ರಾಷ್ಟ್ರೀಯ
ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ರಾಮ್‌ದೇವ್ ಗೆ ಮಹಿಳಾ ಆಯೋಗ ನೋಟಿಸ್

ಮುಂಬೈ: ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಉದ್ಯಮಿ, ಯೋಗ ಗುರು ರಾಮದೇವ್ ಅವರಿಗೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ ನೋಟಿಸ್ ಕಳುಹಿಸಿದೆ. ನೋಟಿಸ್‌ಗೆ ಉತ್ತರಿಸಲು ರಾಮದೇವ್ ಗೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ.
“ನಿಮ್ಮ ಒಂದು ಕಾಮೆಂಟ್ ಮಹಿಳೆಯರ ಗೌರವವನ್ನು ಉಲ್ಲಂಘಿಸಿದೆ ಎಂದು ಆಯೋಗದ ಕಚೇರಿಗೆ ದೂರು ಬಂದಿದೆ. ಇದರ ಪರಿಣಾಮವಾಗಿ, ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ, 1993 ರ ಸೆಕ್ಷನ್ 12 (2) ಮತ್ತು 12 (3) ರ ಪ್ರಕಾರ, ಬಾಬಾ ರಾಮ್‌ದೇವ್ ಅವರ ಹೇಳಿಕೆಯ ವಿವರಣೆಯನ್ನು ಆಯೋಗದ ಕಚೇರಿಗೆ ಮೂರು ದಿನಗಳಲ್ಲಿ ನೀಡುವಂತೆ ಆಯೋಗವು ಆದೇಶಿಸುತ್ತದೆ ”ಎಂದು ಮಹಿಳಾ ಆಯೋಗವು ರಾಮ್‌ದೇವ್ ಗೆ ಪತ್ರ ಬರೆದಿದೆ.
ಶುಕ್ರವಾರ ಥಾಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಬಾ ರಾಮ್‌ದೇವ್, "ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಮಹಿಳೆಯರು ಸಲ್ವಾರ್ ಕಮೀಜ್‌ನಲ್ಲಿ ಚೆನ್ನಾಗಿ ಕಾಣುತ್ತಾರೆ ಮತ್ತು ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ" ಎಂದು ಹೇಳಿದ್ದರು. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ, ಸಂಸದ ಶ್ರೀಕಾಂತ್ ಶಿಂಧೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಮ್‌ದೇವ್ ಅವರ ಹೇಳಿಕೆಯು ಮಹಿಳೆಯರಿಗೆ ಅವಮಾನವಾಗಿದೆ ಎಂದು ಮಹಿಳಾ ಆಯೋಗವು ನೋಟಿಸ್‌ನಲ್ಲಿ ಹೇಳಿದೆ.
ಮಹಾರಾಷ್ಟ್ರ ವಿಧಾನ ಪರಿಷತ್ತಿನ ಉಪ ಸಭಾಪತಿ ನೀಲಮ್ ಗೊರ್ಹೆ ಕೂಡ ಬಾಬಾ ರಾಮ್‌ದೇವ್ ಅವರ ಹೇಳಿಕೆಯನ್ನು ಖಂಡಿಸಿದ್ದು, ಈ ಹೇಳಿಕೆಗಳು ರಾಮದೇವ್ ಅವರ ಮನಸ್ಥಿತಿಯ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದ್ದಾರೆ.
"ಅವರು ಮಿತಿಯಲ್ಲಿರುವ ಬಗ್ಗೆ ಹಾಗೂ ಯೋಗದ ಪ್ರಯೋಜನಗಳ ಬಗ್ಗೆ ಸಮಾಜಕ್ಕೆ ಬೋಧಿಸುತ್ತಾರೆ, ಆದರೆ ಮಹಿಳೆಯರೊಂದಿಗೆ ಅವರ ಯೋಚನೆಯು ತುಂಬಾ ಕಲುಷಿತವಾಗಿದೆ, ಅದು ಸಂಪೂರ್ಣವಾಗಿ ಅಸ್ವೀಕಾರಾರ್ಹ. ಎಲ್ಲಾ ಪುರುಷರು ಮಹಿಳೆಯರ ಬಗ್ಗೆ ಈ ದೃಷ್ಟಿಕೋನವನ್ನು ಹೊಂದಿರುವುದಿಲ್ಲ. ತನ್ನ ದೈನಂದಿನ ಜೀವನದಲ್ಲಿ, ಒಬ್ಬ ಮಹಿಳೆ ತನ್ನ ಮನೆಯಲ್ಲಿ ಸಹೋದರರು, ಸ್ನೇಹಿತರು ಮತ್ತು ಸಹೋದ್ಯೋಗಿಗಳು ಸೇರಿದಂತೆ ಹಲವಾರು ಗಂಡಸರೊಂದಿಗೆ ಸಂವಹನ ನಡೆಸುತ್ತಾಳೆ. ಆದರೆ ನಮ್ಮ ರಾಷ್ಟ್ರದಲ್ಲಿ ಗುರುಗಳೆಂದು ಗುರುತಿಸಿಕೊಳ್ಳುವ ಅನೇಕ ಪುರುಷರು ಇಂತಹ ಅಸಹ್ಯಕರ ಮಾತುಗಳನ್ನಾಡುತ್ತಿರುವುದು ದುರದೃಷ್ಟಕರ” ಎಂದು ಅವರು ಹೇಳಿದ್ದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ