varthabharthi


ಸಂಪಾದಕೀಯ

ಆಹಾರದ ಹೆಸರಲ್ಲಿ ಜನಾಂಗೀಯ ದ್ವೇಷ

ವಾರ್ತಾ ಭಾರತಿ : 6 Oct, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಕಾರ್ಯಕ್ರಮವೊಂದರಲ್ಲಿ ‘ಮಾಂಸಾಹಾರ’ದ ಕುರಿತಂತೆ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೊಳಗಾಗಿದೆ. ಮಾಂಸಾಹಾರವನ್ನು ‘ಕೆಟ್ಟ ಆಹಾರ’ ಎಂದು ಕರೆದಿರುವ ಮೋಹನ್ ಭಾಗವತ್, ‘‘ಕೆಟ್ಟ ಆಹಾರವನ್ನು ತಿಂದರೆ ಅದು ನಿಮ್ಮನ್ನು ಕೆಟ್ಟ ದಾರಿಯಲ್ಲಿ ಮುನ್ನಡೆಸುತ್ತದೆ. ಜೀವಿಗಳನ್ನು ಕೊಂದು ತಿನ್ನುವುದು ಒಳ್ಳೆಯ ಪದ್ಧತಿಯಲ್ಲ. ತಾಮಸ ಆಹಾರ ನಮ್ಮಲ್ಲಿರುವ ತಾಮಸ ಗುಣಗಳನ್ನು ಉದ್ದೀಪಿಸುತ್ತದೆ’’ ಎಂದಿದ್ದಾರೆ. ಜಗತ್ತು ಹಸಿವಿನ ಬಗ್ಗೆ, ಅಪೌಷ್ಟಿಕತೆಯ ಬಗ್ಗೆ, ಆಹಾರದ ಕೊರತೆಗಳ ಬಗ್ಗೆ ಚರ್ಚಿಸುತ್ತಿರುವಾಗ ಮೋಹನ್ ಭಾಗವತ್ ಅವರು ಈ ದೇಶದ ಬಹುಸಂಖ್ಯಾತರು ಸೇವಿಸುವ ಆಹಾರವನ್ನು ‘ಕೆಟ್ಟ ಆಹಾರ’ ಎಂದು ಕರೆದಿರುವುದು ಮಾಂಸಾಹಾರಿಗಳಲ್ಲಿ ಆಕ್ರೋಶ, ಮುಜುಗರವನ್ನು ಸೃಷ್ಟಿಸಿದೆ. ಪರೋಕ್ಷವಾಗಿ ಭಾಗವತ್ ಅವರು, ಈ ದೇಶದ ಎಲ್ಲ ಕೆಡುಕುಗಳಿಗೂ ಮಾಂಸಾಹಾರಿಗಳನ್ನೇ ಹೊಣೆ ಮಾಡಿದ್ದಾರೆ. ಜೊತೆಗೆ ಸಸ್ಯಾಹಾರಿಗಳಿಗೆ ಎಲ್ಲ ಕೆಡುಕುಗಳಿಂದ ಕ್ಲೀನ್‌ಚಿಟ್ ನೀಡಿದ್ದಾರೆ. ಆಹಾರದ ಹೆಸರಿನಲ್ಲಿ ಯಾರನ್ನೇ ದೂಷಿಸುವುದು ಪರೋಕ್ಷವಾಗಿ ಜನಾಂಗೀಯ ನಿಂದನೆಯ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನು ಆರೆಸ್ಸೆಸ್ ಮತ್ತು ಬಿಜೆಪಿಯೊಳಗಿರುವ ಮಾಂಸಾಹಾರಿಗಳೇ ಭಾಗವತ್ ಅವರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ.

ಮಾಂಸಾಹಾರ ನಮ್ಮಳಗಿನ ದುಷ್ಟತನ, ಕ್ರೌರ್ಯಗಳನ್ನು, ಕೆಡುಕುಗಳನ್ನು ಹೆಚ್ಚಿಸುತ್ತದೆ ಎನ್ನುವ ಮಾತಿಗಾದರೂ ವೈಜ್ಞಾನಿಕ ಹಿನ್ನೆಲೆಯಿದೆಯೇ? ಎಂದರೆ ಅದೂ ಇಲ್ಲ. ಭಾರತದ ಇತಿಹಾಸದ ಪುಟಗಳನ್ನು ಬಿಡಿಸಿದರೆ, ಈ ದೇಶದಲ್ಲಿ ಅತಿ ಹೆಚ್ಚು ಜಾತಿ ದೌರ್ಜನ್ಯಗಳನ್ನು ನಡೆಸಿದವರು ಸಸ್ಯಾಹಾರಿಗಳು ಎನ್ನುವ ವಿವರಗಳು ದೊರಕುತ್ತವೆ ಮತ್ತು ಅವರು ದೌರ್ಜನ್ಯಗಳನ್ನು ಎಸಗಿರುವುದೆಲ್ಲ ಮಾಂಸಾಹಾರಿಗಳಾಗಿರುವ ಶೂದ್ರ ಮತ್ತು ದಲಿತ ಜನಸಮೂಹದ ಮೇಲೆ. ಕೇರಳದಲ್ಲಿ ನಂಬೂದಿರಿಗಳು ಜಾತಿಯ ಹೆಸರಿನಲ್ಲಿ ಪ್ರದರ್ಶಿಸಿದ ಕ್ರೌರ್ಯ, ಹಿಂಸೆಗಳಿಗೆ ಸ್ವಾಮಿ ವಿವೇಕಾನಂದರೇ ಬೆಚ್ಚಿ ಬಿದ್ದು ಇಡೀ ರಾಜ್ಯವನ್ನು ‘ಹುಚ್ಚಾಸ್ಪತ್ರೆ’ ಎಂದು ಕರೆದಿದ್ದರು.

ಸಸ್ಯಾಹಾರ ನಮ್ಮಲ್ಲಿ ವಿನಯ, ಸಜ್ಜನಿಕೆ, ಒಳಿತುಗಳನ್ನು ಬಿತ್ತುತ್ತವೆ ಎಂದಾದರೆ, ಸಸ್ಯಾಹಾರಿಗಳಿಂದ ಈ ದೇಶದಲ್ಲಿ ಕೆಳಜಾತಿಗಳ ಮೇಲೆ ಯಾಕೆ ದೌರ್ಜನ್ಯಗಳು ನಡೆಯುತ್ತಾ ಬಂದವು? ನಿಜಕ್ಕೂ ಮಾಂಸಾಹಾರ ಕ್ರೌರ್ಯವನ್ನು, ಹಿಂಸೆಯನ್ನು ಪ್ರಚೋದಿಸುತ್ತದೆ ಎಂದಾದರೆ, ಶತಶತಮಾನಗಳಿಂದ ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಾ ಬಂದಿದ್ದರೂ ಅದರ ವಿರುದ್ಧ ತುಟಿ ಬಿಚ್ಚದೆ ಯಾಕೆ ದಲಿತರು ಮತ್ತು ಶೂದ್ರರು ಸಹಿಸುತ್ತಾ ಬಂದರು? ಯಾಕೆ ಅವರು ಪ್ರತಿ ಹಿಂಸೆಯ ಮೂಲಕ ಪ್ರತಿಭಟನೆ ವ್ಯಕ್ತಪಡಿಸಲಿಲ್ಲ? ಸಸ್ಯಾಹಾರ ಸಾತ್ವಿಕತೆಯನ್ನು ಬಿತ್ತುತ್ತದೆ ಎಂದಾದರೆ, ಸಸ್ಯಾಹಾರಿಯಾಗಿದ್ದ ನಾಥೂರಾಂ ಗೋಡ್ಸೆ ಮಹಾತ್ಮಾ ಗಾಂಧೀಜಿಯನ್ನು ಯಾಕೆ ಕೊಂದ? ಈ ಎಲ್ಲ ಪ್ರಶ್ನೆಗಳಿಗೆ ಭಾಗವತ್ ಉತ್ತರಿಸಬೇಕಾಗುತ್ತದೆ. ಅಷ್ಟೇ ಯಾಕೆ, ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಕುಟುಂಬಿಕರ ಕಗ್ಗೊಲೆ ಮಾಡಿದ ಅಪರಾಧದಲ್ಲಿ ಜೈಲು ಸೇರಿದವರು ಸಸ್ಯಾಹಾರಿಗಳೇ ಆಗಿದ್ದರು. ನ್ಯಾಯಾಲಯ ಶಿಕ್ಷೆ ನೀಡಿದ್ದರೂ, ಇತ್ತೀಚೆಗೆ ಗುಜರಾತ್ ಸರಕಾರ ಅವರನ್ನು ಬಿಡುಗಡೆಗೊಳಿಸಿತು. ಭಾಗವತ್ ಹೇಳಿಕೆಯ ಹಿನ್ನೆಲೆಯಲ್ಲಿ, ‘ಅವರು ಸಸ್ಯಾಹಾರಿಗಳಾಗಿರುವ ಕಾರಣಕ್ಕಾಗಿ’ ಅವರನ್ನು ಬಿಡುಗಡೆ ಮಾಡಲಾಯಿತೆ?’ ಎಂದು ಕೇಳಬೇಕಾಗುತ್ತದೆ. ಇನ್ನು ಮುಂದೆ ಅತ್ಯಾಚಾರ, ಕೊಲೆ ಮೊದಲಾದವುಗಳನ್ನು ಎಸಗಿದಾತ ಸಸ್ಯಾಹಾರಿಯಾಗಿದ್ದರೆ ಅದು ಆತನನ್ನು ನಿರಪರಾಧಿ ಎಂದು ಘೋಷಿಸುವುದಕ್ಕೆ ಮಾನದಂಡವಾಗಬಹುದೆ? ಯಾಕೆಂದರೆ ಬಿಜೆಪಿ ಮುಖಂಡರೊಬ್ಬರು ಬಿಲ್ಕಿಸ್ ಬಾನು ಅತ್ಯಾಚಾರ ಆರೋಪಿಗಳ ಬಿಡುಗಡೆಗೆ ಸಮರ್ಥನೆಯಾಗಿ ಅವರ ಜಾತಿಯನ್ನು ಉಲ್ಲೇಖಿಸಿದ್ದರು. ಭಾಗವತ್ ಕೂಡ ಪರೋಕ್ಷವಾಗಿ ಅದನ್ನೇ ಹೇಳುತ್ತಿದ್ದಾರೆ. ಮನುಷ್ಯ ಪೂರ್ಣ ಪ್ರಮಾಣದಲ್ಲಿ ಸಸ್ಯಾಹಾರಿಯೂ ಅಲ್ಲ, ಮಾಂಸಾಹಾರಿಯೂ ಅಲ್ಲ. ಆತ ಮಿಶ್ರಾಹಾರಿ. ಮಾಂಸಾಹಾರಿಗಳೂ ಸಸ್ಯಾಹಾರವನ್ನು ಯಥೇಚ್ಛವಾಗಿ ಸೇವಿಸುತ್ತಾರೆ. ತಲೆ ತಲಾಂತರಗಳಿಂದ ಮಾಂಸಾಹಾರ ಮನುಷ್ಯನನ್ನು ಪೊರೆದುಕೊಂಡು ಬಂದಿದೆ. ಮೆದುಳು, ದೈಹಿಕ ಶಕ್ತಿಯ ಬೆಳವಣಿಗೆಯ ಹಿಂದೆ ಮಾಂಸಾಹಾರದ ಕೊಡುಗೆ ಬಹುದೊಡ್ಡದು ಎನ್ನುವುದು ಈಗಾಗಲೇ ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ.

ಅಪೌಷ್ಟಿಕತೆಯೇ ಎಲ್ಲ ರೋಗಗಳ ಮೂಲ. ಭಾರತದಲ್ಲಿ ಅಪೌಷ್ಟಿಕತೆ ಹೆಚ್ಚುವುದಕ್ಕೆ ಪರೋಕ್ಷವಾಗಿ ಸಸ್ಯಾಹಾರಿಗಳ ಆಹಾರ ರಾಜಕಾರಣದ ದೊಡ್ಡ ಕೊಡುಗೆಯಿದೆ. ಆರೆಸ್ಸೆಸ್‌ನ ನಾಯಕರು ಗೋಮಾಂಸ ಸೇವನೆಯನ್ನು ವಿರೋಧಿಸುತ್ತಿದ್ದಾರೆ ಎಂದು ದೇಶ ಭಾವಿಸಿದೆ. ಆದರೆ ಅವರು ವಿರೋಧಿಸುತ್ತಿರುವುದು ‘ಮಾಂಸಾಹಾರ’ವನ್ನು. ‘ಗೋವು’ಗಳನ್ನು ಅದಕ್ಕೆ ಒಂದು ನೆಪವಾಗಿ ಮಾತ್ರ ಬಳಸಿಕೊಂಡಿದ್ದಾರೆ. ನಿಧಾನಕ್ಕೆ ಅವರ ಗುರಿ ಗೋಮಾಂಸದಿಂದ ಇತರ ಮಾಂಸದ ಕಡೆಗೆ ತಿರುಗಲಿರುವ ಸೂಚನೆಯನ್ನು ಭಾಗವತ್ ಹೇಳಿಕೆಯಲ್ಲಿ ನಾವು ಗುರುತಿಸಬಹುದು. ಗೋಮಾಂಸಾಹಾರ ನಿಷೇಧದ ಪ್ರಯತ್ನದಿಂದಾಗಿ ದೇಶದ ಆರ್ಥಿಕತೆಗೆ ಆಗಿರುವ ಹಾನಿಯನ್ನು, ಹೈನೋದ್ಯಮಗಳಿಗೆ ಆಗುತ್ತಿರುವ ನಷ್ಟವನ್ನು ನಾವು ನೋಡುತ್ತಿದ್ದೇವೆ. ರೈತರು ತಮ್ಮ ಜಾನುವಾರುಗಳನ್ನು ಮುಕ್ತವಾಗಿ ಮಾರುವುದಕ್ಕೆ ಸಾಧ್ಯವಿಲ್ಲದ ಸ್ಥಿತಿಗೆ ಬಂದು ನಿಂತಿದ್ದಾರೆ. ರೈತರ ಆರ್ಥಿಕ ಸಂಪನ್ಮೂಲವಾಗಿರುವ ಅನುಪಯುಕ್ತ ಗೋವುಗಳನ್ನು ಮಾಂಸಾಹಾರಿಗಳೂ ಅವಲಂಬಿಸುತ್ತಾ ಬಂದಿದ್ದರು. ಇದರಿಂದ ಹೈನೋದ್ಯಮಕ್ಕೂ ಲಾಭವಾಗುತ್ತಿತ್ತು. ಈ ದೇಶದ ಅಪೌಷ್ಟಿಕತೆಯ ಕೊರತೆಯನ್ನೂ ಅದು ತುಂಬಿಕೊಡುತ್ತಿತ್ತು. ಕಡಿಮೆ ದರಕ್ಕೆ ಅತಿ ಹೆಚ್ಚು ಪ್ರೊಟೀನ್ ಇರುವ ಮಾಂಸಾಹಾರ ಬಡವರಿಗೆ ದೊರಕುತ್ತಿತ್ತು. ಆದರೆ ಮಾಂಸಾಹಾರದ ಕುರಿತ ಆರೆಸ್ಸೆ ಸ್‌ನ ಪೂರ್ವಾಗ್ರಹದಿಂದಾಗಿ ಗ್ರಾಮೀಣ ಪ್ರದೇಶದ ರೈತರು ತಮ್ಮ ಗೋವುಗಳನ್ನು ಮಾರಾಟ ಮಾಡಲಾಗದೆ ಬೀದಿಗೆ ಬಿಡುವ ಸ್ಥಿತಿ ನಿರ್ಮಾಣವಾಯಿತು. ಹೈನೋದ್ಯಮ ನಷ್ಟಕ್ಕೀಡಾಯಿತು. ಅರ್ಥವ್ಯವಸ್ಥೆಗೇ ಹೊಡೆತ ಬಿತ್ತು. ಚರ್ಮೋದ್ಯಕ್ಕೆ ಏಟು ಬಿತ್ತು. ರೈತರು ಸಾಕಲಾಗದ ಅನುಪಯುಕ್ತ ಗೋವುಗಳನ್ನು ಸಾಕುವುದಕ್ಕಾಗಿ ಪ್ರತೀ ವರ್ಷ ಸರಕಾರವೇ ಕೋಟ್ಯಂತರ ರೂಪಾಯಿಯನ್ನು ವ್ಯಯ ಮಾಡಬೇಕಾಗಿದೆ. ಇದೇ ಸಂದರ್ಭದಲ್ಲಿ ವಿದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಗೋಮಾಂಸ ಮಾರಾಟವಾಗುತ್ತಿದೆ. ದೇಶದ ಪೌಷ್ಟಿಕ ಆಹಾರ ವಿದೇಶಿಯರ ಪಾಲಾಗುತ್ತಿದೆ. ದೇಶದಲ್ಲಿ ಹಸಿವು, ಅಪೌಷ್ಟಿಕತೆ ಹೆಚ್ಚುತ್ತಿದೆ.

ಭಾಗವತ್ ಅವರು ಹೆಚ್ಚುತ್ತಿರುವ ಜನಸಂಖ್ಯೆ, ಬಡತನ, ನಿರುದ್ಯೋಗದ ಬಗ್ಗೆಯೂ ಮಾತನಾಡಿದ್ದಾರೆ. ಸ್ವಉದ್ಯೋಗಗಳು ಹೆಚ್ಚಬೇಕು ಎಂದು ಕರೆ ನೀಡಿದ್ದಾರೆ. ಆರೆಸ್ಸೆಸ್‌ನ ಮಾಂಸಾಹಾರ ರಾಜಕಾರಣದಿಂದಾಗಿ ದನ ಸಾಕಿ ಬದುಕುತ್ತಿದ್ದವರು ತಮ್ಮ ಹಟ್ಟಿಗಳನ್ನು ಮುಚ್ಚುವಂತಹ ಸ್ಥಿತಿಗೆ ಬಂದಿದ್ದಾರೆ. ದೇಶಾದ್ಯಂತ ಉದ್ದಿಮೆಗಳು ಒಂದೊಂದಾಗಿ ಮುಚ್ಚುತ್ತಿವೆ. ಈ ದೇಶದ ಬಹುಸಂಖ್ಯಾತರ ಮಾಂಸಾಹಾರದ ವಿರುದ್ಧ ನಡೆಸುವ ಸಂಚು, ಪರೋಕ್ಷವಾಗಿ ದೇಶದ ಆರ್ಥಿಕತೆಯ ವಿರುದ್ಧ ನಡೆಸುವ ಸಂಚುಕೂಡ ಆಗಿದೆ. ನಿರುದ್ಯೋಗ, ಬಡತನ ಹೆಚ್ಚುತ್ತಿರುವ ದಿನಗಳಲ್ಲಿ ಮಾಂಸಾಹಾರಕ್ಕೆ ಹೆಚ್ಚು ಪ್ರೋತ್ಸಾಹವನ್ನು ನೀಡಬೇಕು. ಆದರೆ ಆರೆಸ್ಸೆಸ್ ನಾಯಕರು ಇರುವ ಆಹಾರವನ್ನು ಕಿತ್ತುಕೊಳ್ಳಲು ನೋಡುತ್ತಿದ್ದಾರೆ. ಈ ದೇಶದ ಶೂದ್ರರು, ದಲಿತರನ್ನು ಬೌದ್ಧಿಕವಾಗಿ ಮತ್ತು ದೈಹಿಕವಾಗಿ ಇನ್ನಷ್ಟು ದುರ್ಬಲರನ್ನಾಗಿಸುವ, ಆ ಮೂಲಕ ಅವರ ಮೇಲೆ ಮತ್ತೆ ತಮ್ಮ ಪೂರ್ಣ ನಿಯಂತ್ರಣವನ್ನು ಸಾಧಿಸುವ ಯೋಜನೆಯ ಭಾಗವಾಗಿದೆ, ಮಾಂಸಾಹಾರದ ವಿರುದ್ಧ ನೀಡಿರುವ ಅವರ ಹೇಳಿಕೆ. ಹಸಿವು ತಾಂಡವವಾಡುತ್ತಿರುವ ದೇಶದಲ್ಲಿ ಬಹುಜನರ ಆಹಾರದ ವಿರುದ್ಧ ಕೆಟ್ಟದಾಗಿ ಮಾತನಾಡುವುದಕ್ಕಿಂತ ಇನ್ನೊಂದು ಹಿಂಸೆ ಇದೆಯೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)