ಪಡುಕೆರೆ ಸೇತುವೆಯಲ್ಲಿ ಬೈಕ್ ಪತ್ತೆ: ಸವಾರ ನಾಪತ್ತೆ
ಮಲ್ಪೆ, ಸೆ.24: ಮಲ್ಪೆ ಪಡುಕೆರೆ ಸೇತುವೆ ಮೇಲೆ ಸೆ.23ರಂದು ರಾತ್ರಿ ವೇಳೆ ಬೈಕೊಂದು ಅಪಘಾತಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೈಕ್ ಸವಾರ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ನಾಪತ್ತೆಯಾಗಿರುವ ಬೈಕ್ ಸವಾರನನ್ನು ಶಿವಪ್ಪನಾಯ್ಕ(25) ಎಂದು ಗುರುತಿಸಲಾಗಿದೆ. ಇವರು ಆರು ತಿಂಗಳ ಹಿಂದೆ ದಾವಣಗೆರೆಯ ಉತ್ಕಟ್ಟಿ ತಾಂಡದ ಆಶಾ ಎಂಬವರನ್ನು ಪ್ರೀತಿಸಿ ಮದುವೆ ಆಗಿದ್ದು, ಮದುವೆಯ ನಂತರ ಹೆಂಡತಿ ಆಶಾರೊಂದಿಗೆ ಮಲ್ಪೆಕೊಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿ ದ್ದರು. ಕಳೆದ 15 ದಿನಗಳಿಂದ ಇವರು ಮಲ್ಪೆ ಬಂದರಿನಲ್ಲಿ ಮೀನಿನ ಬಾಕ್ಸ್ ಹೊರುವ ಕೆಲಸ ಮಾಡಿಕೊಂಡಿದ್ದು, ಕೆಲವು ದಿನಗಳಿಂದ ಹೆಂಡತಿಯೊಂದಿಗೆ ವೈಮನಸ್ಸು ಹೊಂದಿದ್ದ ಎಂದು ದೂರಲಾಗಿದೆ.
ಇವರು ಸೆ.22ರಂದು ರಾತ್ರಿ ಕೆಲಸ ಮುಗಿಸಿ ಮನೆಗೆಂದು ಹೋಗಿದ್ದು, ಸೆ.23 ರಂದು ಬೆಳಗ್ಗೆ ಶಿವಪ್ಪ ನಾಯ್ಕನ ಬೈಕ್ ಪಡುಕೆರೆ ಸೇತುವೆ ಮೇಲೆ ತಡೆಗೋಡೆಗೆ ಢಿಕ್ಕಿ ಹೊಡೆದು ಬಿದ್ದಿರುವುದು ಕಂಡುಬಂದಿದೆ. ಆದರೆ ಶಿವಪ್ಪನಾಯ್ಕ ನಾಪತ್ತೆ ಯಾಗಿದ್ದರು. ಬೈಕಿನ ಕೀ ಬೈಕಿನಲ್ಲಿ ಆನ್ ಕಂಡೀಷನಲ್ಲಿ ಇತ್ತು. ಶಿವಪ್ಪನಾಯ್ಕನ ಬಲಕಾಲಿನ ಚಪ್ಪಲಿ ಅಲ್ಲಿಯೇ ಬಿದಿತ್ತು. ದ್ವಿ ಚಕ್ರವಾಹನ ಗುದ್ದಿದ ಪಿಲ್ಲರ್ನ ಕೆಳಗಿನ ಮತ್ತು ಮೇಲಿನ ಭಾಗದಲ್ಲಿ ಕೆಂಪು ಬಣ್ಣದ ದ್ರವ ಪದಾರ್ಥ ಕೂಡಾ ಇತ್ತು. ಬೈಕಿನ ಹಿಂಭಾಗದ ಬ್ಯಾಗ್ನಲ್ಲಿ ಶಿವಪ್ಪನಾಯ್ಕನ ಮೊಬೈಲ್ ಪತ್ತೆ ಯಾಗಿದೆ. ಶಿವಪ್ಪ ನಾಯ್ಕ್ ಸೇತುವೆ ಮೇಲೆ ಬೈಕ್ ಅಪಘಾತವಾಗಿ ಅಥವಾ ಇನ್ಯಾವುದೋ ಕಾರಣಗಳಿಂದ ನಾಪತ್ತೆಯಾಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.