varthabharthi


ವಿಶೇಷ-ವರದಿಗಳು

ತರಾತುರಿಯಲ್ಲಿ ಚುನಾವಣಾ ಆಯುಕ್ತರ ನೇಮಕ: ಕೇಂದ್ರದ ನಡೆಯ ಮರ್ಮವೇನು?

ವಾರ್ತಾ ಭಾರತಿ : 30 Nov, 2022
ಇರ್ಷಾದ್ ಎಂ. ವೇಣೂರು

ಪಂಜಾಬ್ ಕೇಡರ್‌ನ ಐಎಎಸ್ ಅಧಿಕಾರಿ ಅರುಣ್ ಗೋಯಲ್ ಡಿಸೆಂಬರ್ ಅಂತ್ಯಕ್ಕೆ ಸೇವೆಯಿಂದ ನಿವೃತ್ತಿ ಹೊಂದುವವರಿದ್ದರು. ಅವರು ನವೆಂಬರ್ 18ರಂದು ಸೇವೆಯಿಂದ ಸ್ವಯಂನಿವೃತ್ತಿಗೆ ಅರ್ಜಿ ಹಾಕಿದರು. ಕ್ಷಣ ಮಾತ್ರದಲ್ಲೇ ಅದು ಸ್ವೀಕಾರವೂ ಆಯಿತು. ಕೂಡಲೇ ಕೇಂದ್ರ ಸರಕಾರ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಿತು. 6 ತಿಂಗಳುಗಳಿಂದ ಖಾಲಿಯಿದ್ದ ದೇಶದ ಸಾಂವಿಧಾನಿಕ ಹುದ್ದೆಯೊಂದು ಕೆಲವೇ ಗಂಟೆಗಳೊಳಗೆ ಭರ್ತಿಯಾಯಿತು.

ಭಾರತೀಯ ಚುನಾವಣಾ ಆಯೋಗ ಈಗ ಚರ್ಚೆಯ ಕೇಂದ್ರವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಖಾಲಿಯಿದ್ದ ಚುನಾವಣಾ ಆಯುಕ್ತರ ಹುದ್ದೆಗೆ ಒಂದೇ ದಿನದಲ್ಲಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ ಕೇಂದ್ರ ಸರಕಾರದ ನಡೆಯ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಪ್ರಶ್ನೆಗಳನ್ನೆತ್ತಿರುವುದು ಇದಕ್ಕೆ ಕಾರಣ.

ಚುನಾವಣಾ ಆಯುಕ್ತರ ನೇಮಕಾತಿಯ ಬಗ್ಗೆ ಸುಪ್ರೀಂ ಕೋರ್ಟ್ ಹಲವು ಪ್ರಶ್ನೆಗಳನ್ನೆತ್ತಿದೆ. ಚುನಾವಣಾ ಆಯುಕ್ತರ ನೇಮಕಾತಿಗೆ ಕೊಲಿಜಿಯಂ ಸ್ವರೂಪದ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಕೋರಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿದ್ದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಚುನಾವಣಾ ಆಯುಕ್ತರ ಹುದ್ದೆಗೆ ನಿವೃತ್ತರನ್ನೇ ನೇಮಿಸುತ್ತಿರುವುದೇಕೆ, ದುರ್ಬಲ ವ್ಯಕ್ತಿಗಳನ್ನು ಆ ಹುದ್ದೆಗೆ ತರುವುದಕ್ಕೆ ಏನು ಕಾರಣ, ಯಾಕೆ ಪಾರದರ್ಶಕ ಮತ್ತು ನ್ಯಾಯಯುತವಾದ ನೇಮಕ ಪ್ರಕ್ರಿಯೆ ನಡೆಯುತ್ತಿಲ್ಲ ಮೊದಲಾದ ಪ್ರಶ್ನೆಗಳನ್ನು ಐವರು ನ್ಯಾಯಾಧೀಶರ ಪೀಠ ಎತ್ತಿದೆ.

ಚುನಾವಣಾ ಆಯುಕ್ತರಾಗಿ ಅರುಣ್ ಗೋಯಲ್ ನೇಮಕ ಒಂದೇ ದಿನದಲ್ಲಿ ಆದುದರ ಬಗ್ಗೆ ಸುಪ್ರೀಂ ಕೋರ್ಟ್ ಸರಕಾರವನ್ನು ಪ್ರಶ್ನಿಸಿದೆ. 2022ರ ಮೇ 14ರಿಂದ ಖಾಲಿಯಾಗಿದ್ದ ಚುನಾವಣಾ ಆಯುಕ್ತರ ಹುದ್ದೆಗೆ ನವೆಂಬರ್ 18ರಂದು ಒಂದೇ ದಿನದಲ್ಲಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ್ದರ ಹಿಂದಿನ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಪಂಜಾಬ್ ಕೇಡರ್‌ನ ಐಎಎಸ್ ಅಧಿಕಾರಿ ಅರುಣ್ ಗೋಯಲ್ ಡಿಸೆಂಬರ್ ಅಂತ್ಯಕ್ಕೆ ಸೇವೆಯಿಂದ ನಿವೃತ್ತಿ ಹೊಂದುವರಿದ್ದರು. ಅವರು ನವೆಂಬರ್ 18ರಂದು ಸೇವೆಯಿಂದ ಸ್ವಯಂನಿವೃತ್ತಿಗೆ ಅರ್ಜಿ ಹಾಕಿದರು. ಕ್ಷಣ ಮಾತ್ರದಲ್ಲೇ ಅದು ಸ್ವೀಕಾರವೂ ಆಯಿತು. ಕೂಡಲೇ ಕೇಂದ್ರ ಸರಕಾರ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಿತು. 6 ತಿಂಗಳುಗಳಿಂದ ಖಾಲಿಯಿದ್ದ ದೇಶದ ಸಾಂವಿಧಾನಿಕ ಹುದ್ದೆಯೊಂದು ಕೆಲವೇ ಗಂಟೆಗಳೊಳಗೆ ಭರ್ತಿಯಾಯಿತು.

ಕೇಂದ್ರ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಅನುಸರಿಸಿದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಅಷ್ಟು ಆತುರವಾಗಿ ನೇಮಕ ಮಾಡಿದ್ದರ ಮರ್ಮದ ಕುರಿತಾಗಿ ಪ್ರಶ್ನೆ ಎತ್ತಿದೆ. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ಐವರು ನ್ಯಾಯಮೂರ್ತಿಗಳ ಪೀಠ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದೆ.

ಸಾಮಾನ್ಯವಾಗಿ ಚುನಾವಣಾ ಆಯುಕ್ತರನ್ನು ನೇಮಕ ಮಾಡಬೇಕಾದರೆ ಒಂದಿಷ್ಟು ಕ್ರಮಗಳಿವೆ. ಸಂವಿಧಾನದ 324ರ 2ನೇ ವಿಧಿಯ ಪ್ರಕಾರ ಮುಖ್ಯ ಚುನಾವಣಾ ಆಯುಕ್ತರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ. ಆ ನೇಮಕಾತಿ ಪ್ರಧಾನಿ ಮತ್ತು ಸಚಿವರ ಶಿಫಾರಸಿನ ಮೇಲೆ ನಡೆದಿರುತ್ತದೆ. ಕಾನೂನು ಸಚಿವರು ಹೆಸರುಗಳನ್ನು ಆಯ್ಕೆ ಮಾಡುತ್ತಾರೆ. ಪ್ರಧಾನಿ ಶಿಫಾರಸು ಮಾಡುತ್ತಾರೆ. ರಾಷ್ಟ್ರಪತಿ ಅಂಕಿತ ಹಾಕುತ್ತಾರೆ. ಇಷ್ಟೆಲ್ಲವೂ ನವೆಂಬರ್ 18ರಂದು ಒಂದೇ ದಿನ ನಡೆದಿದೆ. ಇದನ್ನು ಯಾವುದಾದರೂ ತರಾತುರಿಯಲ್ಲಿ ಮಾಡಲಾಗಿದೆಯೇ ಎಂದು ಪೀಠ ಪ್ರಶ್ನಿಸಿದೆ. ಚುನಾವಣಾ ಆಯುಕ್ತರ ಆಯ್ಕೆಯಲ್ಲಿ ಕೇಂದ್ರ ಸರಕಾರಕ್ಕೆ ಹಿತಾಸಕ್ತಿ ಇದ್ದಂತೆ ಕಾಣುತ್ತಿದೆ ಎಂದು ಸುಪ್ರೀಂ ಕೋರ್ಟ್ ಗಂಭೀರ ಚರ್ಚೆಗೆ ನಾಂದಿ ಹಾಡಿದೆ.

ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ಕೇವಲ ಆಡಳಿತ ಪಕ್ಷ ಮಾತ್ರ ಭಾಗವಹಿಸುವುದರಿಂದ, ಆ ಪಕ್ಷಕ್ಕೆ ನಿಷ್ಠರಾಗಿರುವವರ ನೇಮಕ ನಡೆಯುವ ಸಾಧ್ಯತೆ ಹೆಚ್ಚು ಎನ್ನುವ ಅಂಶವೂ ಸುಪ್ರೀಂ ಕೋರ್ಟ್ ವಿಚಾರಣೆಗೆತ್ತಿಕೊಂಡ ಅರ್ಜಿಯಲ್ಲಿತ್ತು. ಅರ್ಜಿದಾರರು ಚುನಾವಣಾ ಆಯುಕ್ತರ ನೇಮಕಕ್ಕೆ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಸೇರಿದಂತೆ ಸರ್ವಪಕ್ಷ ಸದಸ್ಯರನ್ನೊಳಗೊಂಡ ಕೊಲಿಜಿಯಂ ರೀತಿಯ ಸಮಿತಿ ರಚನೆಯ ಬಗ್ಗೆ ಸುಪ್ರೀಂ ಕೋರ್ಟ್ ಗಮನ ಸೆಳೆದಿದ್ದಾರೆ. 1975ರಿಂದ ಹಲವು ಸಮಿತಿಗಳು ಈ ಬಗ್ಗೆ ಉಲ್ಲೇಖ ಮಾಡಿದ್ದವು. 255ನೇ ಕಾನೂನು ಆಯೋಗವೂ ತನ್ನ ವರದಿಯಲ್ಲಿ ಇದನ್ನು ಉಲ್ಲೇಖಿಸಿತ್ತು.

ಚುನಾವಣಾ ಆಯುಕ್ತರ ಹುದ್ದೆಗೆ ಗೋಯಲ್ ಅವರ ಅರ್ಹತೆಯ ಬಗ್ಗೆ ತನ್ನ ಆಕ್ಷೇಪವಿಲ್ಲ ಎಂದ ಸುಪ್ರೀಂ ಕೋರ್ಟ್, ನೇಮಕ ಪ್ರಕ್ರಿಯೆಯಲ್ಲಿನ ಆತುರವನ್ನು ತೀಕ್ಷ್ಣವಾಗಿ ಪ್ರಶ್ನಿಸಿದೆ. ಚುನಾವಣಾ ಆಯುಕ್ತರಾಗಿ ಗೋಯಲ್ ನೇಮಕ ಒಂದಿಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಗುಜರಾತ್ ಚುನಾವಣೆಗೆ ಮುನ್ನ ಈ ಬೆಳವಣಿಗೆ ನಡೆದಿದೆ. ಮುಂದಿನ ವರ್ಷ ಕರ್ನಾಟಕ, ತೆಲಂಗಾಣ, ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾಗಳಲ್ಲಿ ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಈ ಚುನಾವಣೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡು ಈ ನೇಮಕವನ್ನು ಇಷ್ಟು ತರಾತುರಿಯಲ್ಲಿ ಮಾಡಿದಂತೆ ಕಂಡುಬರುತ್ತಿದೆ.

ಬೃಹತ್ ಕೈಗಾರಿಕಾ ಸಚಿವಾಲಯ, ಕೇಂದ್ರ ಸಂಸ್ಕೃತಿ ಇಲಾಖೆಯಲ್ಲಿಯೂ ಅರುಣ್ ಗೋಯಲ್ ಕಾರ್ಯ ನಿರ್ವಹಿಸಿದ್ದರು. ಚುನಾವಣಾ ಆಯುಕ್ತರಾಗಿ ಅವರ ಕಾರ್ಯಾವಧಿ 2025ರ ಫೆಬ್ರವರಿವರೆಗೆ ಇರಲಿದೆ. ಚುನಾವಣಾ ಆಯುಕ್ತರ ಅವಧಿ ಆರು ವರ್ಷಗಳು. ಕಾನೂನೇ ಅದನ್ನು ಹೇಳುತ್ತದೆ. ಆದರೆ ಇತ್ತೀಚಿನ ಯಾವ ನೇಮಕಗಳಲ್ಲೂ ಆಯುಕ್ತರಿಗೆ ಆರು ವರ್ಷ ಅಧಿಕಾರಾವಧಿ ಸಿಗದಂತೆ ನೋಡಿಕೊಳ್ಳಲಾಗುತ್ತಿದೆ ಎಂಬುದನ್ನೂ ಸುಪ್ರೀಂ ಕೋರ್ಟ್ ಗಮನಿಸಿತು. 2004ರ ನಂತರ ಯಾವ ಚುನಾವಣಾ ಆಯುಕ್ತರಿಗೂ ಆರು ವರ್ಷಗಳ ಪೂರ್ಣಾವಧಿ ಅಧಿಕಾರ ಸಿಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

ಚುನಾವಣಾ ಆಯುಕ್ತರ ಹುದ್ದೆಗೆ ನಿವೃತ್ತರನ್ನೇ ನೇಮಕ ಮಾಡಿಕೊಳ್ಳುವುದೇಕೆ ಎಂದೂ ಪ್ರಶ್ನಿಸಿದ ಕೋರ್ಟ್, ನಲ್ವತ್ತು ಅರ್ಹ ಅಧಿಕಾರಿಗಳಿದ್ದರೆ ಬರೀ ನಾಲ್ವರನ್ನೇ ಆರಿಸಿ ಉಳಿದವರನ್ನು ಕೈಬಿಟ್ಟಿರುವುದೇಕೆ ಎಂದೂ ಪ್ರಶ್ನಿಸಿತು. ಚುನಾವಣಾ ಆಯುಕ್ತರ ನೇಮಕದಲ್ಲಿ ಸರಕಾರ ಕಾನೂನನ್ನು ಉಲ್ಲಂಘಿಸಿದೆ ಎಂಬುದು ಸ್ಪಷ್ಟ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಅಗತ್ಯ ಬಿದ್ದರೆ ಪ್ರಧಾನಿ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ದಿಟ್ಟತನ ಚುನಾವಣಾ ಆಯುಕ್ತರಿಗೆ ಇರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟ ಪೀಠ, ಈಗಿರುವ ನೇಮಕ ಪ್ರಕ್ರಿಯೆಯಲ್ಲಿ ಸರಕಾರ ಹೇಳಿದಂತೆ ಕೇಳುವವರು ಈ ಹುದ್ದೆಗೆ ಬರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ, 1990ರಿಂದ 1996ರವರೆಗೆ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್. ಶೇಷನ್ ಅವರನ್ನೂ ನ್ಯಾ.ಕೆ.ಎಂ.ಜೋಸೆಫ್ ನೆನಪಿಸಿದರು. ಹೆಂಡ ಹಣದ ಹೊಳೆ ಎಂದೇ ಕುಖ್ಯಾತವಾಗಿದ್ದ ಚುನಾವಣೆಗೆ ಅವರಿಂದ ಹೊಸ ಸ್ವರೂಪ ಬಂದಿತ್ತು. ಇಡೀ ಚುನಾವಣಾ ವ್ಯವಸ್ಥೆಯಲ್ಲಿಯೇ ಶೇಷನ್ ಅಸಾಧಾರಣ ಎನ್ನಿಸುವಂಥ ಸುಧಾರಣೆಗಳನ್ನು ತಂದಿದ್ದರು. ಅವರ ಅಧಿಕಾರದಲ್ಲಿ ಮತದಾನದ ಪ್ರಕ್ರಿಯೆಗಳೇ ಬದಲಾದವು. ಚುನಾವಣಾ ಅಕ್ರಮಗಳನ್ನು ಒಂದೊಂದಾಗಿಯೇ ಪಟ್ಟಿಮಾಡಿದ್ದ ಶೇಷನ್, ಎಲ್ಲಾ ಅಕ್ರಮಗಳಿಗೂ ಬ್ರೇಕ್ ಹಾಕಿದ್ದರು. ಅವರು ಕಟ್ಟಿದ ಚುನಾವಣಾ ವ್ಯವಸ್ಥೆಯನ್ನು ಸಂಪೂರ್ಣ ಹಾಳುಗೆಡವಲಾಗಿದೆ ಎಂದು ಹೇಳಿದೆ.

ಮತದಾರರ ಪಟ್ಟಿ ಅಕ್ರಮ ಪರಿಷ್ಕರಣೆ, ಶಾಸಕರ ಖರೀದಿ, ಸರಕಾರಗಳನ್ನು ಅಭದ್ರಗೊಳಿಸುವ ಪ್ರಯತ್ನ, ಚುನಾವಣಾ ಅಕ್ರಮಗಳ ನಡುವೆ ಕ್ಷಿಪ್ರ ಗತಿಯಲ್ಲಿ ನಡೆದ ಚುನಾವಣಾ ಆಯುಕ್ತರ ನೇಮಕಾತಿ, ಭಾರತೀಯ ಚುನಾವಣಾ ಆಯೋಗದ ಇತಿಹಾಸದಲ್ಲಿಯೇ ವಿಲಕ್ಷಣವೆನ್ನಿಸುವ ವಿಚಾರವಾಗಿದೆ. ಸುಪ್ರೀಂ ಪ್ರಶ್ನೆಗಳಿಗೆ ಸರಕಾರ ಕೊಡಲಿರುವ ಸ್ಪಷ್ಟನೆ ಮತ್ತು ಆನಂತರದ ಸುಪ್ರೀಂ ಕ್ರಮ ಏನಿರಬಹುದು ಎಂಬುದು ಈಗ ಕುತೂಹಲ ಕೆರಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)