varthabharthi


ಕಾಲಮಾನ

ಸ್ವತಂತ್ರ ಭಾರತವನ್ನು ವಿವರಿಸುವ 50 ಪುಸ್ತಕಗಳು

ವಾರ್ತಾ ಭಾರತಿ : 10 Sep, 2022
ರಾಮಚಂದ್ರ ಗುಹಾ

ಇಲ್ಲಿ ಶಿಫಾರಸು ಮಾಡಲಾಗಿರುವ 50 ಪುಸ್ತಕಗಳ ಪೈಕಿ ಕೆಲವಾದರೂ ಪುಸ್ತಕಗಳ ಹಿಂದೆ ಬೀಳಲು ಕೆಲವಾದರೂ ಓದುಗರಿಗೆ ಈ ಅಂಕಣ ಪ್ರೇರಣೆ ನೀಡುತ್ತದೆ ಎಂದು ನಾನು ನಂಬುತ್ತೇನೆ. ಬಹುತೇಕ ಎಲ್ಲ ಪುಸ್ತಕಗಳು ಲಭ್ಯವಿವೆ. ಲಭ್ಯವಿರದ ಕೆಲವು ಪುಸ್ತಕಗಳು archive.org ಎಂಬ ವೆಬ್‌ಸೈಟ್‌ನಲ್ಲಿ ಸಿಗುತ್ತವೆ. ಹೆಚ್ಚಿನ ಪುಸ್ತಕಗಳು ಹಿಂದಿ ಮತ್ತು ಇತರ ಭಾಷೆಗಳಿಗೂ ಅನುವಾದಗೊಂಡಿವೆ.


ಹಿಂದಿನ ಅಂಕಣವೊಂದರಲ್ಲಿ (ದ ಟೆಲಿಗ್ರಾಫ್, ಆಗಸ್ಟ್ 13), ಸ್ವಾತಂತ್ರಾನಂತರದ ಭಾರತದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಸಂಕ್ಷಿಪ್ತ ವಿಶ್ಲೇಷಣಾತ್ಮಕ ಇತಿಹಾಸವನ್ನು ನೀಡಿದ್ದೆ. ಈ ಅಂಕಣದಲ್ಲಿ, ನಮ್ಮ ಗಣರಾಜ್ಯದ ಸಂಕೀರ್ಣ ಇತಿಹಾಸವನ್ನು ಅರ್ಥಮಾಡಿಕೊಳ್ಳುವಲ್ಲಿ ನೆರವಾಗುತ್ತವೆ ಎಂಬುದಾಗಿ ಸ್ವತಃ ನಾನು ಕಂಡುಕೊಂಡ ಪುಸ್ತಕಗಳ ಪಟ್ಟಿಯೊಂದನ್ನು ಓದುಗರಿಗೆ ನೀಡಲು ಬಯಸುತ್ತೇನೆ. ಸಮತೋಲನದ ದೃಷ್ಟಿಯಿಂದ ಮತ್ತು ಓದುಗರಿಗೆ ವಿಶಾಲ ವ್ಯಾಪ್ತಿಯ ಆಯ್ಕೆಗಳು ಸಿಗುತ್ತವೆ ಎನ್ನುವ ಕಾರಣಕ್ಕಾಗಿ 75 ಪುಸ್ತಕಗಳನ್ನು ನನ್ನ ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕಾಗಿದೆ. ಆದರೆ, ಸ್ಥಳಾಭಾವದಿಂದಾಗಿ ಆ ಎಲ್ಲಾ ಪುಸ್ತಕಗಳನ್ನು ಪಟ್ಟಿ ಮಾಡಲು ಇಲ್ಲಿ ಸಾಧ್ಯವಾಗುವುದಿಲ್ಲ. ಹಾಗಾಗಿ, ನಾನು ಇಲ್ಲಿ 50 ಪುಸ್ತಕಗಳನ್ನು ಮಾತ್ರ ಎತ್ತಿಕೊಂಡಿದ್ದೇನೆ. ಆದರೆ, ಇದೇನೂ ಕಡಿಮೆ ಸಂಖ್ಯೆಯಲ್ಲ. 1947ರ ನಂತರದ ಅವಧಿಗೆ ನಾನು ಪುಸ್ತಕಗಳನ್ನು ಸೀಮಿತಗೊಳಿಸಿದ್ದೇನೆ. ಇದು ‘ಭಾರತೀಯ ಇತಿಹಾಸ’ ಪುಸ್ತಕಗಳ ಪಟ್ಟಿಯಲ್ಲ, ‘ಸ್ವತಂತ್ರ ಭಾರತ’ ಪುಸ್ತಕಗಳ ಪಟ್ಟಿ. ಪ್ರತಿಯೊಂದು ಪುಸ್ತಕವು ಮೊದಲು ಪ್ರಕಟಗೊಂಡ ವರ್ಷವನ್ನು ಆವರಣದಲ್ಲಿ ಕೊಡಲಾಗಿದೆ.

ಗ್ರಾನ್‌ವಿಲ್ ಆಸ್ಟಿನ್‌ರ ‘ದ ಇಂಡಿಯನ್ ಕಾನ್‌ಸ್ಟಿಟ್ಯೂಶನ್: ಕಾರ್ನರ್‌ಸ್ಟೋನ್ ಆಫ್ ಎ ರಿಪಬ್ಲಿಕ್’ (1966) ಎಂಬ ಪುಸ್ತಕದೊಂದಿಗೆ ನಾನು ಪಟ್ಟಿಯನ್ನು ಆರಂಭಿಸುತ್ತೇನೆ. ಸಂವಿಧಾನ ರಚನೆಗೆ ಸಂಬಂಧಿಸಿದ ಚರ್ಚೆಗಳ ಕುರಿತ ಮಹತ್ವದ ಕೃತಿ ಇದಾಗಿದೆ. ಈ ಪುಸ್ತಕವನ್ನು ನೀರಜಾ ಗೋಪಾಲ್ ಜಯಾಲ್ ಅವರ ‘ಸಿಟಿಝನ್‌ಶಿಪ್ ಆ್ಯಂಡ್ ಇಟ್ಸ್ ಡಿಸ್‌ಕಂಟೆಂಟ್ಸ್: ಆ್ಯನ್ ಇಂಡಿಯನ್ ಹಿಸ್ಟರಿ’ (2013) ಎಂಬ ಪುಸ್ತಕದ ಜೊತೆಗೆ ಓದಬೇಕು. ಈ ಪುಸ್ತಕದಲ್ಲಿ ಭಾರತೀಯ ಗಣರಾಜ್ಯದ ದೀರ್ಘಾವಧಿ ವಿವರಣೆಯಿದೆ ಮತ್ತು ಹೆಚ್ಚಿನ ಸಾಮಾಜಿಕ ದೃಷ್ಟಿಕೋನವಿದೆ.

ಸ್ವಾತಂತ್ರಾನಂತರದ ಮೊದಲ ದಶಕದಲ್ಲಿ ನಡೆದ ಮಹತ್ವದ ಬೆಳವಣಿಗೆಗಳೆಂದರೆ, ರಾಜರಿಗೆ ಸೇರಿದ ರಾಜ್ಯಗಳನ್ನು ಭಾರತದೊಂದಿಗೆ ವಿಲೀನಗೊಳಿಸಿರುವುದು ಮತ್ತು ಭಾಷಾವಾರು ರಾಜ್ಯಗಳ ರಚನೆ. ರಾಜರ ಆಡಳಿತಕ್ಕೆ ಒಳಪಟ್ಟ ರಾಜ್ಯಗಳನ್ನು ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಗೊಳಿಸಿರುವ ವಿಷಯದಲ್ಲಿ ಅತ್ಯುತ್ತಮ ಪುಸ್ತಕವೆಂದರೆ ವಿ.ಪಿ. ಮೆನನ್‌ರ ‘ಇಂಟಗ್ರೇಶನ್ ಆಫ್ ದ ಇಂಡಿಯನ್ ಸ್ಟೇಟ್ಸ್’ (1956) (ಲೇಖಕರು ಸರ್ದಾರ್ ವಲ್ಲಭಭಾಯಿ ಪಟೇಲ್‌ರೊಂದಿಗೆ ನಿಕಟವಾಗಿ ಕೆಲಸ ಮಾಡಿದವರು ಹಾಗೂ ಪುಸ್ತಕದಲ್ಲಿ ವಿವರಿಸಲಾದ ಪ್ರಕ್ರಿಯೆಯಲ್ಲಿ ಸ್ವತಃ ಪ್ರಮುಖ ಪಾತ್ರ ವಹಿಸಿದವರು). ಭಾಷಾವಾರು ರಾಜ್ಯಗಳ ರಚನೆ ಬಗ್ಗೆ ರಾಬರ್ಟ್ ಡಿ. ಕಿಂಗ್ ಅವರ ‘ನೆಹರೂ ಆ್ಯಂಡ್ ದ ಲಾಂಗ್ವೇಜ್ ಪಾಲಿಟಿಕ್ಸ್ ಆಫ್ ಇಂಡಿಯಾ’ (1997) ಪುಸ್ತಕವನ್ನು ಓದಿ.

ಈಗ ನಾನು ಪ್ರಮುಖ ಐತಿಹಾಸಿಕ ವ್ಯಕ್ತಿಗಳ ಆತ್ಮಚರಿತ್ರೆಗಳನ್ನು ಕೈಗೆತ್ತಿಕೊಳ್ಳುತ್ತೇನೆ. ಈ ವಿಭಾಗದಲ್ಲಿನ ಮಹತ್ವದ ಕೃತಿಗಳೆಂದರೆ- ವಾಲ್ಟರ್ ಕ್ರೋಕರ್ ಅವರ ‘ನೆಹರೂ: ಎ ಕಾಂಟೆಂಪರರಿಸ್ ಎಸ್ಟಿಮೇಟ್’ (1966), ರಾಜ್‌ಮೋಹನ್ ಗಾಂಧಿಯ ‘ಪಟೇಲ್: ಎ ಲೈಫ್’ (1990), ಕ್ಯಾತರೀನ್ ಫ್ರಾಂಕ್‌ರ ‘ಇಂದಿರಾ: ದ ಲೈಫ್ ಆಫ್ ಇಂದಿರಾ ನೆಹರೂ ಗಾಂಧಿ’ (2001), ಸಿ.ಪಿ. ಶ್ರೀವಾಸ್ತವ ಅವರ ‘ಲಾಲ್ ಬಹಾದುರ್ ಶಾಸ್ತ್ರಿ’ (1995), ಧನಂಜಯ ಕೀರ್ ಅವರ ‘ಅಂಬೇಡ್ಕರ್’ (1954; ಪರಿಷ್ಕೃತ ಮುದ್ರಣ 1990), ಅಲನ್ ಮತ್ತು ವೆಂಡಿ ಸ್ಕಾರ್ಫ್ ಅವರ ‘ಜೆಪಿ: ಹಿಸ್ ಬಯಾಗ್ರಫಿ’ (1975; ಪರಿಷ್ಕೃತ ಮುದ್ರಣ 1998) ಹಾಗೂ ಎಲನ್ ಕ್ಯಾರಲ್ ಡುಬೊಸ್ ಮತ್ತು ವಿನಯ ಲಾಲ್ ಸಂಪಾದಕತ್ವದ ‘ಎ ಪ್ಯಾಶನೇಟ್ ಲೈಫ್: ರೈಟಿಂಗ್ಸ್ ಬೈ ಆ್ಯಂಡ್ ಆನ್ ಕಮಲಾದೇವಿ ಚಟ್ಟೋಪಧ್ಯಾಯ’ (2017).

ಸ್ವಾತಂತ್ರ ಸಿಕ್ಕಿದ ಬೆನ್ನಿಗೇ ಮಹಾತ್ಮಾ ಗಾಂಧಿ ಮೃತಪಟ್ಟಿರುವುದರಿಂದ ಅವರ ಆತ್ಮಚರಿತ್ರೆಯನ್ನು ನಾನು ಶಿಫಾರಸು ಮಾಡುವುದಿಲ್ಲ. ಆದರೆ, ಅವರ ಅನಂತ ಪ್ರಭಾವದ ಬಗ್ಗೆ ಆಸಕ್ತಿ ಇರುವವರು ರಜನಿ ಬಕ್ಷಿ ಅವರ ‘ಬಾಪು ಕುಟ್ಟಿ: ಜರ್ನೀಸ್ ಇನ್ ರೀಡಿಸ್ಕವರಿ ಆಫ್ ಗಾಂಧಿ’ (1998) ಎಂಬ ಪುಸ್ತಕವನ್ನು ಓದಬಹುದು.

ಸ್ವತಂತ್ರ ಭಾರತದ ಪ್ರಮುಖ ರಾಜಕಾರಣಿಗಳ ಪೈಕಿ, ಅಂಬೇಡ್ಕರ್ ಮತ್ತು ನೆಹರೂ ಚಿಂತಕರಾಗಿಯೂ ಪ್ರಾಮುಖ್ಯತೆ ಪಡೆದವರು. ಹಾಗಾಗಿ, ನಾನು ವಲೇರಿಯನ್ ರೋಡ್ರಿಗಸ್ ಸಂಪಾದಕತ್ವದ ‘ದ ಎಸೆನ್ಶಿಯಲ್ ರೈಟಿಂಗ್ಸ್ ಆಫ್ ಬಿ.ಆರ್. ಅಂಬೇಡ್ಕರ್’ (2002) ಮತ್ತು ಪುರುಷೋತ್ತಮ್ ಅಗ್ರವಾಲ್ ಸಂಪಾದಕತ್ವದ ‘ಹೂ ಈಸ್ ಭಾರತ್ ಮಾತಾ? ಹಿಸ್ಟರಿ, ಕಲ್ಚರ್ ಆ್ಯಂಡ್ ದ ಐಡಿಯ ಆಫ್ ಇಂಡಿಯಾ: ರೈಟಿಂಗ್ಸ್ ಬೈ ಆ್ಯಂಡ್ ಆನ್ ಜವಾಹರಲಾಲ್ ನೆಹರೂ’ (2019) ಎಂಬ ಪುಸ್ತಕಗಳನ್ನು ಓದಲು ಶಿಫಾರಸು ಮಾಡುತ್ತೇನೆ.

ಇತ್ತೀಚಿನ ದಿನಗಳಲ್ಲಿ, ಆರೆಸ್ಸೆಸ್ ಚಿಂತಕ ಎಮ್.ಎಸ್. ಗೋಳ್ವಾಲ್ಕರ್‌ರ ಪ್ರಭಾವವು ಅಂಬೇಡ್ಕರ್ ಮತ್ತು ನೆಹರೂ ಅವರ ಪ್ರಭಾವವನ್ನು ಬಹುಶಃ ಸಮಗಟ್ಟಿದೆ ಅಥವಾ ಮೀರಿದೆ. ಹಾಗಾಗಿ, ಗೋಳ್ವಾಲ್ಕರ್‌ರ ಲೇಖನಗಳ ಸಂಗ್ರಹವಾಗಿರುವ ‘ಎ ಬಂಚ್ ಆಫ್ ಥಾಟ್ಸ್’ (1966) ಪುಸ್ತಕವನ್ನೂ ನಾನು ಈ ಪಟ್ಟಿಗೆ ಸೇರಿಸುತ್ತೇನೆ.

ಸ್ವತಂತ್ರ ಭಾರತದ ರಾಜಕೀಯ ಪ್ರಕ್ರಿಯೆ ಕುರಿತ ಅತ್ಯುತ್ತಮ ಚಿತ್ರಣವೊಂದನ್ನು ನೀರಜಾ ಗೋಪಾಲ್ ಜಯಾಲ್ ಮತ್ತು ಪ್ರತಾಪ್ ಭಾನು ಮೆಹ್ತಾ ಸಂಪಾದಕತ್ವದ ‘ಆಕ್ಸ್‌ಫರ್ಡ್ ಕಂಪೇನಿಯನ್ ಟು ಇಂಡಿಯನ್ ಪಾಲಿಟಿಕ್ಸ್’ (2010) ನೀಡುತ್ತದೆ. ಭಾರತವು ವಯಸ್ಕ ಮತದಾನವನ್ನು ಯಾಕೆ ಮತ್ತು ಹೇಗೆ ಅಂಗೀಕರಿಸಿತು ಎಂಬುದನ್ನು ತಿಳಿಯಲು ಓರ್ನಿಟ್ ಶಾನಿ ಅವರ ಪುಸ್ತಕ ‘ಹೌ ಇಂಡಿಯಾ ಬಿಕೇಮ್ ಡೆಮಾಕ್ರಟಿಕ್’ (2017) ಪುಸ್ತಕವನ್ನು ಓದಿ. ಚುನಾವಣಾ ರಾಜಕೀಯದ ಋಣಾತ್ಮಕ ಅಂಶವನ್ನು ತಿಳಿಯಲು ಮಿಲನ್ ವೈಷ್ಣವ್‌ರ ‘ವೆನ್ ಕ್ರೈಮ್ ಪೇಸ್: ಮನಿ ಆ್ಯಂಡ್ ಮಸಲ್ ಇನ್ ಇಂಡಿಯನ್ ಪಾಲಿಟಿಕ್ಸ್’ (2017) ಪುಸ್ತಕವನ್ನು ಓದಿ. ವಿದ್ವಾಂಸ ಹಾಗೂ ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್‌ರ ಪುಸ್ತಕ ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ (2020)ಯು ಭಾರತೀಯ ರಾಜಕಾರಣವನ್ನು ಚೆನ್ನಾಗಿ ಪರಿಚಯಿಸುತ್ತದೆ. ಅಂತಿಮವಾಗಿ, ಆರೆಸ್ಸೆಸ್ ಕುರಿತ ಅತ್ಯುತ್ತಮ ಪುಸ್ತಕ ದೇಸ್ ರಾಜ್ ಗೋಯಲ್ ಅವರ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ (1979) ಆಗಿದೆ.

 ಸ್ವಾತಂತ್ರಾನಂತರದ ಆರ್ಥಿಕ ನೀತಿಯ ಇತಿಹಾಸದ ಬಗ್ಗೆ ಫ್ರಾನ್ಸೈನ್ ಫ್ರಾಂಕೆಲ್‌ರ ‘ಇಂಡಿಯಾಸ್ ಪೊಲಿಟಿಕಲ್ ಎಕಾನಮಿ, 1947-2004’ (2005) ಎಂಬ ಪುಸ್ತಕದಲ್ಲಿ ಸೂಕ್ಷ್ಮ ವಿವರಗಳನ್ನು ನೀಡಲಾಗಿದೆ. ಭಾರತದ ಪ್ರಸಕ್ತ ಆರ್ಥಿಕ ಸವಾಲುಗಳನ್ನು ತಿಳಿಯಲು ನೌಶಾದ್ ಫೋರ್ಬ್ಸ್‌ರ ‘ದ ಸ್ಟ್ರಗಲ್ ಆ್ಯಂಡ್ ದ ಪ್ರಾಮಿಸ್: ರೆಸ್ಟೋರಿಂಗ್ ಇಂಡಿಯಾಸ್ ಪೊಟೆನ್ಶಿಯಲ್’ (2022) ಪುಸ್ತಕವನ್ನು ಓದಿ. ಭಾರತೀಯ ರಕ್ಷಣಾ ನೀತಿ ಮತ್ತು ವಿದೇಶ ನೀತಿಗಳ ಕುರಿತ ಅತ್ಯುತ್ತಮ ಮಾಹಿತಿಗಳಿಗಾಗಿ ಕ್ರಮವಾಗಿ ಶ್ರೀನಾಥ್ ರಾಘವನ್ ಅವರ ‘ವಾರ್ ಆ್ಯಂಡ್ ಪೀಸ್ ಇನ್ ಮೋಡರ್ನ್ ಇಂಡಿಯಾ’ (2009) ಮತ್ತು ಶಿವಶಂಕರ ಮೆನನ್ ಅವರ ‘ಚೋಯ್ಸಸ್: ಇನ್‌ಸೈಡ್ ದ ಮೇಕಿಂಗ್ ಆಫ್ ಇಂಡಿಯಾಸ್ ಫಾರೀನ್ ಪಾಲಿಸಿ’ (2016) ಪುಸ್ತಕಗಳನ್ನು ಓದಿ. ದೊಡ್ಡ ನೆರೆ ದೇಶದೊಂದಿಗಿನ ಸಂಕೀರ್ಣ ಸಂಬಂಧಗಳ ಬಗ್ಗೆ ತಿಳಿಯಲು ಕಾಂತಿ ಬಾಜ್‌ಪೇಯಿ ಅವರ ‘ಇಂಡಿಯಾ ವರ್ಸಸ್ ಚೀನಾ: ವೈ ದೇ ಆರ್ ನಾಟ್ ಫ್ರೆಂಡ್ಸ್’ (2021) ಪುಸ್ತಕವನ್ನು ಓದಿ.

ಸಂಸತ್ತು, ಸುಪ್ರೀಂ ಕೋರ್ಟ್ ಮತ್ತು ನಾಗರಿಕ ಸೇವೆಗಳು (ಐಎಎಸ್ ಮತ್ತು ಐಪಿಎಸ್) ಮುಂತಾದ ಸಂಸ್ಥೆಗಳು ಆಧುನಿಕ ದೇಶವೊಂದರ ಆಧಾರಸ್ತಂಭಗಳು. ಈ ಸಂಸ್ಥೆಗಳ ಪಾತ್ರದ ಕುರಿತ ಉಪಯುಕ್ತ ಮಾಹಿತಿ ದೇವೇಶ್ ಕಪೂರ್, ಪ್ರತಾಪ್ ಭಾನು ಮೆಹ್ತಾ ಮತ್ತು ಮಿಲನ್ ವೈಷ್ಣವ್ ಸಂಪಾದಕತ್ವದ ‘ರೀತಿಂಕಿಂಗ್ ಪಬ್ಲಿಕ್ ಇನ್‌ಸ್ಟಿಟ್ಯೂಶನ್ಸ್ ಇನ್ ಇಂಡಿಯಾ’ (2019) ಎಂಬ ಪುಸ್ತಕದಲ್ಲಿದೆ. ಸ್ಟೀವನ್ ವಿಲ್ಕಿನ್‌ಸನ್ ಅವರ ‘ಆರ್ಮಿ ಆ್ಯಂಡ್ ನೇಶನ್: ದ ಮಿಲಿಟರಿ ಆ್ಯಂಡ್ ಇಂಡಿಯನ್ ಡೆಮಾಕ್ರಸಿ’ (2015) ಭಾರತೀಯ ಸೇನೆಯ ಬಗ್ಗೆ ಮಾಹಿತಿ ನೀಡುತ್ತದೆ. ಪ್ರಜಾಪ್ರಭುತ್ವದ ಇನ್ನೊಂದು ಮಹತ್ವದ ಸಂಸ್ಥೆಯೆಂದರೆ ಮಾಧ್ಯಮ. ಮೋದಿ ಪೂರ್ವ (ಅಥವಾ ಗೋದಿ ಪೂರ್ವ) ಕಾಲದಲ್ಲಿ ಮಾಧ್ಯಮಗಳ ವಿಕಸನವನ್ನು ರಾಬಿನ್ ಜೆಫ್ರಿ ‘ಇಂಡಿಯಾಸ್ ನ್ಯೂಸ್‌ಪೇಪರ್ ರೆವಲೂಶನ್: ಕ್ಯಾಪಿಟಲಿಸಮ್, ಪಾಲಿಟಿಕ್ಸ್ ಆ್ಯಂಡ್ ದ ಇಂಡಿಯನ್ ಲಾಂಗ್ವೇಜ್’ (2000) ಪುಸ್ತಕದಲ್ಲಿ ವಿಶ್ಲೇಷಿಸಿದ್ದಾರೆ.
ಇನ್ನು, ಆಧುನಿಕ ಭಾರತದ ಸಾಮಾಜಿಕ ವ್ಯವಸ್ಥೆ ಮತ್ತು ಸಾಮಾಜಿಕ ಬದಲಾವಣೆಗಳಿಗೆ ಸಂಬಂಧಿಸಿದ ಕೆಲವು ಕೃತಿಗಳನ್ನು ಪರಿಗಣಿಸೋಣ. ಹಳ್ಳಿಗಳಲ್ಲಿ ಜಾತಿ ಪದ್ಧತಿಯ ಆಚರಣೆ ಬಗ್ಗೆ ನಾನು ಎರಡು ಅತ್ಯುತ್ತಮ ಪುಸ್ತಕಗಳನ್ನು ಶಿಫಾರಸು ಮಾಡುತ್ತೇನೆ: ಒಂದು, ಭಾರತೀಯ ಎಮ್.ಎನ್. ಶ್ರೀನಿವಾಸ ಬರೆದಿರುವ ‘ದ ರಿಮೆಂಬರ್ಡ್‌ ವಿಲೇಜ್’ (1977) ಮತ್ತು ಇನ್ನೊಂದು, ಡಚ್ ವಿದ್ವಾಂಸ ಜಾನ್ ಬ್ರೆಮನ್ ಬರೆದಿರುವ ‘ಪ್ಯಾಟ್ರನೇಜ್ ಆ್ಯಂಡ್ ಎಕ್ಸ್‌ಪ್ಲಾಯ್ಟೇಶನ್’ (1974).

ಸ್ವತಂತ್ರ ಭಾರತದಲ್ಲಿ ಮುಸ್ಲಿಮರ ಸ್ಥಾನಮಾನ ಮತ್ತು ಸಂಕಟದ ಬಗ್ಗೆ ಮುಶಿರುಲ್ ಹಸನ್‌ರ ‘ಲೆಗಸಿ ಆಫ್ ಎ ಡಿವೈಡಡ್ ನೇಶನ್: ಇಂಡಿಯಾಸ್ ಮುಸ್ಲಿಮ್ಸ್ ಸಿನ್ಸ್ ಇಂಡಿಪೆಂಡೆನ್ಸ್’ (1997) ಪುಸ್ತಕವನ್ನು ಓದಿ. ಅದೇ ವೇಳೆ, ಬುಡಕಟ್ಟು ಜನರ ಸ್ಥಾನಮಾನ ಮತ್ತು ಸಂಕಟದ ಬಗ್ಗೆ ನಂದಿನಿ ಸುಂದರ್ ಸಂಪಾದಕತ್ವದ ‘ದ ಶೆಡ್ಯೂಲ್ಡ್ ಟ್ರೈಬ್ಸ್ ಆ್ಯಂಡ್ ದೆಯರ್ ಇಂಡಿಯಾ’ (2016) ಪುಸ್ತಕವನ್ನು ಓದಿ.

ಭಾರತೀಯ ಒಕ್ಕೂಟದ ರಾಜ್ಯಗಳ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಪಾರಿಸಾರಿಕ ಸ್ಥಿತಿಗತಿಗಳು ತೀರಾ ಭಿನ್ನವಾಗಿವೆ. ದುರದೃಷ್ಟವಶಾತ್, ಈ ವಿಷಯದ ಬಗ್ಗೆ ಸಂಶೋಧನಾತ್ಮಕ ಇತಿಹಾಸಗಳನ್ನು ಬರೆದವರು ತುಂಬಾ ಕಡಿಮೆ. ಇದ್ದುದರಲ್ಲೇ, ರಾಬಿನ್ ಜೆಫ್ರಿ ಅವರ ‘ಪಾಲಿಟಿಕ್ಸ್, ವಿಮೆನ್ ಆ್ಯಂಡ್ ವೆಲ್‌ಬಿಯಿಂಗ್: ಹೌ ಕೇರಳ ಬಿಕೇಮ್ ಎ ಮೋಡೆಲ್’ (1992) ಮತ್ತು ತಮಿಳುನಾಡಿನ ಬಗ್ಗೆ ನರೇಂದ್ರ ಸುಬ್ರಮಣಿಯನ್ ಬರೆದ ‘ಎತ್ನಿಸಿಟಿ ಆ್ಯಂಡ್ ಪಾಪ್ಯುಲಿಸ್ಟ್ ಮೊಬಿಲೈಸೇಶನ್’ (1999) ಎಂಬ ಪುಸ್ತಕವು ಗಮನ ಸೆಳೆಯುತ್ತದೆ.

ಈಗ ಸಾಮಾಜಿಕ ಚಳವಳಿಗಳ ಬಗ್ಗೆ ಸ್ವಲ್ಪ ಗಮನ ಹರಿಸೋಣ. ದಲಿತ ಚಳವಳಿಯ ಬಗ್ಗೆ ಡಿ.ಆರ್. ನಾಗರಾಜ್ ಬರೆದಿರುವ ‘ದ ಫ್ಲೇಮಿಂಗ್ ಫೀಟ್: ದ ದಲಿತ್ ಮೂವ್‌ಮೆಂಟ್ ಇನ್ ಇಂಡಿಯಾ’ (2010) ಪುಸ್ತಕವನ್ನು ಓದಿ. ಮಹಿಳಾ ಚಳವಳಿಯ ಬಗ್ಗೆ ತಿಳಿದುಕೊಳ್ಳಲು ರಾಧಾ ಕುಮಾರ್ ಬರೆದಿರುವ ‘ಎ ಹಿಸ್ಟರಿ ಆಫ್ ಡುಯಿಂಗ್: ಆ್ಯನ್ ಇಲಸ್ಟ್ರೇಟಡ್ ಅಕೌಂಟ್ ಆಫ್ ಮೂವ್‌ಮೆಂಟ್ಸ್ ಫಾರ್ ವಿಮೆನ್ಸ್ ರೈಟ್ಸ್ ಆ್ಯಂಡ್ ಫೆಮಿನಿಸಮ್’ (1993) (ಹಳೆಯದಾದರೂ ಅಮೂಲ್ಯ ಕೃತಿ) ಪುಸ್ತಕವನ್ನು ಓದಿ. ಹಿಂದುಳಿದ ವರ್ಗಗಳ ಹೋರಾಟಗಳ ಬಗ್ಗೆ ತಿಳಿದುಕೊಳ್ಳಲು ಕ್ರಿಸ್ಟೋಫ್ ಜ್ಯಾಫ್ರಿಲಾಟ್‌ರ ಪುಸ್ತಕ ‘ಇಂಡಿಯಾಸ್ ಸಾಯ್ಲೆಂಟ್ ರೆವಲೂಶನ್’ (2003) ಕೃತಿಯನ್ನು ಓದಿ. ಪರಿಸರ ಚಳವಳಿಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಶೇಖರ್ ಪಾಠಕ್‌ರ ‘ದ ಚಿಪ್ಕೊ ಮೂವ್‌ಮೆಂಟ್: ಎ ಪೀಪಲ್ಸ್ ಹಿಸ್ಟರಿ’ (2020) ಕೃತಿಯನ್ನು ಓದಬಹುದಾಗಿದೆ.

ಮುಂದಕ್ಕೆ, ಭಾರತದ ಪ್ರಮುಖ ಸಂಘರ್ಷ ವಲಯಗಳ ಕುರಿತ ಕೆಲವು ಪುಸ್ತಕಗಳನ್ನು ಗಮನಿಸೋಣ. ಕಾಶ್ಮೀರ ವಿವಾದದ ಮೂಲ ಮತ್ತು ಅದು ಸಾಗಿ ಬಂದ ಹಾದಿಯ ಬಗ್ಗೆ ಹಲವು ಪುಸ್ತಕಗಳು ಲಭ್ಯವಿವೆ. ಅವುಗಳ ಪೈಕಿ ಆರಂಭಿಕ ಮತ್ತು ಅತ್ಯುತ್ತಮ ಕೃತಿಯೆಂದರೆ ಸಿಸಿರ್ ಗುಪ್ತ ಅವರ ‘ಕಾಶ್ಮೀರ್: ಎ ಸ್ಟಡಿ ಇನ್ ಇಂಡಿಯಾ-ಪಾಕಿಸ್ತಾನ್ ರಿಲೇಶನ್ಸ್’ (1965). ಕಾಶ್ಮೀರ ಕಣಿವೆಯನ್ನು ಹೊಂದುವುದು ಭಾರತ ಮತ್ತು ಪಾಕಿಸ್ತಾನ- ಎರಡೂ ದೇಶಗಳ ರಾಷ್ಟ್ರೀಯ ಭ್ರಮೆಗಳಿಗೆ ಎಷ್ಟು ಮಹತ್ವದ್ದಾಗಿದೆ ಎನ್ನುವುದನ್ನು ಪುಸ್ತಕ ವಿವರಿಸುತ್ತದೆ.

ಇದರೊಂದಿಗೆ ಇನ್ನೊಂದು ಸಂಘರ್ಷಪೀಡಿತ ವಲಯವೆಂದರೆ ಈಶಾನ್ಯ. ಈ ಬಗ್ಗೆ ಮಾಹಿತಿಗಾಗಿ ಸಂಜೀವ್ ಬರುವಾ ಅವರ ಪುಸ್ತಕ ‘ಇನ್ ದ ನೇಮ್ ಆಫ್ ದ ನೇಶನ್: ಇಂಡಿಯಾ ಆ್ಯಂಡ್ ಇಟ್ಸ್ ನಾರ್ತ್ ಈಸ್ಟ್’ (2020)ನ್ನು ಓದಬಹುದಾಗಿದೆ. ಮಧ್ಯ ಭಾರತದ ಮಾವೋವಾದಿ ಬಂಡಾಯ ಮತ್ತು ಅದರ ವ್ಯಾಪಕ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಲು ನಂದಿನಿ ಸುಂದರ್ ಅವರ ಪುಸ್ತಕ ‘ದ ಬರ್ನಿಂಗ್ ಫಾರೆಸ್ಟ್’ (2016)ನ್ನು ಓದಿ.

ಈವರೆಗೆ ಪಟ್ಟಿ ಮಾಡಲಾಗಿರುವ ಪುಸ್ತಕಗಳು, ವಿಷಯಗಳ ಬಗ್ಗೆ ಜ್ಞಾನವುಳ್ಳ ವಿದ್ವಾಂಸರು ಸಂಶೋಧನೆ ಮಾಡಿ ಬರೆದವುಗಳು. ಈ ಪುಸ್ತಕಗಳಲ್ಲಿ ಅಡಿಬರಹಗಳು ಮತ್ತು ಮಾಹಿತಿ ಮೂಲಗಳು (ರೆಫರೆನ್ಸ್) ಇವೆ.

ಇನ್ನು ಜನಪ್ರಿಯತೆಯ ಧಾಟಿಯಲ್ಲಿರುವ ಕೆಲವು ಪುಸ್ತಕಗಳನ್ನು ನಾನು ಶಿಫಾರಸು ಮಾಡಲು ಬಯಸುತ್ತೇನೆ. ಈ ಪೈಕಿ ಎರಡು ಪುಸ್ತಕಗಳನ್ನು ಶಿಕ್ಷಣತಜ್ಞರು ಬರೆದಿದ್ದಾರೆ: ಒಂದು, ಜೀನ್ ಡ್ರೇಝ್ ಬರೆದ ‘ಸೆನ್ಸ್ ಆ್ಯಂಡ್ ಸಾಲಿಡಾರಿಟಿ: ಜೋಳಾವಾಲಾ ಎಕನಾಮಿಕ್ಸ್ ಫಾರ್ ಎವ್ರಿವನ್’ (2017) ಮತ್ತು ಎರಡು, ಆ್ಯಂಡ್ರಿ ಬೆಟೇಲ್ ಬರೆದ ‘ಕ್ರೋನಿಕಲ್ಸ್ ಆಫ್ ಅವರ್ ಟೈಮ್’ (2000). ಈ ಎರಡೂ ಪುಸ್ತಕಗಳು ಜೀವಮಾನದ ಸಂಶೋಧನೆ ಮತ್ತು ಪಾಂಡಿತ್ಯವನ್ನು ವಿಶಾಲ ವ್ಯಾಪ್ತಿಯ ಓದುಗರಿಗೆ ತೆರೆದಿಡುತ್ತದೆ. ನಾನು ಡ್ರೇಝ್‌ರನ್ನು ಭಾರತದ ಪರಿಣತ ಅಭಿವೃದ್ಧಿ ಅರ್ಥಶಾಸ್ತ್ರಜ್ಞನಾಗಿ ಮತ್ತು ಬೆಟೇಲ್‌ರನ್ನು ಅತ್ಯುತ್ತಮ ಸಮಾಜಶಾಸ್ತ್ರಜ್ಞನಾಗಿ ಪರಿಗಣಿಸುತ್ತೇನೆ.

ಈಗ ನಾನು ಪತ್ರಕರ್ತರು ಬರೆದಿರುವ ನಾಲ್ಕು ಉತ್ತಮ ಪುಸ್ತಕಗಳನ್ನು ಪ್ರಸ್ತಾಪಿಸುತ್ತೇನೆ. ಅವುಗಳೆಂದರೆ: ಮುಂಬೈ ಕೊಳೆಗೇರಿಯೊಂದರ ಬದುಕಿನ ಬಗ್ಗೆ ಕ್ಯಾತರೀನ್ ಬೂ ಅದ್ಭುತವಾಗಿ ಬರೆದಿರುವ ‘ಬಿಹೈಂಡ್ ದ ಬ್ಯೂಟಿಫುಲ್ ಫಾರೆವರ್ಸ್’ (2012), ಗ್ರಾಮೀಣ ಭಾರತದ ಜನರ ದೈನಂದಿನ ಬದುಕಿನ ಹೋರಾಟದ ಬಗ್ಗೆ ಪಿ. ಸಾಯಿನಾಥ್ ಬರೆದಿರುವ ‘ಎವ್ರಿಬಡಿ ಲವ್ಸ್ ಎ ಗುಡ್ ಡ್ರಾಟ್’ (1996), ನಮ್ಮ ಇತ್ತೀಚಿನ ಲೋಕಸಭಾ ಚುನಾವಣೆಗಳ ಬಗ್ಗೆ ವರದಿಗಾರನ ನೆಲೆಯಲ್ಲಿ ರಾಜ್‌ದೀಪ್ ಸರ್ದೇಸಾಯಿ ಬರೆದಿರುವ ‘2019: ಹೌ ಮೋದಿ ವನ್ ಇಂಡಿಯಾ’ (2020) ಮತ್ತು ನಮ್ಮ ದೇಶದಲ್ಲಿ ಕೆಲಸ ಮಾಡಿರುವ ವಿದೇಶಿ ಪತ್ರಕರ್ತರ ಪೈಕಿ ಅತಿ ಹೆಚ್ಚಿನ ಶ್ಲಾಘನೆಗೆ ಒಳಗಾಗಿರುವವರೆಂದು ಭಾವಿಸಲಾಗಿರುವ ಬಿಬಿಸಿಯ ಮಾರ್ಕ್ ಟಲಿ ಅವರ ಲೇಖನಗಳನ್ನು ಒಳಗೊಂಡಿರುವ ಪುಸ್ತಕ ‘ನೋ ಫುಲ್ ಸ್ಟಾಪ್ಸ್ ಇನ್ ಇಂಡಿಯಾ’ (1991).

ಆತ್ಮಚರಿತ್ರೆಯೊಂದು ಆ ಕಾಲದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸವನ್ನು ತೆರೆದಿಡುತ್ತದೆ. ಹಾಗಾಗಿ, ಅಂತಿಮವಾಗಿ, ನಾನು ಮೆಚ್ಚಿದ ಕೆಲವೊಂದು ಆತ್ಮಚರಿತ್ರೆಗಳನ್ನು ಪಟ್ಟಿ ಮಾಡಲು ಬಯಸುತ್ತೇನೆ. ಈ ಪೈಕಿ ಎರಡು ಆತ್ಮಚರಿತ್ರೆಗಳನ್ನು ಬರೆದವರು ದಲಿತರು. ಒಂದನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಅದು ಸುಜಾತಾ ಗಿಡ್ಲಾ ಅವರ ‘ಆ್ಯಂಟ್ಸ್ ಅಮಂಗ್ ಎಲಿಫ್ಯಾಂಟ್ಸ್’ (2017). ಇನ್ನೊಂದನ್ನು ಮೂಲತಃ ಹಿಂದಿಯಲ್ಲಿ ಬರೆಯಲಾಗಿದೆ. ಅದು ಓಮ್ ಪ್ರಕಾಶ್ ವಾಲ್ಮೀಕಿ ಅವರ ‘ಜೂಠನ್’ (2004). ಅದನ್ನು ಅರುಣ್ ಮುಖರ್ಜಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಮಹಿಳೆಯರು ಬರೆದಿರುವ ಎರಡು ಆತ್ಮಚರಿತ್ರೆಗಳನ್ನೂ ನಾನು ಶಿಫಾರಸು ಮಾಡುತ್ತೇನೆ. ಅವುಗಳ ಪೈಕಿ ಒಂದನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಅದು ಪದ್ಮಾ ದೇಸಾಯಿ ಅವರ ‘ಬ್ರೇಕಿಂಗ್ ಔಟ್’ (2012). ಈ ಆತ್ಮಚರಿತ್ರೆಯು ಮಧ್ಯಮ ವರ್ಗದ ಹಿನ್ನೆಲೆಯನ್ನು ಹೊಂದಿದೆ. ಇನ್ನೊಂದನ್ನು ಮೂಲತಃ ಮರಾಠಿಯಲ್ಲಿ ಬರೆಯಲಾಗಿದೆ ಹಾಗೂ ಅದು ಶ್ರಮಿಕ ವರ್ಗದ ಹಿನ್ನೆಲೆಯನ್ನು ಹೊಂದಿದೆ. ಅದು ಮಲಿಕಾ ಅಮರ್ ಶೇಖ್ ಅವರ ‘ಐ ವಾಂಟ್ ಟು ಡಿಸ್ಟ್ರಾಯ್ ಮೈಸೆಲ್ಫ್’ (2019). ಈ ಪುಸ್ತಕವನ್ನು ಜೆರಿ ಪಿಂಟೋ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

ಅಂತಿಮವಾಗಿ ಕೆಲವು ಶರತ್ತುಗಳು. ಈ ಪಟ್ಟಿಯಲ್ಲಿ ಇರುವುದು 1950ರ ಬಳಿಕ ಪ್ರಕಟಗೊಂಡಿರುವ ಪುಸ್ತಕಗಳು ಹಾಗೂ ಪುಸ್ತಕಗಳನ್ನು ಆಯ್ಕೆ ಮಾಡುವಾಗ ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಮತ್ತು ರಾಜಕೀಯ ಇತಿಹಾಸಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಜೊತೆಗೆ, ನ್ಯೂ ಇಂಡಿಯಾ ಫೌಂಡೇಶನ್‌ನ ಆಶ್ರಯದಲ್ಲಿ ಪ್ರಕಟಗೊಂಡಿರುವ ಪುಸ್ತಕಗಳನ್ನು ನಾನು ಕೈಬಿಟ್ಟಿದ್ದೇನೆ ಎನ್ನುವುದನ್ನು ಇಲ್ಲಿ ನಾನು ಹೇಳಬೇಕಾಗಿದೆ. ಯಾಕೆಂದರೆ, ನಾನು ಹಲವು ವರ್ಷಗಳ ಕಾಲ ಆ ಸಂಸ್ಥೆಯೊಂದಿಗೆ ಒಡನಾಟ ಹೊಂದಿದ್ದೆ. ನ್ಯೂ ಇಂಡಿಯಾ ಫೌಂಡೇಶನ್‌ನ ಪುಸ್ತಕಗಳನ್ನು ನೋಡಬೇಕಾದರೆ ಈ ಲಿಂಕ್‌ಗೆ https://www.newindiafoundation.org/books ಭೇಟಿ ಕೊಡಬಹುದಾಗಿದೆ.

ಇಲ್ಲಿ ಶಿಫಾರಸು ಮಾಡಲಾಗಿರುವ 50 ಪುಸ್ತಕಗಳ ಪೈಕಿ ಕೆಲವಾದರೂ ಪುಸ್ತಕಗಳ ಹಿಂದೆ ಬೀಳಲು ಕೆಲವಾದರೂ ಓದುಗರಿಗೆ ಈ ಅಂಕಣ ಪ್ರೇರಣೆ ನೀಡುತ್ತದೆ ಎಂದು ನಾನು ನಂಬುತ್ತೇನೆ. ಬಹುತೇಕ ಎಲ್ಲ ಪುಸ್ತಕಗಳು ಲಭ್ಯವಿವೆ. ಲಭ್ಯವಿರದ ಕೆಲವು ಪುಸ್ತಕಗಳು archive.org ಎಂಬ ವೆಬ್‌ಸೈಟ್‌ನಲ್ಲಿ ಸಿಗುತ್ತವೆ. ಹೆಚ್ಚಿನ ಪುಸ್ತಕಗಳು ಹಿಂದಿ ಮತ್ತು ಇತರ ಭಾಷೆಗಳಿಗೂ ಅನುವಾದಗೊಂಡಿವೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)