varthabharthi


ಕಾಲಮಾನ

ಮುಕ್ತ ಯೋಚನೆಗಳಿಗೆ ಹೆದರುತ್ತಿರುವ ಪ್ರಭುತ್ವ

ವಾರ್ತಾ ಭಾರತಿ : 8 Oct, 2022
ರಾಮಚಂದ್ರ ಗುಹಾ

ವಿದ್ಯಾರ್ಥಿಯಾಗಿ, ಶಿಕ್ಷಕನಾಗಿ, ಸಂಶೋಧಕನಾಗಿ ಮತ್ತು ವೀಕ್ಷಕನಾಗಿ, ಭಾರತೀಯ ವಿಶ್ವವಿದ್ಯಾನಿಲಯಗಳನ್ನು ನಾನು ಸತತ 50 ವರ್ಷಗಳಿಂದ ಕಂಡಿದ್ದೇನೆ. ಆದರೆ, ಅವುಗಳು ಈಗಿನಷ್ಟು ದುರ್ಬಲವಾಗಿರುವುದನ್ನು ಹಾಗೂ ಆಂತರಿಕ ಮತ್ತು ಬಾಹ್ಯ ಬೆದರಿಕೆಗಳಿಂದ ಕುಗ್ಗಿರುವುದನ್ನು ನಾನೆಂದೂ ನೋಡಿಲ್ಲ. ತುರ್ತು ಪರಿಸ್ಥಿತಿಯ ಬಳಿಕದ ಯಾವುದೇ ಕಾಲದಲ್ಲಿ, ಸ್ವತಂತ್ರ ಯೋಚನೆಗೆ, ಬೋಧನೆಗೆ ಮತ್ತು ಸ್ವತಂತ್ರ ಸಂಶೋಧನೆಗೆ ವಾತಾವರಣವು ಇಷ್ಟೊಂದು ಹದಗೆಟ್ಟಿರಲಿಲ್ಲ.


ಕಳೆದ ತಿಂಗಳು ನಡೆದ ಸಮ್ಮೇಳನವೊಂದರಲ್ಲಿ, ನಮ್ಮ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯೊಂದರ ನಿರ್ದೇಶಕರನ್ನು ಭೇಟಿಯಾದೆ. ಅವರು ಸ್ವತಃ ಓರ್ವ ವಿಜ್ಞಾನಿ ಮತ್ತು ಶ್ರೇಷ್ಠ ಆಡಳಿತಗಾರ. ದೇಶದ ಕನಿಷ್ಠ 8 ಐಐಟಿಗಳಲ್ಲಿ ಈಗ ನಿರ್ದೇಶಕರಿಲ್ಲ ಎಂದು ಅವರು ಹೇಳಿದರು. ಈ ಐಐಟಿಗಳ ನಿರ್ಗಮನ ನಿರ್ದೇಶಕರ ಅವಧಿ ಮುಗಿದಿದೆ ಮತ್ತು ನೂತನ ನಿರ್ದೇಶಕರನ್ನು ಆಯ್ಕೆ ಮಾಡಲು ಶೋಧ ಸಮಿತಿಗಳನ್ನೂ ರಚಿಸಲಾಗಿದೆ. ಆದರೂ, ಶಿಫಾರಸುಗೊಂಡ ಅಭ್ಯರ್ಥಿಯ ಹೆಸರನ್ನು ಭಾರತ ಸರಕಾರ ಅನುಮೋದಿಸಿಲ್ಲ. ಬಹುಷಃ ಶಿಫಾರಸುಗೊಂಡಿರುವ ಈ ಎಂಟು ಅಭ್ಯರ್ಥಿಗಳ ವೈಯಕ್ತಿಕ ಮತ್ತು ವೈಚಾರಿಕ ಪೂರ್ವಾಪರಗಳನ್ನು ‘ನಾಗಪುರ’ (ಆರೆಸ್ಸೆಸ್‌ನ ಪ್ರಧಾನ ಕಚೇರಿಯು ನಾಗಪುರದಲ್ಲಿದೆ)ವು ಪರಿಶೀಲನೆ ನಡೆಸುತ್ತಿರುವಂತೆ ಕಾಣುತ್ತಿದೆ. ಅದರಿಂದಾಗಿ ಈ ವಿಳಂಬ ಆಗಿರುವ ಸಾಧ್ಯತೆಯಿದೆ.

‘ನಾಗಪುರ’ ಎಂಬ ಅರ್ಥಪೂರ್ಣ ಪದವನ್ನು ಈ ಐಐಟಿ ನಿರ್ದೇಶಕರು ವ್ಯಂಗ್ಯವಾಗಿ ಬಳಸಿದರು. ಆದರೆ, ಅವರು ಹೇಳಿದ ಎಲ್ಲಾ ವಿಷಯಗಳಲ್ಲಿ ವಿಷಾದದ ಛಾಯೆಯಿತ್ತು. ಉನ್ನತ ಶಿಕ್ಷಣದಲ್ಲಿ ರಾಜಕೀಯ ಹಸ್ತಕ್ಷೇಪವು ಮೋದಿ ಸರಕಾರದೊಂದಿಗೆ ಆರಂಭವಾದದ್ದಲ್ಲ ಎನ್ನುವುದು ಸಾರ್ವಜನಿಕ ವಿಶ್ವವಿದ್ಯಾನಿಲಯ ವ್ಯವಸ್ಥೆಯಲ್ಲಿ ಅಗಾಧ ಅನುಭವವುಳ್ಳ ಈ ವಿಜ್ಞಾನಿಗೆ ಗೊತ್ತಿದೆ. ಹಿಂದಿನ ಸರಕಾರಗಳೂ ತಮಗೆ ಬೇಕಾದವರನ್ನು ನೇಮಿಸುವುದಕ್ಕಾಗಿ ಹಸ್ತಕ್ಷೇಪಗಳನ್ನು ನಡೆಸುತ್ತಿದ್ದವು. ಕೇಂದ್ರೀಯ ವಿಶ್ವವಿದ್ಯಾನಿಲಯವೊಂದರ ಉಪಕುಲಪತಿಯಾಗಿ ಅಥವಾ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ದ ಹಿರಿಯ ಅಧಿಕಾರಿಯಾಗಿ ಇಂತಹ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಶೋಧ ಸಮಿತಿಗಳಿಗೆ ಶಿಕ್ಷಣ ಸಚಿವರು ಹೆಚ್ಚಿನ ಸಂದರ್ಭಗಳಲ್ಲಿ ಸೂಕ್ಷ್ಮವಾಗಿ (ಅಥವಾ ಅಷ್ಟೊಂದು ಸೂಕ್ಷ್ಮವಾಗಿಯಲ್ಲದೆ) ಸೂಚನೆ ನೀಡುತ್ತಿದ್ದರು. ಆದರೆ, ಇಂತಹ ಹಸ್ತಕ್ಷೇಪಗಳು ಈಗ ಮೊದಲ ಬಾರಿಗೆ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳು ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಮ್)ಗಳ ಬಾಗಿಲಿಗೆ ಬಂದು ತಲುಪಿವೆ. ಈಗ ಐಐಟಿಗಳು ಮತ್ತು ಐಐಎಮ್‌ಗಳ ನಿರ್ದೇಶಕರ ಆಯ್ಕೆಯಲ್ಲಿ ವೈಜ್ಞಾನಿಕ ಪರಿಣತಿ ಮತ್ತು ಆಡಳಿತ ಕೌಶಲ್ಯ ಏಕೈಕ ಮಾನದಂಡಗಳಾಗಿ ಉಳಿದಿಲ್ಲ; ಅವರ ವಿಚಾರಗಳು ಸಂಘ ಪರಿವಾರದ ಸಿದ್ಧಾಂತಗಳೊಂದಿಗೆ ಯಾವ ರೀತಿಯಲ್ಲಿ ಹೊಂದಾಣಿಕೆಯಾಗುತ್ತವೆ ಎನ್ನುವುದನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.

2015ರಲ್ಲಿ ನಾನು ಪ್ರಕಟಿಸಿದ ಪ್ರಬಂಧವೊಂದರಲ್ಲಿ, ನರೇಂದ್ರ ಮೋದಿ ನೇತೃತ್ವದ ಸರಕಾರವು ಭಾರತ ಕಂಡ ‘ಅತ್ಯಂತ ವೈಚಾರಿಕತೆ ವಿರೋಧಿ’ ಸರಕಾರ ಎಂಬುದಾಗಿ ಬಣ್ಣಿಸಿದ್ದೆ. ಮೋದಿ ಸರಕಾರದ ಮೊದಲ ಕೆಲವು ತಿಂಗಳುಗಳಲ್ಲಿ, ಸ್ವತಃ ಮೋದಿ ಸೇರಿದಂತೆ ಪ್ರಮುಖ ಬಿಜೆಪಿ ರಾಜಕಾರಣಿಗಳು ನೀಡಿದ ಹೇಳಿಕೆಗಳ ಆಧಾರದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಅದಾಗಿತ್ತು. ಆದರೆ, ಆ ನಂತರದ ಏಳು ವರ್ಷಗಳ ಅವಧಿಯಲ್ಲಿ ನಡೆದ ಘಟನಾವಳಿಗಳು ನನ್ನ ಆ ಅಭಿಪ್ರಾಯವನ್ನು ನಿಸ್ಸಂದಿಗ್ಧವಾಗಿ ಖಚಿತಪಡಿಸಿವೆ.

ನಮ್ಮ ಐಐಟಿಗಳು ಮತ್ತು ಐಐಎಮ್‌ಗಳಲ್ಲಿ ಈಗ ಏನು ಆಗುತ್ತಿವೆಯೋ, ಅವು ಈಗ ವ್ಯಾಪಕವಾಗಿ ಚಾಲ್ತಿಯಲ್ಲಿರುವ ಪ್ರವೃತ್ತಿಯ ಸಾಂಕೇತಿಕ ಲಕ್ಷಣಗಳಾಗಿವೆ. ಭಾರತೀಯ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್‌ಗಳ ಯೋಚನೆಗಳು ಮತ್ತು ಚಟುವಟಿಕೆಗಳನ್ನು ನಿಯಂತ್ರಿಸಲು, ಹಸ್ತಕ್ಷೇಪ ಮಾಡಲು ಮತ್ತು ನಿರ್ದೇಶಿಸಲು ಪ್ರಭುತ್ವವು ವ್ಯವಸ್ಥಿತ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ನಿರ್ದಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮುಕ್ತ ಯೋಚನೆಗಳು ಮತ್ತು ಮುಕ್ತ ಸಂವಾದಗಳನ್ನು ನಿರುತ್ತೇಜಿಸಲಾಗುತ್ತಿದೆ ಹಾಗೂ ಕೆಲವು ಸಂದರ್ಭಗಳಲ್ಲಿ ನಿಷೇಧಿಸಲಾಗುತ್ತಿದೆ. ಬದಲಿಗೆ, ಪ್ರಧಾನಿ ಮತ್ತು ಆಡಳಿತಾರೂಢ ಪಕ್ಷದ ಸೈದ್ಧಾಂತಿಕ ಮತ್ತು ರಾಜಕೀಯ ಕಾರ್ಯಸೂಚಿಗೆ ಪೂರಕವಾಗಿರುವ ವಿಷಯಗಳಿಗೆ ಉತ್ತೇಜನ ನೀಡಲಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಬೌದ್ಧಿಕ ಸ್ವಾತಂತ್ರದ ಮೇಲೆ ಭಾರತ ಸರಕಾರ ಹಾಗೂ ರಾಜಕೀಯ ಕಾರ್ಯಕರ್ತರು ನಡೆಸುತ್ತಿರುವ ದಾಳಿಗಳನ್ನು ದಿಲ್ಲಿ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ದಾಖಲಿಸಿದ್ದಾರೆ. ಅವರು ಇಂತಹ ದಾಳಿಗಳನ್ನು ಆರು ಕೋಷ್ಟಕಗಳಲ್ಲಿ ವಿಂಗಡಿಸಿ ಪಟ್ಟಿ ಮಾಡಿದ್ದಾರೆ. ಅವುಗಳ ವಿವರ ಈ ಕೆಳಗಿನಂತಿವೆ:

ಕೋಷ್ಟಕ 1ರಲ್ಲಿ ವಿಶ್ವವಿದ್ಯಾನಿಲಯದ ಪಠ್ಯಕ್ರಮದಿಂದ ವಾಪಸ್ ಪಡೆದ ಅಥವಾ ಸಾರ್ವಜನಿಕ ವಿತರಣೆಯಿಂದಲೇ ಹೊರಗಿಡಲಾದ ಪುಸ್ತಕಗಳನ್ನು ಪಟ್ಟಿ ಮಾಡಲಾಗಿದೆ. ನಿರ್ದಿಷ್ಟ ಧಾರ್ಮಿಕ ಗುಂಪಿನ ನಂಬಿಕೆಗಳು ಮತ್ತು ಆಚರಣೆಗಳನ್ನು ಅವಹೇಳನ ಮಾಡುತ್ತವೆ ಎಂಬುದಾಗಿ ಭಾವಿಸಿ ಈ ಪುಸ್ತಕಗಳನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಹೀಗೆ ಅಧಿಕೃತವಾಗಿ ನಿಷೇಧಗೊಂಡಿರುವ ಲೇಖಕರ ಪಟ್ಟಿಯಲ್ಲಿ ಅಮೆರಿಕದ ಶ್ರೇಷ್ಠ ಭಾರತ ಶಾಸ್ತ್ರಜ್ಞೆ ವೆಂಡಿ ಡೋನಿಗರ್ ಮತ್ತು ಶ್ರೇಷ್ಠ ಬಂಗಾಳಿ ಕಾದಂಬರಿಗಾರ್ತಿ ಮಹಾಶ್ವೇತಾ ದೇವಿ ಸೇರಿದ್ದಾರೆ.

ಕೋಷ್ಟಕ 2ರಲ್ಲಿ, ವಿದ್ಯಾರ್ಥಿಗಳು ಅಥವಾ ಬೋಧಕ ಸಿಬ್ಬಂದಿ ಏರ್ಪಡಿಸಿರುವ, ಆದರೆ ಅಧಿಕಾರಿಗಳು ರದ್ದುಪಡಿಸಿರುವ ಅಥವಾ ರಾಜಕೀಯ ಕಾರ್ಯಕರ್ತರು (ಪ್ರಮುಖವಾಗಿ ಹಿಂದೂ ಬಲಪಂಥೀಯರು) ಅಡ್ಡಿಪಡಿಸಿರುವ ವಿಚಾರಸಂಕಿರಣಗಳನ್ನು ಪಟ್ಟಿ ಮಾಡಲಾಗಿದೆ. ಈ ಕೋಷ್ಟಕದಲ್ಲಿ ಇಂತಹ 69 ಘಟನೆಗಳು ನಮೂದಾಗಿವೆ. ಅವುಗಳ ಪೈಕಿ ಕೆಲವು: ಪ್ರಶಸ್ತಿ ವಿಜೇತ ಸಾಕ್ಷಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್ 2014 ಡಿಸೆಂಬರ್‌ನಲ್ಲಿ ಪುಣೆಯಲ್ಲಿ ಏರ್ಪಡಿಸಿದ ಚಿತ್ರವೊಂದರ ಪ್ರದರ್ಶನ; 2016 ಫೆಬ್ರವರಿಯಲ್ಲಿ ಜಾರ್ಖಂಡ್‌ನ ಸೆಂಟ್ರಲ್ ವಿಶ್ವವಿದ್ಯಾನಿಲಯದಲ್ಲಿ ಸೋಶಿಯಾಲಜಿಸ್ಟ್ ಪ್ರೊಫೆಸರ್ ಎಮ್.ಎನ್. ಪಾಣಿನಿ ಮಾಡಬೇಕಾಗಿದ್ದ ಭಾಷಣ (ಈ ಪ್ರೊಫೆಸರ್ ರಾಜಕೀಯೇತರ ವ್ಯಕ್ತಿಯಾಗಿದ್ದರೂ, ಒಮ್ಮೆ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಕಲಿಸಿದ್ದರು ಎಂಬ ಕಾರಣಕ್ಕಾಗಿ ಅವರ ಭಾಷಣವನ್ನು ರದ್ದುಪಡಿಸಲಾಗಿತ್ತು); 2018 ಜನವರಿಯಲ್ಲಿ ಚಂಡಿಗಡದಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಅಪೂರ್ವಾನಂದ್ ‘ಗಾಂಧಿ ಮತ್ತು ಕೋಮು ಸಾಮರಸ್ಯ’ ಎಂಬ ವಿಷಯದ ಮೇಲೆ ಮಾಡಬೇಕಾಗಿದ್ದ ಭಾಷಣ (ಈ ಭಾಷಣಕ್ಕೆ ಆರೆಸ್ಸೆಸ್‌ನ ವಿದ್ಯಾರ್ಥಿ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಡ್ಡಿಪಡಿಸಿತು); 2021 ಮಾರ್ಚ್‌ನಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ದಿನ ಕಾರ್ಯಕ್ರಮ (ಈ ಕಾರ್ಯಕ್ರಮಕ್ಕೂ ಅಡ್ಡಿಪಡಿಸಿದ್ದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್; ಇದು ಇಂತಹ ಪ್ರಕರಣಗಳಲ್ಲಿ ಸರಣಿ ಅಪರಾಧಿಯಾಗಿದೆ, ಆದರೆ ಅದು ಯಾವತ್ತೂ ಇದಕ್ಕಾಗಿ ಶಿಕ್ಷೆ ಅನುಭವಿಸಿಲ್ಲ).

ಕೋಷ್ಟಕ 3ರಲ್ಲಿ, ಸರಕಾರಿ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ನೀಡಿರುವ ಹೇಳಿಕೆಗಳಿಗಾಗಿ ಅವರ ವಿರುದ್ಧ ದಾಖಲಾದ ಕ್ರಿಮಿನಲ್ ಮೊಕದ್ದಮೆಗಳನ್ನು ಪಟ್ಟಿ ಮಾಡಲಾಗಿದೆ. ಈ ಹೇಳಿಕೆಗಳನ್ನು ಸರಕಾರ ಮಾನಹಾನಿಕರ ಅಥವಾ ‘ರಾಷ್ಟ್ರವಿರೋಧಿ’ ಎಂಬುದಾಗಿಯೂ ಪರಿಗಣಿಸಿದೆ. ಇಲ್ಲಿ ಒಟ್ಟು ಇಂತಹ 37 ಪ್ರಕರಣಗಳನ್ನು ಪಟ್ಟಿ ಮಾಡಲಾಗಿದೆ. ಈ ಎಲ್ಲಾ ಪ್ರಕರಣಗಳು ಕಾಶ್ಮೀರ, ಹಿಂದೂ ದೇವರ ಚಿತ್ರಗಳು, ಪೌರತ್ವ ತಿದ್ದುಪಡಿ ಕಾಯ್ದೆ ಮುಂತಾದ ಇಂದಿನ ಸರಕಾರಕ್ಕೆ ಅಪಥ್ಯವಾಗಿರುವ ಸಾಮಾನ್ಯ ವಿಷಯಗಳ ಕುರಿತಾಗಿತ್ತು.

ಕೋಷ್ಟಕ 4 ಭಾರತೀಯ ವಿಶ್ವವಿದ್ಯಾನಿಲಯಗಳ ಬೋಧಕರು ಮತ್ತು ವಿದ್ಯಾರ್ಥಿಗಳ ಮೇಲೆ ನಡೆದ ದೈಹಿಕ ದಾಳಿಯ 39 ಪ್ರಕರಣಗಳನ್ನು ಪಟ್ಟಿ ಮಾಡಿವೆೆ. ಬಲಪಂಥೀಯ ವಿದ್ಯಾರ್ಥಿಗಳ ಹಲ್ಲೆಯಿಂದ ಗಾಯಗೊಂಡು ಮೃತಪಟ್ಟ ಉಜ್ಜೈನಿಯ ಪ್ರೊಫೆಸರ್ ಒಬ್ಬರ ಪ್ರಕರಣ, 2015ರಲ್ಲಿ ಧಾರವಾಡದಲ್ಲಿ ನಡೆದ ಗೌರವಾನ್ವಿತ ವಿದ್ವಾಂಸ ಪ್ರೊಫೆಸರ್ ಎಮ್.ಎಮ್. ಕಲಬುರ್ಗಿ ಹತ್ಯೆ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸಂಸ್ಕೃತ ಪ್ರಾಧ್ಯಾಪಕರು ಮುಸ್ಲಿಮ್ ಎನ್ನುವ ಕಾರಣಕ್ಕಾಗಿ ಅವರಿಗೆ ನಿಷೇಧ ವಿಧಿಸಿ ಬಲವಂತದಿಂದ ವರ್ಗಾವಣೆ ಮಾಡಿದಂಥ ಪ್ರಕರಣಗಳು ಈ ಪಟ್ಟಿಯಲ್ಲಿ ಸೇರಿವೆ.

ಕೋಷ್ಟಕ 5ರಲ್ಲಿ, ತಾವು ನೇಮಕಗೊಂಡ ಬೋಧಕ ಹುದ್ದೆಗಳನ್ನು ಸ್ವೀಕರಿಸಲು ಅವಕಾಶ ನಿರಾಕರಿಸಲ್ಪಟ್ಟ ಪ್ರೊಫೆಸರ್‌ಗಳ ಪ್ರಕರಣಗಳನ್ನು ಪಟ್ಟಿ ಮಾಡಲಾಗಿದೆ. ರಾಜಕೀಯ ಒತ್ತಡದಿಂದಾಗಿ ಬಲವಂತವಾಗಿ ರಾಜೀನಾಮೆ ನೀಡಬೇಕಾದ ಸ್ಕಾಲರ್‌ಗಳ ಪ್ರಕರಣಗಳನ್ನೂ ಇಲ್ಲಿ ಪಟ್ಟಿ ಮಾಡಲಾಗಿದೆ. ಈ ವಿಭಾಗದಲ್ಲಿ 24 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳ ಪೈಕಿ ಒಂದು ಈ ಅಂಕಣದ ಲೇಖಕನಿಗೇ ಸಂಬಂಧಿಸಿದೆ. ಅಹ್ಮದಾಬಾದ್ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಮೇಲೆ ಬಿಜೆಪಿ ಮತ್ತು ಎಬಿವಿಪಿ ಹೇರಿದ ಒತ್ತಡದಿಂದಾಗಿ ಆ ವಿಶ್ವವಿದ್ಯಾನಿಲಯದ ಹುದ್ದೆಯನ್ನು ವಹಿಸಿಕೊಳ್ಳಲು ಈ ಅಂಕರಣಕಾರನಿಗೆ ಸಾಧ್ಯವಾಗಲಿಲ್ಲ.

ಈ ಸರಣಿಯಲ್ಲಿ ಕೊನೆಯದಾಗಿರುವ ಕೋಷ್ಟಕ 6ರಲ್ಲಿ, ಭಾರತವನ್ನು ಪ್ರವೇಶಿಸದಂತೆ ಅಥವಾ ಭಾರತದಲ್ಲಿ ಅಕಾಡೆಮಿಕ್ ಸಮ್ಮೇಳನಗಳಲ್ಲಿ ಮಾತನಾಡದಂತೆ ವಿದೇಶಿ ವಿದ್ವಾಂಸರನ್ನು ತಡೆದ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಈ ವಿಭಾಗದ ದಾಖಲಾತಿಯು ಸಮಗ್ರವಾಗಿಲ್ಲ ಎಂಬುದಾಗಿ ಈ ದಾಖಲಾತಿಗಳ ಉಸ್ತುವಾರಿಗಳು ಹೇಳುತ್ತಾರೆ. ಯಾಕೆಂದರೆ, ಭವಿಷ್ಯದಲ್ಲೂ ತಮಗೆ ವೀಸಾ ನಿರಾಕರಿಸಬಹುದು ಎಂಬ ಹೆದರಿಕೆಯಿಂದ ವಿದೇಶಿ ವಿದ್ವಾಂಸರು ತಾವು ಎದುರಿಸಿರುವ ವೀಸಾ ಸಮಸ್ಯೆಗಳ ಬಗ್ಗೆ ಮಾತನಾಡಲು ಇಚ್ಛಿಸಿಲ್ಲ.

ಅದೂ ಅಲ್ಲದೆ, ಆಫ್ರಿಕದ ವಿದ್ಯಾರ್ಥಿಗಳ ವಿರುದ್ಧ ನಡೆದ ಹಲವಾರು ಜನಾಂಗೀಯ ತಾರತಮ್ಯ ಪ್ರಕರಣಗಳನ್ನೂ ಇಲ್ಲಿ ದಾಖಲಿಸಲಾಗಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ, ಪ್ರಸಕ್ತ ವಾತಾವರಣವು ವಿದೇಶಿ ವಿದ್ವಾಂಸರನ್ನು ಸ್ವಾಗತಿಸುವುದಿಲ್ಲ.
ಈ ಕೋಷ್ಟಕಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಲು ಬಯಸುವವರಿಗೆ ಅವುಗಳು ಈ ಲಿಂಕ್‌ನಲ್ಲಿ ಲಭ್ಯವಿವೆ: https://thewire.in/rights/six-tables-that-tell-the-story-of-academic-unfreedom-in-india

ಈ ನಿಟ್ಟಿನಲ್ಲಿ, ದೇಶದಲ್ಲಿ ಅಕಾಡಮಿಕ್ ಸ್ವಾತಂತ್ರ ಕುರಿತು ಪ್ರೊಫೆಸರ್ ನಂದಿನಿ ಸುಂದರ್ ಬರೆದಿರುವ ಸ್ಥಿತಿಗತಿ ವರದಿಯೂ ಮಹತ್ವ ಪಡೆದುಕೊಂಡಿದೆ. ಅದು The India Forum ಎಂಬ ಅದ್ಭುತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ: https://www.theindiaforum.in/article/academic-freedom-india.

ದೇಶದಲ್ಲಿ ಅಕಾಡಮಿಕ್ ಸ್ವಾತಂತ್ರಕ್ಕೆ ಎದುರಾಗಿರುವ ಬೆದರಿಕೆಗಳ ದಾಖಲೀಕರಣವನ್ನು ಸಾಧ್ಯವಿರುವಷ್ಟೂ ಸಮಗ್ರವಾಗಿ ಮಾಡಲು ದಿಲ್ಲಿ ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರಜ್ಞರು ಪ್ರಯತ್ನಿಸಿದ್ದಾರೆ ಹಾಗೂ ಈ ಕಾರ್ಯವನ್ನು ಸಾಧ್ಯವಿರುವಷ್ಟೂ ನಿಷ್ಪಕ್ಷವಾಗಿ ಮಾಡಿದ್ದಾರೆ. ಅವರು ದಾಖಲಿಸಿರುವ ಪ್ರಕರಣಗಳ ಪೈಕಿ ಕೆಲವು ಬಿಜೆಪಿಯೇತರ ಸರಕಾರಗಳಿಗೆ ಸಂಬಂಧಿಸಿವೆ. ಉದಾಹರಣೆಗೆ; ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ವ್ಯಂಗ್ಯಚಿತ್ರವನ್ನು ಪ್ರಕಟಿಸಿರುವುದಕ್ಕಾಗಿ ರಾಜ್ಯ ಸರಕಾರವು ಜಾದವಪುರ ವಿಶ್ವವಿದ್ಯಾನಿಲಯದ ಬೋಧಕ ಸಿಬ್ಬಂದಿಗೆ ಕಿರುಕುಳ ನೀಡುವ ಮೂಲಕ ತನಗೆ ತಾನೇ ಅವಮಾನ ಮಾಡಿಕೊಂಡ ಪ್ರಕರಣ.

ಆದರೆ, ಅಕಾಡೆಮಿಕ್ ಸ್ವಾತಂತ್ರ ನಿರಾಕರಣೆ ಪ್ರಕರಣಗಳ ಅತಿ ಹೆಚ್ಚಿನ ಪಾಲನ್ನು ರಾಜ್ಯಗಳು ಮತ್ತು ಕೇಂದ್ರದಲ್ಲಿರುವ ಬಿಜೆಪಿ ಆಡಳಿತದ ಸರಕಾರಗಳೇ ಹಂಚಿಕೊಳ್ಳಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ, ಬಿಜೆಪಿ ಸರಕಾರಗಳು ಒಂದೋ ಸ್ವತಃ ತಾವೇ ದಮನಕಾರಿ ಕ್ರಮಗಳನ್ನು ತೆಗೆದುಕೊಂಡಿವೆ ಅಥವಾ ಎಬಿವಿಪಿಯ ಕೋಪೋದ್ರಿಕ್ತ ಹಾಗೂ ಕೆಟ್ಟದಾಗಿ ವರ್ತಿಸುವ ಯುವಕರೊಂದಿಗೆ ಶಾಮೀಲಾಗಿ ತಮಗೆ ಬೇಕಾಗಿರುವುದನ್ನು ಸಾಧಿಸಿಕೊಂಡಿವೆ.

ಈ ವರ್ಷ ನಾನು ಕಲಿತ ದಿಲ್ಲಿ ವಿಶ್ವವಿದ್ಯಾನಿಲಯ ಶತಮಾನೋತ್ಸವವನ್ನು ಆಚರಿಸುತ್ತಿದೆ. ವಿಮರ್ಶಾತ್ಮಕವಾಗಿ ಯೋಚಿಸುವುದು ಮತ್ತು ಯೋಚನೆಗಳ ವಿನಿಮಯ- ಇವು ನನಗೆ ಇದೇ ವಿಶ್ವವಿದ್ಯಾನಿಲಯದಿಂದ ಬಂದ ಬಳುವಳಿ. ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಐದು ವರ್ಷ ಕಲಿತ ಬಳಿಕ, ಕೋಲ್ಕತಾದಲ್ಲಿರುವ, ಕೇಂದ್ರ ಸರಕಾರಿ ಅನುದಾನಿತ ಸಂಸ್ಥೆಯೊಂದರಲ್ಲಿ ನಾನು ಪಿಎಚ್.ಡಿ. ಮಾಡಿದೆ. ನಂತರದ ವರ್ಷಗಳಲ್ಲಿ ಬೆಂಗಳೂರು, ಕೋಲ್ಕತಾ ಮತ್ತು ಹೊಸದಿಲ್ಲಿಯಲ್ಲಿರುವ ನಾಲ್ಕು ವಿವಿಧ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡಿದೆ. ನನ್ನ ಬಹುತೇಕ ಬದುಕು ಮತ್ತು ವೃತ್ತಿಯನ್ನು ಭಾರತೀಯ ವಿಶ್ವವಿದ್ಯಾನಿಲಯ ವ್ಯವಸ್ಥೆಯೇ ರೂಪಿಸಿದೆ. ಇಂತಹ ಹಿನ್ನೆಲೆಯಿಂದ ಬಂದಿರುವ ನಾನು ಅಕಾಡಮಿಕ್ ಸ್ವಾತಂತ್ರದ ಮೇಲಿನ ಹೆಚ್ಚುತ್ತಿರುವ ದಾಳಿಯನ್ನು ದುಃಖ ಮತ್ತು ಹತಾಶೆಯಿಂದ ನೋಡುತ್ತಿದ್ದೇನೆ.

ಈ ದಾಳಿಯು ಹೆಚ್ಚಾಗಿ ಸರಕಾರಿ ವಿಶ್ವವಿದ್ಯಾನಿಲಯಗಳ ಮೇಲೆ ನಡೆಯುತ್ತಿದ್ದರೂ, ಖಾಸಗಿ ವಿಶ್ವವಿದ್ಯಾನಿಲಯಗಳಿಗೇನೂ ವಿನಾಯಿತಿ ಸಿಕ್ಕಿಲ್ಲ. ಆಡಳಿತಾರೂಢ ಪಕ್ಷದ ರಾಜಕಾರಣಿಗಳ ಪ್ರತೀಕಾರದ ಹೆದರಿಕೆಯಿಂದ, ಅವುಗಳೂ ತಮ್ಮ ಬೋಧಕ ಸಿಬ್ಬಂದಿಯ ವೈಚಾರಿಕ ಸ್ವಾತಂತ್ರವನ್ನು ಹತ್ತಿಕ್ಕುತ್ತಿವೆ. ಒಂದು ಖಾಸಗಿ ವಿಶ್ವವಿದ್ಯಾನಿಲಯವು ತನ್ನ ಸಿಬ್ಬಂದಿಯ ಸಾಮಾಜಿಕ ಮಾಧ್ಯಮ ಸಂದೇಶಗಳ ಮೇಲೆ ನಿಗಾ ಇಟ್ಟು ಅವುಗಳನ್ನು ಸೆನ್ಸಾರ್‌ಗೊಳಪಡಿಸುತ್ತಿದೆ. ಇನ್ನೊಂದು, ಖಾಸಗಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಆರೆಸ್ಸೆಸ್ ನಾಯಕರೊಂದಿಗೆ ಆಪ್ತ ಸಂಬಂಧವನ್ನು ಬೆಳೆಸುತ್ತಿದ್ದಾರೆ. ಶಾಂತಿಯನ್ನು ಖರೀದಿಸಲು ನಡೆಸಲಾಗುತ್ತಿರುವ ಇಂತಹ ಪ್ರಯತ್ನಗಳು, ಇಂತಹ ಆಡಳಿತಗಾರರನ್ನು ಅಧಃಪತನದ ದಾರಿಗೆ ದೂಡುತ್ತಿವೆ. ಅಂತಿಮವಾಗಿ ಅವರ ಸಂಪೂರ್ಣ ಶರಣಾಗತಿಯೊಂದಿಗೆ ಇದು ಸಮಾಪನಗೊಳ್ಳುತ್ತದೆ.

ವಿದ್ಯಾರ್ಥಿಯಾಗಿ, ಶಿಕ್ಷಕನಾಗಿ, ಸಂಶೋಧಕನಾಗಿ ಮತ್ತು ವೀಕ್ಷಕನಾಗಿ, ಭಾರತೀಯ ವಿಶ್ವವಿದ್ಯಾನಿಲಯಗಳನ್ನು ನಾನು ಸತತ 50 ವರ್ಷಗಳಿಂದ ಕಂಡಿದ್ದೇನೆ. ಆದರೆ, ಅವುಗಳು ಈಗಿನಷ್ಟು ದುರ್ಬಲವಾಗಿರುವುದನ್ನು ಹಾಗೂ ಆಂತರಿಕ ಮತ್ತು ಬಾಹ್ಯ ಬೆದರಿಕೆಗಳಿಂದ ಕುಗ್ಗಿರುವುದನ್ನು ನಾನೆಂದೂ ನೋಡಿಲ್ಲ. ತುರ್ತು ಪರಿಸ್ಥಿತಿಯ ಬಳಿಕದ ಯಾವುದೇ ಕಾಲದಲ್ಲಿ, ಸ್ವತಂತ್ರ ಯೋಚನೆಗೆ, ಬೋಧನೆಗೆ ಮತ್ತು ಸ್ವತಂತ್ರ ಸಂಶೋಧನೆಗೆ ವಾತಾವರಣವು ಇಷ್ಟೊಂದು ಹದಗೆಟ್ಟಿರಲಿಲ್ಲ.

ಆದರೆ, ಇದರ ಸರ್ವ ಹೊಣೆಯನ್ನೂ ಪ್ರಭುತ್ವ ಅಥವಾ ಭಾರತೀಯ ರಾಜಕಾರಣಿಗಳು ಮತ್ತು ಅವರ ಧೂರ್ತ ವಿಧಾನಗಳ ಮೇಲೆ ಹೊರಿಸುವಂತಿಲ್ಲ. ಇದರಲ್ಲಿ ಉಪಕುಲಪತಿಗಳು ಮತ್ತು ನಿರ್ದೇಶಕರು ಸೇರಿದಂತೆ ವಿಶ್ವವಿದ್ಯಾನಿಲಯಗಳ ಆಡಳಿತಗಾರರ ಪಾತ್ರವೂ ಇದೆ. ಅವರು ಪ್ರಭುತ್ವದ ಮತ್ತು ಇನ್ನೂ ಕಳವಳಕರ ವಿಷಯವೆಂದರೆ ರೌಡಿಗಳ ಬೆದರಿಕೆಗಳಿಗೆ ಸುಲಭವಾಗಿ ಮಣಿದಿದ್ದಾರೆ. ಹಾಗಾಗಿ, ಭಾರತೀಯ ವಿಶ್ವವಿದ್ಯಾನಿಲಯ ವ್ಯವಸ್ಥೆಗೆ ಪುನಶ್ಚೇತನ ನೀಡುವುದೆಂದರೆ, ಅವುಗಳನ್ನು ನಡೆಸುವ ಜವಾಬ್ದಾರಿಯನ್ನು ಹೊತ್ತವರ ಬೆನ್ನು ಮೂಳೆಯನ್ನು ಗಟ್ಟಿ ಮಾಡುವುದಾಗಿದೆ. ಇದು ಅತ್ಯಂತ ಮಹತ್ವದ ಕೆಲಸವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)