varthabharthi


ಸಂಪಾದಕೀಯ

ಚುನಾವಣಾ ಆಯೋಗದ ದುರ್ಬಳಕೆ; ಸುಪ್ರೀಂ ಕೋರ್ಟ್ ಆಕ್ಷೇಪ

ವಾರ್ತಾ ಭಾರತಿ : 29 Nov, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇಂದಿಗೂ ಮಾದರಿಯಾಗಿರುವುದು ಅದರ ಪಾರದರ್ಶಕತೆಯಿಂದ. ಇದನ್ನು ಜೋಪಾನವಾಗಿ ಕಾಪಾಡುವಲ್ಲಿ, ಜಾರಿ ನಿರ್ದೇಶನಾಲಯದ ಮುಖ್ಯಸ್ಥರು, ರಿಸರ್ವ್ ಬ್ಯಾಂಕ್ ಗವರ್ನರ್, ಲೋಕಪಾಲ ಆಯುಕ್ತರು, ಅದೇ ರೀತಿ ಚುನಾವಣಾ ಆಯೋಗದ ಆಯುಕ್ತರು ಮಹತ್ವದ ಪಾತ್ರ ವಹಿಸುತ್ತಾ ಬಂದಿದ್ದಾರೆ. ಹಾಗಾಗಿಯೇ ಈ ಹುದ್ದೆಗಳನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ. ಇಂತಹ ಸಂಸ್ಥೆಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡುವಾಗ ಎಚ್ಚರ ವಹಿಸಲಾಗುತ್ತದೆ. ಸಂವಿಧಾನದ ೩೨೪ನೇ ವಿಧಿಯ ಪ್ರಕಾರ ಇವುಗಳು ಸ್ವಾಯತ್ತ ಸಾಂವಿಧಾನಿಕ ಅಧಿಕಾರವನ್ನು ಹೊಂದಿವೆ. ಆದರೆ ಇತ್ತೀಚಿನ ಏಳೆಂಟು ವರ್ಷಗಳಿಂದ ಇವುಗಳ ಸ್ವತಂತ್ರ ಕಾರ್ಯ ನಿರ್ವಹಣೆಗೆ ಕೇಂದ್ರ ಸರಕಾರ ಅಡ್ಡಿ ಪಡಿಸುತ್ತಿರುವುದು ಗುಟ್ಟಿನ ಸಂಗತಿಯಲ್ಲ. ಇದೀಗ ಸುಪ್ರೀಂ ಕೋರ್ಟ್ ಅಸಮಾಧಾನಕ್ಕೂ ಕಾರಣವಾಗಿದೆ.

ಚುನಾವಣಾ ಆಯೋಗದ ಸ್ವತಂತ್ರ ಕಾರ್ಯ ನಿರ್ವಹಣೆಯಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುತ್ತಿದೆ, ಚುನಾವಣಾ ಆಯೋಗದ ಆಯುಕ್ತರ ನೇಮಕದಲ್ಲಿ ಪಾರದರ್ಶಕತೆಯ ಬಗ್ಗೆ ಸಂಶಯ ಉಂಟಾಗಿದೆ ಎಂದು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ ರಾಯ್ ಮತ್ತು ಸಿ.ಟಿ. ರವಿಕುಮಾರ್ ಅವರನ್ನು ಒಳಗೊಂಡ ಸಂವಿಧಾನ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಚುನಾವಣಾ ಆಯೋಗಕ್ಕೆ ಸರಕಾರದ ಮಾತು ಕೇಳುವ ಹೌದಪ್ಪಗಳು ಬೇಕೇ ಎಂದು ಪ್ರಶ್ನಿಸಿದೆ.

ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗಕ್ಕೆ ಸರಕಾರ ನೇಮಕ ಮಾಡುವ ಆಯುಕ್ತರು ಸಮರ್ಥರು ಮಾತ್ರವಲ್ಲ, ಯಾವುದೇ ಪ್ರಭಾವಕ್ಕೆ ಜಗ್ಗದ, ಬೆದರಿಕೆಗಳಿಗೆ ಮಣಿಯದ ದಿಟ್ಟ ವ್ಯಕ್ತಿಗಳಾಗಿರಬೇಕು ಎಂಬ ಸುಪ್ರೀಂ ಕೋರ್ಟ್ ಅಭಿಪ್ರಾಯ ಸರಿಯಾಗಿದೆ. ಚುನಾವಣಾ ಆಯುಕ್ತರ ನೇಮಕದಲ್ಲಿ ಕೊಲಿಜಿಯಂ ಸ್ವರೂಪದ ವ್ಯವಸ್ಥೆ ಇರಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ಗಳ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಹೀಗೆ ಹೇಳಿದೆ.

ವಾಸ್ತವವಾಗಿ ಚುನಾವಣಾ ಆಯೋಗಕ್ಕೆ ಸಾಂವಿಧಾನಿಕ ಸ್ವಾಯತ್ತ ಅಧಿಕಾರ ವಿದ್ದರೂ ೧೯೯೦-೯೬ ಕಾಲಾವಧಿಯಲ್ಲಿ ಟಿ.ಎನ್. ಶೇಷನ್ ಆಯೋಗದ ಆಯುಕ್ತ ಪದವಿಯನ್ನು ವಹಿಸಿಕೊಳ್ಳುವವರೆಗೆ ಈ ಹುದ್ದೆಗೆ ಇಷ್ಟು ಪರಮಾಧಿಕಾರ ಇದೆ ಎಂದು ಅನೇಕರಿಗೆ ಗೊತ್ತಿರಲಿಲ್ಲ. ಹಾಗಾಗಿಯೇ ಚುನಾವಣಾ ನಿಯಮಾವಳಿಗಳು ಕಟ್ಟುನಿಟ್ಟಾಗಿ ಜಾರಿಯಾಗುತ್ತಿರಲಿಲ್ಲ. ಹಾಗಾಗಿ ಅಕ್ರಮ ಮತದಾನ, ಮತಗಟ್ಟೆ ಆಕ್ರಮಣ, ನಕಲಿ ಮತದಾನಗಳು ಸಾಮಾನ್ಯ ಸಂಗತಿಗಳಾಗಿದ್ದವು. ಶೇಷನ್ ಕಾಲದಲ್ಲಿ ಇವುಗಳಿಗೆಲ್ಲ ಕಡಿವಾಣ ಹಾಕಿದರು. ಆದ್ದರಿಂದ ಶೇಷನ್ ಅವರಂತಹ ಆಯುಕ್ತರ ಅಗತ್ಯ ಈಗ ಚುನಾವಣಾ ಆಯೋಗಕ್ಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಚುನಾವಣಾ ಆಯೋಗದ ಆಯುಕ್ತರ ಅಧಿಕಾರಾವಧಿ ಆರು ವರ್ಷ ಎಂದು ಕಾನೂನು ಹೇಳುತ್ತದೆ, ಆದರೆ ಟಿ.ಎನ್. ಶೇಷನ್ ನಂತರ ಯಾರೂ ಆರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿಲ್ಲ. ಎಂ.ಎಸ್. ಗಿಲ್ ಮಾತ್ರ ೪ ವರ್ಷ ೬೯ ದಿನ ಅಧಿಕಾರದಲ್ಲಿ ಇದ್ದರು. ಉಳಿದವರೆಲ್ಲರೂ ಅಲ್ಪಾವಧಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿಯ ಅಂಚಿನಲ್ಲಿರುವ ಅಧಿಕಾರಿಗಳನ್ನೇ ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಕ ಮಾಡಿ ಆಯುಕ್ತರ ಹುದ್ದೆಯ ಮಹತ್ವವನ್ನು ಸರಕಾರ ಕಡೆಗಣಿಸಿದೆ. ಆ ಹುದ್ದೆಯನ್ನು ದುರ್ಬಲಗೊಳಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸರಿಯಾಗಿಯೇ ಇದೆ.

ಇತ್ತೀಚೆಗೆ ಚುನಾವಣಾ ಆಯೋಗದ ಆಯುಕ್ತರನ್ನಾಗಿ ಅರುಣ್ ಗೋಯಲ್ ರನ್ನು ನೇಮಕ ಮಾಡಿರುವುದು ಆತುರದ ತೀರ್ಮಾನ ಎಂದು ಹೇಳಿದ ಸುಪ್ರೀಂ ಕೋರ್ಟ್ ಈ ತರಾತುರಿಯ ನೇಮಕದಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇದೆ ಎಂಬ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ವಾದವನ್ನು ತಳ್ಳಿ ಹಾಕಿಲ್ಲ. ಅಲ್ಲದೇ ಅರುಣ್ ಗೋಯಲ್ ಅವರ ನೇಮಕದ ಕಡತವನ್ನು ಕಾನೂನು ಸಚಿವಾಲಯ ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಳಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಈ ನೇಮಕದ ಕಡತವನ್ನು ಮೊದಲು ಕೇಂದ್ರ ಮಂತ್ರಿ ಮಂಡಲಕ್ಕೆ ಕಳಿಸಬೇಕಿತ್ತು, ಅದರ ಬದಲಿಗೆ ಪ್ರಧಾನಿಗೆ ಕಳಿಸಿದ್ದೇಕೆ ಎಂದು ಸಂವಿಧಾನ ಪೀಠ ಪ್ರಶ್ನಿಸಿದೆ.

ಈಗಾಗಲೇ ಬಹುತೇಕ ಸಂವಿಧಾನಿಕ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಸುಪ್ರೀಂ ಕೋರ್ಟ್ ಬಗೆಗೂ ಇತ್ತೀಚೆಗೆ ಅಪಸ್ವರ ತೆಗೆದಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ  ನ್ಯಾಯಮೂರ್ತಿಗಳ ನೇಮಕಕ್ಕಾಗಿ ಇರುವ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಕೇಂದ್ರ ಕಾನೂನು ಸಚಿವ ರಿಜಿಜು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಆದರೆ ಸರಕಾರ ಎಂಬುದು ಸಂವಿಧಾನಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸ ಬೇಕಾಗುತ್ತದೆ. ಸ್ವಾಯತ್ತ ಸಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರ ನೇಮಕದ ಪ್ರಶ್ನೆಯಲ್ಲಿ ಸಂವಿಧಾನಕ್ಕೆ ಅಪಚಾರವಾಗುವಂತೆ ನಡೆದುಕೊಳ್ಳಬಾರದು.ಇತ್ತೀಚಿನ ಗುಜರಾತ್ ವಿಧಾನಸಭಾ ಚುನಾವಣಾ ದಿನಾಂಕದ ಪ್ರಕಟಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗದ ನಡೆಯ ಬಗ್ಗೆ ಪ್ರತಿಪಕ್ಷಗಳು ಮಾತ್ರವಲ್ಲ ಕಾನೂನು ಪರಿಣಿತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಚುನಾವಣಾ ಆಯೋಗದ ಆಯುಕ್ತರು ಸರಕಾರದ ಕೈಗೊಂಬೆಯಂತೆ ಕಾರ್ಯ ನಿರ್ವಹಿಸಬಾರದು. ಕೇಂದ್ರ ಮಂತ್ರಿ ಮಂಡಲದಿಂದ ನಾಮ ನಿರ್ದೇಶನಗೊಂಡು ರಾಷ್ಟ್ರಪತಿಗಳಿಂದ ನೇಮಕಗೊಳ್ಳುವ ಚುನಾವಣಾ ಆಯೋಗದ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಿಗೆ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಸ್ಥಾನವನ್ನು ಕಲ್ಪಿಸಬೇಕು ಎಂಬ ಸಂವಿಧಾನ ಪೀಠದ ಸಲಹೆ ಸಕಾಲಿಕವಾಗಿದೆ.

ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದ ಸಲಹೆಯನ್ನು ಸರಕಾರ ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಸರಕಾರ ಈ ವಿಷಯದಲ್ಲಿ ಒಣ ಪ್ರತಿಷ್ಠೆಯನ್ನು ತೋರಿಸಬಾರದು. ಚುನಾವಣಾ ಆಯುಕ್ತರ ನೇಮಕದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡರೆ ಮಾತ್ರ, ದೇಶದಲ್ಲಿ ನ್ಯಾಯ ಸಮ್ಮತ ಚುನಾವಣೆ ನಡೆದು ಪ್ರಜಾಪ್ರಭುತ್ವದ ನೈಜ ಆಶಯಗಳು ಸಾಕಾರಗೊಳ್ಳಲು ಸಾಧ್ಯ ಎಂಬುದನ್ನು ಮರೆಯಬಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)