varthabharthi


ನಿಮ್ಮ ಅಂಕಣ

ಹೆಂಡ, ಹಣ ಹಂಚುವುದಿಲ್ಲವೆಂದು ನೇತಾರರು ಪ್ರಚಾರ ಮಾಡಲಿ

ವಾರ್ತಾ ಭಾರತಿ : 29 Sep, 2022
-ಕೆ.ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,
 
ರಾಜ್ಯ ಸರಕಾರ ಸರಕಾರಿ ಕಚೇರಿಗಳಲ್ಲಿ ''ನನಗೆ ಲಂಚ ನೀಡಬೇಡಿ, ನನ್ನನ್ನು ಲಂಚಗಾರರನ್ನಾಗಿಸಬೇಡಿ'' ಎಂಬ ನಾಮಫಲಕವನ್ನು ಅಳವಡಿಸಲು ಆದೇಶಿಸಿರುವುದು ಸಿಗರೆಟ್ ಪ್ಯಾಕೇಟ್‌ಗಳ ಮೇಲೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬ ಜಾಹೀರಾತಿನಷ್ಟೇ ಪ್ರಭಾವ ಬೀರುತ್ತದೆ. ಕಚೇರಿಗಳಲ್ಲಿ ಮತ್ತು ವಿಧಾನಸೌಧದಲ್ಲಿ ಹಾಗೂ ಮಂತ್ರಿಗಳ ಮನೆಯಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸುವ ಆದೇಶವನ್ನು ಇದರೊಂದಿಗೆ ಹೊರಡಿಸಿದ್ದರೆ ಪರಿಣಾಮವನ್ನು ನಿರೀಕ್ಷಿಸಬಹುದಿತ್ತು. ಚುನಾವಣೆಗಳಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಾ, ಹಣ, ಹೆಂಡವನ್ನು ಹಂಚುತ್ತಾ ಬೆಳ್ಳಿ, ಬಂಗಾರದ ಒಡವೆಗಳನ್ನು ನೀಡುತ್ತಾ, ಜಾತಿ, ಧರ್ಮದ ಹೆಸರಿನಲ್ಲಿ ಮತಗಳನ್ನು ಕೇಳುತ್ತಾ ವ್ಯವಸ್ಥೆಯನ್ನೇ ಹಾಳು ಮಾಡಿರುವ ಎಲ್ಲ ರಾಜಕೀಯ ಪಕ್ಷದ ನಾಯಕರು ಚುನಾವಣೆಯ ಸಂದರ್ಭದಲ್ಲಿ ತಮ್ಮ ಅಭ್ಯರ್ಥಿಗಳ ಹೆಗಲಿಗೆ ಯಾವುದೇ ರೀತಿಯ ವಸ್ತುಗಳನ್ನು ಹಂಚುವುದಿಲ್ಲ, ಹಣ ನೀಡುವುದಿಲ್ಲ, ಜಾತಿ ಹೆಸರಿನಲ್ಲಿ ವೋಟು ಕೇಳುವುದಿಲ್ಲ ಎಂಬ ಫಲಕಗಳನ್ನು ಹಾಕಿಕೊಂಡು ಪ್ರತೀವರ್ಷ ಲೋಕಾಯುಕ್ತರಿಗೆ ನಾನು ನೀಡುವ ನನ್ನ ಆಸ್ತಿಯ ಪ್ರಮಾಣಪತ್ರ ನನ್ನ ಹೆಂಡತಿ, ಮಕ್ಕಳ ಮೇಲಾಣೆ ಸತ್ಯವಾದದ್ದು ಎಂದು ಫಲಕಗಳನ್ನು ಹಾಕಿಕೊಂಡು ಮತವನ್ನು ಕೇಳಿ ಜೊತೆಗೆ ಅಧಿಕಾರ, ಹಣದ ಆಸೆಗೆ ಪಕ್ಷಾಂತರ ಮಾಡಿದರೆ ನನ್ನನ್ನು ನಿಮ್ಮ ಊರಿನಿಂದ ಬಹಿಷ್ಕಾರ ಹಾಕಿ ಎಂದು ನಂಬಿದ ದೇವರ ಮುಂದೆ ಪ್ರಮಾಣವನ್ನು ಮಾಡಿ ಪ್ರಚಾರವನ್ನು ಮಾಡಿದರೆ ಎಲ್ಲವೂ ಸರಿ ಹೋಗುತ್ತದೆ. ಸರಕಾರಕ್ಕೆ ಹಣ ಕೊಡಬೇಕೆಂದು ಅಧಿಕಾರಿಗಳು ಹಣ ಸಂಗ್ರಹಿಸುತ್ತಾರೆ. ಇದಕ್ಕಾಗಿ ಅಧಿಕಾರಿಗಳು ಜನರನ್ನು ಸುಲಿಗೆ ಮಾಡುತ್ತಾರೆ ಇವೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಸಾಗಿದೆ. ಚುನಾವಣಾ ವ್ಯವಸ್ಥೆ ಶುದ್ಧವಾಗಿ ಚುನಾವಣೆಗೆ ನಿಲ್ಲುವವರು ಪ್ರಾಮಾಣಿಕರಾಗಿದ್ದರೆ ಮಾತ್ರ ಎಲ್ಲವೂ ಸರಿಹೋಗುತ್ತದೆ. ಇಲ್ಲದಿದ್ದರೆ ಹತ್ತರ ಜೊತೆಗೆ ಹನ್ನೊಂದನೇ ನಾಮಫಲಕ ಕಚೆೇರಿಯಲ್ಲಿ ನೇತಾಡುತ್ತದೆ. ಒಂದಷ್ಟು ನಾಮಫಲಕ ಬರೆಯುವವರಿಗೆ ಕೆಲಸ ಸಿಗುತ್ತದೆ ಅಷ್ಟೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)