varthabharthi


ಕಾಲಮಾನ

ಅಂಕಣಕಾರ ಇಯಾನ್ ಜಾಕ್‌ರನ್ನು ಸ್ಮರಿಸುತ್ತಾ...

ವಾರ್ತಾ ಭಾರತಿ : 5 Nov, 2022
ರಾಮಚಂದ್ರ ಗುಹಾ

ಭಾರತದಲ್ಲಿ ಮತ್ತು ಬ್ರಿಟನ್‌ನಲ್ಲಿಯೂ, ಹೆಚ್ಚಿನ ಪತ್ರಿಕಾ ಅಂಕಣಕಾರರು (ಪುರುಷರು ಮಾತ್ರವಲ್ಲ) ವಯಸ್ಸಾಗುತ್ತಿದ್ದಂತೆಯೇ ಅತಿರೇಕದ ಪ್ರತಿಷ್ಠೆಯನ್ನು ಬೆಳೆಸಿಕೊಳ್ಳುತ್ತಾರೆ. ಇದಕ್ಕೆ ಇಯಾನ್ ಜಾಕ್ ಮಾತ್ರ ಒಂದು ಅಪವಾದ. ಅವರ ಬರಹಗಳು ಅವರ 30ರ ವಯಸ್ಸಿನಲ್ಲಿದ್ದಷ್ಟೇ 70ರ ವಯಸ್ಸಿನಲ್ಲೂ ತಾಜಾ ಮತ್ತು ಸ್ಪಷ್ಟವಾಗಿದ್ದವು. ಕ್ಲೈಡ್ ನದಿಯ ಕುರಿತು ಅವರು ಬರೆಯುತ್ತಿದ್ದ ಪುಸ್ತಕ ಪೂರ್ಣಗೊಂಡಿಲ್ಲವಾದರೂ, ಅವರ ಇತರ ಬರಹಗಳು ಎಷ್ಟೊಂದು ಶ್ರೀಮಂತ ಮತ್ತು ವೈವಿಧ್ಯಮಯವಾಗಿವೆಯೆಂದರೆ, ಯುವ ಹಾಗೂ ಉತ್ಸಾಹಿ ಸಂಪಾದಕನೊಬ್ಬ ಅವರ ಕೃತಿಗಳ ಹಲವಾರು ಸಂಪುಟಗಳನ್ನು ಸುಲಭವಾಗಿ ಪ್ರಕಟಿಸಬಹುದಾಗಿದೆ. ಜೊತೆಗೆ, ಅವರ ಆಯ್ದ ಪತ್ರಗಳನ್ನು ಒಳಗೊಂಡ ಪುಸ್ತಕವೊಂದನ್ನೂ ಪ್ರಕಟಿಸಬಹುದಾಗಿದೆ.

ನನ್ನ ಬದುಕಿನಲ್ಲಿ ಹಲವಾರು ಅಸಾಮಾನ್ಯ ವ್ಯಕ್ತಿಗಳನ್ನು ಭೇಟಿಯಾಗಿದ್ದೇನೆ. ಅವರೆಲ್ಲ ವಿದ್ವಾಂಸರಾಗಿ, ಲೇಖಕರಾಗಿ, ಕಲಾವಿದರಾಗಿ, ಕ್ರೀಡಾಪಟುಗಳಾಗಿ, ವಿಜ್ಞಾನಿಗಳಾಗಿ, ಉದ್ಯಮಿಗಳಾಗಿ, ರಾಜಕಾರಣಿಗಳಾಗಿ ಮತ್ತು ಸಾಮಾಜಿಕ ಹೋರಾಟಗಾರರಾಗಿ ಸಾಧನೆಗಳನ್ನು ಮಾಡಿದವರು. ಇವರ ಪೈಕಿ ಒಬ್ಬರೂ ಬಿಡದೆ ಎಲ್ಲರೂ ಅತ್ಯುನ್ನತ ಮಟ್ಟದ ಆತ್ಮ-ಪ್ರಶಂಸೆಯ ಸ್ವಭಾವವನ್ನು ಹೊಂದಿದ್ದಾರೆ. ಹಿಂದಿ ಭಾಷೆಯಲ್ಲಿ ಇದಕ್ಕೊಂದು ನುಡಿಗಟ್ಟಿದೆ- ‘ಅಪ್‌ನೇ ಕೋ ಬಹುತ್ ಸಮಝ್ತೇ ಹೈಂ’ (ಅವನಿಗೆ ತಲೆಯಲ್ಲಿ ತುಂಬಾ ಇದೆ!). ನನಗೆ ಗೊತ್ತಿರುವ ಇಂಥವರ ಪೈಕಿ ಕೆಲವರು ತಮ್ಮ ಸಾಧನೆಗಳ ಬಗ್ಗೆ ಖುಲ್ಲಂ ಖುಲ್ಲಾ ಜಂಭ ಕೊಚ್ಚಿಕೊಳ್ಳುತ್ತಾರೆ. ಇತರರು ಒಂದಲ್ಲ ಒಂದು ರೀತಿಯಲ್ಲಿ ‘ನಯವಾಗಿ ಜಂಭ ಕೊಚ್ಚಿಕೊಳ್ಳುತ್ತಾರೆ’. ಜಂಭ ಕೊಚ್ಚಿಕೊಳ್ಳುವ ಅವರ ವಿಧಾನ ಯಾವುದೇ ಇದ್ದರೂ, ನಮ್ಮನ್ನು ಮೊದಲ ಬಾರಿಗೆ ಭೇಟಿಯಾದ ಕೆಲವೇ ನಿಮಿಷಗಳಲ್ಲಿ, ಅವರು ತಮ್ಮ ಪ್ರಾಮುಖ್ಯತೆಯನ್ನು ನಮಗೆ ಮನದಟ್ಟು ಮಾಡಿಸುತ್ತಾರೆ!

ಈವರೆಗೆ ನಾನು ಹಲವು ನೂರು ಯಶಸ್ವಿ ಅಥವಾ ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿಯಾಗಿದ್ದೇನೆ. ಅವರೆಲ್ಲರ ಪೈಕಿ ಮೇಲಿನ ನಿಯಮಕ್ಕೆ ಅಪವಾದವೆಂದು ನನಗೆ ಅನಿಸಿದವರು ಇಬ್ಬರು ಮಾತ್ರ- ಒಬ್ಬರು ಕ್ರಿಕೆಟಿಗ ಜಿ. ಆರ್. ವಿಶ್ವನಾಥ್; ಇನ್ನೊಬ್ಬರು ಲೇಖಕ ಇಯಾನ್ ಜಾಕ್. ಜಾಕ್ ಕಳೆದ ವಾರ ನಿಧನರಾದರು. ವಿಶ್ವನಾಥ್‌ರಂತೆ ಇಯಾನ್ ಕೂಡ ಅಗಾಧ ವೃತ್ತಿಪರ ಸಾಧನೆಗಳ ಜೊತೆಗೆ ಅಸಾಧಾರಣ ವೈಯಕ್ತಿಕ ಸಭ್ಯತೆಯನ್ನು ಮೈಗೂಡಿಸಿಕೊಂಡವರು. ಅವರು ತನ್ನ ತಲೆಮಾರಿನ ಅತ್ಯಂತ ಶ್ರೇಷ್ಠ ಅಂಕಣಕಾರ ಮತ್ತು ಸಾಹಿತ್ಯ ಸಂಪಾದಕ ಆಗಿದ್ದರು. ಅದೇ ವೇಳೆ, ಅತ್ಯುತ್ತಮ ಹಾಗೂ ಅತ್ಯಂತ ದಯಾಳು ಮಾನವನಾಗಿದ್ದರು. ಅವರು ಏಕಕಾಲದಲ್ಲಿ ಇವೆರಡೂ ಆಗಿದ್ದರು. ಅವರ ಅಂಕಣಗಳನ್ನು ಓದುವುದು ಅತ್ಯಂತ ಸಂತೋಷದಾಯಕ ಅನುಭವವಾಗಿತ್ತು. ಅವರ ಪರಿಚಯ ಹೊಂದಿರುವುದು ಆಹ್ಲಾದಕರ ಮತ್ತು ಹೆಮ್ಮೆಯ ಸಂಗತಿಯಾಗಿತ್ತು.

ಸ್ಕಾಟ್‌ಲ್ಯಾಂಡ್‌ನ ಕೌಟುಂಬಿಕ ಹಿನ್ನೆಲೆ ಹೊಂದಿದ್ದ ಇಯಾನ್ ಜಾಕ್ ಬ್ರಿಟಿಷ್ ಮನೋಭಾವ ಹೊಂದಿದ್ದರು. ಅವರು ಭಾರತದ ಬಗ್ಗೆ ಸುದೀರ್ಘ ಆಸಕ್ತಿ ಬೆಳೆಸಿದ್ದರು. ಅವರು ಮೊದಲು ಭಾರತಕ್ಕೆ ಬಂದದ್ದು 1970ರ ದಶಕದಲ್ಲಿ ವರದಿಗಾರನಾಗಿ. ಆಗ ಅವರು ‘ಸಂಡೇ ಟೈಮ್ಸ್’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಬಳಿಕವೂ ಹಲವು ಬಾರಿ ಅವರು ಭಾರತಕ್ಕೆ ಬಂದರು. ಅವರ ಆತ್ಮೀಯ ಮಿತ್ರರ ಪೈಕಿ ಇಬ್ಬರು ಭಾರತೀಯರಾಗಿದ್ದರು- ಒಬ್ಬರು ಮಹಿಳಾವಾದಿ ಪ್ರಕಾಶಕಿ ಊರ್ವಶಿ ಬುಟಾಲಿಯ ಮತ್ತು ಇನ್ನೊಬ್ಬರು ಸಾಕ್ಷ್ಯಚಿತ್ರ ನಿರ್ಮಾಪಕಿ ನಸ್ರೀನ್ ಮುನ್ನಿ ಕಬೀರ್. ಅವರು ಬಂಗಾಳ ಮತ್ತು ಬಂಗಾಳೀಯರನ್ನು ಇಷ್ಟಪಟ್ಟಿದ್ದರು. ಅವರು ಭಾರತೀಯ ರೈಲುಗಳಲ್ಲಿ ಪ್ರಯಾಣಿಸುವುದನ್ನು ಮತ್ತು ಭಾರತದ ಸಣ್ಣ ಪಟ್ಟಣಗಳನ್ನು ಸಂದರ್ಶಿಸುವುದನ್ನು ಇಷ್ಟಪಟ್ಟಿದ್ದರೂ, ‘ಬಹುಶಃ ಬದುಕಲು ಕೋಲ್ಕತಾವು ತನ್ನದೇ ಆದ ವಿಚಿತ್ರ ರೀತಿಯಲ್ಲಿ ಅತ್ಯಂತ ಆಸಕ್ತಿದಾಯಕ ಭಾರತೀಯ ನಗರವಾಗಿದೆ (ಒಂದಷ್ಟು ಹಣ ಇದ್ದರೆ)’ ಎಂಬ ನಿಲುವನ್ನು ಹೊಂದಿದ್ದರು ಹಾಗೂ ಆ ನಿಲುವಿಗೆ ಕೊನೆಯವರೆಗೂ ಅಂಟಿಕೊಂಡಿದ್ದರು. ತನ್ನ ಈ ಅಭಿಪ್ರಾಯವನ್ನು ಅವರು ನನಗೆ ಬರೆದ ಪತ್ರವೊಂದರಲ್ಲಿ ವ್ಯಕ್ತಪಡಿಸಿದ್ದಾರೆ.

1990ರ ದಶಕದ ಕೊನೆಯಲ್ಲಿ, ನನ್ನನ್ನು ಮೊದಲ ಬಾರಿಗೆ ಇಯಾನ್ ಜಾಕ್ ಮತ್ತು ಅವರ ಪತ್ನಿ ಲಿಂಡಿ ಶಾರ್ಪ್‌ಗೆ ಪರಿಚಯಿಸಿದ್ದು ಮುನ್ನಿ ಕಬೀರ್. ಬಳಿಕ ನಾವು ಲಂಡನ್ ಮತ್ತು ಬೆಂಗಳೂರುಗಳಲ್ಲಿ ಹಲವು ಬಾರಿ ಭೇಟಿಯಾದೆವು. ಅದೂ ಅಲ್ಲದೆ, ಇತರ ಸ್ಥಳಗಳಲ್ಲಿ ಏಕಕಾಲದಲ್ಲಿ ನಾವಿಬ್ಬರೂ ಇರುವುದು ಪರಸ್ಪರರಿಗೆ ತಿಳಿದಾಗ ಅಲ್ಲಿಯೂ ಭೇಟಿಯಾದೆವು. ಸಾಕಷ್ಟು ನಿಯಮಿತ ಪತ್ರ ವ್ಯವಹಾರವನ್ನೂ ನಡೆಸಿಕೊಂಡು ಬಂದೆವು.2014ರ ಅಕ್ಟೋಬರ್‌ನಲ್ಲಿ, ಗಾಂಧೀಜಿಯ ಆತ್ಮಚರಿತ್ರೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾಗ, ನಾನು ಅವರಿಗೆ ಪತ್ರವೊಂದನ್ನು ಬರೆದು ನನ್ನ ಸಂದೇಹವೊಂದನ್ನು ಮುಂದಿಟ್ಟೆ: ‘‘೧೯೨೧ರಲ್ಲಿ ಮಹಾತ್ಮಾ ಗಾಂಧೀಜಿ ಮೊದಲ ಬೃಹತ್ ಅಸಹಕಾರ ಚಳವಳಿಯನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ, ಗಾಂಧೀಜಿ ಕುರಿತು ಬ್ರಿಟಿಷ್ ಪತ್ರಿಕೆಗಳಲ್ಲಿ ಪುಂಖಾನುಪುಂಖ ಸಂಶಯಾತ್ಮಕ ಅಥವಾ ನಿಂದನಾತ್ಮಕ ಅಭಿಪ್ರಾಯಗಳು ವ್ಯಕ್ತವಾದವು. ಆದರೆ, ಅದೇ ಸಮಯದಲ್ಲಿ ‘ಗ್ಲಾಸ್ಗೋ ಹೆರಾಲ್ಡ್’ ಎಂಬ ಪತ್ರಿಕೆಯಲ್ಲಿ ಗಾಂಧಿ ಬಗ್ಗೆ ಅತ್ಯಂತ ವಿಚಾರಪ್ರಚೋದಕ ಮತ್ತು ಸಂತುಲಿತ ಅಭಿಪ್ರಾಯಗಳು ವ್ಯಕ್ತವಾದವು. ಅದು ಯಾವ ಮಾದರಿಯ ಪತ್ರಿಕೆಯಾಗಿತ್ತು? ಪ್ರಗತಿಪರವೇ, ಎಡಪಂಥೀಯವೇ?’’

ಈ ಕಿರು ಪ್ರಶ್ನೆಗೆ ಸುದೀರ್ಘ ಹಾಗೂ ಚಿಂತನಾತ್ಮಕ ಉತ್ತರ ಬಂತು. ಅವರು ಬರೆದ ಉತ್ತರವನ್ನು ಅದು ಇದ್ದ ಹಾಗೆಯೇ ಇಲ್ಲಿ ನೀಡಬೇಕೆಂದು ನನಗೆ ಆಶೆ. ಆದರೆ, ಅದು ಸಾಧ್ಯವಾಗುವುದಿಲ್ಲ. ಹಾಗಾಗಿ, ಸಂಕ್ಷಿಪ್ತವಾಗಿ ಬರೆಯುತ್ತಿದ್ದೇನೆ. ಅವರು ಹೀಗೆ ಬರೆದರು: ‘‘೧೯೬೫ರಲ್ಲಿ, ನಾನು ‘ಗ್ಲಾಸ್ಗೋ ಹೆರಾಲ್ಡ್’ ಪತ್ರಿಕೆಯನ್ನು ಸೇರಿದಾಗ, ಆ ಪತ್ರಿಕೆಯು ವಾಸ್ತವಿಕವಾಗಿ ‘ಕನ್ಸರ್ವೇಟಿವ್ (ಬಲಪಂಥೀಯ) ಮತ್ತು ಉದ್ಯಮ ಪರ ಪತ್ರಿಕೆ’ಯಾಗಿತ್ತು ಹಾಗೂ ನಗರದ ಕೈಗಾರಿಕಾ ಪರಂಪರೆ ಬಗ್ಗೆ ಹೆಮ್ಮೆ ಹೊಂದಿತ್ತು. ಅದು ‘ಹಡಗು ನಿರ್ಮಾಣ’ ಉದ್ದಿಮೆ ಬಗ್ಗೆ ವರದಿ ಮಾಡಲು ಒಬ್ಬರಲ್ಲ, ಇಬ್ಬರು ವರದಿಗಾರರನ್ನು ನೇಮಿಸಿತ್ತು. ಆ ಸಮಯದಲ್ಲಿ ಪತ್ರಿಕೆಯು ಕಾರ್ಮಿಕ ಸಂಘಟನೆಗಳಿಗೆ ವಿರುದ್ಧವಾಗಿತ್ತು. ಸಂಪಾದಕೀಯ ಬರೆಯುವ ಇಬ್ಬರು ಹಿರಿಯ ಪತ್ರಕರ್ತರ ಪೈಕಿ ಒಬ್ಬರು ಬಳಿಕ ಸಂಸತ್ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಯಾದರು. ಅಂದು ಸಹಾಯಕ ಸಂಪಾದಕರಾಗಿದ್ದವರು ಜಾರ್ಜ್ ಮೆಕ್‌ಡೊನಾಲ್ಡ್ ಫ್ರೇಸರ್. ಅವರು ಬಳಿಕ ‘ಫ್ಲ್ಯಾಶ್‌ಮನ್’ ಸರಣಿಯ ಕಾದಂಬರಿಗಳನ್ನು ಬರೆದು ಹೆಸರು ಮತ್ತು ಸಂಪತ್ತು ಗಳಿಸಿದರು.

ಇಯಾನ್ ಬಳಿಕ ಹೀಗೆ ಬರೆಯುತ್ತಾರೆ: ‘‘ಆದರೆ ೧೯೨೧ರ ಪರಿಸ್ಥಿತಿಯು ಕೊಂಚ ಭಿನ್ನವಾಗಿದ್ದಿರಬಹುದು. ಅಂದು ಪತ್ರಿಕೆಯ ಸಂಪಾದಕರಾಗಿದ್ದವರು ಸರ್ ರಾಬರ್ಟ್ ಬ್ರೂಸ್. ಅಂದಿನ ಪ್ರಗತಿಪರ ಪ್ರಧಾನಿ ಡೇವಿಡ್ ಲಾಯ್ಡ್ ಜಾರ್ಜ್ ಜೊತೆಗಿನ ಸ್ನೇಹಕ್ಕಾಗಿ ಅವರಿಗೆ ‘ನೈಟ್’ ಪದವಿ ಸಿಕ್ಕಿತ್ತು ಎನ್ನುವ ಮಾತುಗಳಿವೆ’’.

ಮುಂದುವರಿಯುತ್ತಾ, ‘‘ಪತ್ರಿಕೆಯಲ್ಲಿ ಬ್ರೂಸ್‌ರದ್ದು ಆಂತರಿಕ ವ್ಯವಹಾರಗಳ ವಿಭಾಗವಾಗಿತ್ತು. ವಿದೇಶಗಳಲ್ಲಿ ಏನು ನಡೆಯುತ್ತಿದೆ ಎನ್ನುವುದರ ಮೇಲೆ ನಿಗಾ ಇಡುವ ಕೆಲಸವನ್ನು ಅವರು ಇತರರಿಗೆ ವಹಿಸಿದ್ದರು’’ ಎಂಬುದಾಗಿ ಪತ್ರಿಕೆಯ ಅಧಿಕೃತ ಇತಿಹಾಸವನ್ನು ಉಲ್ಲೇಖಿಸಿ ಇಯಾನ್ ಬರೆದಿದ್ದಾರೆ. ‘‘ಹಾಗಾಗಿ, ಆ ಇತರರ ಪೈಕಿ ಯಾರಾದರೊಬ್ಬರು ಗಾಂಧೀಜಿಯ ಬಗ್ಗೆ ಬರೆದಿರಬೇಕು. ಪತ್ರಿಕೆಯು ಅವರಿಗೆ ಸಾಕಷ್ಟು ಸ್ವಾತಂತ್ರ್ಯವನ್ನು ಕೊಟ್ಟಿರುವಂತೆ ಕಂಡುಬರುತ್ತದೆ. ಆದರೆ, ಗಾಂಧೀಜಿ ಕುರಿತ ಪತ್ರಿಕೆಯ ಒಟ್ಟಾರೆ ನಿಲುವು ಸಹಾನುಭೂತಿ ಆಗಿರಲಿಕ್ಕಿಲ್ಲ’’ ಎಂಬುದಾಗಿ ಇಯಾನ್ ನನಗೆ ಬರೆದಿದ್ದಾರೆ.

ಇಯಾನ್ ಜಾಕ್ ನನಗೆ ಬರೆದ ವೈಯಕ್ತಿಕ ಪತ್ರದಲ್ಲಿ ಅವರ ಸಾರ್ವಜನಿಕ ಬರಹದ ಎಲ್ಲಾ ಅಂಶಗಳೂ ಇದ್ದವು- ತಾನು ವಾಸಿಸುತ್ತಿರುವ ಊರಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದುವುದು, ಸಾಮಾಜಿಕ ಮತ್ತು ರಾಜಕೀಯ ಇತಿಹಾಸವನ್ನು ಸುಲಲಿತವಾಗಿ ಬೆರೆಸುವ ಸಾಮರ್ಥ್ಯ, ತಂತ್ರಜ್ಞಾನದ ಬಗ್ಗೆ ಆಸಕ್ತಿ, ಮಾನವ ಸ್ವಭಾವದ ವೈಶಿಷ್ಟ್ಯತೆಗಳ ಬಗ್ಗೆ ಅವರು ಹೊಂದಿರುವ ಆಸಕ್ತಿ ಹಾಗೂ ಜಗತ್ತಿನೊಂದಿಗೆ ಬ್ರಿಟನ್ ಹೊಂದಿರುವ ಸಂಕೀರ್ಣ ಸಂಬಂಧದ ಸಂಪೂರ್ಣ ಅರಿವು.

ಇಯಾನ್ ಜಾಕ್‌ರ ನಿಕಟವರ್ತಿಯಾಗಿದ್ದ ಜಾನ್ ಲಾಯ್ಡ್ ‘ದ ಗಾರ್ಡಿಯನ್’ ಪತ್ರಿಕೆಯಲ್ಲಿ ಅವರ ಜೀವನ-ಚಿತ್ರವೊಂದನ್ನು ಬರೆದಿದ್ದಾರೆ- ‘‘ಇಯಾನ್ ಜಾಕ್ ‘ಸಾಕ್ರಟಿಸ್ ಡಯಾಲಾಗ್’ (ಕ್ರಿಸ್ತಪೂರ್ವ ನಾಲ್ಕನೇ ಶತಮಾನದ ಗದ್ಯ ಸಾಹಿತ್ಯ ಮಾದರಿ)ನ ಆಧುನಿಕ ರೂಪಕ್ಕೆ ಸೇರಿದ ಪತ್ರಕರ್ತರಂತಿದ್ದರು... ಅವರ ಮಾತುಗಳು ಯಾವಾಗಲೂ ನಯವಾಗಿದ್ದರೂ, ‘ಆದರೆ ಅದೇನು ಹಾಗೆ?’ (‘but what about…’) ಎಂಬ ಪ್ರಶ್ನೆ ಅವರಲ್ಲಿ ಯಾವಾಗಲೂ ಸಿದ್ಧವಾಗಿತ್ತು. ವಿಷಯಗಳ ಆಳಕ್ಕೆ ಹೋಗುವುದಕ್ಕಾಗಿ ಅವರು ಈ ತಂತ್ರವನ್ನು ಅನುಸರಿಸುತ್ತಿದ್ದರು. ಯಾವುದೇ ಬ್ರಿಟಿಷ್ ಪತ್ರಕರ್ತ ಆ ಮಟ್ಟದಲ್ಲಿ ಕೆಲಸ ಮಾಡುತ್ತಿರಲಿಲ್ಲ. ಅವರು ಕೊನೆಯ ಕ್ಷಣದವರೆಗೂ ಕೆಲಸ ಮಾಡುತ್ತಿದ್ದರು.’’

ಲಾಯ್ಡ್‌ರ ಬರಹವನ್ನು ಓದಿದ ಹಲವಾರು ಓದುಗರು ಪತ್ರಿಕೆಗೆ ಪತ್ರಗಳನ್ನು ಬರೆದು, ಶನಿವಾರದ ‘ಗಾರ್ಡಿಯನ್’ ಸಂಚಿಕೆಯಲ್ಲಿ ತಾವು ಮೊದಲು ಓದುತ್ತಿದ್ದ ಲೇಖನವೇ ಇಯಾನ್ ಜಾಕ್‌ರದ್ದು ಎಂದು ಹೇಳಿದ್ದಾರೆ. ಒಬ್ಬರು ಹೀಗೆ ಬರೆದಿದ್ದಾರೆ: ‘‘ಅವರು ‘ಗಾರ್ಡಿಯನ್’ನ ಅತ್ಯುತ್ತಮ ಬರಹಗಾರ. ಅವರು ತನ್ನ ಬರಹಗಳಲ್ಲಿ ಇತರರಿಗಿಂತ ತುಂಬಾ ಮುಂದಿದ್ದರು. ಇತರರು ಅವರನ್ನು ಅಡಗಿಸಿಟ್ಟಿದ್ದರೋ ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಅವರು ಆನ್‌ಲೈನ್‌ನಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ’’. ‘‘ಇಯಾನ್ ಓರ್ವ ಗೌರವಾರ್ಹ, ಗುಣಶೀಲ ಮತ್ತು ಅಗಾಧ ಕೌಶಲದ ವ್ಯಕ್ತಿ’’ ಎಂಬುದಾಗಿ ಇನ್ನೋರ್ವ ಓದುಗ ಬರೆದಿದ್ದಾರೆ. ಓದುಗರ ಈ ಪತ್ರಗಳು ನನ್ನ ಗೆಳೆಯನಿಗೆ ಸಮಾಧಾನ ತಂದಿರಬಹುದು. ಅದೇ ರೀತಿ, ‘‘ಅವರು ತನ್ನ ಲೇಖನಗಳಲ್ಲಿ ಆಕ್ಸ್‌ಫರ್ಡ್ ಮತ್ತು ಕೇಂಬ್ರಿಜ್‌ಗಳಲ್ಲಿ ಕಲಿತವರಂತೆ ಪಾಂಡಿತ್ಯ ಪ್ರದರ್ಶನ ಮಾಡುವುದಿಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ’’ ಎನ್ನುವ ಅಭಿಪ್ರಾಯವೂ ಅವರಿಗೆ ಪರಿಪೂರ್ಣವಾಗಿ ಅನ್ವಯಿಸುತ್ತದೆ. ಅವರು ವಿದ್ಯಮಾನಗಳನ್ನು ಸ್ಪಷ್ಟವಾಗಿ ಅವಲೋಕಿಸುತ್ತಾರೆ, ಆದರೆ ಅದನ್ನು ತನ್ನ ಅನುಭವದ ಮೂಲಕ ವಿಶ್ಲೇಷಿಸುತ್ತಾರೆ.

ಇಯಾನ್ ಜಾಕ್ ಅಮೋಘ ಗದ್ಯ ಲೇಖಕರಾದರೂ, ಅವರಿಗೆ ತನ್ನ ಬರವಣಿಗೆಗಳ ಬಗ್ಗೆ ಅಳುಕು ಇತ್ತು. ಆದರೂ, ‘ದ ಗಾರ್ಡಿಯನ್’ ಪತ್ರಿಕೆಗಾಗಿ ಬರೆಯುತ್ತಿದ್ದ ೧,೦೦೦ ಪದಗಳ ಅಂಕಣ ಮತ್ತು ‘ಗ್ರಂಥ’ ಅಥವಾ ‘ಲಂಡನ್ ರಿವ್ಯೆ ಆಫ್ ಬುಕ್ಸ್’ಗಾಗಿ ಬರೆಯುತ್ತಿದ್ದ ದೀರ್ಘ ಮಾದರಿಯ ಪ್ರಬಂಧ (10,000 ಅಥವಾ ಅದಕ್ಕಿಂತ ಹೆಚ್ಚಿನ ಪದಗಳು)ಗಳ ಬಗ್ಗೆ ಅವರು ತೃಪ್ತಿ ಹೊಂದಿದ್ದರು. ಈ ಅಂಕಣ ಲೇಖನಗಳ ಮೂರು ಸಂಗ್ರಹಗಳನ್ನು ಅವರು ಹೊರತಂದಿದ್ದಾರೆ. ಒಂದು ಸಂಗ್ರಹಕ್ಕೆ ‘ಎ ಕಂಟ್ರಿ ಫೋರ್ಮರ್ಲಿ ನೇಮ್ಡ್ ಗ್ರೇಟ್ ಬ್ರಿಟನ್’ ಎಂಬ ಸೊಗಸಾದ ಹೆಸರನ್ನು ಇಡಲಾಗಿದೆ. ಭಾರತದ ಬಗ್ಗೆ ಬರೆದಿರುವ ಲೇಖನಗಳ ಪೈಕಿ ಅತ್ಯುತ್ತಮ ಲೇಖನಗಳನ್ನು ಒಳಗೊಂಡಿರುವ ಇನ್ನೊಂದು ಸಂಗ್ರಹಕ್ಕೆ ‘ಮೊಫುಸಿಲ್ ಜಂಕ್ಷನ್’ ಎಂಬ ಹೆಸರನ್ನು ಅವರು ಇಟ್ಟಿದ್ದಾರೆ.

ಆದರೆ, ಅವರು ಹಲವು ವರ್ಷಗಳಿಂದ ಒಂದೇ ವಿಷಯದ ಕುರಿತು ಪರಿಪೂರ್ಣ ಪುಸ್ತಕವೊಂದನ್ನು ಬರೆದಿಲ್ಲ. ರೈಲ್ವೇಸ್ (ಇದು ಅವರ ಆರಂಭಿಕ ಹಾಗೂ ಖಾಯಂ ಆಸಕ್ತಿಯ ವಿಷಯವಾಗಿತ್ತು) ಬಗ್ಗೆ ಪುಸ್ತಕವೊಂದನ್ನು ಬರೆಯುವಂತೆ ಪ್ರಕಾಶಕರು ಅವರನ್ನು ಒತ್ತಾಯಿಸಿದ್ದರು. ಸ್ಕಾಟ್‌ಲ್ಯಾಂಡ್‌ನಲ್ಲಿ ಬೆಳೆಯುತ್ತಿದ್ದ ಕಾಲದ ತನ್ನ ಆತ್ಮಚರಿತ್ರೆಯನ್ನು ಬರೆಯುವಂತೆ ಸ್ನೇಹಿತರು ಅವರಿಗೆ ದುಂಬಾಲು ಬಿದ್ದಿದ್ದರು. ಅಂತಿಮವಾಗಿ, ತನ್ನ ಬದುಕಿನ ಕೊನೆಯ ವೇಳೆಗೆ, ‘ಕ್ಲೈಡ್’ ನದಿ ಮತ್ತು ಅದರ ಸುತ್ತಲಿನ ಪರಿಸರದ ಸಾಮಾಜಿಕ ಇತಿಹಾಸದ ಬಗ್ಗೆ ಪುಸ್ತಕವೊಂದನ್ನು ಬರೆಯಲು ಆರಂಭಿಸಿದರು. ಅದರ ಎರಡು ಅಧ್ಯಾಯಗಳನ್ನು ಓದುವ ಸುಯೋಗ ನನಗೆ ಒದಗಿತ್ತು. ಆ ಅಧ್ಯಾಯಗಳು ಅಮೋಘವಾಗಿದ್ದವು; ಸ್ವಂತ ನೆನಪುಗಳನ್ನು ಐತಿಹಾಸಿಕ ಮತ್ತು ತಾಂತ್ರಿಕ ವಿವರಗಳೊಂದಿಗೆ ಸುಲಲಿತವಾಗಿ ಸಂಯೋಜಿಸುವ ಅವರ ವಿಧಾನವು ಆಕರ್ಷಕವಾಗಿತ್ತು. (ಒಂದು ಅಧ್ಯಾಯದಲ್ಲಿ ಜೇಮ್ಸ್ ವಾಟ್ ಅವರ ಅತ್ಯುತ್ತಮ ರೇಖಾಚಿತ್ರ (ಸ್ಕೆಚ್)ಗಳಿವೆ).

ಇಯಾನ್ ಜಾಕ್‌ರ ವರದಿಗಾರಿಕೆಯ ಕೆಲವು ಮಾದರಿಗಳನ್ನು ಉಲ್ಲೇಖಿಸುತ್ತಾ, ನಾನು ಈ ನುಡಿನಮನವನ್ನು ಕೊನೆಗೊಳಿಸಲು ಬಯಸುತ್ತೇನೆ. ಅವರ ಪತ್ರಗಳು ಅವರ ಅಂಕಣ ಬರಹಗಳಷ್ಟೇ ಬೋಧಪ್ರದ ಮತ್ತು ವಿಚಾರಪೂರ್ಣವಾಗಿದ್ದವು; ಆದರೆ, ಬಹುಶಃ ಕೊಂಚ ಹೆಚ್ಚಾಯಿತು ಎಂದು ಅನಿಸುವಷ್ಟು ಅನಿರ್ಬಂಧಿತವಾಗಿದ್ದವು. ಇಯಾನ್‌ರಂತೆಯೇ ಸ್ಕಾಟ್‌ಲ್ಯಾಂಡ್‌ನವರಾಗಿರುವ ಗೋರ್ಡನ್ ಬ್ರೌನ್ ಬ್ರಿಟನ್ ಪ್ರಧಾನಿಯಾದಾಗ ನಾನು ಅವರ ಬಗ್ಗೆ ಇಯಾನ್‌ರಲ್ಲಿ ವಿಚಾರಿಸಿದೆ. ಇಯಾನ್ ಹೀಗೆ ಉತ್ತರಿಸಿದರು: ‘‘ಅವರು ಯಾವಾಗಲೂ ಅಗಾಧ ಪ್ರಮಾಣದ ಮಾಹಿತಿಗಳನ್ನು ಹೀರಿಕೊಳ್ಳುತ್ತಾರೆ. ಅದು ಅವರ ವೈಶಿಷ್ಟ್ಯ. ಇದು ಒಬ್ಬ ಪ್ರಧಾನಿಯ ಉತ್ತಮ ಗುಣಗಳೇ ಎನ್ನುವುದು ಬೇರೆ ವಿಷಯ. ಏನಿದ್ದರೂ, ಭಯಾನಕ ಸರ್ಕೋಝಿ (ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೊಲಸ್ ಸರ್ಕೋಝಿ)ಗಿಂತ ಇವರಾಗಬಹುದು.’’

ಕೆಲವು ವರ್ಷಗಳ ಬಳಿಕ, ನಾನು ಇಯಾನ್‌ಗೆ ಹೀಗೆ ಬರೆದೆ: ‘‘ ‘ಮಾವೋವಾದಿಗಳಿಂದ ಪ್ರೇರಿತರಾಗಿರುವ ಹಾಗೂ ಗಾಂಧೀಜಿಯ ಅತಿ ಟೀಕಾಕಾರರಾಗಿರುವ’ ಒಂದು ವರ್ಗದ ಯುವಜನತೆ ಹಾಗೂ ‘ಬಿಜೆಪಿ ಮತ್ತು ಆರೆಸ್ಸೆಸ್‌ನಿಂದ ಹಾಗೂ ಹಿಂದೂಗಳು ಕೇಂದ್ರ ಸ್ಥಾನದಲ್ಲಿರುವ ಬಲಿಷ್ಠ ದೇಶವೊಂದರ ಅವುಗಳ ಕಲ್ಪನೆಯಿಂದ ಪ್ರೇರಿತರಾಗಿರುವ ಹಾಗೂ ಸಹಜವಾಗಿಯೇ ಗಾಂಧೀಜಿಯ ಟೀಕಾಕಾರರಾಗಿರುವ’ ಇನ್ನೊಂದು ವರ್ಗದ ಯುವಜನತೆಯನ್ನು ನಾನು ನೋಡುತ್ತಿದ್ದೇನೆ. ಉಗ್ರವಾದ ಮತ್ತು ಹಿಂಸೆಯತ್ತ ಪುರುಷರು ಯಾಕೆ ಇಷ್ಟೊಂದು ತೀವ್ರವಾಗಿ ಆಕರ್ಷಿತರಾಗುತ್ತಿದ್ದಾರೆ?’’ ಎಂದು ನಾನು ಪ್ರಶ್ನಿಸಿದೆ.

ಇಯಾನ್ ಉತ್ತರಿಸಿದರು: ‘‘ಒಳ್ಳೆಯ ಪ್ರಶ್ನೆ. ಇದಕ್ಕೆ (ಪುರುಷ ಹಾರ್ಮೋನ್) ಟೆಸ್ಟಾಸ್ಟರೋನ್ ಕಾರಣವೇ? ತಿಳುವಳಿಕೆಯ ಕೊರತೆ ಕಾರಣವೇ? ಬೇಟೆಯಾಡಿ ಆಹಾರ ಸಂಪಾದಿಸುತ್ತಿದ್ದ ಆ ಹಿಂದಿನ ಸಹಸ್ರಮಾನಗಳ ಪ್ರಭಾವವೇ? ಸೇನೆಗಳಲ್ಲಿ ಮತ್ತು ಯುದ್ಧಗಳಲ್ಲಿ ಹಿಂದೆ ಅಗಾಧ ಪ್ರಮಾಣದಲ್ಲಿ ಹಿಂಸೆಯ ಪ್ರದರ್ಶನಗಳಿದ್ದವಾದರೂ, ಈಗ ಅವುಗಳು ಬಹುತೇಕ ನಿಂತಿವೆ. ಆದರೆ, ನಾಗರಿಕ ಜೀವನದಲ್ಲಿ ಹಿಂಸಾ ವರ್ತನೆಗಳು ಹೆಚ್ಚಿವೆ. ಉದ್ಯೋಗ ಜಗತ್ತಿನಲ್ಲಿ ಮಹಿಳೆಯರ ಪಾತ್ರ ಅಗಾಧ ಪ್ರಮಾಣದಲ್ಲಿ ಹೆಚ್ಚುತ್ತಿರುವಂತೆಯೇ ಹಿಂಸಾ ಪ್ರವೃತ್ತಿಯೂ ಉಲ್ಬಣಿಸಿದೆ. ಆದರೆ, ಅದೇ ವೇಳೆ, ಇಂದಿನ ಕೆಲಸವೇ (ಜಗತ್ತಿನ ಹೆಚ್ಚಿನ ಭಾಗಗಳಲ್ಲಿ) ಹಿಂದಿನಷ್ಟು ದೈಹಿಕ ಶ್ರಮದ ಕಸರತ್ತಾಗಿ ಉಳಿದಿಲ್ಲ.’’

೨೦೦೮ರಲ್ಲಿ, ನಾನು ಇಯಾನ್ ಜಾಕ್‌ಗೆ ನನ್ನ ಅಂಕಣ ಬರಹವೊಂದನ್ನು ಕಳುಹಿಸಿದೆ. ನೊಬೆಲ್ ಪ್ರಶಸ್ತಿ ಪಡೆಯುವ ಲೇಖಕರ ಬರಹಗಳ ಮಟ್ಟ, ಪ್ರಶಸ್ತಿ ಬಳಿಕ ಹೆಚ್ಚಿನ ಪ್ರಕರಣಗಳಲ್ಲಿ ಕುಸಿಯುತ್ತಾ ಹೋಗುವ ಬಗ್ಗೆ ನಾನು ಆ ಅಂಕಣದಲ್ಲಿ ಚರ್ಚಿಸಿದ್ದೆ. ಅದಕ್ಕೆ ಉತ್ತರಿಸಿದ ಅವರು, ‘‘ಆದರೆ, ೧೯೧೩ರ ಬಳಿಕ (ರವೀಂದ್ರನಾಥ) ಟಾಗೋರ್ ಏನಾದರೂ ಮೌಲಿಕವಾಗಿರುವುದನ್ನು ಬರೆದಿದ್ದಾರೆಯೇ? ಇಂಥ ಪ್ರಶ್ನೆಯೊಂದು ನಿಮ್ಮ ಕೋಲ್ಕತಾ ಮೇಲ್‌ಬ್ಯಾಗನ್ನು ತುಂಬಬಹುದಾಗಿತ್ತು’’ ಎಂಬುದಾಗಿ ಬರೆದರು. ಬಳಿಕ ನನ್ನ ಪ್ರಶ್ನೆಗೆ ಅವರು ತನ್ನದೇ ಆದ ವಿವರಣೆಯನ್ನು ಹೀಗೆ ನೀಡಿದರು: ‘‘ಲೇಖಕರು ಬರೆಯುವುದನ್ನು ನಿಲ್ಲಿಸುವ ಕಾಲವೊಂದು ಬರುತ್ತದೆ ಎನ್ನುವುದಕ್ಕೆ ವಿ.ಎಸ್. ನೈಪಾಲ್ ಅವರೇ ಉದಾಹರಣೆ. ರಾತ್ ಈವರೆಗೆ ಇದಕ್ಕೊಂದು ಅಪವಾದವಾಗಿದ್ದಾರೆ, ಬಹುಶಃ ಸೌಲ್ ಬೆಲ್ಲೋ ಕೂಡ ಅಪವಾದವಾಗಿರಬಹುದು. ಆದರೆ, ಲೇಖಕರಲ್ಲಿ, ಅದರಲ್ಲೂ ಮುಖ್ಯವಾಗಿ ಕಾದಂಬರಿಕಾರರಲ್ಲಿ ನಿಧಾನವಾಗಿ ವಿಷಯಗಳು ಬತ್ತುತ್ತಾ ಹೋಗುತ್ತವೆ. ಆದರೆ, ಬರೆಯುವ ವೃತ್ತಿಯನ್ನು ಆಯ್ದುಕೊಂಡವರ ಒಂದು ಶಾಪವೆಂದರೆ, ಹಣ ಮತ್ತು ಆತ್ಮಗೌರವಕ್ಕಾಗಿ ಅವರು ಬರೆಯುತ್ತಲೇ ಹೋಗಬೇಕಾಗುತ್ತದೆ. ಬಹುಶಃ ನೊಬೆಲ್ ಪ್ರಶಸ್ತಿ ನಂತರ ಲೇಖಕರ ಬರವಣಿಗೆಯ ಮಟ್ಟ ಕಡಿಮೆಯಾಗಲು, ಪ್ರಶಸ್ತಿ ಎಷ್ಟು ಕಾರಣವೋ ವಯಸ್ಸು ಕೂಡಾ ಅಷ್ಟೇ ಕಾರಣವಾಗಿರಬಹುದು. ಸಾಮಾನ್ಯವಾಗಿ, ಪ್ರಶಸ್ತಿ ಸಿಕ್ಕಿದ ಬಳಿಕವೂ ಲೇಖಕರು ಬರೆಯುವುದನ್ನು ಮುಂದುವರಿಸುತ್ತಾರೆ. ಟರ್ಕಿಯ ಲೇಖಕ ಓರ್ತನ್ ಪಮುಕ್ ಯುವಕರಾಗಿರುವುದರಿಂದ ಅವರನ್ನು ಈ ಪ್ರಾಯೋಗಿಕ ಅಧ್ಯಯನಕ್ಕೆ ಒಳಪಡಿಸಬಹುದಾಗಿದೆ.’’

ಕಾದಂಬರಿಕಾರರಿಗೆ ಅನ್ವಯಿಸುವುದು ಪತ್ರಕರ್ತರಿಗೂ ಅನ್ವಯಿಸುತ್ತದೆ. ಭಾರತದಲ್ಲಿ ಮತ್ತು ಬ್ರಿಟನ್‌ನಲ್ಲಿಯೂ, ಹೆಚ್ಚಿನ ಪತ್ರಿಕಾ ಅಂಕಣಕಾರರು (ಪುರುಷರು ಮಾತ್ರವಲ್ಲ) ವಯಸ್ಸಾಗುತ್ತಿದ್ದಂತೆಯೇ ಅತಿರೇಕದ ಪ್ರತಿಷ್ಠೆಯನ್ನು ಬೆಳೆಸಿಕೊಳ್ಳುತ್ತಾರೆ. ಇದಕ್ಕೆ ಇಯಾನ್ ಜಾಕ್ ಮಾತ್ರ ಒಂದು ಅಪವಾದ. ಅವರ ಬರಹಗಳು ಅವರ ೩೦ರ ವಯಸ್ಸಿನಲ್ಲಿದ್ದಷ್ಟೇ ೭೦ರ ವಯಸ್ಸಿನಲ್ಲೂ ತಾಜಾ ಮತ್ತು ಸ್ಪಷ್ಟವಾಗಿದ್ದವು. ಕ್ಲೈಡ್ ನದಿಯ ಕುರಿತು ಅವರು ಬರೆಯುತ್ತಿದ್ದ ಪುಸ್ತಕ ಪೂರ್ಣಗೊಂಡಿಲ್ಲವಾದರೂ, ಅವರ ಇತರ ಬರಹಗಳು ಎಷ್ಟೊಂದು ಶ್ರೀಮಂತ ಮತ್ತು ವೈವಿಧ್ಯಮಯವಾಗಿವೆಯೆಂದರೆ, ಯುವ ಹಾಗೂ ಉತ್ಸಾಹಿ ಸಂಪಾದಕನೊಬ್ಬ ಅವರ ಕೃತಿಗಳ ಹಲವಾರು ಸಂಪುಟಗಳನ್ನು ಸುಲಭವಾಗಿ ಪ್ರಕಟಿಸಬಹುದಾಗಿದೆ. ಜೊತೆಗೆ, ಅವರ ಆಯ್ದ ಪತ್ರಗಳನ್ನು ಒಳಗೊಂಡ ಪುಸ್ತಕವೊಂದನ್ನೂ ಪ್ರಕಟಿಸಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)