varthabharthi


ಸಂಪಾದಕೀಯ

ಕುಂಬಳಕಾಯಿ ಕಳ್ಳ ಎಂದರೆ....

ವಾರ್ತಾ ಭಾರತಿ : 23 Sep, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಶೇ.40 ಕಮಿಷನ್‌ಗಾಗಿ ರಾಜ್ಯ ಸರಕಾರ ದೇಶಾದ್ಯಂತ ಸುದ್ದಿಯಾಗಿರುವುದು ವಿರೋಧ ಪಕ್ಷಗಳ ಪ್ರಯತ್ನದಿಂದ ಅಲ್ಲ. ಶೇ.40 ಕಮಿಷನ್ ನೀಡದ ಕಾರಣ ತನ್ನ ಹಣವನ್ನು ಸರಕಾರ ಬಿಡುಗಡೆ ಮಾಡುತ್ತಿಲ್ಲ ಎಂದು ಗುತ್ತಿಗೆದಾರನೊಬ್ಬ ಈ ದೇಶದ ಪ್ರಧಾನ ಮಂತ್ರಿಗೆ ಬರೆದ ಪತ್ರ ಎಲ್ಲ ಪತ್ರಿಕೆಗಳ ಮುಖಪುಟ ಸುದ್ದಿಯಾಯಿತು. ಕನಿಷ್ಠ ಪ್ರಧಾನಿಗೆ ಪತ್ರ ಬರೆದಾಗ ಅದನ್ನು ರಾಜ್ಯ ಸರಕಾರ ಗಂಭೀರವಾಗಿ ತೆಗೆದುಕೊಂಡಿದ್ದರೆ, ಪ್ರಕರಣ ಬೆಳೆಯುತ್ತಿರಲಿಲ್ಲ. ವಿಪರ್ಯಾಸವೆಂದರೆ, ಆರೋಪದ ಬಗ್ಗೆ ತನಿಖೆ ನಡೆಸುವುದರ ಬದಲು, ಆರೋಪಿಸಿದ ಸಂತ್ರಸ್ತನ ಮೇಲೆಯೇ ಸರಕಾರ ಪ್ರಕರಣ ದಾಖಲಿಸಿತು. ಪ್ರಧಾನಿಗೆ ಬರೆದ ಪತ್ರದಿಂದ ಗುತ್ತಿಗೆದಾರನ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತೇ ಹೊರತು, ಯಾವುದೇ ಪರಿಹಾರ ಸಿಗಲಿಲ್ಲ. ಅಂತಿಮವಾಗಿ ಸಚಿವ ಈಶ್ವರಪ್ಪರ ಹೆಸರು ಬರೆದು ಆತ ಹೊಟೇಲೊಂದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಭಾರೀ ಒತ್ತಡದ ಬಳಿಕ, ಆರೋಪಿ ಉಲ್ಲೇಖಿಸಿದ ಸಚಿವರು ರಾಜೀನಾಮೆ ನೀಡಿದರು. ಇದೀಗ ಪೊಲೀಸ್ ಇಲಾಖೆ ಪ್ರಕರಣದ ತನಿಖೆ ನಡೆಸಿ, ಸಂತ್ರಸ್ತನ ಸಾವಿಗೂ ಸಚಿವರಿಗೂ ಯಾವುದೇ ಸಂಬಂಧವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದೆ. ಈಶ್ವರಪ್ಪ ಮತ್ತೆ ಸಚಿವರಾಗುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಶೇ.40 ಕಮಿಷನ್‌ನ ಆರೋಪ ಹೊರಿಸಿರುವುದು ಕೇವಲ ಒಬ್ಬ ಗುತ್ತಿಗೆದಾರ ಅಲ್ಲ. ಗುತ್ತಿಗೆದಾರರ ಸಂಘವೇ ಪತ್ರಿಕಾಗೋಷ್ಠಿ ನಡೆಸಿ ಈ ಆರೋಪ ಮಾಡಿದೆ. ಸರಕಾರದ ವಿರುದ್ಧ ಆರೋಪ ಮಾಡಿರುವ ಗುತ್ತಿಗೆದಾರರಿಗೆ ಸಚಿವರು, ಜನಪ್ರತಿನಿಧಿಗಳು ಪರೋಕ್ಷ ಕಿರುಕುಳಗಳನ್ನು ನೀಡುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಇದರ ಬೆನ್ನಿಗೇ ರಾಜ್ಯದ ಖಾಸಗಿ ಶಿಕ್ಷಣ ಸಂ ಸ್ಥೆಗಳೂ ಶೇ. 40 ಕಮಿಷನ್ ದಂಧೆಯ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸಿತು. ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ ತನಿಖೆಯಲ್ಲಿ ರಾಜಕೀಯ ವಲಯದೊಳಗಿರುವ ಪ್ರಭಾವಿಗಳ ಹೆಸರು ಕೇಳಿ ಬರುತ್ತಿದೆಯಾದರೂ, ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಸರಕಾರದೊಳಗಿರುವ ಒಬ್ಬನೇ ಒಬ್ಬ ಸಚಿವ ರಾಜೀನಾಮೆ ನೀಡಿಲ್ಲ. ಸಂವಿಧಾನಕ್ಕೆ ವಂಚಿಸಿ ಅಡ್ಡ ದಾರಿಯ ಮೂಲಕ ರಚನೆಯಾಗಿರುವ ಸರಕಾರವೊಂದರಿಂದ ಇದಕ್ಕೆ ಹೊರತಾದುದನ್ನು ನಿರೀಕ್ಷಿಸುವುದು ಕೂಡ ತಪ್ಪಾಗುತ್ತದೆ. ಆದರೆ ಶೇ. 40 ಕಮಿಷನ್ ಆರೋಪಕ್ಕೆ ಗುರಿಯಾಗಿರುವ ಸರಕಾರ ತನ್ನನ್ನು ತಾನು ಸರಿಪಡಿಸಿಕೊಳ್ಳುವುದರ ಬದಲಿಗೆ, ತನ್ನ ಮೇಲೆ ಆರೋಪಹೊರಿಸಿದವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಮುಂದಾಗಿದೆ.

ಬುಧವಾರದಂದು ರಾಜ್ಯಾದ್ಯಂತ ‘ಪೇಸಿಎಂ’ ಪೋಸ್ಟರ್ ಮೂಲಕ ಸರಕಾರದ ಭ್ರಷ್ಟಾಚಾರವನ್ನು ಟೀಕಿಸುವ ಪ್ರಯತ್ನವೊಂದು ನಡೆಯಿತು. ಕೆಲವು ರಾಜಕೀಯ ಪಕ್ಷಗಳು, ಸಂಘಟನೆಗಳು ಇದರ ಹಿಂದೆ ಇದೆ ಎನ್ನಲಾಗಿದೆ. ಸರಕಾರದ ಭ್ರಷ್ಟಾಚಾರವನ್ನು ಜನರಿಗೆ ತಲುಪಿಸುವ ಒಂದು ವಿಭಿನ್ನ ಪ್ರಯತ್ನವಿದು. ಈಗಾಗಲೇ ಸರಕಾರದ ಭ್ರಷ್ಟಾಚಾರಗಳ ವಿರುದ್ಧ ಹಲವು ಬೀದಿ ಪ್ರತಿಭಟನೆಗಳು ನಡೆದಿದ್ದು, ಅದರ ಒಂದು ಭಾಗ ಇದಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಮುಖ್ಯಮಂತ್ರಿಯವರನ್ನು ವ್ಯಾಪಕವಾಗಿ ಟ್ರೋಲ್ ಮಾಡಲಾಗಿತ್ತು. ಇದರ ವಿರುದ್ಧ ಬಿಜೆಪಿಯೂ ಪ್ರತಿ ಪೋಸ್ಟರ್‌ಗಳನ್ನು ಹಾಕಿ ಸಿದ್ದರಾಮಯ್ಯ, ಡಿಕೆಶಿ ಅವರನ್ನು ವ್ಯಂಗ್ಯ ಮಾಡಿತ್ತು. ಆದರೆ ಇದೀಗ ನೋಡಿದರೆ ಸರಕಾರ ಈ ಪೇಸಿಎಂ ಪೋಸ್ಟರ್ ವಿರುದ್ಧ ತನಿಖೆ ನಡೆಸಲು ಮುಂದಾಗಿದೆ. ಕೆಲವರನ್ನು ಬಂಧಿಸುವ ಪ್ರಹಸನವನ್ನೂ ನಡೆಸಿದೆ. ಈ ಮೂಲಕ ‘ರಾಜ್ಯದ ಮುಖ್ಯಮಂತ್ರಿ ಟೀಕಾತೀತರು, ಅವರನ್ನು ಟೀಕಿಸುವುದು, ವ್ಯಂಗ್ಯ ಮಾಡುವುದು, ಅವರ ಮೇಲೆ ಆರೋಪ ಹೊರಿಸುವುದು ಕಾನೂನು ಬಾಹಿರ’ ಎನ್ನುವ ಅಘೋಷಿತ ನಿಯಮವೊಂದನ್ನು ರಾಜ್ಯದಲ್ಲಿ ಜಾರಿಗೊಳಿಸಲು ಸರಕಾರ ಮುಂದಾಗಿದೆ. ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಉತ್ತರ ಪ್ರದೇಶ ಸರಕಾರವನ್ನು ಮಾದರಿಯಾಗಿಸುವ ಎಚ್ಚರಿಕೆಯನ್ನು ಜನರಿಗೆ ನೀಡುತ್ತಾ ಬಂದಿದ್ದಾರೆ. ಅದರ ಭಾಗವಾಗಿಯೇ, ತನ್ನ ವಿರುದ್ಧ ಟೀಕಿಸುವವರನ್ನು ಮಟ್ಟ ಹಾಕುವ ಪ್ರಯತ್ನವನ್ನು ಸರಕಾರ ನಡೆಸುತ್ತಿದೆಯೇ ಎಂದು ಜನರು ಅನುಮಾನಿಸುವಂತಾಗಿದೆ.

ಈ ಹಿಂದೆಯೂ ಸರಕಾರ ಎಡವಿದಾಗ ಅದನ್ನು ಎಚ್ಚರಿಸಲು ವಿರೋಧ ಪಕ್ಷಗಳು ಹತ್ತು ಹಲವು ರೀತಿಯ ಪ್ರತಿಭಟನೆಗಳನ್ನು ನಡೆಸಿವೆ. ಹತ್ತು ಹಲವು ಪ್ರಮುಖ ವ್ಯಂಗ್ಯ ಚಿತ್ರಗಾರರು ರಾಜಕಾರಣಿಗಳನ್ನು ಟೀಕಿಸುವ ಮೂಲಕವೇ ಜಗದ್ವಿಖ್ಯಾತರಾಗಿದ್ದಾರೆ. ನೆಹರೂವಿನಿಂದ ಹಿಡಿದು ಮೋದಿಯವರೆಗೆ ಯಾವ ನಾಯಕರನ್ನೂ ವ್ಯಂಗ್ಯ ಚಿತ್ರಗಾರರು ಬಿಟ್ಟಿಲ್ಲ. ಆದರೆ ಮೋದಿ ನೇತೃತ್ವದ ಸರಕಾರ ಜಾರಿಗೆ ಬಂದ ಬಳಿಕ ಸರಕಾರವನ್ನು ತಮಾಷೆ ಮಾಡುವುದು, ವ್ಯಂಗ್ಯ ಮಾಡುವುದು, ಟೀಕಿಸುವುದು ದೇಶದ್ರೋಹವಾಗಿ ಬಿಟ್ಟಿದೆ. ಸರಕಾರವನ್ನು ಟೀಕಿಸುವ ವಿದೂಷಕರೆಲ್ಲರೂ ಜೈಲು ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕೀಯ ಕಾಮೆಡಿ ಶೋಗಳಿಗೆ ಸರಕಾರ ದಿಗ್ಬಂಧನ ವಿಧಿಸುತ್ತಿವೆ. ಹಲವು ಪ್ರಮುಖ ಹಾಸ್ಯಗಾರರು ಮೈಮೇಲೆ ದೇಶದ್ರೋಹದ ಮೊಕದ್ದಮೆಗಳನ್ನು ಹೊತ್ತುಕೊಂಡು ಓಡಾಡುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ನಡೆದ ಅತ್ಯಾಚಾರವನ್ನು ವರದಿ ಮಾಡಲು ಹೋದ ಪತ್ರಕರ್ತನನ್ನೇ ಬಂಧಿಸಿ ಪೊಲೀಸರು ಜೈಲಿಗೆ ತಳ್ಳುತ್ತಾರೆ. ಇತ್ತ ಅತ್ಯಾಚಾರ ಆರೋಪಿಗಳು ಬಹಿರಂಗವಾಗಿ ಓಡಾಡುತ್ತಿದ್ದಾರೆ. ಇಷ್ಟಕ್ಕೂ ವಿರೋಧ ಪಕ್ಷಗಳ ನಾಯಕರನ್ನು ಟ್ರೋಲ್ ಮಾಡುವುದರಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಗಳು ತಮಗೆ ತಾವು ಯಾವ ನೈತಿಕ ನಿರ್ಬಂಧಗಳನ್ನೂ ವಿಧಿಸಿಕೊಂಡಿಲ್ಲ.

ನಕಲಿ ಐಡಿ ಮೂಲಕ ಟ್ರೋಲ್ ಮಾಡುವುದಕ್ಕಾಗಿಯೇ ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಗಳಲ್ಲಿ ದೊಡ್ಡದೊಂದು ಪಡೆಯೇ ಇದೆ. ರಾಹುಲ್‌ಗಾಂಧಿಯನ್ನು ಅತ್ಯಂತ ಹೀನಾಯವಾಗಿ ವ್ಯಂಗ್ಯ ಮಾಡುತ್ತಾ ಬಂದಿರುವುದು ಬಿಜೆಪಿಯೇ ಆಗಿದೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಅದನ್ನು ಟೀಕಿಸುವುದಕ್ಕೆ ಬಿಜೆಪಿ ನಾಯಕರು ಯಾವೆಲ್ಲ ತಂತ್ರಗಳನ್ನು ಬಳಸಿದ್ದರು ಎನ್ನುವುದನ್ನೊಮ್ಮೆ ಅವರು ನೆನಪಿಸಿಕೊಳ್ಳಬೇಕು. ಇಂತಹ ಪಕ್ಷ ತನ್ನ ನೇತೃತ್ವದ ಸರಕಾರದ ವಿರುದ್ಧ ಯಾರೂ ಟೀಕೆ, ವ್ಯಂಗ್ಯ ಮಾಡಬಾರದು ಎಂದು ಬಯಸುವುದು ಎಷ್ಟರಮಟ್ಟಿಗೆ ಸರಿ? ಒಂದು ವೇಳೆ ‘ಪೇಸಿಎಂ’ ಪೋಸ್ಟರ್‌ನಲ್ಲಿರುವ ಆರೋಪಗಳು ಸುಳ್ಳೇ ಆಗಿದ್ದರೆ, ಅದನ್ನು ಸುಳ್ಳು ಎಂದು ಸಾಬೀತು ಪಡುವುದು ಸರಕಾರದ ಹೊಣೆಗಾರಿಕೆ. . ಶೇ.40 ಕಮಿಷನ್ ಆರೋಪಗಳ ಕುರಿತಂತೆ ಸ್ವತಂತ್ರ ತನಿಖಾ ಸಂಸ್ಥೆಯೊಂದರಿಂದ ತನಿಖೆ ನಡೆಸುತ್ತೇನೆ ಎಂಬ ಭರವಸೆ ನೀಡುವ ಮೂಲಕ ತನ್ನ ಮೇಲಿರುವ ಆರೋಪಗಳಿಂದ ಮುಖ್ಯಮಂತ್ರಿ ಕಳಚಿಕೊಳ್ಳಬೇಕು. ತಪ್ಪೇ ಮಾಡಿಲ್ಲ ಎಂದಾದರೆ ತನಿಖೆ ನಡೆಸುವುದಕ್ಕೆ ಸರಕಾರ ಯಾಕೆ ಹಿಂಜರಿಯಬೇಕು? ತನಿಖೆಗೆ ಆದೇಶ ನೀಡುವ ಮೂಲಕ ಸರಕಾರ ಅರ್ಧ ಆರೋಪಗಳಿಂದ ಮುಕ್ತಿಯನ್ನು ಪಡೆಯುತ್ತದೆ. ಉಳಿದಂತೆ ತನಿಖಾ ಸಂಸ್ಥೆ ಯೇ ತನಿಖೆಯ ಮೂಲಕ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸುತ್ತದೆ. ಆದರೆ ಇದೀಗ ಸರಕಾರ ತನ್ನ ವಿರುದ್ಧ ಟೀಕೆ ಮಾಡಿದ, ತನ್ನನ್ನು ಟ್ರೋಲ್ ಮಾಡಿದವರನ್ನು ತನಿಖೆ ಮಾಡಲು ಹೊರಟಿದೆ.

ಕೆಲವರನ್ನು ಬಂಧಿಸಿ ಅವರ ಮೇಲೆ ಪ್ರಕರಣವನ್ನೂ ದಾಖಲಿಸಿದೆ. ಇದೊಂದು ರೀತಿ, ಕುಂಬಳ ಕಾಯಿ ಕಳ್ಳ ಎಂದಾಕ್ಷಣ ಹೆಗಲು ಮುಟ್ಟಿ ನೋಡಿಕೊಂಡಂತಾಗಿದೆ. ಯಾವಾಗ ಗುತ್ತಿಗೆದಾರನೊಬ್ಬ ಪ್ರಧಾನಮಂತ್ರಿಗೆ ಪತ್ರ ಬರೆದು ಸಚಿವರ ವಿರುದ್ಧ ಆರೋಪ ಮಾಡಿದನೋ ಆಗಲೇ ಶೇ. 40 ಕಮಿಷನ್ ತನಿಖೆಗೆ ಒಳಪಡಬೇಕಾಗಿತ್ತು. ಆದರೆ ಗುತ್ತಿಗೆದಾರನ ಆತ್ಮಹತ್ಯೆಯಲ್ಲಿ ಸಚಿವರ ಪಾತ್ರ ಇದೆಯೋ ಎನ್ನುವುದು ತನಿಖೆಯಾಗಿ ಪ್ರಕರಣ ಅಲ್ಲಿಗೇ ಮುಗಿಯಿತು. ತನಗೆ ಕ್ಲೀನ್‌ಚಿಟ್ ಸಿಕ್ಕಿತು ಎಂದು ಮಾಜಿ ಸಚಿವರು ವಿಜಯೋತ್ಸವ ಮಾಡಿದರು. ಇದೀಗ ತನ್ನನ್ನು ಮತ್ತೆ ಮಂತ್ರಿಯಾಗಿಸಬೇಕು ಎಂದು ಸರಕಾರಕ್ಕೆ ಒತ್ತಡ ತರುತ್ತಿದ್ದಾರೆ. ಸರ್ವ ಅಕ್ರಮಗಳ ಆರೋಪಗಳನ್ನೂ ಸರಕಾರ ತನ್ನ ಕಿರೀಟದ ಗರಿಗಳು ಎಂದು ಸಂರಕ್ಷಿಸಲು ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಕನಿಷ್ಠ ಸರಕಾರವನ್ನು ತಮಾಷೆ ಮಾಡಿ ನಗುವ ಅವಕಾಶವೂ ಇಲ್ಲವೆಂದರೆ ಹೇಗೆ? ‘ಕ್ರಿಯೆಗೆ ಪ್ರತಿಕ್ರಿಯೆ ಸಹಜ’ ಎಂದು ಸಂಘಪರಿವಾರದ ಹಿಂಸಾಚಾರಗಳನ್ನು ಸಮರ್ಥಿಸಿದ್ದ ಬೊಮ್ಮಾಯಿಯವರೇ ಉತ್ತರಿಸಬೇಕಾಗಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)