varthabharthi


ನಿಮ್ಮ ಅಂಕಣ

ತೆರವು ಕಾರ್ಯಾಚರಣೆ ಪ್ರತೀ ಜಿಲ್ಲೆಗೆ ಅಗತ್ಯ

ವಾರ್ತಾ ಭಾರತಿ : 20 Sep, 2022
-ವಿಜಯಕುಮಾರ್ ಎಚ್. ಕೆ. ರಾಯಚೂರು

ಉತ್ತರ ಕರ್ನಾಟಕದ ಪ್ರತೀ ಜಿಲ್ಲೆಗಳಲ್ಲಿ ಕೆರೆ, ಕುಂಟೆ ಕಾಲುವೆಗಳೇ ಸಾಕಷ್ಟು ಜನ ಮತ್ತು ಜಾನುವಾರುಗಳಿಗೆ ಜೀವಾಳ. ಆದರೆ, ಈ ಎಲ್ಲಾ ಜಿಲ್ಲೆಗಳ ಕಾಲುವೆ, ಕುಂಟೆ ಸೇರಿದಂತೆ ನೂರಾರು ಕೆರೆಗಳು ಒತ್ತುವರಿಯಾಗಿದ್ದು ಸಾವಿರಾರು ಎಕರೆ ಸರಕಾರಿ ಜಮೀನು ಪಾಪಿಗಳ ಪಾಲಾಗಿವೆ ಎಂದು ದಶಕಗಳಿಂದ ಸಾಕಷ್ಟು ವರದಿಗಳಾಗುತ್ತಿವೆ. ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳು ಕಳೆದ ಎರಡು ದಶಕಗಳಿಂದ ಬರಗಾಲದ ಪಟ್ಟಿಯಲ್ಲಿವೆ. ಕಾಲ ಕಾಲಕ್ಕೆ ಮಳೆ ಬೆಳೆಯಾಗದೆ ಈ ಭಾಗದ ಅನ್ನದಾತರು ಉದ್ಯೋಗಕ್ಕಾಗಿ ಗುಳೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲೆಗಳಲ್ಲಿನ ಪ್ರಮುಖ ಕೆರೆಗಳು ಒತ್ತುವರಿದಾರರ ಪಾಲಾಗಿವೆ ಎಂಬುದು ನೋವಿನ ಸಂಗತಿ. ನೂರಾರು ಕೆರೆಗಳ ಜಾಗಗಳಿಗೆ ಪ್ರಭಾವಿ ರಾಜಕಾರಣಿಗಳೇ ಕನ್ನ ಹಾಕಿದ್ದು, ಸಾವಿರಾರು ಎಕರೆ ಸರಕಾರಿ ಜಮೀನು ಒತ್ತುವರಿಯಾಗಿವೆ. ಇನ್ನು ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ಕೆರೆಗಳು ಒತ್ತುವರಿಯಾಗಿರುವುದಂತೂ ಜನಜನಿತ. ಬಲಾಢ್ಯರು ನಕಲಿ ದಾಖಲೆ ಸೃಷ್ಟಿಸಿ ಒಂದು ಕಡೆ ಸರಕಾರಿ ಜಾಗ ಲಪಟಾಯಿಸುತ್ತಿದ್ದರೆ ಇನ್ನೊಂದೆಡೆ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಮತ್ತು ಜಿಲ್ಲಾಡಳಿತಗಳು ತಮ್ಮ ತಮ್ಮ ಯೋಜನೆ ವ್ಯಾಪ್ತಿಗೆ ಬರುವ ಕೆರೆಗಳ ಅಭಿವೃದ್ಧಿಗೆ ಮುಂದಾಗಿ ಅದರ ಪ್ರಾರಂಭಿಕ ಹಂತವಾಗಿ ಇಂತಹ ಕೆರೆಗಳ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಒತ್ತುವರಿ ತೆರವು ಕಾರ್ಯಾಚರಣೆ ಬರೀ ರಾಜಧಾನಿ ಬೆಂಗಳೂರಿಗೆ ಸೀಮಿತವಾಗದೆ ಪ್ರತೀ ಜಿಲ್ಲೆಗೆ ತ್ವರಿತವಾಗಿ ಅನ್ವಯವಾಗಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)