ಉಡುಪಿ
ರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರಕ್ಕೆ ಸಂಸ್ಕೃತ ಪಂಡಿತ ವಾರಣಾಸಿ ರಾಮಕೃಷ್ಣ ಭಟ್ ಆಯ್ಕೆ

ವಾರಣಾಸಿ ರಾಮಕೃಷ್ಣ ಭಟ್
ಉಡುಪಿ: ಶ್ರೀ ರಾಮಚಂದ್ರಾಪುರ ಮಠದ 36ನೇ ಜಗದ್ಗುರುಗಳಾದ ಶ್ರೀರಾಮಚಂದ್ರಭಾರತೀ ಮಹಾಸ್ವಾಮೀಜಿ ಅವರ ಆರಾಧನೆಯ ಸಂದರ್ಭದಲ್ಲಿ ನೀಡಲಾಗುವ ರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರಕ್ಕೆ ಈ ಬಾರಿ ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ರಾಮಕೃಷ್ಣ ಭಟ್ಟರು ಆಯ್ಕೆಯಾಗಿದ್ದಾರೆ.
ಕೊಲ್ಲೂರಿನಲ್ಲಿ ಡಿ.1ರಂದು ಗುರುವಾರ ನಡೆಯುವ ಸಮಾರಂಭದಲ್ಲಿ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡುವರು. ಕೊಲ್ಲೂರು ಮೂಕಾಂಬಿಕಾ ದೇವಾಲಯದ ಮುಖ್ಯ ಅರ್ಚಕ ಶ್ರೀಧರ ಅಡಿಗ ಅವರ ಮನೆಯಲ್ಲಿ ನಡೆಯುವ ಶ್ರೀರಾಘವೇಂದ್ರ ಭಾರತೀ ಸ್ವಾಮೀಜಿ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಅಪರಾಹ್ನ 12:00ಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪರಂಪರಾಗತ ವೈದಿಕ ವೃತ್ತಿ ಕಲಿತರೂ ಅದನ್ನು ಬಿಟ್ಟು, ಸಂಸ್ಕೃತ ಶಾಸ್ತ್ರ- ವೇದಾಂತಗಳಲ್ಲಿ ಸಾಧನೆ ಮಾಡುವ ಹಂಬಲದೊಂದಿಗೆ ಎಳವೆಯಲ್ಲೇ ಕಾಶಿಗೆ ತೆರಳಿ ಉನ್ನತ ಅಧ್ಯಯನ ಕೈಗೊಂಡ ರಾಮಕೃಷ್ಣ ಭಟ್ಟರದ್ದು ಬಹುಮುಖ ಪ್ರತಿಭೆ. ಕನ್ನಡ, ಸಂಸ್ಕೃತ, ಹಿಂದಿ, ತೆಲುಗು, ತಮಿಳು, ಮರಾಠಿ, ಇಂಗ್ಲಿಷ್, ಮಲೆಯಾಳಂ ಹಾಗೂ ತುಳು ಹೀಗೆ ಎಂಟು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡ ಬಲ್ಲರಾದರೂ ಮಿತಭಾಷಿಯಾಗಿ 74 ವರ್ಷ ಪ್ರಾಯದ ಭಟ್ಟರು ಸಂಸ್ಕೃತ ಅಧ್ಯಾಪನಾ ಕ್ಷೇತ್ರಕ್ಕೆ ಅವರು ತನ್ನನ್ನು ಸಮರ್ಪಿಸಿಕೊಂಡವರು.
ವಾರಣಾಸಿ ವೈದಿಕ ಮನೆತನದಲ್ಲಿ ವಿ.ಕೃಷ್ಣಭಟ್- ಸರಸ್ವತಿ ದಂಪತಿಯ ಪುತ್ರರಾಗಿ 1948ರಲ್ಲಿ ಜನಿಸಿದ ಭಟ್ಟರು, ಮಡಿಪು ಕೃಷ್ಣಭಟ್ಟರ ಮನೆಯಲ್ಲಿದ್ದುಕೊಂಡೇ ಕೃಷ್ಣ ಯಜುರ್ವೇದ ಅಭ್ಯಾಸ ಮಾಡಿದರು. ಬಳಿಕ ಶೃಂಗೇರಿ ಶ್ರೀ ಸದ್ವಿದ್ಯ ಸಂಜೀವಿನೀ ಪಾಠಶಾಲೆಯಲ್ಲಿ ಪ್ರಾಥಮಿಕ ಸಂಸ್ಕೃತ ಕಲಿತ ನಂತರ ಕಾಶೀ ಶ್ರೀವಲ್ಲಭರಮ ಸಾಂಗವೇದ ವಿದ್ಯಾಲಯದಲ್ಲಿ ಗುರುಕುಲ ಪದ್ಧತಿಯಂತೆ ಬಳಿಕ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಿಂದ ನ್ಯಾಯ ಮತ್ತು ವೇದಾಂತದಲ್ಲಿ ಎಂಎ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪದವಿ ಪಡೆದರು.
ಕಾಶಿಯ ಶ್ರೀದಕ್ಷಿಣಾಮೂರ್ತಿ ಸಂಸ್ಕೃತ ಮಹಾವಿದ್ಯಾಲಯ, ಕಾಂಚಿ ಶ್ರೀ ಚಂದ್ರಶೇಖರ ಸರಸ್ವತಿ ವಿಶ್ವವಿದ್ಯಾಲಯ ಹಾಗೂ ಕಾಲಟಿ ಶ್ರೀಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪನಾ ಕಾರ್ಯ ನಡೆಸಿ ನಿವೃತ್ತರಾದರು. ತಮ್ಮ ವೃತ್ತಿಜೀವನದಲ್ಲಿ 10 ಎಂಫಿಲ್ ಹಾಗೂ 14 ಪಿಎಚ್ಡಿ ಪದವಿಗೆ ಮಾರ್ಗದರ್ಶನ ನೀಡಿದ ಹೆಗ್ಗಳಿಕೆ ಇವರದು.
ರಾಷ್ಟ್ರಪತಿ ಪುರಸ್ಕಾರಕ್ಕೆ ಭಾಜನರಾದ ರಾಜ್ಯದ ವಿದ್ವಾಂಸರಲ್ಲಿ ರಾಮಕೃಷ್ಣ ಭಟ್ಟರು ಒಬ್ಬರು. ವಾಚಸ್ಪತಿ ಪುರಸ್ಕಾರ, ಪರಮೇಶ್ವರ ಭಾರತೀ ಸ್ಮಾರಕ ಸುವರ್ಣ ಮುದ್ರಾ ಪುರಸ್ಕಾರ, ರಾಜವಂಶದ ರೇವತೀಪಟ್ಟತ್ತಾನ ಪುರಸ್ಕಾರ, ಶ್ರೀದೇವಿ ಪುರಸ್ಕಾರ ಸಹಿತ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ