varthabharthi


ವಿಶೇಷ-ವರದಿಗಳು

ಮಳೆಗಾಲದಲ್ಲಿ ಜಲದಿಗ್ಬಂಧನ, ಸರಕಾರದಿಂದ ಸಿಗದ ಸೌಲಭ್ಯ

ಚಿಕ್ಕಮಗಳೂರು: ನಕ್ಸಲ್ ಪೀಡಿತ ಗ್ರಾಮಗಳಿಗಿಲ್ಲ ಸುಸಜ್ಜಿತ ಸೇತುವೆ

ವಾರ್ತಾ ಭಾರತಿ : 7 Oct, 2022
ಕೆ.ಎಲ್.ಶಿವು

ಚಿಕ್ಕಮಗಳೂರು, ಅ.6: ನದಿ ದಾಟಲು ಸುಸಜ್ಜಿತ ಸೇತುವೆ ನಿರ್ಮಿಸಿಕೊಡಿ ಎಂಬ ನಕ್ಸಲ್ ಪೀಡಿತ ಗ್ರಾಮಗಳ ಜನರ ಕಳೆದ ಮೂರು ದಶಕಗಳ ಬೇಡಿಕೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸದೆ ನಿರ್ಲಕ್ಷ ವಹಿಸಿದ್ದು, ಬೇಸತ್ತ ಗ್ರಾಮಸ್ಥರು ತಾವೇ ಹಣ ಸಂಗ್ರಹಿಸಿ ಶ್ರಮದಾನದ ಮೂಲಕ ಮರದ ಕಂಬಗಳು, ಬೆತ್ತಗಳು, ಹಗ್ಗ ಬಳಸಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡು ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಶಾಪ ಹಾಕುತ್ತಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮದಲ್ಲಿ ವರದಿಯಾಗಿದೆ.

ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಪಂ ವ್ಯಾಪ್ತಿಯ ಹರೇಬೀಳು ಹಾಗೂ ಸುಂಕದಮಕ್ಕಿ ಗ್ರಾಮ ಈ ಹಿಂದೆ ನಕ್ಸಲ್ ಪೀಡಿತ ಗ್ರಾಮಗಳಾಗಿತ್ತು. ಈ ಗ್ರಾಮಗಳ ಸುತ್ತಮುತ್ತಲೂ ನಕ್ಸಲರ ಓಡಾಟ ಇದ್ದ ಕಾರಣಕ್ಕೆ ಎಎನ್‌ಎಫ್ ತಂಡ ಇದೇ ಕೆರೆಕಟ್ಟೆ ಗ್ರಾಮದಲ್ಲಿ ಅನೇಕ ವರ್ಷಗಳ ಕಾಲ ಬೀಡುಬಿಟ್ಟಿದ್ದು, ಕಳೆದ ಕೆಲ ವರ್ಷಗಳಿಂದ ನಕ್ಸಲರ ಚಲನವಲನ ಇಲ್ಲದ ಕಾರಣಕ್ಕೆ ಎಎನ್‌ಎಫ್ ತಂಡ ಈ ಗ್ರಾಮದಿಂದ ತೆರವಾಗಿದೆ. ಹಿಂದಿನ ಸರಕಾರಗಳು ನಕ್ಸಲ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ನಕ್ಸಲ್ ಪ್ಯಾಕೇಜ್‌ನ ಅಡಿಯಲ್ಲಿ ನಕ್ಸಲ್ ಪೀಡಿತ ಗ್ರಾಮಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ನೂರಾರು ಕೋಟಿ ರೂ. ಅನುದಾನ ನೀಡಿದೆ. ಆದರೆ ಈ ಅನುದಾನ ಎಲ್ಲಿಗೆ ಹೋಗಿದೆಯೋ ಗೊತ್ತಿಲ್ಲ, ಇಂದಿಗೂ ಮಲೆನಾಡು ಭಾಗದಲ್ಲಿನ ಹಲವು ನಕ್ಸಲ್‌ಪೀಡಿತ ಗ್ರಾಮಗಳು ರಸ್ತೆ, ನೀರು, ಸೇತುವೆಗಳಂತಹ ಮೂಲಸೌಕರ್ಯಗಳಿಲ್ಲದೆ ನಾಗರಿಕ ಸೌಲಭ್ಯಗಳಿಂದ ದೂರ ಉಳಿಯುವಂತಾಗಿದೆ. ಇಂತಹ ಗ್ರಾಮಗಳ ಸಾಲಿಗೆ ಕೆರೆಕಟ್ಟೆ ಗ್ರಾಪಂ ವ್ಯಾಪ್ತಿಯಲ್ಲಿರುವ ಹರೇಬೀಳು, ಸುಂಕದಮಕ್ಕಿ ಗ್ರಾಮಗಳು ಸ್ಪಷ್ಟ ಉದಾಹರಣೆಯಾಗಿದ್ದು, ಗ್ರಾಮಗಳ ಸಂಪರ್ಕಕ್ಕೆ ತುಂಗಾ ನದಿಯನ್ನು ದಾಟಬೇಕಿದ್ದು, ನದಿ ದಾಟಲು ಸುಸಜ್ಜಿತ ಸೇತುವೆ ಇಲ್ಲದ ಪರಿಣಾಮ ಗ್ರಾಮಸ್ಥರು ಮಳೆಗಾಲದ 6 ತಿಂಗಳುಗಳ ಕಾಲ ಹೊರ ಜಗತ್ತಿನ ಸಂಪರ್ಕ ಇಲ್ಲದೇ ಬದುಕಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ಕೆರೆಕಟ್ಟೆ ಗ್ರಾಮದಿಂದ 8 ಕಿಮೀ ದೂರದಲ್ಲಿರುವ ಈ ಗ್ರಾಮಗಳನ್ನು ತಲುಪಲು ಕೆರೆಕಟ್ಟೆ ಸಮೀಪದಲ್ಲಿ ಹರಿಯುವ ತುಂಗಾ ನದಿಯನ್ನು ದಾಟಬೇಕಿದೆ. ಮಳೆಗಾಲದಲ್ಲಿ ಈ ಭಾಗದಲ್ಲಿ ಭಾರೀ ಮಳೆ ಸುರಿಯುವುದರಿಂದ ನದಿ ತುಂಬಿ ಹರಿಯುತ್ತದೆ. ಭಾರೀ ಮಳೆಗೆ ನದಿಯಲ್ಲಿ ನೆರೆ ಬರುವುದು ಸಾಮಾನ್ಯವಾಗಿದ್ದು, ಮಳೆಗಾಲದಲ್ಲಿ ಗ್ರಾಮದ ಜನರು ನದಿ ದಾಟುವ ಸಾಹಸಕ್ಕೆ ಕೈ ಹಾಕುವಂತಿಲ್ಲ. ಈ ಗ್ರಾಮಗಳಲ್ಲಿ ಸುಮಾರು 30 ಕುಟುಂಬಗಳ 100ಕ್ಕೂ ಹೆಚ್ಚು ಜನರು ವಾಸವಾಗಿದ್ದು, ಅಲ್ಪಸ್ವಲ್ಪ ಜಮೀನುಗಳನ್ನು ಹೊಂದಿದ್ದು, ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಗ್ರಾಮದ ಸಮೀಪದಲ್ಲಿರುವ ತುಂಗಾ ನದಿಯನ್ನು ದಾಟಲು ಸೇತುವೆ ಸೌಲಭ್ಯ ಇಂದಿಗೂ ಇಲ್ಲದ ಪರಿಣಾಮ ಗ್ರಾಮಸ್ಥರು ನಾಗರಿಕ ಸೌಲಭ್ಯಗಳೂ ಸೇರಿದಂತೆ ಹೊರ ಜಗತ್ತಿನ ಸಂಪರ್ಕ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮಳೆಗಾಲದಲ್ಲಿ ನದಿ ತುಂಬಿ ಹರಿಯುವುದರಿಂದ ಗ್ರಾಮಸ್ಥರು ಮಳೆಗಾಲದ 6 ತಿಂಗಳುಗಳ ಕಾಲ ಗ್ರಾಮದಲ್ಲಿ ದಿಗ್ಬಂಧನಕ್ಕೊಳಗಾದವರಂತೆ ಬದುಕುತ್ತಿದ್ದಾರೆ. ಮಳೆಗಾಲ ಮುಗಿಯುತ್ತಿದ್ದಂತೆ ತಾವೇ ಮರದ ಸೇತುವೆ ನಿರ್ಮಿಸಿಕೊಂಡು ಹೊರ ಜಗತ್ತಿನ ಸಂಪರ್ಕಕ್ಕೆ ಬರುತ್ತಿರುವ ಈ ಗ್ರಾಮದಲ್ಲಿ ಶಾಲಾ ಕಾಲೇಜು ಮಕ್ಕಳಿದ್ದರೂ ನದಿ ದಾಟಲು ಸೇತುವೆ ಇಲ್ಲದ ಪರಿಣಾಮ ಎಲ್ಲ ಶಾಲಾ ಕಾಲೇಜು ಮಕ್ಕಳನ್ನು ಹಾಸ್ಟೆಲ್‌ಗಳಲ್ಲಿ ಇಲ್ಲವೇ ಸಂಬಂಧಿಕರ ಮನೆಗಳಲ್ಲಿ ಬಿಟ್ಟು ವಿದ್ಯಾಭ್ಯಾಸ ಕಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭಗಳಲ್ಲಿ ರೋಗಿಯನ್ನು ಕಂಬಳಿಯಲ್ಲಿ ಕಟ್ಟಿ 15 ಕಿ.ಮೀ. ಕಾಡಿನಲ್ಲಿ ನಡೆದು ಶೃಂಗೇರಿ-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿ ತಲುಪಿ ಅಲ್ಲಿಂದ ವಾಹನಗಳ ಮೂಲಕ ಆಸ್ಪತ್ರೆಗೆ ದಾಖಲು ಮಾಡಬೇಕಾದ ದಾರುಣ ಸ್ಥಿತಿ ಈ ಗ್ರಾಮಸ್ಥರದ್ದಾಗಿದೆ. ನದಿ ದಾಟಲು ಸೇತುವೆ ಇಲ್ಲದ ಪರಿಣಾಮ ಗ್ರಾಮಸ್ಥರು ದಿನಸಿ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಈ ಕಾಡುದಾರಿಯಲ್ಲಿಯೇ ನಡೆದು ಬರಬೇಕಿದ್ದು, ಈ ಗ್ರಾಮಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವುದರಿಂದ ಹುಲಿ, ಚಿರತೆಗಳ ಭೀತಿಯಲ್ಲಿ ಪ್ರಾಣ ಲೆಕ್ಕಿಸದೇ ಕಾಡುದಾರಿಯಲ್ಲಿ ಸುತ್ತಿಕೊಂಡು ಹೊರ ಜಗತ್ತಿನ ಸಂಪರ್ಕ ಸಾಧಿಸಬೇಕಿದೆ.

ಈ ಗ್ರಾಮಕ್ಕೆ ಸಂಪರ್ಕ ಸಾಧಿಸಲು ಸುಸಜ್ಜಿತ ಸೇತುವೆ ಅಥವಾ ತೂಗು ಸೇತುವೆ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಕ್ಷೇತ್ರದ ಈ ಹಿಂದಿನ ಮಾಜಿ ಶಾಸಕರಿಂದ ಹಿಡಿದು ಹಾಲಿ ಶಾಸಕ, ಜಿಲ್ಲಾಧಿಕಾರಿ, ತಹಶೀಲ್ದಾರ್‌ವರೆಗೂ ಮನವಿ ಸಲ್ಲಿಸಿದ್ದಾರೆ. ಕಳೆದ ಬಾರಿ ಸೇತುವೆಗಾಗಿ ಚುನಾವಣೆಯನ್ನೂ ಬಹಿಷ್ಕರಿಸಿದ್ದಾರೆ. ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ನಿಮಿತ್ತ ಕೆರೆಕಟ್ಟೆ ಗ್ರಾಮಕ್ಕೆ ಬಂದಿದ್ದ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿ ಸೇತುವೆಗಾಗಿ ಗೋಗರೆದಿದ್ದಾರೆ. ಆದರೆ ಅಧಿಕಾರಿ, ಜನಪ್ರತಿನಿಧಿಗಳಿಂದ ಭರವಸೆ ಸಿಕ್ಕಿದೆಯೇ ಹೊರತು ಬೇಡಿಕೆ ಮಾತ್ರ ಇಂದಿಗೂ ಈಡೇರಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಬೇಸತ್ತ ಗ್ರಾಮಸ್ಥರು ಇತ್ತೀಚೆಗೆ ತುಂಗಾ ನದಿ ದಾಟಲು ತಾವೇ ಶ್ರಮದಾನ ಮಾಡಿ ಮರದ ಕಂಬಗಳು, ಹಗ್ಗ, ಬೆತ್ತಗಳನ್ನು ಬಳಸಿ ಸೇತುವೆಯೊಂದನ್ನು ನಿರ್ಮಿಸಿಕೊಂಡಿದ್ದು, ಗ್ರಾಮಸ್ಥರ ಸ್ವಾಭಿಮಾನದ ಪ್ರತೀಕದಂತಿರುವ ಈ ಸೇತುವೆಗೆ ಸ್ವಾಭಿಮಾನಿ ಸೇತುವೆ ಎಂದು ನಾಮಕರಣ ಮಾಡಿದ್ದಾರೆ. ಗ್ರಾಮಸ್ಥರು ತಾವೇ ಶ್ರಮ, ಹಣ ವ್ಯಯಿಸಿ ನಿರ್ಮಿಸಿದ ಈ ಸೇತುವೆ ತಾತ್ಕಾಲಿಕ ಸೇತುವೆಯಾಗಿದ್ದು, ಮುಂದಿನ ಮಳೆಗಾಲದಲ್ಲಿ ನದಿ ತುಂಬಿ ಹರಿಯುವುದರಿಂದ ಈ ಸೇತುವೆ ನದಿ ನೀರಿನಲ್ಲಿ ಕೊಚ್ಚಿ ಹೋಗಲಿದೆ. ಆಗ ಗ್ರಾಮದ ಸಂಪರ್ಕ ಮತ್ತೆ ಕಡಿತಗೊಳ್ಳಲಿದ್ದು, ಮತ್ತೆ ಮಳೆಗಾಲ ಮುಗಿಯುವವರೆಗೂ ಜನರು ಹೊರಜಗತ್ತಿನ ಸಂಪರ್ಕ ಸಾಧಿಸಲು ಸಾಧ್ಯವಾಗುವುದಿಲ್ಲ.

ಕೆರೆಕಟ್ಟೆಯಿಂದ ಈ ಎರಡು ಗ್ರಾಮಗಳನ್ನು ತಲುಪಲು ತುಂಗಾ ನದಿಗೆ ಸೇತುವೆ ನಿರ್ಮಿಸಿದಲ್ಲಿ 8 ಕಿ.ಮೀ. ಒಳಗೆ ಗ್ರಾಮಗಳ ಸಂಪರ್ಕ ಸಾಧಿಸಲು ಸಾಧ್ಯವಿರುವುದರಿಂದ ಸರಕಾರ ಕೂಡಲೇ ಈ ಗ್ರಾಮಗಳ ಸಂಪರ್ಕಕ್ಕೆ ಸುಸಜ್ಜಿತ ಸೇತುವೆ ನಿರ್ಮಿಸಿಕೊಡಬೇಕು, ಕೊನೆಪಕ್ಷ ತೂಗುಸೇತುವೆಯನ್ನಾದರೂ ನಿರ್ಮಿಸಿಕೊಡಬೇಕು ಎಂಬುದು ಗ್ರಾಮಸ್ಥರ ಮನವಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)