varthabharthi


ಬೆಂಗಳೂರು

''ಶೇ. 90ರಷ್ಟು ಕ್ರಿಮಿನಲ್ ಪ್ರಕರಣಗಳು ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದವು...''

ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಯಾವುದೇ ಜಾತಿ-ಧರ್ಮದ ಹಂಗಿಲ್ಲ: ಡಾ.ಜ್ಯೋತಿ

ವಾರ್ತಾ ಭಾರತಿ : 25 Nov, 2022

ಬೆಂಗಳೂರು, ನ. 25: 2019ರ ಸೈಬರ್ ವರದಿ ಪ್ರಕಾರ ಶೇ.90ರಷ್ಟು ಕ್ರಿಮಿನಲ್ ಪ್ರಕರಣಗಳು ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದಾಖಲಾಗಿವೆ. ‘ಸಮಾಜದಲ್ಲಿ ಗಂಡನ್ನು ತಿದ್ದಿ ತೀಡಿದರೆ ಹೆಣ್ಣಿನ ಸಮಸ್ಯೆಗಳು ಸಮಸ್ಯೆಗಳಾಗಿ ಉಳಿಯುವುದಿಲ್ಲ’ ಎಂದು ಬರಹಗಾರ್ತಿ ಡಾ.ಜ್ಯೋತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಯುವಿಸಿಇ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ‘ಅಂತರರಾಷ್ಟ್ರೀಯ ಮಹಿಳೆಯರ ಮೇಲಿನ ದೌರ್ಜನ್ಯ ಹತ್ತಿಕ್ಕುವ ದಿನ’ ದ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪ್ರತಿಯೊಂದು ಹೆಣ್ಣು ವಿವಿಧ ಆಯಾಮಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಾಳೆ. ನಾವು ಮೊದಲು ಗಂಡಸನ್ನು ಸರಿಯಾದ ರೀತಿಯಲ್ಲಿ ತಿದ್ದಿ ತೀಡಿದರೆ ಹೆಣ್ಣಿನ ಸಂಕಷ್ಟ, ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ. ಇಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಆದರೆ ಮಹಿಳೆಯರು ಮಾತ್ರ ಸ್ವಇಚ್ಛೆಯಿಂದ ಧೈರ್ಯವಾಗಿ ಬದುಕಲು ಇಂದಿಗೂ ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರತಿಯೊಂದು ಕ್ಷೇತ್ರದಲ್ಲಿಯೂ ಜಾತಿ, ಧರ್ಮ, ಸಮುದಾಯ ಎನ್ನುತ್ತಿರುವ ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಯಾವುದೇ ಜಾತಿ-ಧರ್ಮದ ಹಂಗಿಲ್ಲ. ಮಹಿಳೆಯರ ರಕ್ಷಣೆಗಾಗಿ ಅನೇಕ ಕಾನೂನುಗಳಿವೆ. ಆದರೆ ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೆಣ್ಣಿನಲ್ಲಿಯೇ ದೋಷ ಹುಡುಕುವ ಸಮಾಜ ನಮ್ಮದು’ ಎಂದು ದೂರಿದರು.

‘ಮನೆಗಳಲ್ಲಿ ಗಂಡು-ಹೆಣ್ಣು ಎಂಬ ಬೇಧ-ಭಾವ ಮಾಡಿದರೆ, ಸಮಾಜದಲ್ಲಿ ವರದಕ್ಷಿಣೆ, ಆ್ಯಸಿಡ್ ದಾಳಿ, ಮರ್ಯಾದಾ ಹತ್ಯೆ, ಅತ್ಯಾಚಾರ ಸೇರಿದಂತೆ ವಿವಿಧ ರೀತಿಯಲ್ಲಿ ದೌರ್ಜನ್ಯಕ್ಕೆ ಮಹಿಳೆ ಒಳಗಾಗುತ್ತಿದ್ದಾಳೆ. ನಿರ್ಭಯ ಪ್ರಕರಣದ ತೀರ್ಪು ಬರಲು ವರ್ಷ ಬೇಕಾಯಿತು. ಹೀಗಾಗಿ ನ್ಯಾಯಕ್ಕಾಗಿ ಹೋರಾಡಲು ಮಹಿಳೆಯರು ಮಾನಸಿಕವಾಗಿಯೂ ಧೈರ್ಯದಿಂದಿರಬೇಕಾಗುತ್ತದೆ ಎಂದರು.

ಎಐಎಂಎಸ್‍ಎಸ್ ಕಾರ್ಯದರ್ಶಿ ಎಸ್.ಶೋಭಾ ಮಾತನಾಡಿ, ‘ಹೆಣ್ಣು ತುಂಬಾ ಸಹನಾ ಜೀವಿ. ಆದುದರಿಂದ ಬಹುತೇಕರು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಾರೆ. ಹಾಗಾಗಿ ಮಹಿಳೆಯರು ಮೊದಲು ಮಾತನಾಡುವುದನ್ನು ಕಲಿಯಬೇಕು. ಸಮಾಜದಲ್ಲಾಗುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಬೇಕು. ಆಗ ಮಾತ್ರ ಸಮಾಜದಲ್ಲಿ ನಮಗೆ ಬೆಲೆ ಕೊಡುತ್ತಾರೆ’ ಎಂದು ವಿವರಿಸಿದರು.

ಅಧ್ಯಕ್ಷೆ ಹೇಮಾವತಿ ಮಾತನಾಡಿ, ‘ಹೆಣ್ಣು ಎಲ್ಲಾ ಕ್ಷೇತ್ರದಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾಳೆ. ಆದರೆ ಯಾವು ಕ್ಷೇತ್ರದ ಹೆಣ್ಣು ಮಕ್ಕಳೂ ನೆಮ್ಮದಿ ಜೀವನ ನಡೆಸುತ್ತಿಲ್ಲ. ಸಮಾಜದಲ್ಲಿ ಮಹಿಳೆಗೆ ನ್ಯಾಯ, ಸಮಾನತೆ ಸಿಗಬೇಕಾದರೆ ಸಂಘಟಿತ ಹೋರಾಟ ಅಗತ್ಯ. ಹೀಗಾಗಿ ಸಂಘಟನೆಯು ಡಿ.10ರ ವರೆಗೆ ವಿವಿಧ ಬಡಾವಣೆಯಲ್ಲಿ ವಿವಿಧ ಕಾರ್ಯಕ್ರಮ ಮಾಡುವ ಮೂಲಕ ಮಹಿಳೆಯರ ಮೇಲಿನ ದೌರ್ಜನ್ಯ ಹತ್ತಿಕ್ಕುವ ದಿನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತದೆ’ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)