varthabharthi


ಪ್ರಚಲಿತ

ಸ್ವಚ್ಛತಾ ಕಾರ್ಮಿಕರ ಕತ್ತಲ ಬದುಕು

ವಾರ್ತಾ ಭಾರತಿ : 26 Sep, 2022
ಸನತ್ ಕುಮಾರ್ ಬೆಳಗಲಿ

ನನಗಿನ್ನೂ ನೆನಪಿದೆ. ಕೊರೋನ ಮೊದಲ ಮತ್ತು ಎರಡನೇ ಅಲೆಯಿಂದ ಭಾರತ ಮಾತ್ರವಲ್ಲ, ಇಡೀ ಜಗತ್ತೇ ದಿಕ್ಕು ತಪ್ಪಿ ನಿಂತ ಆ ದಿನಗಳಲ್ಲಿ ನಾವೆಲ್ಲ ಬೀದಿಗೆ ಬರಲು ಹೆದರುತ್ತಿದ್ದೆವು. ಸರಕಾರಗಳೇ ಹೆದರಿ ಲಾಕ್ ಡೌನ್ ಘೋಷಣೆ ಮಾಡಿದ್ದವು. ಇಡೀ ಭಾರತದಲ್ಲಿ ಕರ್ಫ್ಯೂ ಜಾರಿಯಾದಂಥ ವಾತಾವರಣ. ಅಂಥ ದಿನಗಳಲ್ಲೂ ನಮ್ಮ ಆರೋಗ್ಯವನ್ನು ಕಾಪಾಡಲು ಪೌರಕಾರ್ಮಿಕರು ಪೊರಕೆ ಹಿಡಿದು ಬೀದಿಗೆ ಬಂದು ಕಸ ಗುಡಿಸುತ್ತಿದ್ದರು. ಚರಂಡಿಯೊಳಗೆ ಇಳಿದು ಸ್ವಚ್ಛ ಮಾಡುತ್ತಿದ್ದರು. ಹೀಗೆ ಮಾಡುವಾಗಲೇ ಕೆಲವರು ಉಸಿರುಗಟ್ಟಿ ಸತ್ತು ಹೋದರು.

ಕೋವಿಡ್ ನಿಂದ ಕೆಲ ಪೌರಕಾರ್ಮಿಕರು ಅಸುನೀಗಿದರು. ಅವರಿಗೆ ಸಕಾಲದಲ್ಲಿ ಪರಿಹಾರ ಕೂಡ ಸಿಗಲಿಲ್ಲ. ಈಗೇನೋ ಕರ್ನಾಟಕ ಸರಕಾರ 11,137 ಮಂದಿ ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸಲು ತೀರ್ಮಾ ನಿಸಿದೆ. ಆದರೆ, ಕರ್ನಾಟಕದಲ್ಲಿ 43 ಸಾವಿರ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ 11,137 ಪೌರ ಕಾರ್ಮಿಕರನ್ನು ಮಾತ್ರ ಖಾಯಂ ಮಾಡಿ, ಉಳಿದವರ ಮೂಗಿಗೆ ತುಪ್ಪ ಹಚ್ಚಿ ಕೂರಿಸುವುದು ಸರಿಯೇ?

ಕಳೆದ ವಾರ ಎಲ್ಲೆಡೆ ಎಲ್ಲ ದಿನಾಚರಣೆಗಳಂತೆ ಪೌರ ಕಾರ್ಮಿಕರ ದಿನಾಚರಣೆಯೂ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸ್ವಚ್ಛತಾ ಕಾರ್ಮಿಕರನ್ನು ತಮ್ಮ ಮನೆಗೆ ಆಹ್ವಾನಿಸಿ ಅವರೊಂದಿಗೆ ಉಪಾಹಾರ ಸೇವಿಸಿದರು. ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಪೌರ ಕಾರ್ಮಿಕರನ್ನು ಮನೆಗೆ ಕರೆದು ಅವರೊಂದಿಗೆ ಸಮಯ ಕಳೆದಿದ್ದರು. ಸಾಂಕೇತಿಕವಾಗಿ ಇದು ಶ್ಲಾಘನೀಯ. ಆದರೆ, ಇದಿಷ್ಟರಿಂದಲೇ ನಮ್ಮ ನಗರ ,ಊರು ನಿತ್ಯವೂ ಸ್ವಚ್ಛವಾಗಿಡುವ ಪೌರ ಕಾರ್ಮಿಕರ ಬದುಕಿನ ಕತ್ತಲೆ ತೊಲಗಿ ಬೆಳಕು ಬಂದೀತೇ?

ಮೀಸಲಾತಿ ವಿರುದ್ಧ ಧ್ವನಿ ಎತ್ತುವವರು ಪೌರಕಾರ್ಮಿಕರು ಮಾಡುವ ಕೆಲಸದಲ್ಲಿ ಮೀಸಲಾತಿ ಕೇಳುವುದಿಲ್ಲ. ಹಬ್ಬ ಹುಣ್ಣಿಮೆಗಳಲ್ಲೂ ರಜೆ ಪಡೆಯದೆ ನಾವು ರಸ್ತೆಯ ಮೇಲೆ ಚೆಲ್ಲುವ ಕಸವನ್ನು ಗುಡಿಸಿ ಸ್ವಚ್ಛ ಮಾಡುವವರು, ಚರಂಡಿಯ ಒಳಗೆ ಇಳಿದು ಉಸಿರು ಗಟ್ಟಿ ಸಾಯುವವರು ಯಾವ ಸಮುದಾಯದ ಜನರೆಂದು ಎಲ್ಲರಿಗೂ ಗೊತ್ತಿದೆ. ಅರ್ಹತೆಯ ಅವಕಾಶದ ಬಗ್ಗೆ ಮಾತಾಡುವ ಮೇಲ್ವರ್ಗಗಳ ಜನ ಅವರು ಮಾಡುವ ಕೆಲಸದಲ್ಲಿ ತಮಗೂ ಮೀಸಲಾತಿ ಬೇಕೆಂದು ಕೇಳುವುದಿಲ್ಲ. ಇದು ಸ್ವಾತಂತ್ರಾ ನಂತರದ ಮೀಸಲು ವ್ಯವಸ್ಥೆ ಮಾತ್ರ ಅಲ್ಲ. ಶತಮಾನಗಳ ಕಾಲದ ಮನು ನಿರ್ಮಿತ ಮೀಸಲು ವ್ಯವಸ್ಥೆ.

ಬೆಂಗಳೂರಿನಂಥ ಮಹಾನಗರ ಸೇರಿದಂತೆ ರಾಜ್ಯದ ಎಲ್ಲಾ ದೊಡ್ಡ ನಗರಗಳು, ಪಟ್ಟಣಗಳಲ್ಲಿ ಮನೆ ಮನೆಯಿಂದ ಕಸವನ್ನು ಸಂಗ್ರಹಿಸುವ ಪೌರ ಕಾರ್ಮಿಕರು ಇಂದಿಗೂ ಗುತ್ತಿಗೆ ಪದ್ಧತಿಯಲ್ಲಿ ದುಡಿಯುತ್ತಾರೆ. ಸಕಾಲದಲ್ಲಿ ಸಂಬಳವೂ ಪಾವತಿಯಾಗುವುದಿಲ್ಲ. ನಾವೆಲ್ಲ ಎದ್ದು ಕಣ್ಣುಜ್ಜುವ ಮೊದಲೇ ಅಂದರೆ ಬೆಳಗಿನ ಜಾವ 6 ಗಂಟೆಗೆ ಬೀದಿಗೆ ಬಂದು ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡುವ ಇವರಿಗೆ ಸಿಗುವುದು ತಿಂಗಳಿಗೆ ರೂ. 12,500 ಮಾತ್ರ. ಇದು ಬೆಂಗಳೂರು ಮಹಾನಗರ ಪಾಲಿಕೆ ನೀಡುವ ಸಂಬಳ. ಉಳಿದ ನಗರಗಳ ಪರಿಸ್ಥಿತಿ ಗೊತ್ತಿಲ್ಲ.

ಪೌರಕಾರ್ಮಿಕರಲ್ಲಿ ಮಲದ ಗುಂಡಿಗೆ (ಮ್ಯಾನ್ ಹೋಲ್) ಇಳಿದು ಕೆಲಸ ಮಾಡುವವರ ಪರಿಸ್ಥಿತಿ ಇನ್ನೂ ದಾರುಣವಾದದ್ದು. ಯುದ್ಧ ಭೂಮಿಗೆ ಹೋದ ಸೈನಿಕರಿಗೆ ವಾಪಸ್ ಬರುವುದು ಹೇಗೆ ಗ್ಯಾರಂಟಿ ಇರುವುದಿಲ್ಲವೋ ಅದೇ ರೀತಿ ಚರಂಡಿ ಸ್ವಚ್ಛ ಮಾಡಲು ಮ್ಯಾನ್ ಹೋಲ್ ಒಳಗೆ ಇಳಿಯುವವರು ಕೂಡ ಸಾವನ್ನು ಬೆನ್ನಿಗೆ ಕಟ್ಟಿಕೊಂಡೇ ಒಳಗಿಳಿದಿರುತ್ತಾರೆ. ಒಳಗೆ ಕಾರ್ಗತ್ತಲು. ಮೊಣಕಾಲುದ್ದ ನೀರಿನಲ್ಲಿ ಜಾರಿ ಬಿದ್ದು ಪ್ರಜ್ಞೆ ಕಳೆದುಕೊಳ್ಳಬಹುದು ಅಥವಾ ಕೊಚ್ಚಿ ಹೋಗಬಹುದು. ಜೊತೆಗೆ ಕೊಳೆತ ವಸ್ತುಗಳಿಂದ ಉತ್ಪತ್ತಿಯಾಗುವ ಮಿಥೇನ್, ನೈಟ್ರೋಜನ್, ಅಮೋನಿಯ, ಹೈಡ್ರೋಜನ್ ಸೆಲ್ಫೆಟ್ ಗಳಂಥ ವಿಷಾನಿಲಗಳಿಂದ ಉಸಿರು ನಿಂತು ಹೆಣವಾಗಿ ಬೀಳಬಹುದು.

ಭಾರತಾದ್ಯಂತ 15 ಲಕ್ಷ ಮಂದಿ ಪೌರ ಕಾರ್ಮಿಕರಿದ್ದಾರೆ. ಇವರಲ್ಲಿ ಬಹುತೇಕ ಜನ ದಲಿತ ಮಹಾರ ಸಮುದಾಯಕ್ಕೆ ಸೇರಿದವರು. ನಿತ್ಯವೂ ಬೀದಿಗಳನ್ನು, ಗಟಾರುಗಳನ್ನು ಬರಿಗೈಯಿಂದ ಸ್ವಚ್ಛ ಮಾಡುವ ( ಬಹುತೇಕ ಕಡೆ ಇವರಿಗೆ ಕೈ ಕವಚ,ಮುಖ ಕವಚ,ಸ್ಯಾನಿಟೈಸರ್ ಸೌಕರ್ಯಗಳು ಕೂಡ ಇಲ್ಲ) ಇವರು ರಸ್ತೆಗಳಲ್ಲಿ ಕೊಳೆತ ಬೀದಿ ನಾಯಿಗಳು, ರಕ್ತಸಿಕ್ತ ನ್ಯಾಪ್‌ಕಿನ್‌ಗಳನ್ನು, ಗಾಜಿನ ಚೂರುಗಳನ್ನು, ಚುಚ್ಚುಮದ್ದಿನ ಸೂಜಿಗಳನ್ನು ಬರಿಗೈಯಿಂದ ಬಳಿಯಬೇಕಾಗುತ್ತದೆ.

ಇದೇ ಸಂಬಳವನ್ನು ಮಂತ್ರಿಗಳು ಮತ್ತು ಅಧಿಕಾರಿಗಳಿಗೆ ಕೊಟ್ಟು ಮಾರುಕಟ್ಟೆಗೆ ಕಳಿಸಿ ಜೀವನಾವಶ್ಯಕ ಪದಾರ್ಥಗಳನ್ನು ಖರೀದಿಸಿ ಜೀವನ ಮಾಡಲು ಹೇಳಿದರೆ ಅವರಿಗೆ ಗೊತ್ತಾಗುತ್ತದೆ.

2019ರಲ್ಲಿ ಗದಗದಲ್ಲಿ ನಡೆದ ಮೇ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಂದಿದ್ದ ವಿಲ್ಸನ್ ಬೆಜವಾಡ ‘ಮ್ಯಾನ್‌ಹೋಲ್‌ನಲ್ಲಿ ಉಸಿರುಗಟ್ಟಿ ಸಾಯುವ ಸ್ವಚ್ಛತಾ ಕಾರ್ಮಿಕರನ್ನು ಗಡಿಯಲ್ಲಿ ಶತ್ರುಗಳೊಂದಿಗೆ ಹೋರಾಡಿ ಮಡಿಯುವ ಹುತಾತ್ಮ ಯೋಧರಂತೆ ಪರಿಗಣಿಸಿ ಗೌರವಿಸಬೇಕು’ ಎಂದು ಹೇಳಿದ್ದರು.

ಹೀಗೆ ನಗರವನ್ನು ನಿತ್ಯವೂ ಸ್ವಚ್ಛವಾಗಿಡುವ ಪೌರಕಾರ್ಮಿಕರನ್ನು ದೇಶದ ಮುಂಚೂಣಿ ಕಾರ್ಮಿಕ ಸಂಘಟನೆಗಳು ನಿರ್ಲಕ್ಷಿಸಿವೆ.ಇವರದೇ ಆದ ಬಲಿಷ್ಠ ಸಂಘಟನೆ ಇಲ್ಲ. ಐವತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಎಐಟಿಯುಸಿ ನಾಯಕ ಡಿ.ಎಸ್.ಶ್ರೀ ರಾಮುಲು ಅವರು ಆ ಕಾಲದಲ್ಲಿ ಪೌರ ಕಾರ್ಮಿಕರನ್ನು ಸಂಘಟಿಸಿ ಹೋರಾಡುವುದನ್ನು ಕಣ್ಣಾರೆ ಕಂಡಿದ್ದೇನೆ. ಹುರಿ ಮೀಸೆಯ ಎತ್ತರದ ಆಳು ರಾಮುಲು ಅವರು ಆಗ ಸರಕಾರಕ್ಕೆ ಚುರುಕು ಮುಟ್ಟಿಸುತ್ತಿದ್ದರು.ಈಗ ಇಂಥ ಅಸಂಘಟಿತ ಕಾರ್ಮಿಕರಿಗಾಗಿ ನಮ್ಮ ಕರ್ನಾಟಕದವರೇ ಆದ ವಿಲ್ಸನ್ ಬೆಜವಾಡ ದುಡಿಯುತ್ತಿದ್ದಾರೆ.

ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತರಾದ ವಿಲ್ಸನ್ ರಾಷ್ಟ್ರಮಟ್ಟದಲ್ಲಿ ಪೌರ ಕಾರ್ಮಿಕರು ಅದರಲ್ಲೂ ವಿಶೇಷವಾಗಿ ಮ್ಯಾನ್ ಹೋಲ್‌ಗಳಿಗೆ ಇಳಿದು ಪ್ರಾಣ ಕಳೆದುಕೊಳ್ಳುವ ನೊಂದ ಜೀವಿಗಳ ಪರವಾಗಿ ಶ್ರಮಿಸುತ್ತಿದ್ದಾರೆ.

ವಾಸ್ತವವಾಗಿ ದೇಶದಲ್ಲಿ ಶೇ.20 ರಷ್ಟು ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಮ್ಯಾನ್ ಹೋಲ್ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಯಂತ್ರಗಳಿವೆ. ಉಳಿದೆಡೆ ಮನುಷ್ಯರೇ ಮಲದ ಗುಂಡಿಗೆ ಇಳಿಯುತ್ತಾರೆ. ಯೋಗಿ ಆದಿತ್ಯನಾಥರ ಉತ್ತರ ಪ್ರದೇಶ ಮತ್ತು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಗುಜರಾತ್ ಸೇರಿದಂತೆ ಬಹುತೇಕ ಕಡೆ ತಲೆಯ ಮೇಲೆ ಮಲ ಹೊರುವ ಪದ್ಧತಿ ಇನ್ನೂ ಇದೆ.

ಬೆಜವಾಡ ಹೇಳಿದ್ದು ನಿಜ, ದೇಶಕ್ಕಾಗಿ ಪ್ರಾಣ ಕೊಡುವ ಯೋಧರಂತೆ ನಾಗರಿಕರ ಆರೋಗ್ಯ ರಕ್ಷಣೆಗಾಗಿ ಮಲದ ಗುಂಡಿಗೆ ನಿತ್ಯವೂ ಇಳಿದು ಪ್ರಾಣ ಕೊಡುವ ಪೌರ ಕಾರ್ಮಿಕರ ಸೇವೆಯನ್ನು ಸಮಾಜ ಮತ್ತು ಸರಕಾರ ಗಳು ಗೌರವಿಸಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಮಿಕರು ಗುಂಡಿಗೆ ಇಳಿಯದೇ ಅತ್ಯಾಧುನಿಕ ಯಂತ್ರಗಳ ಮೂಲಕ ಸ್ವಚ್ಛತಾ ಕಾರ್ಯ ನಡೆಯುವಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಕರ್ನಾಟಕದಲ್ಲಿ ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಸಮಾಜ ಕಲ್ಯಾಣ ಮಂತ್ರಿಯಾಗಿದ್ದ ಬಿ. ಬಸವಲಿಂಗಪ್ಪನವರು ದೇಶದಲ್ಲೇ ಮೊತ್ತಮೊದಲ ಬಾರಿಗೆ ಮಲ ಹೊರುವ ಅಮಾನವೀಯ ಪದ್ಧತಿ ನಿರ್ಬಂಧಿಸಿದರು. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಹೊಣೆಯನ್ನು ಆಯಾ ಸ್ಥಳೀಯ ಸಂಸ್ಥೆಗಳಿಗೆ ವಹಿಸಿದರು. ಆದರೂ ಕಣ್ತಪ್ಪಿನಿಂದ ಅಸು ನೀಗುವ ಪೌರ ಕಾರ್ಮಿಕರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಹಾಗೂ ಮನೆ ಮತ್ತು ಪಿಂಚಣಿ ನೀಡುವ ಕಾನೂನನ್ನು ಮಾಡಿದ್ದಾರೆ. ಹೀಗಾಗಿ ಕರ್ನಾಟಕ ಇಡೀ ಭಾರತಕ್ಕೆ ಮಾದರಿಯಾಗಿದೆ. ಗುಜರಾತ್ ಮತ್ತು ಉತ್ತರ ಪ್ರದೇಶ ಮಾದರಿಯ ಚಮಚಾಗಿರಿ ಮಾತಾಡುವ ಅವಿವೇಕಿಗಳು ಇನ್ನಾದರೂ ಇತ್ತ ಗಮನಿಸಬೇಕು.

ಚರಂಡಿಗಿಳಿದು ಸ್ವಚ್ಛ ಮಾಡುವ ಹಾಗೂ ತಲೆಯ ಮೇಲೆ ಮಲ ಹೊರುವ ಹೇಯ ಅಮಾನವೀಯ ಪದ್ಧತಿ ಜಗತ್ತಿನ ಬಹುತೇಕ ದೇಶಗಳಲ್ಲಿ ಇಲ್ಲ.ಚೀನಾದಲ್ಲಿ ಕಮ್ಯುನಿಸ್ಟ್ ನಾಯಕ ಮಾವೊ ಶತಮಾನದ ಹಿಂದೆಯೇ ತಲೆ ಮೇಲೆ ಮಲ ಹೊರುವ ಹಾಗೂ ಚರಂಡಿಗಿಳಿಯುವುದನ್ನು ನಿರ್ಬಂಧಿಸಿದ್ದರು. ಜರ್ಮನಿ, ಬ್ರಿಟನ್, ಅಮೆರಿಕ ಸೇರಿದಂತೆ ಬಹುತೇಕ ಮುಂದುವರಿದ ದೇಶಗಳಲ್ಲಿ ಆಧುನಿಕ ಯಂತ್ರಗಳಿಂದ ಈ ಸ್ವಚ್ಛತಾ ಕೆಲಸವನ್ನು ಮಾಡಿಸ ಲಾಗುತ್ತದೆ. ಭಾರತದಲ್ಲಿ ಶ್ರೇಣೀಕೃತ ಜಾತಿ ಪದ್ಧತಿ ಮಲ ಹೊರುವುದನ್ನು ಮತ್ತು ಮಲದ ಗುಂಡಿಗೆ ಇಳಿಯುವುದನ್ನು ನಿರ್ದಿಷ್ಟ ಜಾತಿಯ ವಂಶ ಪಾರಂಪರ್ಯ ಉದ್ಯೋಗ ವನ್ನಾಗಿ ಮಾಡಲಾಗಿದೆ. ಮನುಷ್ಯರ ಮಲವನ್ನು ಮನುಷ್ಯರು ತಲೆ ಮೇಲೆ ಹೊರುವ ಈ ಅಮಾನವೀಯ ಪದ್ಧತಿಗಾಗಿ ನಾವು ಜಗತ್ತಿನ ಎದುರು ತಲೆ ತಗ್ಗಿಸಬೇಕಾಗಿದೆ.

ಚರಂಡಿಗಿಳಿಯುವ ಕೆಲಸವನ್ನು ಮತ್ತು ಮಲ ಹೊರುವ ಕೆಲಸವನ್ನು ಒಂದೇ ಸಮುದಾಯದವರು ಏಕೆ ಮಾಡಬೇಕು? ಇದಕ್ಕೆ ಜಾತಿಪದ್ಧತಿ ಕಾರಣ. ಹಿಂದೂಗಳೆಲ್ಲ ಒಂದೇ ಎಂದು ಹೇಳುವುದು ಸುಲಭ. ಆದರೆ ಕೆಲ ಹಿಂದೂಗಳಿಗೆ ಮಂದಿರಗಳಲ್ಲಿ ಪೂಜೆ ಮಾಡುವ, ವ್ಯಾಪಾರ ಮಾಡುವ ಕೆಲಸ ನಿಗದಿಪಡಿಸಲಾಗಿದೆ. ಹಲವು ಹಿಂದೂಗಳಿಗೆ ಅಂದರೆ ದಲಿತ ಸಮುದಾಯದ ಜನರಿಗೆ ಚರಂಡಿಗಿಳಿಯುವ ಕೆಲಸವನ್ನು ನಿಗದಿಪಡಿಸಲಾಗಿದೆ. ಸ್ವಾತಂತ್ರ ಬಂದು ಏಳು ದಶಕಗಳು ಗತಿಸಿವೆ. ಸರ್ವರಿಗೂ ಸಮಾನಾವಕಾಶ ಇರುವ ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ. ಆದರೂ ನಮ್ಮ ಸಹ ಬಂಧುಗಳು ಚರಂಡಿಗಿಳಿದು ಉಸಿರು ಗಟ್ಟಿ ಸಾಯುತ್ತಿದ್ದಾರೆ. ಚರಂಡಿಯಿಂದ ಪಾರಾಗಿ ಬಂದರೂ ಬ್ಯಾಕ್ಟೀರಿಯಾಗಳ ಪರಿಣಾಮವಾಗಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಇದಕ್ಕೆ ಕೊನೆ ಯಾವಾಗ?

ಇನ್ನು ಮುಂದಾದರೂ ಪೌರ ಕಾರ್ಮಿಕರನ್ನು ನಾಗರಿಕ ಸಮಾಜ ಮತ್ತು ಸರಕಾರ ಗೌರವದಿಂದ ಕಾಣಬೇಕಾಗಿದೆ.ಈಗ ಬರುವ ಸಂಬಳದಲ್ಲಿ ಜೀವನ ನಿರ್ವಹಣೆ ಮತ್ತು ಮಕ್ಕಳ ಉತ್ತಮ ವಿದ್ಯಾಭ್ಯಾಸದ ಖರ್ಚು ವೆಚ್ಚಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರ ಮಕ್ಕಳ ಶಿಕ್ಷಣ ಅರ್ಧಕ್ಕೆ ನಿಂತು ಹೋದ ಉದಾಹರಣೆಗಳು ಸಾಕಷ್ಟಿವೆ. ಕಾರಣ ಪೌರ ಕಾರ್ಮಿಕರ ಸಂಬಳ, ಭತ್ತೆಗಳನ್ನು ಜಾಸ್ತಿ ಮಾಡುವುದಲ್ಲದೆ ಅವರ ಕುಟುಂಬಕ್ಕೆ ಉಚಿತ ವೈದ್ಯಕೀಯ ಸೌಕರ್ಯ ಮತ್ತು ಅವರ ಮಕ್ಕಳಿಗೆ ಉಚಿತ ಶೈಕ್ಷಣಿಕ ಸೌಲಭ್ಯಗಳನ್ನು ಸರಕಾರ ಒದಗಿಸಬೇಕಾಗಿದೆ. ಜೊತೆಗೆ ಅವರ ಹುದ್ದೆಯನ್ನು ‘ಸಾರ್ವಜನಿಕ ಆರೋಗ್ಯ ರಕ್ಷಕರು’ ಎಂದು ಮರು ನಾಮಕರಣ ಮಾಡುವುದು ಅಗತ್ಯವಾಗಿದೆ.

ಶ್ರೇಣೀಕೃತ ಜಾತಿ ಪದ್ಧತಿಯ ಸಂಪೂರ್ಣ ನಿರ್ಮೂಲನೆಯಿಂದ ಮಾತ್ರ ಅದು ಸಾಧ್ಯ. ಮನುವಾದ ಮತ್ತೆ ತಲೆ ಎತ್ತಿದ ಸಮಾಜದ ಬಹುತೇಕ ಮಂದಿ ಮತಾಂತರದ ಮತ್ತೇರಿಸಿಕೊಂಡ ಈ ದಿನಗಳಲ್ಲಿ ಜಾತಿ ರಹಿತ ಸಮಾಜದ ಕನಸು ನನಸಾಗುವುದು ಸುಲಭವಲ್ಲ. ಹಾಗೆಂದು ಕೈಚೆಲ್ಲಿ ಕುಳಿತು ಕೊಳ್ಳಬೇಕಾಗಿಲ್ಲ. ಈಗಿರುವ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಮಾನವೀಯ ಸೌಕರ್ಯಗಳಿಗಾಗಿ ಹೋರಾಡುವ ಜೊತೆಗೆ ಹೊಸ ಆರೋಗ್ಯಕರ ಸಮಾಜ ನಿರ್ಮಾಣದ ಕನಸು ನನಸಾಗಿಸಲು ಹೊಸ ಪೀಳಿಗೆಯನ್ನು ಸಜ್ಜುಗೊಳಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)