varthabharthi


ನಿಮ್ಮ ಅಂಕಣ

‘ಸಾಕಷ್ಟು ಪ್ರಾತಿನಿಧ್ಯ’ ಎಂಬ ಅಂಶ ಬದಿಗೊತ್ತಿ ತಂದಿರುವ ಇಡಬ್ಲ್ಯೂಎಸ್ ತಿದ್ದುಪಡಿ

ವಾರ್ತಾ ಭಾರತಿ : 29 Nov, 2022
ಕೆ.ಎನ್.ಲಿಂಗಪ್ಪ, ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಹಿಂದುಳಿದ ವರ್ಗಗಳು ಸೇವೆಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಪಡೆದುಕೊಂಡಿದ್ದಲ್ಲಿ ಅಥವಾ ಮೀಸಲಾತಿಗೆ ಒಳಪಟ್ಟು ಮುಂದೆ ಪಡೆದುಕೊಂಡಲ್ಲಿ ಅಂತಹವು ಮೀಸಲಾತಿ ಪಡೆಯಲು ಅನರ್ಹಗೊಳ್ಳುತ್ತವೆ. ಆದರೆ ಆರ್ಥಿಕವಾಗಿ ಹಿಂದುಳಿದ ವರ್ಗಗಳು, ನಿರಂತರ, ಯಾವುದೇ ಆತಂಕವಿಲ್ಲದೆ ಮೀಸಲಾತಿ ಸೌಲಭ್ಯ ಪಡೆಯುತ್ತಾ ಹೋಗುತ್ತವೆ. ಇಂದ್ರಾ ಸಹಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ, ಕಾಲಕಾಲಕ್ಕೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸಲು ಸಾಧ್ಯವಾಗುವಂತೆ ಶಾಶ್ವತ ಆಯೋಗ ರಚಿಸಲು ತಿಳಿಸಿತ್ತು. ಆದರೆ, ಇಡಬ್ಲ್ಯೂಎಸ್ (ಜನಹಿತ್ ಅಭಿಯಾನ್ v/s ಭಾರತ ಸರಕಾರ) ಪ್ರಕರಣದಲ್ಲಿ ಈ ಕುರಿತು ಏನನ್ನೂ ಹೇಳದೆ ಮೌನ ತಾಳಿದೆ.

ಸಂವಿಧಾನ ವಿಧಿಗಳಲ್ಲಿ ನಿಚ್ಚಳವಾಗಿ ಹೇಳಲಾಗಿದ್ದರೂ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ದಶಕಗಳ ಕಾಲ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಷ್ಠಾನಕ್ಕೆ ತರಲಿಲ್ಲ. ರಾಜ್ಯದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿಯನ್ನು ೧೯೭೭ರಲ್ಲಿ ಜಾರಿಗೆ ತಂದವರು ಡಿ. ದೇವರಾಜ ಅರಸು ಅವರು. ಆದರೆ ಹಿಂದುಳಿದ ವರ್ಗಗಳು ಅರಿವಿನ ಕೊರತೆಯ ಕಾರಣ ತಮ್ಮ ಹಕ್ಕನ್ನು ಮಂಡಿಸಲಾಗದಿದ್ದ, ದೌರ್ಬಲ್ಯವನ್ನೇ ಕೇಂದ್ರ ಸರಕಾರ ತನ್ನ ಅನುಕೂಲಕ್ಕೆ ಬಳಸಿಕೊಂಡು, ಆ ವರ್ಗಗಳಿಗೆ ಮೀಸಲಾತಿ ದೊರಕಿಸಿ ಕೊಡುವುದನ್ನು ಮುಂದೂಡುತ್ತಲೇ ಬಂದಿತ್ತು. ಕಡೆಗೂ ತಮಿಳುನಾಡಿನ ಒತ್ತಾಯಕ್ಕೆ ಮಣಿದು ಆಯೋಗ ರಚಿಸಿ ೧೯೮೦ರಲ್ಲಿ ವರದಿ ಪಡೆದುಕೊಂಡಿತು. ಆದರೆ ವರದಿ ಶೈತ್ಯಗಾರದಲ್ಲಿ ಒಂದು ದಶಕಗಳ ಕಾಲ ತಣ್ಣಗೆ ಮಲಗಿತ್ತು! ಸುಪ್ತಾವಸ್ಥೆಯಲ್ಲಿದ್ದ ಅದನ್ನು ಎಬ್ಬಿಸಲು ಮತ್ತೊಬ್ಬ ‘ಅರಸು’ ವಿ.ಪಿ.ಸಿಂಗ್ ಅಧಿಕಾರದ ಗದ್ದುಗೆ ಏರಬೇಕಾಯಿತು. ಅವರು ತಮ್ಮ ಪ್ರಧಾನಮಂತ್ರಿ ಅವಧಿಯಲ್ಲಿ ವರದಿ ಆಧರಿಸಿ ಮೀಸಲಾತಿ ಜಾರಿಗೊಳಿಸಿದರು. ಮೇಲ್ಜಾತಿಯ ಮಂದಿ ಅದನ್ನು ವಿರೋಧಿಸಿ ಉತ್ತರ ಭಾರತದ ಹಲವೆಡೆ ತೀವ್ರ ಸ್ವರೂಪದ ಹೋರಾಟಕ್ಕಿಳಿದರು. ಹಾಗೆಯೇ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಗಳನ್ನೂ ದಾಖಲಿಸಿ ತಾವೆಷ್ಟು ಸಾಮಾಜಿಕ ನ್ಯಾಯ ವಿರೋಧಿಗಳೆಂಬುದನ್ನೂ ತೋರಿಸಿಕೊಂಡರು. ಸರ್ವೋಚ್ಚ ನ್ಯಾಯಾಲಯ ಮೀಸಲಾತಿಯನ್ನು ಎತ್ತಿ ಹಿಡಿದು ಅವರ ಹೋರಾಟದ ಕಾವನ್ನು ತಣ್ಣಗಾಗಿಸಿತು.

ನ್ಯಾಯಾಲಯದ ತೀರ್ಪಿನಿಂದಾಗಿ ಇದ್ದ ಎಲ್ಲಾ ಅಡಚಣೆಗಳು ನಿವಾರಣೆಗೊಂಡು, ಮೀಸಲಾತಿ ಅಕ್ಷರಶಃ ಜಾರಿಗೆ ಬಂದಿತು. ಆದರೆ ಅದೇ ಸಮಯದಲ್ಲಿ ಮೀಸಲಾತಿ ವಿರೋಧಿಗಳನ್ನು ತಣಿಸಲು ಪಿ.ವಿ. ನರಸಿಂಹರಾವ್ ಸರಕಾರ ಮೇಲ್ಜಾತಿಯ ಆರ್ಥಿಕ ದುರ್ಬಲರಿಗೆ ಮೀಸಲಾತಿ ಆದೇಶ ಹೊರಡಿಸಿತು(೧೯೯೧). ಆದರೆ ಅದು ನ್ಯಾಯಾಲಯದಲ್ಲಿ ಊರ್ಜಿತವಾಗಲಿಲ್ಲ ಎಂಬುದು ಗಮನಾರ್ಹ ಹಾಗೂ ಉಲ್ಲೇಖನೀಯವೂ ಆಗಿದೆ. ನ್ಯಾಯಾಲಯದ ಆದೇಶದಿಂದ ಮೀಸಲಾತಿ ವಿರೋಧಿಗಳ ಬಹಿರಂಗ ಚಟುವಟಿಕೆಗಳು ತಟಸ್ಥಗೊಂಡರೂ,ಸರಕಾರದ ಮೇಲ್ಮಟ್ಟದಲ್ಲಿ ಮಾತ್ರ ಆ ಮೀಸಲಾತಿಯ ಜೀವ ಕುಟುಕಾಡುತ್ತಲೇ ಇತ್ತು.ಮುಂದೆ ಮನಮೋಹನ್ ಸಿಂಗ್ ಸರಕಾರ ೨೦೦೬ ರಲ್ಲಿ ಎಸ್.ಆರ್.ಸಿನ್ಹೊ ಆಯೋಗ ರಚಿಸಿ ವರದಿ ಕೇಳಿತ್ತು. ಆಯೋಗ, ಪರಿಶಿಷ್ಟ ವರ್ಗಗಳನ್ನು ಹೊರತುಪಡಿಸಿದಂತೆ, ಬೇರೆ ಯಾವುದೇ ಜಾತಿ ಸಮುದಾಯಗಳ ಪ್ರಾಯೋಗಿಕ ದತ್ತಾಂಶಗಳ ಅಲಭ್ಯತೆಯ ಕಾರಣ ಸಮಗ್ರ ಹಾಗೂ ಪೂರಕ ವರದಿಯನ್ನು ಸಿದ್ಧಪಡಿಸಲು ಸಾಧ್ಯವಾಗಲಿಲ್ಲ ಎಂಬ ಮಾತೂ ಕೇಳಿ ಬಂದವು. ೨೦೧೦ರಲ್ಲಿ ಆಯೋಗ ಸರಕಾರಕ್ಕೆ ವರದಿಯನ್ನೇನೋ ಸಲ್ಲಿಸಿತು. ಆದರೆ ಸರಕಾರದಿಂದ ವರದಿ ಬಿಡುಗಡೆಯೂ ಆಗಲಿಲ್ಲ ಹಾಗೂ ಆ ಬಗ್ಗೆ ಬಹಿರಂಗ ಚರ್ಚೆಯೂ ಆಗಲಿಲ್ಲ. ವರದಿಯಲ್ಲಿ ಮೀಸಲಾತಿ ಬಗ್ಗೆ ಏನೂ ಹೇಳದೆ ಮೇಲ್ಜಾತಿ- ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಕುರಿತಂತೆ ಮಾತ್ರ ಹೇಳಲಾಗಿದೆ ಎಂಬುದಷ್ಟೇ ಬಹಿರಂಗಗೊಂಡಿತು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ವಿಷಯದಲ್ಲಿ ಮುಂದೆ ಬರಲಿಲ್ಲ. ಹಾಗೆಯೇ ಮುಂದೆ ಎದುರಾದ ೨೦೧೪ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲದೇ ಅಧಿಕಾರದಿಂದಲೂ ಅದು ನಿರ್ಗಮಿಸಿತು.

ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರ ಗಳಿಸಿತು. ಸ್ವಭಾವತಃ ಮೇಲ್ಜಾತಿ-ವರ್ಗಗಳ ಹಿತ ಕಾಯುವ ಪಕ್ಷವೆಂದೇ ಆರೋಪ ಹೊತ್ತಿರುವ ಬಿಜೆಪಿ ಅಧಿಕಾರ ಹಿಡಿದದ್ದು, ಆ ವರ್ಗಗಳ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಯಿತು. ಅಂಥಾ ಸಂಕ್ರಮಣ ಕಾಲಕ್ಕಾಗಿ ಕಾಯುತ್ತಿದ್ದ ಮೇಲ್ಜಾತಿಯ ಜನರಲ್ಲಿ ಸುಪ್ತವಾಗಿದ್ದ ಬಯಕೆ ಕೈಗೂಡುವುದು ಕಷ್ಟವೇನಾಗಲಿಲ್ಲ. ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದ್ದ ಸರಕಾರಕ್ಕೆ ೨೦೧೯ರ ಚುನಾವಣೆಯ ಮುನ್ನಾ ದಿನಗಳು ಪ್ರಸಕ್ತವಾಗಿ ಕಂಡವು. ಆ ವರ್ಷದ ಜನವರಿ ತಿಂಗಳಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ವಿಧೇಯಕ ಮಂಡಿಸಿ ಸಂವಿಧಾನದ ೧೦೩ನೇ ತಿದ್ದುಪಡಿಯನ್ನು ಅತ್ಯಾತುರವಾಗಿ ಸರಕಾರ ಅನುಮೋದನೆ ಪಡೆದು ಕೊಂಡು ಬಿಟ್ಟಿತು. ತಿದ್ದುಪಡಿಗೆ ಡಿಎಂಕೆ ಪಕ್ಷವೊಂದನ್ನು ಬಿಟ್ಟು ಉಳಿದೆಲ್ಲಾ ಪಕ್ಷಗಳೂ ತುದಿಗಾಲಲ್ಲಿ ನಿಂತು ಒಪ್ಪಿಗೆ ಸೂಚಿಸಿದವು. ಸಂಸತ್ತಿನ ಅನುಮೋದನೆಯಿಂದಾಗಿ ಆರ್ಥಿಕ ಹಿಂದುಳಿದ ವರ್ಗಗಳಿಗೆ ಶೇ.೧೦ ರಷ್ಟು ಮೀಸಲಾತಿ ದಕ್ಕಿತೇನೋ ಸರಿ.

ಆದರೆ ಮೀಸಲಾತಿ ವಿಷಯದಲ್ಲಿ ತಾರತಮ್ಯ ಉಂಟಾಯಿತು. ಅದೆಂದರೆ -ಹಿಂದುಳಿದ ವರ್ಗಗಳನ್ನು ಗುರುತಿಸಲು ಆಯೋಗ ರಚಿಸಿ, ಅವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ (ವಿಧಿ೧೫.೪)ಹಿಂದುಳಿದಿವೆಯೇ ಹಾಗೂ ಸೇವೆಯಲ್ಲಿ ಸಾಕಷ್ಟು ‘ಪ್ರಾತಿನಿಧ್ಯ’(ವಿಧಿ ೧೬.೪)ಪಡೆದಿವೆಯೇ ಎಂಬುದನ್ನು ಕಂಡುಕೊಳ್ಳುವುದು ಅತ್ಯಗತ್ಯ. ಆದರೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಇದು ಅನ್ವಯಿಸುವುದಿಲ್ಲವೇ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಹಾಗಾದರೆ, ಆರ್ಥಿಕವಾಗಿ ಹಿಂದುಳಿದ ವರ್ಗಗಳಲ್ಲಿ ಬರುವ ಸಮುದಾಯಗಳು ಸೇವೆಯಲ್ಲಿ ಎಷ್ಟರಮಟ್ಟಿಗೆ ಪ್ರಾತಿನಿಧ್ಯ ಪಡೆದುಕೊಂಡಿವೆ ಎಂಬ ಅಂಶವನ್ನು ಆಯೋಗವನ್ನು ರಚಿಸಿ ಅದರ ಮೂಲಕ ಕಂಡುಕೊಳ್ಳಬೇಕಲ್ಲವೇ? ಆದರೆ, ಅದಾಗುವುದಿಲ್ಲ. ಯಾಕೆಂದರೆ, ೧೦೩ನೇ ತಿದ್ದುಪಡಿಯಲ್ಲಿ ಅದಕ್ಕೆ ಅವಕಾಶವನ್ನೇ ಕಲ್ಪಿಸಿಲ್ಲ. ಇದರಿಂದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೊಂದು ನ್ಯಾಯ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೊಂದು ನ್ಯಾಯ ಎಂಬಂತಲ್ಲವೇ?

ಹಿಂದುಳಿದ ವರ್ಗಗಳನ್ನು ಗುರುತಿಸಲು, ಹಾವನೂರು ಆಯೋಗ ಅಳವಡಿಸಿಕೊಂಡ ನ್ಯಾಯ ವಿಧಾನವನ್ನು ಈ ಸಂದರ್ಭದಲ್ಲಿ ಉದಾಹರಣೆ ಸಹಿತ ಪ್ರಸ್ತುತಪಡಿಸುವ ಅವಶ್ಯಕತೆ ಇದೆ. ಅರಸು, ಬಲಿಜ, ದೇವಾಡಿಗ, ಗಾಣಿಗ, ನಾಯಿಂದ, ರಜಪೂತ್, ಸತಾನಿ ಇತ್ಯಾದಿ ಸಮುದಾಯಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವು ಎಂದು ಪರಿಗಣಿತವಾಗಿದ್ದರೂ, ಅವು ಸೇವೆಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಪಡೆದು ಕೊಂಡಿದ್ದ ಕಾರಣ ಆ ಸಮುದಾಯಗಳನ್ನು ಆಯೋಗ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿರಲಿಲ್ಲ. ಹಾವನೂರು ಆಯೋಗ ಅಷ್ಟರಮಟ್ಟಿಗೆ ಕಠಿಣ ನಿಲುವು ತಾಳಿತ್ತು. ಇಂದ್ರಾ ಸಹಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ರಚಿಸಬೇಕು ಎಂದು ಹೇಳಿತ್ತು. ಪ್ರತೀ ೧೦ ವರ್ಷಗಳಿಗೊಮ್ಮೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸಿ ಆ ಅವಧಿಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಪಡೆದು ಕೊಂಡಂಥ ವರ್ಗಗಳನ್ನು ಮೀಸಲಾತಿ ಪಟ್ಟಿಯಿಂದ ಹೊರ ಹಾಕುವ ಉದ್ದೇಶವೇ ಅದಾಗಿತ್ತು. ವಿಧಿ೧೬(೪) ರ ಪಠ್ಯವನ್ನು ಸ್ಪಷ್ಟತೆಗಾಗಿ ಇಲ್ಲಿ ಕೊಡಲಾಗಿದೆ. ಅದು ಹೀಗಿದೆ- ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಯಾವುದೇ ಹಿಂದುಳಿದ ವರ್ಗದ ನಾಗರಿಕರು ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯಪಟ್ಟಲ್ಲಿ ಅಂಥವರಿಗಾಗಿ ನೇಮಕಗಳನ್ನು ಅಥವಾ ಹುದ್ದೆಗಳನ್ನು ಮೀಸಲಿಡುವುದಕ್ಕಾಗಿ ಯಾವುದೇ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸ ತಕ್ಕದ್ದಲ್ಲ. ಹಿಂದುಳಿದ ವರ್ಗಗಳು ರಾಜ್ಯದ ಅಧೀನದಲ್ಲಿರುವ ಸೇವೆಗಳಿಗೆ ನೇಮಕ ಮಾಡುವುದನ್ನು ಈ ವಿಧಿಯಲ್ಲಿ ಹೇಳಲಾಗಿದೆ. ಆದರೆ ಸಾಕಷ್ಟು ಪ್ರಾತಿನಿಧ್ಯ ಹೊಂದಿರುವ ಹಿಂದುಳಿದ ವರ್ಗಗಳ ಸಮುದಾಯಗಳು ಮೀಸಲಾತಿಗೆ ಅರ್ಹತೆಗಳಿಸುವುದಿಲ್ಲ ಎಂಬುದೂ ಸ್ಪಷ್ಟಪಡುತ್ತದೆ.

ಆದರೆ ೧೦೩ನೇ ತಿದ್ದುಪಡಿ ಆರ್ಥಿಕ ದುರ್ಬಲ ವರ್ಗಗಳಿಗೆ ಶೇ.೧೦ರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೊಡುವುದಾಗಿದೆ. ಈ ತಿದ್ದುಪಡಿಯಿಂದಾಗಿ ವಿಧಿ೧೬(೬)ನ್ನು ಹೊಸದಾಗಿ ಸೇರಿಸಲಾಗಿದೆ. ಆ ತಿದ್ದುಪಡಿ ಹೀಗಿದೆ - ಈ ಅನುಚ್ಛೇದದಲ್ಲಿ ಏನೇ ಒಳಗೊಂಡಿದ್ದಾಗಿಯೂ, ಅಸ್ತಿತ್ವದಲ್ಲಿರುವ ಮೀಸಲಾತಿಗೆ ಹೆಚ್ಚುವರಿಯಾಗಿ ಮತ್ತು ಪ್ರತಿಯೊಂದು ವರ್ಗಕ್ಕೆ ಗರಿಷ್ಠ ಶೇ. ಹತ್ತರಷ್ಟು, ಹುದ್ದೆಗಳ ವಿಷಯಕ್ಕೆ (೪)ನೇ ಖಂಡದಲ್ಲಿ ತಿಳಿಸಲಾದ ವರ್ಗಗಳನ್ನು ಹೊರತುಪಡಿಸಿ, ಯಾರೇ ಆರ್ಥಿಕವಾಗಿ ಹಿಂದುಳಿದವರ ನಾಗರಿಕರ ಪರವಾಗಿ ನೇಮಕಗಳ ಅಥವಾ ಹುದ್ದೆಗಳ ಮೀಸಲಾತಿಗಾಗಿ ಯಾವುದೇ ಉಪಬಂಧಗಳನ್ನು ಮಾಡುವುದಕ್ಕೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ. ಈ ವಿಧಿಯಲ್ಲಿ ಸಾರ್ವಜನಿಕ ಸೇವೆಯಲ್ಲಿ ‘ಸಾಕಷ್ಟು ಪ್ರಾತಿನಿಧ್ಯ ಹೊಂದಿಲ್ಲ’ದ ಎಂಬ ಅಂಶ ಇರುವ ನುಡಿಗಟ್ಟನ್ನು ಸೇರಿಸಿಲ್ಲ. ಹಾಗೊಂದು ವೇಳೆ ಈ ಅಂಶಗಳ ನುಡಿಗಟ್ಟನ್ನು ಸೇರ್ಪಡೆ ಮಾಡಿದ್ದಲ್ಲಿ, ಆರ್ಥಿಕ ಹಿಂದುಳಿದ ವರ್ಗಗಳಲ್ಲಿ ಕಂಡು ಬರುವ ಸಮುದಾಯಗಳಲ್ಲಿ, ಯಾವುದೇ ಸಮುದಾಯ ಸೇವೆಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಹೊಂದಿದ್ದ ಪಕ್ಷದಲ್ಲಿ ಅಂಥಾ ಸಮುದಾಯ ಈ ಕೋಟಾದಲ್ಲಿ ಮೀಸಲಾತಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ ಅವುಗಳನ್ನು ಗುರುತಿಸಲು ಆಯೋಗವನ್ನೂ ರಚಿಸಬೇಕಾದ ಅವಶ್ಯಕತೆ ಕೂಡ ಇರುತ್ತಿತ್ತು. ಈ ಸೂಕ್ಷ್ಮತೆಯ ಒಳಸುಳಿಗಳನ್ನು ಗಮನಿಸಿಯೇ ಬಹು ಚಾಣಾಕ್ಷತನದಿಂದ ಈ ಅಂಶವನ್ನು ತಿದ್ದುಪಡಿ ವಿಧಿಯಲ್ಲಿ ಸೇರ್ಪಡೆ ಮಾಡಿಲ್ಲ. ಬಹುಶಃ ಮೇಲ್ಜಾತಿ -ವರ್ಗಗಳು ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಿ ಸೇವೆಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಪಡೆದುಕೊಂಡಿರುವ ವಿಷಯ ಸರಕಾರದ ಗಮನದಲ್ಲಿ ಇದ್ದಿರಬೇಕು! ೧೦೩ನೇ ತಿದ್ದುಪಡಿಯನ್ನು ವಿರೋಧಿಸಿ ಹಲವಾರು ರಿಟ್‌ಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾದವು. ನ್ಯಾಯಾಲಯ ಕೆಲವು ದಿನಗಳ ಹಿಂದೆ ತಿದ್ದುಪಡಿಯನ್ನು ೩-೨ರ ಬಹುಮತದೊಡನೆ ಎತ್ತಿ ಹಿಡಿಯಿತು. ನ್ಯಾಯಾಲಯದ ತೀರ್ಪಿನಿಂದಾಗಿ, ಸದ್ಯ ಆರ್ಥಿಕ ಹಿಂದುಳಿದ ವರ್ಗಗಳ ಮೀಸಲಾತಿಗೆ ಯಾವ ಬಾಧಕವೂ ಇಲ್ಲದಂತಾಯಿತು.

ಹಿಂದುಳಿದ ವರ್ಗಗಳು ಸೇವೆಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಪಡೆದುಕೊಂಡಿದ್ದಲ್ಲಿ ಅಥವಾ ಮೀಸಲಾತಿಗೆ ಒಳಪಟ್ಟು ಮುಂದೆ ಪಡೆದುಕೊಂಡಲ್ಲಿ ಅಂತಹವು ಮೀಸಲಾತಿ ಪಡೆಯಲು ಅನರ್ಹಗೊಳ್ಳುತ್ತವೆ. ಆದರೆ ಆರ್ಥಿಕವಾಗಿ ಹಿಂದುಳಿದ ವರ್ಗಗಳು, ನಿರಂತರ, ಯಾವುದೇ ಆತಂಕವಿಲ್ಲದೆ ಮೀಸಲಾತಿ ಸೌಲಭ್ಯ ಪಡೆಯುತ್ತಾ ಹೋಗುತ್ತವೆ. ಇಂದ್ರಾ ಸಹಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ, ಕಾಲಕಾಲಕ್ಕೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸಲು ಸಾಧ್ಯವಾಗುವಂತೆ ಶಾಶ್ವತ ಆಯೋಗ ರಚಿಸಲು ತಿಳಿಸಿತ್ತು. ಆದರೆ, ಇಡಬ್ಲ್ಯೂಎಸ್ ( ಜನಹಿತ್ ಅಭಿಯಾನ್ v/s ಭಾರತ ಸರಕಾರ) ಪ್ರಕರಣದಲ್ಲಿ ಈ ಕುರಿತು ಏನನ್ನೂ ಹೇಳದೆ ಮೌನ ತಾಳಿದೆ.

 ಈ ತಾರತಮ್ಯ ದೃಷ್ಟಿ ಗೋಚರವಾಗಿದ್ದರೂ ಯಾವೊಬ್ಬ ಹಿಂದುಳಿದ ವರ್ಗಗಳ ಸಂಸದರು ಸಂಸತ್ತಿನಲ್ಲಿ ಧ್ವನಿಯೆತ್ತದಿರುವುದು ಸೋಜಿಗವೂ ಹಾಗೂ ಅತ್ಯಂತ ವಿಷಾದನೀಯವೂ ಆಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅನುಸರಿಸಿರುವ ಈ ನೀತಿಯಿಂದ ಅದು ಮೇಲ್ಜಾತಿ- ವರ್ಗಗಳ ಪರ ಇರುವ ಪಕ್ಷ ಎಂಬುದೂ ಸಂಶಯಕ್ಕೆ ಆಸ್ಪದವಿಲ್ಲದಂತೆ ಸಾಬೀತಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)