varthabharthi


ಸಂಪಾದಕೀಯ

'ವಿನಯ ಸಾಮರಸ್ಯ' ಸಮಾವೇಶ ಅಸ್ಪೃಶ್ಯ ನಿವಾರಣೆಯಲ್ಲಿ ಯಶಸ್ವಿಯಾಗಲಿ

ವಾರ್ತಾ ಭಾರತಿ : 30 Nov, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

ಅಸ್ಪೃಶ್ಯತೆ ನಿವಾರಣೆಗಾಗಿ ಸರಕಾರದ ವತಿಯಿಂದ 'ವಿನಯ ಸಾಮರಸ್ಯ' ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುವುದಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇತ್ತೀಚೆಗೆ ತಿಳಿಸಿದ್ದಾರೆ. ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಯನ್ನು ಅನುಭವಿಸುವವರಿಗಿಂತ, ಅದನ್ನು ಅನುಸರಿಸುವವರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸಮುದಾಯಗಳ ಧುರೀಣರು, ಮಠಾಧಿಪತಿಗಳು, ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಬೃಹತ್ ಸಮಾವೇಶವನ್ನು ಡಿಸೆಂಬರ್‌ನಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ. ಅಸ್ಪೃಶ್ಯತೆ ಆಚರಣೆಯ ವಿರುದ್ಧ ಈಗಾಗಲೇ ಕಾನೂನು ಜಾರಿಯಲ್ಲಿದೆಯಾದರೂ, ಸರಕಾರ ವೈಯಕ್ತಿಕ ಆಸಕ್ತಿಯಿಂದ ಅದರ ನಿವಾರಣೆಗಾಗಿ ಕಾರ್ಯಕ್ರಮ ಹಾಕಿಕೊಂಡಿರುವುದು ಶ್ಲಾಘನೀಯ.

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಮ್ಮ ರಾಜ್ಯ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದರೂ, ಇಲ್ಲಿ ಅಸ್ಪೃಶ್ಯತೆ ಆಚರಣೆ ಮಾತ್ರ ಅಳಿದಿಲ್ಲ. ಆಗಾಗ ಈ ಆಚರಣೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುತ್ತವೆ. ಇತ್ತೀಚೆಗೆ ಕೋಲಾರದಲ್ಲಿ ದಲಿತ ಬಾಲಕನೊಬ್ಬನಿಗೆ ದೇವರ ಕೋಲನ್ನು ಮುಟ್ಟಿದ ಕಾರಣಕ್ಕಾಗಿ ದಂಡ ವಿಧಿಸಿರುವುದು ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು ಮಾತ್ರವಲ್ಲ, ದಲಿತ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು. ಹಾಗೆಯೇ ಚಾಮರಾಜ ನಗರದಲ್ಲಿ ದಲಿತ ಮಹಿಳೆ ನೀರು ಕುಡಿದಳು ಎನ್ನುವ ಕಾರಣಕ್ಕೆ, ಟ್ಯಾಂಕ್‌ನಲ್ಲಿರುವ ನೀರನ್ನೆಲ್ಲ ಖಾಲಿ ಮಾಡಿ 'ಶುದ್ಧೀಕರಣ' ಮಾಡಿದ್ದು ಕೂಡ ಚರ್ಚೆಯಲ್ಲಿದೆ. ರಾಜ್ಯಾದ್ಯಂತ ಒಂದಲ್ಲ ಒಂದು ಅಸ್ಪೃಶ್ಯತೆಯ ಆಚರಣೆ ಪ್ರಕರಣ ಬೆಳಕಿಗೆ ಬರುತ್ತಲೇ ಇದೆ. ಬುದ್ಧಿವಂತರ ಜಿಲ್ಲೆಯೆಂದು ಗುರುತಿಸಲ್ಪಟ್ಟಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೂ ಅಸ್ಪೃಶ್ಯತೆಯಲ್ಲಿ ಹಿಂದೆ ಬಿದ್ದಿಲ್ಲ. ಕರಾವಳಿಯ ಖ್ಯಾತ ಕುದ್ರೋಳಿ ಗೋಕರ್ಣನಾಥ ದೇವಸ್ಥಾನವನ್ನು ನಾರಾಯಣಗುರುಗಳು ಸ್ಥಾಪಿಸಿರುವುದರ ಹಿಂದೆಯೂ ಅಸ್ಪೃಶ್ಯತಾ ಆಚರಣೆಯ ಪ್ರಕರಣವಿದೆ. ಉತ್ತರ ಕನ್ನಡದ ಗೋಕರ್ಣದ ದೇವಸ್ಥಾನವೊಂದರಲ್ಲಿ ಬಿಲ್ಲವ ಮುಖಂಡರೊಬ್ಬರಿಗೆ ಆದ ಅವಮಾನವೇ ಮುಂದೆ, ನಾರಾಯಣ ಗುರುಗಳು ತಮ್ಮದೇ ದೇವಸ್ಥಾನವೊಂದನ್ನು ಸ್ಥಾಪಿಸಲು ಕಾರಣವಾಯಿತು. ನಾರಾಯಣಗುರುಗಳು ಮಂಗಳೂರಿಗೆ ಕಾಲಿಟ್ಟು ಶತಮಾನ ಉರುಳಿದ ಬಳಿಕವೂ ಇಲ್ಲಿ, ಅಸ್ಪೃಶ್ಯತೆಯ ಹೆಸರಿನಲ್ಲಿ ಕೆಳಜಾತಿಯ ಜನರು ಅವಮಾನ ಎದುರಿಸುತ್ತಲೇ ಇದ್ದಾರೆ. ಈಗಲೂ ಕೃಷ್ಣ ಮಠದಲ್ಲಿ ಪಂಕ್ತಿ ಭೇದದ ಮೂಲಕ ಅಸ್ಪೃಶ್ಯತಾಚರಣೆ ಜಾರಿಯಲ್ಲಿದೆ. ದಲಿತರು ಮಾತ್ರವಲ್ಲ, ಬಿಲ್ಲವ, ಬಂಟ ಸಮುದಾಯದ ಜನರೂ ಇಲ್ಲಿ ಅಸ್ಪೃಶ್ಯತೆಗೆ ಬಲಿಯಾಗಿದ್ದಾರೆ. ಊಟದ ಮಧ್ಯದಿಂದಲೇ ಅವರನ್ನು ಎಬ್ಬಿಸಿದ ಪ್ರಕರಣಗಳು ನಡೆದಿವೆ.

ಸಾಮರಸ್ಯದ ಮೂಲಕ ಅಸ್ಪೃಶ್ಯತೆ ನಿವಾರಣೆಗೆ ಹೊರಟಿರುವುದೇನೋ ಒಳ್ಳೆಯ ವಿಷಯವೇ. ಆದರೆ, ಸರಕಾರ ನಿಜಕ್ಕೂ ಅಸ್ಪೃಶ್ಯತೆಯ ಬಗ್ಗೆ ಕಾಳಜಿಯನ್ನು ಹೊಂದಿದೆ ಎಂದಾದರೆ, 'ಜಾತಿ ದೌರ್ಜನ್ಯ ವಿರೋಧಿ ಕಾನೂನು' ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು. ಜಾತಿ ದೌರ್ಜನ್ಯದ ವಿರುದ್ಧ ಕಾನೂನು ವಿಫಲವಾಗಿರುವುದರಿಂದಲೇ ಅಸ್ಪೃಶ್ಯತೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಸರಕಾರದ ಮನಸ್ಥಿತಿಯೇ ಅಸ್ಪೃಶ್ಯತೆಗೆ ಪೂರಕವಾಗಿರುವಾಗ, ಜನಸಾಮಾನ್ಯರಲ್ಲಿ ಸುಧಾರಣೆಯನ್ನು ನಿರೀಕ್ಷಿಸುವುದು ಎಷ್ಟರಮಟ್ಟಿಗೆ ಸರಿ? ಇತ್ತೀಚೆಗೆ ಮುಖ್ಯಮಂತ್ರಿ ಬೊಮ್ಮಾಯಿಯವರು ದಲಿತರ ಮನೆಯಲ್ಲಿ ಊಟ ಮಾಡುವ ಪ್ರಹಸನವೊಂದು ನಡೆಯಿತು. ಹೊರಗಿನಿಂದ ಊಟ ತಿಂಡಿ ತರಿಸಿ, ದಲಿತರ ಮನೆಯಲ್ಲಿ ಕುಳಿತು ಅದನ್ನು ತಿಂದಂತೆ ನಟಿಸುವುದರಿಂದ ರಾಜ್ಯದಲ್ಲಿ ಅಸ್ಪೃಶ್ಯತೆಯನ್ನು ನಿವಾರಿಸಲು ಸಾಧ್ಯವಿಲ್ಲ. ಈ ಊಟ ದಲಿತರನ್ನು ಪರೋಕ್ಷವಾಗಿ ಅಣಕಿಸಿದಂತೆ. ಮೊತ್ತ ಮೊದಲು ಇಂತಹ ಪ್ರಹಸನಗಳು ನಿಲ್ಲಬೇಕು. ಅಸ್ಪೃಶ್ಯತೆ ನಿವಾರಣೆಗಾಗಿ ದಲಿತರ ಕೇರಿಗೆ ಹೋಗುವುದಲ್ಲ. ಮೊದಲು, ಅಗ್ರಹಾರಕ್ಕೆ ಪ್ರವೇಶಿಸಿ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು. ಮೇಲ್ಜಾತಿಯ ಜನರು ದಲಿತರನ್ನು ತಮ್ಮ ಮನೆಯೊಳಗೆ ಆಹ್ವಾನಿಸಿ, ಅವರೊಂದಿಗೆ ಜೊತೆಯಾಗಿ ಉಂಡು ಅಸ್ಪೃಶ್ಯತೆಯ ವಿರುದ್ಧ ಸಾಮರಸ್ಯ ಬಿತ್ತಬೇಕು. ಆದರೆ, ಇಂದಿಗೂ ಅಗ್ರಹಾರದಲ್ಲಿರುವ ಜಾತೀಯತೆ, ಅಸ್ಪೃಶ್ಯತೆಯ ಹೊಲಸನ್ನು ತೆಗೆಯುವ ಕೆಲಸವನ್ನು ಯಾರೂ ಮಾಡಿಯೇ ಇಲ್ಲ. ಆದುದರಿಂದ 'ವಿನಯ ಸಾಮರಸ್ಯ' ನಾಡಿನ ಎಲ್ಲ ಮೇಲ್ಜಾತಿಗಳ ಗಲ್ಲಿಗಳಲ್ಲಿ, ಅಗ್ರಹಾರಗಳಲ್ಲಿ ನಡೆದು, ಮೇಲ್ಜಾತಿಯ ಜನರನ್ನು ತಿದ್ದುವ ಕೆಲಸ ನಡೆಯಲಿ.

ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ಶಾಸಕರೊಬ್ಬರು 'ದಲಿತನಾಗಿರುವುದಕ್ಕೆ ನನ್ನ ಮೇಲೆ ಹಲ್ಲೆ ನಡೆದಿದೆ' ಎಂಬ ಹೇಳಿಕೆಯನ್ನು ನೀಡಿದರು. ಬಿಜೆಪಿಯ ಹಿರಿಯ ಸಂಸದರೊಬ್ಬರಿಗೆ ದೇವಸ್ಥಾನದಲ್ಲಿ ಪ್ರವೇಶ ನೀಡದೆ, ಹೊರಗಿನಿಂದಲೇ ಪ್ರಸಾದ ನೀಡಿದ ಪ್ರಕರಣವೊಂದು ಈ ಹಿಂದೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಈಗಲೂ ಬಿಜೆಪಿಯೊಳಗಿರುವ ದಲಿತ ನಾಯಕರೇ ಅಸ್ಪೃಶ್ಯತೆಯ ಅನುಭವವನ್ನು ದಾಖಲಿಸುತ್ತಿದ್ದಾರೆ. ತಮ್ಮ ಪಕ್ಷದೊಳಗೇ ಅಸ್ಪೃಶ್ಯತೆಯನ್ನು, ಮೇಲು ಕೀಳನ್ನು ನಿವಾರಿಸಲು ಅಸಾಧ್ಯವಾಗದೇ ಇರುವಾಗ, ಸಮಾಜವನ್ನು ಈ 'ವಿನಯ ಸಾಮರಸ್ಯ'ದ ಮೂಲಕ ಸರಿಪಡಿಸುವುದು ಅಷ್ಟು ಸುಲಭದ ಕೆಲಸವೇನೂ ಅಲ್ಲ. ಜನಸಾಮಾನ್ಯರು ಮೌಢ್ಯದಿಂದ ಇಂತಹ ಅಸ್ಪೃಶ್ಯತೆಯನ್ನು ಆಚರಿಸುತ್ತಿಲ್ಲ. ಅಸ್ಪೃಶ್ಯತೆಯೆನ್ನುವುದು ಒಂದು ಧಾರ್ಮಿಕ ಆಚರಣೆಯಾಗಿ ಸಮಾಜ ಒಪ್ಪಿಕೊಂಡಿದ್ದರಿಂದಲೇ ಅದು ಅಸ್ತಿತ್ವದಲ್ಲಿದೆ. ಕೋಲಾರದಲ್ಲಿ, ಮಂಡ್ಯದಲ್ಲಿ ಅಸ್ಪೃಶ್ಯತೆಯ ಪ್ರಕರಣ ಹೊರಬಿದ್ದಾಗ ಯಾವುದೇ ಸ್ವಾಮೀಜಿಗಳೂ ಅದರ ವಿರುದ್ಧ ತುಟಿ ಬಿಚ್ಚಿದ ಅಥವಾ ಅದನ್ನು ಖಂಡಿಸಿದ ಉದಾಹರಣೆಗಳು ಇಲ್ಲ. ಅವರ ವೌನವೇ ಆ ಅಸ್ಪೃಶ್ಯತೆಯನ್ನು ಪರೋಕ್ಷವಾಗಿ ಸಮರ್ಥಿಸುತ್ತದೆ. ಯಾವುದಾದರೊಂದು ಅಸ್ಪೃಶ್ಯತೆಯ ಪ್ರಕರಣ ಬೆಳಕಿಗೆ ಬಂದಾಗ ಎಲ್ಲ ಸ್ವಾಮೀಜಿಗಳು ಒಂದಾಗಿ ಅದನ್ನು ಖಂಡಿಸಿ, ಸ್ಥಳಕ್ಕೆ ಭೇಟಿ ಕೊಟ್ಟು ಜನರಲ್ಲಿ 'ಹಿಂದೂ ಧರ್ಮದಲ್ಲಿ ಜಾತೀಯತೆ, ಅಸ್ಪೃಶ್ಯತೆ ಇಲ್ಲ. ಇಲ್ಲಿ ಎಲ್ಲರೂ ಒಂದು' ಎಂದು ಮನವರಿಕೆ ಮಾಡಿದ್ದರೂ ಸಾಕಿತ್ತು, ಇಂದು ಅಸ್ಪೃಶ್ಯತೆಯೆನ್ನುವುದು ಅಳಿದೇ ಹೋಗಿ ಬಿಡುತ್ತಿತ್ತು. ಕನಿಷ್ಠ 'ಹಿಂದೂ ಒಂದು' ಎನ್ನುವ ಆರೆಸ್ಸೆಸ್ ಸಂಘಟನೆಯಾದರೂ ಘಟನೆ ನಡೆದ ಸ್ಥಳಕ್ಕೆ ತೆರಳಿ ಅದನ್ನು ಖಂಡಿಸುವ, ಮೇಲ್ಜಾತಿಯ ಜನರನ್ನು ತಿದ್ದುವ ಕೆಲಸ ಮಾಡಿಲ್ಲ. ಯಾಕೆಂದರೆ, ಆರೆಸ್ಸೆಸ್ ಎನ್ನುವ ಸಂಸ್ಥೆಯೇ ಮೇಲ್‌ಜಾತಿಯ ನಿಯಂತ್ರಣದಲ್ಲಿದೆ. ತನ್ನನ್ನು ತಾನು ಸ್ವಯಂಘೋಷಿತ ಹಿಂದೂ ರಕ್ಷಕ ಎಂದು ಕರೆದುಕೊಳ್ಳುವ ಆರೆಸ್ಸೆಸ್‌ಗೆ ದಲಿತನೊಬ್ಬ ಸರಸಂಘ ಚಾಲಕನಾಗುವುದು ಈ ಕಾರಣಕ್ಕೇ ಸಾಧ್ಯವಿಲ್ಲ.

'ವಿನಯ ಸಾಮರಸ್ಯ' ಕಾರ್ಯಕ್ರಮವನ್ನು ಈ ನಿಟ್ಟಿನಲ್ಲಿ ಉಡುಪಿ ಕೃಷ್ಣ ಮಠದಿಂದಲೇ ಸಚಿವರು ಆರಂಭಿಸಬೇಕು. ಎಲ್ಲ ಜಾತಿಯ ಜನರೂ ಒಂದಾಗಿ, ಒಂದೇ ಪಂಕ್ತಿಯಲ್ಲಿ ಉಂಡು ಸಾಮರಸ್ಯ ಮೆರೆದಾಗ ಇದು ಸಾಧ್ಯ. ಆದುದರಿಂದ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿ ಗುರುತಿಸಲ್ಪಡುತ್ತಿರುವ ಉಡುಪಿಯಿಂದ ಅಸ್ಪೃಶ್ಯತೆ ನಿವಾರಣೆಯ ಕಾರ್ಯಾಚರಣೆಗೆ ಚಾಲನೆ ಸಿಗಲಿ. ಎಲ್ಲ ಸ್ವಾಮೀಜಿಗಳನ್ನು, ವಿವಿಧ ಧಾರ್ಮಿಕ ಮುಖಂಡರನ್ನು ಮನವೊಲಿಸಿ ಎಲ್ಲ ದೇವಸ್ಥಾನಗಳಿಗೂ ಎಲ್ಲ ಜಾತಿಯ ಜನರಿಗೂ ಸಮಾನ ಅವಕಾಶ ಸಿಗುವಂತೆ ಮಾಡುವಲ್ಲಿ ಸಚಿವರ ನೇತೃತ್ವದ ತಂಡ ಯಶಸ್ವಿಯಾಗಲಿ. ಇತರ ರಾಜ್ಯಗಳಿಗೆ ಈ 'ವಿನಯ ಸಾಮರಸ್ಯ' ಒಂದು ಮಾದರಿಯಾಗಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)