varthabharthi


ಪ್ರಚಲಿತ

ಇದು ಖರ್ಗೆ ನಡೆದು ಬಂದ ದಾರಿ

ವಾರ್ತಾ ಭಾರತಿ : 24 Oct, 2022
ಸನತ್ ಕುಮಾರ್ ಬೆಳಗಲಿ

ಕಾಂಗ್ರೆಸ್ ಪಕ್ಷದಲ್ಲಿ ಕೋಮುವಾದಿ ಸಂಘ ಪರಿವಾರವನ್ನು ಖಂಡ ತುಂಡವಾಗಿ ಖಂಡಿಸುವ ಇಬ್ಬರೇ ಇಬ್ಬರು ನಾಯಕರೆಂದರೆ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ಸಿದ್ಧರಾಮಯ್ಯನವರು. ಉಳಿದ ಕಾಂಗ್ರೆಸ್ ನಾಯಕರು ಅಪ್ಪಿತಪ್ಪಿಯೂ ಕೋಮುವಾದಿ ಶಕ್ತಿಗಳ ಅಪಾಯದ ಬಗ್ಗೆ ಮಾತಾಡುವುದಿಲ್ಲ. ಕೆಲವರು ಒಳಗೊಳಗೆ ಅವರೊಂದಿಗೆ ಗುಟ್ಟಿನ ವ್ಯವಹಾರ ಕುದುರಿಸುತ್ತಿರುತ್ತಾರೆ.ಭಾರತದ ಪ್ರಜಾಪ್ರಭುತ್ವದ ರಕ್ಷಾ ಕವಚವಾದ ಸಂವಿಧಾನ ಅಪಾಯ ದಲ್ಲಿ ಇರುವ ಈ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಇದು ಖರ್ಗೆಯವರು ಕೇಳಿ ಪಡೆದ ಸ್ಥಾನವಲ್ಲ. ತಾನಾಗಿ ಬಂದ ಅವಕಾಶ.

ಖರ್ಗೆಯವರು ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆದು ಬಂದುದೆ ಒಂದು ಅಚ್ಚರಿ. ಈಗ ಕಲ್ಯಾಣ ಕರ್ನಾಟಕ ಎಂದು ಕರೆಯಲ್ಪಡುವ ಹೈದರಾಬಾದ್ ಕರ್ನಾಟಕ ಭೂಮಾಲಕ, ಪಾಳೆಯಗಾರಿ ಶಕ್ತಿಗಳ ಪ್ರಾಬಲ್ಯದ ಪ್ರದೇಶ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ವರ್ಣಾಶ್ರಮ ಧರ್ಮದ ಚಟ್ಟ ಕಟ್ಟಲು ಬಹು ದೊಡ್ಡ ಆಂದೋಲನವನ್ನು ನಡೆಸಿದರೂ ಯಶಸ್ವಿಯಾಗಲಿಲ್ಲ. ಮಹಾರಾಷ್ಟ್ರದ ಚಕ್ರಧರ ಸ್ವಾಮಿಯಂತೆ ಬಸವಣ್ಣನವರನ್ನು ಮನುವಾದಿ ಶಕ್ತಿಗಳು ಮುಗಿಸಿದವು. ನಂತರ ಬಸವಣ್ಣನವರ ಅನುಯಾಯಿಗಳೆಂದು ಹೇಳಿಕೊಳ್ಳುವ ವೀರಶೈವ ಲಿಂಗಾಯತ ಮಠಾಧೀಶರು ಸಮುದಾಯದ ಮೇಲೆ ಹಿಡಿತ ಸಾಧಿಸಿದರು. ಹೀಗಾಗಿ ಜಾತಿ ವ್ಯವಸ್ಥೆಯ ಬೇರುಗಳು ಇಲ್ಲಿ ವ್ಯಾಪಕವಾಗಿ ಹರಡಿವೆ. ಇಂಥ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂ ಸಿಂಗ್ ಐದು ದಶಕಗಳ ಕಾಲ ಸೋಲಿಲ್ಲದ ಸರದಾರರಾಗಿ ಮಿಂಚಿದ್ದು ಒಂದು ಅಚ್ಚರಿ.

ಹಾಗೆ ನೋಡಿದರೆ ಮಲ್ಲಿಕಾರ್ಜುನ ಖರ್ಗೆಯವರು ಮೂಲತಃ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಲ್ಲ. ಅವರು ಕಟ್ಟಾ ಅಂಬೇಡ್ಕರ್‌ವಾದಿ. ಬೌದ್ಧ ಧರ್ಮ ಸ್ವೀಕರಿಸಿದವರು. ಈವರೆಗೆ ಚುನಾವಣೆ ಬಂದಾಗಲೂ ಕೂಡ ಯಾವುದೇ ದೇವರ ಗುಡಿಗೆ ಹೋದವರಲ್ಲ. ಸ್ವಾಮಿಗಳ , ಮಠಾಧೀಶರ ಕಾಲಿಗೆ ಬಿದ್ದವರಲ್ಲ. ಇವರ ಆರಂಭದ ರಾಜಕೀಯ ಪ್ರವೇಶ ಬಾಬಾಸಾಹೇಬರ ರಿಪಬ್ಲಿಕನ್ ಪಕ್ಷ. 196768 ರಲ್ಲಿ ಕಾನೂನು ಪದವಿ ಮುಗಿಸಿದ ನಂತರ ಕಲಬುರಗಿಯ ಎಂ.ಎಸ್.ಕೆ. ಮಿಲ್ ಕಾರ್ಮಿಕ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಗಲೇ ಅಲ್ಲಿ ಸಕ್ರಿಯರಾಗಿದ್ದ ಕಮ್ಯುನಿಸ್ಟ್ ಪಕ್ಷದ ನಾಯಕರಾದ ಶ್ರೀನಿವಾಸ ಗುಡಿ, ಗಂಗಾಧರ ನಮೋಶಿ ಮತ್ತು ಸಮಾಜವಾದಿ ನಾಯಕ ಹಾಗೂ ಮಾಜಿ ಸಚಿವ ಎಸ್.ಕೆ.ಕಾಂತಾ ಅವರ ಜೊತೆ ಸೇರಿ ದುಡಿಯುವ ಜನರ ಆಂದೋಲನದಲ್ಲಿ ಪಾಲ್ಗೊಂಡಿದ್ದನ್ನು ಅವರ ಹಳೆಯ ಸಂಗಾತಿಗಳು ಇನ್ನೂ ನೆನಪಿಸುತ್ತಾರೆ.

1969ರಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರು ಬ್ಯಾಂಕ್ ರಾಷ್ಟೀಕರಣ ಮತ್ತು ರಾಜಧನ ರದ್ದತಿಯಂತಹ ಪ್ರಗತಿಪರ ಕಾರ್ಯಕ್ರಮಗಳನ್ನು ಕೈಗೊಂಡರು. ಇದಕ್ಕೆ ಅವರಿಗೆ ಪ್ರೇರಣೆಯಾದವರು ಭಾರತ ಕಮ್ಯುನಿಸ್ಟ್ ಪಕ್ಷದಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ಮೋಹನ್ ಕುಮಾರ್ ಮಂಗಳಂ,ರಘುನಾಥ ರೆಡ್ಡಿ, ಮುಂಬೈನ ರಜನಿ ಪಟೇಲ್, ಕೆ.ಆರ್.ಗಣೇಶ್, ಪಿ.ಎನ್.ಹಕ್ಸರ್ ಮುಂತಾದವರು.ಇಂದಿರಾ ಗಾಂಧಿಯವರ ಈ ಕ್ರಮವನ್ನು ವಿರೋಧಿಸಿ ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನಿಜಲಿಂಗಪ್ಪ, ಅತುಲ್ಯ ಘೋಷ್, ಎಸ್.ಕೆ.ಪಾಟೀಲ, ನೀಲಂ ಸಂಜೀವರೆಡ್ಡಿ ಮೊದಲಾದವರು ಬೇರೆಯಾದರು. ಕಾಂಗ್ರೆಸ್ (ಸಿಂಡಿಕೇಟ್) ಮತ್ತು ಕಾಂಗ್ರೆಸ್ (ಇಂಡಿಕೇಟ್) ಎಂದು ಎರಡಾಯಿತು.ಇಂಥ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಿಜಲಿಂಗಪ್ಪ ನವರ ನೇತೃತ್ವದ ಕಾಂಗ್ರೆಸ್ ಪ್ರಬಲವಾಗಿತ್ತು.

ಕರ್ನಾಟಕದಲ್ಲಿ ಇಂದಿರಾ ಗಾಂಧಿಯವರು ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಹೊಣೆ ಹೊತ್ತವರು ದೇವರಾಜ ಅರಸು ಅವರು.ಅವರೊಂದಿಗೆ ಯಾವ ಪ್ರಭಾವಿ ನಾಯಕರೂ ಇರಲಿಲ್ಲ. ಆಗ ಕರ್ನಾಟಕದ ರಾಜಕಾರಣವೆಂದರೆ ಲಿಂಗಾಯತ ಮತ್ತು ಒಕ್ಕಲಿಗರ ರಾಜಕಾರಣ. ಒಮ್ಮೆ ಅವರು ಮುಖ್ಯಮಂತ್ರಿ, ಇನ್ನೊಮ್ಮೆ ಇವರು ಮುಖ್ಯಮಂತ್ರಿ. ಈ ಬಲಿಷ್ಠ ಜಾತಿಗಳ ಪ್ರಾಬಲ್ಯದ ಕೋಟೆಯನ್ನು ಭೇದಿಸಿ ಹೊಸ ಪಕ್ಷವನ್ನು ಕಟ್ಟುವ ಸವಾಲು ದೇವರಾಜ ಅರಸು ಅವರ ಮುಂದಿತ್ತು. ಆಗ ಅರಸು ಬಳಸಿದ್ದು ಸಾಮಾಜಿಕ ನ್ಯಾಯದ ಅಸ್ತ್ರ. ಆವರೆಗೆ ರಾಜಕಾರಣದ ಎಬಿಸಿಡಿ ಗೊತ್ತಿಲ್ಲದ ನಿರ್ಲಕ್ಷಿತ ಸಮುದಾಯಗಳ ನಡುವಿನಿಂದ ಹೊಸ ನಾಯಕರನ್ನು ಮುಂಚೂಣಿಗೆ ತರಲು ದೇವರಾಜ ಅರಸು ಕಾರ್ಯೋನ್ಮುಖರಾದರು. ಆಗ ಅವರ ಕಣ್ಣಿಗೆ ಬಿದ್ದವರು ಕಾನೂನು ಪದವೀಧರ ಮಲ್ಲಿಕಾರ್ಜುನ ಖರ್ಗೆ ಮತ್ತು ಕಲಬುರಗಿ ನಗರ ಪಾಲಿಕೆಯ ಕಮ್ಯುನಿಸ್ಟ್ ಸದಸ್ಯರಾಗಿದ್ದ ಧರಂ ಸಿಂಗ್. ಅರಸು ಹಿಂದೆ ಮುಂದೆ ನೋಡಲಿಲ್ಲ. 1972 ರ ವಿಧಾನಸಭಾ ಚುನಾವಣೆಯಲ್ಲಿ ಗುರುಮಠಕಲ್‌ನಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಜೇವರಗಿಯಿಂದ ಧರಂ ಸಿಂಗ್ ಅವರಿಗೆ ಪಕ್ಷದ ಟಿಕೆಟ್ ನೀಡಿ ಚುನಾವಣಾ ಕಣಕ್ಕಿಳಿಸಿದರು. ಅದು ಇಂದಿರಾಗಾಂಧಿಯ ಕಾಲ.ಎಲ್ಲ ಜಾತಿ, ಮತ, ಹಣದ ಪ್ರಭಾವವನ್ನು ಮೀರಿ ಇಂದಿರಾ ಗಾಳಿ ಬಿರುಗಾಳಿಯಾಗಿ ಬೀಸುತ್ತಿತ್ತು. ಆ ಗಾಳಿಯಲ್ಲಿ ಗೆದ್ದು ವಿಧಾನಸಭೆಯನ್ನು ಪ್ರವೇಶಿಸಿದ ಖರ್ಗೆ ಮತ್ತು ಧರಂ ಸಿಂಗ್ ಮತ್ತೆ ತಿರುಗಿ ನೋಡಲಿಲ್ಲ.

ಮುಂದಿನದು ಎಲ್ಲರಿಗೂ ಗೊತ್ತಿರುವ ಸಂಗತಿ. ಖರ್ಗೆ ಬೆಳೆಯುತ್ತ, ಎತ್ತರೆತ್ತರಕ್ಕೆ ಏರುತ್ತಲೇ ಹೋದರು. ಅಧಿಕಾರ ರಾಜಕಾರಣದಲ್ಲಿ ಇದ್ದರೂ ನಿರಂತರ ಅಧ್ಯಯನ ಶೀಲತೆ, ಬದ್ಧತೆ, ದಕ್ಷತೆ, ಆಡಳಿತದ ಪರಿಣಿತಿ ಖರ್ಗೆಯವರನ್ನು ಮುನ್ನಡೆಸಿದವು. ಅಸ್ಪಶ್ಯ ಅಂದರೆ ಮನೆ ಬಾಡಿಗೆಗೂ ಕೊಡದ ಭಾಗದಲ್ಲಿ ಎಲ್ಲಾ ಸಮುದಾಯಗಳ ಮತ ಪಡೆದು ಜಾತಿ ಪ್ರಾಬಲ್ಯದ ಕೋಟೆಯನ್ನು ಮುರಿದು ಜನ ನಾಯಕರಾಗಿ ವಿಜ್ರಂಭಿಸಿದರು.

ಕನ್ನಡ, ಹಿಂದಿ, ಉರ್ದು, ಇಂಗ್ಲಿಷ್, ಮರಾಠಿ, ತೆಲಗು ಹೀಗೆ ಐದಾರು ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಖರ್ಗೆಯವರು ಅಧಿಕಾರದಲ್ಲಿರುವಾಗ ಎಂದೂ ಸ್ವಜನ ಪಕ್ಷಪಾತ ಮಾಡಲಿಲ್ಲ. ಒಂದೆರಡು ಬಾರಿ ಮುಖ್ಯ ಮಂತ್ರಿ ಕುರ್ಚಿ ಅವರ ಸಮೀಪ ಬಂದು ಹೋಯಿತು. ದಲಿತ ಎಂಬ ಕಾರಣಕ್ಕೆ ತನಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುವುದಾದರೆ ಬೇಡ. ಕಾಂಗ್ರೆಸ್ ಪಕ್ಷಕ್ಕಾಗಿ ಎಲ್ಲ ಜನರಿಗಾಗಿ 50 ವರ್ಷ ದುಡಿದುದಕ್ಕೆ ಈ ಹುದ್ದೆ ನೀಡಿದರೆ ಓಕೆ ಎಂದು ನೇರವಾಗಿ ಹೇಳಿದರು.

ಮಲ್ಲಿಕಾರ್ಜುನ ಖರ್ಗೆಯವರನ್ನು ನಮ್ಮಂಥವರು ಇಷ್ಟ ಪಡಲು ಕಾರಣ ಅಧಿಕಾರಕ್ಕಾಗಿ ಅವರೆಂದೂ ರಾಜಿ ಮಾಡಿಕೊಳ್ಳಲಿಲ್ಲ. ಕಾಂಗ್ರೆಸ್ ಪಕ್ಷ ಗೆದ್ದಾಗಲೂ ಸೋತಾಗಲೂ ಅದರಲ್ಲೇ ಉಳಿದರು.ಇತ್ತೀಚಿನ ವರ್ಷಗಳಲ್ಲಿ ನಾನು ಕಲಬುರಗಿಯಲ್ಲಿದ್ದು ಅವರನ್ನು ಹತ್ತಿರದಿಂದ ನೋಡಿದ್ದೇನೆ.ಅವರು ನಿರ್ಮಿಸಿದ ದಕ್ಷಿಣ ಭಾರತದ ಅತ್ಯಂತ ದೊಡ್ಡ ಬುದ್ಧ ವಿಹಾರ, ಕಲಬುರಗಿ ಗೆ ತಂದ ಇಎಸ್‌ಐ ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾನಿಲಯ, ಎಲ್ಲಕ್ಕಿಂತ ಮುಖ್ಯವಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು 371 (ಜೆ) ವ್ಯಾಪ್ತಿಗೆ ಇಡೀ ಕಲ್ಯಾಣ ಕರ್ನಾಟಕವನ್ನು ತಂದುದು, ಇದರಿಂದ ಈ ಭಾಗದ ಏಳು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರೆತ ಮೀಸಲಾತಿ. ಅದಕ್ಕಾಗಿ ಸಂಸತ್ತಿನಲ್ಲಿ ಬಹುಮತವಿಲ್ಲದಿದ್ದಾಗಲೂ ಎಲ್ಲಾ ಪಕ್ಷಗಳ ಸಂಸದರೂ ಮನವೊಲಿಸಿ ಸಂಸತ್ತಿನಲ್ಲಿ ವಿಧೇಯಕ ಅಂಗೀಕಾರವಾಗುವಂತೆ ಮಾಡಿದ್ದು ಸಣ್ಣ ಸಾಧನೆಯಲ್ಲ.

ಮೊದಲೇ ಹೇಳಿದಂತೆ ಖರ್ಗೆಯವರು ಮೂಢ ನಂಬಿಕೆ , ಕಂದಾಚಾರಗಳ ಕಡು ವಿರೋಧಿ. ರಾಹುಕಾಲ, ಗುಳಿಕಕಾಲ ನೋಡಿ ಅವರೆಂದೂ ನಾಮಪತ್ರ ಸಲ್ಲಿಸಿದವರಲ್ಲ. ಅವರ ಮನೆಯಲ್ಲಿ ಪತ್ನಿ, ಮತ್ತು ಸೊಸೆಯಂದಿರು ದೇವರ ಪೂಜೆ ಮಾಡಿದರೂ ಅದಕ್ಕೆ ಖರ್ಗೆಯವರು ಅಡ್ಡಿಪಡಿಸುವುದಿಲ್ಲ. ಅವರ ವೈಯಕ್ತಿಕ ಸ್ವಾತಂತ್ರಕ್ಕೆ ಧಕ್ಕೆ ತರುವುದಿಲ್ಲ.

ಹೈದರಾಬಾದ್ ಕರ್ನಾಟಕದಲ್ಲಿ ಏನೆಲ್ಲಾ ಕಸರತ್ತು ಮಾಡಿದರೂ ಭಾಗವತರು ಬಂದು ಹೋದರೂ ಕೋಮುವಾದಿ ಶಕ್ತಿಗಳು ಬಾಲ ಬಿಚ್ಚಲು ಈವರೆಗೆ ಸಾಧ್ಯವಾಗಿಲ್ಲ. ಇದಕ್ಕೆ ಖರ್ಗೆಯವರ ಪ್ರಭಾವವೂ ಒಂದು ಕಾರಣ. ಇದರ ಜೊತೆ ಬಸವಣ್ಣನವರು ಮತ್ತು ಬಂದೇ ನವಾಝರ ಕಾಲದಿಂದಲೂ ಬೆಳೆದು ಬಂದ ಸೌಹಾರ್ದ ಪರಂಪರೆ ನಂತರ ನಲವತ್ತರ ದಶಕದಲ್ಲಿ ಅಂಬೇಡ್ಕರ್ ಅನುಯಾಯಿ ಬಿ.ಶ್ಯಾಮಸುಂದರ್ ಅವರ ಪ್ರಭಾವ ಇಲ್ಲಿ ದಟ್ಟವಾಗಿರುವುದರಿಂದ ಇಲ್ಲಿ ಕೋಮು ವಿಭಜನೆ ಸುಲಭವಲ್ಲ.
ಮಲ್ಲಿಕಾರ್ಜುನ ಖರ್ಗೆಯವರು ಎಂದಿಗೂ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಹೈಕಮಾಂಡ್ ದಿಲ್ಲಿಗೆ ಬರಲು ಆಹ್ವಾನಿಸಿದ ಕೂಡಲೇ ಲೋಕಸಭೆಗೆ ಸ್ಪರ್ಧಿಸಿ ಗೆದ್ದು ಕೇಂದ್ರ ಕಾರ್ಮಿಕ ಮಂತ್ರಿಯಾಗಿ ಹಾಗೂ ರೈಲ್ವೆ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಆಗ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದರು. 2014 ರಲ್ಲಿ ಕಾಂಗ್ರೆಸ್ ಅಂದರೆ ಯುಪಿಎ ಪರಾಭವಗೊಂಡಾಗ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು. ಆಗ 55 ಸದಸ್ಯ ಬಲ ಕಾಂಗ್ರೆಸ್ ಪಕ್ಷಕ್ಕೆ ಇದ್ದಿದ್ದರೆ ಖರ್ಗೆಯವರು ಲೋಕಸಭೆಯಲ್ಲ್ಲಿ ಪ್ರತಿಪಕ್ಷ ನಾಯಕರಾಗುತ್ತಿದ್ದರು. ಆದರೆ ಕೇವಲ 44 ಸ್ಥಾನಗಳನ್ನು ಗೆದ್ದುಕೊಂಡಿದುದರಿಂದ ಖರ್ಗೆಯವರು ಸದನದಲ್ಲಿ ಕಾಂಗ್ರೆಸ್ ಗುಂಪಿನ ನಾಯಕರಾಗಬೇಕಾಯಿತು.

ಲೋಕಸಭೆಯಲ್ಲಿ ಕಾಂಗ್ರೆಸ್ ಗುಂಪಿನ ನಾಯಕರಾಗಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅಸ್ಖಲಿತವಾಗಿ ಮಾತಾಡುತ್ತಿದ್ದ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳುತ್ತ ಬಂದಿದ್ದಾರೆ. ಒಮ್ಮೆ ಬಿಜೆಪಿ ಮಂತ್ರಿಯೊಬ್ಬರು ಗೋಮಾಂಸ ತಿನ್ನುವವರು ದೇಶ ಬಿಟ್ಟು ಹೋಗಲಿ ಎಂದಾಗ ತಿರುಗೇಟು ನೀಡಿದ ಖರ್ಗೆಯವರು ನಾವು ಈ ದೇಶದ ಮೂಲ ನಿವಾಸಿಗಳು, ನಾವೇಕೆ ದೇಶ ಬಿಟ್ಟು ಹೋಗಬೇಕು? ಹೊರಗಿನಿಂದ ಬಂದ ನೀವು ಹೋಗಿ ಎಂದು ಆರ್ಭಟಿಸಿದರು.

ಇನ್ನೊಮ್ಮೆ ರಾಮ ಜನ್ಮಭೂಮಿ ಬಗ್ಗೆ ಮಾತಾಡುತ್ತಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ ಇದು ರಾಮನ ದೇಶ, ರಾಮನ ಪರಂಪರೆ ಎಂದೆಲ್ಲಾ ರೈಲು ಬಿಡತೊಡಗಿದಾಗ ಕೆರಳಿ ನಿಂತ ಖರ್ಗೆಯವರು ಬರೀ ರಾಮನ ಬಗ್ಗೆ ಹೇಳ್ತೀರಿ, ಶಂಭೂಕನ ಬಗ್ಗೆ ಹೇಳ್ರಿ, ಶಂಭೂಕನನ್ನು ಕೊಂದವರು ಯಾರು? ಏಕಲವ್ಯನ ಬೆರಳನ್ನು ಗುರುದಕ್ಷಿಣೆಯಾಗಿ ಪಡೆದವರು ಯಾರು? ಎಂದು ವಾಪಸ್ ಜಾಡಿಸಿದಾಗ ಇಡೀ ಸದನದಲ್ಲಿ ಮೌನ ಆವರಿಸಿತು.

 ಕಾಂಗ್ರೆಸ್ ಪಕ್ಷದಲ್ಲಿ ಕೋಮುವಾದಿ ಸಂಘ ಪರಿವಾರವನ್ನು ಖಂಡ ತುಂಡವಾಗಿ ಖಂಡಿಸುವ ಇಬ್ಬರೇ ಇಬ್ಬರು ನಾಯಕರೆಂದರೆ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ಸಿದ್ಧರಾಮಯ್ಯನವರು. ಉಳಿದ ಕಾಂಗ್ರೆಸ್ ನಾಯಕರು ಅಪ್ಪಿತಪ್ಪಿಯೂ ಕೋಮುವಾದಿ ಶಕ್ತಿಗಳ ಅಪಾಯದ ಬಗ್ಗೆ ಮಾತಾಡುವುದಿಲ್ಲ. ಕೆಲವರು ಒಳಗೊಳಗೆ ಅವರೊಂದಿಗೆ ಗುಟ್ಟಿನ ವ್ಯವಹಾರ ಕುದುರಿಸುತ್ತಿರುತ್ತಾರೆ.

ಇಂಥ ಸೂಕ್ಷ್ಮಸನ್ನಿವೇಶದಲ್ಲಿ ಭಾರತದ ಅತ್ಯಂತ ಹಿರಿಯ ಪಕ್ಷವಾದ ಕಾಂಗ್ರೆಸ್‌ನ ಸಾರಥ್ಯ ವಹಿಸಿರುವ ಮಲ್ಲಿಕಾರ್ಜುನ ಖರ್ಗೆಯವರು ಮೊದಲು ಪಕ್ಷದ ಶುದ್ಧೀಕರಣ ಕಾರ್ಯಕ್ಕೆ ಮುಂದಾಗಲಿ. ಒಳ ನುಸುಳಿರುವ ಕೋಮುವಾದಿ, ಮನುವಾದಿ ಶಕ್ತಿಗಳನ್ನು ಹಿಡಿದು ಹೊರ ದಬ್ಬಲಿ. ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಕೆಲ ವರ್ಷಗಳಿಂದ ಅನುಸರಿಸುತ್ತ ಬಂದ ಸೌಮ್ಯ ಹಿಂದುತ್ವ ನೀತಿಗೆ ತಿಲಾಂಜಲಿ ನೀಡಿ ಮತ್ತೆ ಗಾಂಧಿ, ನೆಹರೂ, ಅಂಬೇಡ್ಕರ್ ವಿಚಾರಗಳತ್ತ ಹೊರಳಲಿ. ಪಕ್ಷದ ಕಾರ್ಯಕರ್ತರಿಗೆ ಅಧ್ಯಯನ ಶಿಬಿರ, ತರಬೇತಿ ಶಿಬಿರಗಳನ್ನು ನಡೆಸಲಿ.

ಅಯೋಧ್ಯೆಯ ರಾಮ ಜನ್ಮಭೂಮಿಯ ಬಗ್ಗೆ ಗೊಂದಲಕಾರಿ ನಿಲುವನ್ನು ಕಾಂಗ್ರೆಸ್ ಕೈ ಬಿಡಲಿ. ಕಳೆದ ವರ್ಷ ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆದಾಗ ಕಾಂಗ್ರೆಸ್‌ನ ಕೆಲ ಶಾಸಕರು ( ಉದಾಹರಣೆಗೆ ಜಮಖಂಡಿ ಶಾಸಕರು) ಕೇಸರಿ ಶಾಲು ಹಾಕಿ ಕೋಮುವಾದಿ ಸಂಘಟನೆಗಳ ಜೊತೆ ಸೇರಿ ಮೆರವಣಿಗೆ ನಡೆಸಿದರು. ಇಂಥದಕ್ಕೆಲ್ಲ ಇನ್ನು ಮುಂದೆ ಖರ್ಗೆಯವರು ಅವಕಾಶ ನೀಡದಿರುವುದು ಸೂಕ್ತ.
ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ. ಅವರ ನೇತೃತ್ವದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಖರ್ಗೆಯವರು ಭಾರತದ ಪ್ರಧಾನ ಮಂತ್ರಿ ಯಾಗಲಿ ಎಂಬುದು ಭಾರತದ ಬಹುಜನರ ಆಶಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)