varthabharthi


ದಕ್ಷಿಣ ಕನ್ನಡ

ಕಂದಕಕ್ಕೆ ಉರುಳಿದ ರಿಕ್ಷಾ: ನಾಲ್ಕು ಮಂದಿಗೆ ಗಾಯ

ವಾರ್ತಾ ಭಾರತಿ : 24 Nov, 2022

ಬೆಳ್ತಂಗಡಿ: ಚಿಬಿದ್ರೆ ಗ್ರಾಮದ ಕಾಪು ಚಡಾವು ಎಂಬಲ್ಲಿ ರಸ್ತೆಯಿಂದ ಮೃತ್ಯುಂಜಯ ನದಿಬದಿಯ ಕಂದಕಕ್ಕೆ ರಿಕ್ಷಾ ಉರುಳಿ ಬಿದ್ದು ನಾಲ್ವರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.

ಉಜಿರೆ ಕಡೆಯಿಂದ ಶಿವಮೊಗ್ಗದತ್ತ ಸಾಗುತ್ತಿದ್ದ ಆಟೋರಿಕ್ಷಾ ಕಾಪು ಎಂಬಲ್ಲಿ ಸಾಗುತ್ತಿದ್ದಾಗ ಮುಂದಿನಿಂದ ಬಂದ ವಾಹನಕ್ಕೆ ಸೈಡ್ ಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಹಾಗೂ ನದಿ ಮಧ್ಯದ ಸುಮಾರು 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಸಮಯ ನದಿಯಿಂದ ಸುಮಾರು ಒಂದು ಮೀ. ಅಂತರದಲ್ಲಿ ರಿಕ್ಷಾ ಮರ ಒಂದಕ್ಕೆ ಸಿಲುಕಿಕೊಂಡ ಕಾರಣ ಸಂಭವನೀಯ ದುರಂತ ತಪ್ಪಿದೆ.

ನದಿಯು ಈ ಭಾಗದಲ್ಲಿ ಸುಮಾರು 10 ರಿಂದ 12 ಅಡಿಯಷ್ಟು ಆಳವಿದೆ. ಶಿವಮೊಗ್ಗ ಮೂಲದ ಗಾಯಾಳುಗಳಾದ ಶಾರದಮ್ಮ, ಭಾರತೀಯಮ್ಮ,ಗೀತಾ ಹಾಗೂ ರಮೇಶ್ ಎಂಬವರನ್ನು ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆಟೋರಿಕ್ಷಾ ಉರುಳಿದ ಕಂದಕ ಪ್ರದೇಶದಲ್ಲಿ ಸಾಕಷ್ಟು ತ್ಯಾಜ್ಯ ತಂದು ಹಾಕಲಾಗಿದ್ದು, ಪರಿಸರದಲ್ಲಿ ಹರಡಿರುವ ದುರ್ವಾಸನೆ ಹಾಗೂ ತ್ಯಾಜ್ಯಗಳ ರಾಶಿ ನಡುವೆ ಗಾಯಾಳು ಪ್ರಯಾಣಿಕರನ್ನು ಸ್ಥಳೀಯರು ಹರಸಾಹಸ ಪಟ್ಟು ಮೇಲಕ್ಕೆತ್ತಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)