varthabharthi


ಸಂಪಾದಕೀಯ

ಪ್ರತಿಪಕ್ಷಗಳಿಲ್ಲದ ಭಾರತ ಕಟ್ಟಲು ಹೊರಟವರು

ವಾರ್ತಾ ಭಾರತಿ : 4 Oct, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಒಕ್ಕೂಟ ಸರಕಾರದ ಸೂತ್ರವನ್ನು ಹಿಡಿದ ನಂತರ ಜನತೆಯ ಜನತಾಂತ್ರಿಕ ಹಕ್ಕುಗಳ ಮೇಲೆ ದಾಳಿ ನಡೆಸುತ್ತಲೇ ಇದೆ. ಪ್ರತಿಪಕ್ಷಗಳಿಲ್ಲದ ಏಕಪಕ್ಷದ, ಏಕ ವ್ಯಕ್ತಿಯ ಸರ್ವಾಧಿಕಾರಿ ರಾಷ್ಟ್ರ ಕಟ್ಟಲು ಹೊರಟವರು ತಮ್ಮನ್ನು ವಿರೋಧಿಸುವ ಎಲ್ಲರನ್ನೂ ದೇಶದ್ರೋಹಿಗಳು ಎಂದು ಕರೆದು ಅವರ ಧ್ವನಿಯನ್ನು ಹತ್ತಿಕ್ಕುತ್ತಾ ಬಂದಿದ್ದಾರೆ. ಸಂಸತ್ತಿನ ಒಳಗೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇರುವ ಪ್ರತಿಪಕ್ಷಗಳ ಸದಸ್ಯರ ಮಾತುಗಳನ್ನೂ ಸರಕಾರ ಸಹಿಸುತ್ತಿಲ್ಲ. ಸಂಸತ್ತಿನ ಹೊರಗೆ ಪ್ರತಿರೋಧ ಇರಲೇಬಾರದೆಂಬುದು ಅಧಿಕಾರದಲ್ಲಿರುವವರ ಹೆಬ್ಬಯಕೆಯಾಗಿದೆ.

ಹಿಂದಿನ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಮತ್ತೆ ಚುನಾಯಿತರಾಗಿ ಬರುವುದಿಲ್ಲ ಎಂದು ಸದನದಲ್ಲೇ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರು ಖರ್ಗೆ ಗೆದ್ದು ಬರಲೇ ಕೂಡದೆಂದು ತಂತ್ರ ರೂಪಿಸಿದ್ದರೆಂಬುದು ಕಾಂಗ್ರೆಸ್ ಮಾತ್ರವಲ್ಲ ಅನೇಕ ಪ್ರತಿಪಕ್ಷ ನಾಯಕರ ಅಭಿಪ್ರಾಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಬಲಿಷ್ಠ ಆಡಳಿತ ಪಕ್ಷಕ್ಕೆ ಪ್ರತಿಯಾಗಿ ಅಷ್ಟೇ ಪ್ರಬಲವಾದ ವಿರೋಧ ಪಕ್ಷವಿದ್ದರೆ ಪ್ರಜಾಪ್ರಭುತ್ವ ಆರೋಗ್ಯಶಾಲಿಯಾಗಿರುತ್ತದೆ. ಹಾಗಾಗಿಯೇ ಭಾರತದ ಮೊದಲ ಪ್ರಧಾನಿ  ಜವಾಹರಲಾಲ್ ನೆಹರೂ ಅವರು ಸೋಷಲಿಸ್ಟ್ ನಾಯಕ ರಾಮ ಮನೋಹರ ಲೋಹಿಯಾ, ಕಮ್ಯುನಿಸ್ಟ್ ನೇತಾರರಾದ  ಶ್ರೀಪಾದ ಅಮೃತ ಡಾಂಗೆ, ಎ.ಕೆ. ಗೋಪಾಲನ್, ಜನಸಂಘದ ಅಟಲ್ ಬಿಹಾರಿ ವಾಜಪೇಯಿ ಅಂತಹವರು ಸದನದಲ್ಲಿ ಇರಬೇಕೆಂದು ಬಯಸುತ್ತಿದ್ದರು. ಆದರೆ ಈಗಿನ ಪ್ರಧಾನಿ ಮಾತ್ರವಲ್ಲ ಆಡಳಿತ ಪಕ್ಷಕ್ಕೆ ಪ್ರತಿಪಕ್ಷಗಳ ಅಸ್ತಿತ್ವವೇ ಬೇಡವಾಗಿದೆ.

ಆಡಳಿತ ಪಕ್ಷದ ಅಸಹನೆಗೆ ಇತ್ತೀಚಿನ ಉದಾಹರಣೆಯೆಂದರೆ ಸಂಸತ್ತಿನ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸದಸ್ಯರು ಬರದಂತೆ ಕುತಂತ್ರ ಮಾಡಿರುವುದು. ಸಂಸದೀಯ ಸತ್ಸಂಪ್ರದಾಯಗಳ ಪ್ರಕಾರ ಸಂಸತ್ತಿನ ಮಹತ್ವದ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಪ್ರತಿಪಕ್ಷ ಸದಸ್ಯರಿಗೆ ಬಿಟ್ಟುಕೊಡಬೇಕು. ಆದರೆ ಇತ್ತೀಚಿನ ಬೆಳವಣಿಗೆ ಪ್ರಕಾರ ಸಂಸತ್ತಿನ ಗೃಹ ವ್ಯವಹಾರಗಳಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಕಳೆದುಕೊಳ್ಳಲಿದೆ. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಕುರಿತ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಳೆದುಕೊಳ್ಳಲಿದೆ. ಸದ್ಯಕ್ಕೆ ಕಾಂಗ್ರೆಸ್ ಪಕ್ಷ ಸಂಸತ್ತಿನ ಮೂರು ಸಮಿತಿಗಳ ನೇತೃತ್ವ ವಹಿಸಿದೆ. ಇವುಗಳ ಪೈಕಿ ಗೃಹ ವ್ಯವಹಾರ ಸ್ಥಾಯಿ ಸಮಿತಿಯೂ ಒಂದು. ಕಾಂಗ್ರೆಸ್‌ನ ಇನ್ನೊಬ್ಬ ಸಂಸದ ಶಶಿ ತರೂರ್ ಮಾಹಿತಿ ತಂತ್ರಜ್ಞಾನ ವಿಷಯಕ ಸಮಿತಿಯ ಸಾರಥ್ಯ ವಹಿಸಿದ್ದಾರೆ. ಜೈರಾಮ್ ರಮೇಶ್ ಪರಿಸರ ವಿಷಯಕ ಸಮಿತಿಯ ನೇತೃತ್ವ ವಹಿಸಿದ್ದಾರೆ. ಈ ಪೈಕಿ ಶಶಿ ತರೂರ್ ಅವರನ್ನು ಕೂಡ ತೆಗೆದು ಹಾಕುವ ವದಂತಿ ಹರಡಿದ್ದು ಸಂಸತ್ತಿನ ಉಭಯ ಸದನಗಳಲ್ಲಿ ಕಾಂಗ್ರೆಸ್ ಸದಸ್ಯರು ಇದನ್ನು ಆಕ್ಷೇಪಿಸಿದ್ದಾರೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಖ್ಯಾಬಲ ೩೪ರಿಂದ ೩೧ಕ್ಕೆ ಕುಸಿದಿರುವುದರಿಂದ ಆ ಪಕ್ಷಕ್ಕೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ನೀಡಲಾಗುವುದಿಲ್ಲ ಎಂದು ಸರಕಾರ ಹೇಳುತ್ತಿದೆ. ಸರಕಾರದ ಈ ವಾದವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಸಂಸತ್ತು ಅಂದರೆ ಬರೀ ಸಂಖ್ಯೆ ಮಾತ್ರ ಮುಖ್ಯವಾಗುವುದಿಲ್ಲ. ಈಗ ವಿರೋಧ ಪಕ್ಷಗಳ ಸಂಖ್ಯಾ ಬಲ ಕಡಿಮೆ ಇರಬಹುದು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವ ಹೊಣೆಗಾರಿಕೆ ಆಡಳಿತ ಪಕ್ಷದ ಮೇಲಿದೆ. ಭಾರತದ ಮಾತ್ರವಲ್ಲ ಜಗತ್ತಿನ ಸಂಸದೀಯ ಪ್ರಜಾಪ್ರಭುತ್ವದ ಸತ್ಸಂಪ್ರದಾಯಗಳನ್ನು ಗೌರವಿಸುವುದು ಅಧಿಕಾರದಲ್ಲಿ ಇರುವವರ ನೈತಿಕ ಹೊಣೆಗಾರಿಕೆಯಾಗಿದೆ.

ಆದರೆ ವಿಷಾದದ ಸಂಗತಿಯೆಂದರೆ ಈಗಿನ ಒಕ್ಕೂಟ ಸರಕಾರ ಸಂಸತ್ತಿನ ಒಳಗೆ ಹಾಗೂ ಹೊರಗೆ ವಿರೋಧ ಪಕ್ಷಗಳನ್ನು ರಾಜಕೀಯ ಎದುರಾಳಿಗಳಂತೆ ಕಾಣದೆ, ಕಡು ಶತ್ರುಗಳಂತೆ ಕಾಣುತ್ತಿದೆ. ಇದರಿಂದ ಆಡಳಿತ ಪಕ್ಷಕ್ಕೆ ಮಾತ್ರವಲ್ಲ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬರಲಿರುವ ದಿನಗಳಲ್ಲಿ ಭಾರೀ ಧಕ್ಕೆ ಉಂಟಾಗಲಿದೆ. ಇದರ ಅರಿವು ಸರಕಾರಕ್ಕೆ ಇರಬೇಕು.

ಸಂಸತ್ತಿನ ಮುಂದೆ ಬರಲಿರುವ ಯಾವುದೇ ವಿಧೇಯಕಗಳು ಮೊದಲು ಸಂಸತ್ತಿನ ಸ್ಥಾಯಿ ಸಮಿತಿಗಳಲ್ಲಿ ಪರಾಮರ್ಶೆಗೊಳಪಡಬೇಕಾಗುತ್ತದೆ. ಹೀಗೆ ಪರಾಮರ್ಶೆಗೊಳಪಡುವಾಗ ಸ್ಥಾಯಿ ಸಮಿತಿಗಳ ಪ್ರತಿಪಕ್ಷಗಳ ಪರಿಣಿತ ಸದಸ್ಯರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಹಾಗಾಗಿ ಇಂತಹ ಮಹತ್ವದ ಸಮಿತಿ ಗಳಲ್ಲಿ ಪ್ರತಿಪಕ್ಷಗಳ ಸದಸ್ಯರು ಇರಲೇ ಬೇಕಾಗುತ್ತದೆ.

ಭಾರತದ ಸಂಸದೀಯ ಪರಂಪರೆಯಲ್ಲಿ ಹಿಂದಿನ ಸರಕಾರಗಳು ಪ್ರತಿಪಕ್ಷಗಳ ಸದಸ್ಯರನ್ನು ಹೊರಗಿಟ್ಟು ಸ್ಥಾಯಿ ಸಮಿತಿಗಳನ್ನು ರಚಿಸಿದ ಒಂದೇ ಒಂದು ಉದಾಹರಣೆ ಇಲ್ಲ. ಸ್ಥಾಯಿ ಸಮಿತಿಗಳಲ್ಲಿ ಯಾವುದೇ ಮಸೂದೆಯ ಬಗ್ಗೆ ಸುದೀರ್ಘವಾದ ಚರ್ಚೆ ನಡೆದು ಸೂಕ್ತ ತಿದ್ದುಪಡಿಗಳನ್ನು ಮಾಡಿ ಅಂತಿಮವಾಗಿ ಸಂಸತ್ತಿನ ಮುಂದೆ ತಂದರೆ ಉಪಯುಕ್ತವಾಗುತ್ತದೆ. ಇದನ್ನು ಅಧಿಕಾರದಲ್ಲಿ ಇರುವವರು ಅರ್ಥ ಮಾಡಿಕೊಳ್ಳಬೇಕು.

ಇಂತಹ ಪರಂಪರೆ ಇರುವ ಭಾರತದ ಸಂಸತ್ತಿನಲ್ಲಿ ಈಗ ಪ್ರತಿಪಕ್ಷಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಇಲ್ಲ. ಈಗಿರುವ ಅಲ್ಪ ಪ್ರಾತಿನಿಧ್ಯವನ್ನು ನಿರಾಕರಿಸುವುದು ಆಡಳಿತ ಪಕ್ಷಕ್ಕೆ ಶೋಭೆ ತರುವುದಿಲ್ಲ. ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಪ್ರತಿಪಕ್ಷಗಳಿಂದ ಕಿತ್ತು ಕೊಂಡು ಮಿತ್ರ ಪಕ್ಷಗಳಿಗೆ ನೀಡುವ ಆಡಳಿತ ಪಕ್ಷದ ಸಂಕುಚಿತ ವರ್ತನೆ ಸರಿಯಲ್ಲ. ಸರಕಾರ ಈ ಲೋಪವನ್ನು ಸರಿಪಡಿಸಿಕೊಳ್ಳಲಿ.ಸಂಸತ್ತಿನ ಸ್ಥಾಯಿ ಸಮಿತಿಯಿಂದ ಪ್ರತಿಪಕ್ಷಗಳನ್ನು ಹೊರದಬ್ಬುವ ನಿರ್ಧಾರ ಕೈ ಬಿಡಲಿ.

ಭಾರತದ ನೂರ ಮೂವತ್ತೈದು ಕೋಟಿ ಜನತೆಯ ಬದುಕು, ಭವಿಷ್ಯಗಳಿಗೆ ಸಂಬಂಧಿಸಿದ ಶಾಸನಗಳು ಸಂಸತ್ತಿನಲ್ಲಿ ಸಾಕಷ್ಟು ಪರಾಮರ್ಶೆ ನಡೆದು  ಅಂಗೀಕಾರ ಪಡೆಯಬೇಕು. ಯಾವುದೇ ಪಕ್ಷದ ಅಧಿಕಾರ ಶಾಶ್ವತವಲ್ಲ. ಆದರೆ ಭಾರತ ನಿರಂತರವಾಗಿ ಇರುತ್ತದೆ. ಅದರ ಹಿತದೃಷ್ಟಿಯಿಂದ ಶಾಸನಗಳ ಅಂಗೀಕಾರಕ್ಕೆ ಮುನ್ನ ಸ್ಥಾಯಿ ಸಮಿತಿಗಳಲ್ಲಿ ಸಾಕಷ್ಟು ವಿಮರ್ಶೆಗೆ ಒಳಪಡಬೇಕಾಗಿದೆ.

ಇಂತಹ ಪರಾಮರ್ಶೆ ನಡೆಯಬೇಕಾದರೆ ಸಂಸತ್ತಿನ ಸ್ಥಾಯಿ ಸಮಿತಿಗಳಲ್ಲಿ ಪ್ರತಿಪಕ್ಷಗಳ ಪರಿಣಿತ ಸದಸ್ಯರು ಇರಬೇಕು. ಬಿಜೆಪಿ ಸರಕಾರ ಸಣ್ಣತನದ ರಾಜಕೀಯ ಬಿಟ್ಟು ಸಂಸದೀಯ ಸತ್ಸಂಪ್ರದಾಯಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)