varthabharthi


ಕಾಲಂ 9

EWS ಮೀಸಲಾತಿ ಮತ್ತು ಖಾಸಗೀಕರಣ: ಬ್ರಾಹ್ಮಣಶಾಹಿ ಫ್ಯಾಶಿಸಂನ ಎರಡು ಅಸ್ತ್ರಗಳು!

ವಾರ್ತಾ ಭಾರತಿ : 16 Nov, 2022
ಶಿವಸುಂದರ್

ಮೀಸಲಾತಿಯ ಮೂಲ ಉದ್ದೇಶವೇ ಉದ್ಯೋಗ, ರಾಜಕೀಯ ಅಧಿಕಾರ ಮತ್ತು ಶಿಕ್ಷಣದಲ್ಲಿ ವಂಚಿತ ಸಮುದಾಯ ಮತ್ತು ಜಾತಿಗಳಿಗೆ ತಕ್ಕಷ್ಟು ಪ್ರಾತಿನಿಧ್ಯವನ್ನು ಒದಗಿಸುವುದಾಗಿದೆ. ಅದರಿಂದಾಗಿ ಪರೋಕ್ಷವಾಗಿ ಆ ಸಮುದಾಯಗಳಲ್ಲಿ ಒಂದು ಸ್ತರದವರ ಬಡತನವೂ ನಿರ್ಮೂಲನೆಯಾಗಬಹುದಾದರೂ ಅದರ ನೈಜ ಪ್ರಜಾತಾಂತ್ರಿಕ ಉದ್ದೇಶ ಪ್ರಾತಿನಿಧ್ಯದ ಮೂಲಕ ಪ್ರಭುತ್ವದ ಪ್ರಜಾತಂತ್ರೀಕರಣವೇ ಆಗಿದೆ. ಹೀಗಾಗಿ ಮೀಸಲಾತಿಯನ್ನು ಪ್ರಧಾನವಾಗಿ ಒಂದು ಸಾಮಾಜಿಕ ನ್ಯಾಯದ ಅಸ್ತ್ರವನ್ನಾಗಿ ಪರಿಗಣಿಸಬೇಕೇ ವಿನಾ ಆರ್ಥಿಕ ನ್ಯಾಯದ ಅಥವಾ ಬಡತನ ನಿವಾರಣೆಯ ಕಾರ್ಯಕ್ರಮವನ್ನಾಗಿ ಅಲ್ಲ.


ಭಾಗ -1

ಮೋದಿ ಸರಕಾರವು (ಸಂಸತ್ತಿನ ಬಹುಪಾಲು ವಿರೋಧ ಪಕ್ಷಗಳ ಅನುಮೋದನೆ ಮೂಲಕ) 103ನೇ ಸಂವಿಧಾನ ತಿದ್ದುಪಡಿಯ ಮೂಲಕ ಜಾರಿ ಮಾಡಿದ EWS ಮೀಸಲಾತಿ ಅರ್ಥಾತ್ ಮೇಲ್ಜಾತಿ ಬಡವರಿಗೆ (ಮತ್ತು ಮಧ್ಯಮವರ್ಗಗಳಿಗೆ ಕೂಡ!) ಮಾತ್ರ ಒದಗಿಸಲಾಗುವ ಆರ್ಥಿಕ ಆಧಾರದ ಮೀಸಲಾತಿಯ ಸಿಂಧುತ್ವವನ್ನು ಸುಪ್ರೀಂ ಕೋರ್ಟು ಎತ್ತಿಹಿಡಿಯುವ ಮೂಲಕ, ಖಾಸಗೀಕರಣ, ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡದಿರುವುದರ ಮೂಲಕ ಮೋದಿ ಸರಕಾರ ದಲಿತ-ದಮನಿತರ ಮೇಲೆ ನಡೆಸುತ್ತಿದ್ದ ಬ್ರಾಹ್ಮಣಶಾಹಿ ದಾಳಿ ಮತ್ತೊಂದು ಮಜಲನ್ನು ಮುಟ್ಟಿದೆ.

ಹಾಗೆ ನೋಡಿದರೆ ಈ ಬಗ್ಗೆ ಅಂಬೇಡ್ಕರ್ ಬಹಳ ಹಿಂದೆಯೇ ಎಚ್ಚರಿಕೆ ನೀಡಿದ್ದರು. 1938ರಲ್ಲೇ ನಾಸಿಕ್‌ನಲ್ಲಿ ಮಾಡಿದ ಭಾಷಣವೊಂದರಲ್ಲಿ, ಈ ದೇಶದ ಎಲ್ಲಾ ಕಾಯಿಲೆಗಳಿಗೆ ಬ್ರಾಹ್ಮಣಶಾಹಿ ಮತ್ತು ಬಂಡವಾಳ ಶಾಹಿಗಳೇ ಕಾರಣವೆಂದೂ ಸ್ಪಷ್ಟವಾಗಿ ಗುರುತಿಸಿದ್ದರು ಹಾಗೂ ಈ ದೇಶ ನಿಜವಾದ ಸ್ವಾತಂತ್ರ್ಯ ಪಡೆಯಬೇಕೆಂದರೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ನ್ಯಾಯಗಳೆರಡನ್ನು ಜನರು ಪಡೆಯಬೇಕಾದದ್ದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದರು ಮತ್ತು ಆಳುವ ಸರಕಾರಗಳು ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ನ್ಯಾಯಗಳನ್ನು ದೊರಕಿಸುವಂತಹ ನೀತಿಗಳನ್ನು ರೂಪಿಸಬೇಕೆಂದು ನಮ್ಮ ಸಂವಿಧಾನದಲ್ಲಿ ತಾಕೀತು ಮಾಡಲಾಗಿತ್ತು.

ಅದರೆ ಸ್ವಾತಂತ್ರ್ಯಾನಂತರದ 75 ವರ್ಷಗಳಲ್ಲಿ ಯಾವ ಸರಕಾರಗಳಿಗೂ ಬ್ರಾಹ್ಮಣಶಾಹಿಯನ್ನಾಗಲೀ, ಬಂಡವಾಳಶಾಹಿಯನ್ನಾಗಲೀ ನಿರ್ಮೂಲನೆ ಮಾಡುವ ಉದ್ದೆಶಗಳು ಇರಲಿಲ್ಲ. ಯೋಜನೆಗಳೂ ಇರಲಿಲ್ಲ. ಆದರೂ ಸ್ವಾತಂತ್ರ್ಯ ಹೋರಾಟದ ಕಾವಿನ ಕಾರಣಕ್ಕಾಗಿ ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿಯನ್ನು ನಿಯಂತ್ರಿಸುವ ಕಾರ್ಯಕ್ರಮಗಳು ಪ್ರಾರಂಭದ ಕೆಲವು ದಶಕಗಳ ಕಾಲ ಅರೆಮನಸ್ಸಿನಿಂದ ಚಾಲ್ತಿಯಲ್ಲಿದ್ದವು. ಅದಕ್ಕೆ ಮತ್ತೊಂದು ಕಾರಣ ದಲಿತ-ದಮನಿತ ಜನರ ಹೋರಾಟಗಳೂ ಕೂಡ. ಆದರೆ 90ರ ದಶಕದಲ್ಲಿ ಮಂಡಲ್ ವಿರುದ್ಧ ಕಮಂಡಲದ ಚಳವಳಿ ಹಾಗೂ ಆರ್ಥಿಕ ಉದಾರೀಕರಣಗಳು ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿಯ ಮೇಲಿದ್ದ ನಿಯಂತ್ರಣಗಳನ್ನು ಸಡಿಲಗೊಳಿಸಿದವು.

ಮೋದಿ ಸರಕಾರದಲ್ಲಿ ಬಲಿಷ್ಠಗೊಂಡ ಬ್ರಾಹ್ಮಣಶಾಹಿ

2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲಂತೂ ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿಯು ಈ ದೇಶದ ಜನರ ಮೇಲೆ ಆಕ್ರಮಣಕಾರಿ ದಾಳಿಯನ್ನೇ ಸಾರಿವೆ. EWS ಮೀಸಲಾತಿ ಅರ್ಥಾತ್ ಮೇಲ್ಜಾತಿ ಬಡ- ಮಧ್ಯಮ ವರ್ಗದವರಿಗೆ ಮಾತ್ರ ಆರ್ಥಿಕ ಆಧಾರಿತ ಮೀಸಲಾತಿಯನ್ನು ಒದಗಿಸಿ ಬ್ರಾಹ್ಮಣಶಾಹಿಯನ್ನು ಅಲ್ಪಸ್ವಲ್ಪನಿಯಂತ್ರಿಸುತ್ತಿದ್ದ ಜಾತಿ ಆಧಾರಿತ ಮೀಸಲಾತಿಯ ಬುನಾದಿಯನ್ನೇ ಅಲುಗಾಡಿಸುವ ಸಾಮಾಜಿಕ ನ್ಯಾಯದ ಮೇಲಿನ ಬ್ರಾಹ್ಮಣಶಾಹಿ ದಾಳಿಯನ್ನು ಹಿಂದುತ್ವ ಫ್ಯಾಶಿಸಂ ತೀವ್ರಗೊಳಿಸಿದೆ. ಮತ್ತೊಂದು ಕಡೆ, ಸಂಪನ್ಮೂಲಗಳ ಅರೆಬರೆ ರಾಷ್ಟ್ರೀಕರಣ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಮೂಲಕ ಬಂಡವಾಳಶಾಹಿಯನ್ನು ಅಲ್ಪಸ್ವಲ್ಪ ನಿಯಂತ್ರಿಸುತ್ತಾ ದಮನಿತ ಜಾತಿಗಳ ಒಂದು ಸ್ತರಕ್ಕೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದ್ದ ಉದ್ಯಮಗಳ ಖಾಸಗೀಕರಣದ ಮೂಲಕ ಖಾಸಗಿ ಬಂಡವಾಳಶಾಹಿಯನ್ನು ಅರ್ಥಾತ್ ಬ್ರಾಹ್ಮಣೀಯ ಬಂಡವಾಳಶಾಹಿಯನ್ನು ಗಟ್ಟಿಗೊಳಿಸುತ್ತಿದೆ. ಆ ಮೂಲಕ ಈ ದೇಶದ ದಲಿತ-ದಮನಿತರಿಗೆ ಮತ್ತು ಬಡವರಿಗೆ ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ ಎರಡನ್ನೂ ವಂಚಿಸುವ ದಾಳಿ ನಡೆಯುತ್ತಿದೆ. ವಿಪರ್ಯಾಸವೆಂದರೆ ಈ ಎರಡೂ ಬಗೆಯ ವಂಚಿತರು ಸಮಾನ ಶತ್ರುವಿನ ವಿರುದ್ಧ ಹೋರಾಡದಂತೆ ಆರ್ಥಿಕ ನ್ಯಾಯ ಮತ್ತು ಸಾಮಾಜಿಕ ನ್ಯಾಯಗಳನ್ನು ಪರಸ್ಪರ ಎದುರಾಳಿಗಳನ್ನಾಗಿ ನಿಲ್ಲಿಸುವ ಬ್ರಾಹ್ಮಣೀಯ ಕುತಂತ್ರದಲ್ಲಿ ಮೋದಿ ಸರಕಾರ ಯಶಸ್ಸನ್ನು ಸಾಧಿಸಿದೆ. ಆರ್ಥಿಕ ಅನ್ಯಾಯ ಮತ್ತು ಸಾಮಾಜಿಕ ಅನ್ಯಾಯಗಳು ಎರಡೂ ಪರಸ್ಪರ ಸಂಬಂಧವಿರುವ ಕ್ರೌರ್ಯಗಳೇ. ಅದರ ನಿವಾರಣೆಗೆ ಬೇರೆಬೇರೆ ಬಗೆಯ ಪರಿಹಾರಗಳ ಅಗತ್ಯಗಳಿವೆ.

ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ನ್ಯಾಯ

ಏಕೆಂದರೆ ಈ ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ಲಾಭಕೋರ ಬಂಡವಾಳಶಾಹಿ ವ್ಯವಸ್ಥೆ ಇನ್ನಷ್ಟು ತೀವ್ರಗೊಳಿಸುತ್ತಿದೆ ಹಾಗೂ ಈ ಬಡತನವು ಜಾತಿ ಸಮುದಾಯಗಳನ್ನು ಮೀರಿ ಎಲ್ಲೆಡೆ ಇದೆ. ಮೇಲ್ಜಾತಿಗಳಲ್ಲಿ ಬಡವರಿದ್ದರೂ ಶತಮಾನಗಳಿಂದ ತುಳಿತಕ್ಕೊಳಗಾದ ಜಾತಿ ಮತ್ತು ಸಮುದಾಯಗಳಲ್ಲೇ ಬಡತನದ ಪ್ರಮಾಣವೂ ಹೆಚ್ಚು. ಸಿನ್ಹೋ ಸಮಿತಿಯ ವರದಿಯ ಪ್ರಕಾರ ಬಡತನ ರೇಖೆಯಿಂದ ಕೆಳಗಡೆ ಇರುವ ಶೇ. 82ರಷ್ಟು ಜನ ದಲಿತ, ಆದಿವಾಸಿ ಹಾಗೂ ಒಬಿಸಿ ಸಮುದಾಯಗಳಿಗೆ ಸೇರಿದವರು. ಅಷ್ಟು ಮಾತ್ರವಲ್ಲ. ವಂಚಿತ ಸಮುದಾಯಗಳಲ್ಲಿನ ಬಡತನದ ಬರ್ಬರತೆ ಮೇಲ್ಜಾತಿಗಳ ಬಡತನಕ್ಕಿಂತ ಇನ್ನೂ ಕ್ರೂರವಾದದ್ದು. ಅದೇನೇ ಇದ್ದರೂ ಈ ಬಡತನಕ್ಕೆ ಸಂಪತ್ತೆಲ್ಲಾ ಕೆಲವರಲ್ಲಿ ಮಾತ್ರ ಸೇರುವಂತೆ ಮಾಡುವ ಬಂಡವಾಳಶಾಹಿ ವ್ಯವಸ್ಥೆ ಕಾರಣ. ಈ ದೇಶದ ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆ ಕಾರಣದಿಂದ ಬಡತನದ ಪರಿಣಾಮಗಳಲ್ಲಿ ಏರುಪೇರುಗಳಿದ್ದರೂ ಬಂಡವಾಳಶಾಹಿಗೆ ಎಲ್ಲಾ ಬಡವರೂ ಬಲಿಯಾಗುತ್ತಿದ್ದಾರೆ. ಬಡತನವನ್ನು ಹೋಗಲಾಡಿಸಲು ಮತ್ತು ಆರ್ಥಿಕ ನ್ಯಾಯವನ್ನು ಸಾಧಿಸಲು ಪ್ರಾಥಮಿಕವಾಗಿ ಬಂಡವಾಳಶಾಹಿ ವ್ಯವಸ್ಥೆ ನಾಶವಾಗಿ ಸಂಪತ್ತು ಮತ್ತು ಅವಕಾಶಗಳು ಸಮಾನವಾಗಿ ಹಂಚಿಕೆಯಾಗಲ್ಪಡುವ ಸಮಾನತೆ ಆಧಾರಿತ ಆರ್ಥಿಕ ವ್ಯವಸ್ಥೆ ಜಾರಿಯಾಗಬೇಕು. ಅಲ್ಲಿಯವರೆಗೂ ಬಡತನದಿಂದ ಮೇಲೆತ್ತುವ ಹಾಗೂ ಘನತೆಯಿಂದ ಬದುಕುವಷ್ಟು ಅವಕಾಶಗಳನ್ನು ಮತ್ತು ಆದಾಯಗಳನ್ನು ಸರಕಾರಗಳು ಖಾತರಿಗೊಳಿಸಬೇಕು. ಇವು ಆರ್ಥಿಕ ನ್ಯಾಯವನ್ನು ಒದಗಿಸುವ ಕ್ರಮಗಳು.

ಹಾಗೆಯೇ ಈ ದೇಶದಲ್ಲಿ ಆರ್ಥಿಕ ಅನ್ಯಾಯಗಳ ಜೊತೆಜೊತೆಗೆ ಸಾಮಾಜಿಕ ಮೂಲದ ಅನ್ಯಾಯಗಳು ಬೆಸೆದುಕೊಂಡಿವೆ. ಹುಟ್ಟಿನ ಕಾರಣಕ್ಕಾಗಿಯೇ ಒಂದು ಸಮುದಾಯ ಮತ್ತು ಜಾತಿಯನ್ನು ಅಧಿಕಾರ, ಜ್ಞಾನ ಮತ್ತು ಸಂಪತ್ತಿನಿಂದ ವಂಚಿಸಿರುವ ಸಾಮಾಜಿಕ ಅನ್ಯಾಯವನ್ನು ಸಾಂಸ್ಥೀಕರಿಸಿರುವ ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆ ಇದೆ. ಈ ಸಾಮಾಜಿಕ ತಾರತಮ್ಯದ ಕಾರಣಕ್ಕಾಗಿಯೇ ಇಡೀ ಜಾತಿ ಮತು ಸಮುದಾಯಗಳು ಹಿಂದುಳಿಸಲ್ಪಟ್ಟಿವೆ. ಆದ್ದರಿಂದ ವ್ಯಕ್ತಿಯ ಅರ್ಹತೆ ಮತ್ತು ಪ್ರತಿಭೆಯನ್ನು ಜಾತಿಯ ಕಾರಣಕ್ಕಾಗಿಯೇ ಗುರುತಿಸದೆ ನಿರಾಕರಿಸುವ ಈ ದೇಶದ ಅನಾಗರಿಕ ಜಾತಿ ವ್ಯವಸ್ಥೆಯಿಂದ ಉದ್ಭವಿಸಿರುವ ಸಾಮಾಜಿಕ ಅನ್ಯಾಯವನ್ನು ಹೋಗಲಾಡಿಸಬೇಕೆಂದರೆ ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು. ಅಲ್ಲಿಯವರೆಗೆ ಪರಂಪರಾನುಗತವಾಗಿ ಜಾತಿ ವ್ಯವಸ್ಥೆಯ ಅನ್ಯಾಯಗಳಿಗೆ ಮತ್ತು ಅದರಿಂದಾಗಿ ತಾರತಮ್ಯ ಮತ್ತು ಹಿಂದುಳಿದಿರುವಿಕೆ, ಬಡತನಗಳಿಗೆ ಬಲಿಯಾಗಿರುವ ಜಾತಿಗಳಿಗೆ ಮತ್ತು ಸಮುದಾಯಗಳಿಗೆ ಆಡಳಿತ, ಉದ್ಯೋಗ ಮತ್ತು ಶಿಕ್ಷಣಗಳಲ್ಲಿ ಜಾತಿ ಆಧಾರಿತವಾಗಿ ಆದ್ಯತೆಯ ಮೇಲೆ ಅವಕಾಶಗಳನ್ನು ಮೀಸಲಿರಿಸಬೇಕು.

ಈ ವಂಚಿತ ಜಾತಿಗಳಿಗೆ ಆದ್ಯತೆಯ ಮೀಸಲು ಒದಗಿಸುವುದೇ ಸಾಮಾಜಿಕ ನ್ಯಾಯದ ಕಾರ್ಯಕ್ರಮ. ಹೀಗೆ ಆರ್ಥಿಕ ಅನ್ಯಾಯವನ್ನು ಕೊನೆಗಾಣಿಸಲು ಬಂಡವಾಳಶಾಹಿಯನ್ನು ಕೊನೆಗಾಣಿಸಬೇಕು ಮತ್ತು ಸಾಮಾಜಿಕ ಅನ್ಯಾಯವನ್ನು ಕೊನೆಗಾಣಿಸಲು ಬ್ರಾಹ್ಮಣಶಾಹಿ ಮತ್ತದರ ಜಾತಿ ವ್ಯವಸ್ಥೆಯನ್ನು ಕೊನೆಗಾಣಿಸಬೇಕು. ಅಲ್ಲಿಯವರೆಗೆ ಜಾತಿ ಆಧಾರಿತ ಮೀಸಲಾತಿ ಮತ್ತು ಹಲವಾರು ಬಡತನ ನಿರ್ಮೂಲನ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆನ್ನುವುದು ನಮ್ಮ ಸಂವಿಧಾನದ ಮಾರ್ಗದರ್ಶನವೂ ಆಗಿದೆ. ಜೊತೆಗೆ ಜಾತಿ ಆಧಾರಿತ ಮೀಸಲಾತಿ ಈ ದೇಶದ ಆಡಳಿತ ಮತ್ತು ಅಧಿಕಾರದ ಪ್ರಜಾತಾಂತ್ರೀಕರಣದ ಭಾಗವೂ ಆಗಿದೆ. ಏಕೆಂದರೆ ಮೀಸಲಾತಿಯ ಮೂಲ ಉದ್ದೇಶವೇ ಉದ್ಯೋಗ, ರಾಜಕೀಯ ಅಧಿಕಾರ ಮತ್ತು ಶಿಕ್ಷಣದಲ್ಲಿ ವಂಚಿತ ಸಮುದಾಯ ಮತ್ತು ಜಾತಿಗಳಿಗೆ ತಕ್ಕಷ್ಟು ಪ್ರಾತಿನಿಧ್ಯವನ್ನು ಒದಗಿಸುವುದಾಗಿದೆ. ಅದರಿಂದಾಗಿ ಪರೋಕ್ಷವಾಗಿ ಆ ಸಮುದಾಯಗಳಲ್ಲಿ ಒಂದು ಸ್ತರದವರ ಬಡತನವೂ ನಿರ್ಮೂಲನೆಯಾಗಬಹುದಾದರೂ ಅದರ ನೈಜ ಪ್ರಜಾತಾಂತ್ರಿಕ ಉದ್ದೇಶ ಪ್ರಾತಿನಿಧ್ಯದ ಮೂಲಕ ಪ್ರಭುತ್ವದ ಪ್ರಜಾತಂತ್ರೀಕರಣವೇ ಆಗಿದೆ.

ಹೀಗಾಗಿ ಮೀಸಲಾತಿಯನ್ನು ಪ್ರಧಾನವಾಗಿ ಒಂದು ಸಾಮಾಜಿಕ ನ್ಯಾಯದ ಅಸ್ತ್ರವನ್ನಾಗಿ ಪರಿಗಣಿಸಬೇಕೇ ವಿನಾ ಆರ್ಥಿಕ ನ್ಯಾಯದ ಅಥವಾ ಬಡತನ ನಿವಾರಣೆಯ ಕಾರ್ಯಕ್ರಮವನ್ನಾಗಿ ಅಲ್ಲ. ಆದ್ದರಿಂದಲೇ ಮೀಸಲಾತಿಗೆ ಯಾವತ್ತಿಗೂ ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯೇ ಪ್ರಧಾನ ಮಾನದಂಡವಾಗಿಡಲಾಗಿತ್ತೇ ವಿನಾ ಕೇವಲ ಆರ್ಥಿಕ ಮಾನದಂಡದ ಆಧಾರದಲ್ಲಿ ಮೀಸಲಾತಿಯನ್ನು ಕೊಡಲಾಗದು ಎಂಬುದೇ ಇಂದಿರಾ ಸಹಾನಿ ಪ್ರಕರಣದಲ್ಲಿ ತೀರ್ಪನ್ನಿತ್ತ ಸುಪ್ರೀಂ ಕೋರ್ಟಿನ ಒಂಭತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠವನ್ನೂ ಒಳಗೊಂಡಂತೆ ಬಹುಪಾಲು ನ್ಯಾಯಾದೇಶಗಳ ತಾತ್ಪರ್ಯವಾಗಿತ್ತು. (2015ರಲ್ಲಿ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠವೊಂದು ಸಾಮಾಜಿಕ ಹಿಂದುಳಿದಿರುವಿಕೆಯನ್ನು ಮಾತ್ರ ಮೀಸಲಾತಿ ಮಾನದಂಡವನ್ನಾಗಿ ಬಳಸುವುದರ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿತ್ತು). ಪ್ರಭುತ್ವವು ಎಲ್ಲರನ್ನು ಸಮಾನವಾಗಿ ಕಾಣಬೇಕೆಂಬ ಆರ್ಟಿಕಲ್ 15ಕ್ಕೆ, ದುರ್ಬಲ ಜಾತಿಗಳ ಪರವಾಗಿ ಸಕಾರಾತ್ಮಕ ತಾರತಮ್ಯ ಮಾಡುವ ಮೀಸಲಾತಿ ನೀತಿ ಒಂದು ಅಪವಾದ ಎನ್ನುವ ಧೋರಣೆಯನ್ನು ಮೊದಲು ಸುಪ್ರೀಂ ಕೋರ್ಟ್ ಹೊಂದಿತ್ತು. ಆದರೆ ದಮನಿತ ಸಮುದಾಯಗಳ ರಾಜಕೀಯ ಶಕ್ತಿ ಹೆಚ್ಚುತ್ತಿದ್ದಂತೆ ಜಾತಿ ಆಧಾರಿತ ಮೀಸಲಾತಿಯು ಸಮಾನತೆಗೆ ಅಪವಾದವಲ್ಲ, ಬದಲಿಗೆ ಅದೇ ಸಾಮಾಜಿಕ ಸಮಾನತೆಯ ದಾರಿ ಎಂಬ ಧೋರಣೆ ಬೇರೂರುತ್ತಿತ್ತು.

EWS  ಮೀಸಲಾತಿ- ಜಾತಿ ತಾರತಮ್ಯದ ನಿರಾಕರಣೆಯತ್ತ ಮೊದಲ ಹೆಜ್ಜೆ   

ಆದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಈ ಧೋರಣೆಗಳು ಬದಲಾಗಿ ಹೋದವು. 2019ರಲ್ಲಿ ಸಂವಿಧಾನ ತಿದ್ದುಪಡಿಯ ಮೂಲಕ ಮೇಲ್ಜಾತಿ ಮೀಸಲಾತಿಯನ್ನು ಜಾರಿ ಮಾಡಿದ ಮೋದಿ ಸರಕಾರ ಇಂದಿರಾ ಸಹಾನಿ ಕೇಸಿನಲ್ಲಿ ಎದುರಾದ ನ್ಯಾಯಾಂಗ ವಿರೋಧವನ್ನು ಮೂಲೆಗುಂಪು ಮಾಡಿತು. ಈ ನೀತಿಯ ಮೂಲಕ ಜಾತಿ ಆಧಾರಿತ ಸಾಮಾಜಿಕ ಅನ್ಯಾಯಕ್ಕೆ ಪ್ರಾತಿನಿಧ್ಯದ ಮುಲಾಮು ಹಚ್ಚಿದ್ದ ಸಂವಿಧಾನಕ್ಕೆ ಆಳವಾದ ಗಾಯ ಮಾಡಿತು. ಮೀಸಲಾತಿಗೆ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಕೈಬಿಟ್ಟು ಆರ್ಥಿಕ ಹಿಂದುಳಿದಿರುವಿಕೆಯನ್ನು ಏಕ ಮಾತ್ರ ಮಾನದಂಡವನ್ನಾಗಿ ಮಾಡುವ ಬ್ರಾಹ್ಮಣಶಾಹಿಯ ದಶಕಗಳ ಕುತಂತ್ರವನ್ನು ಮೋದಿ ಸರಕಾರ ಈಡೇರಿಸಿತು. ಆ ಮೂಲಕ ಸಾಮಾಜಿಕ ಅಸಮಾನತೆಯ ಐತಿಹಾಸಿಕ ಸತ್ಯವನ್ನು ವರ್ತಮಾನದಲ್ಲಿ ಅಸಂಗತ ಮಾಡುವ ಅದರ ಹೊಸ ಯೋಜನೆ ಫಲಿಸಿದೆ. ಜಾತಿ ಶೋಷಣೆ ಎಂಬುದು ಆಗಿ ಹೋದ ಕಥೆ, ಜಾತಿ ಎಂಬುದು ಶೋಷಕವಲ್ಲ, ಅದು ಈ ದೇಶದ ಅಸ್ಮಿತೆ ಎಂದೆಲ್ಲಾ ಪ್ರತಿಪಾದಿಸುತ್ತಾ ಅದು ಬರೆಯುತ್ತಿರುವ ಹೊಸ ಕಥನಕ್ಕೆ ಈ EWS ಮೀಸಲಾತಿಯ ತರ್ಕ ಮತ್ತಷ್ಟು ಪುಷ್ಟಿ ಕೊಡುತ್ತದೆ. ಬ್ರಾಹ್ಮಣಶಾಹಿಯನ್ನು ಬಲಿಷ್ಠಗೊಳಿಸುತ್ತದೆ. ಮತ್ತೊಂದೆಡೆ ಈ ಬಡವರಲ್ಲಿ ದಲಿತ-ಒಬಿಸಿ ಬಡವರನ್ನು ಹೊರಗಿಡುವ ಮೂಲಕ ಮತ್ತು ಮೇಲ್ಜಾತಿ ಬಡತನಕ್ಕೆ ವಾರ್ಷಿಕ 8 ಲಕ್ಷ ಆದಾಯದ ಮೇಲ್ಮಿತಿಯನ್ನು ನಿಗದಿ ಮಾಡುವ ಮೂಲಕ ಸಾಂವಿಧಾನಿಕವಾಗಿಯೇ ಮೇಲ್ಜಾತಿಗಳಿಗೆ ಇತರರಿಗೆ ಇಲ್ಲದ ವಿಶೇಷ ಸ್ಥಾನವನ್ನು ಒದಗಿಸಿದೆ.

ಹಾಗೂ ಶೇ.50ರ ಮೀಸಲಾತಿ ಮೇಲ್ಮಿತಿಯನ್ನು ಮೀರಿ ಸಾಮಾನ್ಯ ವರ್ಗದಲ್ಲಿದ್ದ ಶೇ. 50 ಮೀಸಲಾತಿಯಲ್ಲಿ ಶೇ. 10 ಅನ್ನು ಕತ್ತರಿಸಿ ಮೇಲ್ಜಾತಿಗಳಿಗೆ ಮಾತ್ರ ಮೀಸಲಿರಿಸಿದೆ. ಇದರಿಂದಾಗಿ ಸಾಮಾನ್ಯ ವರ್ಗದ ಕಟ್ ಆಫ್ ಕೋಟಾಕ್ಕೆ ಬೇಕಾದ ಅಂಕಗಳನ್ನು ಪಡೆದು ಸಾಮಾನ್ಯ ವರ್ಗದ ಕೋಟಾದಲ್ಲಿ ಕೂಡಾ ಸ್ಥಾನ ಪಡೆಯುತ್ತಿದ್ದ ದಲಿತ-ಒಬಿಸಿ ಅಭ್ಯರ್ಥಿಗಳಿಗೆ ಶೇ. 10ರಷ್ಟು ಅವಕಾಶ ಕಡಿತವಾಗಿದೆ. ಇದನ್ನು ಸುಪ್ರೀಂ ಕೋರ್ಟಿನ ಬಹುಮತದ ತೀರ್ಪು ಒಂದು ಅನ್ಯಾಯವೆಂದೇ ಪರಿಗಣಿಸಲಾಗದು ಎಂದು ಹೇಳಿದೆ ಹಾಗೂ ಬಹುಮತದ ತೀರ್ಪು ನೀಡಿರುವ ನ್ಯಾಯಾಧೀಶರು ಆದಷ್ಟು ಬೇಗ ಜಾತಿ ಆಧಾರಿತ ಮೀಸಲಾತಿಯನ್ನು ರದ್ದು ಮಾಡುವ ಮೂಲಕವೇ ಜಾತಿ ರಹಿತ ಸಮಾಜ ಸೃಷ್ಟಿಯಾಗುತ್ತದೆ ಎಂಬ ಬೇಕಾಬಿಟ್ಟಿ ಅಭಿಪ್ರಾಯವನ್ನು ಸಾಂವಿಧಾನಿಕ ಪೀಠದಲ್ಲಿ ಕೂತು ಸೂಚಿಸಿದ್ದಾರೆ. ಇದು ಬರಲಿರುವ ಬ್ರಾಹ್ಮಣಶಾಹಿ ದಾಳಿಗಳ ಮುನ್ಸೂಚನೆಯೂ ಆಗಿರಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)