನ್ ಎಲ್ಗರ್ ಚೆನ್ನಾಗಿ ದುಡಿಸಿಕೊಂಡರು. ಅವರು ಚಾಣಾಕ್ಷತೆಯಿಂದ ಬೌಲಿಂಗ್‌ನಲ್ಲಿ ಮತ್ತು ಫೀಲ್ಡಿಂಗ್‌ನಲ್ಲಿ ಬದಲಾವಣೆಗಳನ್ನು ಮಾಡುತ್ತಾ, ತನ್ನ ಆಟಗಾರರು ಮತ್ತು ಒಟ್ಟಾರೆ ಪರಿಸ್ಥಿತಿಯ ಮೇಲೆ ನಿಯಂತ್ರಣ ಹೊಂದಿರುವ ಓರ್ವ ಸಮಗ್ರ ನಾಯಕ ಎನ್ನುವುದನ್ನು ನಿರೂಪಿಸಿದರು.

ಇತ್ತೀಚೆಗೆ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ದಕ್ಷಿಣ ಆಫ್ರಿಕವು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿದೆ. ಈ ಹಿನ್ನೆಲೆಯಲ್ಲಿ, ಅವರ ನೈಪುಣ್ಯವು ಕ್ರಿಕೆಟ್ ಮೈದಾನದಲ್ಲಿ ಇಷ್ಟೊಂದು ಭವ್ಯವಾಗಿ ವೀಕ್ಷಿಸುವುದನ್ನು ನೋಡುವುದೇ ಹಬ್ಬವಾಗಿತ್ತು. ದಕ್ಷಿಣ ಆಫ್ರಿಕದ ಹಿಂದಿನ ತಂಡಗಳಂತಲ್ಲದೆ, ಪ್ರಸಕ್ತ ತಂಡದಲ್ಲಿ, ರಬಡರನ್ನು ಹೊರತುಪಡಿಸುವುದಾದರೆ ಯಾರೂ ಸೂಪರ್ ಸ್ಟಾರ್‌ಗಳಿಲ್ಲ. ಕಾಲಿಸ್ ಅಥವಾ ಅಮ್ಲರಂಥ ರನ್‌ದಾಹಿ ಬ್ಯಾಟರ್‌ಗಳಿಲ್ಲ; ಡಿವಿಲಿಯರ್ಸ್‌ರಂಥ ಆಕರ್ಷಕ ಸ್ಟ್ರೋಕ್‌ಮೇಕರ್‌ಗಳಿಲ್ಲ; ಡೊನಾಲ್ಡ್ ಅಥವಾ ಸ್ಟೇನ್‌ರಂಥ ಮಾರಕ ವೇಗದ ಬೌಲರ್‌ಗಳಿಲ್ಲ; ಪೊಲಾಕ್ ಅಥವಾ ಫಿಲಾಂಡರ್‌ರಂಥ ಸೂಕ್ಷ್ಮ ಸ್ವಿಂಗ್ ಬೌಲರ್‌ಗಳಿಲ್ಲ.

ಇವೆಲ್ಲವುಗಳ ಹೊರತಾಗಿಯೂ, ಅವರದು ಮೊದಲ ದರ್ಜೆಯ ತಂಡವಾಗಿತ್ತು. ಈ ತಂಡದಲ್ಲಿ ‘ರೇನ್‌ಬೋ ನೇಶನ್’ (ವಿವಿಧ ಬಣ್ಣಗಳ ದೇಶ- ದಕ್ಷಿಣ ಆಫ್ರಿಕ)ನ ಕಲ್ಪನೆ ಪರಿಪೂರ್ಣವಾಗಿದೆ. ಯಾಕೆಂದರೆ ತಂಡದಲ್ಲಿ ಬ್ರಿಟಿಷ್ ಮತ್ತು ಡಚ್ ಮೂಲದ ಬಿಳಿಯ ಆಟಗಾರರಿದ್ದಾರೆ, ಕಪ್ಪು ಆಫ್ರಿಕನ್ನರಿದ್ದಾರೆ, ಓರ್ವ ಕೇಪ್ ವರ್ಣೀಯ ಆಟಗಾರ ಮತ್ತು ಓರ್ವ ಭಾರತೀಯ ಆಟಗಾರನೂ ಇದ್ದಾರೆ. ದಕ್ಷಿಣ ಆಫ್ರಿಕದ ಯಶಸ್ಸನ್ನು ನೋಡಿ ಸಂತೋಷ ಪಡುವುದಕ್ಕೆ ಇನ್ನೊಂದು ಕಾರಣವೆಂದರೆ, ಆ ಪಂದ್ಯವು ಈಗಲೂ ‘ಕ್ರಿಕೆಟ್‌ನ ಮನೆ’ ಎಂಬುದಾಗಿ ಪರಿಗಣಿಸಲ್ಪಡುವ ಲಾರ್ಡ್ಸ್ ಮೈದಾನದಲ್ಲಿ ನಡೆದಿರುವುದು.

2022ರ ಐಪಿಎಲ್ ಆವೃತ್ತಿಯ ಒಂದೇ ಒಂದು ಪಂದ್ಯವನ್ನು -ವಾಸ್ತವವಾಗಿ ಒಂದೇ ಒಂದು ಎಸೆತವನ್ನು- ನಾನು ನೋಡಿಲ್ಲ. ಆದರೂ, ಈವರೆಗಿನ ನನ್ನ ವರ್ಷದ ಕ್ರಿಕೆಟ್ ವೀಕ್ಷಣೆಯು, ಐಪಿಎಲ್ ಪಂದ್ಯಾವಳಿಯ ಪ್ರತಿಯೊಂದು ಪಂದ್ಯ ಮತ್ತು ಪ್ರತಿಯೊಂದು ಎಸೆತವನ್ನು ವೀಕ್ಷಿಸಿದವರಿಗಿಂತಲೂ ಹೆಚ್ಚು ಶ್ರೀಮಂತವಾಗಿದೆ ಎಂಬ ಸಂದೇಹ ನನಗೆ.

ನೈಜ ಕ್ರಿಕೆಟನ್ನು ಆಟಗಾರರು ಬಿಳಿ ಬಟ್ಟೆ ಧರಿಸಿ ಕೆಂಪು ಚೆಂಡಿನಲ್ಲಿ ಐದು ದಿನಗಳ ಕಾಲ ಆಡುತ್ತಾರೆ. ಇಲ್ಲಿ ಒಬ್ಬ ಬೌಲರ್ ಎಷ್ಟು ಓವರ್‌ಗಳನ್ನು ಎಸೆಯಬಹುದು ಅಥವಾ ಒಂದು ತಂಡವು ಎಷ್ಟು ಓವರ್‌ಗಳನ್ನು ಬ್ಯಾಟ್ ಮಾಡಬಹುದು ಎಂಬ ನಿರ್ಬಂಧಗಳಿಲ್ಲ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್, ವಿಕೆಟ್-ಕೀಪಿಂಗ್ ಮತ್ತು ನಾಯಕತ್ವದ ತಾಂತ್ರಿಕ ಮತ್ತು ಗುಣಾತ್ಮಕ ಸಾಧ್ಯತೆಗಳು ತೆರೆದುಕೊಳ್ಳುವುದು ಕ್ರಿಕೆಟ್‌ನ ದೀರ್ಘಾವಧಿಯ ಮಾದರಿಯಲ್ಲಿ ಮಾತ್ರ.

ದಶಕಗಳ ಅವಧಿಯಲ್ಲಿ ನಾನು ಹಲವು ಉತ್ತಮ ದರ್ಜೆಯ ಟೆಸ್ಟ್ ಪಂದ್ಯಗಳು ಮತ್ತು ರಣಜಿ ಟ್ರೋಫಿ ಫೈನಲ್‌ಗಳನ್ನು ನೋಡಿದ್ದೇನೆ. ಅವುಗಳ ಸಾಲಿಗೆ ಈಗ 2022ರಲ್ಲಿ ನಾನು ನೋಡಿದ ಈ ಮೂರು ಪಂದ್ಯಗಳು ಸೇರುತ್ತವೆ. ಮುಂದೆ ಬರಲಿರುವ ವೃದ್ಧಾಪ್ಯದ ನೋವಿನ ದಿನಗಳಲ್ಲಿ ಈ ಪಂದ್ಯಗಳ ನೆನಪುಗಳು ನನ್ನ ಜೊತೆಗಿರುತ್ತವೆ ಮತ್ತು ನನಗೆ ಸಾಂತ್ವನ ಹೇಳುತ್ತವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)