varthabharthi


ಪ್ರಚಲಿತ

ಭಾರತದ ಪ್ರಜಾಪ್ರಭುತ್ವದ ಮುಂದಿನ ದಿಕ್ಕು ಯಾವುದು?

ವಾರ್ತಾ ಭಾರತಿ : 17 Oct, 2022
ಸನತ್ ಕುಮಾರ್ ಬೆಳಗಲಿ

ಅಧಿಕಾರಕ್ಕೆ ಬಂದವರ ಸೈದ್ಧಾಂತಿಕ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ನಾವೆಷ್ಟೇ ಬರೆದರೂ, ಸಾಂಕೇತಿಕ ಪ್ರತಿಭಟನೆಗಳನ್ನು ಮಾಡಿದರೂ ಅದು ಅರಣ್ಯರೋದನವಾಗುತ್ತದೆ. ಜನ ಚಳವಳಿಯ ಮೂಲಕ ಪ್ರತಿರೋಧ ಒಡ್ಡುವುದು ಸುಲಭವಲ್ಲ. ಭಾರತೀಯರು ಜಾತಿ, ಮತಗಳ ಆಧಾರದಲ್ಲಿ ಮಿತಿ ಮೀರಿ ವಿಭಜನೆಗೊಂಡಿದ್ದಾರೆ. ಜನಸಮೂಹದ ನಡುವೆ ಧರ್ಮದ ಹೆಸರಿನಲ್ಲಿ ಫ್ಯಾಶಿಸ್ಟ್ ಶಕ್ತಿಗಳು ಸಕ್ರಿಯವಾಗಿವೆ. ಜನಸಾಮಾನ್ಯರು ಕೂಡ ಮತದಾನ ಮಾಡುವಾಗ ತಮ್ಮ ಆರ್ಥಿಕ, ಸಾಮಾಜಿಕ ಸಮಸ್ಯೆಗಳ ಆಧಾರದಲ್ಲಿ ಮತದಾನ ಮಾಡುವುದಿಲ್ಲ. ನಿರುದ್ಯೋಗ ತೊಲಗಲಿ, ಬಡತನ ಹೋಗಲಿ, ಸಮಾನತೆ ಬರಲಿ, ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿ ಎಂದು ಯಾರೂ ಮತದಾನ ಮಾಡುವುದಿಲ್ಲ. ಬದಲಿಗೆ ತನ್ನ ಧರ್ಮ ಅಪಾಯದಲ್ಲಿ ಇದೆ. ನನ್ನ ಜಾತಿಯವನು ಗೆಲ್ಲಬೇಕು ಎಂದು ಮತದಾನ ಮಾಡುತ್ತಾರೆ.ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳನ್ನು ಹಣಿಯಲು ಎರಡು ಪದಗಳನ್ನು ಇತ್ತೀಚೆಗೆ ವ್ಯಾಪಕವಾಗಿ ಬಳಸಲಾಗುತ್ತಿದೆ. ಪ್ರಭುತ್ವದ ಸೂತ್ರ ಹಿಡಿದಿರುವ ಸಾವರ್ಕರ್ ಮತ್ತು ಗೋಳ್ವಾಲ್ಕರ್‌ವಾದಿಗಳು ನಾಗಪುರದ ಕೇಂದ್ರೀಯ ಕಾರ್ಯಾಲಯದಲ್ಲಿ ರೂಪಿಸಿದ ಈ ಎರಡು ಪದಗಳು ಜಿಹಾದಿ ಮತ್ತು ಅರ್ಬನ್ ನಕ್ಸಲ್. ಅಂದರೆ ನಗರ ನಕ್ಸಲ್. ಈ ಎರಡು ಪದಗಳು ಸರಕಾರದ ಪದ ಕೋಶದಲ್ಲಿ ಅನಧಿಕೃತವಾಗಿ ಸೇರ್ಪಡೆಯಾಗಿವೆ.
 ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಆಗ ಅವರು ಪ್ರಚಾರ ಭಾಷಣ ಮಾಡುತ್ತ ಸರ್ದಾರ್ ಸರೋವರ ಯೋಜನೆಯನ್ನು ವಿರೋಧಿಸಿ ಹೋರಾಡುವವರಿಗೆ ನಗರ ನಕ್ಸಲರು ಎಂದು ಹಣೆಪಟ್ಟಿ ಹಚ್ಚಿದರು. ವಾಸ್ತವವಾಗಿ ಸರ್ದಾರ್ ಸರೋವರ ಅಣೆಕಟ್ಟು ಯೋಜನೆಯನ್ನು ಯಾರು ವಿರೋಧಿಸಿದರೆಂದು ಎಲ್ಲರಿಗೂ ಗೊತ್ತಿದೆ. ಹೆಸರಾಂತ ಗಾಂಧಿವಾದಿ ಮೇಧಾ ಪಾಟ್ಕರ್ ಅವರು ಈ ಹೋರಾಟದ ನೇತೃತ್ವ ವಹಿಸಿದ್ದರು ಮತ್ತು ವಹಿಸಿದ್ದಾರೆ.ಈ ಸರ್ದಾರ್ ಸರೋವರ ಅಣೆಕಟ್ಟಿನಿಂದ ನೂರಾರು ವರ್ಷಗಳಿಂದ ಆ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿರುವ ಆದಿವಾಸಿಗಳು ಬೀದಿಗೆ ಬೀಳುತ್ತಾರೆ ಎಂಬ ಮಾನವೀಯ ಕಾಳಜಿಯಿಂದ ಮೇಧಾ ಪಾಟ್ಕರ್ ಅಕ್ಷರ ಗೊತ್ತಿಲ್ಲದ ಆದಿವಾಸಿಗಳನ್ನು ಕಟ್ಟಿಕೊಂಡು ಹೋರಾಡುತ್ತ ಬಂದಿದ್ದಾರೆ. ಮದುವೆಯನ್ನೂ ಆಗದ ದಿಟ್ಟ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರ ನಿಲುವಿನ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ ಅರ್ಬನ್ ನಕ್ಸಲ್ ಎಂದು ಬಹಿರಂಗವಾಗಿ ಟೀಕಿಸುವ ಉದ್ದೇಶವೇನು?

ಹೀಗೆ ಅರ್ಬನ್ ನಕ್ಸಲ್ ಎಂದು ಕರೆದು ಕರೆದು ಆನಂದ ತೇಲ್ತುಂಬ್ಡೆ ಅವರಂಥ ಅಂತರ್‌ರಾಷ್ಟ್ರೀಯ ಖ್ಯಾತಿಯ ಚಿಂತಕನನ್ನು ಜೈಲಿಗೆ ತಳ್ಳಿ ಮೂರು ವರ್ಷಗಳೇ ಗತಿಸಿದವು. ಅವರು ಮಾತ್ರವಲ್ಲ ಅವರಿಗಿಂತ ಮುಂಚೆ ಮತ್ತು ಅವರ ಜೊತೆಗೆ ಕವಿ ವರವರರಾವ್, ಖ್ಯಾತ ನ್ಯಾಯವಾದಿ ಸುಧಾ ಭಾರದ್ವಾಜ್, ಗೌತಮ್ ನವ್ಲಾಖಾ ಅವರಂಥ ಇನ್ನು ಕೆಲವರನ್ನು ಬಂಧಿಸಲಾಗಿದೆ. ಯುಎಪಿಎ ಕಾಯ್ದೆಯನ್ವಯ ಬಂಧಿಸಲ್ಪಟ್ಟ ಇವರ ಮೇಲೆ ಇದುವರೆಗೆ ಆರೋಪ ಪಟ್ಟಿ ಸಲ್ಲಿಸಿಲ್ಲ.ವಿಚಾರಣೆಗೆ ಗುರಿಪಡಿಸಿಲ್ಲ.ಇನ್ನಷ್ಟು ಜನರನ್ನು ಈ ಪಟ್ಟಿ ಗೆ ಸೇರಿಸುವ ಮಸಲತ್ತು ನಡೆಯುತ್ತಲೇ ಇದೆ.
ಸುಪ್ರೀಂ ಕೋರ್ಟ್ ಸದ್ಯಕ್ಕೆ ಮುಂಬೈ ಹೈಕೋರ್ಟಿನ ಆದೇಶವನ್ನು ಅಮಾನತಿನಲ್ಲಿಟ್ಟಿದೆ. ಅಂತಿಮ ತೀರ್ಪು ಬರಬೇಕಾಗಿದೆ. ಆದರೆ ಜೈಲಿನಲ್ಲಿ ಯಾತನೆ ಅನುಭವಿಸುತ್ತಿರುವ ಸಾಯಿಬಾಬಾ ಜೀವಕ್ಕೆ ಧಕ್ಕೆಯಾದರೆ ಯಾರು ಹೊಣೆ. ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್‌ಐಎ) ಬಂಧಿಸಲ್ಪಟ್ಟಿದ್ದ 84 ವಯಸ್ಸಿನ ಸ್ಟ್ಯಾನ್ ಸ್ವಾಮಿ ಅವರ ಸಾವು ನಮ್ಮ ಕಣ್ಣ ಮುಂದಿದೆ.

ಅರ್ಬನ್ ನಕ್ಸಲ್ ಎಂದು ದಿಲ್ಲಿಯ ವಿಶ್ವವಿದ್ಯಾನಿಲಯದ ಪ್ರೊ.ಜಿ.ಎನ್.ಸಾಯಿಬಾಬಾ ಅವರನ್ನು ಎಂಟು ವರ್ಷಗಳ ಹಿಂದೆ ಬಂಧಿಸಿ ನಾಗಪುರದ ಜೈಲಿನ ಅಂಡಾ ಸೆಲ್ ನಲ್ಲಿ ಇಡಲಾಗಿದೆ. ಕಳೆದ ಶುಕ್ರವಾರ ಮುಂಬೈ ಹೈಕೋರ್ಟ್ ಇವರನ್ನು ಬಿಡುಗಡೆ ಮಾಡಲು ಆದೇಶವನ್ನೇನೋ ನೀಡಿದೆ. ಆದರೆ ಮರುದಿನವೇ ಸುಪ್ರೀಂ ಕೋರ್ಟ್ ಅದಕ್ಕೆ ತಡೆ ನೀಡಿದೆ. ಶೇಕಡಾ ತೊಂಬತ್ತರಷ್ಟು ಅಂಗ ವೈಕಲ್ಯರಾದ ಸಾಯಿಬಾಬಾ ಕವಿ,ಚಿಂತಕ, ಉತ್ತಮ ಪ್ರಾಧ್ಯಾಪಕ. ಎದ್ದು ನಿಲ್ಲಲೂ ಇನ್ನೊಬ್ಬರ ಆಸರೆಯನ್ನು ಅವಲಂಬಿಸಿರುವ ಸಾಯಿಬಾಬಾ ಅವರಿಂದ ರಾಷ್ಟ್ರ ದ ಭದ್ರತೆಗೆ ಗಂಡಾಂತರ ಎಂದು ಪ್ರಭುತ್ವದ ಆರೋಪವಾಗಿದೆ.ಅಂತಲೇ ಇವರ ಬಿಡುಗಡೆಯನ್ನು ಪ್ರಶ್ನಿಸಿ ಮಹಾರಾಷ್ಟ್ರದ ಬಿಜೆಪಿ ನಿಯಂತ್ರಿತ ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು.
ಮಾನವ ಹಕ್ಕುಗಳ ಪರವಾಗಿ ಅದರಲ್ಲೂ ವಿಶೇಷವಾಗಿ ನಿರ್ಲಕ್ಷ್ಯಕ್ಕೆ ಒಳಗಾದ ಆದಿವಾಸಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸ್ಟ್ಯಾನ್ ಸ್ವಾಮಿ ಹಲವಾರು ಕಾಯಿಲೆ ಗಳಿಂದ ಬಳಲುತ್ತಿದ್ದರು.ಅನಾರೋಗ್ಯ ದ ಕಾರಣ ತಮಗೆ ಜಾಮೀನು ಕೊಡಬೇಕೆಂದು ಅವರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಸ್ವಾಮಿ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು

ಇದನ್ನು ಅವರ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು.ಸ್ವಾಮಿಯವರ ಕೈಗಳು ನಡುಗುತ್ತಿದ್ದವು. ಕೈಯಲ್ಲಿ ಲೋಟ ಹಿಡಿದುಕೊಂಡು ನೀರು ಕುಡಿಯಲೂ ಆಗುತ್ತಿರಲಿಲ್ಲ. ಅದಕ್ಕಾಗಿ ನೀರು ಕುಡಿಯಲು ಹೀರು ಕೊಳವೆ ( ಸ್ಪ್ರಾ) ಬೇಕೆಂದು ಕೋರಿದ್ದರು. ಈ ಮನವಿಗೆ ಪ್ರತಿಕ್ರಿಯೆ ನೀಡಲು ಎನ್‌ಐಎ ಇಪ್ಪತ್ತು ದಿನ ಸಮಯ ತೆಗೆದುಕೊಂಡಿತು. ನಂತರ ಕೊಳವೆ ಕೊಡಲಾಯಿತು

ಆದರೆ ಅವರ ಮನವಿಗೆ ಸ್ಪಂದಿಸಲು ಇಪ್ಪತ್ತು ದಿನಗಳು ಬೇಕೆ? ಇದಕ್ಕಿಂತ ಕ್ರೌರ್ಯ ಇನ್ಯಾವುದಿದೆ. ಸಾಯಿಬಾಬಾ ಕತೆ ಇದಾದರೆ ಇನ್ನು ಅಂತರ್‌ರಾಷ್ಟ್ರೀಯ ಮಟ್ಟದ ಚಿಂತಕ ಡಾ.ಆನಂದ್ ತೇಲ್ತುಂಬ್ಡೆ, ಗೌತಮ್ ನವ್ಲಾಖಾ, ಸುಧಾ ಭಾರದ್ವಾಜ್ ಮುಂತಾದವರ ಬಿಡುಗಡೆ ಯಾವಾಗ? ಈ ಪ್ರಶ್ನೆಗೆ ಸಮೀಪದಲ್ಲಿ ಉತ್ತರ ಸಿಗುವ ಸಾಧ್ಯತೆ ಇಲ್ಲ.

 ವ್ಯಕ್ತಿಯೊಬ್ಬನಿಗೆ ವಯಸ್ಸಾಗಿದೆ, ಕಾಯಿಲೆಗಳಿವೆ ಎಂಬ ಕಾರಣಕ್ಕಾಗಿ ಶಿಕ್ಷೆಯಿಂದ ವಿನಾಯಿತಿ ನೀಡಬಾರದು ಎಂಬುದೇನೋ ನಿಜ. ಆದರೆ ವೈದ್ಯಕೀಯ ಕಾರಣಕ್ಕಾಗಿ ಜಾಮೀನು ಕೊಡಬಹುದಲ್ಲವೇ? ಸ್ಟ್ಯಾನ್ ಸ್ವಾಮಿ ಯಂತೂ ಜೈಲಿನಲ್ಲೇ ಕೊನೆಯುಸಿರೆಳೆದರು. ಈಗ ಈ ಪ್ರೊ.ಸಾಯಿಬಾಬಾ ಅವರ ಮುಂದಿನ ಗತಿ ಏನು? ಸಾಯಿಬಾಬಾ ಅವರು ಮಾವೋವಾದಿಗಳ ಸಂಬಂಧ ಹೊಂದಿದ್ದಾರೆ, ಅದಕ್ಕಾಗಿ ಅವರನ್ನು ಬಿಡುಗಡೆ ಮಾಡಬಾರದು, ಮಾವೋವಾದಿಗಳ ಮೆದುಳಾಗಿ ಅವರು ಕೆಲಸ ಮಾಡುತ್ತಾರೆ ಎಂಬುದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದ. ಆದರೆ ಸಾಯಿಬಾಬಾ ಅವರ ಪರ ವಕೀಲ ಬಸಂತ್ ಇದನ್ನು ಒಪ್ಪುವುದಿಲ್ಲ. ಸಾಯಿಬಾಬಾ ಅವರು ಶೇ. 90_-95 ರಷ್ಟು ದೈಹಿಕ ನ್ಯೂನತೆ ಹೊಂದಿದ್ದಾರೆ. ಗಾಲಿ ಕುರ್ಚಿಯ ಮೇಲೆ ಚಲಿಸುತ್ತಾರೆ. ಅವರಿಗೆ ಓಡಾಡಲು ಸಾಧ್ಯವಿಲ್ಲ. ಅವರನ್ನು ಮತ್ತೆ ಜೈಲಿಗೆ ಕಳಿಸಬೇಡಿ. ಬೇಕಾದರೆ ಗೃಹ ಬಂಧನದಲ್ಲಿರಿಸಿ. ದೂರವಾಣಿ ಸಂಪರ್ಕ ಕಡಿತಗೊಳಿಸಿ. ಕೋರ್ಟ್ ನಿರ್ದೇಶನಗಳನ್ನು ಅವರು ಪಾಲಿಸುತ್ತಾರೆ, ಅವರು ಮಾವೋವಾದಿಗಳ ಮೆದುಳಾಗಿ ಕೆಲಸ ಮಾಡಿಲ್ಲ ಎಂದು ವಾದಿಸಿದರೂ ಪ್ತಯೋಜನವಾಗಿಲ್ಲ. ಮೆದುಳು ಬಹಳ ಅಪಾಯಕಾರಿ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹೇಳಿದರು.

ಈ ಎಲ್ಲ ವಿದ್ಯಮಾನಗಳ ನಡುವೆ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆದ ಭಾರತ ಜೋಡಿಸುವ ಪಾದಯಾತ್ರೆ ಉತ್ತಮ ಬೆಳವಣಿಗೆಯಾಗಿದೆ. ಈ ಜನಯಾತ್ರೆಗೆ ದೊರೆಯುತ್ತಿರುವ ಬೆಂಬಲ ಭರವಸೆದಾಯಕವಾಗಿದೆ. ಈಗ ದೇಶದ ಮುಂದೆ ಇರುವುದು ಒಂದೇ ಪ್ರಶ್ನೆ. ಅದು ಭಾರತವನ್ನು ಫ್ಯಾಶಿಸ್ಟ್ ಅಪಾಯದಿಂದ ಪಾರು ಮಾಡುವುದು. ಇದೊಂದು ಕಾರಣಕ್ಕಾಗಿಯಾದರೂ ರಾಹುಲ್ ಗಾಂಧಿ ಪಾದಯಾತ್ರೆಯನ್ನು ಆರೋಗ್ಯಕರ ಮನಸ್ಸುಗಳು ಬೆಂಬಲಿಸಬೇಕಾಗಿದೆ. ರೈತ ಕಾರ್ಮಿಕ ಸಂಘಟನೆಗಳು, ದಲಿತ,ಮಹಿಳಾ ಸಂಘಟನೆಗಳು ಈ ಪಾದಯಾತ್ರೆಯಲ್ಲಿ ರಾಹುಲ್ ಜೊತೆಗೆ ಹೆಜ್ಜೆ ಹಾಕಬೇಕಾಗಿದೆ. ಇಡೀ ಭಾರತವನ್ನು ಕಾಲ್ನಡಿಗೆಯಲ್ಲಿ ಮೂರೂವರೆ ಸಾವಿರ ಮೈಲಿ ಸುತ್ತಾಡುವುದು ಹುಡುಗಾಟವಲ್ಲ.

ಅಧಿಕಾರಕ್ಕೆ ಬಂದವರ ಸೈದ್ಧಾಂತಿಕ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ನಾವೆಷ್ಟೇ ಬರೆದರೂ, ಸಾಂಕೇತಿಕ ಪ್ರತಿಭಟನೆಗಳನ್ನು ಮಾಡಿದರೂ ಅದು ಅರಣ್ಯ ರೋದನವಾಗುತ್ತದೆ. ಜನ ಚಳವಳಿಯ ಮೂಲಕ ಪ್ರತಿರೋಧ ಒಡ್ಡುವುದು ಸುಲಭವಲ್ಲ. ಭಾರತೀಯರು ಜಾತಿ, ಮತಗಳ ಆಧಾರದಲ್ಲಿ ಮಿತಿ ಮೀರಿ ವಿಭಜನೆಗೊಂಡಿದ್ದಾರೆ. ಜನಸಮೂಹದ ನಡುವೆ ಧರ್ಮದ ಹೆಸರಿನಲ್ಲಿ ಫ್ಯಾಶಿಸ್ಟ್ ಶಕ್ತಿಗಳು ಸಕ್ರಿಯವಾಗಿವೆ. ಜನಸಾಮಾನ್ಯರು ಕೂಡ ಮತದಾನ ಮಾಡುವಾಗ ತಮ್ಮ ಆರ್ಥಿಕ, ಸಾಮಾಜಿಕ ಸಮಸ್ಯೆಗಳ ಆಧಾರದಲ್ಲಿ ಮತದಾನ ಮಾಡುವುದಿಲ್ಲ. ನಿರುದ್ಯೋಗ ತೊಲಗಲಿ, ಬಡತನ ಹೋಗಲಿ, ಸಮಾನತೆ ಬರಲಿ, ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿ ಎಂದು ಯಾರೂ ಮತದಾನ ಮಾಡುವುದಿಲ್ಲ. ಬದಲಿಗೆ ತನ್ನ ಧರ್ಮ ಅಪಾಯದಲ್ಲಿ ಇದೆ. ನನ್ನ ಜಾತಿಯವನು ಗೆಲ್ಲಬೇಕು ಎಂದು ಮತದಾನ ಮಾಡುತ್ತಾರೆ. ಬಹುಸಂಖ್ಯಾತ ಸಮುದಾಯಗಳಲ್ಲಿ ಇಂಥ ಪ್ರವೃತ್ತಿ ಬೆಳೆದರೆ ಮುಂದೆ ಅದು ಪ್ರಜಾಪ್ರಭುತ್ವಕ್ಕೆ ಕಂಟಕಕಾರಿಯಾಗಿ ಪರಿಣಮಿಸುತ್ತದೆ. ಬಹುತ್ವ ಭಾರತ ಈಗ ಅಂಥ ಗಂಡಾಂತರಕಾರಿ ಸನ್ನಿವೇಶದಲ್ಲಿ ಇದೆ.
ಆದರೆ ಇಂಥ ಕೆಟ್ಟ ದಿನಗಳಲ್ಲಿ ನಮ್ಮೆಲ್ಲರ ಉತ್ತಮ ಬದುಕಿಗಾಗಿ ಚಿಂತಿಸುವ ಜೀವಗಳು ನರಕ ಯಾತನೆ ಅನುಭವಿಸುತ್ತಿರುವಾಗ ಕೆಲವರನ್ನು ಹೊರತುಪಡಿಸಿ ನಮ್ಮ ಬೌದ್ಧಿಕ ಲೋಕ ಜಾಣ ಮೌನ ತಾಳಿರುವುದು ಆತಂಕಕಾರಿ ಸಂಗತಿಯಾಗಿದೆ.
ಈ ದಟ್ಟ ನಿರಾಸೆಯ ದಿನಗಳಲ್ಲೂ ಭರವಸೆಯನ್ನು ಕಳೆದು ಕೊಳ್ಳಬಾರದು. ಇಂದಲ್ಲ ನಾಳೆ ಎಲ್ಲಿಂದಲೋ ಬೆಳಕಿನ ಕಿರಣಗಳು ಬಂದು ಈ ಕಾರ್ಗತ್ತಲನ್ನು ತೊಲಗಿಸಿ ಬಹುತ್ವ ಭಾರತವನ್ನು ಕಾಪಾಡಿ ಮುನ್ನಡೆಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)