varthabharthi


ಉಡುಪಿ

ಹೊಸ ಯಕ್ಷಗಾನ ಪ್ರಸಂಗಗಳಿಗೆ ಅನ್ವಯವಾಗಲಿದೆ ಕೃತಿಸ್ವಾಮ್ಯ ಕಾಯ್ದೆ

ಪೆರ್ಡೂರು ಮೇಳ ಆಟದ ಅನಧಿಕೃತ ಚಿತ್ರೀಕರಣಕ್ಕೆ ನಿರ್ಬಂಧ

ವಾರ್ತಾ ಭಾರತಿ : 24 Nov, 2022

ಉಡುಪಿ, ನ.24: ಬಡಗುತಿಟ್ಟಿನ ಶ್ರೀಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಈ ವರ್ಷ ಪ್ರದರ್ಶಿಸುವ ಹೊಸ ಯಕ್ಷಗಾನ ಪ್ರದರ್ಶನಗಳ ಅನಧಿಕೃತ ಚಿತ್ರೀಕರಣವನ್ನು ನಿರ್ಬಂಧಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮದ ಎಚ್ಚರಿಕೆ ನೀಡಿದೆ.

ಇದುವರೆಗೆ ಸಿನಿಮಾ, ನಾಟಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ಕೃತಿಸ್ವಾಮ್ಯ ಕಾಯ್ದೆಯನ್ನು ಇದೀಗ ಯಕ್ಷಗಾನ ಪ್ರದರ್ಶನಕ್ಕೂ ಅನ್ವಯವಾಗುವಂತೆ ಜಾರಿಗೊಳಿಸಲಾಗುತ್ತಿದೆ. ಬಡಗುತಿಟ್ಟಿನ ಡೇರೆ ಮೇಳವಾದ ಪೆರ್ಡೂರು ಮೇಳ ಈಗಾಗಲೇ ಈ ವರ್ಷದ ತನ್ನ ತಿರುಗಾಟವನ್ನು ಪ್ರಾರಂಭಿಸಿದೆ.

ಪೆರ್ಡೂರು ಮೇಳ ಈ ವರ್ಷ ಪ್ರೊ.ಪವನ್ ಕಿರಣ್‌ಕೆರೆ ಅವರ ‘ಪಾವನ ತುಳಸಿ’ ಎಂಬ ಹೊಸ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸುತಿದ್ದು, ಇದರ ಪ್ರಥಮ ಪ್ರದರ್ಶನ ಇಂದು ಹೆರಂಜಾಲು ದೇವಸ್ಥಾನದಲ್ಲಿ ನಡೆದಿದೆ. ಇದನ್ನು ಅನಧಿಕೃತವಾಗಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡದಂತೆ ಮುಂಜಾಗ್ರತಾ ಕ್ರಮವಾಗಿ ಇದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಪೆರ್ಡೂರು ಮೇಳದ ವತಿಯಿಂದ ಕರಪತ್ರ ವೊಂದನ್ನು ವ್ಯಾಪಕವಾಗಿ ಹರಿಯಬಿಡಲಾ ಗಿದೆ. ಇದರಲ್ಲಿ ‘ನಮ್ಮ ಮಂಡಳಿಯ ಪ್ರದರ್ಶನಗಳ ವೀಡಿಯೋ ರೆಕಾರ್ಡ ಮಾಡುವಂತಿಲ್ಲ. ಕೃತಿ ಸ್ವಾಮ್ಯ ಕಾಯ್ದೆ 1957 ಸೆಕ್ಷನ್ 63ರ ಅಡಿಯಲ್ಲಿ ನಮ್ಮ ಪ್ರದರ್ಶನದ ಅನಧಿಕೃತ ವೀಡಿಯೋ ರೆಕಾರ್ಡಿಂಗ್, ಯೂಟ್ಯೂಬ್, ಫೇಸ್‌ಬುಕ್, ವಾಟ್ಸಪ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.’ ಎಂದು ಎಚ್ಚರಿಸಲಾಗಿದೆ.

‘ಈ ಶಿಕ್ಷೆಯು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಕಠಿಣ ಕಾರಾಗೃಹ ಶಿಕ್ಷೆ ಅಥವಾ 50,000ರೂ.ನಿಂದ 1,00,000ರೂ.ವರೆಗೆ ದಂಡವನ್ನು ಒಳಗೊಂಡಿರುತ್ತದೆ’ ಎಂದು ಕರಪತ್ರದಲ್ಲಿ ಎಚ್ಚರಿಸಲಾಗಿದೆ.

ಹೊಸ ಕಥೆಯ ಪ್ರಧಾನ ಘಟ್ಟವೊಂದು ಆಟ ನೋಡುವ ಮೊದಲೇ ಪ್ರೇಕ್ಷಕರಿಗೆ ತಿಳಿದು ಬಿಟ್ಟರೆ ಆತನನ್ನು ಕಲಾವಿದ ಹಿಡಿದಿಟ್ಟುಕೊಳ್ಳುವುದು ಸಾಧ್ಯವಿಲ್ಲ. ಡೇರೆ ಮೇಳಗಳಿಗೆ ಅನ್ನ ನೀಡುವುದೇ ಹೊಸ ಪ್ರಸಂಗಗಳು. ಹೀಗಿರುವಾಗ ಮೇಳ, ಕಲೆ, ಕಲಾವಿದ, ಸಂಘಟಕರ ಉಳಿವು ಕಲಾಭಿಮಾನಿ ಗಳ ಕೈಯಲ್ಲಿದೆ. ಹೀಗಾಗಿ ಖಂಡಿತ ನೀವು ನಮ್ಮೊಂದಿಗಿರುವಿರಿ ಎಂಬ ನಂಬಿಕೆಯಲ್ಲಿ ನಾವಿದ್ದೇವೆ ಎಂದು ಅದರಲ್ಲಿ ಹೇಳಲಾಗಿದೆ.

ಕಳೆದ ವರ್ಷದ ಪೆರ್ಡೂರು ಮೇಳದ ತಿರುಗಾಟದ ವೇಳೆ ಹೆಚ್ಚುಕಮ್ಮಿ ಎಲ್ಲಾ ಪ್ರಸಂಗಗಳು ಚಿಕ್ಕ ಚಿಕ್ಕ ತುಣುಕು ಗಳಾಗಿ ಜಾಲತಾಣಗಳಲ್ಲಿ ಯಕ್ಷಗಾನ ಪ್ರಿಯರ ನಡುವೆ ಹರಿದಾಡಿತ್ತು. ಅದರಲ್ಲೂ ಪ್ರಸಂಗ ಪ್ರಮುಖ ಘಟ್ಟ ಹಾಗೂ ಹಾಸ್ಯ ಸನ್ನಿವೇಶಗಳು ಹೆಚ್ಚು ಜನಪ್ರಿಯಗೊಂಡಿದ್ದವು. ಇದರಿಂದ ಮೇಳದ ಯಜಮಾನರಿಗೆ ಮಾತ್ರವಲ್ಲದೇ, ಆಟವನ್ನು ವಹಿಸಿಕೊಳ್ಳುವವರಿಗೂ ಭಾರೀ ನಷ್ಟವಾಗಿತ್ತು. ಹೀಗಾಗಿ ಎಚ್ಚರ ವಹಿಸಿ ಈ ವರ್ಷ ಆಡುವ ಹೊಸ ಪ್ರಸಂಗಗಳಿಗೆ ಕೃತಿಸ್ವಾಮ್ಯ ಕಾಯ್ದೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪೆರ್ಡೂರು ಮೇಳದ ಯಜಮಾನರಾದ ವೈ. ಕರುಣಾಕರ ಶೆಟ್ಟಿ ತಿಳಿಸಿದ್ದಾರೆ.

ಹೊಸ ಪ್ರಸಂಗಗಳಿಗೆ ಅನ್ವಯ: ಯಕ್ಷಗಾನದಲ್ಲಿ ಹೊಸ ಪ್ರಸಂಗಗಳಿಗೆ ಮಾತ್ರ ಕೃತಿ ಸ್ವಾಮ್ಯ ಕಾಯ್ದೆ ಅನ್ವಯ ವಾಗುತ್ತದೆ. ಈಗಾಗಲೇ ಪ್ರದರ್ಶನಗೊಂಡಿರುವ ಪ್ರಸಂಗಗಳಿಗೆ ಇದನ್ನು ಅನ್ವಯಿಸಲು ಆಗುವುದಿಲ್ಲ. ಈ ಬಾರಿ ಪವನ್ ಕಿರಣ್‌ಕೆರೆ ಅವರ ಹೊಸ ಪ್ರಸಂಗ ‘ಪಾವನ ತುಳಸಿ’ಯ ಕೃತಿಸ್ವಾಮ್ಯವನ್ನು ಯಕ್ಷಗಾನದಲ್ಲಿ ಮೇಳದ ಯಜಮಾನರು ಹೊಂದಿರುತ್ತಾರೆ ಎಂದು ಕರುಣಾಕರ ಶೆಟ್ಟಿ ತಿಳಿಸಿದರು.

ಈ ಹಿಂದೆ ಪವನ್ ಕಿರಣ್‌ಕೆರೆ ಅವರ ಗಗನತಾರೆಯೂ ಸೇರಿದಂತೆ ಹಲವು ಪ್ರಸಂಗಗಳು ಸೂಪರ್‌ ಹಿಟ್ ಆಗಿದ್ದವು. ಆದರೆ ಅವುಗಳನ್ನುಚಿಕ್ಕ ಚಿಕ್ಕ ಭಾಗಗಳಲ್ಲಿ ಅನಧಿಕೃತವಾಗಿ ಶೂಟಿಂಗ್ ಮಾಡಿ ಫೇಸ್‌ಬುಕ್, ವಾಟ್ಸಪ್‌ಗಳಲ್ಲಿ ಹರಿದು ಬಿಡಲಾಗಿತ್ತು. ಇದರಿಂದ ಮೇಳಕ್ಕೆ ಹಾಗೂ ಸಂಘಟಕರಿಗೆ ಭಾರೀ ಸಮಸ್ಯೆ ಗಳಾಗಿದ್ದವು. ಪ್ರಸಂಗಗಳನ್ನು ಅನಧಿಕೃತವಾಗಿ ಶೂಟಿಂಗ್ ನಡೆಸದಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಅದಕ್ಕೆ ಬೆಲೆ ಸಿಗದ ಕಾರಣ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕರುಣಾಕರ ಶೆಟ್ಟಿ ವಿವರಿಸಿದರು.

ಹೆಚ್ಚಾಗಿ ಡೇರೆ ಮೇಳಗಳು ಮಾತ್ರ ಪ್ರತಿ ವರ್ಷ ಪ್ರೇಕ್ಷಕರ ಆಸಕ್ತಿ ಉಳಿಸಿಕೊಳ್ಳಲು ಹೊಸ ಹೊಸ ಪ್ರಸಂಗಗಳನ್ನು ಪ್ರದರ್ಶಿಸುತ್ತವೆ. ಉಳಿದಂತೆ ಈಗಲೂ ಜನರು  ಹೆಚ್ಚಾಗಿ ಬಯಸುವುದು ಮಹಾಭಾರತ, ರಾಮಾಯಣ ಹಾಗೂ ಪುರಾಣಗಳನ್ನು ಆಧರಿಸಿದ ಪ್ರಸಂಗಗಳನ್ನೇ. ಇನ್ನು ಬಯಲಾಟ ಮೇಳಗಳಲ್ಲಿ ಹಾಗೂ ಸಂಘಸಂಸ್ಥೆಗಳ ಹವ್ಯಾಸಿಗಳು ಪ್ರದರ್ಶಿಸುವ ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗಗಳನ್ನೇ ಹೆಚ್ಚಾಗಿ ಆಡಲಾಗುತ್ತವೆ. ಅವುಗಳಿಗೆ ಈ ಕಾಯ್ದೆ ಅನ್ವಯವಾಗುವುದಿಲ್ಲ.

ಯಕ್ಷಗಾನದಲ್ಲಿ ಪೆರ್ಡೂರು ಮೇಳ ಮೊದಲ ಬಾರಿ ಕಟ್ಟುನಿಟ್ಟಾಗಿ ಜಾರಿಗೆ ತರಲುದ್ದೇಶಿಸಿರುವ ಕೃತಿ ಸ್ವಾಮ್ಯ ಕಾಯ್ದೆಗೆ ಉಳಿದ ಮೇಳಗಳ ಪ್ರತಿಕ್ರಿಯೆ ಹಾಗೂ ಕಾಯ್ದೆಯ ಯಶಸ್ಸಿನ ಪ್ರಮಾಣವನ್ನು ಕಾದುನೋಡಬೇಕಿದೆ.

ಫ್ರೀ ಪಾಸ್ ಮನ್ನಾ: ಯಕ್ಷಗಾನ ಸಂಘಟಕರು ಹಾಗೂ ಆಯೋಜಕರ ಬಹುಕಾಲದ ಕೋರಿಕೆಯ ಮೇರೆಗೆ ಪೆರ್ಡೂರು ಮೇಳದಲ್ಲಿ ನೀಡಲಾಗುತಿದ್ದ ಫ್ರೀಪಾಸ್ (ಉಚಿತ ಪಾಸ್)ಗಳನ್ನು ರದ್ದುಪಡಿಸಲಾಗಿದೆ ಎಂದು ಮೇಳದ ಯಜಮಾನರಾದ ವೈ.ಕರುಣಾಕರ ಶೆಟ್ಟಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)