varthabharthi


ಪ್ರಚಲಿತ

ಇವರನ್ನು ಮತ್ತೆ ನೋಡಲಾಗಲಿಲ್ಲ

ವಾರ್ತಾ ಭಾರತಿ : 12 Sep, 2022
ಸನತ್ ಕುಮಾರ್ ಬೆಳಗಲಿ

ಇತ್ತೀಚೆಗೆ ನಮ್ಮನ್ನಗಲಿದ ಗೌರಿಬಿದನೂರಿನ ಚಿಂತಕ ಬಿ.ಜಿ.ಎಂ. ಎಂದೇ ಖ್ಯಾತರಾಗಿದ್ದ ಬಿ.ಗಂಗಾಧರಮೂರ್ತಿ ಮತ್ತು ಬಿಜಾಪುರ ಜಿಲ್ಲೆಯ ಗೊಳಸಂಗಿಯ ಜಾನಪದ ಸಾಹಿತಿ ಕಾ.ಹು.ಬಿಜಾಪುರ ಅವರ ನಿರ್ಗಮನದ ನೋವು ಅಂತಿಂಥದ್ದಲ್ಲ. ಕಾ.ಹು.ಬಿಜಾಪುರ ಎಂದೇ ಹೆಸರಾದ ಕಾಶೀಮಸಾಬ್ ಹುಸೇನಸಾಬ್ ಬಿಜಾಪುರ ಎಲೆಮರೆಯ ಕಾಯಿಯಂತಿದ್ದ ವರು. ನಾನು ಎಪ್ಪತ್ತರ ದಶಕದ ಆರಂಭದಲ್ಲಿ ಬಸವನಬಾಗೇವಾಡಿಯಲ್ಲಿ ಇದ್ದಾಗ ಆಗಾಗ ಸಿಗುತ್ತಿದ್ದ ಕಾ.ಹು.ಬಿಜಾಪುರ ಅವರಿಗೆ ಉರ್ದು ಭಾಷೆಗಿಂತ ಕನ್ನಡವೇ ಚೆನ್ನಾಗಿ ಬರುತ್ತಿತ್ತು. ಹೊಲದಲ್ಲಿ ಬೆವರು ಸುರಿಸಿ ದುಡಿಯುತ್ತಿದ್ದ ಕಾ.ಹು.ಬಿಜಾಪುರ ಅವರ ಉಳಿದ ಸಮಯವೆಲ್ಲ ಬರವಣಿಗೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲು. ಊರಿನಲ್ಲಿ ಹವ್ಯಾಸಿ ನಾಟಕ ತಂಡ ಕಟ್ಟಿ ಜಾತ್ರೆ,ಹಬ್ಬಗಳ ಸಂದರ್ಭದಲ್ಲಿ ಪ್ರದರ್ಶನ ಮಾಡುತ್ತಿದ್ದರು.


ಭಾರತದಲ್ಲಿ ಕೋಮುವಾದಿ ಶಕ್ತಿಗಳ ಹಾವಳಿ ವಿಪರೀತವಾದ ನಂತರ ಬೆಂಗಳೂರಿನ ಟೌನ್ ಹಾಲ್ ಮುಂದೆ ನಮ್ಮಿಂದಿಗೆ ಪ್ರತಿಭಟನೆಗೆ ಬರುತ್ತಿದ್ದ ಪಿ.ಲಂಕೇಶ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂಪಾ, ಗೌರಿ ಲಂಕೇಶ್ ಈಗ ನಮ್ಮಿಂದಿಗೆ ಇಲ್ಲ. ಹೀಗೆ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಿ ಹೋಗುತ್ತಿರುವಾಗ ಮನಸ್ಸಿನಲ್ಲಿ ವಿಷಾದದ ಛಾಯೆ ಮೂಡುತ್ತದೆ. ಬೀದಿ ಪ್ರತಿಭಟನೆಗಳು ಮುಂದುವರಿಯುತ್ತವೆ. ಆದರೆ ಇನ್ನೊಬ್ಬ ಕಾರ್ನಾಡ್, ಮತ್ತೊಬ್ಬ ಚಂಪಾ, ಅನಂತಮೂರ್ತಿ, ಗೌರಿ ಲಂಕೇಶ್ ಸಿಗುವುದಿಲ್ಲ. ಆ ಬದ್ಧತೆ, ಛಲ, ಪ್ರಾಮಾಣಿಕತೆ,ಛಾತಿ ಇದ್ದವರ ಸಂಖ್ಯೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಅಗಲಿದವರ ನೆನಪು ಮಾತ್ರ ಬದುಕಿದವರಿಗೆ ನಿತ್ಯ ಸ್ಫೂರ್ತಿ.

ಹಲವಾರು ವರ್ಷ ಜೊತೆಗಿದ್ದವರು, ವಿಚಾರಗಳನ್ನು ಹಂಚಿಕೊಂಡವರು. ಪ್ರತಿಭಟನಾ ಮೆರವಣಿಗೆಗಳಲ್ಲಿ ಹೋರಾಟಗಳಲ್ಲಿ ಹೆಜ್ಜೆ ಹಾಕಿದವರು, ಧರಣಿಗಳಲ್ಲಿ ಘೋಷಣೆ ಕೂಗಿದವರು, ತಮ್ಮ ಬರಹದ ಮೂಲಕ ಸುತ್ತಮುತ್ತಲಿನ ಕತ್ತಲನ್ನು ಹಿಮ್ಮೆಟ್ಟಿಸಿ ಬೆಳಕು ಚೆಲ್ಲಿದವರು ಒಮ್ಮಿಂದೊಮ್ಮೆಲೇ ಎದ್ದು ಹೋದಾಗ ಉಂಟಾಗುವ ಮಾನಸಿಕ ಯಾತನೆ ಅಂತಿಂಥದ್ದಲ್ಲ. ಅದರಲ್ಲೂ ಮರಳಿ ಬಾರದ ಕಡೆ ನಡೆದು ಬಿಟ್ಟರೆ ಒಂಟಿ ಆಗಿಬಿಡುತ್ತೇವೆ. ಒಂದಿಲ್ಲೊಂದು ದಿನ ನಾವೂ ಹೊರಡುವುದು ಖಚಿತ ಇದ್ದರೂ ಅಗಲಿದವರು ಬಿಟ್ಟು ಹೋಗುವ ನೆನಪುಗಳು ನಿರಂತರವಾಗಿ ಜೊತೆಗಿರುತ್ತವೆ. ಕೊನೆಯ ಬಾರಿ ಒಮ್ಮೆ ಅವರನ್ನು ಕಾಣಬೇಕಾಗಿತ್ತು ಎಂಬ ಹಳಹಳಿಕೆ ಮನಸ್ಸಿನಲ್ಲಿ ಉಳಿದು ಬಿಡುತ್ತದೆ.

ತಲೆಯ ಮೇಲೆ ಉತ್ತರ ಕರ್ನಾಟಕದ ಜನಸಾಮಾನ್ಯರು ಧರಿಸುವ ಕರಿ ಟೊಪ್ಪಿಗೆ, ಶುಭ್ರ ಬಿಳಿ ಧೋತರ,ಜುಬ್ಬಾ ಇದು ಅವರ ಖಾಯಂ ಉಡುಪು. ಬಾಗೇವಾಡಿಯಿಂದ ಅವರ ಗೊಳಸಂಗಿಯ ಮನೆಗೆ ಒಂದೆರಡು ಸಲ ಹೋಗಿದ್ದೇನೆ. ಅವರ ಮನೆಯ ಬಿಸಿ ಜೋಳದ ರೊಟ್ಟಿ , ಎಣೆಗಾಯಿ ಪಲ್ಯ, ಶೇಂಗಾ ಹಿಂಡಿ,ಕೆಂಪು ಚಟ್ನಿಯನ್ನು ಊಟ ಮಾಡಿದ ಮತ್ತು ಆ ರುಚಿಯ ನೆನಪು ಇನ್ನೂ ಇದೆ.

ಇತ್ತೀಚೆಗೆ ನಮ್ಮನ್ನಗಲಿದ ಗೌರಿಬಿದನೂರಿನ ಚಿಂತಕ ಬಿ.ಜಿ.ಎಂ. ಎಂದೇ ಖ್ಯಾತರಾಗಿದ್ದ ಬಿ.ಗಂಗಾಧರಮೂರ್ತಿ ಮತ್ತು ಬಿಜಾಪುರ ಜಿಲ್ಲೆಯ ಗೊಳಸಂಗಿಯ ಜಾನಪದ ಸಾಹಿತಿ ಕಾ.ಹು.ಬಿಜಾಪುರ ಅವರ ನಿರ್ಗಮನದನೋವು ಅಂತಿಂಥದ್ದಲ್ಲ. ಕಾ.ಹು.ಬಿಜಾಪುರ ಎಂದೇ ಹೆಸರಾದ ಕಾಶೀಮಸಾಬ್ ಹುಸೇನಸಾಬ್ ಬಿಜಾಪುರ ಎಲೆ ಮರೆಯ ಕಾಯಿಯಂತಿದ್ದ ವರು. ನಾನು ಎಪ್ಪತ್ತರ ದಶಕದ ಆರಂಭದಲ್ಲಿ ಬಸವನಬಾಗೇವಾಡಿಯಲ್ಲಿ ಇದ್ದಾಗ ಆಗಾಗ ಸಿಗುತ್ತಿದ್ದ ಕಾ.ಹು.ಬಿಜಾಪುರ ಅವರಿಗೆ ಉರ್ದು ಭಾಷೆಗಿಂತ ಕನ್ನಡವೇ ಚೆನ್ನಾಗಿ ಬರುತ್ತಿತ್ತು. ಹೊಲದಲ್ಲಿ ಬೆವರು ಸುರಿಸಿ ದುಡಿಯುತ್ತಿದ್ದ ಕಾ.ಹು.ಬಿಜಾಪುರ ಅವರ ಉಳಿದ ಸಮಯವೆಲ್ಲ ಬರವಣಿಗೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲು. ಊರಿನಲ್ಲಿ ಹವ್ಯಾಸಿ ನಾಟಕ ತಂಡ ಕಟ್ಟಿ ಜಾತ್ರೆ,ಹಬ್ಬಗಳ ಸಂದರ್ಭದಲ್ಲಿ ಪ್ರದರ್ಶನ ಮಾಡುತ್ತಿದ್ದರು.

ಜಾನಪದ ಸಾಹಿತ್ಯ, ವಚನ ಸಾಹಿತ್ಯ, ಶರಣ ಸಾಹಿತ್ಯದ ಬಗ್ಗೆ ಅದ್ಭುತವಾಗಿ ಉಪನ್ಯಾಸ ನೀಡುತ್ತಿದ್ದ ಕಾ.ಹು.ಬಿಜಾಪುರ ಅವರ ಜೊತೆಗೆ ಮಾತಿಗೆ ಕೂತರೆ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ನಾನು ಬಿಜಾಪುರ ಜಿಲ್ಲೆಯನ್ನು ಬಿಟ್ಟು ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ಬಂದ ನಂತರ ಮತ್ತೆ ಅವರನ್ನು ನೋಡಲು ಆಗಿರಲಿಲ್ಲ. ಒಂದೆರಡು ಸಲ ಫೋನ್‌ನಲ್ಲಿ ಮಾತಾಡಿದ್ದನ್ನು ಬಿಟ್ಟರೆ ಮತ್ತೆ ಸಿಕ್ಕಿರಲಿಲ್ಲ. ನಮ್ಮಿಬ್ಬರ ಬದುಕಿನ ಇಳಿ ಸಂಜೆಯಲ್ಲಿ ಕಾ.ಹು.ಬಿಜಾಪುರ ಅವರನ್ನೊಮ್ಮೆ ಭೇಟಿ ಆಗಬೇಕೆಂದಿದ್ದೆ. ಬದುಕಿನ ಜಂಜಡಗಳ ನಡುವೆ ಅದು ಸಾಧ್ಯವಾಗಲೇ ಇಲ್ಲ.ಈ ವಿಷಾದ ಮನಸ್ಸಿಗೆ ಚುಚ್ಚುತ್ತಲೇ ಇರುತ್ತದೆ.
ಇನ್ನು ಗೌರಿಬಿದನೂರಿನ ಬಿ. ಗಂಗಾಧರಮೂರ್ತಿ. ಇವರ ನನ್ನ ಒಡನಾಟ ಮೂರು ದಶಕಗಳಷ್ಟು ಹಳೆಯದು. ವಿಚಾರವಾದಿ ಎಚ್. ನರಸಿಂಹಯ್ಯನವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಗಂಗಾಧರ ಮೂರ್ತಿ ಅವರು ಅವಕಾಶ ವಂಚಿತ ಕಡು ಬಡತನದ ಹಿನ್ನೆಲೆಯಿಂದ ಬಂದು ಅಪಾರ ಪರಿಶ್ರಮ ಮತ್ತು ವೈಚಾರಿಕ ಬದ್ಧತೆಯಿಂದ ಬಹು ಎತ್ತರಕ್ಕೆ ಬೆಳೆದವರು.
ಗೌರಿಬಿದನೂರಿನ ನ್ಯಾಶನಲ್ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಲೇ ಸಾಕ್ಷರತಾ ಆಂದೋಲನ, ದಲಿತ ಸಂಘರ್ಷ ಸಮಿತಿ, ಸಮುದಾಯ, ಭಾರತ ಜ್ಞಾನ, ವಿಜ್ಞಾನ ಸಮಿತಿ, ಪರಿಸರ ಚಳವಳಿ ಹೀಗೇ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ನಾನು ಅವರನ್ನು ಭೇಟಿ ಮಾಡಿದಾಗ ಹೊಸದೇನನ್ನೋ ಹೇಳುತ್ತಿದ್ದರು.

ಭಾರತದಲ್ಲಿ ಆರೆಸ್ಸೆಸ್ ನಿಯಂತ್ರಿತ ಬಿಜೆಪಿ ಅಧಿಕಾರಕ್ಕೆ ಬಂದರೆ ಸಿವಿಲ್ ವಾರ್ (ಯಾದವೀ ಕಲಹ) ಆಗುತ್ತದೆ, ದೇಶ ಒಡೆದು ಹೋಗುತ್ತದೆ ಎಂದು ನನಗೆ ಭೇಟಿಯಾದಾಗಲೆಲ್ಲ ಹೇಳುತ್ತಿದ್ದ ಮೂರ್ತಿ ಅವರು ಬಿಜೆಪಿ ಒಕ್ಕೂಟ ಸರಕಾರದ ಸೂತ್ರ ಹಿಡಿದಾಗ ತುಂಬಾ ಆತಂಕಿತರಾಗಿದ್ದರು.

ವ್ಯಾಸಂಗ ಮುಗಿಸಿ ಅಲ್ಲಲ್ಲಿ ಸುತ್ತಾಡಿ ಗೌರಿಬಿದನೂರಿಗೆ ಬಂದು ನೆಲೆಸಿದ ಗಂಗಾಧರಮೂರ್ತಿ ಅವರು ಅಲ್ಲಿನ ನ್ಯಾಶನಲ್ ಕಾಲೇಜ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಲೇ ಜೀತ ಪದ್ದತಿಯ ವಿರುದ್ಧ, ಮರಳು ಗಣಿಗಾರಿಕೆ ವಿರುದ್ಧ ಜನ ಹೋರಾಟಗಳನ್ನು ಸಂಘಟಿಸಿ ಅನೇಕ ಸಲ ಸಮಾಜ ವಿರೋಧಿ ಶಕ್ತಿಗಳಿಂದ ಗೂಂಡಾ ದಾಳಿಗೊಳಗಾದರು.ಆದರೆ ಹಿಡಿದ ಛಲವನ್ನು ಅವರು ಬಿಡಲಿಲ್ಲ.

ಗಂಗಾಧರಮೂರ್ತಿ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು. ಅವರ ತಂದೆ ಒಂದು ಹೇರ್ ಕಟಿಂಗ್ ಸಲೂನ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಆ ಸಲೂನಿನಿಂದ ಬರುವ ಆದಾಯದಲ್ಲಿ ಮನೆ ನಡೆಸುವುದು ಕಷ್ಟಕರವಾಗಿತ್ತು. ಟ್ಯೂಷನ್ ಫೀ ಕೊಡಬೇಕೆಂದು ಕೇಳಿದಾಗೆಲ್ಲ ಅವರ ತಂದೆ ತಮ್ಮ ಬಳಿ ಇದ್ದ ಉಂಗುರವನ್ನು ಅಡವಿಟ್ಟು ಹಣ ತಂದು ಕೊಡುತ್ತಿದ್ದರಂತೆ.ಹೀಗಾಗಿ ಕಡು ಬಡತನದಲ್ಲಿ ಓದಿದ ಗಂಗಾಧರಮೂರ್ತಿ ಮುಂದೆ ಶಿವಮೊಗ್ಗದಲ್ಲಿ ಸ್ನೇಹಿತರ ನೆರವಿನಿಂದ ವ್ಯಾಸಂಗ ಪೂರೈಸಿದರು.

ಗಂಗಾಧರ ಮೂರ್ತಿಯರು ಗೌರಿ ಬಿದನೂರಿನ ಸಮೀಪದಲ್ಲಿರುವ ಕರ್ನಾಟಕದ ಜಲಿಯನ್ ವಾಲಾ ಬಾಗ್ ಎಂದು ಹೆಸರಾದ ವಿಧುರಾಶ್ವತ್ಥದಲ್ಲಿ ತುಂಬಾ ಆಸಕ್ತಿ ವಹಿಸಿ ರೂಪಿಸಿದ ವೀರ ಸೌಧವನ್ನು ತೋರಿಸಲು ಒಮ್ಮೆ ಕರೆದುಕೊಂಡು ಹೋಗಿದ್ದರು. ಈ ವೀರಸೌಧ ಸ್ವಾತಂತ್ರ ಹೋರಾಟದ ಕುರಿತ ಚಿತ್ರಪಟಗಳ ಗ್ಯಾಲರಿ. ಇಂತಹ ಗ್ಯಾಲರಿ ಯನ್ನು ನಾನು ಎಲ್ಲೂ ನೋಡಿಲ್ಲ. ಸ್ವಾತಂತ್ರ ಹೋರಾಟವೆಂದರೆ ಗಾಂಧೀಜಿ,ನೆಹರೂ ಕಾಂಗ್ರೆಸ್ ಸಂಸ್ಥೆ ಇದಕ್ಕೆ ಸೀಮಿತಗೊಳಿಸಿದ ದಾಖಲೆಗಳೇ ಜಾಸ್ತಿ ಸಿಗುತ್ತವೆ. ಆದರೆ ಗಂಗಾಧರಮೂರ್ತಿ ಅವರು ರೂಪಿಸಿದ ವಿಧುರಾಶ್ವತ್ಥ ದಲ್ಲಿ ಇರುವ ಗ್ಯಾಲರಿ ಯಲ್ಲಿ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ಕಾಂಗ್ರೆಸ್, ಗಾಂಧಿ, ನೆಹರೂ, ಸುಭಾಷ್ ಮಾತ್ರವಲ್ಲ ಪಂಜಾಬಿನ ಗದರ್ ಚಳವಳಿ, ಭಗತ್‌ಸಿಂಗ್, ಚಂದ್ರಶೇಖರ ಆಝದರ ನೇತೃತ್ವದ ಕ್ರಾಂತಿಕಾರಿಗಳ ತಂಡ,ಕಮ್ಯುನಿಸ್ಟರು ಮತ್ತು ಸೋಷಲಿಸ್ಟರು ಮಾಡಿದ ತ್ಯಾಗ ಬಲಿದಾನ, ಮೈಸೂರು ಹುಲಿ ಟಿಪ್ಪು ಸುಲ್ತಾನರ ರಾಜಿರಹಿತ ಸಂಘರ್ಷ, ಸ್ವಾತಂತ್ರ ಹೋರಾಟದಲ್ಲಿ ಮುಸ್ಲಿಂ ಸಮುದಾಯದ ಪಾತ್ರ, ದುಡಿಯುವ ಜನರ ಪಾಲ್ಗೊಳ್ಳುವಿಕೆ, ಮಹಿಳೆಯರ ಹೋರಾಟ ಎಲ್ಲ ಧಾರೆಗಳಿಗೆ ಆದ್ಯತೆ ನೀಡಲಾಗಿದೆ.

ವಿಧುರಾಶ್ವತ್ಥದ ಇಂಥ ವೀರ ಸೌಧದ ಮೇಲೆ ಇತ್ತೀಚೆಗೆ ಕೋಮುವಾದಿ ಪುಂಡರು ಹಲ್ಲೆ ಮಾಡಿದ ಸುದ್ದಿ ಆತಂಕ ಉಂಟು ಮಾಡಿತ್ತು. ಗ್ಯಾಲರಿಯಲ್ಲಿ ಸಾವರ್ಕರ್ ಫೋಟೊ ಇದೆ. ಆದರೂ ಟಿಪ್ಪು ಸುಲ್ತಾನ್ ಚಿತ್ರವೇಕೆ? ಮುಸಲ್ಮಾನರ ಪಾಲ್ಗೊಳ್ಳುವಿಕೆಯ ದಾಖಲೆ ಏಕೆ ಅದನ್ನು ತೆಗೆದು ಹಾಕಿ ಎಂದು ಗಲಾಟೆ ಮಾಡಿ ಹೋದರು. ಆಗ ಗಂಗಾಧರಮೂರ್ತಿ ಅವರು ನನಗೆ ಫೋನ್ ಮಾಡಿ ಈ ಅಪರೂಪದ ಬಹುತ್ವದ ಸಂಕೇತವಾದ ವೀರಸೌಧವನ್ನು ಉಳಿಸಿಕೊಳ್ಳುವ ಅಗತ್ಯದ ಬಗ್ಗೆ ತುಂಬಾ ಹೊತ್ತು ಮಾತಾಡಿದ್ದರು.

ಗಂಗಾಧರಮೂರ್ತಿ ಅವರನ್ನು ಭೇಟಿಯಾದಾಗಲೆಲ್ಲ ಮೊದಲು ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು. ನನಗೆ ಮೊಣಕಾಲು ನೋವು ಎಂದು ಕೇಳಿ ಇದಕ್ಕೆ ಶಸ್ತ್ರಚಿಕಿತ್ಸೆ ಬದಲು ನಾಟಿ ಔಷಧಿ ಉಪಯೋಗಿಸಲು ಹೇಳಿ ವಿಳಾಸ ಕೊಟ್ಟಿದ್ದರು.ತರಿಸಿಯೂ ಕೊಟ್ಟಿದ್ದರು. ಅವರು ಒಡಿಶಾದಿಂದ ಕನ್ನಡಕ್ಕೆ ತಂದ ಲಕ್ಷ್ಮಿ ಪುರಾಣ ಪುಸ್ತಕವನ್ನು ನನಗೆ ಅರ್ಪಿಸಿದ್ದರು. ಮಾತಾಡಬೇಕೆನಿಸಿ ದಾಗೆಲ್ಲ ಫೋನ್ ಮಾಡುತ್ತಿದ್ದರು.

ಇಂಥ ಗಂಗಾಧರಮೂರ್ತಿ ಅವರನ್ನು ಮತ್ತೆ ಭೇಟಿಯಾಗಲು ಆಗಲಿಲ್ಲ. ಅಂದರೆ ಐದು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಹೋದಾಗ ಆಗಾಗ ಸಿಗುತ್ತಿದ್ದ, ಮನೆಗೆ ಕರೆದುಕೊಂಡು ಹೋಗಿ ಊಟ ಮಾಡಿಸುತ್ತಿದ್ದ ಮೂರ್ತಿ ಅವರನ್ನು ಮತ್ತೆ ಕಾಣಬೇಕೆಂದರೆ ಸಾಧ್ಯವಾಗಲೇ ಇಲ್ಲ. ಹಿಂದೆ ನಮಗೆಲ್ಲ ಮಾರ್ಕ್ಸ್ ವಾದ ದ ಪಾಠ ಮಾಡಿದ ಬಿಜಾಪುರದ ಪಿ.ಎಸ್.ಪಾಟೀಲ ( ವಕೀಲರು) ಮತ್ತು ನರಸಿಂಗರಾವ್ ಕುಲಕರ್ಣಿ, ಕಲಬುರಗಿಯ ಕಮ್ಯುನಿಸ್ಟ್ ನಾಯಕ ಗಂಗಾಧರ ನಮೋಶಿ, ಅವರು ಇದೇ ರೀತಿ ನಿರ್ಗಮಿಸಿದಾಗ ಕೊನೆಯ ಬಾರಿ ಅವರನ್ನೊಮ್ಮೆ ನೋಡಬೇಕೆನಿಸಿತ್ತು. ಆದರೆ ಬದುಕಿನ ಈ ಮಹಾಸಾಗರದಲ್ಲಿ ನಾವೊಂದು ತೀರದಲ್ಲಿ ಅವರೊಂದು ತೀರದಲ್ಲಿ ಇರುವುದರಿಂದ ಸಾಧ್ಯವಾಗಲಿಲ್ಲ. ಆದರೆ ನೆನಪಿನಂಗಳದಲ್ಲಿ ಇವರೊಂದಿಗಿನ ಒಡನಾಟ ನಾವು ಬದುಕಿರುವವರೆಗೆ ನಿತ್ಯ ಹಸಿರಾಗಿರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)