varthabharthi


ನಿಮ್ಮ ಅಂಕಣ

ಮೀಸಲಾತಿ ಚರ್ಚೆಗಳು ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೀರದಿರಲಿ

ವಾರ್ತಾ ಭಾರತಿ : 29 Nov, 2022
ಡಾ. ಅಮ್ಮಸಂದ್ರ ಸುರೇಶ್

ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವಂತೆ ಮೀಸಲಾತಿ ನಮಗೂ ಬೇಕು, ಎಂಬ ಕೂಗು ಎಲ್ಲೆಡೆ ಕೇಳಿ ಬರಲು ಶುರುವಾಗಿದೆ. ಒಂದು ಕಾಲಕ್ಕೆ ಮೀಸಲಾತಿಯನ್ನು ಪ್ರಶ್ನಿಸುತ್ತಿದ್ದ ಸಮುದಾಯಗಳು ಕೂಡ ಇಂದು ನಮಗೂ ಮೀಸಲಾತಿ ಬೇಕು ಎಂಬ ಧ್ವನಿಯನ್ನು ಮಂಡಿಸುತ್ತಿವೆ. ಕೇವಲ ಮೀಸಲಾತಿ ಕೊಡಿ ಎಂಬ ಕೂಗಿನ ಜೊತೆಗೆ ಈಗಿರುವ ಮೀಸಲಾತಿಯ ಪ್ರಮಾಣವನ್ನು ಏರಿಸಬೇಕು ಎಂಬ ಒತ್ತಾಯಗಳು ಕೂಡ ಕೇಳಿ ಬರುತ್ತಿವೆ. ಈ ಕೂಗು ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿಯನ್ನು ತಂದ ಬಳಿಕ ಮತ್ತಷ್ಟು ಹೆಚ್ಚಾಗಿದೆ. ಈ ಮೀಸಲಾತಿಯ ಕೂಗು ಚುನಾವಣೆಗಳು ಸಮೀಪಿಸುತ್ತಿರುವ ಸಮಯದಲ್ಲಿ ಕೆಲವು ರಾಜಕೀಯ ಪಕ್ಷಗಳಿಗೆ ವರವಾದರೆ, ಇನ್ನು ಕೆಲವು ರಾಜಕೀಯ ಪಕ್ಷಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸುವ ಸಾಧ್ಯತೆಗಳಿರುವುದನ್ನು ತಳ್ಳಿ ಹಾಕುವಂತಿಲ್ಲ.

ಈಗ ಎಲ್ಲರೂ ಮೀಸಲಾತಿ ಪರವೇ ಇದ್ದಾರೆ. ಇದುವರೆಗೂ ಮೀಸಲಾತಿಯನ್ನು ವಿರೋಧಿಸುತ್ತಾ ಬಂದವರು ಕೂಡ ಇಂದು ಮೀಸಲಾತಿ ನಮಗೂ ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಅಂತೂ ಇಂತೂ ಎಲ್ಲರಿಗೂ ಮೀಸಲಾತಿ ಬೇಕು ಎಂಬ ವಿಚಿತ್ರವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಶೇ.4 ಇರುವ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಒಕ್ಕಲಿಗ ಸಮುದಾಯ ಮುಂದಿಟ್ಟಿದೆ. ಈ ಬೇಡಿಕೆಗೆ ಹಿಂದುಳಿದ ವರ್ಗಗಳ ವರ್ಗ 3(ಎ)ರಲ್ಲಿರುವ ಇತರ 11 ಜಾತಿಗಳ ಜನರೂ ಮುಂದಿನ ದಿನಗಳಲ್ಲಿ ಧ್ವನಿಗೂಡಿಸಬಹುದು. ಸುಪ್ರೀಂಕೋರ್ಟ್ ತೀರ್ಪನ್ನು ಪರಿಗಣಿಸಿ ಕರ್ನಾಟಕದಲ್ಲಿಯೂ ಶೇ.10ರಷ್ಟು ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಜಾರಿಗೆ ತರಬೇಕು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಈಗಾಗಲೇ ಸರಕಾರದ ಮುಂದೆ ಕೋರಿಕೆಯನ್ನು ಇಟ್ಟಿದೆ. ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ಪಂಚಮಸಾಲಿ ಸಮುದಾಯಕ್ಕೆ 2ಎ ಗುಂಪಿನಲ್ಲಿ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಹಲವು ದಿನಗಳಿಂದ ಇಟ್ಟಿರುವ ಜೊತೆಗೆ ಅದಕ್ಕೆ ಸಮಯದ ಮಿತಿಯನ್ನು ಹಾಕಿದ್ದಾರೆ. ಬೇಡ ಜಂಗಮ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿ ಮತ್ತೊಂದೆಡೆ ಹೋರಾಟ ನಡೆಯುತ್ತಿದೆ. ಇನ್ನೊಂದೆಡೆ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಸೌಕರ್ಯ ನೀಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ.

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15 ರಿಂದ ಶೇ.17ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಿಸಲು ಸರಕಾರ ಈಗಾಗಲೇ ಆದೇಶ ಹೊರಡಿಸಿದೆ. ಆ ಮೂಲಕ ಕರ್ನಾಟಕದಲ್ಲಿ ಮೀಸಲಾತಿಯ ಪ್ರಮಾಣ ಶೇ.50ರಿಂದ ಶೇ.56ಕ್ಕೆ ಏರಿಕೆಯಾಗಿದೆ. ಇದು ಒಂದು ರೀತಿಯಲ್ಲಿ ಸಂವಿಧಾನಿಕ ಬಿಕ್ಕಟ್ಟನ್ನೂ ತಂದಿಟ್ಟಿದೆ. ಸರಕಾರ ಮನಸ್ಸು ಮಾಡಿದರೆ ಈ ಬಿಕ್ಕಟ್ಟನ್ನು ನಿವಾರಿಸಲು ಮಾರ್ಗೋಪಾಯಗಳಿವೆ. ಪ್ರಸಕ್ತ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ವರ್ಗ 1ರಲ್ಲಿ ಉಪ್ಪಾರರು, ಗೊಲ್ಲರು, ಪಿಂಜಾರರು, ಕೆಲವು ಅಲೆಮಾರಿ ಸಮುದಾಯಗಳು ಸೇರಿದಂತೆ 95 ಜಾತಿಗಳಿದ್ದು ಶೇ.4, ಹಿಂದುಳಿದ ವರ್ಗಗಳ ವರ್ಗ 2(ಎ)ರಲ್ಲಿ ಕುರುಬ, ಈಡಿಗ, ವಿಶ್ವಕರ್ಮ, ನಾಮಧಾರಿ, ದೇವಾಡಿಗ, ಮಡಿವಾಳ, ಕುಂಬಾರ, ದೇವಾಂಗ, ತಿಗಳ ಸೇರಿದಂತೆ 102 ಜಾತಿಗಳಿದ್ದು ಶೇ.15, ಹಿಂದುಳಿದ ವರ್ಗಗಳ ವರ್ಗ 2(ಬಿ)ಯಲ್ಲಿ ಮುಸ್ಲಿಮ್ ಮತ್ತು ಒಳ ಜಾತಿಗಳಿದ್ದು ಶೇ.4, ಹಿಂದುಳಿದ ವರ್ಗಗಳ ವರ್ಗ 3(ಎ)ರಲ್ಲಿ ಒಕ್ಕಲಿಗ ಸೇರಿದಂತೆ 12 ಜಾತಿಗಳಿದ್ದು ಶೇ.4, ಹಿಂದುಳಿದ ವರ್ಗಗಳ ವರ್ಗ 3(ಬಿ)ಯಲ್ಲಿ ವೀರಶೈವ ಮತ್ತು ಈ ಸಮುದಾಯಕ್ಕೆ ಸೇರಿದ ಎಲ್ಲಾ ಉಪ ಜಾತಿಗಳು ಸೇರಿದ್ದು ಶೇ.5ರಷ್ಟು ಮೀಸಲಾತಿ ಇದೆ.

ಈ ಹಂತದಲ್ಲಿ ಪ್ರಗತಿಪರವಾದ ಕೆಲವು ಮೀಸಲಾತಿ ಬೇಡಿಕೆಳು ಕೂಡ ಇದ್ದು ಇಂತಹ ಬೇಡಿಕೆಗಳು ಇನ್ನೂ ಹೋರಾಟದ ಮುನ್ನೆಲೆಗೆ ಬರಬೇಕಾಗಿದೆ. ಇವುಗಳಲ್ಲಿ ಕರ್ನಾಟಕದಲ್ಲಿ ಹಲವಾರು ವರ್ಷಗಳಿಂದಲೂ ಬೇಡಿಕೆಯಲ್ಲಿರುವ ಅಂತರ್‌ಧರ್ಮ ಮತ್ತು ಅಂತರ್ಜಾತಿ ವಿವಾಹಿತರಿಗೆ ಮೀಸಲಾತಿ ಜಾರಿಗೆ ತರಬೇಕೆಂಬ ಬೇಡಿಕೆಯೂ ಒಂದು. ಇದು ಇಂದಿನ ತುರ್ತು ಕೂಡ ಆಗಿದೆ. ಇದರ ಜೊತೆಗೆ ಚಿಕ್ಕ ಚಿಕ್ಕ ಸಮುದಾಯಗಳಾಗಿರುವ ಮತ್ತು ಇಂದಿಗೂ ತಮ್ಮದೇ ಆದ ನೆಲೆ ಇಲ್ಲದ ಹಲವು ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳು ಕರ್ನಾಟಕದಲ್ಲಿವೆ. ಇಂತಹ ಸಮುದಾಯಗಳಲ್ಲಿ ಕೆಲವನ್ನು ಪರಿಶಿಷ್ಟ ಜಾತಿಯಲ್ಲಿಯೂ ಇನ್ನು ಹಲವು ಸಮುದಾಯಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ 1ರಲ್ಲಿಯೂ ಸೇರಿಸಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಆದರೆ ಈ ಸೂಕ್ಷ್ಮ ಸಮುದಾಯಗಳಿಗೆ ಬಹುಸಂಖ್ಯಾತ ಸಮುದಾಯಗಳೊಂದಿಗೆ ಮೀಸಲಾತಿಯನ್ನು ಕಲ್ಪಿಸಿರುವುದರಿಂದ ಮೀಸಲಾತಿಯ ಸಂಪೂರ್ಣ ಪ್ರಯೋಜನ ಪಡೆಯುವುದು ಈ ಸಮುದಾಯಗಳಿಗೆ ಸಾಧ್ಯವಾಗಿಲ್ಲ. ಆದ್ದರಿಂದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿಯ ಅವಶ್ಯಕತೆ ಇದೆ. ಈ ಸಮುದಾಯಗಳು ಜೀವನ ನಡೆಸುವುದೇ ಕಷ್ಟಕರವಾಗಿರುವುದರಿಂದ ಸಂಘಟನೆಗಳನ್ನು ಕಟ್ಟಿಕೊಂಡು ಪರಿಣಾಮಕಾರಿ ಹೋರಾಟಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವು ಸಂಘಟನೆಗಳು ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದರೂ ರಾಜಕೀಯವಾಗಿ ಯಾವುದೇ ಶಕ್ತಿಯಿಲ್ಲದ ಕಾರಣ ಇದು ಇನ್ನೂ ಸಾಧ್ಯವಾಗಿಲ್ಲ.

ಈ ಸಂದರ್ಭದಲ್ಲಿ ಮೀಸಲಾತಿಯ ಮೂಲ ಆಶಯಗಳು ಅಥವಾ ಉದ್ದೇಶಗಳ ಕುರಿತು ತಿಳಿದುಕೊಳ್ಳಬೇಕಾದುದು ಅತ್ಯವಶ್ಯಕ. ಸಮಾಜದಲ್ಲಿ ತಾರತಮ್ಯಕ್ಕೊಳಗಾಗಿರುವ ಮತ್ತು ಶೋಷಣೆಯನ್ನು ಅನುಭವಿಸುತ್ತಿರುವ ಜನಾಂಗಗಳ ಹಕ್ಕುಗಳನ್ನು ರಕ್ಷಿಸುವುದು ಮೀಸಲಾತಿಯ ಪ್ರಮುಖ ಉದ್ದೇಶವಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದ ಸಮುದಾಯಗಳ ಜನರನ್ನು ಸಾಮಾನ್ಯ ಸರಾಸರಿಯೊಂದಿಗೆ ವಿಲೀನ ಮಾಡುವುದೇ ಮೀಸಲಾತಿಯ ಪ್ರಮುಖ ಗುರಿ ಆಗಿದೆ. ಕಡಿಮೆ ಪ್ರಾತಿನಿಧ್ಯಕ್ಕೆ ಪ್ರಮುಖ ಕಾರಣವೆಂದರೆ ಭಾರತದಲ್ಲಿ ಜಾರಿಯಲ್ಲಿರುವ ಜಾತಿ ವ್ಯವಸ್ಥೆ. ಸ್ವಾತಂತ್ರ್ಯ ಬಂದ ಬಳಿಕ ಇಂತಹ ಕೆಲವು ಜಾತಿಗಳನ್ನು ಗುರುತಿಸಿ ಇವುಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಎಂದು ಪಟ್ಟಿ ಮಾಡಿ ಈ ಎರಡೂ ಪಟ್ಟಿಗಳಲ್ಲಿ ವರ್ಗೀಕರಿಸಿ ಈ ಸಮುದಾಯಗಳಿಗೆ ಮೀಸಲಾತಿಯನ್ನು ಕಲ್ಪಿಸಲಾಯಿತು. ನಂತರ ಈ ಮೀಸಲಾತಿ ಸೌಲಭ್ಯವನ್ನು ಇತರ ಕೆಲವು ಜಾತಿಗಳಿಗೂ ವಿಸ್ತರಣೆ ಮಾಡಲಾಯಿತು. ಭಾರತದ ಸರ್ವೋಚ್ಚ ನ್ಯಾಯಾಲಯವು ಒಟ್ಟು ಮಿಸಲಾತಿಯು ಶೇ.50ನ್ನು ಮೀರಬಾರದು ಎಂಬ ನಿಯಮವನ್ನು ರೂಪಿಸಿತು. ಆದರೆ ಇಂದು ಈ ಮೀಸಲಾತಿಯ ಪ್ರಮಾಣ ಕೆಲವು ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚಾಗಿದೆ ಮತ್ತು ಆ ಸಂಬಂಧ ನ್ಯಾಯಾಲಯಗಳಲ್ಲಿ ಹಲವು ವಿಚಾರಣೆಗಳು ನಡೆಯುತ್ತಿವೆ.

ಭಾರತದ ಕೆಲವು ಪ್ರಾಂತಗಳಲ್ಲಿ ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ ಮೀಸಲಾತಿಯನ್ನು  ಜಾರಿಗೆ ತಂದ ಉದಾಹರಣೆಗಳೂ ಇವೆ. ಮಹಾರಾಷ್ಟ್ರದಲ್ಲಿ ಛತ್ರಪತಿ ಸಾಹು ಮಹಾರಾಜರು 1902ರ ವೇಳೆಗಾಗಲೇ ಹಿಂದುಳಿದ ವರ್ಗಗಳಿಗೆ ಶೇ.50ರಷ್ಟು ಮೀಸಲಾತಿಯ ಸೌಲಭ್ಯವನ್ನು ಜಾರಿಗೆ ತರುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ನಾಂದಿ ಹಾಡಿದರು. 1921ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಮೀಸಲಾತಿಯನ್ನು ಜಾರಿಗೆ ತರುವ ಆದೇಶ ಹೊರಡಿಸಲಾಯಿತು. 1953ರಲ್ಲಿ ನೇಮಕವಾದ ಕಾಲೇಕರ್ ಆಯೋಗದ ವರದಿಯ ಅನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯನ್ನು ಜಾರಿಗೆ ತರಲಾಯಿತು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕೆಂಬ ಒತ್ತಾಯಕ್ಕೆ ಅನುಗುಣವಾಗಿ 1979ರಲ್ಲಿ ಇಂತಹ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ಮಂಡಲ್ ಆಯೋಗವನ್ನು ರಚಿಸಲಾಯಿತು. ಈ ಆಯೋಗವು ತನ್ನ ವರದಿಯಲ್ಲಿ ಭಾರತದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ.52ರಷ್ಟಿದೆ ಎಂದು ತಿಳಿಸಿತು. ಈ ವರದಿಯ ಶಿಫಾರಸುಗಳನ್ನು ವಿ.ಪಿ.ಸಿಂಗ್‌ರವರು ಪ್ರಧಾನಿಗಳಾಗಿದ್ದ ಅವಧಿಯಲ್ಲಿ ಅಂದರೆ 1990ರಲ್ಲಿ ಜಾರಿಗೆ ತರುವ ಮೂಲಕ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಲ್ಪಿಸಲಾಯಿತು.

ಮೀಸಲಾತಿಯ ಕುರಿತು ಅನೇಕ ವಾದ-ವಿವಾದಗಳು ನಡೆಯುತ್ತಾ ಬಂದಿವೆ. ಹತ್ತಾರು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿವೆ. ಕೆಲವು ವಾದ-ವಿವಾದಗಳು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿವೆ. ಇಂದು ಮೀಸಲಾತಿಯ ಕುರಿತು ಮತ್ತಷ್ಟು ಚರ್ಚೆಗಳು ಅಗತ್ಯವಾಗಿ ನಡೆಯಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಎದುರಾಗಿದೆ. ಆದರೆ ಈ ಚರ್ಚೆಗಳು ಆರೋಗ್ಯಕರವಾಗಿರುವುದರ ಜೊತೆಗೆ ಮೀಸಲಾತಿಯ ನಿಜ ಆಶಯಕ್ಕೆ ಧಕ್ಕೆ ಆಗದಂತೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ವ್ಯಾಪ್ತಿಯಲ್ಲಿರಬೇಕಾಗಿರುವುದು ಇಂದಿನ ಅಗತ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)